

‘ಅದೀಗತಾನೆ ವೈದ್ಯಕೀಯ ಪದವಿ ಪಡೆದು ಮೈಸೂರು ಜಿಲ್ಲೆ ಎಚ್.ಡಿ ಕೋಟೆ ತಾಲೂಕಿನ ಬುಡಕಟ್ಟು ಜನಾಂಗದವರ ಮಧ್ಯೆ ಕೆಲಸ ಮಾಡಬೇಕೆಂದು ತೆರಳಿದ್ದೆ. ಒಮ್ಮೆ ಹಾಡಿಯ ಆರೇಳು ಹೆಣ್ಣುಮಕ್ಕಳು ನಾಲ್ಕೆ ೖದು ಕಿಲೋಮೀಟರ್ ದೂರದ ನದಿಯಿಂದ ನೀರು ಹೊತ್ತು ತರುವುದನ್ನು ಗಮನಿಸಿದೆ. ಪಟ್ಟಣದಿಂದ ಹೋದ ನನಗೆ ಅವರ ಕಷ್ಟ ನೋಡಿ ಕನಿಕರ ಎನಿಸಿತು. ಕುಡಿಯುವ ನೀರಿಗಾಗಿ ಇಷ್ಟೊಂದು ದೂರದಿಂದ ನೀರು ಹೊತ್ತು ತರಬೇಕಲ್ಲ, ಇದಕ್ಕೆ ಏನಾದರೂ ಪರಿಹಾರ ಕಂಡುಹಿಡಿಯಬೇಕು ಎಂದು ಯೋಚಿಸತೊಡಗಿದೆ. ನನಗಿದ್ದ ಸಾಮಾಜಿಕ ಬಂಡವಾಳ ಉಪಯೋಗಿಸಿ ಆ ಹಾಡಿಯ ಹತ್ತಿರದಲ್ಲಿ ಕೊಳವೆಬಾವಿ ತೋಡಿಸಿ ನೀರಿನ ಬವಣೆ ತೀರಿಸುವ ಸಂಕಲ್ಪ ಮಾಡಿದೆ. ಕೆಲವಾರು ತಿಂಗಳಲ್ಲಿ ಸರ್ಕಾರದಿಂದ ಕೊಳವೆಬಾವಿ ಮಂಜೂರಾಗಿ ಅನುಷ್ಠಾನವೂ ಆಯಿತು. ಕುಡಿಯುವ ನೀರು ವ್ಯವಸ್ಥೆ ಆಗಿದ್ದರಿಂದ ನಮಗೆ ಗೌರವಕೊಟ್ಟು ಸ್ವಾಗತಿಸುತ್ತಾರೆ ಎಂಬ ಕಲ್ಪನೆ ಮತ್ತು ಅಪೇಕ್ಷೆಯೊಂದಿಗೆ ಆ ಹಾಡಿಗೆ ಭೇಟಿ ನೀಡಿದೆ. ಆದರೆ ಅಲ್ಲಿನ ಹೆಣ್ಣುಮಕ್ಕಳು, ‘ಮೊದಲು ನಾವು ಅದೆಷ್ಟು ಸುಖವಾಗಿದ್ದೆವು. ಅಷ್ಟು ದೂರ ಹೋಗಿ ನೀರು ಹೊತ್ತು ತರುವ ಸಮಯದಲ್ಲಾದರೂ ಈ ಕುಡುಕ ಗಂಡನಿಂದ ದೂರವಿದ್ದು, ಕಷ್ಟವನ್ನೆಲ್ಲ ಮರೆತು ನಮ್ಮೆಲ್ಲ ಸುಖದುಃಖ ಹಂಚಿಕೊಳ್ಳುತ್ತಿದ್ದೆವು. ಈ ಡಾಕ್ಟರ ವಯ್ಯಾ ಬಂದು ಮನೆಬುಡದಲ್ಲಿ ಕೊಳವೆಬಾವಿ ಹಾಕಿಸಿ ನಮ್ಮ ಬಾಳನ್ನ ಇನ್ನಷ್ಟು ನರಕವಾಗಿಸಿಬಿಟ್ಟ ಎಂದು ಬೈದುಕೊಳ್ಳುತ್ತಿದ್ದರು’ ಎಂದು ಅಭಿವೃದ್ಧಿಪರ ಚಿಂತಕ, ಸ್ವಾಮಿ ವಿವೇಕಾನಂದ ಯೂತ್ ಮೂವ್ವೆುಂಟ್ ಸಂಸ್ಥಾಪಕ ಡಾ. ಆರ್ ಬಾಲಸುಬ್ರಹ್ಮಣ್ಯಂ ಅವರು ಒಮ್ಮೆ ಅನುಭವ ಹಂಚಿಕೊಳ್ಳುತ್ತಿದ್ದರು.
ಅಭಿವೃದ್ಧಿಪರ ಕಾರ್ಯಕರ್ತರಾದ ನಮಗೆ ಎಲ್ಲ ಗೊತ್ತಿದೆ, ನಾವು ಹೇಳಿದ್ದನ್ನು ಸಮುದಾಯ ಕೇಳಬೇಕು ಎಂಬ ಧೋರಣೆ ಹಲವು ಬಾರಿ ಹೊಂದಿರುತ್ತೇವೆ. ಅವರ ಸಮಸ್ಯೆಗೆ ನಾವೇನೋ ಪರಿಹಾರ ಸೂಚಿಸಿದ್ದೇವೆ, ಸಮುದಾಯ ಅದನ್ನು ಒಪ್ಪಿಕೊಳ್ಳಬೇಕು ಎಂಬ ಗರ್ವ ನಮಗಿರುತ್ತದೆ. ಡಾ. ಬಾಲು ಅವರು ಆ ಘಟನೆಯ ಬಳಿಕ- ‘ಸಮುದಾಯದ ಜೊತೆ ಕುಳಿತು ರ್ಚಚಿಸಿ ತೀರ್ಮಾನ ತೆಗೆದುಕೊಂಡಾಗ ಮಾತ್ರ ಅದು ಸುಸ್ಥಿರ ಪರಿಹಾರವಾಗಲು ಸಾಧ್ಯ. ಅಷ್ಟು ಮಾತ್ರವಲ್ಲ, ನಮ್ಮ ಕಲ್ಪನೆಗೂ ನಿಲುಕದ ಪರಿಹಾರವನ್ನು ಸಮುದಾಯ ಸೂಚಿಸಬಹುದು’ ಎಂದು ಹೇಳುತ್ತಾರೆ. ಸಮುದಾಯಕ್ಕೆ ನಾವೇನೋ ಕಲಿಸುತ್ತೇವೆ ಎಂದು ಹೊರಟಾಗ ಅದೇ ಸಮುದಾಯ ಯಾವ ವಿಶ್ವವಿದ್ಯಾಲಯವೂ ಕಲಿಸದಂಥ ಹಲವು ಪಾಠಗಳನ್ನು ನಮಗೆ ಕಲಿಸುತ್ತದೆ.
ಧಾರವಾಡ ಜಿಲ್ಲೆಯ ಗ್ರಾಮವೊಂದಕ್ಕೆ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಗುಂಪೊಂದು ಭೇಟಿ ನೀಡಿತ್ತು. ಸಾಮಾನ್ಯ ರೈತರೊಬ್ಬರ ಮನೆಗೆ ತೆರಳಿ ಅವರ ಜೀವನಶೈಲಿ ಅರಿತುಕೊಳ್ಳಲು ಮಾತಿಗಿಳಿದಿದ್ದರು. ‘ಎರಡು ಎಕರೆ ಜಮೀನು ಹೊಂದಿರುವ ನಾನು ಪ್ರತೀ ವರ್ಷ ಹೂವು ಬೆಳೆಯುತ್ತಿದ್ದೆ, ಆದರೆ ಈ ವರ್ಷ ಜೋಳ ಬೆಳೆದಿದ್ದೇನೆ. ಏಕೆಂದರೆ ನನ್ನ ಮಗ ಈ ವರ್ಷ ಎಸ್ಸೆಸ್ಸೆಲ್ಸಿ ಓದುತ್ತಿದ್ದಾನೆ, ಹೂವು ಬೆಳೆದರೆ ಡಿಸೆಂಬರ್, ಜನವರಿಯಲ್ಲಿ ಕೊಯ್ಲು ಮಾಡಿ ಧಾರವಾಡ ನಗರಕ್ಕೆ ಒಯ್ದು ಮಾರಾಟ ಮಾಡಬೇಕು, ನನ್ನ ಮಗ ಕೂಡ ಕೆಲಸದಲ್ಲಿ ತೊಡಗಿಕೊಳ್ಳುತ್ತಾನೆ, ಇದರಿಂದ ಅವನ ವಿದ್ಯಾಭ್ಯಾಸಕ್ಕೆ ತೊಂದರೆ ಆಗುತ್ತದೆ ಎಂದು ಜೋಳ ಬೆಳೆದಿದ್ದೇನೆ. ಇದರಿಂದಾಗಿ ಒಂದು ಲಕ್ಷದಷ್ಟು ಆದಾಯ ಈ ವರ್ಷ ಕಡಿಮೆ ಆಗಿದೆ’ ಎಂದು ವಿವರಿಸಿದ ಆ ರೈತ ಓದಿದ್ದು ನಾಲ್ಕನೇ ತರಗತಿ ಮಾತ್ರ. ಮಗನ ವಿದ್ಯಾಭ್ಯಾಸಕ್ಕೆ ತೊಂದರೆ ಆಗಬಾರದೆಂದು ಒಂದು ವರ್ಷ ಮೊದಲೇ ಯೋಚನೆ ಮಾಡಿ ಈ ಬಾರಿ ಜೋಳ ಬೆಳೆಯುವ ನಿರ್ಧಾರ ಕೈಗೊಂಡಿರುವುದು ನಾವೆಲ್ಲ ಅವರಿಂದ ಕಲಿಯಬೇಕಾದ ಪಾಠ.
ಸರ್ಕಾರಿ ಶಾಲೆಯ ಸುತ್ತ ಇರುವ ಖಾಸಗಿ ಜಮೀನು ನೋಡಿಕೊಳ್ಳಲು ಪಕ್ಕದಲ್ಲೇ ಉಳಿದುಕೊಂಡಿರುವ ಅನಕ್ಷರಸ್ಥನೊಬ್ಬ ಏನೂ ಫಲಾಪೇಕ್ಷೆ ಇಲ್ಲದೆ ಪ್ರತೀ ನಿತ್ಯ ಶಾಲೆಯ ಅವರಣ ಸ್ವಚ್ಛಗೊಳಿಸುತ್ತಾನೆ. ‘ಶಾಲೆಯ ಆವರಣವನ್ನು ಸ್ವಚ್ಛವಾಗಿಡುವ ನಿನಗೆ ಏನು ಪ್ರೇರಣೆ?’ ಎಂದು ಕೇಳಿದರೆ ಆತ ಹೇಳುತ್ತಾನೆ- ‘ನಮ್ಮೂರ ಸಾಲಿ ಅಂದ್ರಾ ನಮ್ಮೂರ ಗುಡಿ ಇದ್ದಾಂಗ’ ಎಂದು!
ಒಮ್ಮೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಅಜ್ಜಿಯೊಬ್ಬಳು ಮಜ್ಜಿಗೆ ಒಯ್ಯುತ್ತಿದ್ದಳು. ಪಕ್ಕದಲ್ಲಿ ಕುಳಿತಿದ್ದ ಅಜ್ಜಿ ಜೊತೆ ಮಾತಿಗಿಳಿದೆ. ‘ಮಜ್ಜಿಗೆ ಎಲ್ಲಿಗೆ ಒಯ್ಯುತ್ತಿದ್ದೀಯ?’ ಎಂದು ಪ್ರಶ್ನಿಸಿದೆ. ‘ಮನೆಯಲ್ಲಿ ಹಸು ಸಾಕಿದ್ದೇವೆ. ನಿತ್ಯ ಮಜ್ಜಿಗೆ ಉಳಿಯುತ್ತದೆ, ಅದನ್ನು ಶಾಲೆಯ ಮಕ್ಕಳಿಗೆ ಕೊಡಲು ಹೊರಟಿದ್ದೇನೆ’ ಎಂದಳು. ‘ಶಾಲೆಗೆ ಮಜ್ಜಿಗೆ ಕೊಡುವ ಬದಲು ಡೈರಿಗೆ ಹಾಲು ಮಾರಿದರೆ ಹಣ ಸಿಗುತ್ತದಲ್ಲಾ?’ ಎಂದು ನನ್ನ ವ್ಯಾಪಾರಿ ಮನೋಭಾವದಲ್ಲಿ ಅಜ್ಜಿಗೆ ಪ್ರಶ್ನಿಸಿದೆ. ಅಜ್ಜಿ ಸಹಜವಾಗಿ ನನಗೆ ಹೇಳಿದಳು, ‘ಹೌದಪ್ಪಾ, ಡೈರಿಗೆ ಹಾಲುಕೊಟ್ಟರೆ ಹಣ ಬರುತ್ತೆ, ಮಕ್ಕಳಿಗೆ ಮಜ್ಜಿಗೆ ಕೊಟ್ಟರೆ ಪುಣ್ಯ ಬರುತ್ತೆ’. ಈ ಅಜ್ಜಿ ಯಾವ ವಿಶ್ವವಿದ್ಯಾಲಯದಿಂದಲೂ ಪದವಿ ಪಡೆದವಳಲ್ಲ. ಉತ್ತರ ಕನ್ನಡ ಜಿಲ್ಲೆಯಲ್ಲಿ ಮಕ್ಕಳ ಮಧ್ಯಾಹ್ನದ ಊಟಕ್ಕಾಗಿ ಶಾಲೆಗಳಲ್ಲಿ ಅಡುಗೆ ಮಾಡುತ್ತಾರೆ. ಊರಿನ ಜನ ಮನೆಯಲ್ಲಿ ತಾವು ಬೆಳೆದ ತರಕಾರಿ, ಹಾಲು, ಮಜ್ಜಿಗೆ ಒಯ್ದು ಶಾಲಾಮಕ್ಕಳಿಗೆ ನೀಡುವ ವ್ಯವಸ್ಥೆಯನ್ನು ನೋಡಬಹುದಾಗಿದೆ. ಶಾಲೆಯಲ್ಲಿ ಕಲಿಯುವ ಮಕ್ಕಳೆಲ್ಲ ನಮ್ಮ ಮಕ್ಕಳು ಎನ್ನುವ ಸಮುದಾಯದ ಮನೋಭಾವ ನಮಗೆಲ್ಲ ಪ್ರೇರಣೆ.
ಸ್ವಾಮಿ ವಿವೇಕಾನಂದ ಯೂತ್ ಮೂವ್ವೆುಂಟ್ ನಡೆಸುವ ಪ್ರಕಲ್ಪವೊಂದರಲ್ಲಿ ಬಡ ಪ್ರತಿಭಾವಂತ ಆಯ್ದ ಹೆಣ್ಣುಮಕ್ಕಳಿಗೆ ಹತ್ತನೇ ತರಗತಿ ನಂತರ ಉಚಿತ ಶಿಕ್ಷಣ ನೀಡಲಾಗುತ್ತದೆ. ಈ ಪ್ರಕಲ್ಪದಲ್ಲಿ ಆಯ್ಕೆಯಾದ ಕೆಲವು ಹೆಣ್ಣುಮಕ್ಕಳಿಗೆ ಧಾರವಾಡದ ಪುಸ್ತಕ ವ್ಯಾಪಾರಿಯೊಬ್ಬರು ಉಚಿತವಾಗಿ ಮೊದಲನೆ ಪಿಯುಸಿ ಪುಸ್ತಕ ವಿತರಿಸಿದ್ದರು. ಅವರಲ್ಲಿ ಒಬ್ಬ ಹೆಣ್ಣುಮಗಳು ಮಾರನೆ ವರ್ಷ ತನ್ನ ತಂದೆಯೊಂದಿಗೆ ಅದೇ ಪುಸ್ತಕ ಅಂಗಡಿಗೆ ಆಗಮಿಸಿ ಎರಡನೇ ವರ್ಷದ ಪಿಯುಸಿ ಪುಸ್ತಕ ಖರೀದಿಸುವ ಸಂದರ್ಭದಲಿ, ‘ಮಾಲೀಕರು ಈ ವರ್ಷವೂ ಉಚಿತವಾಗಿ ಪುಸ್ತಕ ನೀಡುವುದಾಗಿ ತಿಳಿಸಿದ್ದಾರೆ’ ಎಂದರು. ಅದಕ್ಕೆ ಅ ಹುಡುಗಿಯ ತಂದೆ ಸಾಮಾನ್ಯ ರೈತ, ‘ಕಳೆದ ವರ್ಷ ಆರ್ಥಿಕಸಂಕಷ್ಟದಲ್ಲಿದ್ದೆ, ಈ ವರ್ಷ ಸ್ವಲ್ಪ ಆರ್ಥಿಕವಾಗಿ ಸುಧಾರಿಸಿಕೊಂಡಿದ್ದೇನೆ, ನಮಗಿಂತ ಬಡವರಿಗೆ ಈ ವರ್ಷ ಪುಸ್ತಕ ಉಚಿತವಾಗಿ ಕೊಡಿ’ ಎಂದರು. ಶಾಲೆಯ ಮೆಟ್ಟಲನ್ನೇ ಹತ್ತದ ಇಂಥ ಪಾಲಕರ ಪ್ರಾಮಾಣಿಕತೆಯ ಪಾಠ ಶಿಕ್ಷಿತರೆನಿಸಿಕೊಂಡ ನಾವೆಲ್ಲ ಕಲಿಯಬೇಕಾದದ್ದು.
ಕಳೆದ ವರ್ಷ ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿ ಬೆಳಗ್ಗೆ ಹೊತ್ತು ತರಕಾರಿ ಖರೀದಿಗಾಗಿ ಮಾರ್ಕೆಟಿಗೆ ಹೋಗಿದ್ದೆ. ಕಾರು ನಿಲ್ಲಿಸುತ್ತಿದ್ದ ಹಾಗೆ ಒಬ್ಬ ಹುಡುಗ ಓಡಿ ಬಂದು, ‘ಮಲ್ಲಿಗೆ ಹೂವಿನಮಾಲೆ ತೆಗೆದುಕೊಳ್ಳಿ ಅಂಕಲ್’ ಎಂದು ಕಾಡತೊಡಗಿದ. ಆತನನ್ನು ನೋಡಿದ ತಕ್ಷಣ ಈತ ಶಾಲೆಗೆ ಹೋಗುವ ಹುಡುಗ ಅನ್ನಿಸಿತು. ‘ಏನು ಓದುತ್ತಿದ್ದೀಯ?’ ಎಂದು ಪ್ರಶ್ನಿಸಿದೆ. ‘ನಾಲ್ಕನೇ ತರಗತಿ ಓದುತ್ತಿದ್ದೇನೆ, ಅಪ್ಪ ಕಾರ್ಪೆಂಟರಿ ಕೆಲಸ ಮಾಡುತ್ತಾರೆ. ನಾವು ನಾಲ್ಕು ಜನ ಮಕ್ಕಳು. ಲಾಕ್ಡೌನ್ದಿಂದಾಗಿ ಅಪ್ಪನಿಗೆ ಕೆಲಸ ಇಲ್ಲ, ಅದಕ್ಕೆ ನಾನು ಹೂವು ಮಾರುತ್ತಿದ್ದೇನೆ’ ಎಂದು ಒಂದೇ ಉಸಿರಿನಲ್ಲಿ ಹೇಳಿದ. ‘ಹೂವಿನ ಮಾಲೆಗೆ ಎಷ್ಟು ಬೆಲೆ?’ ಎಂದು ಕೇಳಿದರೆ, ‘ಇಪ್ಪತ್ತು ರೂಪಾಯಿ ಅಂಕಲ್, ಒಂದೇ ಉಳಿದಿದೆ ತಗೊಳ್ಳಿ’ ಎಂದು ವಿನಂತಿಸಿದ. ನಾನು ಇಪ್ಪತ್ತು ರೂಪಾಯಿ ಅವನ ಕೈಗಿಟ್ಟು, ‘ಇದನ್ನ ಇಟ್ಟುಕೋ, ನನಗೆ ಹೂವಿನಮಾಲೆ ಬೇಡ, ಬೇರೆಯವರಿಗೆ ಮಾರಾಟ ಮಾಡು. ನಿನಗೆ ಇನ್ನೊಂದು ಇಪ್ಪತ್ತು ರೂಪಾಯಿ ಸಿಗುತ್ತದೆ’ ಎಂದೆ. ಆತ ಅದಕ್ಕೆ ಒಪ್ಪಲೇ ಇಲ್ಲ, ‘ಅಂಕಲ್ ಹಣ ಕೊಟ್ಟಿದ್ದೀರಿ, ಮಾಲೆ ತಗೋರಿ’ ಎಂದು ಕಾರಿನಲ್ಲಿ ಇಟ್ಟು ಹೊರಟೇ ಬಿಟ್ಟ. ಅಂಥ ಕಠಿಣ ಪರಿಸ್ಥಿತಿಯಲ್ಲೂ ಆ ಮಗುವಿನ ಸ್ವಾಭಿಮಾನ ನನ್ನ ಜೀವನಕ್ಕೊಂದು ಪಾಠ ಕಲಿಸಿತು.
(ಲೇಖಕರು ಸಾಮಾಜಿಕ ಕಾರ್ಯಕರ್ತರು)