ಮದ್ಯಪ್ರಿಯರಿಗೆ ಶಾಕ್ ಕೊಟ್ಟ ಸಿದ್ದರಾಮಯ್ಯ..!

budjet
Published on

ಬೆಂಗಳೂರು: ಇತ್ತೀಚೆಗೆ ಮದ್ಯದ ಬೆಲೆ ಪರಿಷ್ಕರಣೆ ಮಾಡಿ ಪಾನಪ್ರಿಯರು ಹಾಗೂ ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯಈ ಬಾರಿ ಬಜೆಟ್​ನಲ್ಲಿ ಮತ್ತೆ ಬೆಲೆ ಏರಿಕೆಯ ಮುನ್ಸೂಚನೆ ನೀಡಿದ್ದಾರೆ.

ವಿಧಾನಸಭೆಯಲ್ಲಿ ಶುಕ್ರವಾರ 2024-25ನೇ ಸಾಲಿನ ಬಜೆಟ್ ಮಂಡಿಸಿದ ಸಿದ್ದರಾಮಯ್ಯ ವಾಣಿಜ್ಯ ತೆರಿಗೆ, ನೋಂದಣಿ ಮುದ್ರಾಂಕ, ಅಬಕಾರಿ, ಸಾರಿಗೆ, ಗಣಿ ಮತ್ತು ಭೂ ವಿಜ್ಞಾನ ಸೇರಿ ಸಂಪನ್ಮೂಲ ಸಂಗ್ರಹ ಇಲಾಖೆಗಳಿಂದ ಒಟ್ಟು 1,96,525 ಕೋಟಿ ರೂ.ಗಳ ಆದಾಯವನ್ನು ನಿರೀಕ್ಷಿಸಿದ್ದಾರೆ.

ಮದ್ಯದ ಘೋಷಿತ ಸ್ಲಾಬ್‍ಗಳನ್ನು ತರ್ಕಬದ್ಧಗೊಳಿಸುವ ಮೂಲಕ ನೆರೆರಾಜ್ಯದ ಮದ್ಯದ ಬೆಳವಣಿಗೆಗನುಗುಣವಾಗಿ ದೇಶೀಯವಾಗಿ ತಯಾರಾಗುವ ಮದ್ಯ (ಐಎಂಎಲ್) ಮತ್ತು ಬಿಯರ್ಸ್ ಸ್ಲಾಬ್‍ಗಳನ್ನು ಪರಿಷ್ಕರಿಸುವುದಾಗಿ ತಿಳಿಸಿದ್ದಾರೆ. ನೆರೆರಾಜ್ಯಗಳಲ್ಲಿ ಕೆಲವು ಮದ್ಯ ಮಾರಾಟ ದರ ರಾಜ್ಯಕ್ಕಿಂತಲೂ ದುಬಾರಿಯಾಗಿದೆ. ಪರಿಷ್ಕರಣೆಗೊಂಡರೆ ಸಹಜವಾಗಿಯೇ ಅದು ಏರಿಕೆಯಾಗುವ ನಿರೀಕ್ಷೆಯಿದೆ.

ಪ್ರಸಕ್ತ ವರ್ಷ ನೋಂದಣಿ ಮತ್ತು ಮುದ್ರಾಂಕ ಹಾಗೂ ಮೋಟಾರು ವಾಹನಗಳ ತೆರಿಗೆಯನ್ನು ಪರಿಷ್ಕರಣೆ ಮಾಡಿರುವುದರಿಂದ ಈ ಬಜೆಟ್‍ನಲ್ಲಿ ಅಬಕಾರಿ ಹೊರತುಪಡಿಸಿ ಬೇರೆ ತೆರಿಗೆ ಹೊರೆ ಕಂಡುಬಂದಿಲ್ಲ. ಅಬಕಾರಿ ಇಲಾಖೆಯ ಎಲ್ಲಾ ಸೇವೆಗಳನ್ನು ಡಿಜಿಟಲೀಕರಣಗೊಳಿಸುವುದಾಗಿ ತಿಳಿಸಿರುವ ಮುಖ್ಯಮಂತ್ರಿಯವರು, ಇಲಾಖೆ ಒದಗಿಸುವ ವಿವಿಧ ಸೇವೆಗಳಿಗೆ ಸಮಯದ ಮಿತಿ ನಿಗದಿಪಡಿಸುವುದು, ಸ್ವಯಂಚಾಲಿತ ಅನುಮೋದನೆಗೆ ಅವಕಾಶ ಕಲ್ಪಿಸುವುದಾಗಿ ತಿಳಿಸಿದ್ದಾರೆ. 2024 ರ ಜನವರಿ ಅಂತ್ಯದವರೆಗೆ ಅಬಕಾರಿ ಇಲಾಖೆಯಿಂದ 28,181 ಕೋಟಿ ರೂ.ಗಳು ಆದಾಯ ಸಂಗ್ರಹವಾಗಿದ್ದು, ಮುಂದಿನ ವರ್ಷ 38,225 ಕೋಟಿ ರೂ.ಗಳ ಆದಾಯವನ್ನು ನಿರೀಕ್ಷಿಸಲಾಗಿದೆ.

ಸರಕು ಸೇವಾತೆರಿಗೆಯಿಂದ 1.10 ಲಕ್ಷ ಕೋಟಿ ರೂ.:

ಆದಾಯದ ಪ್ರಮುಖ ಮೂಲವಾಗಿರುವ ಸರಕು ಮತ್ತು ಸೇವಾ ತೆರಿಗೆಯಲ್ಲಿ 2024-25 ನೇ ಸಾಲಿಗೆ 1.10 ಲಕ್ಷ ಕೋಟಿ ರೂ.ಗಳ ಸಂಗ್ರಹದ ಗುರಿಯನ್ನು ನಿಗದಿ ಮಾಡಲಾಗಿದೆ. ಜನವರಿ ಅಂತ್ಯದವರೆಗೂ 58,180 ಕೋಟಿ ರೂ.ಗಳ ಎಸ್‍ಜಿಎಸ್‍ಟಿ ಸ್ವೀಕೃತವಾಗಿದ್ದು, ಕಳೆದ ವರ್ಷಕ್ಕಿಂತಲೂ ಶೇ.14 ರಷ್ಟು ಬೆಳವಣಿಗೆಯಾಗಿದೆ. ಪ್ರಸಕ್ತ ವರ್ಷ ಜಿಎಸ್ಟಿ ಮೇಲ್ಮನವಿ ನ್ಯಾಯ ಮಂಡಳಿಯ 2 ರಾಜ್ಯಪೀಠಗಳನ್ನು ರಚಿಸಿ ಕಾರ್ಯಗತಗೊಳಿಸುವ ಮೂಲಕ ತೆರಿಗೆ ವಿವಾದಗಳನ್ನು ಸ್ಥಳೀಯವಾಗಿ ಬಗೆಹರಿಸಲು ಆದ್ಯತೆ ನೀಡಲಾಗಿದೆ.

ಗ್ರಾಹಕ ಸಂವೇದಿ ಜಿಎಸ್‍ಟಿ ಡೇಟಾ ಬೇಸ್ ಮ್ಯಾನೇಜ್‍ಮೆಂಟ್ ಮತ್ತು ಕೃತಕ ಬುದ್ದಿಮತ್ತೆ ಚಾಲಿತ ವಿಶ್ಲೇಷಣಾತ್ಮಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿ ನಿಖರ ಮಾಹಿತಿ ಮುನ್ಸೂಚಕ ವಿಶ್ಲೇಷಣೆ ಮೂಲಕ ರಾಜಸ್ವ ಕೃಢೀಕರಣಕ್ಕೆ ಸಹಾಯ ಮಾಡುವುದಾಗಿ ತಿಳಿಸಿದ್ದಾರೆ. ವಾಣಿಜ್ಯ ತೆರಿಗೆ ಇಲಾಖೆಯ ಅಕಾರಿಗಳ ಪರಿಣಿತಿ ಹೆಚ್ಚಿಸಲು ಇ ತರಬೇತಿ ನೀಡಿ ಮೋಸದ ನೋಂದಣಿಗಳನ್ನು ಪತ್ತೆ ಹಚ್ಚುವುದು ಹಾಗೂ ರಾಜಸ್ವ ಸೃಜನೆಗೆ ಹೊಸ ಮಾರ್ಗಗಳನ್ನು ಅನ್ವೇಷಿಸಲು ಒತ್ತು ನೀಡುವುದಾಗಿ ತಿಳಿಸಿದ್ದಾರೆ.

ಮುದ್ರಾಂಕ ಶುಲ್ಕದಿಂದ 26 ಸಾವಿರ ಕೋಟಿ ರೂ.: ಕಂದಾಯ ಇಲಾಖೆ ಅಧೀನದ ನೋಂದಣಿ ಮತ್ತು ಮುದ್ರಾಂಕ ಶುಲ್ಕದಿಂದ 26 ಸಾವಿರ ಕೋಟಿ ರೂ.ಗಳ ಆದಾಯ ಸಂಗ್ರಹಿಸುವ ಗುರಿ ನಿಗದಿಪಡಿಸಲಾಗಿದೆ. ಈಗಾಗಲೇ ಸ್ಥಿರಾಸ್ತಿ ಮಾರ್ಗಸೂಚಿ ದರಗಳನ್ನು ಪರಿಷ್ಕರಣೆ ಮಾಡಲಾಗಿದ್ದು, ಜನವರಿ ಅಂತ್ಯದವರೆಗೆ 15,692 ಕೋಟಿ ರಾಜಸ್ವ ಸಂಗ್ರಹಣೆಯಾಗಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.10 ರಷ್ಟು ಬೆಳವಣಿಗೆಯಾಗಿದೆ. 2023-24 ನೇ ಸಾಲಿನಲ್ಲಿ ಕರ್ನಾಟಕ ಮೋಟಾರು ವಾಹನ ತೆರಿಗೆಯನ್ನು ಪರಿಷ್ಕರಣೆ ಮಾಡಿರುವುದರಿಂದ ಜನವರಿ ಅಂತ್ಯದವರೆಗೆ 9,333 ಕೋಟಿ ರೂ.ಗಳು ಸಂಗ್ರಹವಾಗಿದ್ದು, ಹಿಂದಿನ ಸಾಲಿಗಿಂತಲೂ ಶೇ.19 ರಷ್ಟು ಬೆಳವಣಿಗೆಯಾಗಿದೆ. ಮುಂದಿನ ವರ್ಷಕ್ಕೆ 13 ಸಾವಿರ ಕೋಟಿ ರೂ.ಗಳ ಆದಾಯದ ಗುರಿ ನಿಗದಿ ಮಾಡಲಾಗಿದೆ.

ಗಣಿ ಇಲಾಖೆಯಿಂದ 9 ಸಾವಿರ ಕೋಟಿ ರೂ.ನಿರೀಕ್ಷೆ: ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಶೇ.22 ರಷ್ಟು ಆದಾಯ ಹೆಚ್ಚಳವಾಗಿದೆ. ಜನವರಿ ಅಂತ್ಯಕ್ಕೆ 5,658 ಕೋಟಿ ರೂ.ಗಳು ಸಂಗ್ರಹವಾಗಿದ್ದು, ಮುಂದಿನ ವರ್ಷಕ್ಕೆ 9 ಸಾವಿರ ಕೋಟಿ ರೂ.ಗಳನ್ನು ನಿಗದಿ ಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net