ಜೀವನದ ಮೌಲ್ಯ ಅರಿಯೋಣ; ಮನೋಲ್ಲಾಸ

Manollasa
Published on
| ರಶ್ಮಿ ಹೆಗಡೆ ಮುಂಬೈ

ಉದ್ಯಮಿ ಜೆಆರ್​ಡಿ ಟಾಟಾ ಒಮ್ಮೆ ಆತ್ಮೀಯ ಸ್ನೇಹಿತನನ್ನು ವರ್ಷಗಳ ನಂತರ ಭೇಟಿಯಾದರು. ಮಾತುಕತೆ ನಡುವೆ ಅವರ ಸ್ನೇಹಿತ ಏನನ್ನೋ ಬರೆಯಲು ಪೆನ್ನು ಹುಡುಕತೊಡಗಿದರು. ಒಂದು ಪೆನ್ನೂ ಆ ಕ್ಷಣಕ್ಕೆ ಸಿಗದಿದ್ದಾಗ ಬೇಸರ ವ್ಯಕ್ತಪಡಿಸುತ್ತ, ‘ವಾರದಲ್ಲಿ ಕನಿಷ್ಠ ನಾಲ್ಕು ಪೆನ್​ಗಳನ್ನಾದರೂ ಕಳೆದುಕೊಂಡುಬಿಡುತ್ತೇನೆ. ನನ್ನ ನಿಷ್ಕಾಳಜಿ ಹಾಗೂ ಮರೆಗುಳಿತನ ದೊಡ್ಡ ಸಮಸ್ಯೆಯಾಗಿಬಿಟ್ಟಿದೆ. ಮರೆಯುತ್ತೇನೆಂದು ಕಡಿಮೆ ಬೆಲೆಯ ಪೆನ್ನು ಖರೀದಿಸುತ್ತೇನೆ. ಹೇಗಿದ್ದರೂ ಕಡಿಮೆ ಬೆಲೆಯದು, ಕಳೆದರೂ ತೊಂದರೆಯಿಲ್ಲವೆಂದು ನಿಷ್ಕಾಳಜಿ ಹಾಗೂ ಅಲಕ್ಷ್ಯತನದಿಂದ ಕಳೆದುಕೊಂಡುಬಿಡುತ್ತೇನೆ’ ಎಂದರು. ಅದಕ್ಕೆ ಮುಗುಳ್ನಕ್ಕ ಟಾಟಾ, ‘ಪದೇಪದೆ ಅಗ್ಗದ ಬೆಲೆಯಲ್ಲಿ ಅಷ್ಟೊಂದು ಪೆನ್ನನ್ನು ಖರೀದಿಸಿ ಕಳೆದುಕೊಳ್ಳುವುದಕ್ಕಿಂತ ಒಂದು ದುಬಾರಿ ಲೇಖನಿ ಖರೀದಿಸಿ ನೋಡು, ಬಹುಶಃ ಆಗಲಾದರೂ ಅದನ್ನು ಎಚ್ಚರಿಕೆಯಿಂದ ಇಟ್ಟುಕೊಳ್ಳಬಹುದು’ ಎಂದಾಗ ಮರುದಿನವೇ ಸ್ನೇಹಿತ 22 ಕ್ಯಾರೆಟ್ ಬಂಗಾರದ ಪೆನ್ ಖರೀದಿಸಿ ಅದೃಷ್ಟಪರೀಕ್ಷೆಗೆ ಮುಂದಾದರು.

ಆರು ತಿಂಗಳ ನಂತರ ಸ್ನೇಹಿತರಿಬ್ಬರೂ ಮತ್ತೆ ಭೇಟಿಯಾದಾಗ ಟಾಟಾ ಅವರು, ‘ನಿನ್ನ ಪೆನ್ನಿನ ವಿಷಯ ಎಲ್ಲಿಗೆ ಬಂತು? ಈಗಲೂ ನಿಷ್ಕಾಳಜಿ ಹಾಗೂ ಮರೆಗುಳಿಯೇ?’ ಎಂದು ಕೇಳಿದರು. ಆಗ ಸ್ನೇಹಿತ, ‘ಆಶ್ಚರ್ಯವೆಂದರೆ ಆರು ತಿಂಗಳಿಂದ ಒಂದೇ ಪೆನ್ನನ್ನು ಉಪಯೋಗಿಸುತ್ತಿದ್ದೇನೆ. ಬಂಗಾರದ ಪೆನ್ನನ್ನು ಜೋಪಾನವಾಗಿ ಕಾಯ್ದುಕೊಂಡಿದ್ದೇನೆ. ಮರೆಯುವ ಪ್ರಶ್ನೆಯೂ ಇಲ್ಲ, ಕಳೆದುಕೊಳ್ಳುವ ಭಯವೂ ಇಲ್ಲ’ ಎಂದು ಸಂತೋಷ ವ್ಯಕ್ತಪಡಿಸಿದರು. ಅದಕ್ಕೆ ಟಾಟಾ, ‘ನಿನ್ನಲ್ಲೇನೂ ಮರೆಗುಳಿತನ ಇರಲಿಲ್ಲ, ನಿನ್ನ ಮನಸ್ಸು ಕಡಿಮೆ ಬೆಲೆಯ ಪೆನ್ನುಗಳಿಗೆ ನಿಷ್ಕಾಳಜಿ ತೋರಿಸಿತ್ತಷ್ಟೇ. ನೀನೀಗ ಕಾಳಜಿ ವಹಿಸಿದ್ದು ಪೆನ್ನನ್ನಲ್ಲ, ಅದರ ಮೌಲ್ಯವನ್ನು, ಬಂಗಾರದ್ದೆಂಬ ಕಾರಣಕ್ಕೆ’ ಎಂದಾಗ ಅವರ ಸ್ನೇಹಿತ ಹೌದೆಂದು ಒಪ್ಪಿಕೊಂಡರು.

ಮನುಷ್ಯರಾದ ನಾವು ಸಹಜವಾಗಿಯೇ ಅತಿ ಇಷ್ಟಪಟ್ಟಿದ್ದರ ಬಗ್ಗೆ, ಮೌಲ್ಯಯುತ ಎನಿಸಿದ್ದರ ಬಗ್ಗೆ ಹೆಚ್ಚಿನ ಕಾಳಜಿ, ಜವಾಬ್ದಾರಿ ವಹಿಸುತ್ತೇವೆ. ಕಾರಣ ಅದನ್ನು ಕಳೆದುಕೊಳ್ಳುವ ಭಯ. ವಿಚಿತ್ರವೆಂದರೆ, ಯಾವುದೇ ವಸ್ತು ಅಥವಾ ವ್ಯಕ್ತಿ ನಮ್ಮೊಂದಿಗಿರುವಾಗ ಅದರ ಮೌಲ್ಯ ಹಾಗೂ ಪ್ರಾಮುಖ್ಯ ನಮಗೆ ತಿಳಿಯದೆ, ನಿಷ್ಕಾಳಜಿ ಹಾಗೂ ಅಜಾಗರೂಕತೆಯಿಂದ, ಅದನ್ನು ಲೆಕ್ಕಿಸದೆ ಬದುಕುತ್ತೇವೆ. ಅದನ್ನು ಕಳೆದುಕೊಂಡಾಗ ದುಃಖಿಸುತ್ತೇವೆ. ತಂದೆ-ತಾಯಿ, ಕುಟುಂಬ ಜೊತೆಗಿರುವಾಗ ನಿಷ್ಕಾಳಜಿ ತೋರಿಸುವ ನಾವು ಅವರ ಅನುಪಸ್ಥಿತಿಯಲ್ಲಿ ಕೊರಗಿ, ನರಳುತ್ತೇವೆ. ದೇಹ ಆರೋಗ್ಯವಾಗಿರುವಾಗ ಅದರ ಬಗ್ಗೆ ನಿಷ್ಕಾಳಜಿ ವಹಿಸುತ್ತೇವೆ. ಸಂಬಂಧಗಳಿಗೆ ಬೆಲೆಕೊಟ್ಟಾಗ ಆ ಸಂಬಂಧ ಮುರಿಯದಂತೆ ಜಾಗರೂಕತೆಯಿಂದ ವ್ಯವಹರಿಸುತ್ತೇವೆ. ಜೀವನದ ಗುರಿಗೆ ಹೆಚ್ಚು ಬೆಲೆಕೊಟ್ಟಾಗ ಹಾದಿತಪ್ಪದಂತೆ ನೋಡಿಕೊಳ್ಳುತ್ತೇವೆ. ಹಣವನ್ನು ಗೌರವಿಸಿದರೆ ಅನವಶ್ಯಕ ಖರ್ಚುಗಳಿಗೆ ಕಡಿವಾಣ ಹಾಕುತ್ತೇವೆ. ಸಮಯವನ್ನು ಗೌರವಿಸಿದರೆ ಪ್ರತಿ ನಿಮಿಷವನ್ನೂ ಒಳ್ಳೆಯ ಕೆಲಸಗಳಿಗಾಗಿ ಮೀಸಲಿಡುತ್ತೇವೆ. ವಿದ್ಯೆಗೆ ಬೆಲೆ ಕೊಟ್ಟಾಗ ಕಷ್ಟಪಟ್ಟು ಓದಿ ಮುಂದೆಬರುತ್ತೇವೆ. ಪ್ರಕೃತಿಯಲ್ಲಿನ ಪ್ರತಿಯೊಂದು ಜೀವಕ್ಕೂ, ಜೀವನಕ್ಕೂ ಅದರದ್ದೇ ಘನತೆ, ತೂಕ ಎಂಬುದಿದೆ. ನಮಗೆ ದಕ್ಕಿರುವ ಈ ಮೌಲ್ಯಯುತವಾದ ಜೀವನ ಹಾಗೂ ಜೀವ ವ್ಯರ್ಥವಾಗದಂತೆ ಕಾಳಜಿವಹಿಸಿ ನೋಡಿಕೊಳ್ಳೋಣ.

(ಲೇಖಕರು ಹವ್ಯಾಸಿ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net