ಆಯುರ್ವೇದ ತಿಳಿಯೋಣ, ಆರೋಗ್ಯವಾಗಿರೋಣ: ಸಾಧನೆಗೆ ಬೇಕು ಸದೃಢ ಆರೋಗ್ಯ..

Putani Lead
Published on

| ಡಾ.ಸಾವಿತ್ರಿ ಆಯುರ್ವೇದ ತಜ್ಞೆ

ತನ್ನ ಗುರಿಯನ್ನು ಸಾಧಿಸಬಲ್ಲವನೇ ಜಾಣ. ಅವನೇ ಹೀರೋ! ಹನುಮಂತನಿಗೆ ಸೀತಾದೇವಿಯನ್ನು ಹುಡುಕುವುದು ಗುರಿಯಾಗಿತ್ತು. ಅದಕ್ಕಾಗಿ ಸಮುದ್ರವನ್ನೇ ಲಂಘಿಸಿದ. ಬಾಲಕ ಧ್ರುವ ಮುಗ್ಧ ತನ್ಮಯತೆಯಿಂದ ಅಮರನಾದ. ಪುಟ್ಟ ನಚಿಕೇತ ಯಮನಿಗೆ ಸವಾಲಾದ! ಮಕ್ಕಳಿಗೆ ದೇಹ - ಮೂರ್ತಿ ಚಿಕ್ಕದಾದರೇನಂತೆ? ಅನೇಕ ಬಾರಿ ದೊಡ್ಡವರೂ ಸಾಧಿಸಲಾಗದ ಸಾಧನೆಗಳನ್ನು ಮಾಡಬಲ್ಲರು! ಮಕ್ಕಳ ಪುಟ್ಟ ದೇಹದಲ್ಲಿ ಅಡಗಿರುವುದೂ ಅದೇ ಆತ್ಮ ಚೈತನ್ಯವಲ್ಲವೇ? ಆದರೆ, ಯಾವುದೇ ಸಾಧನೆಗಾದರೂ ‘ಆರೋಗ್ಯ’ ಬಲು ಮುಖ್ಯ. ಅದಕ್ಕೆ, ತಿಳಿದವರು ಹೇಳಿದ್ದು, ಶರೀರಮಾದ್ಯಂ ಖಲು ಧರ್ಮಸಾಧನಂ ಎಂದು. ತಾನು ಆರೋಗ್ಯದಿಂದರಬೇಕೆಂದರೆ; ತಿಳಿವಳಿಕೆ - ಧೈರ್ಯ - ಸಮಯ ಪ್ರಜ್ಞೆ ಮೂರೂ ಮುಖ್ಯ. ನಾವು, ಮನುಷ್ಯರೂ ಸಹ ಪ್ರಕೃತಿಯ ಒಂದು ಅಂಶವೇ ಹೊರ ಪ್ರಕೃತಿಯ ಬದಲಾವಣೆಗಳು ನಮ್ಮ ದೇಹ-ಮನಸ್ಸುಗಳ ಮೇಲೆ ಖಂಡಿತ ಆಗುತ್ತದೆ. ಅವನ್ನು ಗಮನಿಸುವುದು ಮುಖ್ಯ. ಹಾಗೆಯೇ ನಮಗಾದ ತೊಂದರೆಗಳಿಗೂ ಪ್ರಕೃತಿಯಲ್ಲಿಯೇ ಪರಿಹಾರಗಳೂ ಇರುತ್ತವೆ. ಅವನ್ನು ತಿಳಿದಾಗ ಆರೋಗ್ಯದಿಂದಿರುವುದು ಅತ್ಯಂತ ಸುಲಭ-ಸರಳವಾಗಿಬಿಡುತ್ತದೆ. ಇದಕ್ಕೆ ಕೆಲವು ಉದಾಹರಣೆಗಳನ್ನು ನೋಡೋಣ. ದೇಹದ ಆಂತರಿಕ ಸಮತೋಲನ ಕೆಟ್ಟಾಗ, ಸಹಜವಾಗಿಯೇ ಅದನ್ನು ಸರಿಪಡಿಸಬಹುದು ...ನಮ್ಮ ದೇಹದ ಅರಿವು ನಮಗಿರಬೇಕು. ಹಾಗೆಯೇ ನಾವಿರುವ ಪ್ರಕೃತಿಯ ಕೆಲ ಗಿಡಮೂಲಿಕೆಗಳ ಪರಿಚಯವೂ ನಮಗಿರಬೇಕು. ಅಡುಗೆ ಮನೆಯ ಪದಾರ್ಥಗಳೂ ಪ್ರಥಮ ಚಿಕಿತ್ಸೆಗೆ ಉಪಯುಕ್ತ ಅಮೃತ ವಾಗಬಹುದು. ಜೀವನದಲ್ಲಿ ತಿಳಿವಳಿಕೆಯೇ ನಿಜವಾದ ಅಪತ್ಬಾಂಧವ. ಧೈರ್ಯವೇ ಸರ್ವಸಾಧಕ. ಸಮಯೋಚಿತವಾಗಿ ತಿಳಿವಳಿಕೆಯನ್ನು ಕಾರ್ಯರೂಪಕ್ಕೆ ತರುವ ಸಮಯ ಪ್ರಜ್ಞೆಯೇ ನಿಜವಾದ ಸಾಮರ್ಥ್ಯ. ಈ ಮೂರನ್ನೂ ನಮ್ಮಲ್ಲಿ ರೂಢಿಸಿಕೊಳ್ಳುವ ಜೀವನ ವಿಧಾನವೇ ಆಯುರ್ವೆದ!

ಜ್ವರಮುಕ್ತರಾಗೋದು ಹೇಗೆ?

ಜ್ವರ ಬಂದ ತಕ್ಷಣ ಹೆದರಿ ಹೆದರಿಸುವ ಅಗತ್ಯವಿಲ್ಲ. ದೇಹದ ಜಠರಾಗ್ನಿ (ಪಚನ ಮಾಡುವ ಸಾಮರ್ಥ್ಯ)ಯ ಒಳಗಿನ ವಾತಾವರಣ ಹಾಳಾಗಿ ಬರುವ ಜ್ವರವೇ ಹೆಚ್ಚಿನದ್ದು. ಸ್ವಲ್ಪ ಸಹಾಯ ಸಿಕ್ಕರೆ ಸಾಕು, ದೇಹ - ಮನಸ್ಸುಗಳು ತಾನಾಗಿಯೇ ಜ್ವರಮುಕ್ತವಾಗುವುದು.

  • ಜ್ವರ ಬಂದಾಗ ವಿಶ್ರಾಂತಿ ಅತ್ಯಗತ್ಯ. ಸುಮ್ಮನೆ ಮಲಗಿ.
  • ಆಹಾರ ಸೇವಿಸಿದಷ್ಟೂ ಒಳಗಿನ ಪರಿಸರ ಹದಗೆಡುತ್ತದೆ. ಯಾವುದೇ ಆಹಾರ ಬೇಡ ( ಮೊದಲ ಒಂದೆರಡು ದಿನಗಳಂತೂ ಬೇಡ)
  • ಬಾಯಾರಿದರೆ ಕುದಿಸಿದ ಬಿಸಿನೀರು ಸ್ವಲ್ಪ ಸ್ವಲ್ಪವಾಗಿ ಸೇವಿಸಿ. (ಅರ್ಧಕ್ಕೆ ಇಳಿಸಿದ/ ದನಿಯಾ-ಜೀರಿಗೆ-ಒಣದ್ರಾಕ್ಷಿ ಹಾಕಿ ಕುದಿಸಿ)
  • ಜ್ವರದ ತಾಪ ಹೆಚ್ಚಿದ್ದರೆ, ತಲೆಗೆ-ಕಣ್ಣಿಗೆ ತಣ್ಣೀರು ಪಟ್ಟಿ/ ಶ್ರೀಗಂಧದ ಲೇಪ ಇರಲಿ.
  • ತೀಕ್ಷ್ಣ ಔಷಧಗಳ ವಿವೇಚನಾರಹಿತ ಪ್ರಯೋಗ, ಎಷ್ಟೋ ಬಾರಿ ಕಾಯಿಲೆಗಿಂತ ಹೆಚ್ಚು ತೊಂದರೆದಾಯಕವಾಗಬಹುದು!
  • ಬೆವರು ಬಂದು, ಒಂದಷ್ಟು ಬಾರಿ ನೀರಾಗಿ ಮಲ ಪ್ರವೃತ್ತಿಯಾಗಿ ಜ್ವರ ಬಿಡುವುದು ಸಾಮಾನ್ಯವಾಗಿ ಸರಿಯಾದ ವಿಧಾನ. ಹೆದರುವ ಅಗತ್ಯವಿಲ್ಲ.

ವಾಂತಿ-ಭೇದಿ

  • ಸಾಮಾನ್ಯವಾಗಿ ಅಜೀರ್ಣದಿಂದಾಗುವ ವಾಂತಿ-ಭೇದಿಗಳೇ ಹೆಚ್ಚು.
  • ಬೇಡದ ಪದಾರ್ಥಗಳನ್ನು ಹೊರಹಾಕುವ ಪ್ರಯತ್ನ-ದೇಹದ ಸಹಜ ರಕ್ಷಣಾ ವಿಧಾನ.
  • ವಾಂತಿಯಲ್ಲಿ ಕಫ/ಹುಳಿ, ಪಿತ್ತ/ ಜೀರ್ಣವಾಗದ ಆಹಾರ ಕಂಡಾಗಂತೂ ಇದು ಸ್ವಷ್ಟ.
  • ಹೀಗೆ ವಾಂತಿಯಾದರೆ, ಮತ್ತೆ ನೀರು/ಜ್ಯೂಸ್ ಇತ್ಯಾದಿಗಳನ್ನು ಕುಡಿಯಬೇಡಿ. ಯಾವುದೇ ಆಹಾರ ಬೇಡ.
  • ಬಾಯಿ ಮುಕ್ಕಳಿಸಿ, ಸುಮ್ಮನೆ ಎಡಕ್ಕೆ ತಿರುಗಿ ಮಲಗಿಬಿಡಿ. ನಿದ್ರಿಸಿದರೂ ಪರವಾಗಿಲ್ಲ.
  • ತಾನೇ ವಾಂತಿ ನಿಂತು- ಹಸಿವಾದ ನಂತರ, ಸುಲಭವಾಗಿ ಜೀರ್ಣವಾಗಬಲ್ಲ ದ್ರವಾಹಾರವನ್ನೂ ತೆಗೆದುಕೊಳ್ಳಿ.
  • ಅಜೀರ್ಣದಿಂದಾದ ವಾಂತಿ-ಭೇದಿಗಳನ್ನೂ ವಿವೇಚನಾರಹಿತ ಔಷಧ ಪ್ರಯೋಗದಿಂದ ನಿಲ್ಲಿಸಿದರೆ ಅನೇಕ ದೀರ್ಘಕಾಲೀನ ತೊಂದರೆಗಳಿಗೆ ಆಹ್ವಾನಕೊಟ್ಟಂತೆ ಆಗುತ್ತದೆ.
  • ಬಾಹ್ಯ ಕಾರಣಗಳಿಂದ ತೊಂದರೆಯಾದಾಗ, ದೇಹದ ಸ್ವಾಭಾವಿಕವಾಗಿ ಸರಿ ಹೋಗುವ ಸಾಮರ್ಥ್ಯಕ್ಕೆ ಸಹಕರಿಸುವುದೇ ಚಿಕಿತ್ಸೆಯಾಗುವುದು.

ದೇಹಕ್ಕೆ ಗಾಯ(ವ್ರಣ)ವಾದಾಗ

ಮಕ್ಕಳು ಆಡುವಾಗ ಬೀಳುವುದು-ಏಳುವುದು ಸರ್ವೆ ಸಾಮಾನ್ಯ- ಏಟಾಗುವುದೂ ಸಾಮಾನ್ಯವೇ. ಸಾಮಾನ್ಯವಾಗಿ ಏಟು ಎರಡು ರೀತಿಯಲ್ಲಿ ಆಗಬಹುದು.

  • ಚರ್ಮ ಬಿರಿದು ಗಾಯವಾಗುವುದು: ಚರ್ಮ ಬಿರಿದು, ರಕ್ತ ಸುರಿದು ಗಾಯವಾದಾಗ ಮೊದಲು ಗಾಯವನ್ನು ಸ್ವಚ್ಛ ನೀರಿನಿಂದ ತೊಳೆಯಬೇಕು.

ಗಾಯದೊಳಗೆ ಮಣ್ಣು-ಕಲ್ಲು-ಕಸ ಉಳಿಯಬಾರದು. ರಕ್ತನೋಡಿ ಹೆದರಬೇಡಿ, ಗಾಯ ಚೆನ್ನಾಗಿ ತೊಳೆದ ನಂತರವೇ ಮುಂದಿನ ಉಪಚಾರ. ಗಾಯದಲ್ಲಿ ಮಣ್ಣು-ಕಲ್ಲುಗಳಿದ್ದು, ಅದರ ಮೇಲೆಯೇ ಔಷಧ ಅರಿಶಿನ ಇತ್ಯಾದಿಗಳನ್ನು ಹಾಕಿ ಪಟ್ಟಿಕಟ್ಟಿದರೆ, ಮುಂದೆ ತೊಂದರೆಗಳು ಹೆಚ್ಚು. ಕೇವಲ ನೀರಿನಲ್ಲಿ ತೊಳೆದ ನಂತರ, ರಕ್ತಸ್ರಾವ ಇದ್ದರೆ ಒಳ್ಳೆಯ ಅರಿಶಿನ ಹಾಕಿ ಪಟ್ಟಿಯನ್ನು ಕಟ್ಟಿ. ರಕ್ತ ಸ್ಕಂದನವಾಗುವುದು ಸಹಜ ಪ್ರಕ್ರಿಯೆ. ಅದಕ್ಕೆ ಅನುವು ಮಾಡಿಕೊಡಬೇಕಷ್ಟೇ. ರಕ್ತ ಸ್ರಾವವಿಲ್ಲದ ಚರ್ಮ ಬೀರಿದ ಗಾಯವಾದರೆ, ಜೇನುತುಪ್ಪ-ತುಪ್ಪಗಳನ್ನು ಕಲಸಿ ಹಚ್ಚಿ. ನೆನಪಿರಲಿ ಇದು ಪ್ರಥಮ ಚಿಕಿತ್ಸೆ ಮಾತ್ರ. ರಕ್ತಸ್ರಾವ ಮುಂದುವರಿದರೆ ಊತ ಕಂಡರೆ/ ಗಾಯ ದೊಡ್ಡದಿದ್ದರೆ/ ತುಕ್ಕು ಹಿಡಿದ ಕಬ್ಬಿಣ ಇತ್ಯಾದಿ ತಾಕಿದ್ದರೆ ಒಳ್ಳೆಯ ವೈದ್ಯರನ್ನು ಕಾಣುವುದು ಹಿತಕರ.

  • ಮೂಗೇಟು ಆದಾಗ: ಕೆಲವೊಮ್ಮೆ ಬಿದ್ದ ಪೆಟ್ಟಿಗೆ ರಕ್ತ ಹೆಪು್ಪಗಟ್ಟುತ್ತದೆ. ಬಾವು ಕಾಣುತ್ತದೆ. ಆದರೆ ಚರ್ಮ ಬಿರಿದು ಗಾಯವಾಗುವುದಿಲ್ಲ. ಇಂತಹ ಪೆಟ್ಟು ಬಿದ್ದಾಗ, ಕೂಡಲೆ ಆ ಸ್ಥಳದಲ್ಲಿ ತಣ್ಣೀರಿನ ಪಟ್ಟಿ/ ಹುಣಸೆ ನೀರಿನ ಪಟ್ಟಿ ಹಾಕಬೇಕು. ಶೀತೋಪಚಾರದಿಂದ ಈ ತೊಂದರೆಗಳು ಕಡಿಮೆಯಾಗುತ್ತವೆ.

(ಕಿವಿಮಾತು: ಇಲ್ಲಿ ನಿಮ್ಮ ಮಾಹಿತಿಗಾಗಿ ಕೆಲವು ವಿಧಾನ ವಿವರಿಸಲಾಗಿದೆ. ಹಾಗಂತ ಎಲ್ಲ ಸಂದರ್ಭದಲ್ಲೂ ನೀವೇ ವೈದ್ಯರಾಗಲು ಹೋಗಬೇಡಿ. ಪಾಲಕರ ಗಮನಕ್ಕೆ ತನ್ನಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net