

ಒಂದು ನಗರದಲ್ಲಿ ಪ್ರಖ್ಯಾತ ವರ್ಣಚಿತ್ರಕಾರನಿದ್ದ. ಆತ ಬಿಡಿಸಿದ ಚಿತ್ರಗಳನ್ನು ನೋಡಲು ಬರುತ್ತಿದ್ದ ಜನ, ಅವುಗಳನ್ನು ಬಾಯ್ತುಂಬ ಹೊಗಳಿ, ಪ್ರಶಂಸಿಸುತ್ತಿದ್ದರು. ತನ್ನ ಪ್ರತಿಭೆ ಬಗ್ಗೆ ಜನರಿಗಿರುವ ಒಳ್ಳೆಯ ಅಭಿಪ್ರಾಯ ಕೇವಲ ಬೂಟಾಟಿಕೆಯದೋ ಅಥವಾ ಸಹಜವಾದದ್ದೋ ಎಂದು ತಿಳಿದುಕೊಳ್ಳುವ ಕುತೂಹಲವುಂಟಾಗಿ ಒಂದು ನಿರ್ಧಾರಕ್ಕೆ ಬಂದ. ನಗರದ ಜನನಿಬಿಡ ಪ್ರದೇಶದ ಕಂಬಕ್ಕೆ ಉತ್ತಮವಾದ ವರ್ಣಚಿತ್ರ ಅಂಟಿಸಿ, ಅದರ ಕೆಳಗೆ, ‘ಈ ಚಿತ್ರದಲ್ಲಿ ಏನಾದರೂ ತಪ್ಪು ಕಂಡುಬಂದರೆ ಆ ಜಾಗದಲ್ಲಿ ಗುರುತು ಹಾಕಿ’ ಎಂದು ಬರೆದ. ಜನರೆಲ್ಲ ಅದನ್ನು ಕಂಡು ಪ್ರತಿಕ್ರಿಯೆ ನೀಡಿದರು. ಜನರ ತೀರ್ಪು ಏನಿರಬಹುದೆಂದು ತಿಳಿಯಲು ಈತ ಮರುದಿನ ಅದೇ ಜಾಗಕ್ಕೆ ಹೋದ. ಆ ಚಿತ್ರದ ಮೇಲೆ ನೂರಾರು ಗುರುತುಗಳಾಗಿದ್ದವು. ಜನರಿಗೆ ತನ್ನ ಪ್ರತಿಭೆಯ ಮೇಲಿದ್ದ ನಕಾರಾತ್ಮಕ ಅಭಿಪ್ರಾಯ ಅರಿತ ಕಲಾವಿದ ಆತ್ಮವಿಶ್ವಾಸವನ್ನೇ ಕಳೆದುಕೊಂಡು, ತನ್ನ ಪ್ರತಿಭೆಯನ್ನೇ ದ್ವೇಷಿಸತೊಡಗಿದ.
ಒಮ್ಮೆ ಆತನ ಕುಶಲೋಪರಿ ವಿಚಾರಿಸಲು ಮನೆಗೆ ಬಂದ ಗೆಳೆಯ, ‘ನಡೆದ ಘಟನೆಯ ಬಗ್ಗೆ ಚಿಂತಿಸಬೇಡ. ನೀನು ಬಿಡಿಸಿದ ಇನ್ನೊಂದು ಸುಂದರ ಚಿತ್ರವನ್ನು ಮತ್ತೆ ಅದೇ ಕಂಬಕ್ಕೆ ಹೋಗಿ ಅಂಟಿಸಿ ಬಾ. ಆದರೆ ಈ ಹಿಂದೆ ಮಾಡಿದ ತಪ್ಪನ್ನು ಮಾಡಬೇಡ. ಈ ಚಿತ್ರದಲ್ಲಿ ಯಾರಿಗಾದರೂ ತಪ್ಪು ಕಂಡುಬಂದಲ್ಲಿ ಅದನ್ನು ತಿದ್ದಿ ಸರಿಪಡಿಸಿ ಎಂದು ಬರೆದು ಬಾ. ಆಗ ಬರುವ ಪ್ರತಿಕ್ರಿಯೆ ಗಮನಿಸು’ ಎಂದು ಸಲಹೆ ನೀಡಿದ. ಸ್ನೇಹಿತನ ಸಲಹೆಯಂತೆ, ‘ಈ ಚಿತ್ರದಲ್ಲಿ ಏನಾದರೂ ತಪ್ಪು ಕಂಡುಬಂದಲ್ಲಿ ದಯವಿಟ್ಟು ತಿದ್ದಿ ಸರಿಪಡಿಸಿ’ ಎಂದು ಬರೆದು ಅಂಟಿಸಿಬಂದ. ಮರುದಿನ ಮತ್ತದೇ ಜಾಗಕ್ಕೆ ಸ್ನೇಹಿತರಿಬ್ಬರೂ ಹೋಗಿ ನೋಡಿದಾಗ ಆಶ್ಚರ್ಯ ಕಾದಿತ್ತು. ಈ ಬಾರಿ ಚಿತ್ರದ ಮೇಲೆ ಯಾವ ಗುರುತುಗಳೂ ಇರಲಿಲ್ಲ. ಚಿತ್ರವನ್ನು ಕಂಡು ಆಶ್ಚರ್ಯಚಕಿತನಾದ ಚಿತ್ರಕಾರನಿಗೆ ಆತನ ಸ್ನೇಹಿತ, ‘ಈ ಹಿಂದಿನ ಚಿತ್ರದಲ್ಲಿ ತಪ್ಪಿತ್ತೋ
ಇಲ್ಲವೋ, ಆದರೆ ತಪ್ಪುಗಳನ್ನು ಹುಡುಕಿ ಆ ಜಾಗದಲ್ಲಿ ಗುರುತಿಸಿದ್ದ ಅದೇ ಜನ ಇಂದು ಅದರಲ್ಲಿರುವ ತಪ್ಪನ್ನು ತಿದ್ದಿ ಸರಿಪಡಿಸುವ ಮನಸ್ಸು ಮಾಡಿಲ್ಲ. ಕಾರಣ, ಆ ಚಿತ್ರ ಹಾಗೂ ಚಿತ್ರಕಲೆಯ ಬಗ್ಗೆ ಅವರಲ್ಲಿದ್ದ ಅಲ್ಪಜ್ಞಾನ. ತಪ್ಪು ನಡೆಯುತ್ತಿರುವಾಗ ಆ ತಪ್ಪನ್ನು ಬೆರಳುಮಾಡಿ ತೋರಿಸುತ್ತ ಹಂಗಿಸುವವರೇ ಹೆಚ್ಚು. ಆ ತಪ್ಪನ್ನು ತಿದ್ದಿ ಸರಿಯಾದ ದಾರಿಗೆ ಕೊಂಡೊಯ್ಯುವಂಥ ನಾಯಕತ್ವ ಹೊಂದಿದ ವ್ಯಕ್ತಿಗಳು ಸಮಾಜದಲ್ಲಿ ವಿರಳ. ಅಂತಹ ಆದರ್ಶ ವ್ಯಕ್ತಿಗಳು ನಮಗೆ ದಾರಿದೀಪವಾಗವೇಕೆ ಹೊರತು ನಮ್ಮನ್ನು ಹಿಂದೆ ತಳ್ಳುವ ವ್ಯಕ್ತಿಗಳಲ್ಲ’ ಎಂದು ವಾಸ್ತವದ ಅರಿವು ಮೂಡಿಸಿದ.
ನಮಗಿಂತ ಹೆಚ್ಚಿನ ಜ್ಞಾನ ಹಾಗೂ ಅನುಭವವಿರುವ ವಿಶಾಲ ಮನಸ್ಸು ಉಳ್ಳವರಲ್ಲಿ ಸಲಹೆ, ಅಭಿಪ್ರಾಯ ಕೇಳಿದಾಗ ಆ ಸಮಸ್ಯೆಗೆ ಸೂಕ್ತ ಪರಿಹಾರ ದೊರೆಯುತ್ತದೆ. ನಮ್ಮ ವ್ಯಕ್ತಿತ್ವ, ಪ್ರತಿಭೆ ಹಾಗೂ ಅಸ್ತಿತ್ವದ ಮೌಲ್ಯವನ್ನು ತಿಳಿಯದ ವ್ಯಕ್ತಿಯ ಕೈಯಲ್ಲಿ ನಮ್ಮ ಜೀವನದ ನಿರ್ಧಾರಗಳನ್ನು ಒಪ್ಪಿಸುವುದು ಮೂರ್ಖತನ. ಟೀಕೆಗಳಿಗೆ ಕುಗ್ಗದೆ ನಮ್ಮ ವ್ಯಕ್ತಿತ್ವವನ್ನು, ನಮ್ಮ ಬದುಕನ್ನು ನಾವೇ ರೂಪಿಸಿಕೊಳ್ಳೋಣ.
(ಲೇಖಕರು ಹವ್ಯಾಸಿ ಬರಹಗಾರರು)