

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿರುದ್ಯೋಗಿ ಯುವಜನರನ್ನು ಹಾಗೂ ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿಸಲು ಅನೇಕ ಯೋಜನೆಗಳನ್ನು ಆರಂಭಿಸಿವೆ. ಅವುಗಳಲ್ಲಿ ರಾಜ್ಯ ಸರ್ಕಾರ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಆರಂಭಿಸಿರುವ ಉದ್ಯೋಗಿನಿ ಯೋಜನೆ ಮತ್ತು ನಿರುದ್ಯೋಗಿ ಯುವಕರು ಸಣ್ಣ ಕೈಗಾರಿಕೆ ಸ್ಥಾಪಿಸುವುದನ್ನು ಪ್ರೋತ್ಸಾಹಿಸಲು ಶುರು ಮಾಡಿರುವ ಯುವೈಇಜಿಪಿ ಯೋಜನೆಗಳು ಪ್ರಮುಖವಾಗಿವೆ. ಈ ಯೋಜನೆಗಳಡಿ ಅಲ್ಪಾವಧಿ ತರಬೇತಿ ನೀಡಿ, ಸಾಲ ಸೌಲಭ್ಯ ಒದಗಿಸುವ ಮೂಲಕ ನವೋದ್ಯಮಕ್ಕೆ ಪ್ರೋತ್ಸಾಹ ನೀಡಲಾಗುತ್ತಿದೆ.
ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳ ಅನಕ್ಷರಸ್ಥ ಮಹಿಳೆಯರನ್ನು ಆರ್ಥಿಕವಾಗಿ ಸಬಲಗೊಳಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ (ಕೆಎಸ್ಡಬ್ಲು್ಯಡಿಸಿ) ರಾಜ್ಯದಲ್ಲಿ ಉದ್ಯೋಗಿನಿ ಯೋಜನೆಯನ್ನು ಪ್ರಾರಂಭಿಸಿದೆ. ಮಹಿಳೆಯರಿಗೆ ಸಾಲ ನೀಡುವ ಮೂಲಕ ಸ್ವಯಂ ಉದ್ಯೋಗ ಆರಂಭಿಸಲು ಪ್ರೋತ್ಸಾಹಿಸುವುದು ಈ ಯೋಜನೆಯ ಉದ್ದೇಶ.
ಉದ್ಯಮ ಆರಂಭಿಸಲು ಮಹಿಳೆಯರು ಖಾಸಗಿ ವ್ಯಕ್ತಿಗಳಿಂದ ಹೆಚ್ಚಿನ ಬಡ್ಡಿಗೆ ಹಣ ಪಡೆಯುವುದನ್ನು ತಡೆಯುವುದು ಇದರಿಂದ ಸಾಧ್ಯವಾಗುತ್ತದೆ. ಸಹಾಯಧನ ಪಡೆಯುವ ಮಹಿಳಾ ಉದ್ಯಮಿಗಳಿಗೆ ಉದ್ಯಮ ಕೌಶಲ ತರಬೇತಿ ನೀಡಲಾಗುತ್ತದೆ. ಇದರಡಿ ಆರ್ಥಿಕ ಹಿಂದುಳಿದ ಎಲ್ಲ ವರ್ಗದ ಮಹಿಳೆಯರಿಗೆ ಬಡ್ಡಿರಹಿತ ಸಾಲ ವಿತರಣೆ ಮಾಡಲಾಗುತ್ತದೆ. ಆಸಕ್ತ ಅರ್ಹ ಮಹಿಳೆಯರು ತಮ್ಮ ಸಮೀಪದ ಕಾರ್ಪೆರೇಷನ್ ಬ್ಯಾಂಕ್ ಶಾಖೆಯಿಂದ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು. ಕಿರಾಣಿ ಅಂಗಡಿ, ಬೇಕರಿ, ಉಪ್ಪಿನಕಾಯಿ ವ್ಯಾಪಾರ, ಮೀನು ವ್ಯಾಪಾರ, ಹೊಲಿಗೆ ಕೆಲಸ, ಬ್ಯೂಟಿ ಪಾರ್ಲರ್, ಸೇರಿದಂತೆ 88 ಸಣ್ಣ ಉದ್ಯಮ-ವ್ಯಾಪಾರಗಳಿಗಾಗಿ ಈ ಬಡ್ಡಿರಹಿತ ಸಾಲವನ್ನು ಮಂಜೂರು ಮಾಡಲಾಗುತ್ತದೆ.
ಯೋಜನೆಗೆ ಅರ್ಹತೆ: ವಾರ್ಷಿಕ ಆದಾಯ 1.5 ಲಕ್ಷ ರೂ. ಒಳಗಿರುವ 55 ವರ್ಷದೊಳಗಿನ ಮಹಿಳೆಯರು ಈ ಯೋಜನೆಯ ಲಾಭ ಪಡೆಯಲು ಅರ್ಹರು. ಇದರಲ್ಲಿ ನಿರ್ಗತಿಕರು, ವಿಧವೆಯರು, ಅಂಗವಿಕಲರು ವಿಶೇಷ ವರ್ಗಗಳಿಗೆ ಸೇರಿದ ಮಹಿಳೆಯರಿಗೆ ಆದಾಯ ಮಿತಿ ಇಲ್ಲ.
ದಾಖಲೆಗಳ ಸಲ್ಲಿಕೆ: ಭರ್ತಿ ಮಾಡಿದ ಅರ್ಜಿಯನ್ನು ಜಾತಿ ಮತ್ತು ಆದಾಯ ಪ್ರಮಾಣಪತ್ರ, ಜನನ ಪ್ರಮಾಣಪತ್ರ, ಆಧಾರ್ಕಾರ್ಡ್, ರೇಷನ್ಕಾರ್ಡ್, ಬಿಪಿಎಲ್ ಕಾರ್ಡ್, ಬ್ಯಾಂಕ್ ಪಾಸ್ಪುಸ್ತಕದ ನಕಲು ಪ್ರತಿಗಳ ಜತೆ ಸಲ್ಲಿಕೆ ಮಾಡಬೇಕು.
ಹಣಕಾಸು ನೆರವು: ಉದ್ಯಮ ಆರಂಭಿಸಲು ಸರ್ಕಾರದ ಯೋಜನೆಗಳಿಗೆ ಹಲವು ಉತ್ಪಾದಕ ಸಂಸ್ಥೆಗಳು ಕೂಡ ಕೈಜೋಡಿಸಿವೆ. ಯೋಜನೆಗಳ ಪ್ರಮೋಟರ್ಗಳಾಗಿ ಅವರ ಸಹಭಾಗಿತ್ವ ಪಡೆಯಲಾಗಿದೆ. ಉದ್ಯಮ ಆರಂಭಕ್ಕೆ ಹಣದ ಸಾಲ ಪಡೆಯುವ ಸಾಮಾನ್ಯ ವರ್ಗದ ಯುವಜನರಿಗೆ ಶೇ.10 ಪ್ರಮೋಟರ್ಸ್ಗಳಿಂದ ಮತ್ತು ಶೇ 90 ಬ್ಯಾಂಕ್ಗಳಿಂದ ಸಾಲ ಸೌಲಭ್ಯ ನೀಡಲಾಗುವುದು. ಪರಿಶಿಷ್ಟ ಜಾತಿ, ಪಂಗಡ, ಮಹಿಳೆಯರು, ಅಂಗವಿಕಲರು, ಮಾಜಿ ಸೈನಿಕರು, ತೃತೀಯ ಲಿಂಗಿಗಳಿಗೆ ಪ್ರಮೋಟರ್ಗಳು ಶೇ. 5 ಮತ್ತು ಬ್ಯಾಂಕ್ಗಳಿಂದ ಶೇ. 95 ಸಾಲ ಸೌಲಭ್ಯ ನೀಡಲಾಗುವುದು.
ಸಾಲ ಪಡೆಯಲು ಅರ್ಹತೆ: ಸಾಮಾನ್ಯ ವರ್ಗ ಅರ್ಜಿದಾರರು 18 ರಿಂದ 35 ವರ್ಷದೊಳಗಿರಬೇಕು. ವಿಶೇಷ ವರ್ಗದ ನಿರುದ್ಯೋಗಿ ಯುವಜನರು 18 ರಿಂದ 45 ವಯಸ್ಸಿನವರಾಗಿರಬೇಕು. ಕನಿಷ್ಠ 8ನೇ ತರಗತಿ ಉತ್ತೀರ್ಣರಾಗಿರಬೇಕು. 3 ವರ್ಷಕ್ಕಿಂತ ಹೆಚ್ಚು ಒಂದೇ ಸ್ಥಳದಲ್ಲಿ ವಾಸವಾಗಿರಬೇಕು. ವಾರ್ಷಿಕ ಆದಾಯ 1.5 ಲಕ್ಷ ರೂ. ಮೀರಿರಬಾರದು.
ಯೋಜನೆಗೆ ಆಯ್ಕೆ ಪ್ರಕ್ರಿಯೆ: ಜಿಲ್ಲಾ ಕಾರ್ಯಪಡೆ ಸಮಿತಿ ನೇತೃತ್ವದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜನರಲ್ ಮ್ಯಾನೇಜರ್ ಸಂದರ್ಶನದ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡುತ್ತಾರೆ. ಆಯ್ಕೆಯಾದವರಿಗೆ 7 ದಿನಗಳ ಕಾಲ ತರಬೇತಿ ನೀಡಲಾಗುವುದು. ಉತ್ಪಾದಕರಿಗೆ ಮಾರುಕಟ್ಟೆ ಸೌಲಭ್ಯ ಒದಗಿಸಲು ಸಂಬಂಧಪಟ್ಟ ಜಿಲ್ಲಾ ಕೈಗಾರಿಕಾ ಕೇಂದ್ರಗಳ ಜನರಲ್ ಮ್ಯಾನೇಜರ್ ಸಭೆ, ಪ್ರದರ್ಶನ ಮೇಳ ನಡೆಸುತ್ತಾರೆ. ಹಾಗಾಗಿ ಮಾರುಕಟ್ಟೆಗೂ ನೆರವು ಲಭಿಸುತ್ತದೆ. ಉದ್ಯಮ ಆರಂಭಕ್ಕೆ ಎಲ್ಲ ನೆರವು ಪಡೆದ ನಂತರ, ಹಣಕಾಸು ಸಂಸ್ಥೆಯ ಮಾನದಂಡದ ವೇಳಾಪಟ್ಟಿ ಪ್ರಕಾರ ಸಾಲ ಮರುಪಾವತಿ ಮಾಡಬೇಕು.
ಬಡ್ಡಿ ರಹಿತ ಸಾಲ
ಆಯ್ಕೆಯಾದ ಅರ್ಹ ಮಹಿಳೆಯರಿಗೆ ಸ್ಥಳೀಯ ಬ್ಯಾಂಕುಗಳಿಂದ ಗರಿಷ್ಠ 3 ಲಕ್ಷ ರೂ.ವರೆಗೆ ಬಡ್ಡಿರಹಿತ ಸಾಲ ನೀಡಲಾಗುವುದು. ಈ ಸಾಲದ ಮೇಲೆ ಸಾಮಾನ್ಯ ವರ್ಗದ ಮಹಿಳೆಯರಿಗೆ ಶೇ 30 ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡದ ಮಹಿಳೆಯರಿಗೆ ಶೇ 50 ಸಬ್ಸಿಡಿಯನ್ನು ರಾಜ್ಯ ಸರ್ಕಾರ ನೀಡುತ್ತದೆ.
ಯುವಕರಿಗಾಗಿ ಉದ್ಯೋಗಸೃಷ್ಟಿ
ಸಾಮಾಜಿಕ ಮತ್ತು ಆರ್ಥಿಕ ದುರ್ಬಲ ವರ್ಗದ ವಿದ್ಯಾವಂತ ನಿರುದ್ಯೋಗಿಗಳು ಸ್ಥಳೀಯವಾಗಿ ಸ್ವಯಂ ಉದ್ಯೋಗ ಆರಂಭಿಸಲು ಮತ್ತು ಆ ಮೂಲಕ ನಗರಪ್ರದೇಶಗಳಿಗೆ ವಲಸೆಯನ್ನು ತಡೆಗಟ್ಟಲು ಉದ್ಯೋಗ ಸೃಷ್ಟಿ ಕಾರ್ಯಕ್ರಮ (ಯುವೈಇಜಿಪಿ) ರೂಪಿಸಲಾಗಿದೆ.
ಈ ಯುವೈಇಜಿಪಿ ಯೋಜನೆಯನ್ನು ರಾಜ್ಯ ಸರ್ಕಾರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಇಲಾಖೆ ವತಿಯಿಂದ ಯೋಜಿಸಲಾಗಿದೆ. ಈ ಉದ್ಯಮ ಪ್ರಾರಂಭದಿಂದ ಗ್ರಾಮೀಣ ಯುವಜನರಿಗೆ ಸ್ಥಳೀಯವಾಗಿಯೇ ಉದ್ಯೋಗ ದೊರೆಯುವುದರಿಂದ ನಗರಗಳಿಗೆ ವಲಸೆ ಹೋಗುವುದನ್ನು ತಡೆಯಲು ಸಾಧ್ಯವಾಗುತ್ತದೆ. ಉದ್ಯಮದ ಸ್ವರೂಪಕ್ಕೆ ತಕ್ಕಂತೆ 1 ರಿಂದ 10 ಲಕ್ಷ ರೂ.ವರೆಗೆ ಸಾಲ ನೀಡಲಿದ್ದು, ಇದರ ಮೇಲೆ ರಾಜ್ಯ ಸರ್ಕಾರ ಶೇ. 25 ಅಥವಾ 1.25 ಲಕ್ಷ ರೂ. ಇದರಲ್ಲಿ ಯಾವುದು ಕಡಿಮೆಯೋ ಅದು ಅನ್ವಯವಾಗುವಂತೆ ಸಬ್ಸಿಡಿ ನೀಡುತ್ತದೆ.
ಯಾರನ್ನು ಸಂರ್ಪಸಬೇಕು?
ಯೋಜನೆಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ಉದ್ಯಮ ಯೋಜನೆಗಳ ರಾಜ್ಯ ಸಂಯೋಜಕರಾಗಿ ನೇಮಕ ಆಗಿರುವ ಕೃಷ್ಣಮೂರ್ತಿ ಅವರನ್ನು ಸಂರ್ಪಸಬಹುದು. ಕಚೇರಿ ವಿಳಾಸ- ನಂ. 29/2, 1ನೇ ಮಹಡಿ, ರೇಸ್ ಕೋರ್ಸ್ ರಸ್ತೆ, ಬೆಂಗಳೂರು- 560001 ಅಥವಾ ಮೊಬೈಲ್ ಸಂಖ್ಯೆ 94820 97445, 78999 53352ಕ್ಕೆ ಸಂರ್ಪಸಬಹುದು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಲವು ಯೋಜನೆಗಳು ನಿರುದ್ಯೋಗಿ ಯುವಕರಿಗೆ ಉದ್ಯಮ ಆರಂಭಿಸಲು ಸಹಾಯಹಸ್ತ ಚಾಚುತ್ತಿವೆ. ಅರ್ಜಿ ಸಲ್ಲಿಕೆ ಮಾಡಿದಾಗಿನಿಂದ ಗರಿಷ್ಠ 6 ತಿಂಗಳ ಒಳಗಾಗಿ ಉದ್ಯಮಿಯಾಗಿ ಮಾರುಕಟ್ಟೆಗೆ ಬರುತ್ತಾರೆ. ಸರ್ಕಾರದ ಯೋಜನೆಗಳ ಲಾಭವನ್ನು ಗ್ರಾಮೀಣ ಭಾಗದ ಯುವಜನರು ಪಡೆದುಕೊಳ್ಳಬೇಕು. | ಕೃಷ್ಣಮೂರ್ತಿ ಉದ್ಯಮ ಯೋಜನೆಗಳ ರಾಜ್ಯ ಸಂಯೋಜಕ
| ಸತೀಶ್ ಕೆ. ಬಳ್ಳಾರಿ