ಪರರನ್ನು ದೂಷಿಸದಿರೋಣ: ಮನೋಲ್ಲಾಸ

Manollasa
Published on
| ರೇಖಾ ಗಜಾನನ ಭಟ್ಟ

ಒಂದು ಇಲಿ ಆಕಸ್ಮಿಕವಾಗಿ ಬಲೆಯಲ್ಲಿ ಸಿಕ್ಕಿಬಿತ್ತು. ಆಗ ಅದು ತನ್ನ ಜೊತೆಗಾರರಿಗೆ, ‘ನೀವು ನನ್ನನ್ನು ಈ ದಾರಿಯಲ್ಲಿ ಕರೆದುಕೊಂಡು ಬಂದ ಕಾರಣ ನಾನು ಬಲೆಯಲ್ಲಿ ಬಿದ್ದೆ. ನನ್ನ ಸ್ಥಿತಿಗೆ ನೀವೇ ಕಾರಣ’ ಎಂದು ಬೈಯಲಾರಂಭಿಸಿತು. ಜೊತೆಗಾರರು ಬಲೆ ಕಡಿದು ಇಲಿಯನ್ನು ಬಿಡಿಸಲು ಮುಂದೆ ಬಂದಾಗ ಬೈದು ಓಡಿಸಿತು. ಅವುಗಳಲ್ಲಿನ ಒಂದು ಇಲಿ ತಂದೆ-ತಾಯಿಗೆ ಇಲಿ ಬಲೆಗೆ ಬಿದ್ದ ವಿಷಯ ತಿಳಿಸಿತು. ಅವರು ಓಡಿಬಂದು ಇಲಿಯನ್ನು ಬಲೆಯಿಂದ ಬಿಡಿಸಲು ಯತ್ನಿಸಿದರು. ಆಗ ಇಲಿ ಸಿಟ್ಟಿನಿಂದ, ‘ನೀವ್ಯಾಕೆ ಈಗ ಬಂದಿರುವಿರಿ. ನನ್ನ ಮನೆಯಲ್ಲೇ ಉಳಿಯಲು ಬಿಡದೇ ಆಹಾರ ಹುಡುಕಲು ಕಳುಹಿಸಿದರಿ. ನಿಮ್ಮಿಂದಲೇ ನನಗೆ ಈ ಗತಿ ಬಂತು. ನಾನು ಬಲೆಯಲ್ಲಿ ಬೀಳಲು ನೀವೇ ಕಾರಣ’ ಎಂದು ಕೂಗಿತು. ಎಷ್ಟೇ ಬುದ್ಧಿ ಹೇಳಿದರೂ ಬಲೆಯಿಂದ ಹೊರಬರಲು ಯತ್ನಿಸಲಿಲ್ಲ. ಅಷ್ಟೊತ್ತಿಗೆ ಬಲೆ ಬೀಸಿದ ಬೇಟೆಗಾರ ಅಲ್ಲಿಗೆ ಬಂದ.

ಬೇಟೆಗಾರನಿಗೆ ತಾನು ಮೊಲ, ಜಿಂಕೆಮರಿಗಳು ಬೀಳಲಿ ಎಂದು ಹಾಕಿದ್ದ ಬಲೆಯಲ್ಲಿ ಇಲಿಯೊಂದು ಸಿಕ್ಕಿ ಬಿದ್ದಿರುವುದು ಆಶ್ಚರ್ಯ ತಂದಿತು. ಹತ್ತಿರ ಹೋದಾಗ ಇಲಿ, ‘ನೋಡು ನಾನು ಹೇಗೆ ಬಲೆಯಲ್ಲಿ ಸಿಕ್ಕಿಬಿದ್ದಿದ್ದೇನೆ. ನನ್ನ ಮನೆಯವರು ಮತ್ತು ಗೆಳೆಯರಿಂದಾಗಿ ನನಗೆ ಇಂತಹ ಸ್ಥಿತಿ ಬಂದಿದೆ’ ಎಂದು ಗೋಳಿಡಲಾರಂಭಿಸಿತು. ಆಗ ಬೇಟೆಗಾರ, ‘ನಿನ್ನ ಸ್ಥಿತಿಗೆ ಬೇರೆಯವರನ್ನು ಹೊಣೆಯಾಗಿಸುತ್ತ ಕೂರುವುದರ ಬದಲು ನಿನ್ನ ಚೂಪಾದ ಹಲ್ಲುಗಳ ಸಹಾಯದಿಂದ ಈ ಬಲೆಯನ್ನು ತುಂಡರಿಸಬಹುದಿತ್ತು. ಆದರೆ ನಿನ್ನಿಂದ ಸಾಧ್ಯವಾದ ನಿನ್ನ ಜೀವರಕ್ಷಣೆಯ ಸಂದರ್ಭದಲ್ಲೂ ಬೇರೆಯವರನ್ನೇ ಆರೋಪಿಸುವ ನಿನ್ನ ಹಾಗೇ ಬಿಡಲಾರೆ’ ಎಂದು ಹೇಳಿ ಇಲಿಯನ್ನು ಮನೆಗೆ ತಂದು ಬೆಕ್ಕಿಗೆ ಹಾಕಿದ. ತನ್ನ ಸಾಮರ್ಥ್ಯದಿಂದಲೇ ಬಲೆಯಿಂದ ಮುಕ್ತವಾಗಬಹುದಾಗಿದ್ದ ಇಲಿ ಪರರನ್ನು ದೂಷಿಸುತ್ತ ತನ್ನ ಅವಸಾನ ತಾನೇ ಕಂಡಿತು. ಇತರರಿಂದ ಕೆಟ್ಟದ್ದನ್ನೇ ನಿರೀಕ್ಷಿಸುತ್ತ ಸಾಗಿದಾಗ ಅವರು ಏನೇ ಒಳ್ಳೆಯದನ್ನು ಮಾಡಿದರೂ ಕೆಟ್ಟದಾಗಿಯೇ ಕಾಣುತ್ತದೆ. ನಮ್ಮೆಲ್ಲ ನೋವುಗಳಿಗೆ ಪರರನ್ನೇ ಹೊಣೆಗಾರರನ್ನಾಗಿ ಮಾಡಿದಾಗ ನಮ್ಮನ್ನು ನಾವು ತಿದ್ದಿಕೊಂಡು ಆ ನೋವಿನಿಂದ ಹೊರಬರುವ ಅವಕಾಶ ಕಳೆದುಕೊಳ್ಳುತ್ತೇವೆ. ಪರರ ದೂಷಿಸುತ್ತ ಬದುಕುವ ಬದಲು ಮೊದಲು ಸ್ವಸಾಮರ್ಥ್ಯದಿಂದ ಸಮಸ್ಯೆಯ ಪರಿಹಾರಕ್ಕೆ ಯತ್ನಿಸಬೇಕು ಅಲ್ಲವೇ..

ಆರೋಪ ಹೊರಿಸುವುದು ಅತಿಸುಲಭ

ಅದರಿಂದ ಅಳಿಯುವುದೇನು ಎಲ್ಲ ಬೇಗೆ

ಎದುರಾದ ತೊಡಕಿಗೆ ಪರನಿಂದನೆಯೇಕೆ

ಹೊರಬರುವ ದಾರಿಯಿರಲು ನಿನ್ನೊಳಗೆ

(ಲೇಖಕರು ಶಿಕ್ಷಕರು, ಹವ್ಯಾಸಿ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net