

ಒಂದು ಬಾರಿ ಪ್ರಾಣಿಗಳೆಲ್ಲ ಸಭೆ ಸೇರಿ ಮನುಷ್ಯರು ತಮ್ಮ ಪದಾರ್ಥಗಳನ್ನು ಕಿತ್ತುಕೊಳ್ಳುವ ಬಗೆಯನ್ನು ರ್ಚಚಿಸತೊಡಗಿದವು. ಹಸು ‘ಅವರು ನನ್ನ ಹಾಲು ತೆಗೆದುಕೊಳ್ಳುತ್ತಾರೆ’ ಎಂದರೆ, ‘ಅವರು ನನ್ನ ಮೊಟ್ಟೆಗಳನ್ನು ತಿಂದು ತೇಗುತ್ತಾರೆ’ ಎಂದಿತು ಕೋಳಿ. ‘ಮನುಷ್ಯರು ನಮ್ಮ ಮಾಂಸವನ್ನು ತಮ್ಮ ಆಹಾರವನ್ನಾಗಿ ಮಾಡಿಕೊಳ್ಳುತ್ತಾರೆ’ ಎಂಬ ಆಪಾದನೆ ಆಡು, ಕುರಿ, ಹಂದಿ, ಮುಂತಾದ ಪ್ರಾಣಿಗಳಿಂದ ಕೇಳಿಬಂತು. ಹೀಗೆ ಚರ್ಚೆ, ಆರೋಪಗಳು ಮುಂದುವರಿಯುತ್ತಲೇ ಇತ್ತು. ಕೊನೆಯಲ್ಲಿ ಬಸವನಹುಳು ಮಾತನಾಡಿತು- ‘ನನ್ನಲ್ಲಿ ಏನೋ ಒಂದು ಮಹತ್ವದ ಅಂಶವಿದೆ. ಅವರಿಗೆ ಸಾಧ್ಯವಾದರೆ ಖಂಡಿತ ನನ್ನಿಂದ ತೆಗೆದುಕೊಳ್ಳುತ್ತಾರೆ. ಅದು ಎಲ್ಲದ್ದಕ್ಕಿಂತಲೂ ಮನುಷ್ಯರಿಗೆ ಹೆಚ್ಚು ಅವಶ್ಯಕವಾದದ್ದು- ನನ್ನಲ್ಲಿ ಸಮಯವಿದೆ. ಆದರೆ ಕೆಲವೇ ಜನರು ಅದನ್ನು ನನ್ನಿಂದ ಪಡೆದುಕೊಳ್ಳುತ್ತಾರೆ. ಬಹಳಷ್ಟು ಜನರಿಗೆ ಅದರ ಮಹತ್ವದ ಕುರಿತು ಅರಿವಿಲ್ಲದ ಕಾರಣ ಅವರೆಲ್ಲ ಬದುಕನ್ನು ವ್ಯರ್ಥಗೊಳಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ನಮಗಾಗಿಯೇ ಸಮಯವನ್ನು ಸದುಪಯೋಗ ಪಡಿಸಿಕೊಳ್ಳುವುದನ್ನು ಅವರು ನನ್ನಿಂದ ಕಲಿಯುತ್ತಲೇ ಇಲ್ಲ’ ಎಂದಿತು.
ಹೌದು, ನಮ್ಮಲ್ಲಿರುವ ಸೋಮಾರಿತನ, ಅಸಂಗತ ನಿಲುವು, ನಂಬಿಕೆಗಳು ಕಾಲವಿಳಂಬ ಮಾಡಲು ಪ್ರೇರೇಪಿಸುತ್ತವೆ. ಜೀವನದಲ್ಲಿ ಬರುವ ಚಿಕ್ಕಪುಟ್ಟ ಸಮಸ್ಯೆಗಳ ಪರಿಹಾರ, ಪ್ರತಿದಿನದ ತಾತ್ಕಾಲಿಕ ಅಗತ್ಯಗಳ ಪೂರೈಕೆಯಲ್ಲೇ ನಿರತರಾಗಿ ಕನಸುಗಳನ್ನು ಸಾಕಾರಗೊಳಿಸುವಲ್ಲಿ ವಿಫಲರಾಗುತ್ತೇವೆ. ಒಂದೊಂದು ವಯಸ್ಸಿನಲ್ಲಿ ನಮಗೆ ಒಂದೊಂದು ವಿಶಿಷ್ಟವಾದ ಶಕ್ತಿ ಇರುತ್ತದೆ. ಕಾಲ ಬದಲಾದಂತೆ ಅದು ಕೂಡ ಬದಲಾಗುತ್ತದೆ. ಪ್ರಾಪ್ತರಾದವರು ಶಿಕ್ಷಣಕ್ಕೆ ಸಮಾನಾಂತರದಲ್ಲಿ ಸುತ್ತಲಿನ ಪ್ರಪಂಚವನ್ನು ಅರಿತುಕೊಳ್ಳುವ, ಬದುಕನ್ನು ರೂಪಿಸಿಕೊಳ್ಳುವ, ಸಮಾಜದ ಆಸ್ತಿಯಾಗುವ ದಿಸೆಯಲ್ಲಿ ಮುನ್ನಡೆಯಬೇಕು. ಬದುಕಿನ ವಿವಿಧ ಮಜಲುಗಳಲ್ಲಿ ನಮಗಿರುವ ಸಮಯವನ್ನು ಅನಗತ್ಯ ವಿಷಯಗಳಲ್ಲಿ ವಿನಿಯೋಗಿಸಿ, ವ್ಯರ್ಥಮಾಡಿದರೆ ಬದುಕಿನ ಮುಂದಿನ ಹಂತಗಳಲ್ಲಿ ಅದರಿಂದ ಯಾವುದೇ ಪ್ರಯೋಜನವಾಗದು. ಕಳೆದುಹೋದ ಸಮಯ ಆಳವಾದ ವಿಷಾದವನ್ನು ಮಾತ್ರ ಉಳಿಸಿ ಹೋಗುತ್ತದೆ. ಸುಖಾಸುಮ್ಮನೆ ಯಾವುದೋ ಭ್ರಾಂತಿಗಳ ಸುಳಿಗಳಲ್ಲಿ ಸಿಲುಕಿ, ನಮಗಾಗಿ ನೀಡಬೇಕಾದ ಸಮಯವನ್ನು ನೀಡದೇ ಹೋದರೆ ಅತ್ಯಮೂಲ್ಯವಾದ ಮಾನವ ಸಂಪನ್ಮೂಲದ ಸೋರಿಕೆಯಾಗಿ ಬದುಕು ವ್ಯರ್ಥವಾಗುತ್ತದೆ. ಪಶ್ಚಾತಾಪಕ್ಕೆ ಕಾರಣವಾಗುತ್ತದೆ. ನಮಗಾಗಿ ಸಮಯವನ್ನು ಹೆಚ್ಚು ಸಮರ್ಥವಾಗಿ, ಸಾರ್ಥಕವಾಗಿ ವಿನಿಯೋಗಿಸಲು ಮನಸ್ಸನ್ನು ಸಿದ್ಧಗೊಳಿಸಬೇಕು.
ಬದುಕು ಒಂದು ಒರತೆಯಿದ್ದಂತೆ. ನಿರ್ದಿಷ್ಟ ಸಮಯದಲ್ಲಿ ಮಾತ್ರವೇ ಉತ್ಕೃಷ್ಟ ನೀರು ದೊರಕುತ್ತದೆ. ಮತ್ತೆ ಬಹಳಷ್ಟು ಬಾರಿ ಅದು ಸಾಧ್ಯವಾಗದೇ ಹೋಗುತ್ತದೆ ಎಂಬ ಅರಿವು ಅಗತ್ಯ. ‘ಮಾನವ ಜನ್ಮ ದೊಡ್ಡದು ಅದನ್ನು ಹಾಳು ಮಾಡಲು ಬೇಡಿ ಹುಚ್ಚಪ್ಪಗಳಿರಾ’ ಎಂಬ ದಾಸರ ಮಾತಿನಂತೆ ಕಾಲದ ಅಗತ್ಯ ಮತ್ತು ಅದರ ಮಹತ್ವವನ್ನು ಅರಿತುಕೊಂಡು ಸಮಯವನ್ನು ಶ್ರದ್ಧೆಯಿಂದ ಉಪಯೋಗಿಸಿಕೊಳ್ಳುವ, ಅದನ್ನು ಪ್ರಗತಿಗಾಗಿ ದುಡಿಸಿಕೊಳ್ಳುವ ಪ್ರವೃತ್ತಿಯನ್ನು ನಮ್ಮದಾಗಿಸಿಕೊಂಡರೆ ಬದುಕು ಸಾರ್ಥಕತೆಯ ದಡ ಸೇರುತ್ತದೆ.
(ಲೇಖಕರು ಅಧ್ಯಾಪಕರು, ಹವ್ಯಾಸಿ ಬರಹಗಾರರು)