ಸಂಪಾದಕೀಯ: ಗಂಭೀರವಾಗಿ ಪರಿಗಣಿಸಲಿ

7-68d6d15c6da70
Published on

ಜಗತ್ತಿನ ಬಹುತೇಕ ರಾಷ್ಟ್ರಗಳ ವಿರೋಧ ಕಟ್ಟಿಕೊಂಡ ನಂತರವೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಸುಂಕದಾಟವನ್ನು ನಿಲ್ಲಿಸುವಂತೆ ಕಾಣಿಸುತ್ತಿಲ್ಲ. ಕಿಚನ್ ಕ್ಯಾಬಿನೆಟ್, ಪೀಠೋಪಕರಣಗಳು, ಭಾರಿ ಟ್ರಕ್​ಗಳ ಜತೆಗೆ ಔಷಧಗಳ ಆಮದಿನ ಮೇಲೆಯೂ ಟ್ರಂಪ್ ಶುಕ್ರವಾರ ಭಾರಿ ಸುಂಕ ವಿಧಿಸುವುದಾಗಿ ಘೊಷಿಸಿದ್ದಾರೆ.

ಈವರೆಗೆ ಔಷಧಗಳಿಗೆ ಸಂಪೂರ್ಣ ಸುಂಕ ವಿನಾಯ್ತಿ ಇತ್ತು. ಈಗ ಶೇಕಡ 100ರಷ್ಟು ಸುಂಕ ವಿಧಿಸಲು ಟ್ರಂಪ್ ಮುಂದಾಗಿದ್ದಾರೆ. ಇದು ಅಕ್ಟೋಬರ್ 1ರಿಂದ ಜಾರಿಗೆ ಬರಲಿದ್ದು ಬ್ರ್ಯಾಂಡೆಡ್ ಮತ್ತು ಪೇಟೆಂಟೆಡ್ ಉತ್ಪನ್ನಗಳಿಗೆ ಮಾತ್ರ ಅನ್ವಯವಾಗಲಿದೆ. ಅದಲ್ಲದೆ ಅಮೆರಿಕದಲ್ಲಿ ತಮ್ಮ ಕಾರ್ಖಾನೆಗಳನ್ನು ತೆರೆಯಲು ಮುಂದಾಗಿರುವ ಕಂಪನಿಗಳಿಗೆ ಈ ತೆರಿಗೆಯಿಂದ ಟ್ರಂಪ್ ವಿನಾಯ್ತಿ ನೀಡಿದ್ದಾರೆ. ಈ ಷರತ್ತಿಗೆ ಅವರು ಎಂದಿನಂತೆ ರಾಷ್ಟ್ರೀಯ ಭದ್ರತೆಯ ನೆಪವನ್ನು ಮುಂದೊಡ್ಡಿದ್ದಾರೆ.

2024ರಲ್ಲಿ 27.9 ಶತಕೋಟಿ ಡಾಲರ್ ಮೌಲ್ಯದ ಔಷಧವನ್ನು ಭಾರತ ರಫ್ತು ಮಾಡಿದ್ದು, ಇದರಲ್ಲಿ ಶೇ. 31ರಷ್ಟು, ಅಂದರೆ 8.7 ಶತಕೋಟಿ ಡಾಲರ್ ಮೌಲ್ಯದಷ್ಟು ಔಷಧಗಳು ಅಮೆರಿಕಕ್ಕೇ ರಫ್ತಾಗಿವೆ. ಪ್ರಸಕ್ತ ವರ್ಷದ ಮೊದಲಾರ್ಧದಲ್ಲಿ 3.7 ಶತಕೋಟಿ ಡಾಲರ್ ಮೌಲ್ಯದ ಔಷಧಗಳು ರಫ್ತಾಗಿದೆ. ಅಮೆರಿಕಕ್ಕೆ ಭಾರತ ಪೂರೈಸುವ ಔಷಧಗಳಲ್ಲಿ ಶೇ. 40ರಷ್ಟು ಜನರಿಕ್ ಔಷಧಗಳಿರುತ್ತವೆ. ಇವುಗಳಿಗೆ ಟ್ರಂಪ್ ಸುಂಕ ಅನ್ವಯಿಸುವುದಿಲ್ಲ ಎಂಬುದು ಸ್ವಲ್ಪ ಸಮಾಧಾನ ಮೂಡಿಸುವ ಸಂಗತಿ. ಆದರೆ ಇತರ ಶೇ. 15ರಷ್ಟು ಬಯೋಸಿಮಿಲರ್ ಔಷಧಗಳಿಗೆ ಟ್ರಂಪ್ ತೆರಿಗೆ ಅನ್ವಯವಾಗುತ್ತದೆ. ಈ ಹಿನ್ನೆಲೆಯಲ್ಲಿಯೇ ಶುಕ್ರವಾರ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಹಲವಾರು ಪ್ರಮುಖ ಔಷಧ ಕಂಪನಿಗಳ ಷೇರುಗಳ ಬೆಲೆ ಕುಸಿದಿದೆ. ಜನರಿಕ್ ಔಷಧಕ್ಕೆ ಯಾವುದೇ ತೆರಿಗೆ ಘೊಷಿಸಿಲ್ಲದ ಕಾರಣ ಇಲ್ಲಿನ ಔಷಧೋದ್ಯಮಿಗಳು ಧೃತಿಗೆಡಬೇಕಿಲ್ಲ ಎಂದು ಭಾರತೀಯ ಔಷಧೋದ್ಯಮ ಒಕ್ಕೂಟದ (ಐಪಿಎ) ಹೇಳಿದೆ.

ಆದರೆ ಟ್ರಂಪ್ ಅವರ ಈ ಸುಂಕ ಘೊಷಣೆ ಒಂದು ಉದ್ದೇಶಿತ ತಂತ್ರ. ಈಗಾಗಲೇ ಭಾರತದ ವಸ್ತುಗಳ ಮೇಲೆ ಟ್ರಂಪ್ ಶೇ. 50ರಷ್ಟು ಸುಂಕವನ್ನು ವಿಧಿಸಿದ್ದು, ಅದು ಜಾರಿಯಲ್ಲಿದೆ. ಅದರಿಂದ ಭಾರತದ ರಫ್ತಿನ ಮೇಲೆ ಪರಿಣಾಮ ಆಗುತ್ತಿದೆ. ಈಗ ಒಂದು ವಾರದ ಹಿಂದಷ್ಟೇ ಅಮೆರಿಕದ ಹಿರಿಯ ಅಧಿಕಾರಿ ಬ್ರೆಂಡನ್ ಲಿಂಚ್ ಭಾರತಕ್ಕೆ ಆಗಮಿಸಿ ಉಭಯ ದೇಶಗಳ ನಡುವಿನ ವ್ಯಾಪಾರ ಮಾತುಕತೆಯ ಪುನರಾರಂಭಕ್ಕೆ ಚಾಲನೆ ನೀಡಿದ್ದರು. ಇದಕ್ಕೆ ಸಕಾರಾತ್ಮಕ ಪ್ರತಿಕ್ರಿಯೆಯಾಗಿ, ಭಾರತದ ವಾಣಿಜ್ಯ ಸಚಿವ ಪಿಯೂಷ್ ಗೋಯೆಲ್ ನೇತೃತ್ವದ ತಂಡ ಈಗ ಅಮೆರಿಕಕ್ಕೆ ಭೇಟಿ ನೀಡಿ ಮಾತುಕತೆಯನ್ನು ನಡೆಸಿ ಭಾರತಕ್ಕೆ ಮರಳಿದೆ.

ಆದಷ್ಟು ಶೀಘ್ರ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಅಂತಿಮಗೊಳ್ಳುವ ವಿಶ್ವಾಸವನ್ನು ಎರಡೂ ಕಡೆಯ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಇಷ್ಟೆಲ್ಲ ಧನಾತ್ಮಕ ಬೆಳವಣಿಗೆಗಳ ಮಧ್ಯೆ ಇದ್ದಕ್ಕಿದ್ದಂತೆಯೇ ಟ್ರಂಪ್ ಔಷಧೋದ್ಯಮದ ಮೇಲೆ ಶೇ. 100ರಷ್ಟು ಸುಂಕದ ಪ್ರಹಾರ ನಡೆಸಿರುವುದು ದುಡುಕಿನ ಕ್ರಮವಲ್ಲದೇ ಬೇರೇನೂ ಅಲ್ಲ. ಅವರು ಉದ್ದೇಶಪೂರ್ವಕವಾಗಿ ಭಾರತದ ವಿರುದ್ಧ ಪದೇಪದೆ ಹಠಮಾರಿ ಧೋರಣೆ ತಳೆಯುತ್ತಿದ್ದಾರೆ. ಅಮೆರಿಕ ಮತ್ತು ಪಾಕಿಸ್ತಾನದ ನಡುವೆ ಸ್ನೇಹಸಂಬಂಧ ಬಲಗೊಳ್ಳುತ್ತಿರುವ ಬೆನ್ನಲ್ಲೇ ಇಂತಹ ಕ್ರಮಗಳನ್ನು ಟ್ರಂಪ್ ಘೊಷಿಸುತ್ತಿರುವುದು ಕಾಕತಾಳೀಯವೇನೂ ಆಗಿರಲಾರದು. ಭಾರತ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಇತರ ದೇಶಗಳ ಜತೆಗಿನ ದ್ವಿಪಕ್ಷೀಯ ಮಾತುಕತೆಯನ್ನು ತೀವ್ರಗೊಳಿಸುವುದಲ್ಲದೆ ಮಿತ್ರರಾಷ್ಟ್ರಗಳ ಒಕ್ಕೂಟದ ಬಲವರ್ಧನೆಗೆ ಪ್ರಯತ್ನಗಳನ್ನು ತ್ವರಿತಗೊಳಿಸಬೇಕಿದೆ. ಟ್ರಂಪ್ ಕ್ರಮಗಳನ್ನು ತಂತ್ರಗಾರಿಕೆಯಿಂದ ಎದುರಿಸಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net