

ಮಾಡುವ ಕಾರ್ಯದಲ್ಲಿ, ವಿನಿಯೋಗಿಸುವ ಶ್ರಮದಲ್ಲಿ, ಜೀವನ ಕ್ರಮದಲ್ಲಿ, ಆಡುವ ಮಾತಿನಲ್ಲಿ, ಕಳೆಯುವ ಸಮಯದಲ್ಲಿ, ವ್ಯಯಿಸುವ ವೆಚ್ಚದಲ್ಲಿ ಒಂದು ಅಳತೆ, ಲೆಕ್ಕ ಇರಬೇಕು. ಲೆಕ್ಕಾಚಾರವಿಲ್ಲದ ಬದುಕು ಸೂತ್ರವಿಲ್ಲದ ಗಾಳಿಪಟದಂತೆ. ಜೀವನಕ್ಕೊಂದು ಲೆಕ್ಕಾಚಾರವಿದ್ದರೆ ಬದುಕು ಪರಿಪೂರ್ಣವಾಗುತ್ತದೆ.
ಹಿಂದಿನ ಕಾಲದಲ್ಲಿ ಸಮಯ ತಿಳಿಸಲು ಗಡಿಯಾರ ಇಲ್ಲದ ಸಂದರ್ಭ ಸೂರ್ಯನ ಚಲನವಲನದಲ್ಲೇ ಇಂತಿಷ್ಟು ಹೊತ್ತಾಯಿತು ಎಂದು ನಿಗದಿಪಡಿಸುತ್ತಿದ್ದರು. ನೆತ್ತಿಯ ಮೇಲೆ ಸೂರ್ಯ ಬಂದರೆ 12 ಗಂಟೆ ಎಂದು ಅಂದಾಜಿಸುತ್ತಿದ್ದರು. ಅವರ ಗ್ರಹಿಕೆ ಸರಿ ಇರುತ್ತಿತ್ತು. ವ್ಯಾಪಾರ-ವ್ಯವಹಾರವೂ ಒಂದು ಲೆಕ್ಕಾಚಾರದ ಮೇಲೆ ನಿಂತಿತ್ತು. ಮಾತಿನಲ್ಲಿ ಲೆಕ್ಕಾಚಾರ, ಕೊಡುಕೊಳ್ಳುವಿಕೆಯಲ್ಲಿ ಲೆಕ್ಕಾಚಾರ, ಸಂಬಂಧದಲ್ಲಿ ಒಂದು ಲೆಕ್ಕಾಚಾರ ಹೀಗೆ ಒಂದು ಲೆಕ್ಕಾಚಾರದ ಮೇಲೆ ಬದುಕು ಸಾಗಿದೆ, ಸಾಗುತ್ತಿದೆ. ಅದನ್ನು ಗಮನಿಸುವ ಸೂಕ್ಷ್ಮತೆಯನ್ನು ನಾವು ಮೈಗೂಡಿಸಿಕೊಳ್ಳಬೇಕು ಅಷ್ಟೇ.
ಒಂದು ಅಳತೆ, ಪ್ರಮಾಣ, ಲೆಕ್ಕ ಎಲ್ಲದರಲ್ಲೂ ಅಡಗಿದೆ. ಪಂಚ ಪಾಂಡವರ ತಾಯಿ ಕುಂತಿಗೆ ತನ್ನ ಐವರು ಮಕ್ಕಳ ಮೇಲೂ ಸಮಾನ ಪ್ರೀತಿ. ಆದರೆ ಊಟ ಬಡಿಸುವಾಗ ಭೀಮನಿಗೆ ಜಾಸ್ತಿ. ಉಳಿದವರಿಗೆ ಒಂದು ಪ್ರಮಾಣ. ಅದು ಆಕೆಯ ಲೆಕ್ಕಾಚಾರ. ಎಲ್ಲರಿಗೂ ಬಡಿಸಿ ಅವರ ಹಸಿವನ್ನು ನೀಗಿಸುತ್ತಿದ್ದಳು. ಶಿಶುಪಾಲನಿಗೆ ಕೃಷ್ಣನು ನೂರು ಬಾರಿ ಬೈಯಲು ಅವಕಾಶ ಕಲ್ಪಿಸಿದನು. 101ನೇ ಬಾರಿ ಪುನರಾವರ್ತನೆಯಾದಾಗ ಆತನ ವಧೆ ಮಾಡುತ್ತಾನೆ. ಈ ಲೆಕ್ಕಾಚಾರದ ಬದುಕು ಎನ್ನುವುದು ಒಂದು ಕಲೆ. ಅದನ್ನು ಮೈಗೂಡಿಸಿಕೊಂಡವರು ಅತ್ಯುತ್ತಮ ಜೀವನ ರೂಪಿಸಿಕೊಳ್ಳುತ್ತಾರೆ.
ಶಾಲೆಗೆ ಹೋಗಿ ಲೆಕ್ಕವನ್ನು ಕಲಿಯದವರೂ ಕೂಡ ಲೆಕ್ಕಾಚಾರದ ಬದುಕು ನಡೆಸಬಲ್ಲರು. ಇದಕ್ಕೆ ಉದಾಹರಣೆ ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆ ಸ್ವ-ಸಹಾಯ ಸಂಘದ ಮಹಿಳೆಯರ ಬದುಕು. ನಮ್ಮ ಸ್ವ-ಸಹಾಯ ಸಂಘಗಳಲ್ಲಿನ ಮಹಿಳೆಯರಲ್ಲಿ ಆರ್ಥಿಕ ಶಿಸ್ತಿದೆ. ಅವರು ಬಿ.ಕಾಂ. ಮಾಡಿದವರಲ್ಲ, ಎಂ.ಬಿ.ಎ. ಕಲಿತವರಲ್ಲ. ಆದರೆ ಅವರಲ್ಲಿ ಸುಂದರ ಬದುಕನ್ನು ಜೀವಿಸುವುದು ಹೇಗೆ ಎನ್ನುವ ಲೆಕ್ಕಾಚಾರದ ಸೂತ್ರವಿದೆ. ಅದನ್ನು ಅವರು ಕ್ಷೇತ್ರದ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಕಲಿತಿದ್ದಾರೆ. ಬ್ಯಾಂಕುಗಳ ಮೂಲಕ ಸಾಲ ಪಡೆದು, ಅದನ್ನು ಸದ್ವಿನಿಯೋಗ ಮಾಡಿ, ಮರುಪಾವತಿ, ವ್ಯವಹಾರ ಮಾಡುವುದು ಹೇಗೆ ಎಂಬುದೆಲ್ಲವನ್ನೂ ಅವರು ತಿಳಿದುಕೊಂಡಿದ್ದಾರೆ. ಕುಟುಂಬವನ್ನು ಹೇಗೆ ಮುನ್ನಡೆಸುವುದು, ಕಷ್ಟ ಬಂದಾಗ ಹೇಗೆ ಸಂಭಾಳಿಸುವುದು ಎನ್ನುವುದರ ಅರಿವು ಅವರಿಗಿದೆ. ಅವರ ಆ ಲೆಕ್ಕಾಚಾರದಿಂದಾಗಿ ಇಂದು ಅದೆಷ್ಟೋ ಜನರ ಬದುಕು ಹಸನಾಗಿವೆ. ಆರ್ಥಿಕವಾಗಿ ಗಟ್ಟಿಯಾಗಿ ನೆಲೆ ಊರಲು ಸಾಧ್ಯವಾಗಿದೆ.
ಯಾವುದೇ ಲೆಕ್ಕಾಚಾರವು ಒಂದು ವ್ಯವಸ್ಥೆಗೆ ಅಚ್ಚುಕಟ್ಟನ್ನು ಒದಗಿಸುತ್ತದೆ. ಉದಾಹರಣೆಗೆ ಶ್ರೀಕ್ಷೇತ್ರ ಧರ್ಮಸ್ಥಳದ ಜಮಾ ಉಗ್ರಾಣ. ದೇವಸ್ಥಾನಕ್ಕೆ ಬೇಕಾಗಿರುವ ಎಲ್ಲಾ ವಸ್ತುಗಳನ್ನು ಜಮಾ ಉಗ್ರಾಣದ ಮೂಲಕ ಪಡೆಯಲಾಗುತ್ತದೆ. ಜಮಾ ಉಗ್ರಾಣದಲ್ಲಿ ಮುಖ್ಯಸ್ಥರು ಇರುತ್ತಾರೆ. ಅವರು ಅಲ್ಲಿನ ಎಲ್ಲಾ ವಿಚಾರಗಳನ್ನು ನೋಡಿಕೊಳ್ಳುತ್ತಾರೆ. ಅಲ್ಲಿ ಲೆಕ್ಕ ವಿಭಾಗ, ದಾಸ್ತಾನು ವಿಭಾಗ ಹೀಗೆ ಬೇರೆ ಬೇರೆ ವಿಭಾಗಗಳಲ್ಲಿ ಕಾರ್ಯನಿರ್ವಹಣೆ ಮಾಡಲಾಗುತ್ತದೆ. ಲೆಕ್ಕಪತ್ರದವರು ಅಲ್ಲಿಗೆ ಬರುವ ಸರಕು-ಸಾಮಗ್ರಿಗಳ ಬಗ್ಗೆ ವಿವರಗಳನ್ನು ದಾಖಲಿಸಿಕೊಂಡು ದೇವಸ್ಥಾನಕ್ಕೆ ಬೇಕಾದ ಸಾಮಗ್ರಿಗಳನ್ನು ಅಗತ್ಯಕ್ಕೆ ತಕ್ಕಂತೆ ಪೂರೈಸುತ್ತಾರೆ. ಪ್ರತಿನಿತ್ಯದ ಪೂಜೆಗೆ ಹಾಗೂ ವಿವಿಧ ಸೇವೆಗಳಿಗೆ ಬೇಕಾಗುವ ಎಲ್ಲ ವಸ್ತುಗಳನ್ನು ಕಳುಹಿಸಿಕೊಡುತ್ತಾರೆ. ಹಾಗೆಯೇ ಜಾತ್ರೆ- ಉತ್ಸವ ವಿಶೇಷ ದಿನಗಳಲ್ಲಿ ಬೇಕಾಗುವ ಸಾಮಗ್ರಿಗಳನ್ನು ಕೂಡ ಜಮಾ ಉಗ್ರಾಣದಿಂದಲೇ ದೇವಸ್ಥಾನಕ್ಕೆ ನೀಡಲಾಗುತ್ತದೆ. ಇದು ಶ್ರೀ ಕ್ಷೇತ್ರದಲ್ಲಿ ಅನೇಕ ವರ್ಷಗಳಿಂದ ನಡೆದುಕೊಂಡು ಬಂದಂತಹ ಪದ್ಧತಿ. ನಮ್ಮಲ್ಲಿ ಸುಮಾರು 200 ವರ್ಷಗಳಷ್ಟು ಹಳೆಯದಾದ ಲೆಕ್ಕಪತ್ರಗಳನ್ನು ಕಾಣಬಹುದು. ಅವುಗಳನ್ನು ಮಂಜೂಷಾ ವಸ್ತುಸಂಗ್ರಹಾಲಯದಲ್ಲಿ ಸುರಕ್ಷಿತವಾಗಿ ಕಾಪಿಡಲಾಗಿದೆ. ಆ ಕಾಲದಲ್ಲಿ ದೇವಸ್ಥಾನ ನಿರ್ವಹಣೆ ವ್ಯವಸ್ಥೆಗಳು ಹೇಗಿದ್ದವು ಎಂಬುದನ್ನು ತಿಳಿದುಕೊಳ್ಳಲು ಈ ಮೂಲಕ ಸಾಧ್ಯವಾಗುತ್ತದೆ.
ಮನುಷ್ಯ ತನ್ನ ಜೀವನವನ್ನು ಒಂದು ಲೆಕ್ಕಾಚಾರದ ಮೇಲೆ ನಡೆಸಬೇಕು. ಧಾರ್ವಿುಕವಾಗಿ, ಸಮಾಜಕ್ಕೆ, ಕುಟುಂಬಕ್ಕೆ ಮತ್ತು ತನಗೆ ಎಂದು ವಿಭಾಗಿಸಿಕೊಂಡು ಯಾವುದಕ್ಕೆ ಹೆಚ್ಚು ಪ್ರಾಮುಖ್ಯ ಕೊಡಬೇಕು ಎಂದು ಲೆಕ್ಕ ಹಾಕಿಕೊಂಡು ಮುನ್ನಡೆಯಬೇಕು. ಕೇವಲ ತನಗಾಗಿ ಜೀವಿಸದೆ, ತುಸು ಸಮಯ ಕುಟುಂಬಕ್ಕೆ, ಸಮಾಜಕ್ಕೆ ಹಾಗೂ ಧಾರ್ವಿುಕವಾಗಿ ಅಧ್ಯಾತ್ಮ-ಧರ್ಮ ವಿಚಾರಗಳಿಗೆ ಮೀಸಲಿಡಬೇಕು. ಆಗ ಬದುಕು ಸಮತೂಕವಾಗುತ್ತದೆ. ಇಲ್ಲವಾದರೆ ಬದುಕು ಹಳಿ ತಪ್ಪಿದ ರೈಲಿನಂತಾಗುತ್ತದೆ.
ವಿಜ್ಞಾನ ಕರಾರುವಾಕ್ಕಾಗಿ ಹೇಳುತ್ತದೆ. ಹೀಗೆ ಮಾಡಿದರೆ ಹೀಗೆ ಆಗುತ್ತದೆ ಎಂದು ತಿಳಿಸುತ್ತದೆ. ಆದರೆ ಹಾಗೆ ತಿಳಿಸುವ ಮೊದಲು ಸಾಕಷ್ಟು ಪ್ರಯೋಗಗಳು ನಡೆಯುತ್ತವೆ. ಒಬ್ಬ ವಿಜ್ಞಾನಿಯು ಅನ್ವೇಷಣೆ ಮಾಡುವಾಗ ಅದೆಷ್ಟೋ ಬಾರಿ ಎಡವುತ್ತಾನೆ. ಒಂದು ಲೆಕ್ಕಾಚಾರದ ಮೇಲೆ ಪ್ರಯೋಗ ಮಾಡುತ್ತಾ ಇರುತ್ತಾನೆ. ಆ ನಿರಂತರ ಪ್ರಯತ್ನ ಯಶಸ್ಸು ಹೊಂದಿದಾಗ ಕರಾರುವಾಕ್ಕಾಗಿ ಹೀಗೆಯೇ ಮಾಡಬೇಕು ಎಂಬ ನಿಯಮ ರೂಪುಗೊಳ್ಳುತ್ತದೆ.
ಚಂದ್ರಯಾನ ಕೈಗೊಂಡಾಗ ಮೊದಲು ಹಾಕಿದ ಲೆಕ್ಕಾಚಾರ ಅಂತಿಮ ಹಂತದಲ್ಲಿ ಯಶಸ್ಸು ಕಾಣಲಿಲ್ಲ. ಆದರೆ ಅದನ್ನು ಸರಿಪಡಿಸಿ ಮತ್ತೆ ಚಂದ್ರಯಾನ ಮಾಡಿದಾಗ ಯಶಸ್ಸು ಪ್ರಾಪ್ತಿಯಾಯಿತು. ಒಂದು ಲೆಕ್ಕಾಚಾರದ ಗ್ರಹಿಕೆಯೇ ಮುಂದೊಂದು ದಿನ ಯಶಸ್ಸಿನ ಸೂತ್ರವಾಗುತ್ತದೆ. ಕ್ರಿಕೆಟ್ನಲ್ಲಿ ಬೌಲರ್ ಒಂದು ಲೆಕ್ಕಾಚಾರದಲ್ಲಿ ಯಾರ್ಕರ್ ಬೌಲ್ ಮಾಡಲು ಪ್ರಯತ್ನಿಸುತ್ತಾನೆ. ಕೆಲವೊಮ್ಮೆ ಅದು ಫುಲ್ಟಾಸ್ ಆಗುತ್ತದೆ. ಆದರೆ ಸತತ ಪರಿಶ್ರಮದಿಂದ ಯಾರ್ಕರ್ ಚೆಂಡು ಎಸೆಯಲು ಕರಗತ ಮಾಡಿಕೊಳ್ಳುತ್ತಾನೆ. ಹಾಗಾಗಿ ಲೆಕ್ಕಾಚಾರ ಎನ್ನುವುದು ಬೇಕೇ ಬೇಕು. ಲೆಕ್ಕಾಚಾರದಲ್ಲಿ ಏರು-ಪೇರು ಆಗಬಹುದು. ಆದರೆ ಅದನ್ನು ಸರಿಪಡಿಸಿಕೊಂಡರೆ ಮುಂದೊಂದು ದಿನ ಅದೇ ಲೆಕ್ಕಾಚಾರ ಯಶಸ್ಸಿಗೂ ದಾರಿಯಾಗುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ. ಮತ್ತಷ್ಟು ಸ್ವಾರಸ್ಯವಾಗಿ ಹೇಳಬೇಕೆಂದರೆ ಮದುವೆ ಆಗುವ ಹುಡುಗಿ/ಹುಡುಗ ಈತನೇ/ಇವಳೇ ನನಗೆ ಸರಿಯಾದ ಜೋಡಿ ಎಂದು ಲೆಕ್ಕಾಚಾರ ಹಾಕಿ ಮದುವೆ ಆಗುತ್ತಾರೆ. ಅವರು ಪ್ರೀತಿಯನ್ನು ಒಪ್ಪಿಕೊಳ್ಳುತ್ತಾರೆ. ದಾಂಪತ್ಯದಲ್ಲಿ ಸರಸ ವಿರಸ ಸಾಮಾನ್ಯ. ಹಾಗಾಗಿ ಮುಂದೊಂದು ದಿನ ಜಗಳವಾದರೂ, ಒಬ್ಬರನ್ನೊಬ್ಬರು ಬೈದುಕೊಂಡರೂ ಕೂಡ ತುಸು ಸಂಯಮದಿಂದ ವರ್ತಿಸಿ ಹದವರಿತ ಲೆಕ್ಕಾಚಾರದಲ್ಲಿ ಜೀವನ ಸಾಗಿಸಿದರೆ ಸುಂದರ ಕುಟುಂಬ ಜೀವನ ಅವರದಾಗುತ್ತದೆ.
ಧಾರ್ವಿುಕವಾಗಿಯೂ ಅಷ್ಟೇ. ಜ್ಯೋತಿಷದಲ್ಲಿ ಒಂದು ಲೆಕ್ಕಾಚಾರವಿದೆ. ಪಾಪ-ಪುಣ್ಯಗಳ ಲೆಕ್ಕವಿದೆ. ದಾನ-ಧರ್ಮಗಳನ್ನು ಮಾಡುವಾಗ ನಾವು ಲೆಕ್ಕವಿಡಬಾರದಂತೆ. ಆದರೆ ಭಗವಂತ ಅದನ್ನು ಲೆಕ್ಕವಿಡುತ್ತಾನೆ ಎನ್ನುವ ಮಾತಿದೆ. ಸೋಲಿನಲ್ಲೂ-ಗೆಲುವಿನಲ್ಲೂ ಲೆಕ್ಕವಿದೆ. ಹಾಗಾಗಿ ಲೆಕ್ಕಾಚಾರ ಎನ್ನುವುದು ಕೇವಲ ಹಣಕಾಸಿಗೆ ಸಂಬಂಧಿಸಿದ ವಿಷಯವಲ್ಲ ಎನ್ನುವುದನ್ನು ನಾವು ಅರಿತುಕೊಳ್ಳಬೇಕು.
ಮನೆಯಲ್ಲಿ ಮಡದಿಯಾಗಿ ತನ್ನ ಗಂಡನಿಗೆ, ತಾಯಿಯಾಗಿ ತನ್ನ ಮಕ್ಕಳಿಗೆ ಅಡುಗೆಯನ್ನು ತಯಾರಿಸುತ್ತಾಳೆ. ಮಕ್ಕಳ ರುಚಿ, ಗಂಡನ ರುಚಿ ಬೇರೆ ಬೇರೆ ಇದ್ದರೂ ಅದನ್ನು ಅರಿತು ಒಂದು ಪ್ರೀತಿಯ ಲೆಕ್ಕಾಚಾರ ಸೇರಿಸಿ ಮಾಡುವ ಅಡುಗೆ ಎಲ್ಲರಿಗೂ ಸಿಹಿಯಾಗುತ್ತದೆ, ಇಷ್ಟವಾಗುತ್ತದೆ. ಒಪ್ಪುತ್ತದೆ. ಹಾಗಾಗಿ ಈ ಲೆಕ್ಕಾಚಾರ ಬೆಸುಗೆಯಲ್ಲೂ ಅಡಗಿದೆ. ಮಕ್ಕಳಿಗೆ ಅಮ್ಮನ ಪ್ರೀತಿ, ಗಂಡನಿಗೆ ಮಡದಿಯ ಪ್ರೀತಿ ದೊರೆತಾಗ ಸುಂದರ ದಾಂಪತ್ಯ ಜೀವನದ ಲೆಕ್ಕಾಚಾರಕ್ಕೆ ಬೇರೇನೂ ಬೇಕಿಲ್ಲ ಅಲ್ಲವೇ?
ಇಂದು ಎಲ್ಲರೂ ಒತ್ತಡದ ಬದುಕು ನಡೆಸುತ್ತಿದ್ದಾರೆ. ಕಾರ್ಪೇರೇಟ್ ಕೆಲಸ ಬೆಳಗ್ಗೆಯಿಂದ ಸಂಜೆಯವರೆಗೆ ಕಂಪ್ಯೂಟರ್ ಮುಂದೆ ದುಡಿಮೆ. ಮನೆಗೆ ಬಂದರೂ ಆಫೀಸಿನದ್ದೇ ಗುಂಗಲ್ಲಿ ಅನೇಕರಿರುವುದನ್ನು ನೋಡಿದ್ದೇವೆ. ಕುಟುಂಬ, ಸಂತೋಷದ ಕ್ಷಣ, ಮಡದಿ-ಮಕ್ಕಳು, ತಂದೆ-ತಾಯಿ, ಬಂಧು ಬಳಗದ ಬಗ್ಗೆ ಅವರಿಗೆ ಆಸಕ್ತಿಯೇ ಇರದಂತಾಗುತ್ತದೆ. ಯಾಂತ್ರಿಕವಾಗಿ ಬದುಕು ನಡೆಸುತ್ತಿರುತ್ತಾರೆ. ಕುಟುಂಬದೊಂದಿಗೆ ಕಳೆಯಬೇಕಿದ್ದ ಎಷ್ಟೋ ಅಮೂಲ್ಯ ಕ್ಷಣಗಳು ಮಾಸಿ ಹೋಗಿರುತ್ತವೆ. ಔದ್ಯೋಗಿಕವಾಗಿ ಸಾಕಷ್ಟು ಸಾಧನೆ ಮಾಡಿದರೂ ಅವರ ಕೌಟುಂಬಿಕ ಜೀವನದ ಲೆಕ್ಕಾಚಾರ ತಲೆಕೆಳಗಾಗಿರುತ್ತದೆ. ಅದೆಷ್ಟೋ ಜನರ ಜೀವನ ಈ ವಿಷಯದಿಂದಾಗಿ ಹತಾಶೆಯಿಂದ ಕೂಡಿ ಕೌಟುಂಬಿಕ ಸಮಸ್ಯೆಗಳೂ ಎದುರಾಗುವುದನ್ನು ನಾವಿಂದು ಕಾಣುತ್ತಿದ್ದೇವೆ. ಉದ್ಯೋಗದಲ್ಲಿ ಸಾಧನೆ ಮಾಡಿದರೂ ಬದುಕು ಶೂನ್ಯವೆಂದು ಭಾಸವಾಗುತ್ತದೆ. ಕುಟುಂಬದ ಜತೆಗಿನ ರಸನಿಮಿಷಗಳ ಅನುಭವ ದೊರೆಯದೆ ಸರಿದು ಮುಪ್ಪಾಗುವಾಗ ಎಲ್ಲವೂ ನೆನಪಾಗಿ ಯಂತ್ರದಂತೆ ಜೀವನ ಸವೆಸಿದೆ ಎಂದು ಕೊರಗುವ ಅನೇಕರಿದ್ದಾರೆ. ಅನೇಕರು ಖಿನ್ನತೆಗೂ ಒಳಗಾಗಿದ್ದನ್ನು ಕಂಡಿದ್ದೇವೆ. ಹಾಗಾಗಿ ಸಮಪಾಕದ ಲೆಕ್ಕಾಚಾರದ ಬದುಕಿನ ಕುರಿತು ನಾವು ಚಿಂತಿಸಬೇಕಿದೆ.
ಕಷ್ಟಗಳು ಬಂದಾಗ ಕೆಲವರು ಸದಾ ಕೊರಗುತ್ತಾರೆ. ದೇವರು ನನಗೆ ಮಾತ್ರ ಯಾಕೆ ಕಷ್ಟ ಕೊಡುತ್ತಿದ್ದಾನೆ ಎಂದು ಚಿಂತಿಸುತ್ತಾರೆ. ತನಗೆ ಮಾತ್ರ ಕಷ್ಟ, ಉಳಿದವರೆಲ್ಲ ಅಂದವಾಗಿ ಜೀವನ ಸಾಗಿಸುತ್ತಿದ್ದಾರೆ ಎನ್ನುವುದು ಅವರ ಭಾವನೆ. ಆದರೆ ಪ್ರತಿಯೊಬ್ಬರಿಗೂ ಅವರದೇ ಆದ ಸಂಕಟ, ನೋವುಗಳಿರುತ್ತವೆ. ಒಂದಿಲ್ಲೊಂದು ಸಂಘರ್ಷ ಜೀವನದಲ್ಲಿ ಇದ್ದೇ ಇರುತ್ತದೆ. ಆದರೆ ಬಂದ ಕಷ್ಟಗಳನ್ನು ಎದುರಿಸುವ ಧೈರ್ಯ, ಛಲ ಬೆಳೆಸಿಕೊಳ್ಳಬೇಕು. ಕುಗ್ಗಬಾರದು. ಆಗುವುದೆಲ್ಲ ಒಳ್ಳೆಯದಕ್ಕೆ, ಎಲ್ಲವೂ ಅವನ (ದೇವರ) ನಿಯಮದಂತೆ ಎಂದು ಭಾವಿಸಿ ದೊರೆಯುವ ಪ್ರತಿ ಅವಕಾಶಗಳನ್ನು ಬಳಸಿಕೊಳ್ಳಬೇಕು. ಲೆಕ್ಕಾಚಾರದ ಬದುಕು ನಮ್ಮನ್ನು ಪರಿಪಕ್ವವಾಗಿಸುತ್ತದೆ. ಅದು ವಿಕಾಸಕ್ಕೂ ದಾರಿ.
ಜೀವನದಲ್ಲಿ ಸಾರ್ಥಕ್ಯವನ್ನು ಪಡೆಯಬೇಕಾದರೆ ಪ್ರತಿ ಕ್ಷಣವನ್ನು ಆನಂದಿಸಬೇಕು. ಅದಕ್ಕಾಗಿ ನಮಗೆ ಉತ್ತಮ ಆರೋಗ್ಯ ಬೇಕು. ಉತ್ತಮ ಆರೋಗ್ಯಕ್ಕಾಗಿ ಧ್ಯಾನ, ವ್ಯಾಯಾಮ, ವಿಶ್ರಾಂತಿ ಬೇಕು. ಕುಟುಂಬಕ್ಕೆ ಸಮಯ ಮೀಸಲಿಡಬೇಕು. ಸಮಾಜ ಸೇವಾ ಕೈಂಕರ್ಯದಲ್ಲೂ ತೊಡಗಿಕೊಳ್ಳಬೇಕು. ನಮ್ಮ ಜೀವನದಲ್ಲಿ ನಡೆದು ಬಂದ ಹಾದಿಯ ಬಗ್ಗೆ ಆತ್ಮಾವಲೋಕನ ಮಾಡಿಕೊಂಡು ಉತ್ತಮ ಕಾರ್ಯಗಳನ್ನು ಮಾಡಬೇಕು. ಇವೆಲ್ಲದಕ್ಕೂ ಸಮಯ ಮೀಸಲಿಡಬೇಕು. ಹಾಗಾಗಿ ದಿನದ 24 ಗಂಟೆಯನ್ನು ಹೇಗೆ ಕಳೆಯಬೇಕು ಎಂಬ ಲೆಕ್ಕಾಚಾರ ನಮಗೆ ಅಗತ್ಯವಾಗಿ ಇರಬೇಕು. ಆಗ ಪ್ರತಿಕ್ಷಣವೂ ನಮಗೆ ಸವಿಯಾಗುತ್ತದೆ.
ಹಿರಿಯರು ತಾವು ಏನೇ ಮಾಡಿದರೂ ಒಂದು ಲೆಕ್ಕವಿರಬೇಕು ಎಂದು ತಿಳಿಸಿದ್ದಾರೆ. ಪ್ರತಿ ಮನೆಯಲ್ಲಿ ಲೆಕ್ಕ ಪುಸ್ತಕ ಎಂದು ಇರುತ್ತಿತ್ತು. ಮನೆಯ ಖರ್ಚುವೆಚ್ಚಗಳ ವಿವರ ಅದರಲ್ಲಿರುತ್ತಿತ್ತು. ‘ಅಳೆದು ತೂಗಿ ಕೆಲಸ ಮಾಡಬೇಕು, ಹಳ್ಳಕ್ಕೆ ಸುರಿದರೂ ಅಳೆದು ಸುರಿ’ ಅನ್ನೋದು ಬಹಳ ಪ್ರಸಿದ್ಧ ಮಾತು. ಹಾಗಾಗಿ ನಾವು ಮಾಡುವ ಕಾರ್ಯದಲ್ಲಿ, ಅದಕ್ಕೆ ವಿನಿಯೋಗಿಸುವ ಶ್ರಮದಲ್ಲಿ, ಜೀವನ ಕ್ರಮದಲ್ಲಿ, ಆಡುವ ಮಾತಿನಲ್ಲಿ ಅಥವಾ ಕಳೆಯುವ ಸಮಯದಲ್ಲಿ, ವ್ಯಯಿಸುವ ವೆಚ್ಚದಲ್ಲಿ ಒಂದು ಅಳತೆ ಇರಲಿ. ಒಂದು ಲೆಕ್ಕ ಇರಲಿ. ಲೆಕ್ಕಾಚಾರವಿಲ್ಲದ ಬದುಕು ಸೂತ್ರವಿಲ್ಲದ ಗಾಳಿಪಟದಂತೆ. ಜೀವನಕ್ಕೊಂದು ಲೆಕ್ಕಾಚಾರವಿದ್ದರೆ ಬದುಕು ಪರಿಪೂರ್ಣವಾಗುತ್ತದೆ.
(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ವಧಿಕಾರಿಗಳು)