ಬದುಕೆಂಬುದು ಕೃಷಿಯೆಂದು ಒಪ್ಪಿ ನಾವು ಕ್ಷೇತ್ರಜ್ಞರಾಗೋಣ...

Kshetrjna 12 Feb 20
Published on

ನಮ್ಮ ಮನಸ್ಸೆಂಬುದು ಕ್ಷೇತ್ರ. ಇಲ್ಲಿ ಕನಸುಗಳ ಬೀಜ ಬಿತ್ತಿ, ನನಸಿನ ಬೆಳೆ ತೆಗೆಯುವ ಹಂಬಲ ನಮಗೆಲ್ಲ. ತಪ್ಪೇನಿಲ್ಲ. ಕ್ರಿಯಾಶೀಲತೆಗೆ, ಸಾಧನೆಗೆ, ಬದುಕನ್ನು ಹಸನುಗೊಳಿಸಲು ಇದು ಅನಿವಾರ್ಯ. ಆದರೆ ನಮ್ಮ ಕ್ಷೇತ್ರ, ಮಿತಿಗಳ ಅರಿವು ಮೀರಿ ಬಿತ್ತಲೆಂದು ಮೂಟೆಗಟ್ಟಲೆ ಕನಸಿನ ಬೀಜಗಳನ್ನು ಪೇರಿಕೊಂಡರೆ ಮನೋಮಂಡಲ ಉಗ್ರಾಣವಾದೀತು. ಕನಸುಗಳನ್ನು ಬಿತ್ತಿ ನನಸಾಗಿಸುವ ಕೃಷಿಯನ್ನು ಯಾರೂ ಕೈಗೊಳ್ಳಬಹುದು. ಇದಕ್ಕೆ ಜಾತಿ-ಮತ, ಬಡವ-ಬಲ್ಲಿದ, ಹೆಣ್ಣು-ಗಂಡೆಂಬ ಭೇದವಿಲ್ಲ, ದೇಶ-ಕಾಲಗಳ ಪರಿವೆಯಿಲ್ಲ. ಕನಸು ಕಾಣುವವರಿಂದಲೇ ಜಗತ್ತು ಕ್ರಿಯಾಶೀಲವಾಗಿದೆ. ಅವುಗಳನ್ನು ಸಾಕಾರಕ್ಕೇ ನಮ್ಮ ದುಡಿಮೆ.

ನಮ್ಮ ಮನಸ್ಸೆಂಬುದು ನರ್ಸರಿಯಿದ್ದ ಹಾಗೆ. ನಮ್ಮ ಮನೋಕ್ಷೇತ್ರದಲ್ಲಿ ಕನಸುಗಳ ಬೀಜ ಬಿತ್ತಿ ನೆನಪುಗಳೆಂಬ ಮಡಿಯಲ್ಲಿ ಸಣ್ಣ ಸಣ್ಣ ಸಸಿಗಳಾಗಿಸಿಟ್ಟುಕೊಳ್ಳುವುದು. ಕಾಲ ಪಕ್ವವಾದಾಗ, ಉತ್ತಮ ಕ್ಷೇತ್ರ ದೊರಕಿದಾಗ ಅವುಗಳನ್ನು ಆ ಕ್ಷೇತ್ರದಲ್ಲಿ ಬೆಳೆಸಿ ಬೆಳೆ ತೆಗೆಯುವುದು ನಾವೆಲ್ಲ ಅನುಸರಿಸಿಕೊಂಡು ಬಂದ ವಿಧಾನ. ಬದುಕೆಂಬುದನ್ನು ಒಂದು ಕೃಷಿಯೆಂದು ಒಪ್ಪಿಕೊಂಡ ಮೇಲೆ ನಾವು ಗೀತೋಕ್ತಿಯಂತೆ ಕ್ಷೇತ್ರಜ್ಞರಾಗಬೇಕು. ಯಾವ ಕ್ಷೇತ್ರದಲ್ಲಿ ಎಷ್ಟು ಬೆಳೆ ತೆಗೆಯಬೇಕು? ಯಾವ ಬೆಳೆ ತೆಗೆಯಬೇಕು? ಯಾವ ಕಾಲದಲ್ಲಿ ಎನ್ನುವುದರ ಅರಿವು ನಮಗಿರಬೇಕು. ಭಗವಾನ್ ಶ್ರೀಕೃಷ್ಣ ಹೇಳುತ್ತಾನೆ, ನೀನು ಕೃಷಿಕನಾಗಬೇಕಾದದ್ದು (ಇಲ್ಲಿ ಕೃಷಿ ಎಂದರೆ ಕರ್ಮ ಎಂದರ್ಥ), ಬೆಳೆ ತೆಗೆಯಬೇಕಾದದ್ದು ಎಲ್ಲವೂ ನನ್ನಿಚ್ಛೆ ಮತ್ತು ನನ್ನ ನಿರ್ದೇಶನ. ನಿನ್ನ ದುಡಿಮೆಯ ಸ್ವರೂಪ ಮತ್ತು ತೊಡಗಿಕೊಳ್ಳುವಿಕೆಯ ಲೆಕ್ಕಾಚಾರ ಹಾಕಿ ನಿನಗೆಷ್ಟು ಸಲ್ಲಬೇಕೆಂಬುದು ನನ್ನ ನಿರ್ಣಯ. ಹಾಗಾಗಿಯೇ ಫಲದ ಗೊಡವೆ ಬೇಡ ಎಂಬ ಉಪದೇಶ. ವ್ಯಾವಹಾರಿಕ ಜಗತ್ತಿನಲ್ಲಿ ಫಲದ ಅಪೇಕ್ಷೆಯಿಲ್ಲದೆ ಯಾವುದೂ ಇಲ್ಲ! ಫಲದ ಅಪೇಕ್ಷೆಗೆ ಮಿತಿಯಿಲ್ಲ, ಆದರೆ ನಿರ್ವಿುತಿಗೊಂದು ಮಿತಿಯಿದೆ, ಇರಬೇಕು. ಕೇತ್ರದ ಅರಿವು, ಸಹಜ ದುಡಿಮೆ, ನಿಯತ ಕಾಲಗಳ ಅರಿವಿನಿಂದ ಗೈದ ಕೃಷಿ, ಗಳಿಸಿದ ಫಸಲು ಉಣ್ಣಲು ಆರೋಗ್ಯಕರ. ಸಹಜ ಕೃಷಿಯ ಫಸಲಿಗೆ ಮಿತಿಯಿದೆ. ಅದು ನೀಡುವ ಸುಖ, ಅದರ ರುಚಿ ಅಪರಿಮಿತ. ಹೀಗೆ ಪಡೆವ ಫಸಲಿಗೆ ಮಿತಿಯಿರುವುದರಿಂದ ಮತ್ತೆ ಮತ್ತೆ ದುಡಿಮೆ, ಕಾಯಕ, ಕರ್ವನುಷ್ಠಾನ. ಹಾಗಾಗಿ ಬದುಕು ಒಂದು ಸಹಜ ಕೃಷಿಯಾಗಬೇಕು.

ಕೇತ್ರದ ಅರಿವು, ಸಹಜ ದುಡಿಮೆ, ನಿಯತಕಾಲಗಳ ಅರಿವಿಲ್ಲದೆ ಅಮಿತ ಫಲದ ಆಸೆಯಿಂದ ಕಾಮ, ಕ್ರೋಧಾದಿ ರಾಸಾಯನಿಕಗಳನ್ನು ಬಳಸಿ ಮಾಡುವ ಕೃಷಿ ಸಹಜ-ಸಾತ್ವಿಕ ಕೃಷಿಯಲ್ಲ. ಇಂತಹ ಕೃಷಿ ಬಹಳಷ್ಟು ಫಸಲನ್ನೇನೋ ನೀಡಬಹುದು. ಆದರೆ ಅದರ ಫಸಲನ್ನು ಉಣ್ಣುವವನು ಪಾರ್ಶ್ವ ಪರಿಣಾಮಗಳನ್ನೂ ಅನುಭವಿಸಬೇಕಾಗುತ್ತದೆ. ಇದು ಲೌಕಿಕಕ್ಕೆ ಸಂಬಂಧಪಟ್ಟ ಕೃಷಿಯಾದರೆ ಪರಮಾರ್ಥ ಸಾಧನೆಗೆ ಸಂಬಂಧಪಟ್ಟ ಕೃಷಿಯೊಂದುಂಟು. ಅದು ದೇಹವೆಂಬ ಕ್ಷೇತ್ರದಲ್ಲಿ ಮನೋ-ವಾಕ್-ಕಾಯಗಳೆಂಬ ಕ್ಷೇತ್ರ ಶುದ್ಧಿಯ ಮೂಲಕ. ಅಭಯಂ ಸತ್ತ್ವಸಂಶುದ್ಧಿಃ ಜ್ಞಾನಯೋಗ ವ್ಯವಸ್ಥಿತಿಃ | ದಾನಂ ದಮಶ್ಚ ಯಜ್ಞಶ್ಚ ಸ್ವಾಧ್ಯಾಯಸ್ತಪ ಆರ್ಜವಮ್ || ಅಹಿಂಸಾ ಸತ್ಯಮಕ್ರೋಧಃ ತ್ಯಾಗಶ್ಶಾನ್ತಿರಪೈಶುನಂ | ದಯಾ ಭೂತೇಷ್ವಲೋಲುಪ್ತ್ವಂ ಮಾರ್ದವಂ ಹ್ರೀರಚಾಪಲಮ್ || ತೇಜಃ ಕ್ಷಮಾ ಧೃತಿಶ್ಶೌಚಂ ಅದ್ರೋಹೋ ನಾತಿಮಾನಿತಾ | ಭವನ್ತಿ ಸಂಪದಂ ದೈವೀಮಭಿಜಾತಸ್ಯ ಭಾರತ || (ಭ.ಗೀ.: 16.1-3) ನಿರ್ಭಯತೆ, ಪರಿಶುದ್ಧ ಅಸ್ತಿತ್ವ, ಸುಜ್ಞಾನ, ದಾನ, ಆತ್ಮಸಂಯಮ, ಯಜ್ಞ, ವೇದಾಧ್ಯಯನ, ತಪಸ್ಸು, ಸರಳತೆ, ಅಹಿಂಸೆ, ಕೋಪಗೊಳ್ಳದಿರುವುದು, ತ್ಯಾಗ, ಶಾಂತಿ, ಯಾರಲ್ಲೂ ತಪ್ಪು ಹುಡುಕದಿರುವುದು, ದಯೆ, ದುರಾಶೆ ಹೊಂದದಿರುವುದು, ಮೃದು ಸ್ವಭಾವ, ನಮ್ರತೆ, ದೃಢಸಂಕಲ್ಪ, ತೇಜಸ್ಸು, ಕ್ಷಮೆ, ಸ್ಥೈರ್ಯ, ಶುಚಿತ್ವ, ಆತ್ಮರತಿಯಿಲ್ಲದಿರುವುದೇ ಮೊದಲಾದ ಗುಣಗಳ ಬೀಜಗಳನ್ನು ನಮ್ಮ ಮನೋ-ವಾಕ್-ಕಾಯಗಳೆಂಬ ಕ್ಷೇತ್ರದಲ್ಲಿ ಬಿತ್ತಿ ಜೀವನ್ಮುಕ್ತಿಯ ಫಸಲು ಪಡೆಯೋಣ.

| ದಿವಾಕರ ಡೋಂಗ್ರೆ (ಮಾಳವ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net