

ಹೌಹಾರಿದ ಅವರು, ‘ನಮಗಾಗಿ ನಿನ್ನ ಸುಖಸಂತೋಷಗಳನ್ನು ಬಲಿಕೊಡಬೇಡ’ ಎಂದು ಎಷ್ಟು ಹೇಳಿದರೂ ಆಕೆ ದೃಢನಿಶ್ಚಯ ಮಾಡಿದ್ದ ಕಾರಣ ಒಬ್ಬಂಟಿಯಾಗಿಯೇ ಉಳಿದಳು. ಸುಜಾತಾಗೆ ಐವತ್ತು ವರ್ಷಗಳಾದಾಗ ತಂದೆತಾಯಿಯಿಬ್ಬರೂ ಒಂದೇ ತಿಂಗಳ ಅವಧಿಯಲ್ಲಿ ಮೃತಪಟ್ಟರು. ಆನಂತರ ಸುಜಾತಾ ಪಿತ್ರಾರ್ಜಿತವಾಗಿ ಬಂದಿದ್ದ ದೊಡ್ಡ ಮನೆಯನ್ನು ಮಾರಿ ತನ್ನ ಕಾಲೇಜಿನ ಹತ್ತಿರದಲ್ಲಿಯೇ ಎರಡು ಕೋಣೆಯ ಅಪಾರ್ಟ್ವೆುಂಟ್ ಖರೀದಿಸಿದಳು. ಏತನ್ಮಧ್ಯೆ ಕಾಲೇಜಿಗೆ ಕೆಲಸಕ್ಕಾಗಿ ಬರುತ್ತಿದ್ದ ಕೃಷ್ಣ ಎನ್ನುವವನ ಪರಿಚಯ ಸುಜಾತಳಿಗಾಯಿತು. ತಾನು ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದು ತನ್ನದೇ ಆರ್ಥಿಕ ಸಲಹಾ ಕಂಪನಿ ನಡೆಸುತ್ತಿದ್ದೇನೆಂದು ಆತ ತಿಳಿಸಿದ. ‘ನಾನು ಅಮೆರಿಕದಲ್ಲಿದ್ದೆ. ಅಲ್ಲಿನ ಯುವತಿಯೊಡನೆ ಲಗ್ನವಾಗಿತ್ತು. ನಂತರ ಆಕೆ ವಿಚ್ಛೇದನ ನೀಡಿದಳು, ಮಕ್ಕಳೂ ನನ್ನಿಂದ ದೂರವಾದರು, ಹೀಗಾಗಿ ಭಾರತಕ್ಕೆ ವಾಪಸಾದೆ’ ಎಂದ.
ಒಂದು ದಿನ ಕೃಷ್ಣನೊಡನೆ, ‘ನನ್ನ ಉಳಿತಾಯದ ಎಲ್ಲ ಹಣವನ್ನೂ ಬ್ಯಾಂಕಿನ ಠೇವಣಿಗಳಲ್ಲಿಟ್ಟಿದ್ದೇನೆ. ಆದರೆ ಬಡ್ಡಿ ಕಡಿಮೆ. ಯಾವುದರಲ್ಲಿ ಹಣ ತೊಡಗಿಸಿದರೆ ಹೆಚ್ಚು ಬಡ್ಡಿ ಬರುತ್ತದೆ?’ ಎಂದು ಸುಜಾತ ಕೇಳಿದಳು. ಆತ, ‘ಅದಕ್ಕೇನಂತೆ, ನಿಮ್ಮ ಹಣವನ್ನು ಹೇಗೆ, ಎಲ್ಲಿ, ಯಾವಾಗ ತೊಡಗಿಸಬೇಕೆಂದು ಸಲಹೆ ನೀಡುತ್ತೇನೆ, ಆದರೆ ಈ ಸಲಹೆಗಾಗಿ ನೀವು ನನಗೆ ಫೀಸನ್ನು ಕೊಡಬೇಕಾಗುತ್ತದೆ’ ಎಂದ. ಇದಕ್ಕೊಪ್ಪಿದ ಸುಜಾತಾ ಅವನನ್ನು ಮಾರನೆಯ ಸಂಜೆ ಕಾಲೇಜಿನಲ್ಲಿನ ತನ್ನ ಕೋಣೆಗೆ ಬರಹೇಳಿದಳು. ಕೃಷ್ಣ ಅವಳ ಆರ್ಥಿಕ ವಹಿವಾಟುಗಳ ಬಗ್ಗೆ ಎಲ್ಲ ಮಾಹಿತಿ ಪಡೆದ ನಂತರ, ‘ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ನಿಮ್ಮ ಹಣ ನಾಲ್ಕೇ ವರ್ಷದಲ್ಲಿ ದುಪ್ಪಟ್ಟಾಗುತ್ತದೆ. ಮನೆಯಲ್ಲಿ ಕುಳಿತೇ ಷೇರುಗಳನ್ನು ಖರೀದಿಸಬಹುದು ಅಥವಾ ಮಾರಬಹುದು’ ಎಂದ. ‘ನಾನು ಹೇಳಿಕೇಳಿ ರಸಾಯನ ಶಾಸ್ತ್ರದ ಶಿಕ್ಷಕಿ. ನನಗೆ ಇದರ ಬಗ್ಗೆ ಅರಿವಿಲ್ಲ. ನೀವೇ ಸಹಾಯ ಮಾಡಬೇಕು’ಎಂದು ಸುಜಾತ ಹೇಳಿದಾಗ ಒಪ್ಪಿದ ಕೃಷ್ಣ ಷೇರುಗಳನ್ನು ಆನ್ಲೈನಿನಲ್ಲಿ ಹೇಗೆ ಖರೀದಿಸಬೇಕು ಮತ್ತು ಮಾರಬೇಕು ಎಂದು ಅವಳ ಲ್ಯಾಪ್ಟಾಪಿನಲ್ಲಿ ತೋರಿಸಿದ. ಕೆಲ ದಿನಗಳ ನಂತರ ಸುಜಾತಾ ಕೃಷ್ಣನ ಸಹಾಯದಿಂದ ತನ್ನ ಹಣವನ್ನು ಸೂಕ್ತ ಜಾಗಗಳಲ್ಲಿ ತೊಡಗಿಸಿದಳು. ಕಾಲೇಜಿನಿಂದ ಬಂದ ನಂತರ ಆಕೆ ಷೇರುಪೇಟೆಯ ಆಗುಹೋಗುಗಳತ್ತಲೇ ಮಗ್ನಳಾಗಿರುತ್ತಿದ್ದಳು. ಒಂದು ಸೋಮವಾರ ಸುಜಾತಾ ಕಾಲೇಜಿಗೆ ಬರಲಿಲ್ಲ. ಸಾಮಾನ್ಯವಾಗಿ ಆಕೆ ಒಂದು ದಿನವೂ ಕಾಲೇಜಿಗೆ ರಜೆ ಹಾಕುತ್ತಿರಲಿಲ್ಲವಾದ ಕಾರಣ ಸಹೋದ್ಯೋಗಿಗಳು ಮತ್ತು ವಿದ್ಯಾರ್ಥಿಗಳು ಆತಂಕಗೊಂಡರು. ಸುಜಾತಾಳ ಮೊಬೈಲ್ಗೆ ಕರೆ ಮಾಡಿದಾಗ ಸ್ವಿಚ್ ಆಫ್ ಆಗಿತ್ತು. ಮಾರನೆಯ ದಿನವೂ ಆಕೆ ಕಾಲೇಜಿಗೆ ಬರಲಿಲ್ಲ. ಅಂದೂ ಅವಳ ಮೊಬೈಲ್ ಸ್ವಿಚ್ ಆಫ್ ಎಂದು ಬಂದಾಗ ಸಹೋದ್ಯೋಗಿಗಳಿಬ್ಬರು ಅವಳ ಅಪಾರ್ಟ್ವೆುಂಟ್ಗೆ ಹೋಗಿ ಬಾಗಿಲು ಬಡಿದರು. ಬಾಗಿಲು ತೆರೆಯಲಿಲ್ಲ.
ಅದೇ ಸಮಯಕ್ಕೆ ಕೃಷ್ಣನೂ ಅಲ್ಲಿಗೆ ಬಂದು, ‘ಮೇಡಂ ನನ್ನನ್ನು ಕಾಲೇಜಿಗೆ ಬರಹೇಳಿದ್ದರು. ಅಲ್ಲಿಗೆ ಹೋದಾಗ ಅವರು ಎರಡು ದಿನಗಳಿಂದ ಬಂದಿಲ್ಲವೆಂದು ತಿಳಿಯಿತು. ಹೀಗಾಗಿ ಇಲ್ಲಿಗೆ ಬಂದೆ’ ಎಂದ. ಪಕ್ಕದ ಮನೆಯಾಕೆ, ‘ಸುಜಾತಾ ಊರಿನಲ್ಲಿರುವಂತೆ ಕಾಣುತ್ತಿಲ್ಲ, ಎರಡು ದಿನಗಳಿಂದ ಅವಳ ಮನೆಯಲ್ಲಿ ಯಾವುದೇ ಚಟುವಟಿಕೆ ಕಂಡುಬರಲಿಲ್ಲ’ ಎಂದಳು. ಆಗ ಸುಜಾತಳ ಸಹೋದ್ಯೋಗಿ, ‘ನಾನು ಅವಳನ್ನು ಹತ್ತು ವರ್ಷಗಳಿಂದ ಬಲ್ಲೆ, ಆಕೆ ಒಬ್ಬಂಟಿಯಾಗಿ ಎಲ್ಲಿಗೂ ಹೋಗುವುದಿಲ್ಲ, ಅದೂ ಕಾಲೇಜಿಗೆ ರಜೆ ಇರದಿರುವಾಗ ಊರಿಂದ ಹೊರಹೋಗಲು ಸಾಧ್ಯವೇ ಇಲ್ಲ’ ಎಂದರು. ಸುಜಾತಾ ವಾಯುವಿಹಾರಕ್ಕೆಂದು ಹೋದಾಗ ಏನಾದರೂ ಹೆಚ್ಚುಕಡಿಮೆಯಾಗಿರಬಹುದೇನೋ? ಎಂದ ಕೃಷ್ಣ. ಆ ಬಿಲ್ಡಿಂಗಿನ ಕಾವಲುಗಾರ ತನಗೇನೂ ಗೊತ್ತಿಲ್ಲ ಎಂದ. ಆಕೆ ಯಾವುದಾದರೂ ಅಪಘಾತಕ್ಕೆ ಈಡಾಗಿರಬಹುದೆಂದು ಅವರೆಲ್ಲರೂ ರ್ತಸಿದರು. ಆದರೆ ಆಕೆಯ ಹೋಂಡಾ ಆಕ್ಟಿವಾ ಕಟ್ಟಡದ ಬೇಸ್ವೆುಂಟಿನಲ್ಲಿಯೇ ಇತ್ತು. ಆಗ ಕೃಷ್ಣ ಹತ್ತಿರದ ಪೊಲೀಸ್ ಠಾಣೆಗೆ ಹೋಗಿ ಸುಜಾತಾ ಕಾಣೆಯಾಗಿರುವುದಾಗಿ ದೂರು ಕೊಟ್ಟ. ಪೊಲೀಸರು ಕಳೆದ 48 ಗಂಟೆಗಳಲ್ಲಿ ಆ ಪಟ್ಟಣದಲ್ಲಿ ಆಗಿದ್ದ ಅಪಘಾತಗಳು ಮತ್ತು ಅಸ್ವಾಭಾವಿಕ ಸಾವುಗಳ ಬಗ್ಗೆ ವಿವರಗಳನ್ನು ಪಡೆದರು. ಆದರೆ ಸುಜಾತಾಳ ವಿವರಗಳನ್ನು ಹೋಲುವ ಯಾರೂ ಸಿಗಲಿಲ್ಲ. ಆಗ ಅವರು ಕೃಷ್ಣನ ಜತೆಗೆ ಸುಜಾತಳ ಅಪಾರ್ಟ್ವೆುಂಟಿಗೆ ಬಂದರು. ಎಲ್ಲರ ಸಮ್ಮುಖದಲ್ಲಿ ಮನೆಯ ಮುಂಬಾಗಿಲನ್ನು ಒಡೆದರು. ಒಳಗೆ ಹೋಗಿ ನೋಡಿದಾಗ ಸುಜಾತ ಹಾಲಿನ ಸೋಫಾದ ಮೇಲೆಯೇ ಶವವಾಗಿ ಬಿದ್ದಿದ್ದನ್ನು ಕಂಡು ಎಲ್ಲರೂ ಬೆಚ್ಚಿಬಿದ್ದರು. ಅವಳ ಮೈ ಮೇಲೆ ಯಾವುದೇ ಗಾಯವಾಗಿರಲಿಲ್ಲ. ಮನೆಯಲ್ಲಿ ಯಾವ ವಸ್ತುವೂ ಕಳುವಾಗಿರಲಿಲ್ಲ. ಆಕೆ ಹೃದಯಾಘಾತದಿಂದ ಮರಣಹೊಂದಿರಬೇಕೆಂದು ಎಲ್ಲರೂ ಭಾವಿಸಿದರು.
ಸುಜಾತಳಿಗೆ ಯಾವುದೇ ಹತ್ತಿರದ ಸಂಬಂಧಿಗಳು ಇರದಿದ್ದ ಕಾರಣ ಪೊಲೀಸರು ಕೃಷ್ಣನಿಂದಲೇ ದೂರನ್ನು ಪಡೆದು ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಿಸಿದರು. ಆಕೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು. ‘ಸುಜಾತಳ ಸಾವು 48 ಗಂಟೆಗಳ ಹಿಂದೆ ಆಗಿದೆ. ಆಕೆಯನ್ನು ಉಸಿರುಗಟ್ಟಿಸಿ ಕೊಲೆಮಾಡಲಾಗಿದೆ, ಆಕೆಯ ಮುಖದ ಮೇಲೆ ದಿಂಬನ್ನು ಒತ್ತಿಹಿಡಿದು ಉಸಿರುಗಟ್ಟಿಸಿರಬಹುದು’ ಎಂದು ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಅಭಿಪ್ರಾಯ ನೀಡಿದರು. ಈ ಮೇರೆಗೆ ಪೊಲೀಸರು ಅಸ್ವಾಭಾವಿಕ ಸಾವಿನ ಪ್ರಕರಣವನ್ನು ಕೊಲೆ ಪ್ರಕರಣವಾಗಿ ಮಾರ್ಪಡಿಸಿದರು. ಸುಜಾತಳಿಗೆ ಯಾವುದೇ ಶತ್ರುಗಳಿರಲಿಲ್ಲವೆಂದು ತಿಳಿಯಿತು. ಆಕೆ ತನ್ನ ಪಾಡಿಗೆ ತಾನಿರುತ್ತಿದ್ದು ಕಾಲೇಜು ಹಾಗೂ ವಿದ್ಯಾರ್ಥಿಗಳನ್ನು ಬಿಟ್ಟರೆ ಆಕೆ ಯಾರ ಜತೆಯೂ ಸಂಪರ್ಕದಲ್ಲಿರಲಿಲ್ಲ ಎಂದು ಎಲ್ಲರೂ ತಿಳಿಸಿದರು. ಆಸ್ತಿಗಾಗಿ ಕೊಲೆಯಾಗಿರಬಹುದೇನೋ ಎಂದು ಊಹಿಸಿದಾಗ ಆಕೆಯ ಮನೆಯಲ್ಲಿದ್ದ ನಗದು ಹಣ, ಬೆಲೆಬಾಳುವ ವಸ್ತುಗಳು ಇದ್ದ ಜಾಗದಲ್ಲಿಯೇ ಇದ್ದವು. ಅವಳಿಗಿದ್ದ ಸ್ಥಿರಾಸ್ತಿಯೆಂದರೆ ಅಪಾರ್ಟ್ವೆುಂಟ್ ಮಾತ್ರ. ಅದರ ಬಗ್ಗೆಯೂ ಯಾವುದೇ ತಂಟೆ ತಕರಾರುಗಳಿರಲಿಲ. ಸುಜಾತಳ ಮೊಬೈಲ್ ಪೋನನ್ನು ಪರೀಕ್ಷಿಸಲಾಯಿತು. ಭಾನುವಾರ ರಾತ್ರಿ 8 ಗಂಟೆಯಿಂದ ಆ ಫೋನು ಸ್ವಿಚ್ ಆಫ್ ಆಗಿದ್ದು ಆಕೆ ಅತಿ ಹೆಚ್ಚಿನ ಕರೆಗಳನ್ನು ಯಾರಿಗೆ ಮಾಡಿದ್ದಳು ಎಂದು ಪರೀಕ್ಷಿಸಲಾಯಿತು. ಆ ನಂಬರ್ ಕೃಷ್ಣನದೇ ಆಗಿತ್ತು. ಭಾನುವಾರ ಸಂಜೆ ಕೃಷ್ಣನಿಗೆ ಮಾಡಿದ್ದ ಕರೆಯೇ ಕಡೆಯದಾಗಿತ್ತು. ಕೃಷ್ಣನ ಮೊಬೈಲ್ ನಂಬರಿನ ಲೊಕೇಷನ್ ಪತ್ತೆ ಮಾಡಿದಾಗ ಆತನ ಫೋನ್ ಅದೇ ರಾತ್ರಿ 7 ರಿಂದ 8ರ ವರೆಗೆ ಸುಜಾತಳ ಫೋನಿದ್ದ ಟವರ್ ವ್ಯಾಪ್ತಿಯಲ್ಲಿಯೇ ಇದ್ದದ್ದು ಕಂಡಿತು. ಅವನನ್ನು ಕೇಳಿದಾಗ ತನಗೆ ಏನೂ ಗೊತ್ತಿಲ್ಲ ಎಂದ.
ತೀವ್ರ ವಿಚಾರಣೆಗೆ ಒಳಪಡಿಸಿದಾಗ ಸುಜಾತಾಳನ್ನು ತಾನೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡ. ಕೊಲೆಗೆ ಕಾರಣವನ್ನು ಕೇಳಿದಾಗ, ‘ನನ್ನ ಬಿಸಿನೆಸ್ಗಾಗಿ ತುರ್ತಾಗಿ 50 ಲಕ್ಷ ರೂ ಬೇಕಾಗಿತ್ತು. ಸುಜಾತಳ ಬಳಿ ಎರಡು ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಷೇರುಗಳಿರುವುದು ನನಗೆ ತಿಳಿದಿತ್ತು. ಹೀಗಾಗಿ ಅವಳಿಂದ ಸಾಲ ಪಡೆಯಲು ಅವಳ ಮನೆಗೆ ಹೋದೆ. ಆಕೆ ಸಾಲನೀಡಲೊಪ್ಪಲಿಲ್ಲ. ಆಗ ಕೋಪಗೊಂಡ ನಾನು ಅವಳ ಮುಖಕ್ಕೆ ದಿಂಬನ್ನೊತ್ತಿ ಹಿಡಿದು ಕೊಲೆ ಮಾಡಿದೆ. ಅವಳ ಷೇರು ವ್ಯವಹಾರದ ಪಾಸ್ವರ್ಡ್ ತಿಳಿದಿದ್ದ ಕಾರಣ ಅವಳ ಬಹುಮುಖ್ಯ ಷೇರುಗಳನ್ನು ನನ್ನ ಅಕೌಂಟಿಗೆ ವರ್ಗಾಯಿಸಿಕೊಂಡೆ. ಹೀಗೆ ಮಾಡುವಾಗ ಅವಳ ಮೊಬೈಲಿಗೆ ಬಂದಿದ್ದ ಒಟಿಪಿ ಬಳಸಿದೆ. ಆನಂತರ ಮನೆಯ ಬಾಗಿಲನ್ನು ಹಾಕಿಕೊಂಡು ಹೊರಟುಹೋದೆ’ ಎಂದ. ಕೃಷ್ಣನನ್ನು ಬಂಧಿಸಿ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿದೆ. ಕೇವಲ ಸಾಂರ್ದಭಿಕ ಸಾಕ್ಷ್ಯಾಧಾರಗಳ ಮೇಲೆಯೇ ಅವಲಂಬಿತವಾಗಿರುವ ಈ ಪ್ರಕರಣದಲ್ಲಿ ನ್ಯಾಯಾಲಯವು ಕೃಷ್ಣನನ್ನು ಬಿಡುಗಡೆ ಮಾಡುವ ಸಾಧ್ಯತೆಯೇ ಜಾಸ್ತಿ. ಅನೇಕ ಹಿರಿಯ ನಾಗರಿಕರು ಹೆಚ್ಚಿನ ಆದಾಯಗಳಿಸುವ ಉದ್ದೇಶದಿಂದ ಹಣವನ್ನು ಸಿಕ್ಕಸಿಕ್ಕಲ್ಲಿ ತೊಡಗಿಸುತ್ತಾರೆ, ಹಣಕಾಸು ಸಲಹೆಗಾರರನ್ನು ಹೆಚ್ಚಾಗಿ ಅವಲಂಬಿಸುತ್ತಾರೆ; ಸುಜಾತಳಂತೆ ಆರ್ಥಿಕ ಸಲಹೆಗಾರರಿಗೆ ತಮ್ಮ ಪಾಸ್ವರ್ಡ್ ಕೊಡುತ್ತಾರೆ. ಕೆಲವರು ಒಟಿಪಿಯನ್ನೂ ಹಂಚಿಕೊಳ್ಳುತ್ತಾರೆ. ನಿವೃತ್ತ ಜೀವನವನ್ನು ನೆಮ್ಮದಿಯಿಂದ ಕಳೆಯಬೇಕಾದರೆ ಹೆಚ್ಚಿನ ಬಡ್ಡಿಗೆ ಆಸೆಪಡದೆ ಹಣವನ್ನು ಅಂಚೆ ಕಚೇರಿ ಅಥವಾ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ತೊಡಗಿಸುವುದು ಉತ್ತಮ. ‘ನೀವು ತೆಗೆದುಕೊಳ್ಳುವ ತೀರ್ವನಗಳ ಕ್ಷಣಗಳಲ್ಲಿಯೇ ನಿಮ್ಮ ಹಣೆಬರಹವು ರೂಪುಗೊಳ್ಳುತ್ತದೆ’ ಎಂದು ಅಮೆರಿಕದ ವಾಗ್ಮಿ ಟೋನಿ ರಾಬಿನ್ಸ್ ಹೇಳಿದ ಮಾತುಗಳು ನೆನಪಿರಲಿ.
(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)