ಮನೋಲ್ಲಾಸ: ಅನ್ಯರ ದುಃಖವನ್ನೂ ಅರಿಯೋಣ..

Manollasa
Published on
| ಡಾ.ಕೆ.ಪಿ.ಪುತ್ತೂರಾಯ

ಒಂದೂರಲ್ಲಿ ಒಬ್ಬ ಕಡುಬಡವ ಮಡದಿ ಮತ್ತು ಪುಟ್ಟ ಮಗಳ ಜೊತೆ ಊರ ಹೊರಗಡೆ ಸ್ಮಶಾನದ ಬಳಿ ಕಟ್ಟಿಕೊಂಡ ಗುಡಿಸಿಲಿನಲ್ಲಿ ವಾಸವಾಗಿದ್ದ. ಸ್ಮಶಾನಕ್ಕೆ ಬಂದ ಹೆಣಗಳನ್ನು ಸಿಂಗರಿಸಿ ಮರದ ಪೆಟ್ಟಿಗೆಯೊಳಗಿರಿಸಿ, ಹೂಳಲು ಅಣಿ ಮಾಡಿಕೊಡುವುದೇ ಈತನ ಕೆಲಸ. ಇದರಿಂದ ಬಂದ ಹಣದಿಂದಲೇ ಅವನ ಕುಟುಂಬ ಜೀವನ ಸಾಗುತ್ತಿತ್ತು. ಅರ್ಥಾತ್, ಸ್ಮಶಾನಕ್ಕೆ ಯಾವುದಾದರೊಂದು ಶವ ಬಂದರೆ ಮಾತ್ರ ಇವನ ಕೈಗೊಂದು ಕೆಲಸ; ಬಿಡಿಕಾಸು, ಮನೆಯಲ್ಲೊಂದಿಷ್ಟು ಊಟ. ಇಲ್ಲವಾದರೆ ಉಪವಾಸವೇ ಗತಿ. ಇದು ಹಸಿವೆಯನ್ನು ತಡೆಯಲಾಗದ ಅವನ ಪುಟ್ಟಮಗಳಿಗೆ ಬಹಳ ಕಷ್ಟವಾಗುತ್ತಿತ್ತು. ಆದುದರಿಂದಲೇ ಹೆಣ ಬಂದ ದಿನ ಆ ಮಗುವಿನ ಮುಖ ಅರಳುತ್ತಿತ್ತು. ಕಾರಣ ಇಂದು ತಿನ್ನಲು ಏನಾದರೂ ಸಿಗುತ್ತದೆ ಎಂಬ ಅರಿವಾಗಿ ಅವಳಲ್ಲಿ ಸಂತೋಷದ ಛಾಯೆ ಮೂಡುತ್ತಿತ್ತು. ಈ ಕಾರಣದಿಂದಲೇ ಆಕೆ ದಿನಾ ಮನೆಯ ಮುಂದೆ ಹೆಣಗಳಿಗಾಗಿ ಕಾಯುತ್ತಿದ್ದಳು. ಪ್ರತೀ ಬಾರಿ ಹೆಣವನ್ನು ನೋಡಿದ ಕ್ಷಣ ಅವಳ ಮುಖದಲ್ಲಿ ಏನೋ ಒಂದು ನಗು, ಸಂತಸ, ಹೊರಹೊಮ್ಮುತ್ತಿತ್ತು. ಆದರೆ ಹೆಣದ ಜೊತೆ ಬಂದ ಸಂಬಂಧಿಕರ ಕಣ್ಣೀರು ಮಾತ್ರ ಆಕೆಯ ಕಣ್ಣುಗಳಿಗೆ ಕಾಣುತ್ತಲೇ ಇರಲಿಲ್ಲ. ಒಂದು ದಿನ ಗುಡಿಸಲಿನ ಎದುರು ಹೆಣಕ್ಕಾಗಿ ಕಾಯುತ್ತ ಕುಳಿತಿದ್ದ ಆ ಹೆಣ್ಣುಮಗುವಿಗೆ ನಿರಾಶೆ ಉಂಟಾಯಿತು. ಕಾರಣ ಎಷ್ಟು ಹೊತ್ತಾದರೂ ಒಂದು ಶವವೂ ಬರಲಿಲ್ಲ. ಇನ್ನೇನು ಕತ್ತಲಾಗುತ್ತಿದೆ ಎನ್ನುವಷ್ಟರಲ್ಲಿ ನಾಲ್ಕು ಜನರು ಶವ ಎತ್ತಿಕೊಂಡು ಸ್ಮಶಾನದೆಡೆಗೆ ಬರುವ ದೃಶ್ಯ ಗೋಚರಿಸಿತು. ಸಂತೋಷದಿಂದ ಆಕೆ ಅಪ್ಪನನ್ನು ಆ ಹೆಣವನ್ನು ಸಿಂಗರಿಸುವುದಕ್ಕೆ ಕರೆಯಲಾರಂಭಿಸಿದಳು. ಆದರೆ ಎಷ್ಟು ಕೂಗಿದರೂ ಅಪ್ಪ ಬರಲಿಲ್ಲ. ಶವವನ್ನು ಇವರ ಗುಡಿಸಲಿನ ಮುಂದೆಯೇ ಇಳಿಸಿದರು. ಹುಡುಗಿ ಹೆಣದ ಮುಖದ ಮೇಲೆ ಹೊದಿಸಿದ ವಸ್ತ್ರವನ್ನು ಸರಿಸಿ ನೋಡಲಾಗಿ ಅವಳಿಗೆ ದಿಗ್ಭ್ರಮೆಯೇ ಕಾದಿತ್ತು. ಅದು ಆಕೆಯ ಅಪ್ಪನ ಶವವೇ ಆಗಿತ್ತು! ದುಃಖ ಉಮ್ಮಳಿಸಿತು; ಕಣ್ಣೀರಧಾರೆ ಹರಿಯತೊಡಗಿತು.

ತಾತ್ಪರ್ಯ ಇಷ್ಟೆ: ಇತರರಿಗೆ ಮೃತ್ಯು ಬಂದರೆ, ನಮಗೆ ಅದು ಒಂದು ಸುದ್ದಿ ಅಷ್ಟೆ. ಆದರೆ ಆ ಮೃತ್ಯು ನಮ್ಮವರದೇ ಆಗಿದ್ದಾಗ ನಮಗೆ ಸಹಿಸಲಾರದ ದುಃಖ. ಯಾರದೋ ಒಂದು ಮಗು ರಸ್ತೆ ದಾಟುವಾಗ ಅಪಘಾತಕ್ಕೆ ಈಡಾಯಿತೆಂದರೆ ಒಂದಿಷ್ಟು ಕನಿಕರ. ಆದರೆ ಆ ಮಗು ನಮ್ಮ ಮನೆಯ ಮಗುವಾಗಿದ್ದಾಗ ಸಹಿಸಲಾರದ ಸಂಕಟ. ಇಷ್ಟಕ್ಕೂ ಕಾರಣ ‘ನನ್ನದು’, ‘ನಮ್ಮವರು’ ಎಂಬ ವ್ಯಾಮೋಹ. ಏನೇ ನೋವುಗಳಿರಲಿ ನಾವೇ ಅನುಭವಿಸದ ಹೊರತು, ಇತರರ ನೋವು ಬೇಗ ಅರ್ಥವಾಗದು. ಈ ಹಿನ್ನೆಲೆಯಲ್ಲಿ ಇತರರ ಮನಸ್ಸನ್ನು ಓದಿ ಅರ್ಥಮಾಡಿಕೊಳ್ಳುವಲ್ಲಿ ಹೆಚ್ಚಿನವರು ಅನಕ್ಷರಸ್ತರೇ ಸರಿ. ಆದುದರಿಂದ ಅನುಕಂಪದ ಜೊತೆ ಅನುಭೂತಿಯೂ ಇರಲಿ. ನಮ್ಮ ನೋವು ನಮ್ಮ ಅನುಭವಕ್ಕೆ ಬಂದರೆ, ನಾವಿನ್ನೂ ಜೀವಂತವಾಗಿದ್ದೇವೆ ಎಂದರ್ಥ. ಇತರರ ನೋವು ಕೂಡ ನಮಗೆ ಅರಿವಾದರೆ, ನಾವು ಮನುಷ್ಯರಾಗಿದ್ದೇವೆ ಎಂದರ್ಥ. ಆದುದರಿಂದ ಇತರರ ನೋವನ್ನೂ ಅರಿತುಕೊಳ್ಳುವ ವ್ಯವಧಾನವಿರಲಿ!

(ಲೇಖಕರು ಸಾಹಿತಿ, ವಾಗ್ಮಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net