

ನವದೆಹಲಿ: ಲೋಕಸಭೆ ಚುನಾವಣೆಯ ವೇಳಾಪಟ್ಟಿ ಬಿಡುಗಡೆಯಾದ ಬೆನ್ನಲ್ಲೇ ಭಾರತೀಯ ಚುನಾವಣಾ ಆಯೋಗ ಸಂಚಲನಕಾರಿ ನಿರ್ಧಾರ ಕೈಗೊಂಡಿದೆ. ಆರು ರಾಜ್ಯಗಳ ಗೃಹ ಕಾರ್ಯದರ್ಶಿಗಳು ಮತ್ತು ಪಶ್ಚಿಮ ಬಂಗಾಳದ ಪೊಲೀಸ್ ಮುಖ್ಯಸ್ಥರ ವರ್ಗಾಯಿಸಲು ಆಯಾ ರಾಜ್ಯ ಸರ್ಕಾರಗಳಿಗೆ ಆದೇಶಿಸಿದೆ.
ಇಸಿಐ ಸೋಮವಾರ ತೆಗೆದುಕೊಂಡ ತೀರ್ಮಾನದಲ್ಲಿ ಗುಜರಾತ್, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳ ಗೃಹ ಕಾರ್ಯದರ್ಶಿಗಳನ್ನು ಬದಲಾಯಿಸಲು ಸೂಚಿಸಿದೆ. ಮಿಜೋರಾಂ ಮತ್ತು ಹಿಮಾಚಲ ಪ್ರದೇಶದ ಸಾಮಾನ್ಯ ಆಡಳಿತ ಇಲಾಖೆಯ ಕಾರ್ಯದರ್ಶಿಗಳನ್ನೂ ವರ್ಗಾವಣೆ ಮಾಡುವಂತೆ ಆದೇಶಿಸಿದೆ.
ಮತ್ತೊಂದೆಡೆ, ಗ್ರೇಟರ್ಮುಂಬೈ ಮುನ್ಸಿಪಲ್ ಕಮಿಷನರ್ ಇಕ್ಬಾಲ್ ಸಿಂಗ್ ಚಾಹಲ್ ಜೊತೆಗೆ ಹೆಚ್ಚುವರಿ ಕಮಿಷನರ್ ಮತ್ತು ಡೆಪ್ಯುಟಿ ಕಮಿಷನರ್ಗಳನ್ನೂ ವರ್ಗಾವಣೆ ಮಾಡಲು ಸೂಚಿಸಲಾಗಿದೆ ಎಂದು ಇಸಿ ಹೇಳಿದೆ. ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ನೇತೃತ್ವದ ಸಭೆ ಈ ನಿರ್ಧಾರ ಕೈಗೊಂಡಿದೆ.
ಮೂರು ವರ್ಷ ಪೂರೈಸಿರುವ ಹಾಗೂ ಆಯಾ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳನ್ನು ವರ್ಗಾವಣೆ ಮಾಡುವಂತೆ ಆಯೋಗ ಎಲ್ಲ ರಾಜ್ಯ ಸರ್ಕಾರಗಳಿಗೆ ಆದೇಶ ಹೊರಡಿಸಿರುವುದು ಗೊತ್ತೇ ಇದೆ. ಆದರೆ ಈ ವಿಷಯದಲ್ಲಿ ಮಹಾರಾಷ್ಟ್ರ ವಿಫಲವಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ.
ಚುನಾವಣೆಗೂ ಮುನ್ನ ಆಯೋಗವು ವರ್ಗಾವಣೆ ಮತ್ತು ಅದಕ್ಕೆ ಸಂಬಂಧಿಸಿದ ಇಂತಹ ಕ್ರಮಕ್ಕೆ ಮುಂದಾಗುವುದು ಸಾಮಾನ್ಯ.