

ಕುಂಬಾರ ಹೇಳಿದ. ಈಗ ನಾನು ಮನಸ್ಸು ಬದಲಾಯಿಸಿದ್ದೇನೆ. ಇನ್ನು ಮೇಲೆ ನಾನು ಚಿಲುಮಿಯ ಬದಲಾಗಿ ಮಣ್ಣಿನ ಕೊಡ ತಯಾರಿಸುವೆ. ಒಡೆದು ಮಣ್ಣಾಗಿದ್ದ ಆ ಚಿಲುಮಿ ಕುಂಬಾರನಿಗೆ ಹೇಳಿತು. ಹೇ ಕುಂಬಾರ! ನೀನು ಕೇವಲ ನಿನ್ನ ಮನಸ್ಸು ಬದಲಾಯಿಸಿದ್ದರಿಂದ ಇಂದು ನನ್ನ ಅದೃಷ್ಟವೇ ಬದಲಾಗಿದೆ. ಎಂಥ ಸುಮಧುರ ಕ್ಷಣವಿದು ! ಹೌದಾ, ಅದು ಹೇಗೆಂದು ನನಗೆ ಅರ್ಥವಾಗಲಿಲ್ಲ, ಕುಂಬಾರ ಕೇಳಿದ.
ಮಣ್ಣು ಕೃತಜ್ಞತೆಯಿಂದ ಹೇಳಿತು. ಮೊದಲು ನಾನು ಚಿಲುಮಿಯಾಗಿದ್ದಾಗ ನನ್ನೊಳಗೆ ಬರೀ ತಂಬಾಕು ತುಂಬಿರುತ್ತಿತ್ತು. ಜನ ಸೇದಲು ಆರಂಭಿಸುವ ಮುನ್ನ ಅದಕ್ಕೆ ಬೆಂಕಿ ಹಚ್ಚಿದಾಗ ತಂಬಾಕಿನ ಜೊತೆಗೆ ಸ್ವತಃ ನಾನೂ ಉರಿಯುತ್ತಿದ್ದೆ. ನನ್ನನ್ನು ಸೇದುವವರನ್ನೂ ಸುಡುತ್ತಿದ್ದೆ. ಹಲವರ ಅನಾರೋಗ್ಯಕ್ಕೆ ಕಾರಣವಾಗಿ ಶಾಪಕ್ಕೂ ಗುರಿಯಾಗುತ್ತಿದ್ದೆ. ಇನ್ನು ಮೇಲೆ ನೀರು ತುಂಬಿದ ಗಡಿಗೆಯಾಗಿ ನಾನೂ ತಂಪಾಗಿರುತ್ತೇನೆ. ಬೇರೆಯವರನ್ನೂ ತಂಪಾಗಿಡುತ್ತೇನೆ. ಮೊದಲು ಕೆಲವರಿಗೆ ಮಾತ್ರ ಬೇಕಾದ ನಾನು ಈಗ ಎಲ್ಲರ ತೃಷೆ ನೀಗಿಸುವದಕ್ಕೆ ಸಹಾಯಕನಾಗಿ ಆತ್ಮ ಸಂತೋಷವನ್ನು ಹೊಂದಿ ಎಲ್ಲರಿಗೂ ಬೇಕಾದ ವಸ್ತು ಆಗುತ್ತೇನೆ.
ಅದೇ ಮಣ್ಣು, ಅದೇ ನೀರು , ಅದೇ ಕುಂಬಾರ ಆದರೆ ತಯಾರಾದ ಉಪಕರಣ ಮಾತ್ರ ಬೇರೆ. ಸಂಕಲ್ಪ ಬದಲಾದರೆ ದೃಷ್ಟಿ ಬದಲಾಗುತ್ತದೆ. ದೃಷ್ಟಿ ಬದಲಾದರೆ ವಾಣಿ, ಕೃತಿ, ಜತೆಗೆ ಸೃಷ್ಟಿಯೂ ಬದಲಾಗುತ್ತದೆ. ದೇವರು ಒಂದು ದಿನದಲ್ಲಿ ಎಲ್ಲರಿಗೂ ಸಮನಾಗಿ ಇಪ್ಪತ್ನಾಲ್ಕು ತಾಸುಗಳನ್ನೇ ಕೊಟ್ಟಿರುತ್ತಾನೆ ಆದರೆ ಇಚ್ಛಾ ಶಕ್ತಿ ಹಾಗೂ ಕರ್ತತ್ವ ಶಕ್ತಿಯ ಮೇಲೆ ಭವಿಷ್ಯ ರೂಪಿಸಿಕೊಳ್ಳುವ ಆಯ್ಕೆಯನ್ನು ನಮಗೆ ಬಿಟ್ಟಿದ್ದಾನೆ. ಇಂದು ಐಷಾರಾಮಿ ಜೀವನಕ್ಕೆ ಬೇಕಾದ ಹಣ, ಸಾಧನಗಳು. ತಂತ್ರಜ್ಞಾನದ ಸೌಲಭ್ಯಗಳಿದ್ದರೂ ಒತ್ತಡ ಭರಿತ ತಪ್ಪು ಜೀವನ ಶೈಲಿಯಿಂದಾಗಿ ಹಲವಾರು ಜನರು ಸಂಬಂಧಗಳನ್ನು ಕಳಚಿಕೊಳ್ಳುವದರ ಜೊತೆಗೆ ಖಿನ್ನತೆ,ಅನಾರೋಗ್ಯದಿಂದ ಕೂಡಿದವರಾಗಿ ಸಮಾಜದಿಂದ ಮಾತ್ರವಲ್ಲದೇ ಸ್ವಂತಿಕೆಯಿಂದಲೂ ದೂರಾಗುತ್ತಿದ್ದಾರೆಂದು ಮನೋವೈಜ್ಞಾನಿಕರು ಎಚ್ಚರಿಸಿದ್ದಾರೆ. ಗೀತೆಯಲ್ಲಿ ಆತ್ಮಯ್ವ ಹ್ಯಾತ್ಮನೋ ಬಂಧುರಾತ್ಮಯ್ವ ರಿಪುರಾತ್ಮನಃ ಮನುಷ್ಯನು ತನಗೆ ತಾನೇ ಮಿತ್ರನೂ ತನಗೆ ತಾನೇ ಶತ್ರುವೂ ಆಗಿದ್ದಾನೆ. ಎಂಬ ಅರ್ಥಪೂರ್ಣ ಶ್ಲೋಕವಿದೆ. ಸುಖ ಸಮೃದ್ಧಿ ಇವು ಕೇವಲ ಗುರಿಗಳಾಗದೇ ಜೀವನವೆಂಬ ಪ್ರವಾಸದ ಭಾಗವಾಗಬೇಕು. ಧನಾತ್ಮಕ ಬದಲಾವಣೆಗಳನ್ನು ಅಳವಡಿಸಿಕೊಂಡರೆ ಮಾತ್ರ ಪುನರುಜ್ಜೀವನ ಸಾಧ್ಯ. ಅಲ್ಲವೇ ?
(ಲೇಖಕರು ನಿವೃತ್ತ ಬ್ಯಾಂಕ್ ಅಧಿಕಾರಿ)