ಕಥೆಯಲ್ಲ ಜೀವನ… ಚದುರಂಗದ ಮನೆಯ ವಿಧಿವಿಲಾಸ

edite
Published on

ಮಗಳೇ, ಕಣ್ಣು ಮುಚ್ಚಿಕೋ..

ಭಾರೀ ಸದ್ದು, ಅಲ್ಲೋಲಕಲ್ಲೋಲ. ಆಗಿದ್ದೇನು? ತನಗೇನಾಗಿದೆ ಎಂದು ತಿಳಿಯದ ಅಯೋಮಯ ಸ್ಥಿತಿ.

Savyasachi
 ಸ್ವಲ್ಪ ಹೊತ್ತಿನ ಬಳಿಕ ಆ ಹುಡುಗಿ ಕಣ್ಣು ಬಿಟ್ಟಾಗ ತಾನು ಪ್ರಯಾಣಿಸುತ್ತಿದ್ದ ಕಾರು ಮತ್ತೊಂದು ವಾಹನಕ್ಕೆ ಡಿಕ್ಕಿಯಾಗಿ ನಜ್ಜುಗಜ್ಜಾಗಿ ಬಿದ್ದಿದೆ. ಕಾರಿನ ಪಕ್ಕದಲ್ಲೇ ರಕ್ತದಲ್ಲಿ ಸ್ನಾನ ಮಾಡಿ ಮಲಗಿದಂತಿರುವ ಅಮ್ಮ. ಜೀವ ಹೋಗಿದೆ. ಎಲ್ಲೆಲ್ಲೂ ರಕ್ತ, ವಾಹನಗಳ ಪುಡಿಯಾದ ಅವಶೇಷ, ಗಾಜಿನ ಚೂರುಗಳು, ತನ್ನ ಮೈಮೇಲೂ ರಕ್ತ. ತರಚುಗಾಯಗಳಿಂದ ನೋಯುತ್ತಿರುವ ನಡುಗುತ್ತಿರುವ ದೇಹ. ಮಾತು ಹೊರಡುತ್ತಿಲ್ಲ. ಏನು ಮಾಡಬೇಕೆಂದು ತಿಳಿಯುತ್ತಿಲ್ಲ. ಅಳುವೂ ಬರುತ್ತಿಲ್ಲ. ಅಮ್ಮ ಹೇಳಿದ ಕೊನೆ ಮಾತಷ್ಟೇ ಕಿವಿಯಲ್ಲಿ ಗುಂಯ್ಗುಡುತ್ತಿದೆ..

ಅಪ್ಪ ಎಂದೋ ಬಿಟ್ಟು ಹೋಗಿದ್ದ. ಇದ್ದೊಬ್ಬ ಅಮ್ಮನೂ ಸತ್ತ ಮೇಲೆ ತಬ್ಬಲಿಯಾದ ಎಲಿಜಬೆಥ್ ಹರ್ವನ್ ಕಥೆಯಿದು. ಸಿರಿವಂತಿಕೆಯಲ್ಲೇ ಹುಟ್ಟಿಬೆಳೆದ ಬೆಥ್ ಅನಾಥಳಾದ ಮೇಲೆ ಅಮೆರಿಕದ ನೆಲದ ಕಾನೂನಿನ ಪ್ರಕಾರ ಸೇರಿದ್ದು ಕೆಂಟುಕಿಯ ಅನಾಥಾಶ್ರಮಕ್ಕೆ. ಅಮ್ಮನ ಮನೆಯ ಐಷಾರಾಮಕ್ಕೂ, ಬಾಲಮಂದಿರದ ಕಟುವಾಸ್ತವಕ್ಕೂ ಕೊಂಡಿಯಾಗಿದ್ದು ಒಂದು ಅಪಘಾತ. ಸಿರಿತನ- ಬಡತನವನ್ನು ಅರ್ಥ ಮಾಡಿಕೊಳ್ಳುವಂಥ ವಯಸ್ಸಲ್ಲ ಅದು. ಆದರೂ, ತಾನು ಕೇಳಿದ್ದನ್ನೆಲ್ಲ ಕೊಡಿಸಲು ಅಮ್ಮ ಇನ್ನಿಲ್ಲ ಎಂಬುದಷ್ಟೇ ಗೊತ್ತು. ಅಮ್ಮ ಹೋದ ಮೇಲೆ ಚುರುಕುಬುದ್ಧಿಯ ಬೆಥ್ ಮೌನಿಯಾದಳು. ಬಾಲಮಂದಿರದ ವಾತಾವರಣ ಆಕೆಯ ಒಳಗೆ ಜ್ವಾಲಾಮುಖಿಯನ್ನೇ ಎಬ್ಬಿಸಿತ್ತು. ಆದರೆ, ಯಾರೊಂದಿಗೂ ಬೆರೆಯದ, ಮನಸಿನ ಇಂಗಿತ ಹೇಳಿಕೊಳ್ಳಲಾಗದ ಅಂತಮುಖಿಯಾಗಿ ಬೆಳೆದಳು. ತನ್ನನ್ನು ಯಾರೂ ದತ್ತು ಪಡೆಯದೇ ಹೋದರೆ, ಜೀವನಪೂರ್ತಿ ಅನಾಥೆ ಎಂಬುದು ಆಕೆಗೆ ನಿಧಾನವಾಗಿ ಅರ್ಥವಾಗುತ್ತಿತ್ತು. ಗಣಿತ, ವಿಜ್ಞಾನ, ಇತಿಹಾಸ ವಿಷಯದಲ್ಲಿ ಆಕೆ ಮೊದಲಿಂದಲೂ ಚೂಟಿ. ತರಗತಿಯಲ್ಲಿ ಶಿಕ್ಷಕಿಯೊಬ್ಬರು ತನಗೇ ಕಠಿಣವಾದ ಲೆಕ್ಕವೊಂದನ್ನು ಈಕೆ ಸುಲಲಿತವಾಗಿ ಬಿಡಿಸಿದ್ದನ್ನು ಕಂಡು ತಬ್ಬಿಬ್ಬಾಗಿದ್ದರು. ತನ್ನ ಪೆದ್ದುತನ ಮುಚ್ಚಿಕೊಳ್ಳಲು ಬಾಲಕಿಗೆ ನೆಲಮಾಳಿಗೆಗೆ ತೆರಳಿ ಡಸ್ಟರ್​ನ ಧೂಳು ಕೊಡವಿಕೊಂಡು ಬರುವ ಕೆಲಸ ಹಚ್ಚಿದ್ದರು. ಬಾಲಮಂದಿರದ ನೆಲಮಾಳಿಗೆಗೆ ಈ ಹುಡುಗಿ ತೆರಳಿದ್ದು ಜೀವನದಲ್ಲಿ ದೊಡ್ಡ ತಿರುವಿಗೆ ಕಾರಣವಾಗಿತ್ತು.

ಆಕೆಯ ಅಜ್ಜನ ವಯಸ್ಸಿನ ವ್ಯಕ್ತಿಯೊಬ್ಬನಿದ್ದ. ಬಾಲಮಂದಿರದ ನಿರ್ವಾಹಕ ಎಂದರೂ ಆದೀತು. ಬಿಡುವಿನ ವೇಳೆಯಲ್ಲಿ ಆತ ನೆಲಮಾಳಿಗೆಯಲ್ಲಿ ಚದುರಂಗ ಆಡುತ್ತ ಕಾಲ ಕಳೆಯುತ್ತಿದ್ದ. ಡಸ್ಟರ್ ಧೂಳು ಕೊಡವಲು ಬಂದ ಬೆಥ್​ಗೆ 64 ಮನೆಯ ಚದುರಂಗದ ಬೋರ್ಡ್, ಕಪು್ಪ-ಬಿಳಿ ಕಾಯಿಗಳನ್ನು ನೋಡಿ ಕುತೂಹಲ. ತನಗೂ ಕಲಿಸು ಎಂಬ ಕೋರಿಕೆಗೆ ಆತನಿಂದ ತಿರಸ್ಕಾರ. ಆದರೂ, ಡಸ್ಟರ್ ನೆಪದಲ್ಲಿ ಪದೇಪದೇ ಬರುವ ಹುಡುಗಿ ಚೆಸ್ ಬೋರ್ಡ್ ಅನ್ನು, ಅದರ ಕಾಯಿಗಳನ್ನು, ಆತ ನಡೆಸುವ ರೀತಿಯನ್ನು ನೋಡಿ ಮನಸ್ಸಿನಲ್ಲೇ ಆಟ ಆಡುತ್ತಿದ್ದಳು. ಬಾಲಮಂದಿರದಲ್ಲಿ ನಿತ್ಯ ಕೊಡುತ್ತಿದ್ದ ವಿಟಮಿನ್ ಮಾತ್ರೆಗಳನ್ನು ನುಂಗಿದರೆ ಅಮಲೇರಿದ ಅನುಭವವಾಗುತ್ತಿತ್ತು. ಬೆಥ್ ಈ ಮಾತ್ರೆ ಮುಚ್ಚಿಟ್ಟುಕೊಂಡು, ರಾತ್ರಿ ನುಂಗುತ್ತಿದ್ದಳು. ಮಾತ್ರೆಯ ಅಮಲುಗಣ್ಣಿನಲ್ಲಿ ಆಕೆಗೆ ಗೋಡೆಯ ಮೇಲೆ ಚೆಸ್ ಬೋರ್ಡ್ ಗೋಚರವಾಗುತ್ತಿತ್ತು. ತನ್ನ ಕಲ್ಪನೆಯಲ್ಲೇ ಆಕೆ ನಡೆಗಳನ್ನು ಯೋಚಿಸಿಕೊಂಡು ಚೆಸ್ ಆಡುತ್ತಿದ್ದಳು. ಈಕೆಯ ಆಸಕ್ತಿ ನೋಡಿ ಆತನಿಗೂ ಮನಸ್ಸು ಕರಗಿತ್ತು. ಆಕೆಯೊಂದಿಗೆ ಆಡಲು ಒಪ್ಪಿದ್ದ. ಚದುರಂಗದ ರೀತಿಯನ್ನು, ಒಳಗುಟ್ಟುಗಳನ್ನು ಆತ ಹೇಳಿಕೊಟ್ಟಿದ್ದ. ವಿವಿಧ ನಡೆಗಳ ತಾಂತ್ರಿಕ ಹಿನ್ನೆಲೆ ವಿವರಿಸಿದ್ದ. ತನ್ನ ಬಳಿ ಇದ್ದ ಚೆಸ್ ಪುಸ್ತಕವೊಂದನ್ನು ಓದುವಂತೆ ನೀಡಿದ್ದ. ಕಾಲಕ್ರಮೇಣ ಬೆಥ್ ತರಗತಿಗಳನ್ನು ತಪ್ಪಿಸಿ ನೆಲಮಾಳಿಗೆಯಲ್ಲಿ ಚೆಸ್ ಆಡುತ್ತಿದ್ದಳು.

ಪ್ರತಿಭೆ ಎನ್ನುವುದು ಜನ್ಮಾಂತರದ ಮುಂದುವರಿಕೆಯೇ? ಬೆಥ್ ಅಷ್ಟು ಚಿಕ್ಕ ವಯಸ್ಸಿನಲ್ಲೇ ಅಪರೂಪದ ಪ್ರೌಢಿಮೆಯಿಂದ ಚೆಸ್ ಆಡತೊಡಗಿದ್ದಳು. ತಬ್ಬಲಿ ಬದುಕಿನ ಯಾತನೆ ಮರೆಯಲು ಆಕೆಗೆ ಚೆಸ್ ಆಸರೆಯಾಗಿತ್ತು. ಇವಳ ಆಟ ನೋಡಿ ದಂಗಾದ ಆತ, ತನ್ನ ಪರಿಚಿತ ಚೆಸ್ ಕ್ಲಬ್​ನ ತಜ್ಞನೊಬ್ಬನನ್ನು ಕರೆಸಿದ್ದ. ಬೆಥ್ ಏಕಕಾಲದಲ್ಲಿ ಇಬ್ಬರನ್ನೂ ಸೋಲಿಸಿದ್ದಳು. ವಿಶೇಷ ಆಹ್ವಾನದ ಮೇಲೆ ಚೆಸ್ ಕ್ಲಬ್​ಗೆ ತೆರಳಿ ಅಲ್ಲಿನ 10 ವಿದ್ಯಾರ್ಥಿಗಳನ್ನು ಏಕಕಾಲದಲ್ಲಿ ಸೋಲಿಸಿದ್ದಳು. ಇದೇ ಅವಧಿಯಲ್ಲಿ ಮಕ್ಕಳಿಲ್ಲದ ಓರ್ವ ಮಧ್ಯಮ ವರ್ಗದ ದಂಪತಿ ಬೆಥ್​ಳನ್ನು ದತ್ತು ಪಡೆಯುತ್ತಾರೆ. ಬಾಲಮಂದಿರದ ಪಂಜರದಿಂದ ಹೊರಜಗತ್ತಿಗೆ ಬರುವ ಬೆಥ್ ಚೆಸ್ ಆಡಲು ಹಂಬಲಿಸುತ್ತಾಳೆ. ಪ್ರವೇಶ ಶುಲ್ಕಕ್ಕಾಗಿ ಗುಟ್ಟಾಗಿ ಸಾಲ ಮಾಡಿ ಸ್ಥಳೀಯ ಟೂರ್ನಿಯಲ್ಲಿ ಪ್ರವೇಶ ಪಡೆಯುತ್ತಾಳೆ. ಮೊದಲ ಟೂರ್ನಿಯಲ್ಲೇ ಘಟಾನುಘಟಿಗಳನ್ನು ಸೋಲಿಸಿ 100 ಡಾಲರ್ ಬಹುಮಾನ ಗೆದ್ದಾಗ ಬೆಥ್ ಸ್ವತಂತ್ರ ಹಕ್ಕಿಯಂತೆ ಹಾರಾಡುತ್ತಾಳೆ. ಬೆಥ್ ಅಸಾಮಾನ್ಯ ಬಾಲಕಿ ಎಂಬ ಅಭಿಪ್ರಾಯ ಹರಡುತ್ತದೆ. ಎದುರು ಆಡಲು ಕುಳಿತವರನ್ನು 8-10 ನಡೆಗಳಲ್ಲೇ ನಿರ್ದಯವಾಗಿ ಹೊಸಕಿ ಹಾಕುವ ಆಕೆಯ ಆಟ ಎಲ್ಲೆಡೆ ಕುತೂಹಲಕ್ಕೆ ಕಾರಣವಾಗುತ್ತದೆ. ಒಂದೊಂದೇ ಹೆಜ್ಜೆಗಳನ್ನಿಡುತ್ತ ದೊಡ್ಡ ದೊಡ್ಡ ಟೂರ್ನಿಗಳಲ್ಲಿ ಆಡುವ ಬೆಥ್, ವಿವಿಧ ಚಾಂಪಿಯನ್ ಆಟಗಾರರನ್ನು, ಇಂಟರ್​ನ್ಯಾಷನಲ್ ಮಾಸ್ಟರ್​ಗಳನ್ನು, ಗ್ರಾಂಡ್ ಮಾಸ್ಟರ್​ಗಳನ್ನು ಸದೆಬಡಿಯುತ್ತ ಪ್ರಸಿದ್ಧಳಾಗುತ್ತಾಳೆ. ರಷ್ಯಾದ ಚೆಸ್ ಗ್ರಾಂಡ್​ವಾಸ್ಟರ್​ಗಳನ್ನು ಸದೆಬಡಿಯುವ ಮಹತ್ವಾಕಾಂಕ್ಷೆಯೊಂದಿಗೆ ಆಕೆಯ ಕಥೆ ವಿಸ್ತಾರವಾಗುತ್ತದೆ.

ಬೆಥ್​ಗೆ ಚೆಸ್ ಹೊಸ ಅಸ್ತಿತ್ವ ತಂದುಕೊಟ್ಟರೂ, ಆಕೆಯ ವ್ಯಕ್ತಿಗತ ಬದುಕು ಅಮಲೇರಿದ ಕುದುರೆಯಂತಾಗಿರುತ್ತದೆ. ವಿಟಮಿನ್ ಮಾತ್ರೆಗಳಿಂದ ಅಂಟಿದ ಮಾದಕ ವ್ಯಸನ, ಯಾರೊಂದಿಗೂ ಬೆರೆಯಲಾಗದ ವಿಕ್ಷಿಪ್ತ ಮನೋಸ್ಥಿತಿ, ದತ್ತು ತಾಯಿಯಿಂದ ಅಂಟಿದ ಮದ್ಯಪಾನದ ಚಟ, ಲೈಂಗಿಕತೆಯತ್ತ ಕುತೂಹಲ ಹೀಗೆ ಸಂಕೀರ್ಣ ಭಾವತೀವ್ರತೆಗಳ ನಡುವೆ ಆಕೆ ತೊಳಲಾಡುತ್ತಾಳೆ. ದತ್ತು ಪಡೆದ ಪೋಷಕರ ಮನೆಯ ಬಡತನ, ಹೊರಜಗತ್ತಿನ ಕಟುವಾಸ್ತವಗಳು ಬೆಥ್​ಳ ಮಾನಸಿಕತೆ ಮೇಲೆ ಪ್ರಭಾವ ಬೀರುತ್ತದೆ. ದತ್ತು ತಂದೆ ಕುಟುಂಬ ತೊರೆದು ದೂರವಾಗಿರುತ್ತಾನೆ. ತಾಯಿ ಕುಡಿತ, ಕಾಯಿಲೆಯಿಂದ ಮರಣ ಹೊಂದುತ್ತಾಳೆ. ಆಸೆಪಟ್ಟ ಸಂಬಂಧಗಳೂ ದೀರ್ಘ ಕಾಲ ಉಳಿಯುವುದಿಲ್ಲ. ಒಂಟಿ ಬೆಥ್​ಳ ಸಂಗಾತಿಯಾಗಿ ಕೊನೆಯವರೆಗೂ ಉಳಿಯುವುದು ಚೆಸ್ ಮಾತ್ರ.

ನೆಟ್​ಫ್ಲಿಕ್ಸ್ ಒಟಿಟಿಯಲ್ಲಿ ಅತೀ ಹೆಚ್ಚು ವೀಕ್ಷಣೆಗೊಂಡಿರುವ ‘ದ ಕ್ವೀನ್ಸ್ ಗ್ಯಾಂಬಿಟ್’ ಸರಣಿಯ ಕಥೆ ಇದು. ಹಾಗಿದ್ದರೆ, ಎಲಿಜಬೆಥ್ ಹರ್ವನ್ ಎಂಬ ಚೆಸ್ ಪ್ರತಿಭೆ ನಿಜಕ್ಕೂ ಇದ್ದಳೇ ಎಂದರೆ, ಅದಕ್ಕುತ್ತರ ಇಲ್ಲ. ಏಕೆಂದರೆ, ಈ ಸರಣಿ 1982ರಲ್ಲಿ ಪ್ರಕಟಗೊಂಡ ವಾಲ್ಟರ್ ಟ್ರೆವಿಸ್ ಎಂಬ ಪ್ರಸಿದ್ಧ ಲೇಖಕನ ‘ಕ್ವೀನ್ಸ್ ಗ್ಯಾಂಬಿಟ್’ ಎಂಬ ಕಾದಂಬರಿಯ ದೃಶ್ಯಾಂತರ. ಬೆಥ್ ಪಾತ್ರ ಲೇಖಕ ಟ್ರೆವಿಸ್ ಕಲ್ಪನೆಯಲ್ಲಿ ಮೂಡಿದ್ದೇ ಹೊರತು ನಿಜವಲ್ಲ. ಆದರೆ, ಕಥೆಯಲ್ಲಿ ಬೆಥ್ ಆಡುವ ಒಂದೊಂದು ಚೆಸ್ ಪಂದ್ಯವೂ ನಿಜದ ಆಟವೇ. ಒಂದೊಂದು ನಡೆ, ಆಟದ ಓಪನಿಂಗ್, ವ್ಯೂಹಗಳು, ಆಕ್ರಮಣ ಎಲ್ಲವೂ ಕ್ರಮಬದ್ಧ, ತಾಂತ್ರಿಕವಾಗಿರುವುದು ವಿಶೇಷ. 2020ರಲ್ಲಿ ಬಿಡುಗಡೆಗೊಂಡ ನೆಟ್​ಫ್ಲಿಕ್ಸ್​ನ ಈ ಸರಣಿ 11 ಪ್ರೖೆಮ್ೈಮ್ ಎಮ್ಮಿ ಹಾಗೂ 2 ಗೋಲ್ಡನ್ ಗ್ಲೋಬ್ ಪ್ರಶಸ್ತಿ ಗೆದ್ದುಕೊಂಡಿದೆ. ಮಾತ್ರವಲ್ಲ, ಈ ಸೀರೀಸ್ ನೋಡಿದ ಬಳಿಕ ಅಮೆರಿಕದಲ್ಲಿ ಚೆಸ್ ಸೆಟ್​ಗಳ ಮಾರಾಟ 87% ಹೆಚ್ಚಳಗೊಂಡಿದ್ದು ದಾಖಲೆ. ಲೇಖಕ ಟ್ರೆವಿಸ್ ಈ ಕಥೆ, ಬೆಥ್ ಪಾತ್ರ ಕಾಲ್ಪನಿಕ ಎಂದು ಹೇಳಿಕೊಂಡರೂ, ಜನ ಅದರಲ್ಲಿ ಅಮೆರಿಕದ ಚೆಸ್ ದಿಗ್ಗಜ ಬಾಬ್ಬಿ ಫಿಷರ್ ಜೀವನದ ಸಾಮ್ಯ ಗುರುತಿಸಿದ್ದಾರೆ.

ಕ್ವೀನ್ಸ್ ಗ್ಯಾಂಬಿಟ್​ನ ಎಲಿಜಬೆಥ್ ಹರ್ವನ್ ಕಾಲ್ಪನಿಕ ಪಾತ್ರವೇ ಆಗಿದ್ದರೂ, ಆಕೆಯ ಕಥೆಗೆ ಹೋಲುವ ಆಟಗಾರ್ತಿಯೋರ್ವಳು ಚೆಸ್ ಇತಿಹಾಸದಲ್ಲಿ ಬಂದುಹೋಗಿರುವುದೂ ಉಂಟು. ಬೆಥ್​ಳ ದುರಂತ ಕಥೆಯೊಂದಿಗೆ ಒಂದಷ್ಟು ಸಾದೃಶ್ಯ, ಆಟದ ವೈಖರಿ, ಪ್ರೌಢಿಮೆ, ಪಾರಮ್ಯದಲ್ಲಿ ಸಾಮ್ಯತೆ ಹೊಂದಿರುವ ಆ ಆಟಗಾರ್ತಿಯೇ ವೇರಾ ಮೆಂಚಿಕ್.

ಬೆಥ್​ಳ ಕಾಲ್ಪನಿಕ ಕಥೆ 1960ರ ದಶಕದ ಕಾಲಘಟ್ಟದಲ್ಲಿ ನಡೆದರೆ, ಈ ಕಥೆ ಶುರುವಾಗುವುದು 1906ರಲ್ಲಿ..ವೇರಾ ಮೆಂಚಿಕ್ ರಷ್ಯಾದಲ್ಲಿ ಶ್ರೀಮಂತರ ಮನೆಯಲ್ಲಿ ಜನಿಸಿದವಳು. ಆರು ಕೋಣೆಗಳ ಬೃಹತ್ ಬಂಗಲೆಯಲ್ಲಿ ವಾಸ. ಚಿಟಿಕೆ ಹೊಡೆದರೆ ಓಡಿ ಬರುವ ಸೇವಕರು. ಜೆಕೋಸ್ಲಾವೇಕಿಯಾ (ಈಗಿನ ಜೆಕ್ ಗಣರಾಜ್ಯ) ಮೂಲದ ಅಪ್ಪ, ರಷ್ಯಾ ರಾಜಮನೆತನದವರ ಬೃಹತ್ ಎಸ್ಟೇಟ್ ಒಂದರಲ್ಲಿ ಮ್ಯಾನೇಜರ್. ಇಂಗ್ಲೆಂಡ್ ಮೂಲದ ಅಮ್ಮ ಎಸ್ಟೇಟ್ ಮಾಲೀಕರ ಮಕ್ಕಳಿಗೆ ಪಾಠ ಹೇಳಿಕೊಡುವ ಟೀಚರ್. ಜತೆಗೆ ಇವರ ಕುಟುಂಬದ್ದೇ ಒಡೆತನದ ಕಾಟನ್ ಮಿಲ್ ಬೇರೆ. ದುಡ್ಡಿಗೆ ಕೊರತೆ ಇಲ್ಲ. ಹೆಣ್ಣು ಮಕ್ಕಳ ಪ್ರತಿಷ್ಠಿತ ಖಾಸಗಿ ಶಾಲೆಯಲ್ಲಿ ವ್ಯಾಸಂಗ. ಆದರೆ, ಸುಖ-ಸಂತೋಷ- ಸಿರಿವಂತಿಕೆ ಶಾಶ್ವತವೇ?

1919ರ ರಷ್ಯಾ ಕ್ರಾಂತಿ ರಾಜಕೀಯ ಹಾಗೂ ಸಾಮಾಜಿಕವಾಗಿ ದೊಡ್ಡ ಪರಿವರ್ತನೆಗೆ ಕಾರಣವಾಯಿತು. ರಾಜಪ್ರಭುತ್ವ ಕೊನೆಗೊಂಡು, ಸಮಾಜವಾದಿಗಳ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು. ರಷ್ಯಾ ಕ್ರಾಂತಿ ಶ್ರೀಮಂತರ ಶ್ರೀಮಂತಿಕೆಯ ಮೂಲಕ್ಕೆ ಕೊಡಲಿಪೆಟ್ಟು ನೀಡಿತ್ತು. ವೇರಾ ಕುಟುಂಬದ ಕಾಟನ್ ಮಿಲ್ ಅನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಂಡಿತ್ತು. ಅವರು ತಮ್ಮ ಸ್ವಂತ ಮನೆಯನ್ನೂ ಬಡವರು, ನಿರ್ಗತಿಕರೊಂದಿಗೆ ಹಂಚಿಕೊಳ್ಳಬೇಕಾಯಿತು. ಕೆಲವು ದಿನ ಬಳಿಕ ಇಡೀ ಕುಟುಂಬವನ್ನು ಮನೆಯಿಂದ ಹೊರದಬ್ಬಲಾಯಿತು. ಕಷ್ಟವೆಂದರೆ ಏನೆಂದೇ ತಿಳಿಯದ ಆ ಕುಟುಂಬ ಈಗ ಒಂದೊಂದು ತುತ್ತಿಗೂ ಪರದಾಡುವಂಥ ಸನ್ನಿವೇಶ. ಪರಿಸ್ಥಿತಿ ಕೈಮೀರಿದಾಗ ಹೆಂಡತಿ, ಮಕ್ಕಳನ್ನು ತೊರೆದು ಅಪ್ಪ ಈಗಿನ ಜೆಕ್ ಗಣರಾಜ್ಯದಲ್ಲಿರುವ ಬೊಹೆಮಿಯದ ತನ್ನ ಹುಟ್ಟೂರಿಗೆ ಹೊರಟುಹೋದ. ಇಬ್ಬರು ಹೆಣ್ಣು ಮಕ್ಕಳನ್ನು ಕಟ್ಟಿಕೊಂಡು ನತದೃಷ್ಟ ತಾಯಿ ಇಂಗ್ಲೆಂಡ್​ಗೆ ತೆರಳಬೇಕಾಯಿತು.

13-14ರ ಹರೆಯದಲ್ಲಿ ಇಂಗ್ಲೆಂಡ್​ಗೆ ಬಂದ ವೇರಾಳಿಗೆ ಇಂಗ್ಲಿಷ್ ಮಾತನಾಡಲು ಬರುತ್ತಿರಲಿಲ್ಲ. 8-9ನೇ ವಯಸ್ಸಿನಲ್ಲಿ ಅಪ್ಪ ಹೇಳಿಕೊಟ್ಟಿದ್ದ ಚೆಸ್ ಆಡುವುದಕ್ಕೆ ಇಂಗ್ಲಿಷ್ ಬರುವ ಅಗತ್ಯವಿಲ್ಲ ಎಂಬ ಅಂಶ ವೇರಾಳಿಗೆ ಪ್ರೇರಣೆಯಾಯಿತು. ಕೆಲವೇ ದಿನಗಳಲ್ಲಿ ಆಕೆ ಸ್ಥಳೀಯ ಚೆಸ್ ಕ್ಲಬ್ ಒಂದಕ್ಕೆ ಸೇರಿದ್ದಳು. ಬೆಥ್​ಳಂತೆಯೇ ವೇರಾಗೆ ಕೂಡ ಚದುರಂಗ ರಕ್ತಗತವಾಗಿತ್ತು. ಲೀಲಾಜಾಲವಾಗಿ ಆಕೆ ಚೆಸ್ ಆಡುತ್ತಿದ್ದ ಶೈಲಿಗೆ ಎದುರಾಳಿಗಳು ದಂಗಾಗುತ್ತಿದ್ದರು. ಆ ಕಾಲದಲ್ಲಿ ಮಹಿಳೆಯರು ಪುರುಷರ ವಿರುದ್ಧ ಆಡುತ್ತಿರಲಿಲ್ಲ. ಆಡಿದ ಟೂರ್ನಿಗಳಲ್ಲೆಲ್ಲ ಗೆಲ್ಲುತ್ತಿದ್ದ ವೇರಾ 1927ರಿಂದ 1944ರವರೆಗೆ ನಿರಂತರ 17 ವರ್ಷ ಮಹಿಳೆಯರ ವಿಶ್ವಚಾಂಪಿಯನ್ ಆಗಿದ್ದು ಸುದೀರ್ಘ ಅವಧಿಯ ವಿಶ್ವದಾಖಲೆ. ಈ ಅವಧಿಯಲ್ಲಿ ಸತತ ಏಳು ವಿಶ್ವ ಚಾಂಪಿಯನ್​ಷಿಪ್ ಗೆದ್ದಿದ್ದ ವೇರಾ ಕೇವಲ ಒಂದು ಒಂದ್ಯ ಮಾತ್ರ ಸೋತಿದ್ದಳು. ಆಕೆಗೆ ಸವಾಲೊಡ್ಡುವವರೇ ಇಲ್ಲ ಎಂಬ ಕಾರಣಕ್ಕೆ ಪುರುಷರ ವಿರುದ್ಧ ಏಕೆ ಆಡಬಾರದು ಎಂಬ ಪ್ರಶ್ನೆ ಮೂಡಿತ್ತು. ಜಗತ್ತಿನಲ್ಲೇ ಮೊದಲ ಬಾರಿ ಮಾಸ್ಟರ್ಸ್ ಟೂರ್ನಿಯಲ್ಲಿ ಪುರುಷರ ವಿರುದ್ಧ ಆಡಿದ ಮಹಿಳೆಯೆಂಬ ಹಿರಿಮೆಗೆ ವೇರಾ ಪಾತ್ರಳಾಗಿದ್ದಳು. ‘ಇವಳೇನು ಆಡಿಯಾಳು’ ಎಂಬ ಪುರುಷ ದರ್ಪದಿಂದ ಎದುರು ಕುಳಿತವರು ಕೆಲವೇ ನಿಮಿಷಗಳಲ್ಲಿ ತಲೆಬಗ್ಗಿಸಿ ಎದ್ದುಹೋಗುತ್ತಿದ್ದರು. ಮಹತ್ವದ ಪಂದ್ಯವೊಂದಕ್ಕೆ ಮುನ್ನ ಗ್ರಾಂಡ್​ವಾಸ್ಟರ್ ಒಬ್ಬ, ’ಈಕೆಯ ವಿರುದ್ಧ ಸೋತರೆ ವೇರಾ ಮೆಂಚಿಕ್ ಕ್ಲಬ್​ನ ಸದಸ್ಯ ಎಂದು ಹೆಮ್ಮೆ ಪಡಬಹುದು’ ಎಂದು ಅಪಹಾಸ್ಯ ಮಾಡಿದ್ದ. ಆದರೆ, ಆ ಪಂದ್ಯದಲ್ಲಿ ಆತನೂ ಸೋತುಹೋದ. ಹೀಗೆ ವೇರಾ ಮೆಂಚಿಕ್ ಕ್ಲಬ್​ನ ಸದಸ್ಯತ್ವ ಬೆಳೆಯಿತು. ವಿಧಿವಿಲಾಸದಿಂದ ಎಲ್ಲವನ್ನೂ ಕಳೆದುಕೊಂಡಿದ್ದ ವೇರಾ ಚೆಸ್​ನಿಂದ ಎಲ್ಲವನ್ನೂ ಮರಳಿ ಗಳಿಸಿದ್ದಳು. ಆದರೂ, ಆಕೆಯ ಹಣೆಬರಹದಲ್ಲಿ ಇನ್ನಷ್ಟು ತಿರುವುಗಳು ಬರೆದಿದ್ದವು. 1938ರಲ್ಲಿ ಚೆಸ್ ಆಟಗಾರನೊಬ್ಬನನ್ನು ಮದುವೆಯಾದರೂ ನೆಮ್ಮದಿ ಸಿಗಲಿಲ್ಲ. ಕಾಯಿಲೆಯಿಂದ ಬಳಲುತ್ತಿದ್ದ ಗಂಡನ ಆರೈಕೆಗೆ ಆಕೆ ಟೂರ್ನಿಗಳನ್ನು ತಪ್ಪಿಸಬೇಕಾಯಿತು. ಕೆಲವೇ ವರ್ಷಗಳಲ್ಲಿ ಆತನೂ ಮೃತಪಟ್ಟ. 2ನೇ ಮಹಾಯುದ್ಧ ವೇರಾ ಜೀವನದ ಅಂತಿಮ ದುರಂತಕ್ಕೂ ಕಾರಣವಾಯಿತು. 1944 ಜೂನ್ 26ರಂದು ಜರ್ಮನಿಯಿಂದ ನಾಜಿಗಳು ಸಿಡಿಸಿದ ರಾಕೆಟ್ ಒಂದು ದಕ್ಷಿಣ ಲಂಡನ್​ನಲ್ಲಿದ್ದ ವೇರಾ ಮನೆಗೆ ಅಪ್ಪಳಿಸಿ, ಮನೆಯಲ್ಲಿದ್ದ ವೇರಾ, ಆಕೆಯ ತಾಯಿ, ತಂಗಿ ಎಲ್ಲರನ್ನೂ ಬಲಿತೆಗೆದುಕೊಂಡಿತು. ಚದುರಂಗ ಆಡಿದ ಸರ್ವಶ್ರೇಷ್ಠ ಮಹಿಳೆ ಈ ರೀತಿ ತನ್ನ 38ನೇ ವಯಸ್ಸಿನಲ್ಲಿ ದುರಂತ ಅಂತ್ಯ ಕಂಡಳು. ಈಗಲೂ ಮಹಿಳೆಯರ ಚೆಸ್ ಒಲಿಂಪಿಯಾಡ್ ಗೆದ್ದವರಿಗೆ ವೇರಾ ಮೆಂಚಿಕ್ ಹೆಸರಲ್ಲಿ ಟ್ರೋಫಿ ನೀಡಲಾಗುತ್ತದೆ.

ಎಲಿಜಬೆಥ್ ಹರ್ವನ್ ಕಥೆ ನೋಡುವಾಗ ಅದೊಂದು ಕಟ್ಟುಕಥೆ ಅನ್ನಿಸುವುದೇ ಇಲ್ಲ. ವೇರಾ ಮೆಂಚಿಕ್​ಳ ಕಥೆ ಓದುವಾಗ ನಿಜಬದುಕಿನಲ್ಲಿ ಹೀಗೆಲ್ಲ ನಡೆಯಲು ಸಾಧ್ಯವೇ ಎಂದು ನಂಬಿಕೆಯೇ ಬರುವುದಿಲ್ಲ. ಯಾವುದು ಕಥೆ? ಯಾವುದು ಜೀವನ? ಎಂಬ ಗೊಂದಲದ ನಡುವೆ ಬಾಳೊಂದು ಚದುರಂಗ, ನಾವೆಲ್ಲ ವಿಧಿಯ ಕೈಗೊಂಬೆಗಳು, ರಾಜ-ರಾಣಿಯಾದರೂ, ಪದಾತಿಯೇ ಆದರೂ, ಆಟ ಮುಗಿದ ಮೇಲೆ ಎಲ್ಲರೂ ಸೇರುವುದು ಒಂದೇ ಪೆಟ್ಟಿಗೆಗೆ ಎಂಬ ವಾಸ್ತವವೊಂದೇ ಅಂತಿಮವಾಗುಳಿಯುವ ಸತ್ಯ.

(ಲೇಖಕರು ‘ವಿಜಯವಾಣಿ’ ಸೀನಿಯರ್ ಡೆಪ್ಯೂಟಿ ಎಡಿಟರ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net