

ಮಳೆಯಿರಲಿ, ಚಳಿಯಿರಲಿ ಬೆಳ್ಳಂಬೆಳಗ್ಗೆ ದೇವರ ದರ್ಶನಕ್ಕೆಂದು ಭಕ್ತರು ಆತುರಾತುರದಿಂದ ಧಾವಿಸುವುದು; ವೈವಿಧ್ಯಮಯ ಹಿನ್ನೆಲೆಯ ಜನರು ಸಾಲಿನಲ್ಲಿ ನಿಲ್ಲುವುದನ್ನು ನೋಡಿದಾಗ ಮಿನಿಭಾರತವೇ ಕಣ್ಮುಂದೆ ತೆರೆದಂತಾಗುತ್ತದೆ. ಹೊರಗಡೆ ಹೋಟೆಲುಗಳಲ್ಲಿ ಬಗೆಬಗೆ ತಿನಿಸುಗಳು ಲಭ್ಯವಿದ್ದರೂ, ದೇವಸ್ಥಾನದಲ್ಲಿ ಪ್ರಸಾದ ಸೇವಿಸುವುದು ಕೂಡ ಭಕ್ತಜನರ ಭಾವನೆಯ ಬಿಂಬ.
ಇಡೀ ಜಗತ್ತು ಕಣ್ಣರಳಿಸಿಕೊಂಡು ನೋಡುವ ಅಭೂತಪೂರ್ವ ಘಟನೆಗೆ ಇನ್ನೇನು ಚಾಲನೆ ಸಿಗಲಿದೆ. ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ಮಹಾ ಕುಂಭಮೇಳಕ್ಕೆ ಜನವರಿ 13ರಂದು ಮುಹೂರ್ತ. ಗಂಗಾ, ಯಮುನಾ ಮತ್ತು ಸರಸ್ವತೀ ನದಿಗಳ ಸಂಗಮದಲ್ಲಿ ಈ ಪವಿತ್ರ ಕುಂಭ ನಡೆಯಲಿದೆ. ಸರಸ್ವತೀ ನದಿ ಗುಪ್ತಗಾಮಿನಿಯಾದ್ದರಿಂದ ಗೋಚರಿಸದು. ಆ ನದಿ ಭಾರತೀಯರ ಭಾವಬಿಂದುವಿನಲ್ಲಿ ಸಿಂಧುವಾಗಿದೆ.
ಒಟ್ಟು 45 ದಿನಗಳ ಕಾಲ ನಡೆಯಲಿರುವ ಈ ಮಹಾಮೇಳದಲ್ಲಿ ಸುಮಾರು 40 ಕೋಟಿ ಜನರು ಭಾಗವಹಿಸುವ ನಿರೀಕ್ಷೆ ಇದೆ. ಅಂದರೆ, ದಿನಕ್ಕೆ ಸರಿಸುಮಾರು ಒಂದು ಕೋಟಿ ಜನ. ಸುಮ್ಮನೆ ಒಂದು ತುಲನೆ ಮಾಡುವುದಾದರೆ- ಅಮೆರಿಕದ ಜನಸಂಖ್ಯೆ 34 ಕೋಟಿ. ಇಂಡೋನೇಷ್ಯಾ- 28 ಕೋಟಿ. ಪಾಕಿಸ್ತಾನ- 25 ಕೋಟಿ. ರಷ್ಯಾ ಜನಸಂಖ್ಯೆ 14.4 ಕೋಟಿ. ಯುನೈಟೆಡ್ ಕಿಂಗ್ಡಮ್ ಜನಸಂಖ್ಯೆ 6.91 ಕೋಟಿ. ಅಂದರೆ, ಈ ಕೆಲ ದೇಶಗಳ ಜನಸಂಖ್ಯೆಗಿಂತ ಹೆಚ್ಚಿನ ಜನರು ಈ ಕುಂಭಮೇಳಕ್ಕೆ ಹಾಜರಿ ಹಾಕುತ್ತಾರೆ. ತ್ರಿವೇಣಿ ಸಂಗಮ ತಾಯಿಯಾಗಿ ಇವರನ್ನು ಪೊರೆಯುತ್ತದೆ.
ಈ ಅವಧಿಯಲ್ಲಿ ಒಟ್ಟು ಆರು ಪುಣ್ಯಸ್ನಾನಗಳನ್ನು (ಶಾಹಿಸ್ನಾನ) ಮಾಡುವ ಮೂಲಕ ಪುನೀತಭಾವ ತಾಳುತ್ತಾರೆ. ಅದರಲ್ಲೂ ಈ ಸಲದ ಮಹಾ ಕುಂಭಮೇಳ ಮುಹೂರ್ತ 144 ವರ್ಷಗಳಿಗೆ ಒಮ್ಮೆ ಬರುವ ಅತ್ಯಪರೂಪದ ಕ್ಷಣ. ಯೋಗಿ ಆದಿತ್ಯನಾಥ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ಕುಂಭಮೇಳಕ್ಕೆ ಸಕಲ ರೀತಿಯಲ್ಲೂ ನೆರವು ನೀಡುತ್ತಿರುವುದರಿಂದ, ಹಿಂದೆಂದಿಗಿಂತ ಹೆಚ್ಚು ತಯಾರಿಯಾಗಿದೆ. ತಂತ್ರಜ್ಞಾನದ ಬಳಕೆ ಕೂಡ ಗರಿಷ್ಠ ಮಟ್ಟದಲ್ಲಿದೆ. ಸಾಧುಸಂತರು, ನಾಗಾಸಾಧುಗಳಿಂದಾಗಿ ಪ್ರಯಾಗಕ್ಕೆ ವಿಶೇಷ ಮೆರುಗು ಬಂದಿದೆ.
ಧಾರ್ವಿುಕ, ಆಧ್ಯಾತ್ಮಿಕ ತಾಣಗಳಿಗೆ ಹೀಗೆ ಲಕ್ಷ ಲಕ್ಷ ಸಂಖ್ಯೆಯಲ್ಲಿ ಜನರು ಆಗಮಿಸುವುದು ಭಾರತದಲ್ಲಿ ಅನೂಚಾನವಾಗಿ ನಡೆದುಬಂದಿರುವ ರೂಢಿ. ವಿದೇಶಿಯರು ಸುಲಭದಲ್ಲಿ ಅರ್ಥಮಾಡಿಕೊಳ್ಳಲಾಗದ ಭಕ್ತಿಗಂಗೆಯಿದು. ಹಿಂದೆ ಸಂಪರ್ಕ ಸಾಧನಗಳು ಅಷ್ಟಾಗಿ ಇಲ್ಲದಿದ್ದ ಕಾಲದಲ್ಲಿಯೂ ಈ ಪದ್ಧತಿ ಇತ್ತು. ಕಾಲ್ನಡಿಗೆಯ ಯಾತ್ರೆ ಮಾಮೂಲಿಯಾಗಿತ್ತು. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ವ್ಯಕ್ತಿಯೊಬ್ಬರು ನಡೆದುಕೊಂಡೇ ಒಟ್ಟು 17 ಸಲ ಕಾಶಿಯಾತ್ರೆ ಮಾಡಿದ್ದರು ಎಂಬುದನ್ನು ಕೇಳಿಬಲ್ಲೆ. ಅಂದರೆ ಅವರ ಮನೋದೈಹಿಕ ಬಲ ಎಷ್ಟಿರಬಹುದು ಎಂದು ಊಹಿಸಬಹುದು. ಕಾಶಿಯಾತ್ರೆ ಸಂದರ್ಭದಲ್ಲಿ ಪ್ರಾಣಹೋದರೂ ಪುಣ್ಯ; ಕಾಶಿ ವಿಶ್ವನಾಥನ ಪಾದ ಸೇರಿದಂತಾಯಿತು ಎಂಬ ಭಾವನೆ ಜನಮಾನಸದಲ್ಲಿದೆ.
ದೇವರ ದರ್ಶನಕ್ಕಾಗಿ ದಿನಗಟ್ಟಲೆ ಕಾಯುವುದು ಸಹ ಭಕ್ತಿಯ ಪರಾಕಾಷ್ಠೆಯೇ ಸರಿ. ಬಹುಶಃ ಇತರ ಜಾಗಗಳಲ್ಲಿ ಹೀಗೆ ಸುದೀರ್ಘ ಕಾಲ ಕಾಯುವ ಸನ್ನಿವೇಶ ಇದ್ದಲ್ಲಿ ಗದ್ದಲಗಲಾಟೆಗಳು ಏರ್ಪಡುತ್ತವೇನೋ. ಹೋಟೆಲ್ನಲ್ಲಿ ಆರ್ಡರ್ ಮಾಡಿದ ತಿಂಡಿ ನೀಡಲು ತಡವಾಯಿತೆಂದು ವೇಟರ್ ಮೇಲೆ ರೇಗುವುದನ್ನು ಕಾಣುತ್ತೇವೆ. ರಸ್ತೆಯಲ್ಲಿ ಸಾಗುವಾಗ ಓವರ್ ಟೇಕ್ ಮಾಡುವ ವಿಚಾರದಲ್ಲಿ ಹೊಡೆದಾಟ ಆಗುವುದನ್ನು ನೋಡುತ್ತೇವೆ.
ಸಿನಿಮಾ ಟಿಕೆಟ್ ಖರೀದಿಸುವಾಗ ರಂಪಾಟ ಆಗುವುದಿದೆ. ಆದರೆ, ಧಾರ್ವಿುಕ ತಾಣಗಳಲ್ಲಿ ವಿರಳ ಪ್ರಸಂಗಗಳನ್ನು ಹೊರತುಪಡಿಸಿ ಜನರು ಸರದಿ ಸಾಲಿನಲ್ಲಿ ನಿಂತು ತಾಳ್ಮೆ, ಶಾಂತಿಯಿಂದ ಕಾಯುವುದು ಸೋಜಿಗವಲ್ಲದೆ ಇನ್ನೇನು. ದೇವರ ದರ್ಶನ ಮಾಡಬೇಕೆಂಬ ಅದಮ್ಯ ಬಯಕೆ ಮನದಲ್ಲಿ ತುಂಬಿರುವುದರಿಂದ ಚಿಕ್ಕಪುಟ್ಟ ನ್ಯೂನತೆಗಳನ್ನು ಜನರು ಸೈರಿಸಿಕೊಳ್ಳುತ್ತಾರೆ ಅಥವಾ ಅದರತ್ತ ಗಮನವೀಯುವುದಿಲ್ಲ. ಮಕ್ಕಳು, ಮಹಿಳೆಯರು, ವೃದ್ಧರು... ಇವರೆಲ್ಲ ಆರು ಎಂಟು ಹತ್ತು ತಾಸು ಸರದಿಯಲ್ಲಿ ನಿಂತು ಕಾಯುವುದು ಹುಡುಗಾಟಿಕೆಯಾ?
ತಿರುಪತಿ ವೆಂಕಟೇಶ್ವರ, ಶಬರಿಮಲೆ ಅಯ್ಯಪ್ಪ ಸ್ವಾಮಿ, ಶಿರಡಿ ಸಾಯಿಬಾಬಾ ದೇಗುಲ... ಇತ್ಯಾದಿ ಯಾವ ದೇಗುಲ ತೆಗೆದುಕೊಂಡರೂ ಇಂಥ ಸನ್ನಿವೇಶ ಸಾಮಾನ್ಯ. ಮಳೆಯಿರಲಿ, ಚಳಿಯಿರಲಿ ಬೆಳ್ಳಂಬೆಳಗ್ಗೆ ದೇವರ ದರ್ಶನಕ್ಕೆಂದು ಭಕ್ತರು ಆತುರಾತುರದಿಂದ ಧಾವಿಸುವುದು; ವೈವಿಧ್ಯಮಯ ಹಿನ್ನೆಲೆಯ ಜನರು ಸಾಲಿನಲ್ಲಿ ನಿಲ್ಲುವುದನ್ನು ನೋಡಿದಾಗ ಮಿನಿಭಾರತವೇ ಕಣ್ಮುಂದೆ ತೆರೆದಂತಾಗುತ್ತದೆ. ಈಚೀಚೆಗೆ ವಿಶೇಷ ದರ್ಶನದ ಪರಿಕಲ್ಪನೆ ಜಾರಿಗೆ ಬಂದಿದೆಯೆನ್ನುವುದು ಬೇರೆ ಮಾತು. ಹೊರಗಡೆ ಹೋಟೆಲುಗಳಲ್ಲಿ ಬಗೆಬಗೆ ತಿನಿಸುಗಳು ಲಭ್ಯವಿದ್ದರೂ, ದೇವಸ್ಥಾನದಲ್ಲಿ ಪ್ರಸಾದ ಸೇವಿಸುವುದು ಕೂಡ ಭಕ್ತಜನರ ಭಾವನೆಯ ಬಿಂಬ. ಕೆಲ ಕ್ಷೇತ್ರಗಳಲ್ಲಿ ಪ್ರತಿನಿತ್ಯ ಹತ್ತಾರು ಸಾವಿರ ಜನರು ಅನ್ನಪ್ರಸಾದ ಸ್ವೀಕರಿಸುವ ಪರಿ ಅನನ್ಯ.
‘ಇಂದಿನ ಯುವಕರಿಗೆ ಧಾರ್ವಿುಕ ಭಾವನೆಯಿಲ್ಲ. ದೇವರ ಬಗ್ಗೆ ಭಕ್ತಿಯಿಲ್ಲ. ಬರೀ ಮೋಜಷ್ಟೇ ಇವರಿಗೆ ಬೇಕು. ಎಲ್ಲ ಫಾರಿನ್ ಪ್ರಭಾವ’ ಎಂದು ಕೆಲವರು ಹಳಹಳಿಸುವುದಿದೆ. ಆದರೆ ದೇವಸ್ಥಾನಗಳಲ್ಲಿ ಕಾಣುವ ದೃಶ್ಯ ಈ ಮಾತು ಅರ್ಧಸತ್ಯವಿರಬಹುದೆಂದು ದೃಢೀಕರಿಸುತ್ತದೆ.
ಇನ್ನು, ಮನಶ್ಶುದ್ಧಿಯ ಉದ್ದೇಶದಿಂದ ಭಕ್ತರು ಆಚರಿಸುವ ವ್ರತೋಪವಾಸಗಳ ಬಗ್ಗೆ ಹೇಳಹೊರಟರೆ ಅದೇ ಒಂದು ಗ್ರಂಥವಾದೀತು. ಅಯ್ಯಪ್ಪ ಮಾಲಾಧಾರಿಗಳು ಶಬರಿಮಲೆ ಯಾತ್ರೆಗೆ ಮುನ್ನ ಆಚರಿಸುವ 45 ದಿನಗಳ ಕಠಿಣ ವ್ರತ ಇದಕ್ಕೊಂದು ನಿದರ್ಶನವಷ್ಟೇ. ದಿನಾ ಬೆಳಗ್ಗೆ ಬೇಗ ಎದ್ದು ತಣ್ಣೀರು ಸ್ನಾನ; ತಾವೇ ತಯಾರಿಸಿದ ಆಹಾರ ಸೇವಿಸಬೇಕು; ಹಾಸಿಗೆಯಿಲ್ಲದೆ ಚಾಪೆ ಅಥವಾ ನೆಲದ ಮೇಲೆ ಮಲಗಬೇಕು; ನಿತ್ಯ ಎರಡು ಹೊತ್ತು ಭಜನೆ- ಇದು ವ್ರತದ ಸಾಮಾನ್ಯ ನಿಯಮ. ವ್ರತದ ತರುವಾಯ ವಾಹನಗಳನ್ನು ಅಲಂಕರಿಸಿ, ಅಯ್ಯಪ್ಪಸ್ವಾಮಿಯ ಫೋಟೋ ಹಚ್ಚಿಕೊಂಡು, ಸಂಭ್ರಮದಿಂದ ಶಬರಿಮಲೆಯತ್ತ ತೆರಳುವ ಪರಿ ನೋಡುವುದೇ ಒಂದು ಸೊಗಸು.
ಭಕ್ತರ ಮನಸ್ಸಿನ ಮೇಲೆ ಪರಿಣಾಮ ಬೀರುವಲ್ಲಿ ದೇಗುಲಗಳ ವಾಸ್ತುಶಿಲ್ಪಕ್ಕೂ ಮುಖ್ಯ ಪಾತ್ರವಿದೆ. ‘ದಕ್ಷಿಣ ಭಾರತದ ಪ್ರಾಚೀನ ದೇವಾಲಯಗಳನ್ನು ವೈಜ್ಞಾನಿಕ ತಳಹದಿ ಮೇಲೆ ನಿರ್ವಿುಸಲಾಗಿದೆ. ಈ ಅದ್ಭುತ ವಾಸ್ತುಶಿಲ್ಪದ ಕಣಕಣವೂ ನಮ್ಮಲ್ಲಿ ಅಪಾರ ಶಕ್ತಿಕ್ಷೇತ್ರವನ್ನು ಉದ್ದೀಪಿಸುವ ರೀತಿಯಲ್ಲಿ ವಿನ್ಯಾಸಗೊಂಡಿದೆ’ ಎಂದು ಈಶ ಫೌಂಡೇಷನ್ನ ಸದ್ಗುರು ಅವರು ವರ್ಣಿಸುವುದು ಯಥೋಚಿತವಾಗಿದೆ.
ಭಕ್ತರಿಗೆ ಸವಲತ್ತು ಏರ್ಪಡಿಸುವ ನಿಟ್ಟಿನಲ್ಲಿ ಅಲ್ಲಲ್ಲಿ ಆಡಳಿತ ಮಂಡಳಿಗಳ ವತಿಯಿಂದ ಕ್ರಮಗಳು ಕೂಡ ಆಗುತ್ತಿವೆ. ಇದಕ್ಕೆ ಒಂದು ಉದಾಹರಣೆ ನೀಡುವುದಾದರೆ- ಧರ್ಮಸ್ಥಳದಲ್ಲಿ ಶ್ರೀ ಸಾನ್ನಿಧ್ಯ ಎಂಬ ಸಂಕೀರ್ಣ ನಿರ್ವಿುಸಲಾಗಿದ್ದು, ಈಚೆಗೆ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರಿಂದ ಉದ್ಘಾಟನೆಗೊಂಡಿತು. ವೃತ್ತಾಕಾರದ ಈ ಸಂಕೀರ್ಣವು 2.75 ಲಕ್ಷ ಚದರಡಿ ವಿಶಾಲವಾಗಿದ್ದು, ಎರಡು ಅಂತಸ್ತುಗಳನ್ನು ಹೊಂದಿದೆ.
16 ವಿಶಾಲ ನಿರೀಕ್ಷಣಾ ಕೊಠಡಿಗಳನ್ನು ಒಳಗೊಂಡಿದ್ದು, ಪ್ರತಿ ಕೊಠಡಿಯಲ್ಲಿ ಏಕಕಾಲಕ್ಕೆ 600-800 ಜನರು ಕುಳಿತುಕೊಳ್ಳಬಹುದು. ಏಕಕಾಲಕ್ಕೆ 10ರಿಂದ 12 ಸಾವಿರ ಮಂದಿ ಸಾಗಬಹುದು. ಭಕ್ತರು ಸಾಲುಗಳಲ್ಲಿ ನಿಂತು ಕಾಯುವ ಬದಲಿಗೆ ಆರಾಮಾಗಿ ಮುಂದೆ ಸಾಗುವ ಹಾಗೆ ಸಂಕೀರ್ಣವನ್ನು ವಿನ್ಯಾಸಗೊಳಿಸಲಾಗಿದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಮಾಹಿತಿ ನೀಡಿದ್ದಾರೆ.
ಶ್ರೀ ಸಾನ್ನಿಧ್ಯದ ಪ್ರತಿ ಅಂಗಳವೂ ಕುಡಿಯುವ ನೀರು, ಶಿಶುಪಾಲನಾ ಕೊಠಡಿ, ಕೆಫೆಟೇರಿಯಾ ಸೌಲಭ್ಯಗಳನ್ನು ಹೊಂದಿದೆ. ವಿವಿಧೆಡೆಯ ದೇಗುಲಗಳ ನಿರ್ವಹಣಾ ವ್ಯವಸ್ಥೆಗಳನ್ನು ಅಧ್ಯಯನ ಮಾಡಿ ಇಲ್ಲಿ ಸುಧಾರಿತ ವ್ಯವಸ್ಥೆ ಅಳವಡಿಸಿರುವುದು ಗಮನಾರ್ಹ.
ಧರ್ಮಸ್ಥಳದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಕೆಳಗೆ ಒಂದು ಹೋಟೆಲ್ ಇದೆ. ಅಲ್ಲಿನ ಪಾರ್ಕಿಂಗ್ ಜಾಗದಲ್ಲಿ ಅನೇಕ ಮರಗಿಡಗಳಿವೆ. ಈಚೆಗೆ ಅಲ್ಲಿ ಕುಳಿತಿದ್ದಾಗ, ದೂರದಿಂದ ನೋಡಿದಾಗ ಅಲ್ಲಿನ ಮರವೊಂದಕ್ಕೆ ಸಣ್ಣ ಸಣ್ಣ ಬಿಳಿ ಪ್ಲಾಸ್ಟಿಕ್ ಕೊಟ್ಟೆಗಳನ್ನು ಕಟ್ಟಿದ ಹಾಗೆ ಕಂಡಿತು. ಇದೇಕೆ ಹೀಗೆ ಎಂದು ಕುತೂಹಲಗೊಂಡು ಹತ್ತಿರಕ್ಕೆ ಹೋದಾಗ ಅಲ್ಲೊಂದು ಬೆರಗಿನ ಲೋಕವೇ ತೆರೆದುಕೊಂಡಿತು.
ನೂರಾರು ಸಂಖ್ಯೆಯಲ್ಲಿ ಬೆಳ್ಳಕ್ಕಿಗಳು ಆ ಮರದ ರೆಂಬೆಗಳ ಮೇಲೆ ಕುಳಿತುಕೊಂಡಿದ್ದವು. ಆದರೆ ಒಂದು ಹಕ್ಕಿಯೂ ಸದ್ದುಮಾಡುತ್ತಿರಲಿಲ್ಲ. ಅಲ್ಲಿ ವಾಹನಗಳ ಓಡಾಟ ನಡೆಯುತ್ತಿದ್ದರು ಸಹ ಸ್ವಲ್ಪವೂ ಬೆದರದೆ ನಿಶ್ಶಬ್ದವಾಗಿ ಕೂತಿದ್ದವು. ಆಗೀಗ ರೆಕ್ಕೆಯ ಅಲುಗಾಟ ಮಾತ್ರ ಕಾಣುತ್ತಿತ್ತು. ಅದುಬಿಟ್ಟರೆ ಕೆಲವು ಹಕ್ಕಿಗಳು ಮೈ ಸ್ವಚ್ಛಗೊಳಿಸಿಕೊಳ್ಳುತ್ತಿದ್ದವಷ್ಟೆ. ಉಳಿದಂತೆ ಬಹುತೇಕವು ಧ್ಯಾನಸ್ಥ ರೀತಿಯಲ್ಲಿ ಇದ್ದವು. ಅವು ಇಡೀ ಮರವನ್ನು ಆವರಿಸಿರಲಿಲ್ಲ. ಕೆಲವು ರೆಂಬೆಗಳಲ್ಲಿ ಹತ್ತಿರ ಹತ್ತಿರ ಕುಳಿತಿದ್ದವು. ತಮ್ಮ ಜಾಗವನ್ನು ಬಿಟ್ಟು ಕದಲುತ್ತಿರಲಿಲ್ಲ.
ಮಾನವನಿಗೆ ಅರ್ಥವಾಗದ ಭಾಷೆಯಲ್ಲಿ ಅವುಗಳಲ್ಲಿ ಸಂಭಾಷಣೆ ನಡೆಯುತ್ತಿತ್ತಾ? ಗೊತ್ತಿಲ್ಲ. ಆ ಮರ ಅವಕ್ಕೆ ಕಾಯಂ ಆವಾಸಸ್ಥಾನವಿರಬಹುದು ಎಂಬುದಕ್ಕೆ ಅಲ್ಲಿ ದಟ್ಟವಾಗಿ ಹರಡಿದ್ದ ಹಿಕ್ಕೆ ಸಾಕ್ಷಿಯಾಗಿತ್ತು. ಆಹಾರದ ಹುಡುಕಾಟಕ್ಕಾಗಿ ಹಗಲಿನಲ್ಲಿ ಬೇರೆ ಬೇರೆ ಕಡೆ ತೆರಳುವ ಹಕ್ಕಿಗಳು ರಾತ್ರಿಯಾಗುತ್ತಿದ್ದಂತೆ ಮರವನ್ನು ಸೇರಿ ಒಟ್ಟಿಗೆ ಕೂತಿದ್ದು ಮಾನವನ ಬದುಕಿಗೆ ಹೋಲುವಂತಿತ್ತು. ನಾವೂ ಹಾಗೆ ತಾನೆ? ಹಗಲಿನಲ್ಲಿ ನಮ್ಮ ನಮ್ಮ ಕೆಲಸಕಾರ್ಯಗಳಿಗೋಸ್ಕರ ಬೇರೆ ಬೇರೆ ಕಡೆ ಹೋಗುತ್ತೇವೆ. ಸಂಜೆಯಾಗುತ್ತಿದ್ದಂತೆ ಮನೆಯೆಂಬ ಗೂಡನ್ನು ಸೇರುತ್ತೇವೆ. ಈ ಬೆಳ್ಳಕ್ಕಿ ಪ್ರಸಂಗದಲ್ಲಿ ಅಧ್ಯಾತ್ಮಮಿಳಿತವಾದ ಅದ್ಭುತವಾದ ಜೀವನಪಾಠವೂ ಇದೆ ಎಂಬ ಭಾವ ಮನದಲ್ಲಿ ಹಾದುಹೋಯಿತು.
‘ರಾಮ ರಾಮಾ ರಾಮ ರಾಮಾ ರಾಮ ರಕ್ಷಿಸು/ ರಾಮ ದಶರಥ ರಾಮ ಪಾವನ ರಾಮ ಶ್ರೀರಾಮ/ ಒಂದು ಮರದ ಮೇಲೆ ಪಕ್ಷಿಗಳೊಂದುಗೂಡಿಯೆ ರಾತ್ರಿ ಕಳೆಯಲು/ ಮಂಜು ಹರಿಯಲು ತಮ್ಮ ಬಟ್ಟೆಯ ಪಿಡಿವ ತೆರನಂತೆ/ ಗಾಳಿ ಬಂದಾ ಕಾಲದಲ್ಲಿ ತೂರಿಕೊಂಡಾಡಿರುವಂತೆ/ ದೇಹ ಬಂದಾ ಕಾಲದಲ್ಲಿ ರಾಮನೆಂಬ ಸ್ಮರಣೆಯನ್ನು ಜಪಿಸಿಕೊಳ್ಳಿರಿ/ ಹುಟ್ಟುತೇನು ತರಲಿಲ್ಲ ಸಾಯುತೇನು ವಯ್ಯುವರಿಲ್ಲ/ ಸುಟ್ಟು ಸುಟ್ಟು ಸುಣ್ಣದರಳಿನಂತಾಯಿತೀ ದೇಹಾ.../’ (ರಚನೆ: ಆತ್ಮಾರಾಮ).
ಪಕ್ಷಿಗಳು ರಾತ್ರಿಯಲ್ಲಿ ಒಂದು ಮರದ ಮೇಲೆ ಒಟ್ಟಿಗೆ ಇದ್ದರೂ, ಮರುದಿನ ಭಿನ್ನ ದಿಕ್ಕಿನತ್ತ ಸಾಗಬೇಕಾದ್ದು ಅನಿವಾರ್ಯ. ಆಗ ಏನಾಗುತ್ತದೆಂದು ಬಲ್ಲವರಿಲ್ಲ. ಅಥವಾ ಕೆಲ ಕಾಲದಲ್ಲಿ ವಿದಾಯ ಹೇಳಬೇಕಾದ ಸನ್ನಿವೇಶವೂ ಬರಬಹುದು. ಮಾನವನ ಜೀವನ ಮತ್ತು ಸಂಬಂಧಗಳೂ ಕ್ಷಣಿಕ ಎನ್ನುವ ಸಂದೇಶವನ್ನು ಈ ಕವನದ ಸಾಲುಗಳು ನೀಡುತ್ತಿವೆ.
ಕ್ಷಣಭಂಗುರವಾದ ಈ ಜೀವನದಲ್ಲಿ ಅನುಗಾಲವೂ ರಾಮನಾಮ ಜಪಿಸುವ ಮೂಲಕ ಸಾರ್ಥಕ ಬದುಕಿನತ್ತ ಹೊರಳಬೇಕೆಂಬ ಆಶಯ ಈ ಪದ್ಯದಲ್ಲಿದೆ. ಜೀವನದಲ್ಲಿ ಸೇರುವಿಕೆ ಮತ್ತು ಅಗಲುವಿಕೆ ಅನಿವಾರ್ಯ ಎಂಬುದನ್ನು ಸ್ಪಷ್ಟಪಡಿಸಲೋಸುಗ ಶ್ರೀ ಶ್ರೀಧರ ಸ್ವಾಮಿಗಳು ಒಂದು ದೃಷ್ಟಾಂತವನ್ನು ನೀಡುತ್ತಿದ್ದರು. ಅದೆಂದರೆ- ಪ್ರವಾಹದ ನೀರಿನಲ್ಲಿ ಎರಡು ಮರದ ತುಂಡುಗಳು ಅಚಾನಕ್ಕಾಗಿ ಸೇರಿ ಒಂದಷ್ಟು ದೂರ ಒಟ್ಟಿಗೆ ಸಾಗುತ್ತವೆ. ಸ್ಪಲ್ಪ ಸಮಯದ ನಂತರ ಪರಸ್ಪರ ಬೇರ್ಪಟ್ಟು ತಂತಮ್ಮ ದಾರಿಯಲ್ಲಿ ಪ್ರತ್ಯೇಕವಾಗಿ ಹೋಗುತ್ತವೆ. ಇದು ಸೃಷ್ಟಿ ನಿಯಮ.
ಮಾನವ ಸಂಬಂಧಗಳದೂ ಇದೇ ಕಥೆ. ಪಯಣದ ಹಾದಿಯಲ್ಲಿ ಕೆಲವರು ಜೊತೆಯಾಗುತ್ತಾರೆ, ತುಸು ದೂರ ಒಟ್ಟಿಗೆ ಬರುತ್ತಾರೆ. ನಂತರ ತಮ್ಮ ದಾರಿ ಹಿಡಿದು ಸಾಗುತ್ತಾರೆ. ನೆನಪು ಮಾತ್ರ ಶಾಶ್ವತ. ಧಾರ್ವಿುಕ ತಾಣಗಳಿಗೆ ಬರುವ ಜನರೂ ಅಷ್ಟೇ. ಯಾವುದೋ ಊರಿನಿಂದ, ಯಾವುದೋ ರಾಜ್ಯದಿಂದ ಆಗಮಿಸುತ್ತಾರೆ. ಕೆಲ ಹೊತ್ತು ಒಟ್ಟಿಗೆ ಇರುತ್ತಾರೆ. ಕಷ್ಟಸುಖ ಮಾತಾಡಿಕೊಳ್ಳುತ್ತಾರೆ. ದೇವರ ದರ್ಶನಾನಂತರ ತಂತಮ್ಮ ಊರಿಗೆ ತೆರಳುತ್ತಾರೆ...
ಕೊನೇ ಮಾತು: ಧಾರ್ವಿುಕ ತಾಣಗಳಲ್ಲಿ ಕಷ್ಟನಷ್ಟಗಳನ್ನು ಎದುರಿಸಿಯಾದರೂ ದೇವರ ದರ್ಶನವಾದರೆ ಸಾಕೆಂದು ಹಪಹಪಿಸುವ ಜನರು ಕಾಲ್ತುಳಿತದಂತಹ ಘಟನೆಗಳಲ್ಲಿ ಪ್ರಾಣಕಳೆದುಕೊಳ್ಳುವುದು ನೋವಿನ ಸಂಗತಿ. ಮೊನ್ನೆ ತಿರುಪತಿಯಲ್ಲಿ ಹೀಗಾಗಿದ್ದು ಇದಕ್ಕೊಂದು ಉದಾಹರಣೆ. ಇಂಥ ದುರಂತಗಳು ಸಂಭವಿಸದಿರಲಿ ಎಂಬುದು ಈ ಹೊತ್ತಿನ ಆಶಯ.
(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)