ಮುಂದಿನ ಸಂತತಿ ಬಗ್ಗೆ ನಿರ್ಲಕ್ಷ್ಯವಲ್ಲ ಕಾಳಜಿ ಇರಲಿ...

untitled-design-6-6908eecb82899
Published on
ನಮಸ್ಕಾರ ಸದ್ಗುರು, ತಾಯಿಯ ಗರ್ಭದಲ್ಲಿ ಮಗುವಿನ ಬೆಳವಣಿಗೆಯಾಗುವಾಗ ಚಕ್ರಗಳು ಯಾವಾಗ ಮತ್ತು ಹೇಗೆ ವ್ಯಕ್ತಗೊಳ್ಳಲು ಪ್ರಾರಂಭವಾಗುತ್ತವೆ?

ಸದ್ಗುರು: ಸುಮಾರು ಹನ್ನೆರಡನೇ ವಾರದ ವೇಳೆಗೆ ಕೇವಲ ಒಂದು ಚಕ್ರವಷ್ಟೇ ರೂಪುಗೊಂಡಿರುತ್ತದೆ, ಅದುವೇ ಮೂಲಾಧಾರ. ಸುಮಾರು ಇಪ್ಪತ್ತೆಂಟರಿಂದ ಮೂವತ್ತು ವಾರಗಳೊಳಗೆ, ಭ್ರೂಣದ ಬೆಳವಣಿಗೆಯ ಗುಣಮಟ್ಟವನ್ನಾಧರಿಸಿ, ವಿಶುದ್ಧಿವರೆಗಿನ ಮೊದಲ ಐದು ಚಕ್ರಗಳು ಸಂಪೂರ್ಣವಾಗಿ ಸ್ಥಾಪಿತವಾಗುತ್ತವೆ. ಉಳಿದ ಎರಡು ಚಕ್ರಗಳಾದ ಆಜ್ಞಾ ಮತ್ತು ಸಹಸ್ರಾರ ಚಕ್ರಗಳು ಎಲ್ಲರಲ್ಲಿಯೂ ಒಂದೇ ಮಟ್ಟಿಗೆ ಸ್ಥಾಪಿತವಾಗುವುದಿಲ್ಲ. ಇದಕ್ಕಾಗಿಯೇ ಈ ಸಂಸ್ಕೃತಿಯಲ್ಲಿ, ಮಗು ಜನಿಸಿದ ಕೂಡಲೇ, ಮಗುವಿಗೆ ಸ್ನಾನ ಮಾಡಿಸಿದ ನಂತರ, ಮೊದಲು ಕಣ್ಣಿನ ಹುಬ್ಬುಗಳ ಮಧ್ಯೆ ಸ್ವಲ್ಪ ವಿಭೂತಿಯನ್ನು ಹಚ್ಚುತ್ತಿದ್ದರು. ಆಜ್ಞಾ ಚಕ್ರ ಇನ್ನೂ ರೂಪುಗೊಂಡಿರದಿದ್ದಲ್ಲಿ, ಮಗುವಿನ ಗಮನವನ್ನು ಆ ದಿಕ್ಕಿನಲ್ಲಿ ಕೇಂದ್ರೀಕರಿಸಲು ಬಯಸುತ್ತೇವೆ.

ಇದನ್ನು ಆಧರಿಸಿ ಯಾರ ಬಗ್ಗೆಯೂ ಏನನ್ನೂ ನಿರ್ಣಯಿಸಬಾರದು, ಆದರೆ ನಾನು ಹೇಳುವುದೇನಂದರೆ, ನವಜಾತ ಶಿಶುಗಳ ಪೈಕಿ ಸುಮಾರು ಮೂವತ್ತರಿಂದ ಮೂವತೆôದು ಪ್ರತಿಶತ ಮಕ್ಕಳಲ್ಲಿ ಆಜ್ಞಾ ಚಕ್ರ ಇನ್ನೂ ಸಂಪೂರ್ಣವಾಗಿ ಬೆಳೆಯದಿರಬಹುದು. ಸಹಸ್ರಾರ ಚಕ್ರ ಸಾಮಾನ್ಯವಾಗಿ ಬಹುತೇಕರಲ್ಲಿ ರೂಪುಗೊಂಡಿರುವುದಿಲ್ಲ, ಅದು ನಿಧಾನವಾಗಿ ವಿಕಾಸಗೊಳ್ಳುತ್ತದೆ. ಮಗುವಿನ ಕಣ್ಣುಗಳ ಚಲನೆಯನ್ನು ನೋಡಿದರೆ, ಆ ಶಿಶುವಿನ ಆಜ್ಞಾ ಚಕ್ರ ಸ್ಥಾಪಿತವಾಗಿದೆಯೋ ಇಲ್ಲವೋ ತಿಳಿಯಬಹುದು. ಪಾರಂಪರಿಕವಾಗಿ, ಕೇವಲ ಕಣ್ಣುಗಳ ಚಲನೆಯನ್ನು ನೋಡಿ ಆ ಶಿಶುವು ಮುಂದೆ ಋಷಿಯಾಗಬಹುದೇ ಎಂದು ಹೇಳುತ್ತಿದ್ದರು. ಋಷಿ ಎಂದರೆ ಕಾಡು ಅಥವಾ ಗುಹೆಗೆ ಹೋಗಿ ಕುಳಿತುಕೊಳ್ಳುವವರಲ್ಲ. ಯಾರು ಇತರರು ಕಾಣದ್ದನ್ನು ಕಾಣಬಲ್ಲರೋ ಅವರೇ ಋಷಿ. ಅದು ಇತರರಿಗಿಂತ ಸ್ಪಷ್ಟವಾಗಿ ಕಾಣಬಲ್ಲ ದೂರದೃಷ್ಟಿಯುಳ್ಳ ವ್ಯಾಪಾರಿ ಆಗಿರಬಹುದು ಅಥವಾ ದೂರದೃಷ್ಟಿಯುಳ್ಳ ನಾಯಕನಾಗಿರಬಹುದು.

ಮಗುವಿನ ಮೊದಲ ಮೂರು ತಿಂಗಳುಗಳಲ್ಲಿ, ತಾಯಿಯ ಗರ್ಭದಲ್ಲಿರುವಾಗಲೇ ಆಜ್ಞಾಚಕ್ರವು ಎಷ್ಟರ ಮಟ್ಟಿಗೆ ರೂಪುಗೊಂಡಿತ್ತು ಎಂಬುದನ್ನು ಸ್ಪಷ್ಟವಾಗಿ ಕಾಣಬಹುದು ಮತ್ತು ಇದು ಅನೇಕ ಸಂಗತಿಗಳನ್ನು ನಿರ್ಧರಿಸುತ್ತದೆ. ಜನನದ ಸಮಯದಲ್ಲಿ ಆಜ್ಞಾ ಚಕ್ರದ ಬೆಳವಣಿಗೆಯಾಗದಿದ್ದಲ್ಲಿ ತಮ್ಮ ಜೀವಿತಾವಧಿಯಲ್ಲಿಯೇ ಅದು ವಿಕಾಸಗೊಳ್ಳುವುದಿಲ್ಲವೆಂದೇನಿಲ್ಲ, ಅದರ ಬಗ್ಗೆ ಸ್ವಲ್ಪ ಕಾಳಜಿ ವಹಿಸಿದರೆ ಸಾಧ್ಯವಾಗಿಸಬಹುದು. ಆದರೆ ಅವರು ಇತರರಿಗಿಂತ ಸ್ವಲ್ಪ ಹೆಚ್ಚು ಶ್ರಮ ಪಡಬೇಕಾಗುತ್ತದೆ. ಇಂದಿನ ದಿನ ಜನನ ಮತ್ತು ಮರಣಗಳೆರಡೂ ದೊಡ್ಡ ವ್ಯಾಪಾರವಾಗಿವೆ, ಆದ್ದರಿಂದ ಇಂತಹವೆಲ್ಲವೂ ದೂರ ಸರಿಯುತ್ತಿವೆ. ಇಲ್ಲದಿದ್ದರೆ, ಈ ಸಂಸ್ಕೃತಿಯಲ್ಲಿ ಗರ್ಭಧಾರಣೆಗೂ ಮೊದಲು ಮಹಿಳೆಯು ಹೇಗಿರಬೇಕು, ಏನು ಮಾಡಬೇಕು, ಅವರ ಜೀವನದಲ್ಲಿ ಸಂಭವಿಸಬೇಕಾದ ಸಂಗತಿಗಳ ಬಗ್ಗೆ ನಿರ್ದಿಷ್ಟ ರೀತಿಯ ಕಾಳಜಿಯೊಂದಿಗೆ ನೋಡಿಕೊಳ್ಳಲಾಗುತ್ತಿತ್ತು. ಅದೇ ಸಮಯದಲ್ಲಿ ನಿರ್ದಿಷ್ಟ ದೇವಾಲಯಗಳಿಗೆ ಹೋಗುತ್ತಿದ್ದರು, ಅವರಿಗೆ ನಿರ್ದಿಷ್ಟ ವಿಧದ ಆಹಾರವನ್ನು ನೀಡಲಾಗುತ್ತಿತ್ತು ಮತ್ತು ಅವರು ನಿರ್ದಿಷ್ಟ ಶಾಸ್ತ್ರಗಳನ್ನು ಓದುತ್ತಿದ್ದರು.

ಅವರು ಯಾವ ರೀತಿಯ ವಾತಾವರಣದಲ್ಲಿರಬೇಕು, ಯಾರನ್ನು ಭೇಟಿಯಾಗಬೇಕು ಅಥವಾ ಭೇಟಿಯಾಗಬಾರದು, ಯಾವ ಬಣ್ಣಗಳು ಮತ್ತು ರೂಪಗಳನ್ನು ನೋಡಬೇಕು ಅಥವಾ ನೋಡಬಾರದೆಂಬ ಎಲ್ಲ ವಿಷಯಗಳನ್ನೂ ಕಾಳಜಿಯಿಂದ ನಿರ್ವಹಿಸಲಾಗುತ್ತಿತ್ತು. ಗರ್ಭಧಾರಣೆಯಿಂದ ಪ್ರಸವದವರೆಗೆ ಕಟ್ಟುನಿಟ್ಟಾದ ನಿರ್ದೇಶನಗಳಿದ್ದವು. ಭಾರತೀಯ ಸಂಸ್ಕೃತಿಯನ್ನು ಬಿಟ್ಟರೆ ಇಂತಹ ಪದ್ಧತಿಗಳು ಯಹೂದಿ ಸಂಸ್ಕೃತಿಯಲ್ಲಿ ಮಾತ್ರ ಪ್ರಚಲಿತದಲ್ಲಿವೆ. ಯಹೂದಿಯರು ಇಂತಹ ಪದ್ದತಿಗಳನ್ನು ಇಂದು ಭಾರತೀಯರಿಗಿಂತಲೂ ಉತ್ತಮವಾಗಿ ಕಾಪಾಡಿಕೊಂಡಿದ್ದಾರೆ. ಭಾರತೀಯರು ತಮ್ಮ ಸಂಸ್ಕೃತಿಯನ್ನು ತೊರೆದು ಪಾಶ್ಚಾತ್ಯದವರಂತಾಗಲು ಉತ್ಸುಕರಾಗಿದ್ದಾರೆ. ಹಾಗಾಗಿ ಇವೆಲ್ಲವನ್ನೂ ಮುಂದುವರಿಸುತ್ತಿಲ್ಲ. ಆದರೂ ಆರ್ಥಿಕ ಸುಸ್ಥಿತಿಯೊಂದಿಗೆ, ಈ ಸಂಪ್ರದಾಯಗಳು ಮತ್ತೆ ಸ್ವಲ್ಪ ಮಟ್ಟಿಗೆ ಮರಳಬಹುದು. ಕೆಲವು ನಿರ್ದಿಷ್ಟ ಸಂಗತಿಗಳತ್ತ ಕಾಳಜಿ ವಹಿಸಿದಲ್ಲಿ ತಾಯಿಯ ಗರ್ಭದಲ್ಲಿಯೇ ಅತಿ ಹೆಚ್ಚು ಬೆಳವಣಿಗೆ ಆಗುವಂತೆ ಖಚಿತಪಡಿಸಬಹುದು. ಅತಿ ಹೆಚ್ಚು ಬೆಳವಣಿಗೆಯೆಂದರೆ ಹೆಚ್ಚು ತೂಕವೆಂದಲ್ಲ ಮತ್ತು ಅದನ್ನು ಹೀಗೆ ಅಳೆಯುತ್ತಿರಲಿಲ್ಲ.

ಮಗು ಜನಿಸಿದಾಗ, ಮೊದಲನೆಯದಾಗಿ ಮಗುವಿನ ಕಣ್ಣುಗುಡ್ಡೆಗಳು ಹೇಗೆ ಚಲಿಸುತ್ತಿವೆ ಎಂದು ಗಮನಿಸಬೇಕು. ಅವು ಗೊಂದಲದಲ್ಲಿವೆಯೇ, ಕೇಂದ್ರೀಕೃತವಾಗಿವೆಯೇ, ಅಥವಾ ಸುತ್ತಮುತ್ತಲಿನದ್ದನ್ನು ಸ್ಪಷ್ಟವಾಗಿ ನೋಡಬಲ್ಲದೇ? ಕೆಲ ಶಿಶುಗಳಲ್ಲಿ ಪ್ರೌಢ ವಯಸ್ಕರಂತಹ ನೋಟವಿರುವುದನ್ನು ಕಾಣಬಹುದು. ಮಗು ಹೇಗೆ ವಸ್ತುಗಳನ್ನು ಗಮನಿಸುತ್ತದೆ ಮತ್ತು ನೋಡುತ್ತದೆ ಎಂಬುದಕ್ಕೆ ಕಣ್ಣುಗಳ ಸ್ಥಿರತೆ ಮುಖ್ಯ ಸೂಚಕ. ಮಗು ಹೇಗೆ ಅಳುತ್ತದೆ ಎಂಬುದು ಮತ್ತೊಂದು ಸಂಗತಿ. ಮಗು ಮೊಟ್ಟಮೊದಲ ಬಾರಿ ಅಳುವಾಗಲೇ, ಅಂತರ್ದೃಷ್ಟಿಯುಳ್ಳವರು ಆ ಅಳುವಿನ ಶಬ್ದ ಕೇಳಿ, ಈ ಮಗು ಮುಂದೆ ಏನಾಗಬಹುದು ಎಂದು ಹೇಳುತ್ತಿದ್ದರು. ಕೆಲವು ಶಿಶುಗಳು ಹೊಸ ಜಾಗದಲ್ಲಿ ಇರುವ ಗೊಂದಲದಿಂದ ಅಳುತ್ತವೆ, ಕೆಲವು ಶಿಶುಗಳು ಈ ಅಸಂಬದ್ಧ ಜನನದ ಅಸಹನೆಯಿಂದ ಕೋಪಗೊಂಡು ಅಳುತ್ತವೆ. ಅವರ ಅಳುವಿನ ಶೈಲಿ ವಿಭಿನ್ನವಾಗಿರುತ್ತದೆ. ವಿಶೇಷವಾಗಿ ಅನೇಕ ಜನನಗಳನ್ನು ನೆರವಾಗಿಸಿದ ಸೂಲಗಿತ್ತಿಯರು ಇದನ್ನು ತಕ್ಷಣ ಗುರುತಿಸುತ್ತಿದ್ದರು.

ನಾವು ತಾಯಿಯ ವಿಷಯದಲ್ಲಿ ಕೆಲವು ವಿಷಯಗಳನ್ನು ಕಾಳಜಿಯಿಂದ ನೋಡಿಕೊಂಡರೆ, ಮಗುವಿನ ಚಕ್ರಗಳ ರಚನೆಯನ್ನು ತಾಯಿಯ ಗರ್ಭದಲ್ಲೇ ಕೆಲ ಮಟ್ಟಿಗೆ ನಿರ್ಧರಿಸಬಹುದು. ಆದರೆ ಇಂದು ಆರ್ಥಿಕ ಮತ್ತು ಸಾಮಾಜಿಕ ಚಟುವಟಿಕೆಗಳು ಇಷ್ಟೊಂದು ಹೆಚ್ಚಾಗಿರುವುದರಿಂದ, ಗರ್ಭಿಣಿಯರೂ ಕಚೇರಿಗೆ ಹೋಗುತ್ತಾರೆ, ಪಾರ್ಟಿಗಳಿಗೆ ಹೋಗುತ್ತಾರೆ, ತಿನ್ನುತ್ತಾರೆ, ಕುಡಿಯುತ್ತಾರೆ, ಧೂಮಪಾನ ಮಾಡುತ್ತಾರೆ. ಈ ರೀತಿಯಲ್ಲಿ, ನಮ್ಮ ಪಾತ್ರವೇ ಇಲ್ಲದಂತೆ ಚಕ್ರಗಳ ಬೆಳವಣಿಗೆಯನ್ನು ಸಂಪೂರ್ಣವಾಗಿ ಪ್ರಕೃತಿಯ ಮೇಲೇ ಬಿಟ್ಟುಕೊಟ್ಟಿದ್ದೇವೆ. ಆದರೆ ನಾವು ಸೂಕ್ತವಾದದ್ದನ್ನು ಮಾಡಿದಲ್ಲಿ, ನಿರ್ದಿಷ್ಟ ಗುಣಗಳ ಬೆಳವಣಿಗೆಯ ನಿಟ್ಟಿನಲ್ಲಿ ಮಾರ್ಗಗಳಿವೆ. ನೀವಿದನ್ನು ಬೆಳೆಯನ್ನು ಬೆಳೆಯುವುದಕ್ಕೆ ಹೋಲಿಸಬಹುದು, ಫಲ ಶೇಕಡ ನೂರಕ್ಕೆ ನೂರು ನಿಮ್ಮ ನಿಯಂತ್ರಣದಲ್ಲಿ ಇರಲಾರದು, ಆದರೆ ಸರಿಯಾದ ಕೆಲಸಗಳನ್ನು ಮಾಡಿದರೆ ಉತ್ತಮ ಫಲಿತಾಂಶ ಸಿಗುತ್ತದೆ. ಇದೆಲ್ಲದರ ಹಿಂದಿನ ಆಶಯವೆಂದರೆ, ನಮ್ಮಿಂದಾಗುವ ಸಂತಾನ ನಮಗಿಂತ ಉತ್ತಮ ಗುಣಮಟ್ಟದ್ದಾಗಿರಬೇಕು. ಆದರೆ ಆ ಕಾಳಜಿ, ಅದನ್ನು ಸಾಕಾರಗೊಳಿಸಲು ಬೇಕಾದ ತೊಡಗಿಸಿಕೊಳ್ಳುವ ಮನೋಭಾವ ಇಂದು ಕಾಣುತ್ತಿಲ್ಲ, ಏಕೆಂದರೆ ನಮ್ಮದೇ ಜೀವನಗಳು ಅತಿಯಾಗಿ ಮುಖ್ಯವಾಗಿಬಿಟ್ಟಿವೆ. ಒಮ್ಮೆ ಬಹಳ ಸಣ್ಣ ಮೈಕಟ್ಟಿನ ಮಹಿಳೆ ನಮ್ಮನ್ನು ಭೇಟಿ ಮಾಡಿದರು. ತುಂಬು ಗರ್ಭಿಣಿಯಾಗಿದ್ದ ಅವರು ನಮ್ಮೊಂದಿಗೆ ಕೆಲಸ ಮಾಡಲು ಬಂದರು, ನಾನು ಕೇಳಿದೆ ‘ನಿಮ್ಮ ಮಗುವಿನ ಜನನ ಎಂದಾಗಲಿದೆ?’ ಅವರು ಹೇಳಿದರು- ‘ಬಹುಶಃ ನಾಳೆ ಬೆಳಗ್ಗೆ’. ನಾನು ಕೇಳಿದೆ, ‘ನೀವು ಇಲ್ಲಿ ಏನು ಮಾಡುತ್ತಿದ್ದೀರಿ?’ ಅವರು ಹೇಳಿದರು, ‘ಇದು ನನ್ನ ಎರಡನೇ ಮಗು. ಹಿಂದಿನ ಸಲವೂ ನಾನು ಪ್ರಸವಕ್ಕೂ ಎರಡು ಗಂಟೆಗಳ ಮುಂಚಿನವರೆಗೆ ಕೆಲಸ ಮಾಡಿದ್ದೆ’.

ನಮ್ಮ ಜೀವನ, ನಮ್ಮ ಆರ್ಥಿಕ ವಿಷಯಗಳು, ನಮ್ಮ ಪಾರ್ಟಿಗಳು, ನಮ್ಮ ಸಾಮಾಜಿಕ ಅಸಂಬದ್ಧತೆಗಳೆಲ್ಲವೂ ಎಷ್ಟು ಮುಖ್ಯವಾಗಿಬಿಟ್ಟಿವೆಯೆಂದರೆ, ನಾವು ಮುಂದಿನ ಪೀಳಿಗೆಯ ಬಗ್ಗೆ ಹೆಚ್ಚು ಆಸಕ್ತಿಯನ್ನು ತೋರಿಸುತ್ತಿಲ್ಲ. ನಾವು ನಮ್ಮ ಮುಂದಿನ ಪೀಳಿಗೆಯು ಯಾವ ರೀತಿಯಲ್ಲಿ ನಮಗಿಂತಲೂ ಉತ್ತಮವಾಗಿ ಇರಬೇಕೆಂದು ಆಲೋಚಿಸುವಷ್ಟು ಜವಾಬ್ದಾರರಾಗಿಲ್ಲ. ನಾವು ಮುಂದಿನ ಪೀಳಿಗೆಯನ್ನು ನಮಗಿಂತ ನಿಕೃಷ್ಟರಾಗಲು ಬಿಟ್ಟರೆ, ಅದು ಮಾನವ ವಿಕಾಸದ ವಿರುದ್ಧದ ಅಪರಾಧ. ನಾವು ಅದನ್ನು ಮುನ್ನಡೆಸಬೇಕೇ ಹೊರತು ಹಿಂದಕ್ಕಲ್ಲ.

(ಸದ್ಗುರು ಅವರು ಯೋಗಿ, ದಾರ್ಶನಿಕ, ಆಧ್ಯಾತ್ಮಿಕ ನಾಯಕ. www.isha.sadhguru.org)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net