ಹೋರಾಟವೇ ಜೀವನ: ಮನೋಲ್ಲಾಸ

Manollasa
Published on
| ಡಾ.ವಿ.ಎಚ್.ಮೂಲಿಮನಿ

ಕಂಬಳಿಹುಳವು ಗೂಡನ್ನು ಕಟ್ಟಿಕೊಂಡು, ಅದರಲ್ಲಿ ಬೆಳೆದು, ಕೊನೆಗೆ ಗೂಡನ್ನು ಒಡೆದುಕೊಂಡು ಹೊರಬಂದು ಚಿಟ್ಟೆಯಾಗಿ ಹಾರಿಹೋಗುವ ವಿಷಯವನ್ನು ಉಪಾಧ್ಯಾಯರೊಬ್ಬರು ವಿದ್ಯಾರ್ಥಿಗಳಿಗೆ ವೈಜ್ಞಾನಿಕವಾಗಿ ವಿವರಿಸುತ್ತಿದ್ದರು. ಅಂತಹ ಒಂದು ಗೂಡನ್ನು ಮೇಜಿನ ಮೇಲಿರಿಸಿದರು. ಚಿಟ್ಟೆಯು ಗೂಡಿನಿಂದ ಹೊರಗೆ ಬರುವುದರಲ್ಲಿತ್ತು. ಉಪಾಧ್ಯಾಯರು ವಿದ್ಯಾರ್ಥಿಗಳಿಗೆ ‘ನೀವು ಚಿಟ್ಟೆಯು ಹೇಗೆ ಹೊರಬರುತ್ತದೆ ಎಂಬುದನ್ನು ಸುಮ್ಮನೆ ನೋಡುತ್ತಿರಿ. ನಾನು ಸ್ವಲ್ಪ ಹೊತ್ತಿನಲ್ಲಿ ಬರುತ್ತೇನೆ’ ಎಂದು ಹೇಳಿ ಹೊರಗೆ ಹೋದರು. ಅವರು ಹಿಂದಿರುಗಿ ಬಂದಾಗ ಚಿಟ್ಟೆ ನೆಲದ ಮೇಲೆ ಬಿದ್ದು ವಿಲಿವಿಲಿ ಒದ್ದಾಡುತ್ತಿತ್ತು. ಉಪಾಧ್ಯಾಯರಿಗೆ ಆಶ್ಚರ್ಯವಾಯಿತು. ಅವರು ಇದಕ್ಕೆ ಕಾರಣವೇನೆಂದು ವಿಚಾರಿಸಿದಾಗ ವಿಷಯ ತಿಳಿಯಿತು. ಆ ಹುಳವು ತುಂಬ ಕಷ್ಟಪಟ್ಟು ಗೂಡಿನಿಂದ ಹೊರಬರುತ್ತಿರುವುದನ್ನು ನೋಡಿ ಒಬ್ಬ ವಿದ್ಯಾರ್ಥಿಯು ಅದಕ್ಕೆ ಸಹಾಯ ಮಾಡುವ ಉದ್ದೇಶದಿಂದ ಕತ್ತರಿಯನ್ನು ತೆಗೆದುಕೊಂಡು ಗೂಡಿನ ದಾರಗಳನ್ನು ಕತ್ತರಿಸತೊಡಗಿದನು. ಚಿಟ್ಟೆ ಬೇಗನೆ ಹೊರಬಂತು, ಆದರೆ ಅದರ ರೆಕ್ಕೆ ಇನ್ನೂ ಸಾಕಷ್ಟು ಬೆಳೆದಿರಲಿಲ್ಲ. ಅದಕ್ಕೆ ಹಾರಲು ಅಸಮರ್ಥವಾಗಿ ಇನ್ನೇನು ಸಾಯುವ ಸ್ಥಿತಿಯಲ್ಲಿತ್ತು. ಉಪಾಧ್ಯಾಯರು ವಿವರಿಸಿದರು: ‘ನೀನು ಚಿಟ್ಟೆಗೆ ಸಹಾಯ ಮಾಡಲು ಹೋಗಿ ಅದರ ಬೆಳವಣಿಗೆಯ ಅವಕಾಶದಿಂದ ವಂಚಿತಗೊಳಿಸಿದೆ. ಅದು ಕಷ್ಟಪಟ್ಟು ಹೊರಬರುವುದು ಅದರ ಬೆಳವಣಿಗೆಗೆ ಅವಕಾಶ ನೀಡುತ್ತಿತ್ತು. ಈ ತತ್ತ್ವ ಮಾನವಜೀವನಕ್ಕೂ ಅನ್ವಯಿಸುತ್ತದೆ. ನಮ್ಮ ಬೆಳವಣಿಗೆಗೂ ಕಷ್ಟಕಾರ್ಪಣ್ಯಗಳು ಅವಶ್ಯಕ. ಕಷ್ಟ, ಸಮಸ್ಯೆ, ಸವಾಲುಗಳನ್ನು ಎದುರಿಸಿಯೇ ನಾವು ಬೆಳೆಯಬೇಕು. ಅವುಗಳಿಗೆ ಹೆದರಿ ಓಡಿದರೆ ನಾವು ಬೆಳವಣಿಗೆಯ ಅವಕಾಶವನ್ನು ಕಳೆದುಕೊಳ್ಳುತ್ತೇವೆ.’

ಜೀವನ ಒಂದು ಹೋರಾಟ. ಅನೇಕ ಶಕ್ತಿಗಳು ನಮ್ಮ ವಿಕಾಸವನ್ನು ತಡೆಗಟ್ಟಲು ಪ್ರಯತ್ನಿಸುತ್ತಿರುತ್ತವೆ. ಅನೇಕ ಕಷ್ಟನಷ್ಟಗಳನ್ನು, ಆಘಾತಗಳನ್ನು ನಾವು ಸಹಿಸಬೇಕಾಗುವುದು. ಈ ಹೋರಾಟದಲ್ಲಿ ಜಯಗಳಿಸಿದರೆ ನಮ್ಮ ಜೀವನ ಸಾರ್ಥಕವೆನಿಸುವುದು. ಸ್ವಾಮಿ ವಿವೇಕಾನಂದರು ಹೇಳುವಂತೆ, ‘ನಮ್ಮ ದೇಹದ ಸುತ್ತಲು ಹೊರಗು ಅಸಂಖ್ಯ ರೋಗಾಣುಗಳಿವೆ. ಅವು ಸದಾ ಈ ದೇಹವನ್ನು ನಾಶಮಾಡಲು ಹೊಂಚು ಹಾಕುತ್ತಿರುತ್ತವೆ. ಇವುಗಳ ವಿರುದ್ಧ ಹೋರಾಡುವ ರಕ್ಷಣಾಪಡೆ ನಮ್ಮ ದೇಹದಲ್ಲಿದೆ. ಈ ರೋಗಾಣುಗಳ ವಿರುದ್ಧ ನಿರಂತರ ಹೋರಾಟ ನಡೆಯುತ್ತದೆ. ರಕ್ಷಣಾಪಡೆ ದುರ್ಬಲವಾಗಿ ಹೋರಾಟ ಸ್ಥಗಿತವಾದರೆ ಸಾಕು ದೇಹವು ರೋಗಾಣುಗಳಿಗೆ ಬಲಿಯಾಗುತ್ತದೆ’. ನಾವು ಜೀವನದಲ್ಲಿ ಉನ್ನತ ಆದರ್ಶ ಇಟ್ಟುಕೊಳ್ಳಬೇಕು. ಆ ಆದರ್ಶ ಸಾಧನೆಗಾಗಿ ನಮ್ಮ ಜೀವನವನ್ನು ಮುಡುಪಾಗಿಡಬೇಕು. ಆಗ ನಾವು ಹೊರಗಿನ ಸನ್ನಿವೇಶಗಳಿಂದ ಹೆಚ್ಚು ವಿಚಲಿತರಾಗುವುದಿಲ್ಲ. ನಾವು ನಮ್ಮ ನೈಜ ವ್ಯಕ್ತಿತ್ವದ ನೆಲೆಯಲ್ಲಿ ಭದ್ರವಾಗಿ ನೆಲೆಯೂರಬೇಕು. ಸರಿಯಾಗಿ ಬೇರುಬಿಟ್ಟ ವೃಕ್ಷ ಸುಲಭವಾಗಿ ಬಿರುಗಾಳಿಗೆ ಬಲಿಯಾಗುವುದಿಲ್ಲ. ಆದರೆ, ಈ ರೀತಿ ಶ್ರದ್ಧೆಯಿಲ್ಲದ ಅನೇಕರು ಜೀವನದ ಅರ್ಥಹೀನತೆಯಿಂದ ನರಳುತ್ತಾರೆ. ಇದು ಅನೇಕ ಅನರ್ಥಗಳಿಗೆ ನಾಂದಿಯಾಗುತ್ತದೆ. ಹಾಗಾಗದಂತೆ ಎಚ್ಚರವಹಿಸುವುದು ನಮ್ಮ ಕೈಲೇ ಇದೆ.

(ಲೇಖಕರು ನಿವೃತ್ತ ಪ್ರಾಧ್ಯಾಪಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net