ಈ ದೀಪಾವಳಿಯಲ್ಲಿ ಅಭ್ಯಂಗ ಸ್ನಾನ ತಪ್ಪಿಸದಿರೋಣ

Abhyanga
Published on
ವೃದ್ಧಾಪ್ಯಕ್ಕಾಗಿ ನಾವು ಮನೆ ಕಟ್ಟಿಸುವುದು, ಹಣ ಕೂಡಿಡುವುದು ಮುಂತಾದ ಎಷ್ಟೋ ಕೆಲಸಗಳನ್ನು ಮಾಡುತ್ತೇವೆ. ಆದರೆ ಆರೋಗ್ಯಕ್ಕಾಗಿ ಮಾಡಬೇಕಾದ ಒಂದು ವಿಶೇಷ ಕೆಲಸವಿದೆ. ಅದೇ ಅಭ್ಯಂಗ. ದೀಪಾವಳಿಯ ಈ ಸಂದರ್ಭದಲ್ಲಿ ಈ ಕುರಿತು ತಿಳಿದುಕೊಳ್ಳೋಣ. ನಿತ್ಯವೂ ಅಭ್ಯಂಗ ಅಂದರೆ ಎಣ್ಣೆಯ ಮಸಾಜ್ ಮಾಡಿಕೊಂಡರೆ ವೃದ್ಧಾಪ್ಯವು ಕಷ್ಟದಾಯಕವಾಗಿರಲು ಸಾಧ್ಯವಿಲ್ಲ. ಯಾರು ನಿತ್ಯವೂ ಎಣ್ಣೆಯ ಮಸಾಜನ್ನು ಮಾಡಿಕೊಳ್ಳುತ್ತಾರೋ ಅಂಥವರಿಗೆ ವಾತ ರೋಗಗಳು- ಅಂದರೆ ವಯಸ್ಸಾದ ನಂತರ ಸಾಮಾನ್ಯವಾಗಿ ಕಾಡುವ ಮಂಡಿ ನೋವು, ಸೊಂಟ ನೋವು, ರ್ಪಾನ್ಸನ್, ಚರ್ಮ ಒಣಗುವುದು ಮುಂತಾದ ಸಮಸ್ಯೆಗಳು - ಬರುವುದಿಲ್ಲ. ದೈಹಿಕ ಶಕ್ತಿ ಹೆಚ್ಚುವುದರಿಂದ ಬೇಗ ಸುಸ್ತಾಗುವುದಿಲ್ಲ. ನಿದ್ರೆಯ ಗುಣಮಟ್ಟ ಹೆಚ್ಚಲು ಮತ್ತು ಸುಖ ನಿದ್ರೆ ಬರಲು ಅಭ್ಯಂಗ ತುಂಬಾ ಸಹಕಾರಿ.

ಆಯುರ್ವೆದ ಗ್ರಂಥಗಳಲ್ಲಿ ಮುಪ್ಪನ್ನು ದೂರಮಾಡುವ ಶಕ್ತಿ ಅಭ್ಯಂಗಕ್ಕಿದೆ ಎಂದು ಹೇಳಿದ್ದಾರೆ. ನಮ್ಮ ಸಂಧಿಗಳಿಗೆ ಶಕ್ತಿ ಕೊಟ್ಟು ಸವಕಳಿಯಾಗುವುದನ್ನು ಇದು ತಡೆಯುತ್ತದೆ. ಹಲವು ರೀತಿಯ ಚರ್ಮದ ಸಮಸ್ಯೆಗಳನ್ನು ಬರದಂತೆ ತಡೆಯುವ ಶಕ್ತಿ ಈ ಅಭ್ಯಂಗಕ್ಕೆ ಇದೆ. ವಯಸ್ಸಾಗುತ್ತಾ ಹೋದಂತೆ ಚರ್ಮ ಸುಕ್ಕುಗಟ್ಟುವುದು, ಕಪ್ಪಾಗುವುದು ಅಥವಾ ಕಳಾಹೀನ ಆಗುವುದನ್ನು ಈ ಎಣ್ಣೆಯ ಮಸಾಜ್ ತಡೆಯುತ್ತದೆ. ವಿವಿಧ ರೀತಿಯ ನೋವುಗಳು ಬರದಂತೆ ತಡೆಯುವುದೊಂದೇ ಅಲ್ಲ, ಆಗಲೇ ಮಂಡಿ ನೋವು, ಸೊಂಟ ನೋವಿನಂತಹ ಸಮಸ್ಯೆಗಳು ಬಂದಿದ್ದರೆ ಅದನ್ನು ದೂರ ಮಾಡುತ್ತದೆ ಅಥವಾ ಹೆಚ್ಚಾಗದಂತೆ ನೋಡಿಕೊಳ್ಳುತ್ತದೆ. ಮಳೆಗಾಲ ಮತ್ತು ಚಳಿಗಾಲದಲ್ಲಿ ಉಷ್ಣಗುಣವನ್ನು ಹೊಂದಿರುವ ಎಳ್ಳೆಣ್ಣೆಯನ್ನು, ಬೇಸಿಗೆಯಲ್ಲಿ ತಂಪು ಗುಣ ಹೊಂದಿರುವ ಕೊಬ್ಬರಿ ಎಣ್ಣೆಯನ್ನು ಬಳಸಿ ಮಸಾಜ್ ಮಾಡಿಕೊಳ್ಳಬಹುದು. ಇವುಗಳ ಹೊರತಾಗಿ ಸಾಸಿವೆ ಎಣ್ಣೆ, ಕುಸುಬೆ ಎಣ್ಣೆ, ತುಪ್ಪ ಅಥವಾ ಹರಳೆಣ್ಣೆಗಳನ್ನು ಕೂಡಾ ಸಮಸ್ಯೆ, ಕಾಲ ಮತ್ತು ದೇಹ ಪ್ರಕೃತಿಗೆ ಅನುಗುಣವಾಗಿ ವೈದ್ಯರ ಸಲಹೆ ಮೇರೆಗೆ ಬಳಕೆ ಮಾಡಬಹುದು.

ವಿದಾನ ಹೇಗೆ?: ಒಂದು ಚಿಕ್ಕ ಬೌಲಿನಲ್ಲಿ ಸ್ವಲ್ಪ ಎಣ್ಣೆ ತೆಗೆದುಕೊಂಡು ಅದನ್ನು ನೀರು ಇರುವ ಅದಕ್ಕಿಂತ ದೊಡ್ಡ ಪಾತ್ರೆಯಲ್ಲಿ ಇಟ್ಟು ಬೆಂಕಿಯ ಮೇಲೆ ಕಾಯಿಸಬೇಕು. ಹೀಗೆ ಬಿಸಿ ನೀರಿನಿಂದ ಬಿಸಿಯಾದ ಬೆಚ್ಚನೆಯ ಎಣ್ಣೆಯನ್ನು ಬಳಸಿ ಮಸಾಜ್ ಮಾಡಿಕೊಳ್ಳಬೇಕು. ಇದರಿಂದಾಗಿ ಆ ಎಣ್ಣೆಯು ತನ್ನ ಕುದಿಯುವ ಬಿಂದುವನ್ನು ಮುಟ್ಟುವುದಿಲ್ಲ; ಹಾಗಾಗಿ ಎಣ್ಣೆ ಹಾಳಾಗುವ ಸಾಧ್ಯತೆ ಇರುವುದಿಲ್ಲ. ತಲೆಗೆ ತುಂಬಾ ಬಿಸಿ ಇರುವ ಎಣ್ಣೆಯಿಂದ ಮಸಾಜ್ ಮಾಡಿಕೊಳ್ಳುವುದು ಸೂಕ್ತವಲ್ಲ. ಬದಲಿಗೆ ಉಗುರು ಬೆಚ್ಚಗಿನ ಎಣ್ಣೆಯನ್ನು ಬಳಸುವುದು ಒಳ್ಳೆಯದು. ಪ್ರತಿಯೊಂದು ಭಾಗಕ್ಕೂ ಎರಡರಿಂದ ಐದು ನಿಮಿಷಗಳವರೆಗೆ ಎಣ್ಣೆಯ ಮಸಾಜ್ ಅನ್ನು ಮಾಡಿಕೊಂಡರೆ ಒಳ್ಳೆಯ ಫಲಿತಾಂಶವನ್ನು ಪಡೆಯಲು ಸಾಧ್ಯ. ಒಟ್ಟಿನಲ್ಲಿ ಇಡೀ ದೇಹಕ್ಕೆ ಕನಿಷ್ಠ 15 ರಿಂದ 30 ನಿಮಿಷಗಳ ಕಾಲ ಮಸಾಜ್ ಮಾಡಿಕೊಳ್ಳಲೇಬೇಕು ಎಂದು ಆಯುರ್ವೆದ ಹೇಳುತ್ತದೆ.

ಆಯುರ್ವೆದದಲ್ಲಿ ಎಣ್ಣೆಯ ಮಸಾಜ್ ಅನ್ನು ದಿನಚರಿಯಲ್ಲಿ ಅಂದರೆ ನಿತ್ಯವೂ ಮಾಡಬೇಕು ಎಂದು ಹೇಳಿದ್ದಾರೆ. ವಿಶೇಷವಾಗಿ ಚಳಿಗಾಲದಲ್ಲಿ ಮಾಡಿಕೊಳ್ಳಲೇಬೇಕು. ಅದೇ ಕಾರಣಕ್ಕಾಗಿಯೇ ದೀಪಾವಳಿಯ ದಿನ ಎಣ್ಣೆಯ ಮಸಾಜ್ ಮಾಡಿಕೊಳ್ಳುವ ಸಂಪ್ರದಾಯ ಬಂದಿದೆ. ಇದು ಮಸಾಜ್ ಮಾಡಿಕೊಳ್ಳಲೇಬೇಕು ಎಂಬುದನ್ನು ನಮಗೆ ನೆನಪಿಸಲು ಇರುವ ಒಂದು ಪದ್ಧತಿ. ಒಂದು ವೇಳೆ ಇಡೀ ದೇಹಕ್ಕೆ ಮಸಾಜ್ ಮಾಡಿಕೊಳ್ಳಲು ಸಾಧ್ಯವಾಗದೇ ಹೋದರೆ ಕನಿಷ್ಠ ಪಕ್ಷ ನೆತ್ತಿ ಮತ್ತು ಪಾದಗಳಿಗಾದರೂ ನಿತ್ಯವೂ ಎಣ್ಣೆಯನ್ನು ಹಚ್ಚಿಕೊಳ್ಳುವ ರೂಢಿಯನ್ನು ನಾವು ಬೆಳೆಸಿಕೊಳ್ಳಲೇಬೇಕು. ನಿತ್ಯವೂ ಎಣ್ಣೆಯ ಮಸಾಜ್ ಮಾಡಿಕೊಳ್ಳುವುದನ್ನು ರೂಢಿ ಮಾಡಿಕೊಂಡರೆ ನಮ್ಮ ಆರೋಗ್ಯ ಚೆನ್ನಾಗಿರುವುದಲ್ಲದೆ ವೃದ್ಧಾಪ್ಯ ದೂರವಾಗಿ ಎಷ್ಟೋ ಕಾಯಿಲೆಗಳು ಬರುವುದನ್ನು ತಡೆಯಬಹುದು. ಆದರೆ ಕಫ, ಕೆಮ್ಮು, ನೆಗಡಿ, ವಾಂತಿ, ಭೇದಿ, ಅಜೀರ್ಣದಂತಹ ತೊಂದರೆಗಳು ಇರುವಾಗ ಎಣ್ಣೆಯ ಮಸಾಜ್ ಮಾಡಿಕೊಳ್ಳುವುದು ಬೇಡ. ಇದರ ಹೊರತಾಗಿ ರುಮಟಾಯ್ಡ್ ಅರ್ಥೈಟಿಸ್​ನಂತಹ ಸಮಸ್ಯೆಗಳು ಇರುವಾಗ ವೈದ್ಯರ ಸಲಹೆ ಇಲ್ಲದೇ ಎಣ್ಣೆಯ ಮಸಾಜ್ ಮಾಡಿಕೊಳ್ಳುವುದು ಸರಿಯಲ್ಲ. ಒಟ್ಟಿನಲ್ಲಿ ವಾರದಲ್ಲಿ ಕನಿಷ್ಠ ಮೂರ್ನಾಲ್ಕು ಬಾರಿಯಾದರೂ, ಎಣ್ಣೆಯ ಮಸಾಜ್ ಮಾಡಿಕೊಳ್ಳುವ ರೂಢಿಯನ್ನು ಮಾಡಿಕೊಂಡು ನಮ್ಮ ಆರೋಗ್ಯವನ್ನು ಸದಾ ಕಾಲ ರಕ್ಷಿಸಿಕೊಳ್ಳೋಣ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net