ಪ್ರಯತ್ನಶೀಲರಾಗಿರೋಣ: ಮನೋಲ್ಲಾಸ

Manollasa
Published on
| ಚಿದಂಬರ ಮುನವಳ್ಳಿ ಬೆಳಗಾವಿ

ಸ್ವಾತಂತ್ರ್ಯಪೂರ್ವದ ಸಮಯದಲ್ಲಿ ಅವಿವಾಹಿತ ಬ್ರಿಟಿಷ್ ಜಿಲ್ಲಾಧಿಕಾರಿಯೊಬ್ಬನ ಮನೆಯಲ್ಲಿ, ಅಡುಗೆ ಮಾಡುವುದು, ಬಟ್ಟೆಗಳನ್ನೆಲ್ಲ ಒಗೆದು ಚೆನ್ನಾಗಿ ಇಸ್ತ್ರಿ ಮಾಡಿಡುವುದು, ಅತಿಥಿಗಳನ್ನು ನೋಡಿಕೊಳ್ಳುವುದು ಮುಂತಾದ ಕೆಲಸ ಮಾಡಲು ಒಬ್ಬ ಭಾರತೀಯ ಯುವ ನೌಕರನಿದ್ದ. ಅವನು ಶ್ರದ್ಧೆಯಿಂದ ಕೆಲಸ ಮಾಡಿ ಆ ಅಧಿಕಾರಿಯ ಪ್ರೀತಿಗೆ ಪಾತ್ರನಾಗಿದ್ದ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಮೇಲೆ ಎಲ್ಲರಂತೆ ಆ ಅಧಿಕಾರಿಯೂ ಇಂಗ್ಲೆಂಡಿಗೆ ವಾಪಸ್ ತೆರಳಿದ. ಇತ್ತ ಈ ನೌಕರನೂ ತನ್ನ ಹಳ್ಳಿಯಲ್ಲಿ ಬೇರೆ ಕೆಲಸ ಮಾಡಿಕೊಂಡಿದ್ದ. ಕೆಲವು ವರ್ಷಗಳಾದ ಮೇಲೆ ಆ ಅಧಿಕಾರಿಗೆ ವೃದ್ಧಾಪ್ಯದಿಂದ ಕಾಯಿಲೆ ಆವರಿಸಿದಾಗ, ‘ನನ್ನ ಎಲ್ಲ ಆಸ್ತಿಯನ್ನು ನನ್ನ ಮರಣಾನಂತರ ಪ್ರೀತಿಯ ಆ ಭಾರತೀಯ ನೌಕರನಿಗೆ ಕೊಡಬೇಕು’ ಎಂದು ಉಯಿಲು ಬರೆದಿಟ್ಟ. ಅವನು ತೀರಿಕೊಂಡ ನಂತರ ವಕೀಲರು ಆ ಉಯಿಲನ್ನು ತೆರೆದು ಓದಿ ಭಾರತದಲ್ಲಿರುವ ಆ ನೌಕರನಿಗೆ ಟೆಲಿಗ್ರಾಂ ಕಳುಹಿಸಿ ಭವ್ಯವಾದ ಅವನ ಬಂಗಲೆ, ಕಾರುಗಳು, ಒಡವೆ, ಲಕ್ಷಾಂತರ ಪೌಂಡ್ಸ್ ಹಣ ಎಲ್ಲವೂ ತಮಗೆ ಸೇರಿವೆ. ಇಂಗ್ಲೆಂಡಿಗೆ ಬಂದು ಅವುಗಳನ್ನು ಪಡೆಯಬೇಕೆಂದು ತಿಳಿಸಿದರು. ಅದನ್ನು ಓದಿ ತಾನೀಗ ಕೋಟ್ಯಂತರ ರೂಪಾಯಿ ಆಸ್ತಿಯ ಮಾಲೀಕನೆಂದು ತಿಳಿದು ಆನಂದವಾಯಿತು. ಆದರೆ ಇಂಗ್ಲೆಂಡ್​ಗೆ ಹೋಗಲು ಅವನ ಹತ್ತಿರ ದುಡ್ಡೇ ಇರಲಿಲ್ಲ. ಆ ಟೆಲಿಗ್ರಾಂ ತೋರಿಸಿ ಹಣಸಹಾಯಕ್ಕಾಗಿ ಅಧಿಕಾರಿಗಳಿಗೆ ಗೋಗರೆದ. ರಾಜಕೀಯ ನಾಯಕರೆಲ್ಲರ ಹತ್ತಿರ ಯಾಚಿಸಿದ. ಬ್ಯಾಂಕಿನವರಿಗೆ, ಉದ್ಯೋಗಪತಿಗಳಿಗೆ ದುಂಬಾಲು ಬಿದ್ದ. ಆ ಆಸ್ತಿ ಪಡೆದುಕೊಂಡು ಬಂದು ಬಡ್ಡಿಸಮೇತ ತೀರಿಸುತ್ತೇನೆ ಎಂದ. ಯಾರೂ ಸಹಾಯ ಮಾಡಲಿಲ್ಲ. ಕೆಲವರಂತೂ ಇಂಥ ಸುಳ್ಳು ಸಂದೇಶಗಳನ್ನೆಲ್ಲ ನಂಬಬಾರದು ಎಂದು ಉಪದೇಶ ಮಾಡಿದರು. ‘ನಾನು ನನ್ನ ಸಾಹೇಬನನ್ನು ಬಲ್ಲೆ. ಇದು ನಿಜವಾದ ಸುದ್ದಿ ನನ್ನನ್ನು ನಂಬಿ. ಹಣ ಸಹಾಯ ಮಾಡಿ’ ಎಂದರೂ ಯಾರೂ ಕಿವಿಗೆ ಹಾಕಿಕೊಳ್ಳಲಿಲ್ಲ.

ಅವನು ಸುಮ್ಮನೆ ಕೂಡ್ರಲಿಲ್ಲ. ಮುಂಬೈಗೆ ಹೋದ. ಅಲ್ಲಿಯ ಬಂದರಿನಲ್ಲಿ ಕೂಲಿ ಕೆಲಸಕ್ಕೆ ಸೇರಿಕೊಂಡ. ಮೂರು ವರ್ಷ ಕಷ್ಟಪಟ್ಟು ಹಗಲು-ರಾತ್ರಿ ದುಡಿದ. ಪ್ರವಾಸಕ್ಕೆ ಬೇಕಾಗುವಷ್ಟು ಹಣ ಕೂಡಿಟ್ಟ. ಎಲ್ಲ ಕಾಗದಪತ್ರಗಳನ್ನು ತಯಾರಿಸಿಕೊಂಡ. ಹಡಗಿನಲ್ಲಿ ಪ್ರಯಾಣ ಬೆಳೆಸಿದ. ಅಲ್ಲಿಯ ವಕೀಲರನ್ನು ಸಂರ್ಪಸಿ ಆ ಅಪಾರ ಸಂಪತ್ತನ್ನು ಪಡೆದು ಶ್ರೀಮಂತನಾಗಿ ಜೀವನ ಕಳೆದ. ಎಲ್ಲರ ಹೃದಯದಲ್ಲಿಯೂ ಪರಮಾತ್ಮನಿದ್ದಾನೆ ಎಂಬ ವಿಷಯ ನಮಗೆ ಗೊತ್ತಿದೆ. ಆದರೆ ಬರೀ ಗೊತ್ತಿದ್ದು ಏನು ಪ್ರಯೋಜನ? ಅದರ ಅನುಭವ ನಮಗೆ ಆಗಿದೆಯೇ? ಪ್ರಯತ್ನಪಟ್ಟು ಹುಡುಕಿದರೆ ಮಾತ್ರ ಸಾಕ್ಷಾತ್ಕಾರ ಸಾಧ್ಯ.

ಭಗವದ್ಗೀತೆಯಲ್ಲಿ ‘ಯತಂತೋ ಯೋಗಿನಶ್ಚೆಯನಂ ಪಶ್ಯಂತ್ಯಾತ್ಮನ್ಯವಸ್ಥಿತಮ್ ಎಂಬ ಸುಂದರ ವಾಕ್ಯವಿದೆ. ಯೋಗಿಗಳೂ ಅಂತಃಕರಣ ಗಟ್ಟಿ ಮಾಡಿಕೊಂಡು ಕರ್ಮ, ಉಪಾಸನೆ, ಶ್ರವಣ, ಭಕ್ತಿ, ಪೂಜೆ, ಜ್ಞಾನ ಮುಂತಾದ ಸಾಧನೆಗಳಿಂದ ಆ ಚೈತನ್ಯದ ಐಶ್ವರ್ಯವನ್ನು ಅನುಭವಿಸುವರು. ದಿವ್ಯವಾದುದನ್ನು ಪಡೆದು ಆನಂದಿಸಲು ಸತತ ಪ್ರಯತ್ನಶೀಲರಾಗಿರುವುದೊಂದೇ ದಾರಿ ಅಲ್ಲವೇ?

(ಲೇಖಕರು ನಿವೃತ್ತ ಬ್ಯಾಂಕ್ ಅಧಿಕಾರಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net