ಒಟ್ಟಾಗಿ ಹೋರಾಡೋಣ: ದೌರ್ಜನ್ಯ ತಡೆಯಲು ಬದ್ಧರಾಗೋಣ..

Lalitha
Published on
ದೆಹಲಿಯಲ್ಲಿ ಇತ್ತೀಚೆಗೆ ನಡೆದ ಶ್ರದ್ಧಾ ವಾಕರ್ ಹತ್ಯೆ ಇನ್ನೂ ಹಸಿರಾಗಿ ಕಾಡುತ್ತಲೇ ಇದೆ. ಈ ಘಟನೆ ಲಕ್ಷಾಂತರ ಹೆಣ್ಣು ಮಕ್ಕಳ ಪಾಲಕರ ನಿದ್ರೆ ಕೆಡಿಸಿದೆ. ಈ ನಡುವೆ ವಿಶ್ವ ಸಂಸ್ಥೆಗಳ ಒಕ್ಕೂಟ ನವೆಂಬರ್ 25ರಿಂದ ಡಿಸೆಂಬರ್ 10 ರವರೆಗೆ ಮಹಿಳೆಯರ ವಿರುದ್ಧದ ದೌರ್ಜನ್ಯ ತೊಲಗಿಸಲು ಯುನೈಟ್ ಅಭಿಯಾನವನ್ನು ಹಮ್ಮಿಕೊಂಡಿದೆ. ಆ ನಿಟ್ಟಿನಲ್ಲಿ ಈ ಬರಹ.

| ಡಾ. ಕೆ.ಎಸ್. ಶುಭ್ರತಾ ಮನೋವೈದ್ಯೆ, ಶಿವಮೊಗ್ಗ

ಇಪ್ಪತ್ತಾರು ವರ್ಷದ ಮಹಿಳೆ ಒಬ್ಬರು ಹೀಗೆ ಹೇಳುತ್ತಾರೆ: ‘ಎಲ್ಲವೂ ಪ್ರಾರಂಭವಾಗಿದ್ದು, ನಾನು ಪದವಿ ಪರೀಕ್ಷೆ ಮುಗಿಸಿದ ಮೇಲೆ. ಅಪ್ಪ-ಅಮ್ಮ ನೋಡಿದ ಹುಡುಗನೊಂದಿಗೆ ಮದುವೆ ನಿಶ್ಚಯವಾಯಿತು. ತುಂಬಾ ಒಳ್ಳೆಯ ಕುಟುಂಬ, ಹುಡುಗ ಬಹಳ ಓದಿ, ಒಳ್ಳೆಯ ಕೆಲಸದಲ್ಲಿದ್ದಾನೆ ಎಂಬ ಸಂತಸ ನನ್ನ ಪಾಲಕರದು. ನನಗೂ ಒಪ್ಪಿಗೆಯಾಗಿತ್ತು. ಹುಡುಗ ಫೋನ್ ಮಾಡುತ್ತಿದ್ದ. ಪ್ರೀತಿಯ ಮಾತುಗಳ ಮಳೆ ಸುರಿಸುತ್ತಿದ್ದ. ಉಡುಗೊರೆ ನೀಡುತ್ತಿದ್ದ. ಎಲ್ಲವೂ ಸುಂದರ ಕಾಲ್ಪನಿಕ ಕತೆಯಂತಿತ್ತು. ಮದುವೆಯಾಯಿತು. ಒಂದು ತಿಂಗಳು ಸಂತಸದಿಂದ ಕಳೆದವು. ಒಂದು ದಿನ ಚಿಕ್ಕ ವಿಷಯಕ್ಕೆ ಜಗಳವಾಯಿತು. ಅವನ ಕೋಪದ ಬಗ್ಗೆ ಅರಿವಾದದ್ದೇ ಆವತ್ತು. ಕೈ ಎತ್ತಿ ಹೊಡೆದೇ ಬಿಟ್ಟ. ನನಗೆ ಏನಾಯಿತೆಂದು ಅರ್ಥ ಮಾಡಿಕೊಳ್ಳುವುದಕ್ಕೆ ಸಮಯ ಹಿಡಿಯಿತು. ಕೆಲವು ನಿಮಿಷಗಳಲ್ಲಿ ಅವನೇ ಪಶ್ಚಾತ್ತಾಪ ಪಟ್ಟು ನನ್ನಲ್ಲಿ ಕ್ಷಮೆ ಬೇಡಿದ. ಏನೋ ಕೋಪದ ಭರದಲ್ಲಿ ಅಚಾತುರ್ಯ ಆಗಿದೆ ಎಂದು ತಿಳಿದು ಸುಮ್ಮನಾದೆ. ಮತ್ತೆ ಇನ್ನೆರಡೇ ದಿನಗಳಲ್ಲಿ ಇನ್ನೊಂದು ಹೊಡೆತ. ಅದೂ ಸಾಲದೆಂಬಂತೆ, ಸಣ್ಣ ಸಣ್ಣ ವಿಷಯಗಳಲ್ಲಿ ಕಿರಿಕಿರಿ ಮಾಡಲಾರಂಭಿಸಿದ. ಸಂತಸದಲ್ಲಿ ತೇಲುತ್ತಿದ್ದ ನನಗೆ ಆಳವಾದ ಗುಂಡಿಗೆ ತಳ್ಳಿದ ಹಾಗಾಗತೊಡಗಿತು. ದಿನವೂ ಚಿಕ್ಕ-ಪುಟ್ಟ ವಿಷಯಗಳಿಗೆ ಕೋಪಗೊಳ್ಳುವುದು, ನಂತರ ಹೊಡೆಯುವುದು ತಕ್ಷಣ ಪಶ್ಚಾತ್ತಾಪಪಡುವುದು-ಹೀಗೆ ಮುಂದುವರಿಯಿತು. ಹಾಗೆಂದು ಬೇರೆಯವರ ಹತ್ತಿರ ನೂರಕ್ಕೆ ನೂರರಷ್ಟು ಸರಿಯಿರುತ್ತಿದ್ದ. ಬೇರೆಯವರಿಗೆ, ಕುಟುಂಬದವರಿಗೆ ಹೇಳೋಣವೆಂದರೆ ಯಾರೂ ನಂಬಲಿಕ್ಕಿಲ್ಲ ಎಂಬ ಭಯ. ಪ್ರತಿ ಬಾರಿ ಹೊಡೆದಾಗ, ಬ್ಯಾಗ್ ಎತ್ತಿಕೊಂಡು ಮನೆ ಬಿಟ್ಟು ಸಂಬಂಧ ತೊರೆದು ಹೋಗೋಣ ಎಂದರೆ ಗೋಗರೆಯುತ್ತಿದ್ದ, ಅಳುತ್ತಿದ್ದ. ಮನೋವೈದ್ಯರಲ್ಲಿ ತೋರಿಸೋಣ ಎಂದರೆ ಒಪ್ಪುತ್ತಿರಲಿಲ್ಲ. ನನಗೇನೂ ಹುಚ್ಚು ಹಿಡಿದಿಲ್ಲ ಎನ್ನುತ್ತಿದ್ದ. ಸರಿ ಹೋಗಬಹುದು ಎಂದು ನಾನೇ ಸುಮ್ಮನಾಗುತ್ತಿದ್ದೆ. ಕಡೆಗೆ ಒಂದು ದಿನ, ಧೈರ್ಯವಾಗಿ ಮನೆ ಬಿಟ್ಟು ಬಂದೆ. ಈಗ ಡಿವೋರ್ಸ್​ಗೆ

ಅರ್ಜಿ ಹಾಕಿದ್ದೇನೆ. ನನಗೆ ನನ್ನ ಉದ್ಯೋಗವಿದೆ. ಕುಟುಂಬದವರು ಸಹಾಯಕ್ಕೆ ಬರದಿದ್ದರೂ, ನಾನು ನೆಮ್ಮದಿಯಿಂದ ಗೌರವಯುತವಾಗಿ ಬದುಕುತ್ತಿದ್ದೇನೆ. ಆ ಎರಡು ವರ್ಷಗಳ ನರಕ ನೆನಪಿಸಿಕೊಳ್ಳುವುದಕ್ಕೂ ಇಷ್ಟಪಡುವುದಿಲ್ಲ’. ಹಿಂಸೆ/ದೌರ್ಜನ್ಯ ಧರ್ಮ-ಶಿಕ್ಷಣ-ನಗರ-ಹಳ್ಳಿ -ಆರ್ಥಿಕ ಸ್ಥಿತಿ ಎನ್ನುವ ಯಾವ ಭೇದವೂ ಇಲ್ಲದೆ ಸಮಾನವಾಗಿ ವ್ಯಾಪಕವಾಗಿ ಕಾಣುತ್ತದೆ ಎಂದರೆ ಅಚ್ಚರಿಯಾಗಬಹುದು. ‘ಮನೆ’ ಎಂದರೆ ಸುರಕ್ಷಿತ ಭಾವನೆ ನೀಡುವ ಬೆಚ್ಚಗಿನ ಗೂಡು. ಅಂಥ ಮನೆಯೊಳಗೇ ಈ ಹಿಂಸೆ ನಡೆದರೆ? ಅದೂ ಪ್ರೀತಿಸಿ, ರಕ್ಷಿಸಬೇಕಾದವರಿಂದಲೇ ಆದರೆ? ಇದರಿಂದಾಗುವ ಹಾನಿಗಳು ಊಹಿಸಲಸಾಧ್ಯ.

ಸಮಾಜವಾಗಿ, ಸಮಾಜದ ಪ್ರಜೆಗಳಾಗಿ ಹೆಣ್ಣು ಮಕ್ಕಳ ವಿರುದ್ಧದ ದೌರ್ಜನ್ಯ ತಡೆಗಟ್ಟುವಲ್ಲಿ ಎಷ್ಟು ಸಫಲರಾಗಿದ್ದೇವೆ, ಆಗಿಲ್ಲದಿದ್ದರೆ ಕಾರಣಗಳೇನು ಎಂದು ನಮ್ಮನ್ನೇ ನಾವು ಪ್ರಶ್ನಿಸಿಕೊಳ್ಳಬೇಕಾದ ಸಮಯ ಇದು. ಮಹಿಳೆಯರ ವಿರುದ್ಧದ ದೌರ್ಜನ್ಯ ವಿವಿಧ ರೀತಿಯಲ್ಲಿ ಆಗಬಹುದು. ನಿಕಟವಾಗಿರುವ ವ್ಯಕ್ತಿಯಿಂದ ನಡೆಯುವ ದೌರ್ಜನ್ಯಕ್ಕೆ ‘Intimate Partner Violence (IPV)‘ ಎನ್ನುತ್ತಾರೆ. ಇದು ‘IPV’ ಪುರುಷರ ಮೇಲೂ ಆಗಬಹುದಾದರೂ, ಮಹಿಳೆಯರಲ್ಲಿ ಆಗುವ ಸಾಧ್ಯತೆ ಹೆಚ್ಚು. ನಿಕಟವಾದ, ದೀರ್ಘಕಾಲಿಕವಾದ ಸಂಬಂಧದಲ್ಲಿರುವವರು ಎಂದರೆ ಗಂಡ, ಪ್ರಿಯತಮ ಅಥವಾ ಲಿವ್ ಇನ್ ಸಂಬಂಧದಲ್ಲಿರುವ ವ್ಯಕ್ತಿ /ಸ್ನೇಹಿತ ಯಾರೂ ಆಗಿರಬಹುದು. ಹಿಂಸೆ/ದೌರ್ಜನ್ಯ ಎಂದರೆ ಅವಾಚ್ಯ ಶಬ್ದಗಳಿಂದ ಅಸಭ್ಯವಾಗಿ ಬೈಯುವುದರಿಂದ ಹಿಡಿದು ಲೈಂಗಿಕ ದೌರ್ಜನ್ಯ/ದೈಹಿಕ ದೌರ್ಜನ್ಯವೂ ಆಗಬಹುದು. ಕೆಲ ಅಂಕಿ-ಅಂಶಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು ಶೇ.40 ರಷ್ಟು ಮಹಿಳೆಯರು ತಮ್ಮ ಜೀವಿತಾವಧಿಯಲ್ಲಿ ಯಾವುದಾದರೂ ಒಂದು ರೀತಿಯ ಹಿಂಸೆಯನ್ನು ತಮ್ಮ ನಿಕಟ ಸಂಬಂಧಿಯಿಂದ ಅನುಭವಿಸಿರುತ್ತಾರಂತೆ. ವರದಿ ಯಾದದ್ದು ಇಷ್ಟಾದರೆ, ವರದಿಯಾಗದ್ದು ಇನ್ನೆಷ್ಟೋ!

ಕೆಲವರು ಯಾಕೆ ಹೀಗೆ?: ಕೆಲ ಪುರುಷರು ಹೆಂಡತಿ/ಪ್ರಿಯತಮೆ ವಿರುದ್ಧ ಏಕೆ ದೌರ್ಜನ್ಯ ಎಸಗುತ್ತಾರೆ ಎಂದು ನೋಡಿದರೆ ಕಾರಣಗಳು ಹಲವಾರು. ಆ ವ್ಯಕ್ತಿಯಲ್ಲಿ ವ್ಯಕ್ತಿತ್ವ ದೋಷವಿರಬಹುದು, ಬಾಲ್ಯದಿಂದ ತಂದೆ ತಾಯಿಯನ್ನು ನೋಡಿ, ಪುರುಷ ಎಂದರೆ ಹೊಡೆಯುವುದು ಅಥವಾ ಹೊಡೆಯುವುದೇ ಶಕ್ತಿಪ್ರದರ್ಶನ ಎಂಬ ಭಾವನೆ ಮನದಲ್ಲಿ ಬೇರೂರಿರಬಹುದು. ಕೆಲವೊಮ್ಮೆ ಆ ವ್ಯಕ್ತಿ ಮದ್ಯ ವ್ಯಸನಿ ಆಗಿರಬಹುದು. ಮಹಿಳೆಗೆ ಹೊಡೆದಾಗ ತನ್ನ ಸಾಮರ್ಥ್ಯದ ಬಗ್ಗೆ ಅವನಿಗೆ ಹೆಮ್ಮೆ ಎನಿಸಬಹುದು.

ಹಿಂಸೆಯ ರೀತಿ: ಈ ರೀತಿ ಹಿಂಸೆ/ದೌರ್ಜನ್ಯ ನಡೆಯುವಲ್ಲಿ ಸಾಮಾನ್ಯವಾಗಿ ಕಾಣುವ ನಮೂನೆ ಗುರುತಿಸಬಹುದು. ಗಂಡ/ಪ್ರಿಯತಮ ತನ್ನ ಹೆಂಡತಿ /ಪ್ರಿಯತಮೆಯನ್ನು ಮೊದಮೊದಲು ಅತಿಯಾಗಿ ಪ್ರೀತಿಸುತ್ತಾನೆ, ಅವಳಿಲ್ಲದೆ ಜೀವನವಿಲ್ಲ ಎಂಬ ನಂಬಿಕೆ ಮೂಡಿಸುತ್ತಾನೆ. ನಂತರದಲ್ಲಿ ಅವಳನ್ನು ಇತರ ಸಂಬಂಧಿಕರಿಂದ ದೂರ ಮಾಡಲೆತ್ನಿಸುತ್ತಾನೆ (Isolation). ನಂತರದ ದಿನಗಳಲ್ಲಿ ಪ್ರಾರಂಭವಾಗುವ ಹಿಂಸೆ/ದೌರ್ಜನ್ಯ ಕ್ರಮೇಣ ಜಾಸ್ತಿಯಾಗುತ್ತದೆ.

ಯಾಕೆ ಪ್ರತಿಭಟಿಸುವುದಿಲ್ಲ?: ‘‘ಮಹಿಳೆಯರು ಮನೆಯಲ್ಲಿ ಗಂಡ ಹೊಡೆದರೂ, ಏಕೆ ಪ್ರತಿಭಟಿಸುವುದಿಲ್ಲ?’ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತದೆ. ‘‘ಗಂಡ ಹೊಡೆಯಬಹುದು’, ‘ಹೆಂಡತಿಯಾದವಳು ಸರಿದೂಗಿಸಿಕೊಂಡು ಹೋಗಬೇಕು’, ‘‘ಹೇಳಿದರೆ ಮರ್ಯಾದೆ ಹೋದೀತು’, ‘‘ಬೇರೆಯಾದರೆ ಜೀವನ ಮಾಡಲಾಗದು’ ಎಂಬ ನಂಬಿಕೆಗಳು ಪ್ರತಿಭಟಿಸಲು ತಡೆಯೊ ಡ್ಡುತ್ತವೆ. ಹಾಗೆಯೇ ಒಂದು ರೀತಿಯ ವಿಷವರ್ತಲದಲ್ಲಿ ಸಿಲುಕಿಕೊಳ್ಳುತ್ತಾರೆ. ಒಂದು ಕ್ಷಣ ಹೊಡೆದ ಗಂಡ, ಮತ್ತೊಂದು ಕ್ಷಣ ಕಾಲಿಗೆ ಬೀಳುತ್ತಾನೆ. ತಾನು ತುಂಬಾ ಪ್ರೀತಿಸುತ್ತೇನೆಂದು ವಿಧವಿಧವಾಗಿ ತಿಳಿಹೇಳುತ್ತಾನೆ. ಮಹಿಳೆಗೂ ಎಲ್ಲೋ ಒಂದು ರೀತಿ ದ್ವಂದ್ವವಾಗುತ್ತದೆ. ಮನಸ್ಸಿನಲ್ಲಂತೂ ಒಬ್ಬರೇ ಬದುಕುವ ಬಗ್ಗೆ ಭಯವಿರುತ್ತದಲ್ಲಾ, ಮಕ್ಕಳು ಇದ್ದರಂತೂ ಮುಗಿಯಿತು. ಮಕ್ಕಳನ್ನು ಮುಂದೆ ಹೇಗೆ ಒಬ್ಬರೇ ಸಾಕುತ್ತೇವೆಂಬ ಭಯ ಬೇರೆ. ಕೆಲವು ಬಾರಿ, ಪ್ರಾಣ ಭಯವೂ ಸೇರಿ ಅಲ್ಲೇ ಇದ್ದು ಒದ್ದಾಡುತ್ತಾರೆ.

ಪರಿಹಾರ ಏನು?

  • ಮಹಿಳೆಯರು, ದೌರ್ಜನ್ಯ/ಹಿಂಸೆ ಸಣ್ಣ ಮಟ್ಟದಲ್ಲಿ ಪ್ರಾರಂಭವಾದಾಗಲೇ ಗುರುತಿಸಬೇಕು ಮತ್ತು ಪ್ರತಿಭಟಿಸಬೇಕು
  • ಮರ್ಯಾದೆಗೆ ಅಂಜದೇ ಪ್ರೀತಿಪಾತ್ರರಿಗೆ ತಿಳಿಸಬೇಕು. ಶಿಕ್ಷಣ ಮತ್ತು ಆರ್ಥಿಕ ಸ್ವಾವಲಂಬನೆ ಎನ್ನುವುದು ಒಂದು ಮಟ್ಟದ ಧೈರ್ಯ ಕೊಡುತ್ತದೆ.
  • ಆತ್ಮಹತ್ಯೆ ತಡೆಗೆ ಮಾಡುವ Suicide Gatekeeper ಮಾದರಿಯಲ್ಲಿ ದೌರ್ಜನ್ಯ ತಡೆಯಲು ಸಮುದಾಯದಲ್ಲಿ ಕೆಲವು ಸಾಮಾನ್ಯ ಜನರನ್ನು ನಾವು ತಯಾರು ಮಾಡಬೇಕು.
  • ದೌರ್ಜನ್ಯ ಆದಾಗ, ತಕ್ಷಣ ಪೊಲೀಸ್ ಸ್ಟೇಷನ್ ಅಥವಾ ಮಹಿಳಾ ಆಯೋಗಕ್ಕೆ ಹೋಗಲು ಮಹಿಳೆಯರು ಹಿಂಜರಿಯಬಹುದು. ಆದರೆ ಈ ಬಗ್ಗೆ ಅರಿತ, ತರಬೇತಿ ಪಡೆದ ವ್ಯಕ್ತಿಗಳಿಂದ ಸಹಾಯ ತೆಗೆದುಕೊಳ್ಳಬಹುದು.
  • ಮಹಿಳಾ ದೌರ್ಜನ್ಯ ವಿರೋಧಿ ಕಾನೂನುಗಳ ಬಗ್ಗೆ ಹದಿ ವಯಸ್ಸಿನಲ್ಲೇ ಗಂಡು ಮಕ್ಕಳಿಗೆ ಮತ್ತು ಹೆಣ್ಣು ಮಕ್ಕಳಿಗೆ ತಿಳಿಸಬೇಕು.
  • ವ್ಯಕ್ತಿತ್ವ ದೋಷ /ಮದ್ಯವ್ಯಸನಕ್ಕೆ ಚಿಕಿತ್ಸೆ ಕೊಡಿಸಬೇಕು. ಹದಿಹರೆಯದ ಮಕ್ಕಳಲ್ಲಿ ಯುವಕ / ಯುವತಿಯರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ, ಜೀವನ ಕೌಶಲಗಳಲ್ಲಿ ಒಂದಾದ ಆರೋಗ್ಯಕರವಾದ ಸಂಬಂಧಗಳ ಬಗ್ಗೆ ಅರಿವು ಮೂಡಿಸಬೇಕು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net