

ಭಗವಂತ ನಮ್ಮ ಕಡೆಗೆ ಬರುತ್ತಾನೆ, ನಮ್ಮನ್ನು ನೋಡುತ್ತಾನೆ, ಹರಸುತ್ತಾನೆ, ಆತ್ಮಾನಂದವನ್ನು ನೀಡುತ್ತಾನೆ... ಈ ಎಲ್ಲ ಕ್ಷಣಗಳು ಲೌಕಿಕಬಂಧದಿಂದ ಮುಕ್ತಗೊಳಿಸುತ್ತವೆ, ಜೀವನದ ಪರಮೋಚ್ಚ ಗುರಿಯಾದ ಮೋಕ್ಷವನ್ನು ಕರುಣಿಸುತ್ತವೆ ಎಂದರೆ ಅದು ಸೋಜಿಗ ಮಾತ್ರವಲ್ಲ ಅದು ಈ ನೆಲದ ಅಧ್ಯಾತ್ಮದ ಶಕ್ತಿ. ಇಲ್ಲಿನ ಭಕ್ತಿಪರಂಪರೆಯ ಶಕ್ತಿ. ಹೌದು, ಭಾರತದ ಆತ್ಮವೇ ಅಧ್ಯಾತ್ಮ. ನಮ್ಮ ದೇಶದಲ್ಲಿ ಪ್ರತಿಯೊಂದು ರಥಯಾತ್ರೆಗಳಿಗೆ ತನ್ನದೇ ಆದ ವೈಶಿಷ್ಟ್ಯವಿದೆ, ಶ್ರೇಷ್ಠವಾದ ಪರಂಪರೆ ಮತ್ತು ವಿಶಿಷ್ಟವಾದಂಥ ಸೊಗಡಿದೆ. ಒಡಿಶಾದ ಕಡಲನಗರಿ ಪುರಿ. ಭಾರತದ ನಾಲ್ಕು ಧಾಮಗಳಲ್ಲಿ ಒಂದು. ಪುರುಷೋತ್ತಮ ಕ್ಷೇತ್ರ, ನೀಲಗಿರಿ, ನೀಲಾಂಚಲ, ಉತ್ಕಲದೇಶವೆಂದೂ ಕರೆಯಲ್ಪಡುವ ಪುರಿಯಲ್ಲಿ ಜಗನ್ನಾಥನ ರಥಯಾತ್ರೆಗೆ ಪ್ರತಿವರ್ಷ ಲಕ್ಷೋಪಲಕ್ಷ ಜನ ಏಕೆ ಬರುತ್ತಾರೆ, ಜಗನ್ನಾಥನೆಂದರೆ ಅದೆಂಥ ಆಕರ್ಷಣೆ... ಈ ಬಗ್ಗೆ ಬರೀ ಇಂಟರ್ನೆಟ್ನಲ್ಲಿ ಓದಿದ್ದ/ನೋಡಿದ್ದ ನನಗೆ ಈ ಬಾರಿ ಈ ಕ್ಷಣಗಳಿಗೆ ಸಾಕ್ಷಿಯಾಗುವ ಅವಕಾಶ ಪ್ರಾಪ್ತವಾಯಿತು.
ದೇಶದ ಬೇರೆ ಬೇರೆ ಕಡೆಗಳಲ್ಲಿ ರಥೋತ್ಸವ ನಡೆಯುವಾಗ ಗರ್ಭಗೃಹದ ಮೂರ್ತಿಗಳಿಗೆ ವಿಶೇಷ ಪೂಜೆ ಸಲ್ಲಿಸಿ, ವಿಶೇಷ ಅಲಂಕಾರ ಮಾಡಿ, ಬಳಿಕ ಉತ್ಸವ ಮೂರ್ತಿಯನ್ನು ರಥದಲ್ಲಿ ವಿರಾಜಮಾನವಾಗಿಸುವುದು ವಾಡಿಕೆ. ಪುರಿಯಲ್ಲಿ ಹಾಗಲ್ಲ, ಸಾಕ್ಷಾತ್ ಭಗವಂತನೇ ನಡೆದು ಬರುತ್ತಾನೆ! ಹೌದು, ಗರ್ಭಗುಡಿಯಲ್ಲಿರುವ ಜಗನ್ನಾಥ, ಬಲಭದ್ರ, ಸುಭದ್ರೆಯ ದಾರುವಿನ (ಪವಿತ್ರ ಕಟ್ಟಿಗೆ) ಮೂಲಮೂರ್ತಿಗಳೇ ರಥದಲ್ಲಿ ಸುಶೋಭಿತವಾಗುತ್ತವೆ. ಇವುಗಳನ್ನು ಬರೀ ಮೂರ್ತಿಗಳು ಎಂದು ಭಾವಿಸಿದರೆ ಅದು ನಮ್ಮ ಮೂಢತನವಷ್ಟೇ. ಮಹಾವಿಷ್ಣುವಾದ ಶ್ರೀಕೃಷ್ಣನು ಜಗನ್ನಾಥನ ರೂಪದಲ್ಲಿ ಅಣ್ಣ ಬಲಭದ್ರ, ತಂಗಿ ಸುಭದ್ರೆಯೊಂದಿಗೆ ನೆಲೆಸಿರುವ ಪರಮಪವಿತ್ರ ಕ್ಷೇತ್ರವಿದು. ಶ್ರೀಜಗನ್ನಾಥ ಮಂದಿರದೊಳಗೆ ಹಿಂದಿನಿಂದಲೂ ಹಿಂದೂಯೇತರರಿಗೆ, ವಿದೇಶಿಯರಿಗೆ ಪ್ರವೇಶವಿಲ್ಲ. ಆದರೆ, ಪ್ರತಿವರ್ಷ ಆಷಾಢ ಶುಕ್ಲ ದ್ವಿತೀಯಾದಿಂದ ಆಷಾಢ ಶುಕ್ಲ ದಶಮಿಯವರೆಗೆ ನಡೆಯುವ ರಥೋತ್ಸವದ ಸಂದರ್ಭದಲ್ಲಿ (ಈ ಬಾರಿ ಜೂನ್ 27ರಿಂದ ಜುಲೈ 6ರವರೆಗೆ ಸಂಪನ್ನಗೊಂಡಿತು) ಈ ಯಾವ ನಿಬಂಧನೆಗಳೂ ಇಲ್ಲ. ಹಾಗಾಗಿಯೇ, ಭಾರತ ಮಾತ್ರವಲ್ಲದೆ ವಿದೇಶಗಳಿಂದಲೂ ದೊಡ್ಡ ಸಂಖ್ಯೆಯಲ್ಲಿ ಜನರು ಆಗಮಿಸುತ್ತಾರೆ.
ವರ್ಷದ ಎಲ್ಲ ದಿನಗಳಲ್ಲಿ ಭಕ್ತರು ಜಗನ್ನಾಥನನ್ನು ಕಾಣಲು ಶ್ರೀಮಂದಿರಕ್ಕೆ ಬಂದರೆ ರಥೋತ್ಸವದ ಸಂದರ್ಭದಲ್ಲಿ ಆ ಕಾನ್ಹಾ, ಆ ಠಾಕೂರ್ಸಾಬ್ ತನ್ನ ಭಕ್ತರೆಡೆಗೆ ಧಾವಿಸಿ ಬರುತ್ತಾನೆ. ‘ಸಬ್ ಮನಿಸಾ ಮೋರ ಪರಜಾ’ (ಎಲ್ಲ ಮನುಷ್ಯರು ನನ್ನ ಪ್ರಜೆಗಳು) ಎಂದು ಹೇಳಿ ಅವರ ಹೃದಯಸಿಂಹಾಸನದಲ್ಲಿ ವಿರಾಜಮಾನನಾಗುತ್ತಾನೆ. ಅದಕ್ಕೆಂದೇ ಜಗನ್ನಾಥ ಎಂದರೆ ಭಕ್ತಿಲೋಕವೂ ಹೌದು, ಭಾವಲೋಕವೂ ಹೌದು. ಇದನ್ನೆಲ್ಲ ಮೀರಿಸುವ ಅಲೌಕಿಕ ಪ್ರಪಂಚವೂ ಹೌದು. ಜಗನ್ನಾಥ ಇನ್ನೇನು ರಥ ಏರುತ್ತಾನೆ, ನಮ್ಮ ಬಳಿ ಬರುತ್ತಾನೆ, ಅವನ ಕಾರುಣ್ಯದೃಷ್ಟಿ ಬೀರುತ್ತಾನೆ ಎಂದು ಲಕ್ಷೋಪಲಕ್ಷ ಜನ ರಥಬೀದಿಯಲ್ಲಿ ಹಿಂದಿನ ದಿನದ ರಾತ್ರಿಯೇ ಮಲಗಿ ಬಿಡುತ್ತಾರೆ, ಇಲ್ಲವೆ ಸಂಕೀರ್ತನೆ ಮಾಡುತ್ತ ಅವನ ಪ್ರತೀಕ್ಷೆಯಲ್ಲಿ ರಾತ್ರಿಯಿಡೀ ಕಳೆಯುತ್ತಾರೆ. ಮೊದಲಿಗೆ ಬಲಭದ್ರನ ತಲಧ್ವಜ ರಥ, ಬಳಿಕ ಜಗದಂಬೆಯ ಸ್ವರೂಪಳೇ ಆಗಿರುವ ಸುಭದ್ರೆಯೆ ದರ್ಪದಲನ ರಥ, ಕೊನೆಗೆ ಭಕ್ತಿ ಮತ್ತು ಭಾವೋತ್ಕರ್ಷದ ದೈವಿಕ ವಾತಾವಾರಣದಲ್ಲಿ ಜಗನ್ನಾಥನ ನಂದಿಘೋಶ ರಥ ಬರುತ್ತದೆ.
ಶಾಸ್ತ್ರಗಳು ಕೂಡ ಇಲ್ಲಿನ ರಥಯಾತ್ರೆಯನ್ನು ವರ್ಣಿಸಿದ್ದು, ಮಹತ್ವವನ್ನೂ ವಿವರಿಸಿವೆ. ರಥಯಾತ್ರೆಯಲ್ಲಿ ಯಾರು ಜಗನ್ನಾಥನ ಸ್ಮರಣೆ ಮಾಡುತ್ತ ಗುಂಡಿಚಾ ಮಂದಿರದವರೆಗೆ ಸಾಗುತ್ತಾರೋ ಅವರು ಮೋಕ್ಷ ಪಡೆಯುತ್ತಾರೆ ಎಂದು ಸ್ಕಂದ ಪುರಾಣದಲ್ಲಿ ಹೇಳಲಾಗಿದೆ. ರಥಯಾತ್ರೆಯ ವೇಳೆ ಗುಂಡಿಚಾ ಮಂಟಪದಲ್ಲಿ ವಿರಾಜಮಾನರಾಗುವ ಬಲಭದ್ರ, ಜಗನ್ನಾಥ, ಸುಭದ್ರಾ ಮೂರ್ತಿಗಳ ದರ್ಶನ ಮಾತ್ರದಿಂದಲೂ ಮೋಕ್ಷ ಪ್ರಾಪ್ತಿ ಎಂಬ ಪ್ರತೀತಿ ಇದೆ. ಪಾಂಡವರು ತಮ್ಮ ಅಜ್ಞಾತವಾಸದ ವೇಳೆ ಜಗನ್ನಾಥನನ್ನು ಪೂಜಿಸಲು ಪುರಿಗೆ ಬಂದಿದ್ದರು ಎಂಬ ಉಲ್ಲೇಖ ಇದೆ.
ಇದೇ ನೆನಪಿಗಾಗಿ ಕ್ಷೇತ್ರದಲ್ಲಿ ಪಾಂಡವರ ಮಂದಿರವನ್ನೂ ನಿರ್ವಿುಸಲಾಗಿದೆ. ‘ಜಗನ್ನಾಥ ಸ್ವಾಮಿ ನಯನ ಪಥಗಾಮಿ ಭವತು ಮೇ’ (‘ಹೇ, ಜಗನ್ನಾಥಸ್ವಾಮಿ ನನ್ನ ಕಣ್ಣು (ನಯನ)ಗಳ ಮುಂದೆ ಪ್ರಕಟನಾಗು, ಪ್ರತ್ಯಕ್ಷನಾಗು)- ಇದು ಶಂಕರಾಚಾರ್ಯ ವಿರಚಿತ ಜಗನ್ನಾಥಅಷ್ಟಕದ ಒಂದು ಪ್ರಸಿದ್ಧ ಸಾಲು. ಸ್ವಾರಸ್ಯವೆಂದರೆ, ಜಗನ್ನಾಥ ಈ ರೂಪದಲ್ಲಿ ಪ್ರಕಟಗೊಳ್ಳಲು ಒಂದು ಲೀಲೆಯೇ ಕಾರಣ. ಕೆಲವರು ಈಗಿರುವ ಮೂರ್ತಿಗಳನ್ನು ನೋಡಿ ಅವು ಅಪೂರ್ಣ ಮೂರ್ತಿಗಳು ಎಂದು ಭಾವಿಸುತ್ತಾರೆ. ವಾಸ್ತವ ಹಾಗಲ್ಲ. ಏಕೆಂದರೆ, ಭಗವಂತನದ್ದು ಅಲೌಕಿಕ ದೇಹ! ದ್ವಾರಕೆಯಲ್ಲಿ ಭಗವಾನ್ ಶ್ರೀಕೃಷ್ಣನು ವಾಸವಾಗಿದ್ದ ಸಮಯ. ನಾರದ ಮುನಿಗಳು ಭೇಟಿ ನೀಡಿ, ಶ್ರೀಕೃಷ್ಣನ 16,108 ರಾಣಿಯರೊಂದಿಗೆ ಮಾತನಾಡುತ್ತ, ‘ನೀವೆಲ್ಲ ಎಷ್ಟು ಅದೃಷ್ಟವಂತರು. ಕೃಷ್ಣನ ಲೀಲೆಗಳಿಗೆ ಸಾಕ್ಷಿಯಾಗುತ್ತಿರುವಿರಿ.
ಆದರೂ, ಕೃಷ್ಣನ ಬಾಲ್ಯಲೀಲೆಗಳು ಪರಮಾದ್ಭುತವಾಗಿದ್ದವು’ ಎಂದು ಹೇಳುತ್ತಿದ್ದಂತೆ, ಈ ರಾಣಿಯರಿಗೆ ಕೃಷ್ಣನ ಬಾಲ್ಯಲೀಲೆಗಳನ್ನು ತಿಳಿದುಕೊಳ್ಳುವ ತವಕ. ಆಗ ಅವರೆಲ್ಲ ಬಲರಾಮನ ತಾಯಿ, ಶ್ರೀಕೃಷ್ಣನ ಚಿಕ್ಕಮ್ಮ ರೋಹಿಣಿ ಬಳಿಗೆ ಹೋಗಿ ವೃಂದಾವನದಲ್ಲಿನ ಕೃಷ್ಣನ ಬಾಲ್ಯಲೀಲೆಗಳನ್ನು ತಿಳಿಸುವಂತೆ ನಿವೇದಿಸಿದರು. ಆ ಸಂದರ್ಭದಲ್ಲಿ ಕೃಷ್ಣ, ಬಲರಾಮರು ಮನೆಯಲ್ಲಿ ಇರಲಿಲ್ಲ. ಸ್ವಲ್ಪ ಯೋಚನೆ ಮಾಡಿ ಸಮ್ಮತಿಸಿದ ರೋಹಿಣಿ ಕೃಷ್ಣನ ಬಾಲಲೋಕದ ವರ್ಣನೆ ಆರಂಭಿಸಿದಳು. ಆದರೆ, ಕೃಷ್ಣ, ಬಲರಾಮ ಬಂದರೆ ತಕ್ಷಣ ತಿಳಿಸಬೇಕು ಎಂದು ಬಾಗಿಲ ಬಳಿ ಸುಭದ್ರೆಯನ್ನು ಕಾವಲಿಗೆ ಇಟ್ಟಳು. ಬಾಲ್ಯಲೀಲೆಗಳನ್ನು ಕೇಳಿದರೆ ಕೃಷ್ಣ ಮತ್ತೆ ವೃಂದಾವನಕ್ಕೆ ಮರಳಬಹುದು ಎಂಬ ಅಳುಕಿನಿಂದ ರೋಹಿಣಿ ಮಾತೆ ಈ ಉಪಾಯ ಮಾಡಿದ್ದಳು. ಬಾಲ್ಯದ ನೆನಪುಗಳೇ ಹಾಗಲ್ಲವೇ? ಲೌಕಿಕರಾದ ನಾವೇ ಬಾಲ್ಯದ ಕ್ಷಣಗಳನ್ನು ನೆನಪಿಸಿಕೊಂಡರೆ ಪುಳಕಿತರಾಗುತ್ತೇವೆ, ರೋಮಾಂಚನಗೊಳ್ಳುತ್ತೇವೆ.
ಇನ್ನು, ಸಾಕ್ಷಾತ್ ಕೃಷ್ಣ ಪರಮಾತ್ಮನ ಬಾಲ್ಯಲೀಲೆಗಳೆಂದರೆ ಅದೊಂದು ವಿಶಿಷ್ಟ ಅನುಭವಗಳ ಲೋಕವೇ. ರೋಹಿಣಿಯ ಮಾತುಗಳನ್ನು ಕೇಳುತ್ತ ಬಾಗಿಲಲ್ಲೇ ಸುಭದ್ರೆ ತನ್ಮಯಳಾಗಿದ್ದಾಳೆ. ಕೃಷ್ಣ, ಬಲರಾಮರು ಬಾಗಿಲಲ್ಲಿ ಬಂದು ನಿಂತರೂ ಗಮನಿಸಲಿಲ್ಲ. ಇಬ್ಬರು ಸೋದರರೂ ವೃಂದಾವನದ ಲೀಲೆಗಳನ್ನು ಕೇಳುತ್ತ ಕೇಳುತ್ತ ಅದೆಷ್ಟು ಪ್ರೇಮೋನ್ಮಾದಕ್ಕೆ ಒಳಗಾದರೆಂದರೆ, ಅಚ್ಚರಿ, ಕುತೂಹಲದಿಂದ ನೇತ್ರಗಳು ವಿಶಾಲವಾದವು, ದೇಹದಲ್ಲಿ ಕೆಲ ಬದಲಾವಣೆಗಳು ಆದವು. ಶ್ರೀಕೃಷ್ಣನ ರೂಪಗಳಲ್ಲೇ ಇದು ಅತ್ಯಂತ ಆನಂದಮಯ ರೂಪ. ಹಾಗಾಗಿಯೇ, ನಾರದ ಮುನಿಗಳು, ‘ನೀವು ಮೂವರೂ ಇದೇ ರೂಪದಲ್ಲಿ ಅವತರಿಸಿ, ಭಕ್ತರನ್ನು ಉದ್ಧರಿಸಬೇಕು, ಕೃಪಾದೃಷ್ಟಿ ಹರಿಸಬೇಕು’ ಎಂದು ನಿವೇದಿಸಿಕೊಂಡಾಗ, ಶ್ರೀಕೃಷ್ಣ, ‘ಸೂಕ್ತ ಸಮಯದಲ್ಲಿ ಇದು ಖಂಡಿತ ಆಗುತ್ತದೆ’ ಎಂದು ಆಶೀರ್ವದಿಸಿದ. ಆ ರೂಪದಲ್ಲೇ ಜಗನ್ನಾಥ, ಬಲಭದ್ರ, ಸುಭದ್ರಾ ಪುರಿಯಲ್ಲಿ ಅವತರಿಸಿದ್ದು! ಹಾಗಾಗಿಯೇ, ಜಗನ್ನಾಥನ ವಿಶಾಲ ನಯನಗಳು ಎಲ್ಲ ಭಕ್ತರನ್ನೂ ಪೊರೆಯುತ್ತವೆ. ಆ ನಯನಗಳಲ್ಲಿ ಕಾರುಣ್ಯವಿದೆ, ಪ್ರೇಮವಿದೆ, ಮಮತೆ, ವಾತ್ಸಲ್ಯ ಇದೆ, ಲೋಕದ ಜಂಜಾಟವನ್ನು ಕಳೆಯುವ ಆಧ್ಯಾತ್ಮಿಕ ಅನುಭೂತಿ ಇದೆ. ಹಾಗಾಗಿಯೇ ಲಕ್ಷಾಂತರ ಜನರು ಜಗನ್ನಾಥನ ದೃಷ್ಟಿ ತಮ್ಮ ಮೇಲೆ ಬಿದ್ದರೆ ಜನ್ಮ ಸಾರ್ಥಕ ಎಂಬ ಭಾವದಲ್ಲಿ ರಥೋತ್ಸವದಲ್ಲಿ ಒಂದಾಗುತ್ತಾರೆ.
ಪುರಿಯ ಮಹಾಪ್ರಸಾದಕ್ಕಂತೂ ಭಾರಿ ಮಹತ್ವ. ಮಹಾವಿಷ್ಣು ತನ್ನ ಚಾರಧಾಮ್ ಯಾತ್ರೆಯ ಸಂಚಾರದಲ್ಲಿ ಬದ್ರಿನಾಥದಲ್ಲಿ ಸ್ನಾನ ಮಾಡುತ್ತಾನೆ. ದ್ವಾರಕಾದಲ್ಲಿ ಅಲಂಕಾರ. ಪುರಿಯಲ್ಲಿ ಪ್ರಸಾದ (ಭೋಜನ) ಸೇವಿಸಿ, ರಾಮೇಶ್ವರದಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಾನೆ. ಅಂದರೆ, ಸಾಕ್ಷಾತ್ ವಿಷ್ಣುವೇ ಇಲ್ಲಿ ಭೋಜನ ಸೇವಿಸುವುದರಿಂದ ದೇವಾಧಿದೇವತೆಗಳು ಕೂಡ ಪ್ರಸಾದ ಪಡೆದುಕೊಳ್ಳುತ್ತಾರೆ ಎಂಬ ಪ್ರತೀತಿ ಇದೆ. ಹಾಗಾಗಿಯೇ, ಪುರಿ ಜಗನ್ನಾಥ ಮಂದಿರದ ಅಡುಗೆಮನೆ ಜಗತ್ತಿನ ಅತಿದೊಡ್ಡ ಅಡುಗೆಮನೆಗಳಲ್ಲಿ ಒಂದು ಎಂಬ ಕೀರ್ತಿ ಪಡೆದುಕೊಂಡಿದೆ. ಭಕ್ತಾದಿಗಳು ಇಲ್ಲಿ ಯಾವುದೇ ಸಮಯಕ್ಕೆ ಹೋದರೂ, ಪ್ರಸಾದ ಲಭ್ಯ. ಇಲ್ಲಿನ ಅಡುಗೆಮನೆಯಲ್ಲಿ ಮಹಾಲಕ್ಷ್ಮೀಯ ಸಾನಿಧ್ಯವಿದೆ ಎಂಬ ಉಲ್ಲೇಖ ಹಲವೆಡೆ ಸಿಗುತ್ತದೆ.
ಪ್ರತಿನಿತ್ಯ ಎಷ್ಟು ಜನರು ಕ್ಷೇತ್ರಕ್ಕೆ ಬರುತ್ತಾರೆ ಎಂಬ ನಿಖರ ಲೆಕ್ಕ ಸಿಗುವುದಿಲ್ಲ. ಆದರೆ, ಸಾಮಾನ್ಯ ದಿನಗಳಲ್ಲೇ ದಿನಕ್ಕೆ ಸರಾಸರಿ 50 ಸಾವಿರದಿಂದ 2 ಲಕ್ಷ ಭಕ್ತರು ಭೇಟಿ ನೀಡುತ್ತಾರೆ. ಅಚ್ಚರಿಯೆಂದರೆ, ಎಲ್ಲರೂ ಊಟ (ಪ್ರಸಾದ) ಮಾಡಿದರೂ, ಅಡುಗೆಯ ಕೊರತೆಯೂ ಆಗುವುದಿಲ್ಲ, ಜಾಸ್ತಿಯೂ ಆಗುವುದಿಲ್ಲ. ಇಂದಿಗೂ ಯಾವುದೇ ಆಧುನಿಕ ಇಂಧನ ಅಥವಾ ಎಲ್ಪಿಜಿ ಗ್ಯಾಸ್ ಬಳಸದೆ ಸೌದೆಯ ಒಲೆಗಳ ಮೇಲೆ ಅಡುಗೆ ತಯಾರಾಗುತ್ತದೆ. ವಿವಿಧ ಬಗೆಯ ಪದಾರ್ಥ/ವ್ಯಂಜನಗಳನ್ನು ಮಣ್ಣಿನ ಮಡಿಕೆಯಲ್ಲಿ ಇಟ್ಟು ಬೇಯಿಸಲಾಗುತ್ತದೆ. ಏಳು ಮಣ್ಣಿನ ಮಡಿಕೆಗಳನ್ನು ಒಟ್ಟಿಗೇ ಇಟ್ಟರೂ, ಮೊದಲು ಬೇಯುವುದು ಏಳನೇ ಮಡಿಕೆಯಲ್ಲಿನ ಪದಾರ್ಥ, ಆ ಬಳಿಕ 6, 5 ಹೀಗೆ ಕ್ರಮವಾಗಿ ಅಡುಗೆ ತಯಾರಾಗುತ್ತದೆ. ಇದು ಹೇಗೆ ಸಾಧ್ಯ ಎಂಬ ಪ್ರಶ್ನೆಗೆ ವಿಜ್ಞಾನಕ್ಕೂ ಉತ್ತರ ಸಿಕ್ಕಿಲ್ಲ. ದೈವಸಾನಿಧ್ಯದಲ್ಲಿ ಎಲ್ಲ ಚಮತ್ಕಾರಗಳು ಸಾಧ್ಯ ಎಂಬುದಷ್ಟೇ ಸತ್ಯ. ಅಡುಗೆ ತಯಾರಿಸಲು ಸಮೀಪದ ಲಕ್ಷ್ಮೀ ಬಜಾರ್ನಿಂದ ತರಕಾರಿ ತರಲಾಗುತ್ತದೆ. ಜಗನ್ನಾಥನಿಗೆ ನೈವೇದ್ಯವಾಗಿ ಛಪ್ಪನ್ ಭೋಗ್ (56 ಬಗೆಯ ಭಕ್ಷ್ಯಗಳು) ಅರ್ಪಿಸಲಾಗುತ್ತದೆ. ಆನಂದ್ ಬಜಾರ್ನಲ್ಲಿ ಭಕ್ತರಿಗೆ ಪ್ರಸಾದ ಲಭ್ಯ. ಎಲ್ಲರೂ ಆನಂದದಿಂದ ಕುಳಿತು ಭೋಜನ ಮಾಡಬೇಕು ಎಂದೇ ಇದಕ್ಕೆ ಆನಂದ್ ಬಜಾರ್ ಎಂದು ಹೆಸರು. ಇಲ್ಲಿ ಸಿಗುವ ಜಗನ್ನಾಥ ಖಾಜಾ ಸಿಹಿಖಾದ್ಯವಂತೂ ರುಚಿಯಲ್ಲಿ ಅಪ್ರತಿಮ.
ಈ ಆಧ್ಯಾತ್ಮಿಕ ಯಾತ್ರೆಯನ್ನು ಬೆಂಗಳೂರು ಇಸ್ಕಾನ್ ಆಯೋಜಿಸಿತ್ತು. ಇಸ್ಕಾನಿನ ಮಹೋತ್ಸಾಹ ಚೈತನ್ಯ ದಾಸ ಮತ್ತು ವಿಮಲ್ ಕೃಷ್ಣ ದಾಸ ಅವರು ಪುರಿ ಕ್ಷೇತ್ರ ಮತ್ತು ಶ್ರೀಜಗನ್ನಾಥನ ಮಹಿಮೆಗಳನ್ನು ಒಂದೊಂದಾಗಿ ವಿವರಿಸುತ್ತಿದ್ದರೆ, ಅಧ್ಯಾತ್ಮದ, ಇಲ್ಲಿಯ ಸಂಸ್ಕೃತಿಯ ಶ್ರೇಷ್ಠತೆಗಳೆಲ್ಲ ಹೆಮ್ಮೆ ಮೂಡಿಸುತ್ತಿದ್ದವು. ಕರ್ನಾಟಕ ಮಾತ್ರವಲ್ಲದೆ ಉತ್ತರ ಮತ್ತು ಈಶಾನ್ಯ ರಾಜ್ಯಗಳ ಕೃಷ್ಣಭಕ್ತರು ಈ ಯಾತ್ರೆಯಲ್ಲಿ ಒಂದಾಗಿದ್ದರು. ಈ ಭಕ್ತರು ಸೇರಿದಂತೆ ದೂರದ ಗುವಾಹಟಿಯ ನವತರುಣರು ಹರಿನಾಮ ಸಂಕೀರ್ತನೆಯಲ್ಲಿ ತನ್ಮಯರಾಗಿ, ಭಕ್ತಿಯ ವಾತಾವರಣಕ್ಕೆ ಇನ್ನಷ್ಟು ಮೆರುಗು ತುಂಬಿದರು. ಪುರಿ ಕ್ಷೇತ್ರ ಅದೇ ದಿವ್ಯತೆಯನ್ನು, ಅದೇ ಶ್ರೇಷ್ಠತೆಯನ್ನು ಇಂದಿಗೂ ಉಳಿಸಿಕೊಂಡು ಬಂದಿದೆ. ಹಾಗಾಗಿಯೇ, ಚೈತನ್ಯ ಮಹಾಪ್ರಭುಗಳು ಪಶ್ಚಿಮ ಬಂಗಾಳದಲ್ಲಿ ಜನಿಸಿದರೂ, ತಮ್ಮ ಜೀವಿತದ 48 ವರ್ಷಗಳ ಪೈಕಿ ಕೊನೆಯ 18 ವರ್ಷ ಪುರಿಯಲ್ಲೇ ನೆಲೆಸಿ, ಜಗನ್ನಾಥನ ಸೇವೆ ಮಾಡಿ, ಅವನಲ್ಲೇ ಲೀನರಾದರು. ಜಗನ್ನಾಥನನ್ನು ಕಂಡೊಡನೆ ಚೈತನ್ಯರ ಪ್ರೇಮೋತ್ಕರ್ಷ ಹೇಗಿರುತ್ತಿತ್ತು ಎಂದರೆ, ಜಗನ್ನಾಥನಿಗೆ ಸಾಷ್ಟಾಂಗ ನಮಸ್ಕಾರ ಮಾಡುತ್ತಿರುವಾಗ ಇವರು ನಿಂತ ಕಲ್ಲಿನ ಮೇಲೆ ಚೈತನ್ಯರ ಪಾದಚಿಹ್ನೆಗಳು ಮೂಡಿವೆ, ಕಲ್ಲು ಅಲ್ಲಲ್ಲಿ ಸವೆದುಹೋಗಿದೆ! ಶ್ರೀ ರಾಮಕೃಷ್ಣ ಪರಮಹಂಸರಂತೂ ತಮ್ಮ ಜೀವಿತಾವಧಿಯಲ್ಲಿ ಒಮ್ಮೆಯೂ ಪುರಿಗೆ ಭೇಟಿ ನೀಡಲಿಲ್ಲ. ಏಕೆಂದರೆ, ತಾನು ಜಗನ್ನಾಥನನ್ನು ನೋಡಿದ ಕ್ಷಣವೇ ಅವನಲ್ಲಿ ಲೀನನಾಗಿ ಬಿಡುತ್ತೇನೆ ಎಂದು ಜಗನ್ನಾಥನ ಸಾನಿಧ್ಯವಿಶೇಷವನ್ನು ರಾಮಕೃಷ್ಣರು ತಿಳಿಸಿಕೊಟ್ಟಿದ್ದರು.
ಪುಟ್ಟ ಮಕ್ಕಳು ಕೂಡ ತಾವೇ ಕಟ್ಟಿಗೆಯ ಚಿಕ್ಕ ರಥ ನಿರ್ವಿುಸಿ, ಅದರಲ್ಲಿ ಪುಟಾಣಿ ಬಲಭದ್ರ, ಜಗನ್ನಾಥ, ಸುಭದ್ರೆಯರನ್ನು ಕೂರಿಸಿ ರಥಯಾತ್ರೆಯಲ್ಲಿ ‘ಜಯ್ ಜಗನ್ನಾಥ’ ಎಂಬ ಘೋಷಣೆಯೊಂದಿಗೆ ಸಾಗುತ್ತಾರೆ. ಯುವಕರು, ವೃದ್ಧರು ಎಂಬ ಭೇದವಿಲ್ಲದೆ ಎಲ್ಲರೂ ರಥ ಕಣ್ಣಿಗೆ ಕಾಣುತ್ತಿದ್ದಂತೆ ಸಾಷ್ಟಾಂಗ ನಮಸ್ಕಾರ ಮಾಡುತ್ತಾರೆ. ಇಲ್ಲಿ ಹಗ್ಗ ಎಳೆಯುವುದರಿಂದ ರಥ ಮುಂದೆ ಹೋಗುವುದಿಲ್ಲ. ಜಗನ್ನಾಥನ ಇಚ್ಛೆಯ ಅನುಸಾರ ರಥ ಸಾಗುತ್ತದೆ. ಪ್ರತಿ ವರ್ಷವೂ ಹೊಸ ರಥ ನಿರ್ವಣವಾಗುತ್ತದೆ. ಅದರ ಪ್ರಕ್ರಿಯೆ ಅಕ್ಷಯ ತೃತೀಯಾದಿಂದಲೇ ಆರಂಭಗೊಂಡು, ಎರಡು ತಿಂಗಳು ನಡೆಯುತ್ತದೆ. ಮೊದಲಿನಿಂದಲೂ ರಥ ತಯಾರಿಸಿಕೊಂಡು ಬಂದ ಕುಟುಂಬದ ಸದಸ್ಯರೇ ಅಥವಾ ಮುಂದಿನ ತಲೆಮಾರಿನವರೇ ಇಂದಿಗೂ ರಥ ತಯಾರಿಸುತ್ತಾರೆ. ಜಗನ್ನಾಥನು ಮಂದಿರಕ್ಕೆ ಮರಳುವ ಹಿಂದಿನ ದಿನ ನಡೆಸುವ ಸೋನಾವೇಶ (ರಾಜಾಬೇಶ) ವಿಶಿಷ್ಟ ಆಚರಣೆ. 250 ಕೆಜಿಗೂ ಅಧಿಕ ಚಿನ್ನದ ಆಭರಣಗಳಿಂದ ಅಲಂಕೃತನಾಗಿ, ವೈಭವದಿಂದ ಕಣ್ಮನ ಸೆಳೆಯುತ್ತಾನೆ. ಪತ್ನಿ ಮಹಾಲಕ್ಷ್ಮೀಗೆ ಹೇಳದೆ ಗುಂಡೀಚಾಗೆ ತೆರಳಿದ್ದರಿಂದ ಜಗನ್ನಾಥನು ಲಕ್ಷ್ಮೀಗೆ ರಸಗುಲ್ಲಾ ನೀಡಿ ಮನವೊಲಿಸುವ ವಿನೋದಲೀಲೆಯೂ ಇಲ್ಲಿದೆ. ಆದರೆ, ಜಗನ್ನಾಥನ ಭಕ್ತಿಲೋಕ, ಪುರಿಯ ವೈಶಿಷ್ಟ್ಯ ಮತ್ತು ಒಡಿಶಾ ಜನರು ಈ ಸಂಸ್ಕೃತಿಯನ್ನು ಕಾಯ್ದುಕೊಂಡು, ಬೆಳೆಸಿರುವ ರೀತಿ ಮಾತ್ರ ರಸಗುಲ್ಲಾಗಿಂತಲೂ ಮಧುರ! ಇದೆಲ್ಲ ನೋಡಿ ಪಂಡಿತ-ಪಾಮರ ಯಾರೇ ಇರಲಿ ಉದ್ಗರಿಸುವುದು ಒಂದೇ- ಜಯ್ ಜಗನ್ನಾಥ! ಅದು ಬರೀ ಭಾವೋನ್ಮಾದವಲ್ಲ, ಮುಕ್ತಿಯ ಮಂತ್ರ.
(ಲೇಖಕರು ‘ವಿಜಯವಾಣಿ’ ಸಹಾಯಕ ಸುದ್ದಿ ಸಂಪಾದಕರು)