

‘ನಾವು ಮಕ್ಕಳ ಲಗ್ನಾ ಮಾಡುಮುಂದ ಕುಂಡಲಿ ಛಂದಾಗೇ ನೋಡಿದ್ವಿ. ಏನ್ರೀ ಮೂವತ್ತಾರೂ ಗುಣಾ ಕೂಡ್ಯಾವ ನೋಡ್ರಿ ನಮ್ ಮಗಾ ಸೊಸಿದು. ಆದ್ರ ಯಾಕೋ ನೋಡ್ರಿ ಒಬ್ಬರಿಗೊಬ್ಬರ ಸ್ವಭಾವ ಭಾಳ್ ವಿರುದ್ಧದರಿಪಾ. ಅವಂಗ ಸೇರಿದ್ದು ಅಕಿಗೆ ಸೇರುದಿಲ್ಲಾ. ಅಕಿ ಹೇಳಿದ್ದು ಇವಾ ಮಾಡುದಿಲ್ಲಾ. ಹಿಂಗ ವಿಚಿತ್ರ ನಡದದ ನೋಡ್ರಿವಾ. ಏನರ ಆಗಲಿರಿ ವಟ್ಟ ಮಕ್ಕಳು ಆರಾಮಿದ್ರ ಸಾಕ್ ನೋಡ್ರಿ’ ಅಂತ ಹೇಳಿದರು ಶಾಂತಮ್ಮ. ‘ಹೌದ್ರಿವಾ ನಮ್ಮ ಮನ್ಯಾಗ ಒಂದ್ ನಮೂನಿ ಬ್ಯಾರೆ ಅದ ನೋಡ್ರಿ. ಇಬ್ಬರೂ ಸೊಸೆಂದ್ರು ಛೊಲೋ ಇದ್ದಾರಿ. ಆದ್ರ ನನ್ನ ಇಬ್ರೂ ಗಂಡಸ್ ಮಕ್ಕಳದೇ ಭಾಳ್ ತಕರಾರ್ ಇರ್ತದ. ಯಾಕೋ ಇಬ್ರು ಅಣ್ಣತಮ್ಮಂದಿರ ನಡಬರ್ಕ ವಟ್ಟ ದಿನಾ ಏನರೇ ಕಿರಿಕಿರಿ ನಡದೇ ಇರ್ತದ’ ಅಂತ ಸರಸ್ವತಮ್ಮ ಪ್ರತಿಯಾಗಿ ಹೇಳಿಕೊಂಡರು. ಹೀಗೆ ಪುರಾಣದ ಪೂರ್ವ ರಂಗದಲ್ಲಿ ಶಾಂತಮ್ಮ-ಸರಸ್ವತಮ್ಮನವರ ಚರ್ಚೆ ತುಂಬ ಗಂಭೀರವಾಗಿ ನಡೆದಿತ್ತು.
‘ಭಿನ್ನಾ ಜೀವಗಣಾಃ’ ಎಂಬಂತೆ ಒಬ್ಬರಂತೆಯೇ ಇನ್ನೊಬ್ಬರು ಎಂದಿಗೂ ಆಗಿಲ್ಲ, ಆಗುವುದೂ ಇಲ್ಲ. ದೈಹಿಕವಾಗಿ, ಮಾನಸಿಕವಾಗಿ ಎಲ್ಲ ರೀತಿಯಿಂದಲೂ ಎಲ್ಲರೂ ಭಿನ್ನರೇ ಎಂಬುವುದು ನಿತ್ಯಸತ್ಯ. ಆದರೆ ನಮ್ಮ ಮಾನಸಿಕತೆ ಹೇಗಿದೆಯೆಂದರೆ ಜೊತೆಗಿದ್ದವರೆಲ್ಲರೂ ಸಮಾನಮನಸ್ಕರೇ ಆಗಿರಬೇಕು, ಸಮಾನವಿಚಾರಧಾರಿಗಳೇ ಆಗಿರಬೇಕು ಎಂಬುದು. ಆದರೆ, ಪರಿಸ್ಥಿತಿ ಎಲ್ಲವೂ ಸದಾಕಾಲ ನಮಗೆ ತಕ್ಕಂತೆ ಅನುಕೂಲಕರವಾಗಿಯೇ ಇದ್ದರೆ ವೈಯಕ್ತಿಕ ಶ್ರಮಸಾಧನೆ ಏನು ಬಂತು? ಎಲ್ಲ ಪರಿಸ್ಥಿತಿಗಳೂ ವಿಪರೀತವಾಗಿದ್ದಾಗಲೇ ಗೆಲುವಿಗೊಂದು ವಿಶೇಷ ಸ್ಥಾನ, ಬೆಲೆ.
ಪರಿವಾರದಲ್ಲಿಯೂ ಹಾಗೆಯೇ ಅಲ್ಲವೇ. ಎಲ್ಲಿಯೋ ಹುಟ್ಟಿ ಬೆಳೆದ ಹೆಣ್ಣು-ಗಂಡು ವಿವಾಹ ಬಂಧನದಲ್ಲಿ ಬೆಸೆಯುವಾಗ ವಿಜಾತಿಯ ಸ್ವಭಾವಗಳಲ್ಲಿಯೂ ಸಾಮರಸ್ಯ ತರಲೇಬೇಕಾದ್ದು ಅನಿವಾರ್ಯ. ಪರಸ್ಪರ ಗುಣಗಳೆಲ್ಲವೂ ಏಕೀಭಾವವನ್ನು ಹೊಂದಿಬಿಡಬೇಕು ಎಂಬುವುದೇ ಬಾಂಧವ್ಯ, ಅದೇ ದಾಂಪತ್ಯ, ಅದೇ ಸ್ನೇಹ ಎಂದು ಜೀವನದ ಎಲ್ಲ ಸಂಬಂಧಗಳಲ್ಲಿಯೂ ಸಜಾತಿಯ ಗುಣಗಳನ್ನೇ ಅರಸುತ್ತ ಸಾಗುವ ಪಯಣ ಎಂದಿಗೂ ಸುಖಾಂತ್ಯ ಕಾಣುವುದೇ ಇಲ್ಲ. ಅದು ನಮ್ಮೆಲ್ಲರ ಭ್ರಾಂತಿ ಅಷ್ಟೇ. ಮಗಳ ಸಾಂಸಾರಿಕ ಸುಖಕ್ಕಾಗಿ ಅಳಿಯನ ಅನೇಕ ದೋಷಗಳನ್ನು ಮೌನದಿಂದ ಸಹಿಸುವ ಸಮಾಜ, ಮಗನ ಸಾಂಸಾರಿಕ ಸುಖಕ್ಕಾಗಿ ಸೊಸೆಯ ಕೆಲವು ದೋಷಗಳನ್ನು ಸ್ವಲ್ಪಮಟ್ಟಿಗೆ ಸಹಿಸಿದರೆ ಎರಡೂ ಸಂಸಾರಗಳಿಗೆ ಸಮಾನ ಸಂತಸವಲ್ಲವೇ.
ನಮ್ಮ ಸಂಬಂಧಗಳು ಸದಾ ಗಟ್ಟಿಯಾಗಿರಬೇಕೆಂದರೆ ಸ್ವತಂತ್ರ ಮನೋಭಾವನೆ ಕೆಲಸಕ್ಕೆ ಬಾರದು. ‘ನನಗೆ ಯಾರ ಹಂಗೂ ಬೇಕಿಲ್ಲ. ನಾನು ಸ್ವತಂತ್ರವಾಗಿರುವೆ’ ಎಂಬ ಭಾವನೆ ನಮ್ಮನ್ನು ಯಾರೊಂದಿಗೂ ಬೆರೆಯಲು ಬಿಡುವುದಿಲ್ಲ. ಅಣ್ಣ-ತಮ್ಮಂದಿರು, ಅಕ್ಕ-ತಂಗಿಯರ ಮಧ್ಯೆ, ತಂದೆ-ತಾಯಿಯ ಜೊತೆಗೆ ಎಷ್ಟೇ ಮನಸ್ತಾಪಗಳು ಇದ್ದರೂ ಇವುಗಳು ಪರಸ್ಪರ ವಿಚ್ಛೇದನ ನೀಡಿ ಬೇರೆಯಾಗುವ ಸಂಬಂಧಗಳಲ್ಲ ಎಂದು ಅರಿತಿದ್ದೇವೆ. ದಾಂಪತ್ಯವೂ ಹಾಗೆಯೇ. ದಂಪತಿ ತೀರಾ ಸ್ವತಂತ್ರರಾಗುವುದಕ್ಕಿಂತ ‘ಅವಳಿಲ್ಲದೇ ನನ್ನ ಯಾವ ಕೆಲಸಗಳೂ ಆಗುವುದಿಲ್ಲ’ ಅಥವಾ ‘ಅವನಿಲ್ಲದೆ ನನಗೇನೂ ತೋಚುವುದಿಲ್ಲ’ ಎಂಬ ಪರಾವಲಂಬನೆ ಇದ್ದಾಗಲೇ ಸ್ವಭಾವಗಳು ಎಷ್ಟೇ ಭಿನ್ನವಾಗಿದ್ದರೂ ಬಿಟ್ಟಿರಲು ಸಾಧ್ಯವಿಲ್ಲ ಎಂಬ ಭಾವನೆ ಮನದಲ್ಲಿ ನೆಲೆಯೂರುತ್ತದೆ. (ಲೇಖಕರು ಹವ್ಯಾಸಿ ಬರಹಗಾರರು, ಪ್ರತಿಕ್ರಿಯಿಸಿ: manollasavv@gmail.com)