

| ಎಂ.ಆರ್.ವೆಂಕಟರಾಮಯ್ಯ
ತನ್ನ ದಿಗ್ವಿಜಯದ ಕಾರ್ಯಕ್ರಮ ಮುಂದುವರಿಸುತ್ತ ರಾಮಸೇತುವೆಯ ಬಳಿಗೆ ಬಂದ ಅರ್ಜುನನಿಗೆ, ಜೊತೆಯಲ್ಲಿದ್ದವರು, ‘ಆ ಯುಗದಲ್ಲಿ ಶ್ರೀರಾಮನು ಲಂಕೆಗೆ ಪಯಣಿಸಲು ಕಪಿವೀರರ ನೆರವಿನಿಂದ ಕಟ್ಟಿಸಿದ ಸೇತುವೆ ಇದು’ ಎಂದು ತೋರಿಸಿದರಂತೆ. ‘ಹೌದೇ!’ ಎಂದು ಅಚ್ಚರಿ ಸೂಚಿಸಿದ ಅರ್ಜುನ, ‘ನನ್ನ ಬಳಿಯಿದ್ದ ಅಕ್ಷಯವಾದ ಬತ್ತಳಿಕೆ ಬಳಸಿ ಬಾಣಗಳಿಂದಲೇ ರಾಮನು ಸೇತುವೆಯನ್ನು ನಿರ್ವಿುಸಬಹುದಾಗಿತ್ತು. ಅದನ್ನು ಬಿಟ್ಟು ಈ ಪುಟ್ಟ ಕೆಲಸಕ್ಕಾಗಿ ಕಪಿಸೇನೆ ನೆರವು ಬೇಕಾಯಿತೇ! ಇಂಥ ರಾಮನನ್ನು ಕೋದಂಡರಾಮ ಎಂದು ಕರೆಯುವುದರಲ್ಲಿ ಏನಾದರೂ ಅರ್ಥವಿದೆಯೇ?’ ಎಂದು ಗಹಗಹಿಸಿ ನಕ್ಕ. ಅಷ್ಟೇ ಅಲ್ಲ, ‘ಆ ಸಮಯದಲ್ಲಿ ಅಲ್ಲಿ ನಾನಿದ್ದಿದ್ದರೆ ಒಂದೇ ಕ್ಷಣದಲ್ಲಿ ಶರಸೇತುವೆಯನ್ನೇ ನಿರ್ವಿುಸಿಕೊಡುತ್ತಿದ್ದೆ’ ಎಂದ. ತನ್ನ ಭುಜಬಲ, ಶಸ್ತ್ರಾಸ್ತ್ರ ಬಲವನ್ನು ಹೊಗಳಿ, ಶ್ರೀರಾಮನ ಸಾಮರ್ಥ್ಯವನ್ನೂ ತೆಗಳಿದ.
ಈ ಮಾತುಗಳನ್ನು ಕೇಳಿಸಿಕೊಂಡ ಆಂಜನೇಯ ಅಲ್ಲಿ ಪ್ರತ್ಯಕ್ಷನಾದ. ‘ಅರ್ಜುನ, ನನ್ನ ಪ್ರಭು ಶ್ರೀರಾಮಚಂದ್ರ ಸ್ವಾಮಿಯ ದೂಷಣೆ ಸರಿಯಲ್ಲ. ನೀನೊಬ್ಬ ಮಹಾವೀರ ಎಂಬ ದುರಭಿಮಾನದ ಮಾತುಗಳನ್ನಾಡಬೇಡ. ಈಗ ನಿನ್ನ ಬಾಣಗಳಿಂದ ಸೇತುವೆಯನ್ನು ಕಟ್ಟು. ಅದು ಎಷ್ಟು ಗಟ್ಟಿಯಾಗಿರುತ್ತದೆ ಎಂಬುದನ್ನು ಈಗಲೇ ನಿನಗೆ ತೋರಿಸಿಕೊಡುತ್ತೇನೆ’ ಎಂಬ ಸವಾಲು ಹಾಕಿದ. ಅರ್ಜುನನು ಕೂಡಲೇ ಬಾಣಗಳಿಂದ ಶರಸೇತುವೆಯನ್ನು ಕಟ್ಟಿದ.
ಆಂಜನೇಯನು ಅದರ ಮೇಲೆ ಪಾದವೂರಿ ನಡೆದ ಕೂಡಲೇ ಸೇತುವೆ ಮುರಿದುಬಿತ್ತು. ಅರ್ಜುನನಿಗೆ ಮುಖಭಂಗವಾಯಿತು.
ಈ ಅವಮಾನ ಸಹಿಸಲಾರದೆ ಅರ್ಜುನ ‘ಕೃಷ್ಣಾ ನನ್ನ ಮರ್ಯಾದೆ ಕಾಪಾಡು’ ಎಂದ ಮೊರೆಯಿಟ್ಟ. ಭಕ್ತರಕ್ಷಕ ಎನಿಸಿಕೊಂಡ ಸ್ವಾಮಿಯು ಏಕಕಾಲದಲ್ಲಿ, ಅರ್ಜುನನಿಗೆ ಶ್ರೀಕೃಷ್ಣನಾಗಿ, ಹನುಮಂತನಿಗೆ ಶ್ರೀರಾಮನಾಗಿ ದರ್ಶನವಿತ್ತ. ‘ಕೃಷ್ಣಾ’ ಎನ್ನುತ್ತ ಅರ್ಜುನ, ‘ಶ್ರೀರಾಮಚಂದ್ರ ಪ್ರಭೋ’ ಎನ್ನುತ್ತ ಹನುಮಂತ ಸಾಷ್ಟಾಂಗ ಪ್ರಣಾಮ ಮಾಡಿದರು.
ತನ್ನ ವಿಶ್ವರೂಪ ದರ್ಶನವಿತ್ತ ಸ್ವಾಮಿಯು ಅರ್ಜುನನನ್ನು ಕುರಿತು- ‘ಶ್ರೀರಾಮನನ್ನು ನಿಂದಿಸಿ ನೀ ಮಾತನಾಡಿದೆ. ನಿನ್ನ ಬಲ, ಪರಾಕ್ರಮಗಳ ಕುರಿತು ಆತ್ಮಸ್ತುತಿ ಮಾಡಿಕೊಂಡೆ. ನಿನ್ನೀ ಮನಸ್ಥಿತಿಯ ಕಾರಣದಿಂದಲೇ ಆಂಜನೇಯನಿಂದ ನಿನಗೆ ಮುಖಭಂಗವಾಯಿತು. ಇದಕ್ಕೆ ಪರಿಹಾರವೆಂದರೆ ನಿನ್ನಲ್ಲಿರುವ ‘ನಾನು, ನನ್ನದು, ನನಗೇ, ನನ್ನಿಂದಲೇ’ ಇತ್ಯಾದಿ ಸ್ವಾರ್ಥಪೂರಿತ ಅಹಂಕಾರ, ದುರಭಿಮಾನವನ್ನು ನಿನ್ನಿಂದ ದೂರೀಕರಿಸಬೇಕು. ನಿನ್ನ ಬಗ್ಗೆ ಹೊಂದಿರುವ ಅಭಿಮಾನ, ಸ್ವಾಭಿಮಾನ ದುರಭಿಮಾನವಾಗಬಾರದು. ಅಹಂಕಾರ, ರಾಗ, ದ್ವೇಷಗಳೇ ನಮ್ಮೊಳಗಿರುವ ಶತ್ರುಗಳು. ಈ ಅಂತಃಶತ್ರುಗಳನ್ನು ಮೊದಲು ನಾವು ಹೊರಗೋಡಿಸಬೇಕು. ಇದಕ್ಕಾಗಿ ಬುದ್ಧಿ, ಜ್ಞಾನ, ವಿನಯ, ವಿವೇಕಗಳನ್ನು ಗಳಿಸಿ ಬೆಳೆಸಿಕೊಂಡರೆ ನಮ್ಮೊಳಗೆ, ಹೊರಗೆ ಶತ್ರುಗಳೇ ಇಲ್ಲದೆ ನಾವು ಅಜಾತಶತ್ರುಗಳಾಗುತ್ತೇವೆ’ ಎಂಬ ನೀತಿಪಾಠ ಭೋದಿಸಿ ಅಂತರ್ಧಾನನಾದ.
ಇದೊಂದು ಪುರಾಣ ಪ್ರಸಂಗವಾದರೂ ಮೇಲಿನ ಸಾಲುಗಳಲ್ಲಿರುವ ನೀತಿ ಸರ್ವಕಾಲಗಳಲ್ಲೂ ಪ್ರಸ್ತುತವಾಗಿದ್ದು, ಸರ್ವರಿಗೂ ಸಕಾಲಿಕ ಮಾರ್ಗದರ್ಶನ ಮಾಡಿದೆ. ಆದ್ದರಿಂದ ನಮ್ಮೊಳಗೆ ಅಡಗಿರುವ ಶತ್ರುಗಳಾದ ಅಹಂಕಾರ, ದುರಭಿಮಾನವನ್ನು ತ್ಯಜಿಸೋಣ. ಸರಳ, ಸುಂದರ ವ್ಯಕ್ತಿತ್ವ ರೂಪಿಸಿಕೊಳ್ಳೋಣ.
(ಲೇಖಕರು ಹವ್ಯಾಸಿ ಬರಹಗಾರರು)
(ಪ್ರತಿಕ್ರಿಯಿಸಿ: manollasavv@gmail.com)