ಜೀವನವೆಂದರೆ ದಿನದಿನವೂ ಅಭ್ಯಾಸ ಮಾಡುವ ಗರಡಿಮನೆ

Success
Published on

ಎನಿತು ನೀಂ ಗೆಲಿದೆಯೆಂದೆನರು ಬಲ್ಲವರೆಂದುಂ| ಎನಿತು ನೀಂ ಪೋರ್ದೆಯೆನಿತನು ಪೊತ್ತೆಯೆನುವರ್| ಗಣನೆ ಸಲುವುದು ತೋರ್ದ ಪೌರುಷಕೆ, ಜಯಕಲ್ಲ | ದಿನದಿನದ ಗರಡಿಯಿದು-ಮಂಕುತಿಮ್ಮ||595||

ತಿಳಿದವರು, ಪ್ರಾಜ್ಞರು ನೀನು ಎಷ್ಟು ಗೆದ್ದೆ ಎಂದು ಕೇಳುವುದಿಲ್ಲ. ನೀನು ಎಷ್ಟನ್ನೆಲ್ಲಾ ನಿಭಾಯಿಸಿದೆ, ಎಷ್ಟು ಹೊಣೆಗಳನ್ನು ಹೊತ್ತು ನಿರ್ವಹಿಸಿದೆ ಎಂದು ಕೇಳುತ್ತಾರೆ. ಯಾಕೆಂದರೆ ತಿಳಿದವರಿಗೆ ನಿನ್ನ ಗೆಲುವು ಮುಖ್ಯವೆನ್ನಿಸುವುದಿಲ್ಲ. ಗೆಲ್ಲುವುದಕ್ಕಾಗಿ ನೀನು ಮಾಡಿದ ಪ್ರಯತ್ನ, ನಿನ್ನ ಪೌರುಷಗಳಷ್ಟನ್ನೇ ಅವರು ಗಣನೆಗೆ ತೆಗೆದುಕೊಳ್ಳುತ್ತಾರೆ. ಹಾಗಾಗಿ ಜೀವನವೆನ್ನುವುದು ದಿನದಿನವೂ ಅಭ್ಯಾಸ ಮಾಡುವ ಗರಡಿಯ ಹಾಗೆಯೇ ಎನ್ನುತ್ತದೆ ಈ ಕಗ್ಗ.

ಬದುಕೆಂದರೆ ಹೋರಾಟ. ಅನಿರೀಕ್ಷಿತಗಳನ್ನು ಎದುರಿಸುತ್ತಾ ಯಾವುದಕ್ಕೂ ಕಂಗೆಡದೆ, ಅತಿಯಾಗಿ ಬೀಗದೆ ಉದ್ದೇಶಿತ ಗುರಿಯನ್ನು ತಲುಪಲು ಪ್ರಯತ್ನಿಸುವುದು. ಇರುವ ಸ್ಥಿತಿಗಿಂತ ಇನ್ನೂ ಹೆಚ್ಚಿನದನ್ನು ಪಡೆಯುವುದಕ್ಕಾಗಿ ಮಾಡುವ ಪ್ರಯತ್ನ. ಎಲ್ಲರ ಬಾಳಿನಲ್ಲೂ ಏಳು-ಬೀಳು, ಸಿಹಿ- ಕಹಿಗಳು ಇದ್ದೇಇರುತ್ತವೆ. ಸುಖವನ್ನಷ್ಟೇ ಉಂಡ ಜೀವವೆಂದೋ, ಕಷ್ಟವನ್ನಷ್ಟೇ ಕಂಡವರೆಂದೋ ಯಾರೂ ಇಲ್ಲ. ಪ್ರತಿಯೊಬ್ಬರ ಹೃದಯವೂ ನಲಿವಿನಿಂದ ಅರಳಿದಂತೆಯೇ ನೋವಿನಲ್ಲಿ ಬಿಕ್ಕಳಿಸಿದ್ದೂ ಇದೆ. ಎಲ್ಲವನ್ನೂ ಎದುರಿಸುತ್ತ್ತ ಎಲ್ಲರೊಳಗೊಂದಾಗಿ ಭರವಸೆಯಿಂದಿರುವುದೇ ಬದುಕು.

ಸಾಮಾನ್ಯವಾಗಿ ಮನುಷ್ಯನ ಯಶಸ್ಸನ್ನು ಅವನ ಆಸ್ತಿ-ಅಂತಸ್ತು, ಅಧಿಕಾರಗಳಲ್ಲಿ ಅಳೆಯುತ್ತಾರೆ. ಸಮಾಜ ಘಾತುಕನಾಗಿದ್ದರೂ ದುಡ್ಡು, ಅಧಿಕಾರವುಳ್ಳವನಾದರೆ ಜನರು ಜೈಕಾರ ಹಾಕುತ್ತಾರೆ. ಆದರೆ ಈ ಗೌರವವು ಹೃದಯದಿಂದ ಬರುವಂಥದ್ದಲ್ಲ. ವ್ಯಕ್ತಿಯ ಕೈಸೋತ ಕಾಲಕ್ಕೆ ಅದೇ ಜನರು ಆತನನ್ನು ಕಡೆಗಣಿಸುತ್ತಾರೆ.

ಆದರೆ ಪ್ರಾಜ್ಞರು, ತಿಳಿವಳಿಕೆಯುಳ್ಳ ಅನುಭವಿಗಳು ವ್ಯಕ್ತಿಯ ಅರ್ಹತೆಯನ್ನು, ಅವನ ಸಂಪತ್ತಿನ ಸಂಗ್ರಹ, ಪಡೆದ ಪ್ರಶಸ್ತಿ, ಹೊಂದಿದ ಅಧಿಕಾರಗಳ ನೆಲೆಯಿಂದ ಅಳೆಯುವುದಿಲ್ಲ. ಅವರ ದೃಷ್ಟಿಯಲ್ಲಿ ಸಾಮಾನ್ಯ ಜನರು ಹೊಂದಲು ಬಯಸುವ ಅಧಿಕಾರ, ಕೀರ್ತಿ, ಸಂಪತ್ತುಗಳು ಬಲು ತುಚ್ಛವಾದವು. ಬದಲಾಗಿ ವ್ಯಕ್ತಿಯು ತನ್ನ ಬುದ್ಧಿವಂತಿಕೆ ಮತ್ತು ಕ್ರಿಯಾಶೀಲತೆಯಿಂದ ಎಷ್ಟು ಜವಾಬ್ದಾರಿಗಳನ್ನು ನಿಭಾಯಿಸಿದ್ದಾನೆ? ಅವನ ಜೀವನಾನುಭವ, ಕಾರ್ಯೋತ್ಸಾಹದ ಹರಹು ಎಷ್ಟು? ಪ್ರತಿಕೂಲ ಸಂದರ್ಭಗಳನ್ನು ಅವನು ಎದುರಿಸಿದ ಬಗೆ ಹೇಗೆ? ಕಠಿಣ ಪರಿಶ್ರಮದ ಮೂಲಕ ರೂಪುಗೊಂಡ ಅವನ ವ್ಯಕ್ತಿತ್ವದ ಎತ್ತರವೇನು? ಅಧಿಕಾರ, ಸಂಪತ್ತನ್ನು ಹೇಗೆ ಪಡೆದ ಮತ್ತು ಹೇಗೆ ಸಮಾಜಮುಖಿಯಾಗಿ ವಿನಿಯೋಗಿಸಿದ ಮುಂತಾದ ಮಾನದಂಡಗಳನ್ನಿರಿಸಿಕೊಂಡು ಅಳೆಯುತ್ತಾರೆ. ಅತ್ಯಧಿಕ ವಿದ್ವತ್ತು, ಅನುಭವವಿದ್ದರೂ ಕೈಗೊಂಡ ಕಾರ್ಯದಲ್ಲಿ ಸೋತೆನೆಂದರೂ ಆ ಸೋಲನ್ನು ಗಮನಿಸದೆ ಅವನ ಕಾರ್ಯವೈಖರಿಯನ್ನು ಪ್ರಶಂಸಿಸುತ್ತಾರೆ. ಸಂಪತ್ತು- ಸಮೃದ್ಧಿಗಿಂತಲೂ ವ್ಯಕ್ತಿಯ ಜ್ಞಾನ, ಸಾಧನೆ, ಸಮಾಜಮುಖಿ ಸ್ಪಂದನಗಳೇ ಬಾಳಿನ ಗೆಲುವೆಂದು ಭಾವಿಸಿರುತ್ತಾರೆ.

ಹಾಗಾಗಿ ಜೀವನದಲ್ಲಿ ಏನೆಲ್ಲಾ ಮಾಡಿಯೂ, ಎಷ್ಟೋ ಪರಿಶ್ರಮವನ್ನು ಪಟ್ಟೂ ಉದ್ದೇಶಿತ ಸಾಧನೆಯಾಗಲಿಲ್ಲ ಎಂದು ಕೊರಗಬೇಕಾಗಿಲ್ಲ. ಪ್ರತಿಯೊಂದು ಅವಕಾಶವೂ ಅನುಭವ ಮತ್ತು ಅರಿವನ್ನು ವಿಸ್ತರಿಸುತ್ತದೆ. ಪ್ರತಿಯೊಂದು ಸೋಲು ಬದುಕಿಗೆ ಪಾಠವಾಗುತ್ತದೆ. ಸತ್ತ್ವಯುತವಾದುದು ಕಡೆಗಣಿಸಲ್ಪಡುವುದಿಲ್ಲ, ಉನ್ನತ ಚಿಂತನೆಗಳು ನಾಶವಾಗುವುದಿಲ್ಲ. ಆದುದರಿಂದ ಟೀಕೆ, ನಿಂದನೆಗಳು ಬಂದಾಗ ಖಿನ್ನರಾಗುವುದಲ್ಲ, ನಿಂದಿಸಿದವರು ಯಾರು ಎಂದು ಪರಾಮಶಿಸಬೇಕು. ಟೀಕೆಯ ಉದ್ದೇಶ ನೋಯಿಸುವುದಾಗಿರದೆ ತಿದ್ದುವುದೇ ಆಗಿದ್ದರೆ ತುಂಬು ಮನದಿಂದ ಅದನ್ನು ಸ್ವೀಕರಿಸಬೇಕು. ನೋಯಿಸುವ ಮನಸ್ಸುಳ್ಳವರ ಪೊಳ್ಳು ಮಾತುಗಳಿಗೆ ಕಿವುಡರಾಗಬೇಕು.

ಸಂಶೋಧಕ ಅಥವಾ ವಿಜ್ಞಾನಿಯು ತನ್ನ ಉದ್ದೇಶಿತ ಗುರಿಯ ಹುಡುಕಾಟದಲ್ಲಿ ಹಲವು ಸಲ ಸೋತಿರಬಹುದು. ದಾರಿ ತಪ್ಪಿ ಬಹಳ ದೂರ ನಡೆದಿರಬಹುದು. ನಿರ್ಣಾಯಕ ಹಂತದಲ್ಲಿ ಯೋಜನೆಯು ವಿಫಲವಾಗಿರಲೂಬಹುದು. ಏನೇ ಆದರೂ ತಿಳಿದವರು, ಆತನು ಮಾಡಿದ ಪ್ರಾಮಾಣಿಕ ಪ್ರಯತ್ನವನ್ನು, ಗಮನಿಸುತ್ತಾರೆಯೇ ಹೊರತು ಆತ ಎಡವಿದುದನ್ನು ಲೆಕ್ಕ ಇಟ್ಟು ಹೀಯಾಳಿಸುವುದಿಲ್ಲ.

ಹಾಗಾಗಿ ಜೀವನವೆಂದರೆ ದಿನದಿನವೂ ಅಭ್ಯಾಸವನ್ನು ಮಾಡುವ ಗರಡಿಮನೆ. ಕುಸ್ತಿ ಪಟುಗಳು ಪ್ರತಿನಿತ್ಯವೂ ವ್ಯಾಯಮವನ್ನು ಮಾಡಿದರಷ್ಟೇ ಅಂಗಸೌಷ್ಠವ, ಗಟ್ಟಿತನ, ಕುಸ್ತಿಯಲ್ಲಿ ಗೆಲ್ಲುವ ಶಕ್ತಿ-ಯುಕ್ತಿಯು ಸಿದ್ಧಿಯಾದೀತು. ಅಂತೆಯೇ ಜೀವನದಲ್ಲೂ ಪ್ರತಿಕ್ಷಣವೂ ಹೊಸ ಸವಾಲು, ಒಗಟು, ಅನಿರೀಕ್ಷಿತಗಳನ್ನು ಹೊಂದಿರುತ್ತದೆ. ಅವೆಲ್ಲವನ್ನೂಅನುಭವದ ಆಧಾರದಲ್ಲಿ, ಅರಿವು ವಿಸ್ತರಿಸಿತು ಎಂಬ ಭಾವದಲ್ಲಿ ಸ್ವೀಕರಿಸಬೇಕು. ಸೋತಾಗ ಕುಗ್ಗಿ ಹೋಗದೆ, ಸೋಲಿಗೆ ಕಾರಣವನ್ನು ಕಂಡುಕೊಂಡು ಮರಳಿ ಯತ್ನಿಸಬೇಕು. ಹೀಗೆ ಅರಿವಿನಲ್ಲರಳುವುದೇ ಬಾಳಿನ ನಿಜವಾದ ಗೆಲುವು.

(ಲೇಖಕರು ಉಪನ್ಯಾಸಕರು, ಕವಯತ್ರಿ)

(ಪ್ರತಿಕ್ರಿಯಿಸಿ: vvsudina@gmail.com),

kaviadoor@gmail.com)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net