

| ಭಾರತಿ ಎ. ಕೊಪ್ಪ
ಬಣ್ಣಬಣ್ಣದ ಹೂಗಳಿಂದ ಕೂಡಿದ್ದ ಹೂದೋಟವೊಂದಕ್ಕೆ ದಿನವೂ ಬಹಳಷ್ಟು ಜನ ಭೇಟಿ ನೀಡುತ್ತಿದ್ದರು. ಇದ್ದಕ್ಕಿದ್ದಂತೆ ತೋಟದಲ್ಲಿ ಕಂಬಳಿಹುಳಗಳು ಕಾಣಿಸಿಕೊಂಡವು. ಹುಳುಗಳ ರೂಪ ನೋಡಿ ಜನ ಭಯಪಟ್ಟರು, ಅಸಹ್ಯಪಟ್ಟರು. ಕೆಲವು ಕಂಬಳಿ ಹುಳುಗಳನ್ನು ಹೊಸಕಿ ಹಾಕಿದರು. ಕೆಲ ದಿನಗಳ ಕಾಲ ಹೂದೋಟದಿಂದ ಜನ ದೂರವೇ ಉಳಿದರು. ದಿನಗಳುರುಳಿದಂತೆ ಹೂದೋಟದ ತುಂಬೆಲ್ಲ ಬಣ್ಣ ಬಣ್ಣದ ಚಿಟ್ಟೆಗಳು ಹಾರಾಡತೊಡಗಿದವು. ನೋಡುಗರನ್ನು ಆಕರ್ಷಿಸಿದವು. ಮತ್ತೆ ತೋಟದ ತುಂಬೆಲ್ಲ ಜನರ ಓಡಾಟ ಆರಂಭವಾಯಿತು. ಚಿಟ್ಟೆಗಳ ಸೌಂದರ್ಯದ ವರ್ಣನೆಯೂ ಜನರ ಬಾಯಲ್ಲಿ ಉಲಿಯುತ್ತಿತ್ತು. ಕಂಬಳಿ ಹುಳುವಾಗಿದ್ದಾಗ ದೂರ ಇಟ್ಟಿದ್ದ ಜನ, ಇಂದು ಚಿಟ್ಟೆಯನ್ನು ಕೊಂಡಾಡುತ್ತಿದ್ದರು.
ವಾಸ್ತವವಾಗಿ ಕಂಬಳಿಹುಳಗಳೇ ಚಿಟ್ಟೆಯಾಗುವ ಹಂತದಲ್ಲಿ ಕುರೂಪದಿಂದ ಇದ್ದವು. ಹೊಟ್ಟೆ ತುಂಬಿಸಿಕೊಳ್ಳುವ ನಿಟ್ಟಿನಲ್ಲಿ ಸಿಕ್ಕ ಸಿಕ್ಕ ಎಲೆಗಳನ್ನೆಲ್ಲ ತಿಂದು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದವು. ಇವು ಒಂದು ಹಂತದಲ್ಲಿ ಏಕಾಂತಕ್ಕೆ ತೆರಳಿ, ಪೊರೆ ನಿರ್ವಿುಸಿಕೊಂಡು, ನೋವು ಅನುಭವಿಸಿ, ಹೊರಜಗತ್ತಿನ ಸಂಪರ್ಕ ಕಡಿದುಕೊಂಡು, ಆಹಾರಕ್ಕೆ ಪರದಾಡಿ, ನಂತರ ಸುಂದರ ಚಿಟ್ಟೆಯಾಗಿ ರೂಪಾಂತರ ಹೊಂದಿದ್ದವು. ಎಲ್ಲರಿಂದ ನಿರ್ಲಕ್ಷ್ಯಕ್ಕೆ ಒಳಗಾದ ಕಂಬಳಿಹುಳಗಳೇ ಕಷ್ಟದ ಸಂಕೋಲೆಯನ್ನು ದಾಟಿ ಚಿಟ್ಟೆಗಳಾಗಿ ಹೆಮ್ಮೆಯಿಂದ ತಲೆಯೆತ್ತಿ ಸ್ವಚ್ಛಂದವಾಗಿ ಹಾರಾಡತೊಡಗಿದ್ದವು. ನಿರ್ಲಕ್ಷಿಸಿದವರೇ ಹೊಗಳುವಂತೆ ಬದುಕು ಕಟ್ಟಿಕೊಂಡಿದ್ದವು.
ಚಿಟ್ಟೆಗಳ ಜೀವನದಂತೆ ನಮ್ಮ ಜೀವನವೂ ಸಾಗುತ್ತಿರುತ್ತದೆ. ನಾವು ಸಂಕಷ್ಟದಲ್ಲಿದ್ದಾಗ, ನಮ್ಮ ಬದುಕು ಕಷ್ಟಗಳ ಕತ್ತಲಿನಲ್ಲಿದ್ದಾಗ ಎಲ್ಲರೂ ನಮ್ಮನ್ನು ದೂರವಿಡುತ್ತಾರೆ. ನಮ್ಮ ಬಗ್ಗೆ ಅಸಹ್ಯಪಡುತ್ತಾರೆ. ನಮ್ಮ ನೋವುಗಳಿಗೆ ಕಿವಿಯಾಗಲು ಹತ್ತಿರ ಸುಳಿಯುವವರೇ ಇರುವುದಿಲ್ಲ. ಕೆಲವರು ನಮ್ಮ ಕಷ್ಟದ ದಿನಗಳನ್ನೇ ದಾಳವಾಗಿಸಿಕೊಂಡು ನಮ್ಮನ್ನು ತುಳಿದು ತಾವು ಮೇಲೇರಲು ಪ್ರಯತ್ನಿಸುತ್ತಾರೆ. ಕಂಬಳಿ ಹುಳುಗಳು ಚಿಟ್ಟೆಗಳಾಗುವ ಹಾದಿಯಲ್ಲಿ ಬಂದೊದಗಿದ ನೋವುಗಳನ್ನು ಸಹಿಸಿಕೊಂಡು, ಸುಂದರ ಚಿಟ್ಟೆಗಳಾಗಿ ಹೆಮ್ಮೆಯಿಂದ ಹಾರಾಡುವಂತೆ ನಾವೂ ಕಷ್ಟಗಳನ್ನು ಹಿಮ್ಮೆಟ್ಟಿ ಯಶಸ್ಸಿನ ದಿನಗಳಿಗಾಗಿ ಕಾಯಬೇಕು. ನಮ್ಮ ಬದುಕಿನ ಗುರಿಯನ್ನು ಸ್ಪಷ್ಟವಾಗಿರಿಸಿಕೊಂಡು, ಗುರಿ ತಲುಪುವ ಹಾದಿಯಲ್ಲಿ ಬಂದೊದಗುವ ಅಸಹನೆ, ನಿರ್ಲಕ್ಷ್ಯ ಎಲ್ಲವನ್ನೂ ಮೌನವಾಗಿ ಸಹಿಸಿಕೊಳ್ಳಬೇಕು. ಉತ್ತಮ ಅವಕಾಶದ ಕಾಲಕ್ಕೆ ಕಾಯಬೇಕು. ನಮ್ಮೊಳಗಿನ ಧೈರ್ಯ, ಛಲ, ಉತ್ಸಾಹದಿಂದ ಕಷ್ಟವೆಂಬ ಕಗ್ಗತ್ತಲನ್ನು ಹಿಮ್ಮೆಟ್ಟಿ, ಯಶಸ್ಸಿನತ್ತ ಮುನ್ನುಗ್ಗಬೇಕು. ನಮ್ಮಿಂದ ದೂರವಾದವರೇ ಮುಂದೊಮ್ಮೆ ನಮ್ಮ ಬಳಿ ಬಂದು ಅಚ್ಚರಿಗೊಳ್ಳುವಂತೆ ಬದುಕು ಸಾಗಿಸಬೇಕು.
ಪರಿಪರಿ ಪರೀಕ್ಷೆಗಳು, ಪರಿಭವದ ಶಿಕ್ಷೆಗಳು ಗರಡಿಯ ವ್ಯಾಯಾಮ ಮನ ಬುದ್ಧಿಗಳಿಗೆ? ಪುರುಷತೆಗೆ ಪೆಟ್ಟುಗಳಿನಾದ ಗಂತಿಯೆ ವಿಜಯ ಬಿರಿದ ನನೆ ಫಲಕೆ ಮನೆ? ಮಂಕುತಿಮ್ಮ ಎಂಬ ಮಂಕುತಿಮ್ಮನ ಕಗ್ಗದ ಸಾಲುಗಳಂತೆ, ಜೀವನದಲ್ಲಿ ಕಷ್ಟ, ಸೋಲುಗಳು ಮನುಷ್ಯನಿಗೆ ಒಳ್ಳೆಯ ಪಾಠ ಕಲಿಸಿ ವಿವೇಕಿಯನ್ನಾಗಿ ಮಾಡುತ್ತವೆ. ಪೆಟ್ಟುಗಳು ನಮ್ಮ ಮನಸ್ಸಿಗೆ ಹಾಗೂ ಬುದ್ಧಿಗೆ ವ್ಯಾಯಾಮ ನೀಡಿ ಮನಸ್ಸನ್ನು ಗಟ್ಟಿ ಮಾಡುತ್ತವೆ. ನಮ್ಮ ಪೌರುಷಕ್ಕೆ ಆಗಾಗ ಬೀಳುವ ಪೆಟ್ಟುಗಳು ಸನ್ಮಾರ್ಗದಲ್ಲಿ ನಡೆಯಲು ತಯಾರಿಗೊಳಿಸುತ್ತವೆ. ಆ ಗಟ್ಟಿತನವು ಮುಂದೆ ಜೀವನದಲ್ಲಿ ಯಶಸ್ಸಿನ ಶಿಖರವೇರಲು ಅಡಿಪಾಯವಾಗುತ್ತದೆ. ಮೊಗ್ಗು ಬಿರಿದು ಫಲ ಬರುವಂತೆ ಕಷ್ಟಗಳನ್ನು ಮೆಟ್ಟಿ ನಿಂತಾಗಲೇ ಸಿಹಿಫಲ ದೊರೆಯುತ್ತದೆ.
(ಲೇಖಕರು ಶಿಕ್ಷಕರು ಮತ್ತು ಹವ್ಯಾಸಿ ಬರಹಗಾರರು)
(ಪ್ರತಿಕ್ರಿಯಿಸಿ: manollasavv@gmail.com)