ಮನುಕುಲದ ಉಳಿವಿಗಾಗಿ ಪ್ರಾರ್ಥಿಸೋಣ: ಜನಮತ

Janamatha1-6
Published on

ಕರೊನಾ ಕಾರ್ವೇಡ ದೇಶದಲ್ಲಿ ದಿನೇದಿನೇ ತೀವ್ರಗತಿಯಲ್ಲಿ ಸಾಗುತ್ತಿದೆ. ಇದನ್ನು ತಡೆಗಟ್ಟಲು ಸರ್ಕಾರಗಳು ನಾನಾ ಸುರಕ್ಷಾ ಅಸ್ತ್ರಗಳನ್ನು ಪ್ರಯೋಗಿಸುತ್ತ, ಜನರಿಗೆ ಮನೆಯಲ್ಲೇ ಇರಲು ಕೈಮುಗಿದು ಕೇಳಿಕೊಳ್ಳುತ್ತಿವೆ. ಕರೊನಾ ವಾರಿಯರ್ಸ್​ಗಳಂತೂ ಸುರಕ್ಷತಾ ನಿಯಮಗಳನ್ನು ಪದೇಪದೆ ಜನರಿಗೆ ತಿಳಿಹೇಳುತ್ತಿದ್ದಾರೆ. ಆದರೂ ಕೆಲವು ಜನರು ಕರೊನಾವನ್ನು ಗಂಭೀರವಾಗಿ ಪರಿಗಣಿಸದೆ, ಅಲ್ಲಿ ಇಲ್ಲಿ ವಿನಾಕಾರಣ ಓಡಾಟ ಮಾಡುವುದನ್ನು ನಿಲ್ಲಿಸಿಲ್ಲ. ಇದೊಂದು ಖೇದಕರ ಸಂಗತಿಯೇ ಸರಿ.

ಕಳೆದ ವರ್ಷದ ಮೊದಲ ಅಲೆಯಲ್ಲಿಯೇ ನಾವು ಪಾಠ ಕಲಿಯಬೇಕಿತ್ತು. ಮೊದಲ ಅಲೆ ಕೊಂಚ ಪ್ರಖರತೆ ಕಳೆದುಕೊಂಡಿತು ಎಂದೆನ್ನುವಷ್ಟರಲ್ಲಿ ಬಹಳ ಅಜಾಗರೂಕತೆಯಿಂದ ವರ್ತಿಸಿಬಿಟ್ಟೆವು. ಅದರ ಫಲಶ್ರುತಿ ಎಂಬಂತೆ, ಕರೊನಾದ ಎರಡನೆಯ ಅಲೆಯಲ್ಲಿ ಅಪಾರ ಸಾವು-ನೋವುಗಳನ್ನು ಅನುಭವಿಸುತ್ತಿದ್ದೇವೆ. ವೈದ್ಯಕೀಯ ಆಮ್ಲಜನಕಕ್ಕೆ ಪರದಾಡುವ ಸ್ಥಿತಿಗೆ ಬಂದು ತಲುಪಿದ್ದೇವೆ. ಕರೊನಾ ಎಂಬ ಮಹಾಮಾರಿಗೆ ಜಾತಿ, ಕುಲ, ಬಡವ, ಬಲ್ಲಿದನೆಂಬ ಭೇದವಿಲ್ಲ. ಕೈಯಲ್ಲಿ ಹಣವಿದ್ದರೂ ಚಿಕಿತ್ಸೆ ಕೊಡಿಸಲಾಗದೆ ನರಳುವ ರೋಗಿಗಳು ಒಂದೆಡೆಯಾದರೆ, ಆರ್ಥಿಕ ಸಂಕಷ್ಟದಲ್ಲಿಯೂ ದುಡಿಮೆಯ ಆಧಾರಸ್ತಂಭವಾದ ಜೀವವನ್ನು ಉಳಿಸಿಕೊಳ್ಳಲು ಪರದಾಡುವ ಜನಸಾಮಾನ್ಯರು ಮತ್ತೊಂದೆಡೆ.

ಬದುಕು ದುಸ್ತರವಾಗಿರುವ ಕರೊನಾದ ಈ ಕಾಲಘಟ್ಟದಲ್ಲಿ ನಮ್ಮನ್ನು ಬೇರೆಯವರು ರಕ್ಷಿಸುತ್ತಾರೆ ಎಂಬ ಅವಿವೇಕದ ಯೋಚನೆಯನ್ನು ಬಿಟ್ಟು, ನಮ್ಮ ಸ್ವ-ರಕ್ಷಣೆಗೆ ಮನೆಯಲ್ಲಿಯೇ ಇದ್ದು ಕರೊನಾದ ಕೊಂಡಿಯನ್ನು ಮುರಿಯಬೇಕಿದೆ. ಈ ಮೂಲಕ ಸ್ವಸ್ಥ ಸಮಾಜದ ನಿರ್ವಣಕ್ಕೆ ನಮ್ಮ ಕಿರುಕಾಣಿಕೆ ನೀಡಬೇಕಿದೆ. ಅಲ್ಲದೆ, ಮನುಕುಲದ ಉಳಿವಿಗಾಗಿ ಮತ್ತು ಒಳಿತಿಗಾಗಿ ಪ್ರಾರ್ಥಿಸೋಣ.

| ಸುಶೀಲಾ.ಎಸ್.ಭಟ್ಟ ಕಮಲಶಿಲೆ, ಕುಂದಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net