ದೀನದುರ್ಬಲರನ್ನು ಗೌರವಿಸೋಣ

untitled-design-1-68938feddfc7f
Published on
| ವಿನಯ್ ಎಮ್​ಎನ್

ದ್ವಾಪರ ಯುಗದ ಕಾಲವದು. ಶ್ರೀಕೃಷ್ಣನು ನಂದಗೋಕುಲದಲ್ಲಿ ತನ್ನ ಬಾಲ್ಯಕಾಲದಲ್ಲಿದ್ದ ಸಂದರ್ಭ. ಮತ್ತೊಂದೆಡೆ ಮಥುರೆಗೆ ರಾಜನಾಗಿದ್ದ ದುಷ್ಟ ಕಂಸ, ಕೃಷ್ಣನನ್ನು ಕೊಲ್ಲಲು ಹಲವು ವಿಫಲ ಪ್ರಯತ್ನಗಳನ್ನು ಮಾಡಿದ್ದ. ಮೊದಲು ಪೂತನಿ, ನಂತರ ಉತ್ಕಚ್ಛ, ಕಾಕಾಸುರ, ಬಕಾಸುರ, ತೃಣಾವರ್ತ, ಷಕಟಾಸುರ ಹೀಗೆ ಹಲವು ಮಾಯಾವಿ ರಾಕ್ಷಸರನ್ನು ಕಳುಹಿಸಿ ಬಾಲಕೃಷ್ಣನನ್ನು ಮುಗಿಸುವ ಕಾರ್ಯದಲ್ಲಿ ಸೋತಿದ್ದ. ಆದ್ದರಿಂದ ಈ ಬಾರಿ ಶಕ್ತಿಶಾಲಿಯಾದ ಮತ್ತು ಸಮಯಸಾಧಿಸಿ ಕೆಲಸ ಮುಗಿಸಬಲ್ಲ ಹೆಬ್ಬಾವಿನ ರೂಪದಲ್ಲಿರುವ ಅಘಾಸುರನೆಂಬ ರಾಕ್ಷಸನನ್ನು ಕಳುಹಿಸಿದ. ಕೃಷ್ಣನು ತನ್ನ ಗೆಳೆಯರೊಂದಿಗೆ ಪ್ರತಿದಿನ ಬರುವ ಗೋಮಾಳದ ಬಳಿ ಅಘಾಸುರನು, ಸುಂದರವಾಗಿ ಕಾಣುವ ಗುಹೆಯ ರೀತಿಯಲ್ಲಿ ತನ್ನ ಬೃಹತ್ ಬಾಯ್ತೆರೆದು ಸೂಕ್ತ ಅವಕಾಶಕ್ಕಾಗಿ ಕಾಯಲು ಶುರು ಮಾಡಿದ.

ಎಂದಿನಂತೆ ಬಾಲಕೃಷ್ಣನು ಸ್ನೇಹಿತರೊಂದಿಗೆ ಗೋವುಗಳನ್ನು ಮೇಯಿಸಲು ಗೋಮಾಳದ ಬಳಿ ಬಂದ. ಸ್ವಲ್ಪ ಸಮಯದ ನಂತರ ಕೃಷ್ಣನ ಗೆಳೆಯರು ಸುಂದರವಾಗಿ ಕಾಣುತ್ತಿರುವ ಗುಹೆಯನ್ನು ಕಂಡು ಕುತೂಹಲದಿಂದ ಅದರ ಬಳಿ ಹೋದರು. ವಿಸ್ಮಯದಿಂದ ಆ ಗುಹೆಯನ್ನು ನೋಡುತ್ತ ಅದರೊಳಗೆ ಪ್ರವೇಶ ಮಾಡಿಯೇ ಬಿಟ್ಟರು. ತನ್ನ ಗೆಳೆಯರು ಅಪಾಯದಲ್ಲಿರುವುದನ್ನು ಮನಗಂಡ ಕೃಷ್ಣನು ಕೂಡಲೇ ಆ ಸ್ಥಳಕ್ಕೆ ಬಂದನು.

ಅಲ್ಲಿರುವುದು ಗುಹೆಯಲ್ಲ, ಅದು ಅಘಾಸುರನೆಂಬ ರಾಕ್ಷಸ ಎಂದು ಕೃಷ್ಣನು ಅರಿತುಕೊಂಡನು. ತನ್ನ ಗೆಳೆಯರು ಪ್ರಜ್ಞೆ ಕಳೆದುಕೊಂಡು ಅಲ್ಲಿಯೇ ಬಿದ್ದಿರುವುದನ್ನು ಕಂಡು ಅಘಾಸುರನ ಮೇಲೆ ಕ್ರೋಧಗೊಂಡು ಅವನನ್ನು ಸಂಹರಿಸಿದನು. ಹತನಾದ ಅಘಾಸುರನಿಂದ ಆತ್ಮಜ್ಯೋತಿಯೊಂದು ಹೊರಬಂದು ಯುವಕನ ರೂಪವನ್ನು ಪಡೆದು, ಕೃಷ್ಣನಿಗೆ ನಮಸ್ಕರಿಸಿತು. ಬಹಳ ಕಾಲದ ಹಿಂದೆ ಸುಂದರ ಯುವಕನಾಗಿದ್ದ ಅಘಾಸುರನು ಸರ್ಪವಾದದ್ದು ಹೇಗೆ ಮತ್ತು ದೀರ್ಘಕಾಲದ ನಂತರ ಶ್ರೀಕೃಷ್ಣನ ಪಾದಸ್ಪರ್ಶದಿಂದ ಶಾಪ ವಿಮೋಚನೆಗೊಂಡ ಸಂಪೂರ್ಣ ವೃತ್ತಾಂತವನ್ನು ತಿಳಿಸಿದನು.

ಒಮ್ಮೆ ಅಘಾಸುರನು, ಅರಣ್ಯದಲ್ಲಿ ಋಷಿಗಳ ಆಶ್ರಮದ ಬಳಿ ನಡೆದುಕೊಂಡು ಹೋಗುತ್ತಿದ್ದ ಮಹರ್ಷಿ ಅಷ್ಟಾವಕ್ರರನ್ನು ನೋಡಿದನು. ಹುಟ್ಟಿನಿಂದಲೇ ಅಂಗವಿಕಲರು, ದುರ್ಬಲ ಶರೀರವುಳ್ಳವರಾಗಿದ್ದ ಮಹರ್ಷಿ ಅಷ್ಟಾವಕ್ರರ ನಡಿಗೆಯ ಶೈಲಿಯನ್ನು ನೋಡಿದ ಅಘಾಸುರನು ಅವರನ್ನು ಅಪಹಾಸ್ಯ ಮಾಡತೊಡಗಿದನು. ಅವರ ಬಳಿ ಬಂದು ಅವರ ನಡಿಗೆಯ ಭಂಗಿಯನ್ನೂ, ಅವರ ಅಂಗವೈಕಲ್ಯವನ್ನೂ ಪರಿ-ಪರಿಯಾಗಿ ಅಪಹಾಸ್ಯ ಮಾಡುತ್ತ ಅವರನ್ನು ಅಣಕಿಸಿದನು. ಇದರಿಂದ ಕೋಪಗೊಂಡ ಮಹರ್ಷಿ ಅಷ್ಟಾವಕ್ರರು, ಅಘಾಸುರನನ್ನು ಸರ್ಪವಾಗುವಂತೆ ಶಪಿಸಿದರು.

ಆಗ ತನ್ನ ತಪ್ಪಿನ ಅರಿವಾಗಿ ಅವರ ಬಳಿ ಕ್ಷಮೆಯಾಚಿಸಿ ಶಾಪಮುಕ್ತಗೊಳಿಸುವಂತೆ ಬೇಡಿಕೊಂಡನು. ಆಗ ಮಹರ್ಷಿ ಅಷ್ಟಾವಕ್ರರು ಹೇಳಿದ ಮಾತಿದು- ‘ದುರ್ಬಲರು, ಅಂಗವಿಕಲರು, ಅಸಹಾಯಕರನ್ನು ಅಣಕಿಸುವುದು ಸಣ್ಣ ತಪ್ಪಲ್ಲ, ಬದಲಾಗಿ ಅದು ಗಂಭೀರವಾದ ಅಪರಾಧ. ಈ ಜಗತ್ತು ಭಗವಂತನ ಇಚ್ಛೆಯಂತೆ ಸೃಷ್ಟಿಯಾಗಿದ್ದು, ಇಲ್ಲಿ ಸಕಲ ಜೀವಾತ್ಮಗಳಿಗೂ ಅವರವರ ಕರ್ವನುಸಾರ ಶರೀರವು ಪ್ರಾಪ್ತವಾಗುತ್ತದೆ. ಅದರಲ್ಲಿ ಕೆಲವರು ಸುಂದರವಾದ ಶರೀರವನ್ನು ಪಡೆದುಕೊಂಡರೆ, ಇನ್ನು ಕೆಲವರು ದುರ್ಬಲರು. ಒಂದು ವೇಳೆ ದೀನದುರ್ಬಲರನ್ನು ಅಪಹಾಸ್ಯ ಮಾಡಿದರೆ, ಅವರ ಅಂತರಾತ್ಮಕ್ಕೆ ಉಂಟಾಗುವ ವೇದನೆಯು ಕರ್ಮಸಿದ್ಧಾಂತಕ್ಕೆ ಅನುಗುಣವಾಗಿ ಹಾಗೆ ಮಾಡಿದವರಿಗೆ ತಟ್ಟಿಯೇ ತಟ್ಟುತ್ತದೆ’. ಆದ್ದರಿಂದ ಅದೆಲ್ಲವೂ ದೈವಸಂಕಲ್ಪವೆಂದು ತಿಳಿದು, ಅಂಥವರ ಅವಹೇಳನ ಮಾಡದೆ ಗೌರವದಿಂದ ಕಾಣಬೇಕು. (ಲೇಖಕರು ಸಾಫ್ಟ್​ವೇರ್ ಇಂಜಿನಿಯರ್, ಹವ್ಯಾಸಿ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net