

ಇಂದು ಹೆಚ್ಚಿನ ಎಲ್ಲಾ ಮನೆಗಳಲ್ಲಿ ಆಧುನಿಕತೆಯ ಸ್ಪರ್ಶವಾಗಿದೆ. ಹೀಗಾಗಿ ಮೊದಲಿನ ಆಹಾರಪದ್ಧತಿ, ವಿಧಾನ ಮರೆಯಾಗುತ್ತಿದೆ. ಮಕ್ಕಳಿಗೆ ಮತ್ತು ಯುವಕರಿಗೆ ಬೇಕಾಗುವ ಆಹಾರ ವೃದ್ಧರ ಬಾಯಿಗೆ ಅಥವಾ ದೇಹಕ್ಕೆ ಹಿಡಿಸದು. ಈ ವೃದ್ಧರನ್ನು ಚೆನ್ನಾಗಿ ನೋಡಿಕೊಳ್ಳುವುದೇ ಒಂದು ಸವಾಲು. ತನ್ನವರ ಮನೆ ಬಿಟ್ಟು ಗುಡಿಸಿಲು ಕಟ್ಟಿಕೊಂಡು ಒಬ್ಬಂಟಿಗರಾಗಿ ಜೀವಿಸುತ್ತಿರುವ ಇಂತಹ ವೃದ್ಧರನ್ನು ಗುರುತಿಸಿ ಬದುಕುವ ಅನುಕೂಲ ಮಾಡಿಕೊಡುವ ಕಾರ್ಯ ನಮ್ಮ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ನಡೆಯುತ್ತಿದೆ.
ಇಂತಹ ವೃದ್ಧರ ಫೋಟೋವನ್ನು ನಗರವಾಸಿಯೊಬ್ಬರಿಗೆ ತೋರಿಸಿದೆ. ಅವರು ಗಾಬರಿಯಾಗಿ ಬೆಚ್ಚಿಬಿದ್ದು, ಮನೆಯವರಿಂದ ಪರಿತ್ಯಕ್ತರಾಗಿ ಬದುಕು ನಡೆಸುತ್ತಿದ್ದಾರೆಯೇ ಎನ್ನುವ ಪ್ರಶ್ನೆ ಹಾಕಿದರು. ಅನೇಕ ವೃದ್ಧರು ಇಂದು ಒಬ್ಬಂಟಿಗರಾಗಿಯೇ ಜೀವನ ಮಾಡುತ್ತಾರೆ. ಸಣ್ಣ ಗುಡಿಸಿಲು ಕಟ್ಟಿಕೊಂಡಿರುತ್ತಾರೆ. ಆದರೆ, ಇಲ್ಲಿ ಅವರಿಗೆ ಸರಿಯಾದ ಆಹಾರ ವ್ಯವಸ್ಥೆ ಇರುವುದಿಲ್ಲ. ಸ್ವತಃ ತಯಾರಿಸಲು ಅವರಿಗೆ ಆಗುವುದಿಲ್ಲ. ದಾನ ಕೊಡುವವರೂ ಇಲ್ಲ. ಕೆಲವರಿಗೆ ಸರ್ಕಾರದಿಂದ ಪಿಂಚಣೆ ದೊರೆಯುತ್ತಿದೆ. ಆದರೆ, ಅನೇಕರಿಗೆ ಅದರ ಅರಿವಿಲ್ಲ. ಅನೇಕ ಮಂದಿ ದಿನನಿತ್ಯದ ಆವಶ್ಯಕತೆಗಳನ್ನು ಗಮನಿಸಿಕೊಳ್ಳದೆ ಕಷ್ಟಪಡುತ್ತಾರೆ. ಬಟ್ಟೆಬರೆ ಇಲ್ಲ, ಔಷಧಗಳನ್ನು ಖರೀದಿಸುವಷ್ಟು ಧನವೂ ಇಲ್ಲ. ಹೀಗಾಗಿ ಸಮಾಜಕ್ಕೆ, ಕುಟುಂಬಕ್ಕೆ ಬೇಡವಾದವರು ಭಗವಂತನಿಗೂ ಬೇಡವಾದವರು ಎಂದು ಅನಿಸುವಂತೆ ಬದುಕುತ್ತಿರುತ್ತಾರೆ.
ಆರೋಗ್ಯಕ್ಕಾಗಿ ಸಾಮಾನ್ಯವಾಗಿ ದೇವರನ್ನು ಪ್ರಾರ್ಥಿಸುತ್ತೇವೆ. ಹರಕೆ ಹೇಳಿಕೊಳ್ಳುತ್ತೇವೆ. ದೀರ್ಘಾಯುಷ್ಯ ಬೇಡಿಕೊಳ್ಳುತ್ತೇವೆ. ಅಪಘಾತದಂತಹ ಕಾರಣಗಳಿಂದ ಅನಿರೀಕ್ಷಿತವಾದ ಸಾವುಗಳಾಗುವುದು ಬೇರೆ. ಸಹಜ ಅನಾರೋಗ್ಯದಿಂದ ಉಂಟಾಗುವ ಸಾವುಗಳನ್ನು ಮುಂದೂಡಲು ಆದಷ್ಟು ಎಲ್ಲರೂ ಪ್ರಯತ್ನಿಸುತ್ತಾರೆ. ಆದರೆ, ಇಲ್ಲಿ ವೃದ್ಧರ ಸನ್ನಿವೇಶವೇ ಬೇರೆ, ಅವರು ದಿನನಿತ್ಯವೂ ದೇವರಿಗೆ ಕೈ ಮುಗಿಯುತ್ತಿರುತ್ತಾರೆ- ‘ಭಗವಂತ ನನ್ನನ್ನು ಬೇಗ ನಿನ್ನ ಬಳಿ ಕರೆಸಿಕೋ’ ಎಂದು. ಆದರೆ, ದೇವರು ಇವರ ಮೊರೆಯನ್ನು ಆಲಿಸುವುದಿಲ್ಲ. ದೇವರಿಂದಲೂ ಪರಿತ್ಯಕ್ತವಾದವರು ಎಂದರೆ ಈ ವೃದ್ಧರು ಎನ್ನಬಹುದು. ದೇವರು ಕೂಡ ‘ಇನ್ನೂ ನಿನಗೆ ಆಯಸ್ಸು ಇದೆ. ಭೂಮಿಯಲ್ಲೇ ಇರು, ಇನ್ನಷ್ಟು ವರುಷ ಬದುಕಿ ಬಾ’ ಎನ್ನುತ್ತಾನೇನೋ. ಆರೋಗ್ಯ ಕೆಟ್ಟಿದ್ದರೂ, ನೋಡಿಕೊಳ್ಳಲು ತಮ್ಮವರಿಲ್ಲದಿದ್ದರೂ ಆಯಸ್ಸು ಮಾತ್ರ ಅವರಿಗೆ ಗಟ್ಟಿಯಾಗಿರುತ್ತದೆ. ಆಯಸ್ಸು ಒಮ್ಮೆ ಮುಗಿಯಲಿ, ಇಲ್ಲಿಂದ ಹೊರಡಬೇಕು ಎಂದು ಅಂದುಕೊಳ್ಳುವ ಬಹಳಷ್ಟು ವೃದ್ಧರನ್ನು ನಾವು ಕಂಡಿದ್ದೇವೆ.
ಟಿ.ಎನ್. ಶೇಷನ್ ಹೆಸರನ್ನು ಕೇಳಿರುತ್ತೀರಿ. ಭಾರತದ ಚುನಾವಣಾ ಆಯುಕ್ತರಾಗಿ, ಚುನಾವಣೆಯ ರೀತಿ-ನೀತಿ ಬದಲಾವಣೆಯ ಮಾರುತ ಬೀಸಿದವರು. ಅವರ ಎದುರು ಯಾವ ರಾಜಕಾರಣಿಗೂ ನಿಲ್ಲಲಾಗಲಿಲ್ಲ. ಮತ್ತು ಚುನಾವಣೆಯ ತಂತ್ರಗಳನ್ನೆಲ್ಲ ಬದಲಾಯಿಸಿ ನ್ಯಾಯಯುತ ಚುನಾವಣೆ ಆಗುವಂತೆ ಅವರು ವ್ಯವಸ್ಥೆ ಮಾಡಿದ್ದರು. ಆದರೆ,ಕೊನೆಗಾಲವನ್ನು ಅವರು ಕಳೆದದ್ದು ವೃದ್ಧಾಶ್ರಮದಲ್ಲಿ.
ಅನೇಕ ಮಕ್ಕಳು ಮಧ್ಯವಯಸ್ಸಿನಲ್ಲೇ ಹೆತ್ತವರನ್ನು ವೃದ್ಧಾಶ್ರಮಕ್ಕೆ ಸೇರಿಸಿ ತಮ್ಮ ಕರ್ತವ್ಯ ಮುಗಿಯಿತು ಎಂದು ಕೈ ತೊಳೆದುಬಿಡುತ್ತಾರೆ ಎಂಬ ಭಾವನೆಯಿಂದ ಅನೇಕ ಗುರುಗಳು, ಮಠಾಧಿಪತಿಗಳು, ವೃದ್ಧಾಶ್ರಮಕ್ಕೆ ಹೆಚ್ಚು ಪೋ›ತ್ಸಾಹ ಕೊಡುವುದು ಬೇಡ ಎಂದು ಪ್ರತಿಪಾದಿಸಿದ್ದರು. ಆದರೆ, ಇಂತಹ ವೃದ್ಧರನ್ನು, ಹಿರಿಯ ವ್ಯಕ್ತಿಗಳಿಗೆ ಯಾರೂ ಪೋಷಕರಿಲ್ಲದಿದ್ದಾಗ, ರಕ್ಷಕರಿಲ್ಲದಿದ್ದಾಗ, ಕುಟುಂಬದವರಿಂದ ನಿರ್ಲಕ್ಷ್ಯಕ್ಕೆ ಒಳಪಟ್ಟಾಗ ಅವರಿಗೆ ಇರುವಂತಹ ಒಂದೇ ದಾರಿವೃದ್ಧಾಶ್ರಮಗಳು.
ವೃದ್ಧಾಶ್ರಮಗಳು ಅನೇಕ ಕಡೆ ಉಚಿತವಾಗಿ ಇರುತ್ತವೆ. ಕೆಲವು ಕಡೆ ಹಣ ನೀಡಬೇಕಾಗುತ್ತದೆ. ಯಾವ ವ್ಯವಸ್ಥೆಗೂ ಹೊಂದಿಕೊಳ್ಳದೆ ಇರುವ, ಗ್ರಾಮೀಣ ಪ್ರದೇಶದಲ್ಲಿರುವ ವೃದ್ಧರನ್ನು ಕಂಡಾಗ ದುಃಖವಾಗುತ್ತದೆ. ಅವರು ಜೀವನದ ಸಂಜೆಯ ದಿನಗಳಲ್ಲಿ ಎಲ್ಲರಿಂದ ದೂರವಾಗಿ ಬದುಕುವ ಅನಿವಾರ್ಯತೆ ಕಂಡುಬರುತ್ತದೆ. ಅವರಿಗೆ ಅನುಕಂಪದ ಮಾತುಗಿಂತ ಜೀವನಕ್ಕೆ ಮಾರ್ಗದರ್ಶನ, ಶಕ್ತಿ ತುಂಬುವಂತಹ ಕೆಲಸಗಳನ್ನು ಮಾಡಬೇಕಿದೆ.
ಈ ಸಲುವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ‘ವಾತ್ಸಲ್ಯ’ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಅಸಹಾಯಕ ವೃದ್ಧರನ್ನು ಗುರುತಿಸಿ, ಅವರ ಅನಿವಾರ್ಯತೆಗಳನ್ನು ಗುರುತಿಸಿ ಅವರು ಕುಟುಂಬದಿಂದ ಪ್ರತ್ಯೇಕವಾದ ಅಥವಾ ಕಡೆಗಣಿಸಲ್ಪಟ್ಟ ವಿಚಾರವನ್ನು ಸರಿಯಾಗಿ ಗಮನಿಸಿ ಅವರಿಗೆ ಮನೆ (ಸೂರು) ಕಟ್ಟಿಕೊಡುವ ವ್ಯವಸ್ಥೆ ಮಾಡಲಾಗಿದೆ. ಇದುವರೆಗೆ ನೂರಕ್ಕೂ ಹೆಚ್ಚು ಮನೆಗಳನ್ನು ನಿರ್ವಿುಸಲಾಗಿದೆ. ಸಿಮೆಂಟ್ ಬ್ಲಾಕ್, ಸಿಮೆಂಟ್ ಶೀಟ್ ಛಾವಣಿ ಬಳಸಿ ಒಂದು ಕೊಠಡಿ, ಬಚ್ಚಲು ಮನೆ, ಪ್ರತ್ಯೇಕ ಅಡುಗೆ ಕೋಣೆ ಇಷ್ಟು ಅನುಕೂಲತೆಗಳನ್ನು ಒದಗಿಸುತ್ತಿದ್ದೇವೆ.
ಈ ಅನುಕೂಲತೆಗಳನ್ನು ಅವರು ಉತ್ತಮ ರೀತಿಯಲ್ಲಿ ಬಳಸಬೇಕೆಂದರೆ ಅವರಿಗೆ ಪ್ರೇರಣೆ ಬೇಕಾಗುತ್ತದೆ. ಹಾಗಾಗಿ ಆಹಾರ ಕೊಡಲು ನೆರೆಹೊರೆಯವರಿಗೆ ಪ್ರೇರೇಪಿಸಲಾಗುತ್ತದೆ. ಅಕ್ಕಪಕ್ಕದ ಮನೆಯವರು ಅಥವಾ ಗ್ರಾಮದಲ್ಲಿ ಆಹಾರ ಕೊಡುವ ಉತ್ಸಾಹ ಇರುವವರಿಗೆ ನೇರವಾಗಿ ಗ್ರಾಮಾಭಿವೃದ್ಧಿ ಯೋಜನೆಯಿಂದ ಹಣ ಪಾವತಿ ಮಾಡಿ, ವೃದ್ಧರಿಗೆ ಪ್ರತಿದಿನ ಸ್ವಚ್ಛ, ಸ್ವಾದಿಷ್ಟ, ಪೌಷ್ಟಿಕ ಆಹಾರದ ವ್ಯವಸ್ಥೆ ಮಾಡಲಾಗುತ್ತದೆ. ಅಷ್ಟಲ್ಲದೆ, ಸಿರಿ ಗ್ರಾಮೋದ್ಯೋಗ ಸಂಸ್ಥೆಯಿಂದ ‘ಪುಷ್ಟಿ’ ಎಂಬ ಆಹಾರ ಕಿಟ್ ಒದಗಿಸಲಾಗುತ್ತದೆ. ಇದರಲ್ಲಿ ವ್ಯಕ್ತಿಗೆ ದಿನಕ್ಕೆ ಬೇಕಾದ ಪೌಷ್ಟಿಕಾಂಶದ ಆಹಾರವಿರುತ್ತದೆ. ಇಂಥ ಪ್ರಯತ್ನದಿಂದಾಗಿ ಅವರ ಆಯುಷ್ಯ ವೃದ್ಧಿಯಾಗುತ್ತದೆ ಎನ್ನುವುದು ಕೆಲವರ ತರ್ಕ. ಆಯುಷ್ಯ ಬೇಕೆ ಬೇಡವೇ ಎನ್ನುವುದು ಬೇರೆ ವಿಚಾರ. ಆದರೆ, ಅವರು ಬದುಕಿದ್ದಷ್ಟು ಕಾಲ ಸುಖವಾಗಿ, ಆರೋಗ್ಯವಾಗಿರಬೇಕು ಎನ್ನುವುದು ನಮ್ಮ ಆಶೆ. ಅವರಿಗೆ ವ್ಯವಸ್ಥೆ ಮಾಡಿಕೊಟ್ಟಾಗ ನೆಮ್ಮದಿಯಿಂದ ಜೀವನ ಸಾಗಿಸುವುದನ್ನು ನಾವು ಕಂಡಿದ್ದೇವೆ.
ಸಾಮಾನ್ಯವಾಗಿ ನಮ್ಮ ಜೀವನದಲ್ಲಿ ಬಾಲ್ಯ, ಯೌವನ, ಗೃಹಸ್ಥ ಮತ್ತು ವಾನಪ್ರಸ್ಥ ಎಂಬ ನಾಲ್ಕು ಹಂತಗಳಿರುತ್ತವೆ. ಬಾಲ್ಯ ಎನ್ನುವಂತಹದ್ದು ಎಲ್ಲರೊಂದಿಗೆ ಆಟವಾಡಿ ಬೆಳೆಯುವಂತಹ ಕಾಲ. ನಂತರ ಯೌವ್ವನ. ಈ ಕಾಲಘಟ್ಟದಲ್ಲಿ ಯುವಕ, ಯುವತಿಯರ ಪರಸ್ಪರ ಆಕರ್ಷಣೆಯಿಂದಾಗಿ ಸಾಮಾನ್ಯವಾಗಿ ಬದುಕು ಹೀಗೇ ಇರಬೇಕು, ಸಾವು ಬರಬಾರದು, ಸಾವು ಬಂದರೆ ಇಂತಹ ಜೀವನ ಇನ್ನೊಮ್ಮೆ ಎಲ್ಲಿ ಸಿಗುತ್ತೆ ಎನ್ನುವಷ್ಟರ ಮಟ್ಟಿಗೆ ಸುಖದ ಕಲ್ಪನೆ ಯೌವನದಲ್ಲಿ ದೊರೆಯುತ್ತದೆ. ಮುಂದೆ ಗೃಹಸ್ಥಾಶ್ರಮಕ್ಕೆ ಬಂದಾಗ ಸಂಸಾರದ ಹೊಣೆ, ಖರ್ಚುವೆಚ್ಚಗಳ ನಿರ್ವಹಣೆ, ಕರ್ತವ್ಯ, ಉದ್ಯೋಗದ ಬಗ್ಗೆ ಹೆಚ್ಚು ಮಹತ್ವ ಇರುತ್ತದೆ. ಬಳಿಕ ವಾನಪ್ರಸ್ಥ. ಅಂದರೆ, ಸುಮಾರು 60-65 ವರ್ಷಗಳ ಮೇಲೆ ಸಂಸಾರ ನಿರ್ವಹಣೆ ಜವಾಬ್ದಾರಿಯ ಮುಕ್ತಾಯದ ಹಂತಕ್ಕೆ ವಿರಕ್ತಿಯ ಮಾರ್ಗ ಹಿಡಿಯುವಂತಹದ್ದು. ವಿರಕ್ತಿ ಎಂದರೆ ಸಂನ್ಯಾಸವಲ್ಲ; ಆಸೆ, ಆಕಾಂಕ್ಷೆ, ಮೋಜು, ಮಸ್ತಿಗಳು ಸಾಕು. ಇನ್ನು ಕುಟುಂಬದ, ಮಕ್ಕಳ ಏಳಿಗೆ ಕಡೆಗೆ ಗಮನ ಕೊಡುತ್ತೇನೆ, ಸಾಮಾಜಿಕ ಕಾರ್ಯಕ್ರಮಗಳ ಮೇಲೆ ಗಮನ ಹರಿಸುತ್ತೇನೆ, ಮತ್ತು ನನ್ನಿಂದ ಯಾರಿಗೂ ಮುಜುಗರವಾಗದಂತೆ ನಡೆದುಕೊಳ್ಳುತ್ತೇನೆ ಎಂದು ಸಂಕಲ್ಪಿಸುವ ವಯಸ್ಸು. ಈ ವಯಸ್ಸಿನಲ್ಲಿ ತ್ಯಾಗ, ದಾನ ಮಾಡಿ ಪರೋಪಕಾರ ಮಾಡುವ ಹಂತಕ್ಕೆ ಅವರು ಬರುತ್ತಾರೆ. ವಾನಪ್ರಸ್ಥ ಹಂತದಲ್ಲಿರುವವರು ತಮ್ಮ ಬದುಕಿನ ಜೊತೆ ಇತರರ ಬದುಕನ್ನೂ ಗಮನಿಸಬೇಕು.
ಇಂದು ವೃದ್ಧರ ಬದುಕಿನ ಬಗ್ಗೆ, ಅವರು ನೆಮ್ಮದಿಯಿಂದ ಜೀವನ ಸಾಗಿಸಲು ಆತ್ಮಸ್ಥೈರ್ಯ ಒದಗಿಸುವ ಕರ್ತವ್ಯದ ಬಗ್ಗೆ ಸಾಮಾಜಿಕ ಪ್ರಜ್ಞೆ ಬೆಳೆಯಬೇಕು. ಎಲ್ಲರೂ ಹೀಗೆ ಇರುತ್ತಾರೆ, ಹೀಗೆ ನಡೆದುಕೊಳ್ಳುತ್ತಿದ್ದಾರೆ ಎಂಬುದು ಈ ಲೇಖನದ ಭಾವಾರ್ಥವಲ್ಲ. ಭಾವನಾತ್ಮಕ ಸಂಬಂಧ ಗಟ್ಟಿ ಇರುವ, ಅಜ್ಜಿ, ಅಜ್ಜ, ಅತ್ತೆ-ಮಾವ, ಸೊಸೆ ಅಳಿಯ ಎಂಬ ಸಂಬಂಧಗಳಿಗೆ ಬೆಲೆ ನೀಡಿ ಪರಸ್ಪರ ಅರಿತು ಬಾಳುವ ಕುಟುಂಬದಲ್ಲಿ ಎಲ್ಲರೂ ವಿಶೇಷವಾಗಿ ಹಿರಿಯರು ಸುಖ, ಶಾಂತಿ ನೆಮ್ಮದಿಯಿಂದ ಬದುಕುತ್ತಾರೆ.
ಮನೆಯಲ್ಲಿ ಇದ್ದಷ್ಟು ದಿನ ಅವರನ್ನು ನೋಡಿಕೊಳ್ಳುವ-ಗೌರವಿಸುವ ರೀತಿ, ಅವರ ಮಾನಸಿಕ ಸ್ಥಿತಿ ಅರಿತು ಅವರಿಗೆ ಬೇಕಾದ ಸಕಲ ವ್ಯವಸ್ಥೆಯನ್ನು ಒದಗಿಸುವ ಕುಟುಂಬ ಕಂಡಾಗ ತುಂಬಾ ಸಂತೋಷವಾಗುತ್ತದೆ. ಅಂಥವರಿಗೆ ದೇವರ ಆಶೀರ್ವಾದವೂ ಸಿಗುತ್ತದೆ.
ವೃದ್ಧಾಪ್ಯ ಅನಿವಾರ್ಯ. ಇದನ್ನು ಗಮನಿಸಿ ಹಲವರು ಯೌವನವನ್ನು ಸದ್ಬಳಕೆ ಮಾಡಿಕೊಂಡರೆ ಕೆಲವರು ಯೌವನದಲ್ಲಿ ಕೇವಲ ಮೋಜು-ಮಸ್ತಿ ಮಾಡಿ ವೃದ್ಧಾಪ್ಯವನ್ನು ಕಡೆಗಣಿಸಿ ಸತ್ಯವನ್ನು ಮರೆಮಾಚುವ ಪ್ರಯತ್ನ ಮಾಡುತ್ತಾರೆ. ಜೀವನಚಕ್ರ ನಿಧಾನ ಗತಿಯಲ್ಲಿ ತಿರುಗುತ್ತದೆ, ಯೌವನ ಅನುಭವಿಸಿದ ಪ್ರತಿಯೊಬ್ಬರಿಗೂ ವೃದ್ಧಾಪ್ಯ ಬರುತ್ತದೆ. ಆರೋಗ್ಯ ವಿಮೆ, ಪಿಂಚಣಿ ಯೋಜನೆಗಳನ್ನು ಮಾಡಿಸಿಕೊಂಡರೆ ಬದುಕು ಕೊಂಚ ಸರಾಗವಾಗಬಹುದು. ಪಿಂಚಣಿ ಇಲ್ಲದೆ ಸಾಮಾನ್ಯ ಉದ್ಯೋಗ ಮಾಡುವವರಿಗೂ ಸರ್ಕಾರದ ವತಿಯಿಂದ ನಿವೃತ್ತಿ ವೇತನ ಯೋಜನೆಗಳಿವೆ.
ಸಂಧ್ಯಾಕಾಲದ ಸುರಕ್ಷೆ ಅವರವರ ಬದುಕುವ ರೀತಿಯಲ್ಲಿರುತ್ತದೆ. ಮತ್ತು ವಿಶೇಷವಾಗಿ ಯುವ ಪೀಳಿಗೆ ವಾಸ್ತವವನ್ನು ಅರಿತುಕೊಳ್ಳಬೇಕು. ನಮಗೂ ವೃದ್ಧಾಪ್ಯ ಬರುತ್ತದೆ, ಆಗ ನಮ್ಮ ಮಕ್ಕಳೂ ನಮ್ಮನ್ನು ನೋಡಿಕೊಳ್ಳಬೇಕು ಎಂಬ ದೃಷ್ಟಿ ಹೊಂದಿರಬೇಕು. ಇಂತಹ ಸಕಾರಾತ್ಮಕ ಚಿಂತನೆ ಮೂಡಿದರೆ ಸಂಬಂಧಗಳು ಗಟ್ಟಿಗೊಳ್ಳುತ್ತವೆ. ಮತ್ತು ಸಮಾಜ ಸಕಾರಾತ್ಮಕವಾಗಿ, ಸದೃಢವಾಗಿ ರೂಪುಗೊಳ್ಳುತ್ತದೆ. ಭಾರತೀಯ ಕೌಟುಂಬಿಕ ನೆಲೆಗಟ್ಟು ಮತ್ತಷ್ಟು ಗಟ್ಟಿಗೊಳ್ಳುತ್ತದೆ.
(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು)