ವಿವೇಕ ಧಾರೆ: ಜೀವನ ಇರೋದು ಬದುಕಲೋ? ಸಾಯಲೋ?

edit 1
Published on

ನಮ್ಮ ಜೀವನವೆಂಬುದು ಬಯಸದೇ ಬಂದ ಭಾಗ್ಯ. ಒಂದರ್ಥದಲ್ಲಿ ಭಗವಂತನು ನಮಗಿತ್ತ ಕರ್ತವ್ಯ. ಅದನ್ನು ಸರಿಯಾಗಿ ನಿರ್ವಹಿಸುವ ಹೊಣೆಗಾರಿಕೆ ನಮ್ಮದು. ಜೀವನವನ್ನು ಮಹಾತ್ಮರು ಪ್ರವಾಹಕ್ಕೂ ಹೋಲಿಸುತ್ತಾರೆ. ಆದರೆ ಇತರ ಪ್ರವಾಹಗಳಿಗಿಂತ ಇದು ಭಿನ್ನ. ಹೇಗೆಂದರೆ ಎಲ್ಲ ಪ್ರವಾಹಗಳು ಒಂದೇ ದಿಕ್ಕಿನಲ್ಲಿ ಹರಿದರೆ ಜೀವನಪ್ರವಾಹದ ಹರಿವು ನಾನಾ ದಿಕ್ಕುಗಳಲ್ಲಿ.

ಖ್ಯಾತ ಕವಿ ಎಮರ್​ಸನ್ ಜೀವನವನ್ನು ವಿವರಿಸುತ್ತ: ‘ಜೀವನ ಎಂಬುದೊಂದು ಗಣಿತವಿದ್ದಂತೆ. ಅದಕ್ಕೆ ನಿಮ್ಮ ಸ್ನೇಹಿತರನ್ನು ಕೂಡಿ, ಶತ್ರುಗಳನ್ನು ಕಳೆಯಿರಿ, ಸಂತೋಷವನ್ನು ಗುಣಿಸಿರಿ, ದುಃಖವನ್ನು ಮಿತ್ರರೆಲ್ಲರಿಗೂ ಹಂಚಿರಿ... ನೆನಪಿಡಿ ಜೀವನ ಎಂಬುದು ಒಂದು ಕಿವಿಗೆ ಇಂಪಾದ ಸಂಗೀತ, ಮತ್ತೊಂದು ಕಿವಿಗೆ ಶೋಕಗೀತೆ’.

ಸ್ವಾಮಿ ವಿವೇಕಾನಂದರು, ‘ತನ್ನನ್ನು ಕೆಳಕ್ಕೊತ್ತುತ್ತಿರುವ ಪರಿಸರ-ಪರಿಸ್ಥಿತಿಗಳಲ್ಲಿ ಒಂದು ಜೀವಿಯ ವಿಕಸನ ಹಾಗೂ ಮುನ್ನಡೆಯೇ ಜೀವನ’ ಎಂದಿದ್ದಾರೆ. ಮುಂದುವರಿದು ಸ್ವಾಮೀಜಿ ಹೇಳುತ್ತಾರೆ: ‘ಜೀವನವೆಂಬುದು ಎಲ್ಲರಿಗೂ ದೈವವಿತ್ತ ವರ. ಅದನ್ನು ಅಲ್ಲಗಳೆಯಬೇಡಿ, ತಿರಸ್ಕರಿಸಲೂ ಬೇಡಿ, ಸಂತೋಷದಿಂದ ಬದುಕನ್ನು ರೂಢಿಸಿಕೊಳ್ಳಿ, ನೆನಪಿಡಿ, ಬದುಕು ಸಾಹಸವನ್ನೇ ನಿರೀಕ್ಷಿಸುವುದು!’.

‘ಜಗತ್ತನ್ನು ನಾವೆಷ್ಟೇ ದ್ವೇಷಿಸಿದರೂ ಅದನ್ನು ಬಿಟ್ಟು ಬದುಕಲಾದೀತೇ?’ ಎಂದು ಚಾಣಕ್ಯನೆಂದರೆ, ‘ಜಗತ್ತು ಕೆಟ್ಟಿದೆಯೆಂದು ಹೇಳುವುದರಲ್ಲಿ ವಾಸ್ತವಿಕತೆ ಇರಬಹುದಾದರೂ ಅದನ್ನು ಕೆಡಿಸಿದ ಪ್ರಕ್ರಿಯೆಯಲ್ಲಿ ನಮ್ಮ ಪಾಲು ಇಲ್ಲವೆನ್ನಲಾದೀತೇ? ಆದ್ದರಿಂದ ಈ ಪ್ರಪಂಚದಲ್ಲೇ ನಾವಿದ್ದೇವಾದ್ದರಿಂದ ಅದನ್ನು ಉತ್ತಮಪಡಿಸುವ ಕಾರ್ಯವೂ ನಮ್ಮಿಂದಾಗಲೇಬೇಕು’ ಎಂಬುದು ಲೋಕಾನುಭವಿಗಳ ನುಡಿ.

ಸನಾತನ ಪರಂಪರೆಯು, ‘ನೂರು ವರ್ಷ ಬಾಳು. ಸುಖ, ಶಾಂತಿ, ಸಮಾಧಾನಗಳಿಂದ ಜೀವಿಸು’ ಎಂದೇ ಮನುಷ್ಯನನ್ನು ಆಶೀರ್ವದಿಸುತ್ತದೆ. ಇದರರ್ಥ ಬದುಕು ದೀರ್ಘವಾಗಿ ಇದ್ದರಷ್ಟೇ ಸಾಲದು, ದೀರ್ಘಕಾಲ ಜನಮನದಲ್ಲಿ ಜೀವಂತವಾಗಿ ಇರಬೇಕೆಂಬುದೇ ಆಶಯ. ಜೀವನವನ್ನು ಆನಂದದಿಂದ ಕಳೆಯಬೇಕೆಂಬ ಅರಿವು ಇರುವವನೇ ನಿಜಾರ್ಥದಲ್ಲಿ ಮನುಷ್ಯ ಎನಿಸುತ್ತಾನೆ. ಜೀವನದಲ್ಲಿ ಕಷ್ಟಗಳಿರುವುದು ನಿಜವಾದರೂ ಅದಕ್ಕೆ ಅಂಟಿಕೊಳ್ಳುವ ಆಸೆಯನ್ನು ನಿರ್ಲಕ್ಷಿಸುವಂತಿಲ್ಲ. ಜೀವನದ ಬಗ್ಗೆ ಸದಾಪೇಕ್ಷೆ ಇಲ್ಲದಿದ್ದರೆ ಎದುರಾಗುವ ಕಷ್ಟಗಳನ್ನು ಪರಿಹರಿಸಿಕೊಳ್ಳುವ ಬಗೆಯಾದರೂ ಹೇಗೆ?

ಜೀವನಸೌಧವನ್ನು ನಿರ್ವಿುಸಲು ಅಮೃತಶಿಲೆಯಷ್ಟೇ ಮಣ್ಣೂ ಅತ್ಯವಶ್ಯಕ. ಜೀವನದ ಉತ್ಕೃಷ್ಟತೆ ಎಂಬುದು ಗುರಿಸಾಧನೆಯ ವಿಷಯವನ್ನು ಅವಲಂಬಿಸಿದೆಯೇ ಹೊರತು ಕೇವಲ ಸುಖಮಯ ಜೀವನ ನಡೆಸುವ ವಿಚಾರಕ್ಕಷ್ಟೇ ಸೀಮಿತವಾಗದು! ಸಾಕ್ರಟೀಸ್ ಹೇಳುವಂತೆ, ‘ನೀನು ಜೀವಿಸುತ್ತಿರುವ ಪ್ರಪಂಚದಲ್ಲಿ ಒಳ್ಳೆಯದಾವುದೆಂದು ಗುರ್ತಿಸು, ಕೆಟ್ಟದ್ದನ್ನು ಬೇರ್ಪಡಿಸು, ಗುರ್ತಿಸಿದ ಒಳ್ಳೆಯದನ್ನು ಹೆಕ್ಕುತ್ತ ಸಾಗಿದಾಗ ಬದುಕಿಗೆ ಅವಶ್ಯವಾದ ಬೆಳಕು ಸೃಜಿಸುತ್ತದೆ...’

ಮಹಾತ್ಮರೆಲ್ಲರ ಅನುಭಾವದ ಈ ನುಡಿಗಳು ಅತ್ಯಂತ ಸ್ಪಷ್ಟವಾಗಿ ವಾಸ್ತವವನ್ನು ಪರಿಚಯಿಸುವುದ ರೊಂದಿಗೆ ಅದ್ಭುತ ಭರವಸೆಯನ್ನು ತುಂಬುತ್ತವೆ. ‘ಹುಟ್ಟಿದವನು ಸಾಯಲೇಬೇಕೆಂದು ತಿಳಿಯುವು ದಾದರೆ ಸಾಯಲೇಬೇಕಿರುವಾಗ ನಮ್ಮ ಸಾವೂ ವಿಜೃಂಭಿಸಬೇಕು. ಸಾವು ಅರ್ಥಾತ್ ನಿರ್ಗಮನ ವೈಭವಯುತವಾಗಿ ಆಚರಿಸಲ್ಪಡು ವುದು ಎಂದಾದರೆ ಸಾಗಿ ಬಂದ ಬದುಕು ಅದೆಷ್ಟು ಅಮೂಲ್ಯವಾಗಿ ಇರಬೇಕಲ್ಲವೇ?’

ಆದ್ದರಿಂದಲೇ ಸಾಕ್ರಟೀಸ್ ಹೇಳಿದ್ದು; ‘ಜೀವನ ಬದುಕುವುದಕ್ಕಷ್ಟೇ ಹೊರತು ಸಾಯುವುದಕ್ಕಲ್ಲ’ ಎಂದು. ಸ್ವಾಮಿ ವಿವೇಕಾನಂದರು ಈ ಬಗ್ಗೆ ಬೆಳಕು ಚೆಲ್ಲಿದ್ದು ಹೀಗೆ: ’Meditate upon death’ ‘ಸಾವನ್ನು ಧ್ಯಾನಿಸು, ಯಮನು ಯಾವ ನಿಯಮಕ್ಕೂ ಒಳಗಾಗದ ಸ್ವೇಚ್ಛಾಚಾರಿ, ಸರ್ವಾಧಿಕಾರಿ. ಸಾವನ್ನು ಸದಾ ನೆನಪು ಮಾಡಿಕೊಳ್ಳುತ್ತ ಉತ್ತಮ ಕಾರ್ಯಗಳನ್ನು ಮಾಡುತ್ತ ಸಾಗು...’ ಎಂಬುದೇ ಈ ಮಾತಿನ ಅಂತರಾರ್ಥ.

ಉಪನಿಷತ್ತಿನ ಋಷಿಗಳು, ‘ಸಾವು ನಿಶ್ಚಯವಾಗಿರುವಾಗ ಶ್ರೇಷ್ಠ ಕಾರಣಕ್ಕಾಗಿ ಪ್ರಾಣತ್ಯಾಗ ಮಾಡು’ ಎಂದೊಮ್ಮೆ ಹೇಳಿದರೆ, ’Death for the cause but not success should be our motto’ ಅರ್ಥಾತ್, ‘ಜೀವನದ ಗುರಿಯು ಉತ್ತಮ ಕಾರ್ಯವನ್ನು ಸಾಧಿಸಬೇಕೆಂಬುದೇ ಆಗಿದ್ದರೂ ಅದನ್ನು ಸಾಧಿಸಹೊರಟಾಗ ನಮ್ಮ ಪ್ರಯತ್ನದಲ್ಲೇ ಪ್ರಾಣ ತೆತ್ತರೂ ಅದು ವೈಫಲ್ಯವಲ್ಲ’ ಎಂಬುದು ಋಷಿಗಳ ನಿಶ್ಚಿತ ಅಭಿಮತ. ಮಾನವನು ಜೀವನದ ನಿಜಾರ್ಥವನ್ನು ಗ್ರಹಿಸಿ, ಧ್ಯೇಯೋದ್ದೇಶಗಳನ್ನು ಮನವರಿಕೆ ಮಾಡಿಕೊಳ್ಳಬೇಕು ಮತ್ತು ಆ ದಿಕ್ಕಿನಲ್ಲಿ ಕ್ರಿಯಾಶೀಲವಾಗಬೇಕು.

ನಮ್ಮ ಜೀವನವು ಅರ್ಥಪೂರ್ಣವೂ ಆದರ್ಶಮಯವೂ ಆಗಬೇಕಾದರೆ ಅದು ತನ್ನ ಅಸ್ತಿತ್ವದಲ್ಲಿ ಚಲನಶೀಲತೆಯನ್ನು ಗುರ್ತಿಸಿಕೊಂಡು ಮುನ್ನಡೆಯಬೇಕು. ನಮ್ಮ ನಡೆ, ನುಡಿ, ಆಚಾರ-ವಿಚಾರಗಳು ಶಕ್ತಿಯುತವಾದಾಗ, ಮೌಲ್ಯಪೂರ್ಣವಾದಾಗಷ್ಟೇ ಬದುಕಿಗೆ ನಿಜಾರ್ಥ ಪ್ರಾಪ್ತವಾಗುತ್ತದೆ. ಸ್ವಾಮಿ ವಿವೇಕಾನಂದರೆನ್ನುವಂತೆ, ‘ಕಬ್ಬಿಣದಂತಹ ಮಾಂಸಖಂಡಗಳು, ಉಕ್ಕಿನಂತಹ ನರಮಂಡಲ, ವಿದ್ಯುತ್ತಿನಂತಹ ಇಚ್ಛಾಶಕ್ತಿ, ಒಳಗೂ ಹೊರಗೂ ಪ್ರಾಮಾಣಿಕರಾಗಿ ನಂಬಿಕೆಗೆ ಅರ್ಹರಾಗಿ, ನಡೆನುಡಿಯಲ್ಲಿ ಶಕ್ತಿಯು ಪುಟಿದೇಳುತ್ತಿರುವಂತಿರಬೇಕು’ ಎಂಬ ಮಾತುಗಳನ್ನು ಅವಲೋಕಿಸಿದಾಗ ಜೀವನವೊಂದು ತಪಸ್ಸೆಂದು ಅರಿವಾಗದಿರದು.

ಋಗ್ವೇದ ಹೇಳುತ್ತದೆ: ‘ಯಸ್ಯ ಛಾಯಾ ಅಮೃತಂ, ಯಸ್ಯ ಮೃತ್ಯುಃ’ ‘ಯಾವುದರ ನೆರಳು ಜೀವನ-ಮರಣಗಳೋ ಅದೇ ಸತ್ಯ’. ಜೀವನವನ್ನು ಅರ್ಥೈಸಿಕೊಂಡಾಗ ಸಾವನ್ನು ಎದುರಿಸಬಹುದು ಮತ್ತು ಸಾವನ್ನು ಸ್ವಾಗತಿಸಬೇಕೆಂದರೆ ಒಂದಿಲ್ಲೊಂದು ದಿನ ಸಾಯಲೇಬೇಕು ಎಂದಲ್ಲ; ಬದಲಾಗಿ ಪರಾಕ್ರಮದಿಂದ ಬದುಕಬೇಕು, ಬದುಕುತ್ತ ಸಾಗಿ ವೀರಮರಣ ಅಪ್ಪಬೇಕು!

ಜೀವನವನ್ನು ಬದುಕುವುದಕ್ಕಾಗಿ ಸನ್ನದ್ಧಗೊಳಿಸಿಕೊಳ್ಳುವುದು ಹೇಗೆ? ರಾಮಾಯಣವು ಘೊಷಿಸುತ್ತದೆ:

ಅನಿರ್ವೆದಂ ಚ ದಾಕ್ಷ್ಯಂ ಚ ಮನಸಶ್ಚಾಪರಾಜಯಂ|

ಕಾರ್ಯಸಿದ್ಧಿಕರಾಣ್ಯಾಹುಃ ತಸ್ಮಾದೇದದ್ ಬ್ರವೀಮ್ಯಹಂ||

ಕಾರ್ಯಸಿದ್ಧಿ ಆಗಬೇಕಾದರೆ ಬೇಸರವಿಲ್ಲದ ಉತ್ಸಾಹ, ದಕ್ಷತೆ, ಸೋಲೊಪ್ಪಿಕೊಳ್ಳದ ಮನೋಭಾವ ಇವು ಅತ್ಯವಶ್ಯಕ.

ಮಹಾಭಾರತ ಸಾರುತ್ತದೆ:

ಸುವರ್ಣಪುಷ್ಪಾಂ ಪೃಥಿವೀಂ ಚಿನ್ವಂತಿ ಪುರುಷಾಸ್ತ್ರಯಃ|

ಶೂರಶ್ಚ ಕೃತವಿದ್ಯಶ್ಚ ಯಶ್ಚ ಜಾನಾತಿ ಸೇವಿತುಮ್|

ಶೂರನು, ವಿದ್ಯಾವಂತನು ಮತ್ತು ಸೇವಾಕಾರ್ಯದಲ್ಲಿ ದಕ್ಷನು- ಈ ಮೂವರೂ ಭೂಮಿಯೆಂಬ ಲತೆಯಿಂದ ಚಿನ್ನದ ಹೂಗಳನ್ನು ಬಿಡಿಸಿಕೊಳ್ಳುತ್ತಾರೆ.

ಅದೆಂಥ ಅದ್ಭುತ ಮಾರ್ಗದರ್ಶನದ ಕಿಡಿಗಳಿವು. ಜೀವನ ಯಶಸ್ವಿಯಾಗಲು ವಿದ್ಯೆ, ಉತ್ಸಾಹ, ದಕ್ಷತೆ, ಶೌರ್ಯ, ಸೇವಾ ಮನೋಧರ್ಮ, ಸೋಲೊಪ್ಪಿಕೊಳ್ಳದ ಮನೋಭಾವಗಳು ಅತ್ಯವಶ್ಯಕ. ಆಧುನಿಕ ಮನೋವಿಜ್ಞಾನವು ಈ ಮಾತುಗಳನ್ನು ಅಲ್ಲಗಳೆದೀತೇ?

ಥಾಮಸ್ ಆಲ್ವ ಎಡಿಸನ್ನಿನ ಜೀವನದ ಘಟನೆಯೊಂದನ್ನು ಅವಲೋಕಿಸೋಣ. ಎಡಿಸನ್ ವಿದ್ಯುದ್ದೀಪವನ್ನು ಕಂಡುಹಿಡಿದ. ಈ ಕಾರ್ಯದಲ್ಲಿ ಯಶಸ್ಸು ಕಾಣಲು ಅವನು ಸರಿಸುಮಾರು ಎರಡು ಸಾವಿರದಷ್ಟು ಪ್ರಯೋಗಗಳನ್ನೇ ಮಾಡಬೇಕಾಯಿತು. ಪತ್ರಿಕಾ ವರದಿಗಾರನೊಬ್ಬ ಎಡಿಸನ್ನನನ್ನು ಪ್ರಶ್ನಿಸಿದ: ‘ಇಷ್ಟೊಂದು ದೊಡ್ಡ ಪ್ರಮಾಣದ ವೈಫಲ್ಯವು ನಿಮಗೆ ಬೇಸರ ತರಲಿಲ್ಲವೇ?’ ಎಡಿಸನ್ ಇತ್ತ ಉತ್ತರ ಆಲೋಚನೀಯ: ‘ಬೇಸರವೇ? ವೈಫಲ್ಯವೇ? ನನ್ನ ಕಾರ್ಯದಲ್ಲಿ ನಾನೆಂದೂ ಬೇಸರಿಸಿಕೊಂಡವನಲ್ಲ, ನಾನೆಂದಿಗೂ ವಿಫಲನಾಗಲೇ ಇಲ್ಲ. ವಿದ್ಯುದ್ದೀಪವೆಂಬ ಅನ್ವೇಷಣೆಯ ಬೆಟ್ಟಕ್ಕೆ ಎರಡು ಸಾವಿರ ಮೆಟ್ಟಿಲುಗಳನ್ನೇರುವ ಪಯಣದ ಅವಶ್ಯಕತೆ ಇತ್ತೆಂಬುದೇ ನನ್ನ ನಿಲುವು’.

ನನ್ನ ಅಧ್ಯಾತ್ಮ ಗುರುಗಳಾದ ಪೂಜ್ಯ ಸ್ವಾಮಿ ಪುರುಷೋತ್ತಮಾನಂದಜೀ ಹೇಳುತ್ತಿದ್ದರು: ‘ಜೀವನ ಎಂಬುದೊಂದು ಕಲೆ, ಬಹುಮಟ್ಟಿಗೆ ಅದನ್ನು ಕಲಿಸಲಾಗದು. ಇದನ್ನು ಅವರವರೇ ಕಂಡು, ಕೇಳಿ, ನೊಂದು, ಬೆಂದು, ಕಲಿಯಲೇಬೇಕಾಗುತ್ತದೆ... ಮನುಷ್ಯನ ಬದುಕು ಸರಳವೋ, ವಿಕೃತವೋ ಆಗುವುದು ಅವನ ವೈಯಕ್ತಿಕ ಸ್ವಭಾವದಿಂದ ಮತ್ತು ಪರಿಸರದ ಪ್ರಭಾವದಿಂದ! ಸಾಮಾನ್ಯರೋ, ಪರಿಸರದ ಪ್ರಭಾವಕ್ಕೆ ಒಳಗಾಗಿಬಿಡುತ್ತಾರೆ, ಚತುರರೋ ಪರಿಸರದಿಂದ ಪ್ರಯೋಜನ ಪಡೆಯುವಲ್ಲಿ ಸಿದ್ಧಹಸ್ತರು. ಆದರೆ ಸಮರ್ಥ ಎಂಬುವರಿದ್ದಾರಲ್ಲ, ಅವರು ಪರಿಸರದ ಮೇಲೆಯೇ ತಮ್ಮ ಪ್ರಭಾವ ಬೀರುತ್ತಾರೆ!’

ಜೀವನದಲ್ಲಿ ಕರ್ತವ್ಯಗಳನ್ನು ನಿರ್ವಹಿಸುವಾಗ ದೋಷವಾಗುತ್ತದೆ ಎಂಬ ಭಯದಿಂದಲೋ, ವಿಫಲನಾಗುತ್ತೇನೆಂಬ ದುಗುಡದಿಂದಲೋ, ಪರರ ಟೀಕೆಗೆ ಗುರಿಯಾಗುತ್ತೇವೆಂಬ ಅನಾರೋಗ್ಯಕರ ಊಹೆಗೆ ತಲೆಬಾಗಿದರೆ ಜಯಶಾಲಿಗಳಾಗಲು ಸಾಧ್ಯವೇ ಇಲ್ಲ. ಅಜೀರ್ಣವಾಗುತ್ತದೆಂದು ಊಟ ಮಾಡದವನು ಮೂರ್ಖನಲ್ಲವೇ? ‘ಉತ್ತಮ ಬದುಕಿನಿಂದ ಕೀರ್ತಿ, ಹೋರಾಟದ ಮರಣದಿಂದ ಸ್ವರ್ಗಪ್ರಾಪ್ತಿ; ಜೀವನ ರಣರಂಗದಿಂದ ಹೆದರಿ ಓಡಿಹೋದರೆ ಅಪಕೀರ್ತಿ!’ ಭಗವದ್ಗೀತೆ ಎಚ್ಚರಿಸುತ್ತದೆ: ‘ಸಂಭಾವಿತನಾದವನಿಗೆ ಅಪಕೀರ್ತಿ ಎಂಬುದು ಮರಣಕ್ಕಿಂತಲೂ ಘೊರ!’

ಜಗತ್ತಿನ ಇತಿಹಾಸದಲ್ಲಿ ಹಿಮಾಲಯವನ್ನು ಏರಿದ ತೇನ್​ಸಿಂಗ್ ದೇವರ ಬಗ್ಗೆ ವ್ಯಕ್ತಪಡಿಸಿದ ಅಭಿಪ್ರಾಯವಿದು: ‘ಹಿಮಾಲಯದಂತಹ ಜಗತ್ತಿನ ಅತ್ಯಂತ ಎತ್ತರದ ಶಿಖರವನ್ನೇರಲು ನನಗೆ ಅತ್ಯವಶ್ಯಕವಾದ ಶಕ್ತಿ, ಧೈರ್ಯ, ಛಲ, ಸಾಹಸಗಳಲ್ಲಿ ಭರವಸೆ ತುಂಬಿದ ಆ ದೇವರು ಅದೆಷ್ಟು ದೊಡ್ಡವನು ಎಂದೆನಿಸಿತು. ಆದರೆ ಆನಂತರ ಹಿಮಾಲಯಕ್ಕಿಂತಲೂ ಎತ್ತರದ ಬೆಟ್ಟವನ್ನು ಹತ್ತಬೇಕೆಂಬ ನನ್ನ ಅಪೇಕ್ಷೆಗೆ ಅದಕ್ಕಿಂತಲೂ ಎತ್ತರದ ಬೆಟ್ಟ ಸೃಷ್ಟಿಯೇ ಆಗಿಲ್ಲವೆಂಬ ನಿರಾಶಾದಾಯಕ ವಾಸ್ತವ ತಿಳಿದಾಗ ನನಗನ್ನಿಸಿತು, ಅಯ್ಯೋ! ಸೃಷ್ಟಿಕರ್ತ ದೇವರು ಅದೆಷ್ಟು ಕುಬ್ಜ! God disappointed me!!’

ಪೌರುಷಪ್ರಧಾನವಾದ ಇಂತಹ ಸನ್ನಿವೇಶಗಳು ಬದುಕಿಗೆ ಪಾಠ. ಇದುವೇ ಶ್ರದ್ಧಾವಂತರ ಹಾಗೂ ಸೋಮಾರಿಗಳ ನಡುವಿನ ವ್ಯತ್ಯಾಸ! ಆಸೆಯ ವಿಷಯದಲ್ಲಿ ಇಬ್ಬರೂ ಒಂದೇ. ಶ್ರದ್ಧಾವಂತರಲ್ಲಿ ಆಸೆಯನ್ನು ನೆರವೇರಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನವಿರುತ್ತದೆ, ಸೋಮಾರಿಗಳಲ್ಲಿ ಅದು ಇರದು!

ದೂರದಲ್ಲಿ ಇರುವ ಗುರಿಯತ್ತ ನಾವು ಕಣ್ಣಿಟ್ಟಿರಬೇಕು, ಆದರೆ ಕೈಯಲ್ಲಿರುವ ಕರ್ತವ್ಯವನ್ನು ಕಡೆಗಣಿಸಬಾರದು! ದುರುಳ, ದುರ್ಬಲನ ಬದುಕು ಅಕ್ಕಸಾಲಿಗನ ತಿದಿಯಂತೆ! ಗಾಳಿ ಬಂದಾಗ ಉಬ್ಬುತ್ತೆ; ಗಾಳಿ ಹೊರಹೊರಟಾಗ ಕುಗ್ಗುತ್ತೆ!

ಅದೃಷ್ಟವು ಶ್ರಮ ಸಂಸ್ಕೃತಿಯ ಪಕ್ಷಪಾತಿ ಎಂಬುದು ಎಲ್ಲರಿಗೂ ತಿಳಿದ ಸತ್ಯವಲ್ಲ. ತನ್ನ ಆಲೋಚನೆ, ನಡವಳಿಕೆ ಹಾಗೂ ಕಾರ್ಯವೈಖರಿಯ ಬಗ್ಗೆ ಎಚ್ಚರಿಕೆ ವಹಿಸಲೇಬೇಕಾಗುತ್ತದೆ. ಏಕೆಂದರೆ ತನಗೆ ತಾನೇ ಕಡಿವಾಣ ಹಾಕಿಕೊಂಡ ವ್ಯಕ್ತಿಯ ಬದುಕಿನಲ್ಲಿ ಸ್ವಾತಂತ್ರ್ಯವೆಂಬ ಮಹಾಮೌಲ್ಯವು ಶ್ರೇಯದಾಯಕ ಹಾಗೂ ಶೋಭಾಯಮಾನ. ಕರ್ತವ್ಯ ವಿಮುಖನಾದವನು ಅದೃಷ್ಟವನ್ನು ಶಪಿಸುತ್ತಾನೆ, ಸೋಮಾರಿಗೆ ಭವಿಷ್ಯದಲ್ಲಿ ನಂಬಿಕೆ ಇರದು. ‘ಮೂರ್ಖರನ್ನು ಅಕ್ಷರಸ್ಥರನ್ನಾಗಿಸ ಬಹುದೇನೋ, ಆದರೆ ವಿಚಾರವಂತರನ್ನಾಗಿಸಲು ಸಾಧ್ಯವಿಲ್ಲ’ ಎಂದಿದ್ದಾರೆ ಲಿಯೋ ಟಾಲ್​ಸ್ಟಾಯ್. ‘ಬಲಿಷ್ಠರನ್ನು ದುರ್ಬಲಗೊಳಿಸುವಷ್ಟು ಸುಲಭವಲ್ಲ, ದುರ್ಬಲರನ್ನು ಬಲಿಷ್ಠರನ್ನಾಗಿಸುವುದು’ ಎನ್ನುತ್ತಾರೆ ಅಬ್ರಹಾಂ ಲಿಂಕನ್. ಅನಿಷ್ಟಗಳು ಬೆಳೆಯಲು ಅಜ್ಞಾನಿಗಳ ಮನೋರಂಗಕ್ಕಿಂತ ಫಲವತ್ತಾದ ಭೂಮಿ ಇದೆಯೇ?

ಮಾನವನ ಬಹಿರಂಗ ಜೀವನದಲ್ಲಿನ ಪ್ರಯತ್ನಶೀಲತೆಯಷ್ಟೇ ಅವನಿಗೆ ಅಂತರಂಗ ಶಕ್ತಿಯನ್ನು ಪರಿಚಯ ಮಾಡಿಕೊಡುವುದು. ಪ್ರಯತ್ನಶೀಲತೆಯನ್ನು ನಿರ್ಲಕ್ಷಿಸಿದಾಗ ನಮ್ಮ ಆಂತರ್ಯದಲ್ಲಿ ಹುಡುಕಾಡುವ ಶಕ್ತಿಯೂ ನಮ್ಮ ನೆರವಿಗೆ ಬಾರದು! ನಮ್ಮ ಶ್ರದ್ಧಾಪೂರ್ವಕ ಕಾರ್ಯವೈಖರಿಯಷ್ಟೇ ನಮ್ಮ ಆತ್ಮವಿಶ್ವಾಸ ಹಾಗೂ ಬದುಕಿನ ತಿಳಿವಳಿಕೆಗಳನ್ನು ವೃದ್ಧಿಸುತ್ತದೆ.

ಆಸೆಯೆಂಬ ಬಣ್ಣದ ಕುಂಚದ ಸಹಾಯದಿಂದ ಮನಸ್ಸು ಹೃದಯದಲ್ಲಿ ಚಿತ್ತಾರ ಮೂಡಿಸುತ್ತದೆ! ಆದರೆ ವಿಧಿಯೆಂಬ ಮೌಲ್ಯಮಾಪಕನು ಈ ಚಿತ್ತಾರವನ್ನು ತಿದ್ದಬಹುದು, ಅಳಿಸಿ ಹಾಕಲೂಬಹುದು. ಪುರುಷ ಪ್ರಯತ್ನ ಇಲ್ಲದಿದ್ದರೆ ದೈವಕೃಪೆ ಸಾಧ್ಯವೇ ಇಲ್ಲ. ದೈವಶಕ್ತಿಯೋ ದುರ್ಬಲರಿಗೆ ಪ್ರೀತಿ ನೀಡುತ್ತದೆ, ಬಲಿಷ್ಠರನ್ನು ನಂಬಿ ಗೌರವಿಸುತ್ತದೆ! ಯೋಗ್ಯ ಮನೋಭಾವದ ವ್ಯಕ್ತಿಯ ಗುರಿಸಾಧನೆಯ ಪಥದಲ್ಲಿ ಯಾರೂ ಶಾಶ್ವತ ಪ್ರತಿಬಂಧಕವಾಗಲಾರರು! ಅಯೋಗ್ಯ ಮನೋಭಾವದ ವ್ಯಕ್ತಿಗೆ ಜಗತ್ತಿನಲ್ಲಿ ಯಾವುದೂ ನೆರವಿಗೆ ಬಾರದು!

ದೈವವನ್ನು ಗೌರವಿಸಿ ಸ್ವಪ್ರಯತ್ನದಲ್ಲಿ ವಿಶ್ವಾಸವಿಟ್ಟು ಕಾರ್ಯಪ್ರವೃತ್ತನಾದಾಗ ಕ್ರಿಯಾಸಿದ್ಧಿಯಾಗುತ್ತದೆ. ಇದು ಆತ್ಮಶಕ್ತಿ ಸಂಪನ್ನತೆಯಿಂದ ಪ್ರಾಪ್ತವಾದುದೇ ಹೊರತು ಸಲಕರಣೆಗಳಿಂದಷ್ಟೇ ಅಲ್ಲ! ಸ್ವಪ್ರಯತ್ನಶೀಲ ವ್ಯಕ್ತಿಯನ್ನು ಹೆಡೆಯಲ್ಲಿ ಮಾಣಿಕ್ಯ ಹೊತ್ತ ನಾಗರಹಾವಿಗೆ ಹೋಲಿಸಬಹುದು; ಸ್ವಪ್ರಯತ್ನವೇ ಇಲ್ಲದೆ, ಪ್ರತಿಯೊಂದು ಅವಶ್ಯಕತೆಗೂ ಕೈಚಾಚುವುದರಲ್ಲೇ ಆನಂದದಿಂದ ನಿರತನಾದ ವ್ಯಕ್ತಿಯ ಪಾಡು, ‘ಪ್ರಾಸಾದದ ಸಿಂಹಪ್ರತಿಮೆಯ ಮೇಲೆ ಕಾಗೆಗಳು ಕೂತಂತೆ’!

‘ಶೌರ್ಯದಿಂದ ಕೀರ್ತಿ; ದೌರ್ಬಲ್ಯದಿಂದ ಕಳಂಕ; ಅಲ್ಲವೇ? ಧರ್ಮ ಹಾಗೂ ಸದ್ಗುಣಗಳ ಅವಹೇಳನ ಅಕ್ಷಮ್ಯ; ಧರ್ಮದಲ್ಲಿ ಅಶ್ರದ್ಧೆ ಮತ್ತು ಅಧರ್ಮದಲ್ಲಿ ಉತ್ಸಾಹ’ ಇದು ನಾಶಕ್ಕೆ ರಹದಾರಿ, ಇದನ್ನು ಇತಿಹಾಸ ಸಾಕ್ಷೀಕರಿಸಿಲ್ಲವೇ?

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net