

ಮನೆಯಲ್ಲಿ ಮುದ್ದಾಗಿ ಬೆಳೆಸಿದ ಹೆಣ್ಣು ಮಗು ಪ್ರೌಢಾವಸ್ಥೆಗೆ ತಲುಪುವ ಮೊದಲೇ ಅತ್ಯಾಚಾರ ಎಂಬ ಕರಾಳತೆಗೆ ಬಲಿಯಾಗುತ್ತಿರುವ ಘಟನೆಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ. ಕರ್ನಾಟಕದಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಲಾಕ್ಡೌನ್ ಅವಧಿಯಲ್ಲಿ ಸುಮಾರು 400ಕ್ಕೂ ಅಧಿಕ ಸಂಖ್ಯೆಯಲ್ಲಿ ವರದಿಯಾಗಿವೆ ಎಂಬ ಅಂಕಿ-ಅಂಶ ಹೆಣ್ಣು ಮಕ್ಕಳ ಅಸುರಕ್ಷತೆಯನ್ನು ಎತ್ತಿ ಹಿಡಿಯುತ್ತದೆ. ದೆಹಲಿಯಲ್ಲಿ ನಡೆದ ನಿರ್ಭಯಾ ಪ್ರಕರಣದ ನಂತರ ಹಲವು ಬಿಗಿಯಾದ ನಿಯಮ, ಕಾನೂನು ಜಾರಿಗೆ ಬಂದರೂ, ಇಂತಹ ಪ್ರಕರಣಗಳ ಸಂಖ್ಯೆ ನಿರೀಕ್ಷಿತ ಮಟ್ಟದಲ್ಲಿ ಕಡಿಮೆಯಾಗಿಲ್ಲ. ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಜನರನ್ನು ಬೆಚ್ಚಿ ಬೀಳಿಸುವಂಥದ್ದು. ರಾಜ್ಯದ ಅನೇಕ ಭಾಗಗಳಲ್ಲಿ ನಡೆದ ಕೆಲವು ಘಟನೆಗಳು ನಮ್ಮ ಆತ್ಮೀಯರಿಂದಲೇ ದೌರ್ಜನ್ಯ ನಡೆಯುತ್ತವೆ ಎಂಬುದನ್ನು ಸಾಬೀತುಪಡಿಸಿವೆ. ಸಂಜೆ ವೇಳೆ ಮಕ್ಕಳೊಂದಿಗೆ ಆಟವಾಡುತ್ತಿದ್ದ 11 ವರ್ಷದ ಬಾಲಕಿಯನ್ನು ಅದೇ ಗ್ರಾಮದ ವ್ಯಕ್ತಿಯೊಬ್ಬ ಎಳೆದೊಯ್ದು ನಡೆಸಿದ ಅತ್ಯಾಚಾರ, ತಂದೆಯೊಬ್ಬ ತನ್ನ 14 ವರ್ಷದ ಮಗಳನ್ನು ದನ ಮೇಯಿಸಲು ಕರೆದುಕೊಂಡು ಹೋಗಿ ಅಲ್ಲಿ ನಡೆಸಿದ ದೌರ್ಜನ್ಯ, ಸ್ವಂತ ಅಣ್ಣನೇ ತಂಗಿಯ ಮೇಲೆ ನಡೆಸಿದ ಅತ್ಯಾಚಾರ ಇತ್ಯಾದಿ ಘಟನೆಗಳು ಕುಟುಂಬದ ಸದಸ್ಯರಿಂದಲೂ ಅಹಿತಕರ ವರ್ತನೆ ಕಂಡುಬರುವ ಸಂದರ್ಭವೂ ಇದೆಯೆಂಬ ಎಚ್ಚರಿಕೆಯ ಗಂಟೆ ಬಾರಿಸುತ್ತವೆ. ಇವೆಲ್ಲವನ್ನು ಗಮನಿಸಿದಾಗ ಹೆಣ್ಣು ಮಕ್ಕಳ ಸುರಕ್ಷತೆಯನ್ನು ಕಾಪಾಡುವಲ್ಲಿ ಬಾಲ್ಯದಲ್ಲೇ ಹೆಣ್ಣಿಗೆ ಮಾತ್ರವಲ್ಲದೆ, ಗಂಡು ಮಕ್ಕಳಿಗೂ ಲೈಂಗಿಕ ಶಿಕ್ಷಣ ಮತ್ತು ಲಿಂಗ ಸೂಕ್ಷ್ಮತೆಯ ಅಂಶ ತಿಳಿಸಬೇಕಾದ ಅಗತ್ಯ ಎದ್ದು ಕಾಣುತ್ತದೆ.
ಲೈಂಗಿಕ ಶಿಕ್ಷಣ: ವಿದೇಶಗಳಲ್ಲಿ ಲೈಂಗಿಕ ಶಿಕ್ಷಣ ಅವರ ಕಲಿಕೆಯ ಭಾಗವೇ ಆಗಿದೆ. ಶಾಲಾ ಹಂತದಲ್ಲಿ ಕೆಟ್ಟ ಉದ್ದೇಶದ ಸ್ಪರ್ಶ ತಪ್ಪಿಸಲು ಎಚ್ಚರಿಕೆಯ ಅರಿವು ಮೂಡಿಸಬೇಕು. ಹಿರಿಯ ವಯಸ್ಸಿನ ಪುರುಷರೂ ಕೂಡ ಎಳೆಯ ಮಕ್ಕಳ ಜೊತೆಗೆ ಸ್ನೇಹ ಬೆಳೆಸಿಕೊಂಡು, ದೌರ್ಜನ್ಯ ಎಸಗುವ ಬಗ್ಗೆ ಮಕ್ಕಳಿಗೆ ಮುಕ್ತವಾಗಿ ತಿಳಿವಳಿಕೆ ನೀಡಬೇಕು. ಅಪರಿಚಿತರ ಹಾಗೂ ಸಹವರ್ತಿಗಳ ಸದುದ್ದೇಶದ ಸ್ಪರ್ಶ, ಕೆಟ್ಟತನದ ಸ್ಪರ್ಶ ಇವುಗಳ ಬಗ್ಗೆ ತಿಳಿಸಿಕೊಡುವುದೂ ಮುಖ್ಯ. ಮನೆ ಹಾಗೂ ಶಾಲೆಗಳಲ್ಲಿ ದೈನಂದಿನ ಕೆಲಸ-ಕಾರ್ಯ ಹಂಚಿಕೆ ಮಾಡುವಾಗ ಹೆಣ್ಣು ಮಕ್ಕಳು ಮಾತ್ರ ನಿರ್ದಿಷ್ಟ ಕೆಲಸಕ್ಕೆ ಸೀಮಿತ ಎಂಬ ಮನೋಭಾವ ಬಾರದಂತೆ ಕೆಲಸ-ಕಾರ್ಯಗಳ ಹಂಚಿಕೆ ಮಾಡಬೇಕು.
ಸಮಾನ ಅಭ್ಯಾಸಗಳು ಅವಶ್ಯಕ: ಲಿಂಗ ಸಮಾನತೆ ನಿರೀಕ್ಷಿಸುವ, ಹೆಣ್ಣು ಮಕ್ಕಳ ಸುರಕ್ಷತೆ ಬಯಸುವ ನಾವು, ಸಾಂಪ್ರದಾಯಿಕ ಚೌಕಟ್ಟಿನ ಮೂಲಕ ಕೆಲ ನಡೆ-ನುಡಿಗಳನ್ನು ಹೆಣ್ಣು ಮಕ್ಕಳಿಗೆ ಮಾತ್ರ ಕಲಿಸಿದರೆ ಸಾಲದು. ಗಂಡು-ಹೆಣ್ಣು ಇಬ್ಬರಿಗೂ ಸಮಾನ ಅಭ್ಯಾಸ ರೂಢಿಸಬೇಕು. ಹೆಣ್ಣು ಮಕ್ಕಳು ಹದಿಹರಯಕ್ಕೆ ಬರುತ್ತಿದ್ದಂತೆ, ಅವರು ಕುಳಿತುಕೊಳ್ಳುವ ಭಂಗಿ, ಮಲಗುವ ಕೊಠಡಿ, ಪ್ರಯಾಣ ಎಲ್ಲ ವಿಚಾರಗಳಲ್ಲಿ ನೀಡುವ ತಿಳಿವಳಿಕೆಗಳನ್ನು ಗಂಡು ಮಕ್ಕಳಿಗೂ ರೂಢಿಸಬೇಕು.
ಅತಿಯಾದ ಸಲುಗೆ ಸಲ್ಲ: ಲೈಂಗಿಕ ದೌರ್ಜನ್ಯಕ್ಕೆ ಮಕ್ಕಳನ್ನು ಆತ್ಮೀಯ ವರ್ತನೆಗಳಿಂದಲೇ ಬಳಸಿಕೊಂಡ ಅನೇಕ ಉದಾಹರಣೆ ಸಮಾಜದಲ್ಲಿವೆ. ಆಸೆ-ಆಮಿಷ ಒಡ್ಡಿ, ಭಯ ತೋರಿಸಿ, ಇಲ್ಲದ ಪ್ರೀತಿ ತೋರಿಸಿ ಮಕ್ಕಳನ್ನು ಬಳಸಿಕೊಳ್ಳುವ ಸಾಧ್ಯತೆ ಬಹಳ. ಅಪರಿಚಿತ ಸ್ಥಳಗಳಿಗೆ ಯಾರೇ ಕರೆದರೂ ಹೋಗಬಾರದು ಎಂಬ ಗಟ್ಟಿತನ, ದೃಢತೆಯನ್ನು ಮಕ್ಕಳಲ್ಲಿ ಬೆಳೆಸಬೇಕು. ಅಪರಿಚಿತರೊಂದಿಗೆ ಮೊದಲ ಭೇಟಿಯಲ್ಲೇ ಅತಿಯಾದ ಸಲುಗೆ ಕೂಡ ಸಲ್ಲ ಎಂಬ ತಿಳಿವಳಿಕೆ ಮೂಡಿಸಬೇಕು.
ತಂದೆ-ತಾಯಿ ಇಬ್ಬರ ಪಾತ್ರವೂ ಮುಖ್ಯ: ಕುಟುಂಬ ಜೀವನದಲ್ಲಿ ಮಕ್ಕಳ ಅರಿವಿಗೆ ಬರದಂತೆ ಕೆಲವೊಂದು ಸೂಕ್ಷ್ಮ ವಿಚಾರಗಳನ್ನು ತಿಳಿಸಿಕೊಡಬೇಕಾದುದು ಪಾಲಕರ ಜವಾಬ್ದಾರಿ. ಆಧುನಿಕ ಉಡುಗೆ-ತೊಡುಗೆ ಧರಿಸಿದಾಗ ಎಚ್ಚರಿಕೆಯಿಂದ ಇರಬೇಕಾದ ಪಾಠವನ್ನು ಹೆಣ್ಣು ಮಗುವಿಗೆ ಹೇಳುವ ತಾಯಿ, ಗಂಡು ಮಕ್ಕಳಿಗೂ ಹೆಣ್ಣಿನ ಉಡುಗೆ-ತೊಡುಗೆ ನೋಡುವ ದೃಷ್ಟಿಕೋನ ಧನಾತ್ಮಕವಾಗಿರುವಂತಹ ಮನಸ್ಥಿತಿ ಬೆಳೆಸಬೇಕು. ಮಕ್ಕಳು ಹದಿಹರಯಕ್ಕೆ ಬಂದಾಗ ಅವರ ನಡೆ-ನುಡಿ ಎಲ್ಲವನ್ನೂ ಪಾಲಕರು ಗಮನಿಸುವುದು ಸಹಜ. ಆದರೆ ಗಂಡು, ಹೆಣ್ಣು ಎಂಬ ತಾರತಮ್ಯವಿಲ್ಲದೆ ಅವರ ದೈಹಿಕ ಬದಲಾವಣೆಯ ಸೂಕ್ಷ್ಮತೆಗಳನ್ನು ಪಾಲಕರು ಮುಕ್ತವಾಗಿ ತಿಳಿಸಿಕೊಡಬೇಕಾಗುತ್ತದೆ. ಹೆಣ್ಣಿನ ದೈಹಿಕ ಸೂಕ್ಷ್ಮತೆ, ದೈಹಿಕ ರಚನೆ, ಋತುಚಕ್ರ ಮೊದಲಾದವುಗಳಿಗಾಗಿ ಕೆಲವು ವಿಶೇಷ ಕಾಳಜಿಗಳಿಗೆ ಅವಳು ಹಕ್ಕುದಾರಳು ಎಂಬುದನ್ನು ಗಂಡು ಮಕ್ಕಳಿಗೆ ಮನದಟ್ಟು ಮಾಡಬೇಕು. ಹೆಣ್ಣು ಮಗುವಿನ ದೈಹಿಕ ಸೂಕ್ಷ್ಮತೆಯನ್ನು ಅವಳ ದೌರ್ಬಲ್ಯವೆಂದು ಪರಿಗಣಿಸದೆ, ಸಹಜವಾದ ಸಮಾನತೆಯ ಭಾವನೆಯನ್ನು ಮಕ್ಕಳಲ್ಲಿ ಬೆಳೆಸಬೇಕು. ಮಗಳ ವಿಚಾರದಲ್ಲಿ ತಾಯಿ ತುಸು ಹೆಚ್ಚು ಜವಾಬ್ದಾರಿ ತೆಗೆದುಕೊಂಡರೂ, ಮಗನ ಜವಾಬ್ದಾರಿ ತೆಗೆದುಕೊಳ್ಳುವುದರಲ್ಲಿ ತಂದೆಯ ಪಾತ್ರವೂ ಮುಖ್ಯ.
ಮುಕ್ತ ಮಾತು: ಮಕ್ಕಳಲ್ಲಿ ಅಸಹಜ ವರ್ತನೆ ಕಂಡುಬಂದಾಗ ಒಂದಷ್ಟು ಆಪ್ತ ಸಮಾಲೋಚನೆ ಅಗತ್ಯ. ಮಕ್ಕಳು ಖಿನ್ನರಾಗಿ, ನಿಸ್ತೇಜರಾಗಿ ಕುಳಿತಿರುವುದನ್ನು ಗಮನಿಸಿದಾಗ ಅವರನ್ನು ಗದರಿಸಿ ಮತ್ತಷ್ಟು ಮನಸ್ಸು ಘಾಸಿಗೊಳಿಸಿದರೆ, ಗೊಂದಲಮಯ ಮನಸ್ಸು ಕ್ರೌರ್ಯಕ್ಕೆ ಪರಿವರ್ತಿತವಾಗಬಹುದು ಅಥವಾ ಆತ್ಮಹತ್ಯೆಯಂತಹ ದುರಾಲೋಚನೆಯತ್ತ ಹೊರಳಬಹುದು. ಇಂತಹ ಸಂದರ್ಭದಲ್ಲಿ ಆಪ್ತವಾಗಿ ಅವರ ಸಮಸ್ಯೆಗಳಿಗೆ ಕಿವಿಯಾದರೆ, ಮನಬಿಚ್ಚಿ ಒಂದಿನಿತು ಮಾತನಾಡಲು ಅವಕಾಶ ನೀಡಿದರೆ, ಕದಡಿದ ಮನಸ್ಸಿಗೆ ಸಮಾಧಾನ ನೀಡಬಹುದು. ಕೆಲವೊಮ್ಮೆ ಅಂತರ್ಜಾಲ, ಜಾಲತಾಣಗಳ ಗೀಳು ಮಕ್ಕಳನ್ನು ಅಸಹಜ ವರ್ತನೆಗೆ ಪ್ರೇರೇಪಿಸಿ, ಅವರಲ್ಲಿ ತಪ್ಪಿತಸ್ಥ ಭಾವನೆ ಮೂಡಿಸಬಹುದು. ಇಂತಹ ಸಂದರ್ಭದಲ್ಲಿ ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸಿ, ಗೊಂದಲಗಳಿಗೆ ಪರಿಹಾರೋಪಾಯ ನೀಡುವುದು ಪಾಲಕರ ಕರ್ತವ್ಯ.
ಜಾಲತಾಣ ಬಳಕೆ: ಮಕ್ಕಳು ಸಾಮಾಜಿಕ ಜಾಲತಾಣಗಳಲ್ಲಿನ ಅಶ್ಲೀಲತೆ, ಲೈಂಗಿಕ ದೃಶ್ಯ, ಅವೈಜ್ಞಾನಿಕ, ಅವಾಸ್ತವಿಕ ಲೈಂಗಿಕತೆಯ ಪ್ರಭಾವಕ್ಕೆ ಒಳಗಾಗದಂತೆ ಪಾಲಕರು ಎಚ್ಚರಿಕೆ ವಹಿಸಬೇಕು. ಆಯಾ ವಯಸ್ಸಿಗನುಗುಣವಾಗಿ ಅವಶ್ಯವಿರುವ ಲೈಂಗಿಕ ಸೂಕ್ಷ್ಮತೆಗಳನ್ನು ಪಾಲಕರೇ ತಿಳಿಸಿಕೊಡುವುದರಿಂದ ಮಕ್ಕಳು ಜಾಲತಾಣಗಳ ಮೊರೆ ಹೋಗಿ ಕೆಟ್ಟ ವರ್ತನೆ ಬೆಳೆಸಿಕೊಳ್ಳುವುದನ್ನು ತಪ್ಪಿಸಬಹುದು. ಲೈಂಗಿಕತೆ ಎಂಬ ಪದ ಬಳಕೆಯೇ ತಪ್ಪು ಎಂಬ ಭಾವನೆ ಕೆಲವರಲ್ಲಿದೆ. ಆದರೆ ಅದು ಕೂಡ ಮಕ್ಕಳ ಮಾನಸಿಕ ಬೆಳವಣಿಗೆಯಲ್ಲಿ ಅತಿ ಮುಖ್ಯ ಎಂಬುದನ್ನು ಹಿರಿಯರು ಮನಗಾಣಬೇಕು. ಲೈಂಗಿಕತೆ ಕುರಿತು ತಪ್ಪು ಕಲ್ಪನೆಯಿಂದ ಮಕ್ಕಳು ಅನೈತಿಕ ಮಾರ್ಗ ಹಿಡಿಯದಂತೆ ತಪ್ಪಿಸುವ ಹೊಣೆಗಾರಿಕೆ ಪಾಲಕರದು.
ಜೀವನ ಶಿಕ್ಷಣ ಅಗತ್ಯ: ನಾಗಾಲೋಟದಲ್ಲಿ ಓಡುತ್ತಿರುವ ಪ್ರಸ್ತುತ ಕಾಲಘಟ್ಟದಲ್ಲಿ ಹೆಣ್ಣು ಮಕ್ಕಳಿಗೆ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಪಾಠ ಕಲಿಸಬೇಕು. ಜೀವನದ ಎಲ್ಲ ಹಂತಗಳಲ್ಲಿ, ಎಂದರೆ ಅವರು ಮದುವೆಯಾಗಿರಲಿ, ಏಕಾಂಗಿಯಾಗಿರಲಿ, ತಮ್ಮ ಮಾನಕ್ಕೆ ಧಕ್ಕೆ ಬರುವ ಸಂದರ್ಭ ಬಂದಾಗ, ದೌರ್ಜನ್ಯ ಎದುರಿಸುವ ಪರಿಸ್ಥಿತಿ ಎದುರಾದಾಗ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ದೃಢ ಮನಸ್ಸು ರೂಪುಗೊಳ್ಳುವಂತೆ ಮಕ್ಕಳಿಗೆ ಜೀವನ ಶಿಕ್ಷಣ ನೀಡಬೇಕು. ಹೆಣ್ಣು ಮತ್ತು ಗಂಡು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಅತ್ಯಾಚಾರ ಎಂಬ ಕರಾಳ ಸನ್ನಿವೇಶ ನಡೆದಾಗ ಹೆಣ್ಣು ಅನುಭವಿಸಿದ ನೋವಿಗೆ ಪಾಲಕರು ಯಾತನೆ ಪಡುವಂತಾದರೆ, ಅತ್ಯಾಚಾರದಲ್ಲಿ ಭಾಗಿಯಾದ ಮಗನನ್ನು ಹೆತ್ತ ಪಾಲಕರು ಮಗನ ಕೆಟ್ಟ ವರ್ತನೆಗೆ ಸಂಕಟ ಪಡುವಂತಾಗುತ್ತದೆ. ಪ್ರೌಢ ವಯಸ್ಸಿನಲ್ಲಿ ಮಕ್ಕಳ ಈ ನಡವಳಿಕೆಗೆ ನೊಂದುಕೊಳ್ಳುವ ಬದಲು, ಎಳವೆಯಲ್ಲಿಯೇ ಮಕ್ಕಳಿಗೆ ಲಿಂಗ ಸೂಕ್ಷ್ಮತೆ ಭಾವನೆಗಳನ್ನು ಬೆಳೆಸುವಂತಾಗಬೇಕಿದೆ.