

ಜಗತ್ತಿನಾದ್ಯಂತ ಅಪಾರ ಜೀವಹರಣಕ್ಕೆ ಕಾರಣವಾಗಿರುವ ಕರೊನಾ ಸೃಷ್ಟಿಸಿದ ಯುದ್ಧಸದೃಶ ಸ್ಥಿತಿಯಲ್ಲಿ ಜನರ ಜೀವ ಉಳಿಸಲು ಶ್ರಮಿಸುತ್ತಿರುವ ವೈದ್ಯರು ನಿಸ್ಸಂಶಯವಾಗಿಯೂ ಮುಂಚೂಣಿಯ ಕಮಾಂಡರ್ ಎನ್ನಬಹುದಾದರೆ ದಾದಿಯರು, ಆರೋಗ್ಯ ಕಾರ್ಯಕರ್ತರು ಪ್ರಥಮ ಶ್ರೇಣಿಯ (First Line) ಸೈನಿಕರು. ಜೀವದ ಹಂಗು ತೊರೆದು ಲಾಕ್ಡೌನ್ ಸ್ಥಿತಿಯಲ್ಲೂ ಜನರ ದಿನನಿತ್ಯದ ಅಗತ್ಯಗಳನ್ನು ಪೂರೈಸಿದ ವರ್ತಕರು, ಪೊಲೀಸರು, ಮಾಧ್ಯಮಮಿತ್ರರು, ಹಾಲು-ತರಕಾರಿ-ದಿನಪತ್ರಿಕೆ ಮೊದಲಾದ ದಿನಬಳಕೆ ವಸ್ತುಗಳ ಪೂರೈಕೆ ಮಾಡುವವರು ದ್ವಿತೀಯ ಪಂಕ್ತಿಯ ಸೈನಿಕರು ಎನ್ನಬೇಕು.
ಒಂದೆರಡು ದಶಕಗಳ ಹಿಂದೆ ಉಳ್ಳವರ ಅಡುಗೆಮನೆಯಲ್ಲಿಯಷ್ಟೇ ಕಾಣಬಹುದಾಗಿದ್ದ ಎಲ್ಪಿಜಿ ಗ್ಯಾಸ್ ಈಗಂತೂ ಉಜ್ವಲ ಯೋಜನೆ ಮೂಲಕ ಸಮಾಜದ ಕಟ್ಟಕಡೆಯ ಮಹಿಳೆಯರ ಅಡುಗೆಮನೆ ಕೂಡ ತಲುಪಿದೆ ಹಾಗೂ ಎಲ್ಲರ ಅಗತ್ಯವಸ್ತುವಾಗಿದೆ. ಈ ಸಂಕಷ್ಟದ ಸಮಯದಲ್ಲಿ ತಮ್ಮ ಸುರಕ್ಷತೆಯನ್ನು ಲೆಕ್ಕಿಸದೆ ಮನೆ-ಮನೆಗೆ ತೆರಳಿ ಗ್ಯಾಸ್ ಸಿಲಿಂಡರ್ ತಲುಪಿಸುವ ಡೆಲಿವರಿಮೆನ್ಗಳ ಕರ್ತವ್ಯನಿಷ್ಠೆ ಪ್ರಶಂಸನೀಯ. ಕಾರ್ವಿುಕರ ಮತ್ತು ಬಡವರ ಕಷ್ಟಕ್ಕೆ ಮಿಡಿದ ಕೇಂದ್ರ ಸರ್ಕಾರ ಜನಧನ್ ಖಾತೆಗೆ -ಠಿ; 500 ಹಾಕಿದೆ. ಸಮಾಜದ ದುರ್ಬಲವರ್ಗದ ಗ್ರಾಹಕರ ಸೇವೆಗಾಗಿ ತೊಡಗಿಸಿಕೊಂಡಿರುವ ಬ್ಯಾಂಕ್ ನೌಕರರೂ ಅಭಿನಂದನಾರ್ಹರು. ಇವರೆಲ್ಲರ ಕುರಿತು ಸಹೃದಯರ ಸಹಾನುಭೂತಿ ಇರಲಿ ಮತ್ತು ಇವರೆಲ್ಲರೂ ಕರೊನಾ ವಿರುದ್ಧ ಸಂಘರ್ಷ ಮಾಡುತ್ತಿರುವ ಸಿಪಾಯಿಗಳಂತೆ ಕೃತಜ್ಞತೆಯಿಂದ ನೋಡೋಣ.
| ಚಂದ್ರಶೇಖರ ನಾವಡ ಮಾಜಿ ಸೈನಿಕರು, ಬೈಂದೂರು