ಇನ್ನಾದರೂ ಆಯುರ್ವೇದದ ಮಹತ್ವ ಅರಿಯೋಣ...

Column F
Published on
ಸರ್ವದೈವ ರುಜಾಕ್ರಾಂತಂ ಸರ್ವದೈವ ಶುಚೋ ಗೃಹಮ್ |

ಸರ್ವದಾ ವಿಪದಾಂ ಪ್ರಾಣ್ಯಂ ಮರ್ತ್ಯಾನಾಮಸ್ಥಿಪಂಜರಮ್|

ಮರ್ತ್ಯರಾದ ಮಾನವರ ಈ ಶರೀರವೆಂಬುದು ಯಾವಾಗಲೂ ರೋಗ ಗಳಿಂದ ತುಂಬಿಕೊಂಡು, ಶೋಕಗಳ ತವರುಮನೆಯಾಗಿ, ಸರ್ವದಾ ವಿಪತ್ತುಗಳಿಗೆ ಆಶ್ರಯವಾಗಿರುವ ಒಂದು ಎಲುಬಿನ ಗೂಡಾಗಿದೆ ಎಂದು ಈ ಸುಭಾಷಿತ ಹೇಳುತ್ತದೆ. ಅಜ್ಞಾನಿಗಳು ತಮ್ಮ ಶರೀರವನ್ನೇ ಆತ್ಮವೆಂದು ತಿಳಿದು ಶರೀರಾಭಿಮಾನದಿಂದ ದುಃಖಿಗಳಾಗಿರುತ್ತಾರೆ. ನಿಜವಾಗಿ ನೋಡಿ ದರೆ ಶರೀರ ಎಂದರೆ ‘ಶೀರ್ಯತೇ ಇತಿ ಶರೀರಮ್, ಸೊರಗಿ ನಾಶವಾಗುವ ವಸ್ತು.

ಕಲೆ, ಸಂಸ್ಕೃತಿ ಆಚಾರ-ವಿಚಾರ ಪರಂಪರೆಗಳಿರುವಂತೆ ಪ್ರತಿ ದೇಶ ಗಳಲ್ಲೂ ಅವರದ್ದೇ ಆದ ಜಾನಪದೀಯ ಮತ್ತು ರಾಷ್ಟ್ರೀಯ ವೈದ್ಯಕೀಯ ಪದ್ಧತಿ ಇದೆ. ಹೆಚ್ಚಿನ ದೇಶಗಳಲ್ಲಿ ಪುರಾತನವಾಗಿರುವ, ದೀರ್ಘಕಾಲದಿಂದ ಪರಿಪಾಠವಾಗಿ ಅಳವಡಿಸಿಕೊಂಡು ಬಂದ ವೈದ್ಯಪದ್ಧತಿ ಪರಂಪರೆಗಳಿವೆ. ಅವುಗಳನ್ನು ಕೆಲವು ದೇಶಗಳು ಪ್ರೋತ್ಸಾಹಿಸಿಕೊಂಡು ಬಂದರೆ, ಇನ್ನು ಕೆಲವು ದೇಶಗಳಲ್ಲಿ ಸೂಕ್ತ ಪ್ರೋತ್ಸಾಹ ಹಾಗೂ ಬಳಕೆಗೆ ಬಾರದೇ ನಷ್ಟವಾಗಿವೆ. ಸ್ವಾತಂತ್ರ್ಯಪೂರ್ವದಲ್ಲಿ ಬ್ರಿಟಿಷರು, ಫ್ರೆಂಚರು, ಪೋರ್ಚುಗೀಸರು ನಮ್ಮ ದೇಶಕ್ಕೆ ಬಂದು ಆಳ್ವಿಕೆ ನಡೆಸುತ್ತಿದ್ದಾಗ ಅವರೆಲ್ಲ ನಮ್ಮ ಪದ್ಧತಿ, ಆಚರಣೆಯನ್ನು ಕಂಡು ‘ಇವರೆಲ್ಲ ಮೂಢನಂಬಿಕೆಯವರು, ಮೂರ್ಖರು’ ಎಂದು ಹೀಯಾಳಿಸಿದ್ದರು. ಇದರ ಪರಿಣಾಮವಾಗಿ, ‘ಆಯುರ್ವೇದವೇ ಭಾರತೀಯ ವೈದ್ಯಕೀಯ ಪದ್ಧತಿ’ ಎಂದು ಹೇಳಿಕೊಳ್ಳುವುದಕ್ಕೂ ನಮಗೆ ನಾಚಿಕೆಯಾಗುವಂಥ ಪರಿಸ್ಥಿತಿ ಉಂಟಾಯಿತು. ಆದರೆ ಅದೇ ವೈದ್ಯಕೀಯ ಪದ್ಧತಿಯ ಮಹತ್ವ ತಿಳಿದು ಅದರ ಬಗೆಗಿನ ಕಲ್ಪನೆ ಮುಂದೆ ಬದಲಾಗುತ್ತ ಇಂದು ನಮ್ಮ ‘ಭಾರತೀಯ ಆಯುರ್ವೇದ ಮತ್ತು ಪ್ರಕೃತಿಚಿಕಿತ್ಸಾ ಪದ್ಧತಿ’ ವಿಶ್ವಕ್ಕೆ ವಿಶಿಷ್ಟ ಕೊಡುಗೆಯಾಗಿ ಹೊರಹೊಮ್ಮಿದೆ ಎಂದು ಹೆಮ್ಮೆಯಿಂದ ಹೇಳಿ ಕೊಳ್ಳುವ ಹಂತಕ್ಕೆ ಬಂದಿದ್ದೇವೆ. ಹಾಗಾಗಿ ಫೋಕ್ ಬಟ್ ನಾಟ್ ಫೇಕ್- (ಊಟ್ಝk ಆಠಿ ್ಞಠಿ ಊಚkಛಿ) ‘ಜಾನಪದೀಯ ಇರಬಹುದು ಆದರೆ ಢೋಂಗಿಯಲ್ಲ’ ಎನ್ನುವ ಅರ್ಥದಲ್ಲಿ ಈ ನುಡಿ ಬಳಕೆಯಲ್ಲಿದೆ.

ಭಾರತದ ಪ್ರಧಾನಮಂತ್ರಿಯವರು ಯೋಗ ಮತ್ತು ಪ್ರಕೃತಿಚಿಕಿತ್ಸೆಯನ್ನು ಪ್ರೋತ್ಸಾಹಿಸುತ್ತ ಬಂದಿದ್ದು ವಿಶ್ವಯೋಗ ದಿನವನ್ನು ಆಚರಿಸಿ ನಮ್ಮ ದೇಶದ ಯೋಗಶಕ್ತಿಯನ್ನು ವಿಶ್ವಕ್ಕೆ ತೋರಿಸಿ ಕೊಟ್ಟಿದ್ದಾರೆ. ಈ ಆಯುರ್ವೇದ ಪದ್ಧತಿ ಎಲ್ಲ ಪ್ರದೇಶಗಳಲ್ಲಿದ್ದರೂ ಸಂವಹನ ಕೊರತೆಯಿಂದ ಪ್ರಾದೇಶಿಕವಾಗಿ ಮಾತ್ರ ಆಚರಿಸಿಕೊಂಡು ಬರಲಾಗಿತ್ತು. ವೈದ್ಯರ ನಡುವೆ ಸಂಪರ್ಕ ಸಾಧನಗಳಿರಲಿಲ್ಲ. ಹಾಗಾಗಿ ಅವು ಸ್ಥಳೀಯ ವ್ಯಾಪ್ತಿಯನ್ನಷ್ಟೇ ಹೊಂದಿದ್ದವು.

ನಾನು ಇತ್ತೀಚೆಗೆ ಟಿ.ವಿ. ನೋಡುತ್ತಿದ್ದಾಗ, ಕಾರ್ಯಕ್ರಮವೊಂದರಲ್ಲಿ- ಮೂಗು, ಕಿವಿಯ ಭಾಗ ಕತ್ತರಿಸಿಕೊಂಡಿದ್ದವರಿಗೆ ಶುಶ್ರೂತನೆಂಬ ವೈದ್ಯ ಕ್ರಿಸ್ತಪೂರ್ವದಲ್ಲಿಯೇ ಅದನ್ನು ಮರುಜೋಡಿಸಲು ಶಸ್ತ್ರಚಿಕಿತ್ಸೆ ಪ್ರಾರಂಭಿಸಿದ ಮತ್ತು ಮಿದುಳಿನ ಶಸ್ತ್ರಚಿಕಿತ್ಸೆಯನ್ನೂ ಮಾಡುತ್ತಿದ್ದ ಎನ್ನುವ ಮಾಹಿತಿ ಲಭ್ಯವಾಯಿತು. ಆಗಿನ ಕಾಲಕ್ಕೆ ಇದು ಮಹತ್ತರ ಸಾಧನೆ. ಆಯುರ್ವೇದ, ಅಲೋಪಥಿ, ಹೋಮಿಯೋಪಥಿ ಹೀಗೆ ಯಾವುದೇ ಚಿಕಿತ್ಸಾ ಪದ್ಧತಿ ಇರಲಿ ಅನಾಟಮಿಯನ್ನು ಅರಿಯುವುದು ಮುಖ್ಯ. ದೇಹದ ಅಂಗಾಗಗಳ ಬಗ್ಗೆ ಮೊದಲು ಅರಿತುಕೊಳ್ಳಲೇಬೇಕು. ಶುಶ್ರೂತ ಈ ಅಂಗಾಂಗಗಳ ಅಧ್ಯಯನ ಹೇಗೆ ಮಾಡುತ್ತಿದ್ದ ಎಂದು ಆ ಕಾರ್ಯಕ್ರಮದಲ್ಲಿ ವಿವರಿಸಿದರು. ಅದರಲ್ಲಿ ತಿಳಿಸಿದಂತೆ, ಆತ ಮೃತದೇಹವನ್ನು ನೀರಿನಲ್ಲಿ ಹಾಕಿ ಕೊಳೆಯುವಂತೆ ಮಾಡಿ ಒಳಗಿನ ಅಂಗಾಗವನ್ನು ಪರೀಕ್ಷಿಸಿ ಅಧ್ಯಯನ ನಡೆಸುತ್ತಿದ್ದನಂತೆ. ಆ ಸಂದರ್ಭದಲ್ಲಿ ಉಂಟಾಗುವ ದುರ್ವಾಸನೆಯನ್ನು ಆತ ಸಹಿಸಿಕೊಂಡಿದ್ದ. ಒಬ್ಬ ವ್ಯಕ್ತಿ ತಾನು ಸಾಧಿಸಬೇಕು, ಅಧ್ಯಯನ, ಸಂಶೋಧನೆ ಮಾಡಬೇಕು ಎಂದು ದೃಢವಾಗಿ ಸಂಕಲ್ಪಿಸಿದರೆ ಶುಶ್ರೂತನ ಸಾಧನೆ ನೆನಪಾಗುತ್ತದೆ. ಎಷ್ಟೇ ಕಷ್ಟವಾದರೂ ಆತ ತನ್ನ ಸಂಶೋಧನೆ, ಅಧ್ಯಯನ ನಿಲ್ಲಿಸಲಿಲ್ಲ. ಸಂಶೋಧನೆಯನ್ನು ದಾಖಲೀಕರಿಸುವ ಕೆಲಸವನ್ನೂ ಮಾಡಿದ್ದಾನೆ. ಶುಶ್ರೂತ ನಮಗೆ ಮಾಡಿದ ದೊಡ್ಡ ಉಪಕಾರವೆಂದರೆ ಚಿಕಿತ್ಸೆಯನ್ನು ದಾಖಲೀಕರಣ ಮಾಡಿದ್ದು. ಕ್ರಿಸ್ತ ಪೂರ್ವ 800ನೇ ಇಸವಿಯಲ್ಲಿ ಮಾಡಿದ ಸಾಧನೆ ಇಂದಿನ ಪರಂಪರೆಗೆ ಒದಗುವಂತಾಯಿತು.

ಆಯುರ್ವೇದ ಪದ್ಧತಿ ಹಿಂದುಳಿದಿದ್ದು ಸೂಕ್ತ ದಾಖಲೀಕರಣದ ಕೊರತೆಯಿಂದ ಎನ್ನಬಹುದು. ಹಿರಿಯರು ತಮಗೆ ತಿಳಿದಿದ್ದ ಔಷಧವಿಧಾನ, ಜ್ಞಾನವನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸದೆ ಇರುವುದು ಹಾಗೂ ಹೊಸಪೀಳಿಗೆ ಹಿರಿಯರ ಅನುಭವ ಜ್ಞಾನವನ್ನು ಕಲಿಯಲು ಆಸಕ್ತಿ ತೋರದಿರುವುದು ಕೂಡ ಅನೇಕ ಜ್ಞಾನನಷ್ಟಕ್ಕೆ ಕಾರಣವಾಯಿತು. ಶ್ರೀಕ್ಷೇತ್ರ ಧರ್ಮಸ್ಥಳದ ಸಂಸ್ಕೃತಿ ಸಂಶೋಧನ ಪ್ರತಿಷ್ಠಾನದಲ್ಲಿ ಅನೇಕ ತಾಳೆಗರಿ ಗ್ರಂಥಗಳಿದ್ದು, ಅದರಲ್ಲಿ ಕೆಲವು ಆಯುರ್ವೇದಕ್ಕೆ ಸಂಬಂಧಿಸಿದ ತಾಳೆಗರಿ ಗ್ರಂಥಗಳಿವೆ. ಹಿಂದೆ ದಕ್ಷಿಣ ಭಾರತದಲ್ಲಿ ದೊರಕುವಂತಹ ಆಯುರ್ವೇದಕ್ಕೆ ಸಂಬಂಧಪಟ್ಟಂಥ ಗಿಡಮೂಲಿಕೆ, ಎಲೆ, ಪುಷ್ಪ, ಬೀಜ, ಮೂಲದ್ರವ್ಯಗಳು ಸಿಗದೇ ಇದ್ದಾಗ ಉತ್ತರ ಭಾರತದಲ್ಲಿ ಅದೇ ಪರಿಣಾಮ ಇರುವಂತಹ ಯಾವ ಬೇರು, ಗಿಡಮೂಲಿಕೆಗಳನ್ನು ತರಬಹುದು, ಬಳಸಬಹುದು ಎಂಬ ಸಂಶೋಧನೆ ನಡೆದು ಆಮದು-ರಫ್ತು ಆಗುತ್ತಿತ್ತು. ಪ್ರಸ್ತುತ ಉತ್ತರಭಾರತದಿಂದ ದಕ್ಷಿಣಭಾರತಕ್ಕೆ ವಿಮಾನದಲ್ಲಿ ಎರಡು-ಮೂರು ಗಂಟೆಗಳಲ್ಲಿ ತರಬಹುದು. ಆಧುನಿಕ ವ್ಯವಸ್ಥೆಗಳಿದ್ದರೂ ಪ್ರಕೃತಿಯಲ್ಲಿ ಔಷಧೀಯ ಸಸ್ಯಗಳ ಕೊರತೆ ಇದೆ. ಕಾಡು ನಾಶವಾಗಿದೆ. ಅನೇಕ ಗಿಡಮೂಲಿಕೆಗಳು, ಔಷಧ ಮೌಲ್ಯವುಳ್ಳ ಬೇರುಗಳು ನಮಗೆ ದೊರೆಯುತ್ತಿಲ್ಲ. ಆದರೆ ಇಂತಹ ಔಷಧ ಮೌಲ್ಯವುಳ್ಳ ಸಸ್ಯಗಳ ಬಗ್ಗೆ ವಿವರಿಸಲಾಗಿರುವ ಗ್ರಂಥಗಳಿವೆ, ಕಾಗದ ಪ್ರತಿಗಳಿವೆ.

‘ಮನೆಯ ಮಹಡಿಯನ್ನು (ಅಟ್ಟವನ್ನು) ಸ್ವಚ್ಛ ಮಾಡುವಾಗ ಒಂದು ಪುಸ್ತಕ ದೊರೆಯಿತು. ಅಜ್ಜ ಏನೋ ಸಂಶೋಧನೆ ಮಾಡುತ್ತಿದ್ದರಂತೆ ಅದನ್ನು ನಿಮಗೆ ಕೊಡುತ್ತಿದ್ದೇನೆ’ ಎಂದು ಕೆಲವರು ತಮಗೆ ದೊರೆತ ಗ್ರಂಥ, ತಾಡೋಲೆಗಳನ್ನು ಶ್ರೀಕ್ಷೇತ್ರಕ್ಕೆ ತಂದು ಕೊಡುತ್ತಿದ್ದರು. ಅದನ್ನು ವಿವರವಾಗಿ ಅವಲೋಕಿಸಿದಾಗ ಭಾರತೀಯ ವೈದ್ಯಕೀಯ ಪರಂಪರೆ ಬಗ್ಗೆ, ಆಯುರ್ವೇದ, ಔಷಧದ ಬಗ್ಗೆ ಉಲ್ಲೇಖ ದೊರೆಯುತ್ತಿತ್ತು. ಒಂದು ವೇಳೆ ಅದರ ಮಹತ್ವದ ಅರಿವಿಲ್ಲದೆ ಆ ಪುಸ್ತಕ, ಗ್ರಂಥವನ್ನು ನಾಶ ಮಾಡುತ್ತಿದ್ದರೆ ಆ ಜ್ಞಾನ ಅಲ್ಲಿಯೇ ನಶಿಸಿ ಹೋಗುತ್ತಿತ್ತು. ಕೆಲವರು ಅದನ್ನು ತಂದು ಕೊಟ್ಟ ಕಾರಣ ಧರ್ಮಸ್ಥಳದಲ್ಲಿ ವ್ಯವಸ್ಥಿತವಾಗಿ ಸಂರಕ್ಷಿಸಲಾಗುತ್ತಿದೆ. ಇನ್ನೂ ಅನೇಕರು ತಮ್ಮ ಜ್ಞಾನವನ್ನು ಸರಿಯಾಗಿ ದಾಖಲೀಕರಣ ಮಾಡದೆ ಇದ್ದುದರಿಂದ ಅವರಲ್ಲಿನ ಜ್ಞಾನ ಅವರೊಂದಿಗೆ ನಶಿಸಿವೆ. ನಮ್ಮಲ್ಲಿ ರೋಗ ನಿವಾರಣೆಗೆ ಕೊಡುತ್ತಿದ್ದ ಔಷಧವನ್ನು ಇನ್ನೊಬ್ಬರಿಗೆ ತಿಳಿಸಿದರೆ ಅದರ ಶಕ್ತಿ ನಾಶವಾಗುತ್ತದೆ ಎಂಬ ಭಾವನೆಯೂ ಇದ್ದ ಕಾರಣ ಅನೇಕ ಜ್ಞಾನ ಹಿರಿಯರಲ್ಲೇ ಉಳಿದು ಮುಂದಿನ ಪೀಳಿಗೆಗೆ ಪಸರಿಸಲಿಲ್ಲ.

ಹಾಗಾಗಿ ಈಗ ಗ್ರಂಥಗಳಲ್ಲಿ ದಾಖಲಾಗಿ ಇರುವಂತಹವುಗಳನ್ನು ಉಳಿಸಿ ಮತ್ತು ಬೆಳೆಸಬೇಕಾದ ಕರ್ತವ್ಯ ನಮ್ಮದು. ಈ ನಿಟ್ಟಿನಲ್ಲಿ ಹೆಚ್ಚಿನ ಸಂಶೋಧನೆಗಳು ನಡೆಯಬೇಕಿದೆ. ಆಯುರ್ವೇದದಲ್ಲಿ ಮಾಡಲಾಗುವ ಸಂಶೋಧನೆಗಳನ್ನು ಅಂಗೀಕರಿಸುವ ಮಹತ್ತರ ಜವಾಬ್ದಾರಿ ವಿ.ವಿ.ಗಳಿಗಿದೆ. ಈ ಮೂಲಕ ಆಯುರ್ವೇದ ಔಷಧಗಳಿಗೆ ಮಾನ್ಯತೆ ಒದಗಿಸಬೇಕಿದೆ. ಅಲೋಪಥಿಗೂ, ಆಯುರ್ವೇದಕ್ಕೂ ಇರುವ ವ್ಯತ್ಯಾಸ ಏನೆಂದರೆ ಅಲೋಪಥಿಯಲ್ಲಿ ಸಾಮಾನ್ಯವಾಗಿ ರೋಗ ಬಂದಾಗ ಒಂದೇ ತೆರನಾದ ಔಷಧ ನೀಡಲಾಗುತ್ತದೆ. ಆಯುರ್ವೇದದಲ್ಲಿ ಪ್ರತ್ಯೇಕವಾಗಿ ಪರೀಕ್ಷೆ ಮಾಡಿ ಒಬ್ಬೊಬ್ಬರಿಗೂ ಸೂಕ್ತವಾದಂಥ ಪ್ರಮಾಣದಲ್ಲಿ ಔಷಧ ನೀಡಲಾಗುತ್ತದೆ. ಆಯಾ ದೇಹದ ರೋಗದ ತೀವ್ರತೆಗೆ ಅನುಗುಣವಾಗಿ ಮದ್ದನ್ನು ನೀಡಲಾಗುತ್ತದೆ. ಕರೊನಾ ಸಾಂಕ್ರಮಿಕ ರೋಗ ಹರಡಿದಾಗ ಆಯುರ್ವೇದ ಚಿಕಿತ್ಸಾ ವಿಧಾನದಲ್ಲೂ ಔಷಧದ ಸಂಶೋಧನೆಗಳು ನಡೆದು ಸಾಮೂಹಿಕವಾಗಿ ಔಷಧವನ್ನು ಒದಗಿಸುವ ಕಾರ್ಯ ಮಾಡಲಾಯಿತು. ಕರೊನಾಗೆ ಆಯುರ್ವೇದ ಔಷಧಗಳು ಬಹಳ ಪರಿಣಾಮಕಾರಿಯಾಗುತ್ತಿವೆ ಎಂಬ ಸುದ್ದಿಗಳೂ ಪತ್ರಿಕೆಗಳಲ್ಲಿ ಪ್ರಕಟವಾದವು. ಆದರೆ ಆ ಆಯುರ್ವೇದ ಔಷಧಗಳಿಗೆ ‘ಅಧಿಕೃತ’ ಎಂಬ ಮುದ್ರೆ ಸಿಗದೆ ಅಥವಾ ‘ಆಯುರ್ವೇದದಿಂದಲೇ ವಾಸಿಯಾಯಿತು’ ಎಂದು ಸಮರ್ಪಕ ಪುರಾವೆ ದೊರೆಯದೆ ಆ ಔಷಧದ ವಿಧಾನಕ್ಕೆ ಮಾನ್ಯತೆ ದೊರೆಯಲಿಲ್ಲ. ವಿಶ್ವವಿದ್ಯಾಲಯಗಳು ಇಂತಹ ಔಷಧಗಳನ್ನು, ಸಂಶೋಧನೆಯನ್ನು ಪರಿಶೀಲಿಸಿ ಅದರ ಪರಿಣಾಮಕಾರಿತ್ವದ ಬಗ್ಗೆ ವಿವರ ಪಡೆಯಬೇಕು. ಅಲೋಪಥಿ ಲಸಿಕೆಗಳ ಜೊತೆಗೆ ಇದನ್ನೂ ಪ್ರಯತ್ನಿಸಿ ಎಂದು ಹೇಳಬಹುದು. ಅಲೋಪಥಿ ಔಷಧದ ಜೊತೆಗೆ ಆಯುರ್ವೇದ ಔಷಧ ತೆಗೆದುಕೊಂಡಾಗ ಹೆಚ್ಚು ಪರಿಣಾಮಕಾರಿಯಾಯಿತು ಎಂಬ ವರದಿಗಳಿವೆ. ಹಾಗಾಗಿ ವಿಶ್ವವಿದ್ಯಾಲಯಗಳು ಈ ಬಗ್ಗೆ ಅಧಿಕೃತ ಮಾಹಿತಿಯನ್ನು ಕಲೆ ಹಾಕಿ ಆಯುರ್ವೇದ ಔಷಧದ ಕುರಿತಾಗಿ ಮಾಹಿತಿಯನ್ನು ಒದಗಿಸಿದರೆ ಉತ್ತಮ.

ಆಯುರ್ವೇದದ ಜೊತೆಗೆ ವಿಶ್ವದಲ್ಲೇ ಪ್ರಥಮವಾಗಿ ಪ್ರಕೃತಿ ಚಿಕಿತ್ಸಾ ಕಾಲೇಜನ್ನು ನಾವು ಪ್ರಾರಂಭಿಸಿದಾಗ ‘ಇಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳ ಭವಿಷ್ಯವೇನು’, ಯಾಕೆಂದರೆ ಇವರು ಚುಚ್ಚುಮದ್ದು, ಮಾತ್ರೆಗಳನ್ನು ಕೊಡುವುದಿಲ್ಲ. ಸಮರ್ಪಕ ಸಿದ್ಧ ಔಷಧಗಳಿಲ್ಲ. ವೈದ್ಯರೆಂದುಕೊಂಡು ಇವರು ಹೇಗೆ ಬದುಕುತ್ತಾರೆ? ಎಂದು ಅನೇಕ ಜನರು ಪ್ರಶ್ನಿಸಿದ್ದರು. ಆಗ ನಾನು ಒಂದು ಮಾತು ಹೇಳುತ್ತಿದ್ದೆ. ಆಯುರ್ವೇದ ಮತ್ತು ಪ್ರಕೃತಿಚಿಕಿತ್ಸೆ ರಫ್ತಾಗುತ್ತದೆ. ಅಲೋಪಥಿ ಇಂಪೋರ್ಟ್ (ಆಮದು) ಆದ ಪದ್ಧತಿಯಾದರೆ ಪ್ರಕೃತಿ ಚಿಕಿತ್ಸೆ, ಆಯುರ್ವೇದ ಎಕ್ಸ್​ಪೋರ್ಟ್ (ರಫ್ತು) ಆಗುತ್ತದೆ. ಅದರಂತೆ ಇಂದು ಎಸ್.ಡಿ.ಎಂ. ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ವಿದೇಶದಲ್ಲಿ ಪ್ರಕೃತಿಚಿಕಿತ್ಸಾ ತಜ್ಞರಾಗಿದ್ದಾರೆ. ಕಾಲೇಜಿನಲ್ಲಿರುವ 125 ಸೀಟಿಗೆ ದೇಶದ ಎಲ್ಲ ರಾಜ್ಯಗಳಿಂದಲೂ ವಿದ್ಯಾರ್ಥಿಗಳು ವ್ಯಾಸಂಗಕ್ಕೆ ಬರುತ್ತಿದ್ದಾರೆ. ವಿವಿಧ ದೇಶಗಳಿಗೆ ಪ್ರವಾಸ ಹೋದಾಗ ಅಲ್ಲಿ ನಮ್ಮ ವಿದ್ಯಾರ್ಥಿಗಳು ಭೇಟಿಯಾಗಿ, ಪ್ರಕೃತಿಚಿಕಿತ್ಸೆಯ ಬಗ್ಗೆ ಹೆಮ್ಮೆಯ ಮಾತುಗಳನ್ನಾಡುತ್ತಾರೆ. ಗಲ್್ಪ ರಾಷ್ಟ್ರದಲ್ಲಿದ್ದ ನಮ್ಮ ಹಳೆಯ ವಿದ್ಯಾರ್ಥಿಗಳು ನನ್ನನ್ನು ಭೇಟಿ ಮಾಡಿ, ‘ಸರ್ ಆಯುರ್ವೆದ ಮತ್ತು ಪ್ರಕೃತಿಚಿಕಿತ್ಸೆ ಪದ್ಧತಿಯನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದೇವೆ’ ಎಂದು ಹೇಳಿದರು. ಗಲ್್ಪನಂತಹ ರಾಷ್ಟ್ರಗಳಲ್ಲೂ ಭಾರತೀಯ ಸಂಸ್ಕೃತಿ, ಯೋಗ, ಆಯುರ್ವೇದ ಪ್ರಕೃತಿಚಿಕಿತ್ಸೆಗೆ ಪ್ರಾತಿನಿಧ್ಯ ದೊರೆತಿರುವುದು ಹೆಮ್ಮೆಯ ವಿಚಾರ. ನಮ್ಮ ಸಂಸ್ಥೆಯಲ್ಲಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಹೆಚ್ಚು ಹೆಚ್ಚು ಪ್ರಾಯೋಗಿಕ ತರಬೇತಿಗಳನ್ನು ನೀಡಲು ಹೇಳುತ್ತಿರುತ್ತೇನೆ. ಯಾಕೆಂದರೆ ವಿದ್ಯಾರ್ಥಿಗಳು ಹೆಚ್ಚಿನ ಸಮಯವನ್ನು ರೋಗಿಗಳೊಂದಿಗೆ ಕಳೆಯುತ್ತಾರೆ. ಈ ಸಂದರ್ಭದಲ್ಲಿ ಅವರ ಅನಾರೋಗ್ಯದ ಬಗ್ಗೆ ತಿಳಿದುಕೊಳ್ಳಲು, ಹೇಗೆ ಚಿಕಿತ್ಸೆ ನೀಡಬೇಕೆಂದು ಅರಿಯಲು ಸಹಕಾರಿಯಾಗುತ್ತದೆ. ಇದರಿಂದ ಹೆಚ್ಚು ಸಂಶೋಧನೆ, ಅಧ್ಯಯನ ಸಾಧ್ಯವಾಗುವುದು.

ಡೇವಿಡ್ ಪ್ರಾಲೆ ಎನ್ನುವ ವಿದ್ವಾಂಸರು ಭಾರತೀಯ ಯೋಗ ಮತ್ತು ಆಯುರ್ವೆದದ ಬಗ್ಗೆ ಹೀಗೆ ಹೇಳುತ್ತಾರೆ. ಆಯುರ್ವೆದವು ಮೂಲತಃ ಸ್ವಯಂ ಆರೋಗ್ಯಸುಧಾರಕ ತಂತ್ರ. ನಮ್ಮ ಆರೋಗ್ಯದ ತಪ್ಪು-ನೆಪ್ಪುಗಳನ್ನು ನಾವೇ ತಿಳಿದುಕೊಂಡಲ್ಲಿ ಆರೋಗ್ಯ ಸುಧಾರಿಸಿಕೊಳ್ಳಬಹುದು. ನಾವು ಅನುಸರಿಸುವ ಜೀವನಶೈಲಿ ಹಾಗೂ ಆಹಾರವಿಧಾನ ಪ್ರಮುಖವಾದುದು.

(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net