ಐವತ್ತರಲ್ಲಿಯ ಜೀವನ..: ಅರ್ಥಪೂರ್ಣ ಬದುಕಿಗೆ ಸಣ್ಣ-ಪುಟ್ಟ ಬದಲಾವಣೆ ಅವಶ್ಯ

Lalitha 1
Published on
ನಮಗಾಗಿ ಉತ್ತಮ ಸಮಯವನ್ನು ಕಳೆಯುವುದು ಮತ್ತು ಜೀವನದಲ್ಲಿ ನಮಗೆ ನಿಜವಾದ ಸಂತೋಷ ಹೇಗೆ ಸಿಗುತ್ತದೆ ಎಂದು ಅರ್ಥಮಾಡಿಕೊಳ್ಳುವುದು ಜೀವನದ 50ರ ನಂತರದ ಹಂತದಲ್ಲಿ ಬಹಳ ಮುಖ್ಯವಾಗಿರುತ್ತದೆ. ನಾವು ಈ ಅಂಶಗಳನ್ನು ತಿಳಿದುಕೊಂಡು ನಮ್ಮ ಸ್ವಂತಕ್ಕೆ ಹೇಗೆ ಸಂತೋಷದಿಂದ ಇರಬೇಕು ಎಂಬ ತಿಳಿವಳಿಕೆ ಬರದಿದ್ದರೆ, ಜೀವನದಲ್ಲಿ ಉತ್ಸಾಹ ಕಡಿಮೆ ಅನ್ನಿಸುವ ಜತೆಗೆ ನಮ್ಮ ಸಂತೋಷವನ್ನು ಯಾವಾಗಲೂ ಇನ್ನೊಬ್ಬರ ಮೇಲೆ ಅಥವಾ ಹೊರಗಿನ ವಸ್ತುಗಳ ಮೇಲೆ ಅವಲಂಬಿಸಲು ಪ್ರಾರಂಭಿಸುತ್ತೇವೆ. ಹಾಗಾಗದಂತೆ ನೋಡಿಕೊಳ್ಳುವುದು ನಮ್ಮದೇ ಜವಾಬ್ದಾರಿ.
| ರಾಜೇಶ್ವರಿ ಹಿರೇಮಠ ಹವ್ಯಾಸಿ ಬರಹಗಾರ್ತಿ

ಪ್ರಪಂಚದಾದ್ಯಂತ ವಯಸ್ಸು ಮತ್ತು ವಯಸ್ಸಿನ ಬಗ್ಗೆ ಪರಿಕಲ್ಪನೆಗಳು ಬದಲಾಗುತ್ತಿವೆ. ಭಾರತೀಯ ಮಹಿಳೆಯ ಜೀವನದ ಆಯುಷ್ಯ ಸುಮಾರು 70 ವರ್ಷಗಳು. ನಮಗೆ 50 ವರ್ಷ ಆಗುವ ವೇಳೆಗೆ ನಮ್ಮ ಜೀವನದ ಪ್ರಮುಖ ಸಮಯ ಮುಗಿದುಬಿಟ್ಟಿರುತ್ತದೆ. ಮನುಷ್ಯನ ಮೊದಲ 25 ವರ್ಷಗಳು ಮುಖ್ಯವಾಗಿ ಬಾಲ್ಯ, ಶಿಕ್ಷಣ ಮತ್ತು ಜೀವನದ ಸಂಗಾತಿಯನ್ನು ಗುರುತಿಸಿ ಜೀವನ ಶುರುಮಾಡುವುದರಲ್ಲಿ ಕಳೆಯುತ್ತದೆ. ಮುಂದಿನ 25 ವರ್ಷಗಳು ಸಾಮಾನ್ಯವಾಗಿ ನಾವು ವೃತ್ತಿಯಲ್ಲಿ ಪ್ರಗತಿ ಹೊಂದಲು, ಅದರ ಜತೆಗೆ ಕುಟುಂಬ, ಮಕ್ಕಳ ಶಿಕ್ಷಣ, ಸ್ವಂತ ಮನೆ ಮತ್ತು ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವಲ್ಲಿ ಅಧಿಕ ಸಮಯ ಕಳೆಯುತ್ತದೆ. ನಾವು ನಮಗಾಗಿ ಸಾಕಷ್ಟು ಸಮಯವನ್ನು ಕಳೆದಿಲ್ಲ ಎಂಬ ಅರಿವು ಬರುವುದರಲ್ಲಿ ನಮಗೆ 50 ವರ್ಷ ಆಗಿಬಿಟ್ಟಿರುತ್ತದೆ.

ವಿಶ್ರಾಂತಿ ಬೇಕು ಅನ್ನಿಸಿದಾಗ: ಮಹಿಳೆಯರು 50 ವರ್ಷಕ್ಕೆ ಕಾಲಿಡುತ್ತಿದ್ದಂತೆ ಸಹಜವಾಗಿ ಜೀವನದ ಉದ್ದೇಶ ಏನು ಎಂದು ಯೋಚಿಸಲು ಶುರು ಮಾಡುತ್ತಾರೆ. ಅದಲ್ಲದೆ ಹೆಚ್ಚಿನ ಮಹಿಳೆಯರಿಗೆ ಸಾಕಷ್ಟು ವಿಶ್ರಾಂತಿ ಮತ್ತು ವಿನೋದದ ಅಗತ್ಯವಿದೆ ಅನ್ನಿಸಲು ಶುರುವಾಗುತ್ತದೆ. ಜೀವನದಿಂದ ಏನನ್ನು ಬಯಸುತ್ತಿದ್ದೇವೆ ಎಂದು ಯೋಚಿಸಲು ನಿಮ್ಮ 50ರ ದಶಕವು ಒಳ್ಳೆಯ ಸಮಯವಾಗಿದೆ. ಸಂತೋಷ, ಆರೋಗ್ಯ ಮತ್ತು ಒಟ್ಟಾರೆ ಯೋಗಕ್ಷೇಮದ ಅನ್ವೇಷಣೆಯಲ್ಲಿ ನಮ್ಮ ಜೀವನದಲ್ಲಿ ಕೆಲವು ಗಂಭೀರ ಬದಲಾವಣೆಗಳನ್ನು ತರಬೇಕೆಂದರೆ ಇದಕ್ಕಿಂತ ಒಳ್ಳೆಯ ಸಮಯ ನಮಗೆ ಮುಂದೆ ಸಿಗುವುದಿಲ್ಲ.

ನಮ್ಮಿಚ್ಛೆಯಂತೆ ಬದುಕೋಣ: ಮಿಡ್ಲೈಫ್ ಕ್ರೖೆಸಿಸ್ ಅನುಭವಿಸುತ್ತಿರುವ ವರೊಂದಿಗೆ ಮಾತನಾಡಿದಾಗ ಹೆಚ್ಚಿನ ವ್ಯಕ್ತಿಗಳು, ತಾವು ಯಾವಾಗಲೂ ಇತರರ ಇಚ್ಛೆಯ ಅನುಸಾರವಾಗಿ ಜೀವನ ನಡೆಸಿದ್ದಕ್ಕೆ ಮತ್ತು ಇತರರು ಸಂತೋಷ ವಾಗಿದ್ದರೆ ಮಾತ್ರ ತಾವೂ ಸುಖವಾಗಿರುತ್ತೇವೆ ಎನ್ನುವ ತಪ್ಪು ಕಲ್ಪನೆಯಲ್ಲಿ ಜೀವನ ಕಳೆದಿದ್ದೇವೆ ಎನ್ನುವ ದೊಡ್ಡ ಕೊರಗು ಹೊಂದಿರುತ್ತಾರೆ. ಇದಲ್ಲದೆ ಜೀವನದ ಈ ಹಂತದಲ್ಲಿ ಅವರು ನಿರಾಶೆಗೊಳ್ಳಲು ಹಲವು ಅಂಶಗಳಿವೆ, ಆದರೆ ತಮ್ಮ ಹಿಂದಿನ ವಿಷಾದಗಳನ್ನು ಅರಿತುಕೊಂಡು, ಮುಂದಿನ ಜೀವನವನ್ನು ಹೇಗೆ ಸಂತೋಷವಾಗಿ ಕಳೆಯಬೇಕೆಂದು ಯೋಚಿಸುವುದು ಈಗಿನ ಹಂತದಲ್ಲಿ ತುಂಬಾ ಮುಖ್ಯವಾಗಿದೆ.

ಇಷ್ಟ-ಕಷ್ಟಗಳನ್ನು ಅರಿಯೋಣ: ಮಿಡ್ಲೈಫ್ ಮಹಿಳೆಯರಿಗೆ ಹಲವು ರೋಗಗಳನ್ನು ತಂದೊಡ್ಡಬಹುದು. ಆದರೆ, ಈ ಯಾವುದೇ ರೋಗಗಳು ನಮಗೆ ಉತ್ತಮ ಜೀವನ ನಡೆಸಲು ಅಡ್ಡಿ ಪಡಿಸುವುದಿಲ್ಲ. ಆದ್ದರಿಂದ ನಮ್ಮ ಜೀವನದಲ್ಲಿ ನಾವು ಹೇಗೆ ಉಲ್ಲಾಸಕಾರಿಯಾಗಿರಬೇಕು ಎನ್ನುವದು ನಮ್ಮ ಕೈಯಲ್ಲೇ ಇದೆ. ಐವತ್ತರಲ್ಲಿ ನಮ್ಮಿಂದ ಯಾವ ಕೆಲಸ ಆಗುತ್ತದೆ ಮತ್ತು ಯಾವ ಕೆಲಸ ಆಗುವುದಿಲ್ಲ ಎನ್ನುವುದು ನಮಗೆ ಚೆನ್ನಾಗಿ ತಿಳಿದಿರುತ್ತದೆ. ನಮಗೆ ಏನು ಸಂತೋಷ ನೀಡುತ್ತದೆ, ನಮಗೆ ಏನು ಇಷ್ಟವಾಗುತ್ತದೆ, ನಮ್ಮ ಸಾಮರ್ಥ್ಯಗಳೇನು ಇತ್ಯಾದಿ.. ಇದರ ಅರಿವು ಇದ್ದರೆ ನಮ್ಮ ಜೀವನವನ್ನು ಪರಿಪೂರ್ಣ ಮತ್ತು ಅರ್ಥಪೂರ್ಣವಾಗಿ ಬದಲಾಯಿಸಲು ಖಂಡಿತ ಸಾಧ್ಯ.

50ನೇ ವಯಸ್ಸಿನಲ್ಲಿ ಸಣ್ಣ-ಪುಟ್ಟ ಬದಲಾವಣೆಗಳನ್ನು ಮಾಡಿಕೊಂಡರೆ ಜೀವನವನ್ನು ರೋಮಾಂಚನಕಾರಿ ಮತ್ತು ಅರ್ಥಪೂರ್ಣ ಮಾಡಿಕೊಳ್ಳಬಹುದು

  • ನಿಮ್ಮ ಹೇರ್ ಸ್ಟೈಲ್ ಬದಲಿಸಿಕೊಳ್ಳಿ, ನಿಮಗೆ ತುಂಬಾ ಬದಲಾವಣೆ ಅನಿಸಬಹುದು
  • ಜೀವನದ ಈ ಹಂತದಲ್ಲಿ ಜನರೊಂದಿಗೆ ನೆಟ್​ವರ್ಕಿಂಗ್ ಇರಿಸಿಕೊಳ್ಳಿ
  • ಪುಸ್ತಕ ಓದಲು ಆರಂಭಿಸಿ, ಈಗಾಗಲೇ ಓದುವವರಿದ್ದರೆ ಇನ್ನಷ್ಟು ಪುಸ್ತಕಗಳನ್ನು ಓದಿ
  • ಧ್ಯಾನ ಮತ್ತು ಆಧ್ಯಾತ್ಮಿಕ ಕಲಿಕೆಯು ನಿಮ್ಮನ್ನು ಪರಿವರ್ತಿಸಲು ಉತ್ತಮವಾದ ದಾರಿಯಾಗಿದೆ
  • ನಿಮ್ಮ ಗೆಳೆಯ-ಗೆಳೆತಿಯರೊಂದಿಗೆ ಹೆಚ್ಚು ಸಮಯ ಕಳೆಯಿರಿ
  • ಏಕಾಂಗಿಯಾಗಿ ಪ್ರವಾಸಕ್ಕೆ ಹೋಗಿ ಬನ್ನಿ, ನೀವು ನಿಮ್ಮ ಏಕಾಂತವನ್ನು ಆನಂದಿಸುವಿರಿ
  • ನಿಮಗೆ ಯಾವ ಯಾವ ಸ್ಥಳ ನೋಡ ಬೇಕೆಂದು ಅನಿಸುತ್ತದೆ ಅದರ ಪಟ್ಟಿ ಮಾಡಿ
  • ಸಮಾಜಕ್ಕಾಗಿ ಕೆಲಸ ಮಾಡುವುದು ಮತ್ತು ಯಾರಿಗೆ ಸಹಾಯದ ಅಗತ್ಯವಿದೆ ಅವರಿಗೆ ಸಹಾಯ ಮಾಡಿ
  • ನಿಮಗೆ ಸಾಕುಪ್ರಾಣಿ ಇಷ್ಟವಾಗಿದ್ದರೆ, ಮನೆಯಲ್ಲಿ ಸಾಕಿ. ಖಿನ್ನತೆ ಮತ್ತು ಆತಂಕದಿಂದ ಬಳಲುತ್ತಿರುವ ಜನರು ಮನೆಯಲ್ಲಿ ನಾಯಿ ಸಾಕುವುದರಿಂದ ತುಂಬ ಪ್ರಯೋಜನವಾಗುತ್ತದೆ. ಅದರ ಮೇಲಿನ ಪ್ರೀತಿ ಮತ್ತು ಸ್ಪರ್ಶವು ಒತ್ತಡ ಕಡಿಮೆ ಮಾಡುತ್ತದೆ
  • ನಿಮ್ಮ ಬಾಲ್ಕನಿ ಅಥವಾ ಮನೆ ಮುಂದೆ ಗಾರ್ಡನಿಂಗ್ ಮಾಡಿ

50ರ ನಂತರ ನಮ್ಮ ಜೀವನವನ್ನು ಹೇಗೆ ಕಳೆಯಬೇಕು ಎಂದು ಯೋಚಿಸಬೇಕೆಂದರೆ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅತಿ ಮುಖ್ಯವಾಗಿದೆ. ಎಲ್ಲಿಂದ ಪ್ರಾರಂಭಿಸಬೇಕು ಎಂದು ಗೊತ್ತಾಗದಿದ್ದರೆ ಕೆಳಗಿನ ಪ್ರಶ್ನೆಗಳನ್ನು ನಮಗೆ ನಾವೇ ಕೇಳಿಕೊಳ್ಳೋಣ..

  1. ನಾನು ನನ್ನ ಸುತ್ತಮುತ್ತಲಿನವರೊಂದಿಗೆ ಪ್ರೇಮದಿಂದ ಇರುವೆನಾ?
  2. ನನಗೆ ನನ್ನ ದೇಹ, ನನ್ನ ಮನಸ್ಸು ಮತ್ತು ಆತ್ಮದ ಬಗ್ಗೆ ಕಾಳಜಿ ಇದೆಯಾ?
  3. ನನಗೆ ಯಾವುದಾದರೂ ಹವ್ಯಾಸಗಳಿವೆಯೇ?
  4. ನಾನು ನನಗಾಗಿ ಮತ್ತು ನನ್ನ ಸ್ವಂತಕ್ಕೆ ಪ್ರಾಮುಖ್ಯತೆ ನೀಡುತ್ತಿದ್ದೇನೆಯೇ?
  5. ನನಗೆ ನನ್ನ ಹಣಕಾಸಿನ ವಿಷಯದ ಬಗ್ಗೆ ಸಂಪೂರ್ಣ ಮಾಹಿತಿ ಇದೆಯಾ?
  6. ನಾನು ಖುಷಿಯಾಗಿ ಜೀವನವನ್ನು ಕಳೆಯುತ್ತಿದ್ದೇನಾ?
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net