ಹೆಸರು ಕೆಡಿಸುವವರಿಗಿಂತ, ಉಳಿಸಿ ಬೆಳೆಸುವ ಮಕ್ಕಳಾಗೋಣ...

Savysachi
Published on
ಶ್ರೀಮಂತ ಕುಟುಂಬದಲ್ಲಿ ಹುಟ್ಟಿದ್ದರಲ್ಲಿ, ಶ್ರೀಮಂತಿಕೆಯಲ್ಲೇ ಬೆಳೆದಿದ್ದರಲ್ಲಿ ಆ ಮಕ್ಕಳ ಹೆಚ್ಚುಗಾರಿಕೆ ಏನೂ ಇರುವುದಿಲ್ಲ. ಬದಲಿಗೆ ತಮ್ಮ ವಯಸ್ಸಿನ ಅಸಂಖ್ಯಾತ ಮಕ್ಕಳು ಕಷ್ಟದ ಜೀವನ ನಡೆಸುತ್ತಿರುವಾಗ ತಮ್ಮ ಐಷಾರಾಮಕ್ಕೆ, ತಮ್ಮ ಹಣೆಬರಹಕ್ಕೆ, ಅದೃಷ್ಟಕ್ಕೆ, ದೇವರಿಗೆ ಅಥವಾ ಹೆತ್ತವರಿಗೆ ಕೃತಜ್ಞರಾಗಿದ್ದರೆ, ಅಷ್ಟರ ಮಟ್ಟಿಗೆ ಇಂಥ ಪ್ರಕರಣಗಳು ಕಡಿಮೆಯಾಗುತ್ತವೆ.

ಸಿರಿವಂತ ತಂದೆಯ ಒಬ್ಬನೇ ಮಗ ಉಡಾಳ. ಹಣದ ಬೆಲೆ ತಿಳಿದಿಲ್ಲ. ಯಾವುದಕ್ಕೂ ಕೇರ್ ಮಾಡುವವನೇ ಅಲ್ಲ. ಹೋದಲ್ಲೆಲ್ಲ ತರಲೆ, ಜಗಳ, ರಗಳೆ. ಕೈಗೆ ಸಿಕ್ಕಿದ್ದೆಲ್ಲ ಉಡೀಸ್, ಎಲ್ಲವೂ ಪೀಸ್ ಪೀಸ್.. ಇದಕ್ಕೆಲ್ಲ ಹಣ? ‘ಅಪ್ಪ ಇರುವನಲ್ಲ.. ಅವನ ಬಳಿ ಬೇಕಾದಷ್ಟು ಹಣವಿದೆ. ಸಮುದ್ರದ ಅರಸನಿಗೆ ಉಪ್ಪಿಗೆ ಬರವೇ? ಕೊಡ್ತಾನೆ ಬಿಡು..’

ರವಿಚಂದ್ರನ್ ಅಭಿನಯದ ಸೂಪರ್​ಹಿಟ್ ಚಿತ್ರ ‘ಅಂಜದ ಗಂಡು’ ಬಿಡುಗಡೆಯಾಗಿದ್ದು 1988ರಲ್ಲಿ. ಅಂದಿನಿಂದ ಈ ಮೂವತ್ತಮೂರು ವರ್ಷಗಳಲ್ಲಿ ಜಗತ್ತು ಅದೆಷ್ಟು ಬದಲಾಗಿದೆ? ಆದರೆ, ಜನ ಬದಲಾಗಿಲ್ಲ. ಮನೋಧರ್ಮ ಬದಲಾಗಿಲ್ಲ. ಜಗತ್ತು 5ಜಿ ಫಾಸ್ಟ್​ಮೋಡ್​ನಲ್ಲಿ ಓಡುತ್ತಿದ್ದರೂ, ಗುಣ ಬದಲಾಗಿಲ್ಲ.

ನಮ್ಮ ನಿಯಂತ್ರಣದಲ್ಲಿ ಇಲ್ಲದ ಜನನ ಮತ್ತು ಮರಣಗಳ ನಡುವೆ ಯಾವ ರೀತಿ ಬದುಕುತ್ತೇವೆ ಎನ್ನುವುದೇ ಜೀವನ. ಮರಣವೆನ್ನುವುದು ಪ್ರತಿಯೊಬ್ಬರಿಗೂ ನಿಶ್ಚಿತವಾಗಿದ್ದರೂ, ಯಾವ ರೀತಿಯ ಮರಣವೆನ್ನುವುದು ಅನಿಶ್ಚಿತ. ಏಕೆಂದರೆ, ಕುಳಿತಲ್ಲೇ, ನಿದ್ರೆಯಲ್ಲೇ ಹೃದಯ ಮರಗಟ್ಟಿ ನೋವಿಲ್ಲದೆ ಸಾಯುವ ಸುಖಮರಣ ಎಲ್ಲರಿಗೂ ಬರೆದಿರುವುದಿಲ್ಲ. ಅನಾಯಾಸೇನ ಮರಣಂ ವಿನಾ ದೈನ್ಯೇನ ಜೀವನಂ... ಆಯಾಸ, ಪ್ರಯಾಸಗಳಿಲ್ಲದ, ರೋಗರುಜಿನಗಳಿಲ್ಲದ, ನೋವು, ಯಾತನೆಗಳಿಲ್ಲದ ಅನಾಯಾಸವಾದ ಮರಣವನ್ನು ಕೊಡು.. ಹೊತ್ತಿನ ತುತ್ತಿಗಾಗಿ, ಅನುದಿನದ ಬದುಕಿನ ನಿರ್ವಹಣೆಗಾಗಿ ಬೇರೊಬ್ಬರ ಬಳಿ ಬೇಡುವಂಥ ದೈನ್ಯತೆ ಇಲ್ಲದ ಜೀವನವನ್ನು ಕೊಡು ಎಂದು ಭಗವಂತನನ್ನು ಪ್ರಾರ್ಥಿಸುವಂತೆ ಹಿರಿಯರು ಹೇಳುತ್ತಾರೆ. ದೇವರಿಗೆ ತಲೆಬಾಗುವವನು ಅವರಿವರ ಮುಂದೆ ತಲೆಬಾಗುವ ಪ್ರಸಂಗ ಬರುವುದಿಲ್ಲ... ದೇವರ ಬಳಿ ಬೇಡುವವನಿಗೆ ಜನರ ಬಳಿ ಬೇಡುವಂಥ ದುರವಸ್ಥೆ ಬರುವುದಿಲ್ಲ ಎಂಬುದು ಅವರವರ ನಂಬಿಕೆಗೆ ಬಿಟ್ಟಿದ್ದು. ಒಟ್ಟಿನಲ್ಲಿ ಸಾವು ನಮ್ಮ ಕೈಯಲ್ಲಿಲ್ಲ. ಹುಟ್ಟು ಕೂಡ ನಮ್ಮ ಇಚ್ಛೆಯಂತೆ ಸಾಧ್ಯವಿಲ್ಲ. ಹಿಂದೆಲ್ಲ ದೇವರೇ ತನಗೆ ಮಗನಾಗಿ ಹುಟ್ಟಿಬರಬೇಕು ಎಂದು ತಪಸ್ಸು ಮಾಡುತ್ತಿದ್ದ ಸಾಧಿ್ವುರಿದ್ದರು. ಅನಸೂಯಾ ದೇವಿ ಬ್ರಹ್ಮ, ವಿಷ್ಣು, ಮಹೇಶ್ವರರನ್ನೇ ತೊಟ್ಟಿಲಲ್ಲಿ ತೂಗಬೇಕು ಎಂದು ಆಸೆ ಪಟ್ಟಳು. ಹೀಗಾಗಿ ತ್ರಿಮೂರ್ತಿಗಳೇ ದತ್ತಾತ್ರೇಯ ರೂಪದಲ್ಲಿ ಅನಸೂಯೆಯ ಮಕ್ಕಳಾದರು. ಆದರೆ, ಯಾವ ತಂದೆ ತಾಯಿಯೂ ತಮ್ಮ ಮಗು ಮುಂದೆ ಹೀಗೆಯೇ ಆಗಬೇಕು ಎಂದು ನಿರ್ಧರಿಸುವುದು ಸಾಧ್ಯವಿಲ್ಲ. ಏಕೆಂದರೆ ಕನಸು ಬೇರೆ, ವಾಸ್ತವ ಬೇರೆ. ಅದೇ ರೀತಿ ಪುನರ್ಜನ್ಮದ ಪರಿಕಲ್ಪನೆ ನಮ್ಮಲ್ಲಿ ಇದ್ದರೂ, ಇಂಥ ತಾಯಿಯ ಗರ್ಭದಲ್ಲೇ ತಾನು ಜನಿಸಬೇಕು ಎಂದು ಯಾರೊಬ್ಬರೂ ಬುಕ್ಕಿಂಗ್ ಮಾಡುವುದು ಸಾಧ್ಯವಿಲ್ಲ. ಒಂದು ವೇಳೆ ಅದು ಸಾಧ್ಯವಿದ್ದಿದ್ದರೆ, ಎಲ್ಲರೂ ಸಿರಿವಂತ ಕುಟುಂಬಗಳನ್ನೇ ಹುಡುಕುತ್ತಿದ್ದರು ಹಾಗೂ ಬಡವರಿಗೆ ಮಕ್ಕಳೇ ಜನಿಸುತ್ತಿರಲಿಲ್ಲ. ಜನ್ಮವೆನ್ನುವುದು ಭಗವದಿಚ್ಛೆ. ಯಾವ ಜೀವ, ಯಾವ ತಾಯಿಯ ಮಡಿಲನ್ನು ಸೇರಬೇಕೆನ್ನುವುದು ಹುಟ್ಟುವ ಮಗುವಿಗಾಗಲೀ, ಹೆರುವ ತಾಯಿಗಾಗಲೀ ತಿಳಿಯದು. ಈ ಬೃಹತ್ ಬ್ರಹ್ಮಾಂಡದಲ್ಲಿ ಪ್ರತೀ ದಿನ ಪ್ರತೀ ಕ್ಷಣ ಸಹಸ್ರಾರು ಮಕ್ಕಳು ಜನಿಸುತ್ತವೆ. ಅರಮನೆಯಲ್ಲೋ, ಗುಡಿಸಲಿನಲ್ಲೋ, ಹೈಟೆಕ್ ಆಸ್ಪತ್ರೆಯಲ್ಲೋ, ರೈಲು ಬೋಗಿಯಲ್ಲೋ, ಸರ್ಕಾರಿ ಆಸ್ಪತ್ರೆಯಲ್ಲೋ, ವಿಮಾನ ಪ್ರಯಾಣದ ನಡುವೆಯೋ ಯಾವ ಶಿಶು ಎಲ್ಲಿ ಜನ್ಮಿಸಬೇಕೆನ್ನುವುದು ಅದರದರ ಯೋಗ, ಹಣೆಬರಹ ಆಧರಿಸಿದ್ದು, ಅವಲಂಬಿಸಿದ್ದು.

ಅಂದರೆ, ಈ ಹುಟ್ಟು ಮತ್ತು ಸಾವು ಎರಡೂ ಮನುಷ್ಯರ ಇಚ್ಛೆಗೆ ನಿಲುಕದ್ದು. ಆದರೆ, ಜೀವನ ಮಾತ್ರ ಪ್ರತಿಯೊಬ್ಬರ ನಿಯಂತ್ರಣದಲ್ಲೇ ಇರುವಂಥದ್ದು. ನಮ್ಮ ಜೀವನದ ಶಿಲ್ಪಿಗಳು ನಾವೇ ಎಂಬ ಮಾತಿನರ್ಥ ಅದೇ. ಯಾರ ಬದುಕು ಹೇಗಿರಬೇಕು ಎನ್ನುವುದು ಹುಟ್ಟಿನಿಂದ ನಿರ್ಧಾರ ಆಗುವುದಿಲ್ಲ. ಹುಟ್ಟಿದ ಮೇಲೆ ಆ ಮಕ್ಕಳು ಹೇಗೆ ಬೆಳೆಯುತ್ತಾರೆ, ಏನನ್ನು ಕಲಿಯುತ್ತಾರೆ, ಯಾವ ಸಂಸ್ಕಾರ ಪಡೆಯುತ್ತಾರೆ, ಜೀವನ ಹೇಗೆ ನಡೆಸುತ್ತಾರೆ, ಸವಾಲುಗಳನ್ನು ಹೇಗೆ ಎದುರಿಸುತ್ತಾರೆ ಇತ್ಯಾದಿ ಅಂಶಗಳು ಪ್ರತಿಯೊಂದು ಜೀವದ ಯೋಗವನ್ನು, ಯೋಗ್ಯತೆಯನ್ನು ನಿರ್ಧರಿಸುತ್ತದೆ.

ನಮ್ಮ ಸಮಾಜ, ನಮ್ಮ ಸಿನಿಮಾ, ನಮ್ಮ ಮನರಂಜನಾ ಮಾಧ್ಯಮಗಳು ಸಿರಿವಂತ ಕುಟುಂಬಗಳನ್ನು ನೋಡುವ, ತೋರಿಸುವ ರೀತಿಯೇ ಬೇರೆ ಇರುತ್ತದೆ. ಶ್ರೀಮಂತರ ಮಕ್ಕಳೆಲ್ಲರೂ ಒರಟರಂತೆ, ರ್ದಪಿಷ್ಟರಂತೆ, ಸ್ವೇಚ್ಛಾಚಾರಿಗಳಂತೆ, ಅನ್ಯಗ್ರಹದ ಜೀವಿಗಳಂತೆ, ಕುಟುಂಬದ ಅಂತಸ್ತು, ಮರ್ಯಾದೆ, ಘನತೆಯನ್ನು ಬೀದಿಗೆ ತರಲೆಂದೇ ಹುಟ್ಟಿದವರಂತೆ ತೋರಿಸಲಾಗುತ್ತದೆ, ಬಿಂಬಿಸಲಾಗುತ್ತದೆ. ಆದರೆ, ವಾಸ್ತವ ಹಾಗೇನೂ ಇರುವುದಿಲ್ಲ. ಎಲ್ಲ ಕುಟುಂಬದಲ್ಲೂ, ಎಲ್ಲ ಸಮಾಜದಲ್ಲೂ ಅಪವಾದಗಳಿರುತ್ತವೆ. ಸಿರಿವಂತರ ಮನೆಯಲ್ಲಿ ಜನಿಸಿ, ಸಿರಿವಂತಿಕೆಯ ಎಲ್ಲ ಅನುಕೂಲಗಳು ತಮ್ಮ ಜನ್ಮಸಿದ್ಧ ಹಕ್ಕೆಂದು ಭಾವಿಸದೆ ಸಮಾಜಮುಖಿಯಾಗಿ ಬೆಳೆದವರೂ, ಪರಿವಾರದ ಉದ್ಯಮವನ್ನು ಇಮ್ಮಡಿಯಾಗಿ ಮುಮ್ಮಡಿಯಾಗಿ ಬೆಳೆಸಿದವರೂ, ಸಹಸ್ರಾರು ಜನರಿಗೆ ಉದ್ಯೋಗದಾತರಾಗಿ ಸಮಾಜಕ್ಕೆ ಆದರ್ಶವಾಗಿ ಬೆಳೆದವರೂ ಸಾವಿರಾರು ಜನ ಇದ್ದಾರೆ. ಕುಳಿತು ಉಂಡರೆ ಕೊಪ್ಪರಿಗೆ ಹೊನ್ನೂ ಕರಗುತ್ತದೆ. ಯಾವುದೇ ವಂಶ, ಪರಿವಾರ ತಲೆಮಾರುಗಳಿಂದ ಶ್ರೀಮಂತವಾಗಿ ಉಳಿದಿದ್ದರೆ, ಬೆಳೆದಿದ್ದರೆ ಆ ಕುಟುಂಬದಲ್ಲಿ, ಆ ಪರಿವಾರದಲ್ಲಿ ಜನಿಸಿದ ಮಕ್ಕಳು ಯೋಗ್ಯ ರೀತಿಯಲ್ಲಿ ಬೆಳೆದಿದ್ದಾರೆ ಎಂದೇ ಅರ್ಥ.

ಮಕ್ಕಳು ದಾರಿ ತಪ್ಪಲಿ, ತಮ್ಮ ಶ್ರೀಮಂತಿಕೆ ಇರುವುದೇ ಮಕ್ಕಳು ಸ್ವೇಚ್ಛೆಯಿಂದ ಬದುಕುವುದಕ್ಕೆ ಎಂದೂ ಯಾವ ಪಾಲಕರೂ ಬಯಸುವುದಿಲ್ಲ. ಆದರೆ, ಜೀವನದಲ್ಲಿ ತಾವು ಕಂಡ ಕಷ್ಟವನ್ನು, ಅನುಭವಿಸಿದ ಯಾತನೆಯನ್ನು, ಎದುರಿಸಿದ ಸವಾಲುಗಳನ್ನು ತಮ್ಮ ಮಕ್ಕಳು ಎದುರಿಸುವುದು, ಅನುಭವಿಸುವುದು ಬೇಡ ಎಂದು ಎಲ್ಲ ತಂದೆತಾಯಂದಿರೂ ಬಯಸುತ್ತಾರೆ. ಅದರಲ್ಲಿ ತಪ್ಪೇನೂ ಇಲ್ಲ. ಆದರೆ, ಹೀಗೆ ಬಯಸುವುದರಲ್ಲಿ, ಮಕ್ಕಳನ್ನು ಅವರಿಷ್ಟದಂತೆ ಬಿಡುವುದರಲ್ಲಿ ವ್ಯತ್ಯಾಸವಿದೆ.

1992ರಲ್ಲಿ ತೆರೆ ಕಂಡ ‘ದೀವಾನಾ’ ಚಿತ್ರದ ಮೂಲಕ ಬಾಲಿವುಡ್​ಗೆ ದೊಡ್ಡ ಮಟ್ಟದಲ್ಲಿ ರಂಗಪ್ರವೇಶ ಪಡೆದ ಶಾರುಖ್ ಖಾನ್ ತಮ್ಮ ಮೂವತ್ತು ವರ್ಷಗಳ ಸಿನಿಬದುಕಿನಲ್ಲಿ ಎಲ್ಲ ರೀತಿಯ ಏಳು-ಬೀಳುಗಳನ್ನು ಕಂಡವರು. ಚಿತ್ರಗಳಲ್ಲಿ ನೆಗೆಟಿವ್ ಪಾತ್ರಗಳನ್ನು ಮಾಡಿದರೂ, ಉದ್ಯಮದಲ್ಲಿ ಪಾಸಿಟಿವ್ ಇಮೇಜ್ ಬೆಳೆಸಿಕೊಂಡು ತಮ್ಮ ಸ್ಥಾನ ಭದ್ರಪಡಿಸಿಕೊಂಡವರು. ಮೂರು ದಶಕಗಳೆನ್ನುವುದು ಬಾಲಿವುಡ್​ನಲ್ಲಿ ಬಹುಸುದೀರ್ಘ ಅವಧಿ. ಇಷ್ಟು ದೀರ್ಘ ಕಾಲ ಬೇಡಿಕೆ ಉಳಿಸಿಕೊಂಡು, ಸೂಪರ್​ಸ್ಟಾರ್​ಗಿರಿ ಬೆಳೆಸಿಕೊಂಡು ಬಾಲಿವುಡ್​ನ ಬಾದ್​ಷಾ ಆಗಿ ಉದ್ಯಮ ಮುಂಚೂಣಿಯ ತಾರೆಯಾಗಿ ವರ್ಚಸ್ಸು ಬೆಳೆಸಿಕೊಂಡ ಹಿಂದೆ ಶಾರುಖ್​ರ ಅದ್ಭುತ ಪ್ರತಿಭೆ, ಪರಿಶ್ರಮ, ವಿವೇಕ ಹಾಗೂ ಯೋಗದ ಸಮತೂಕವಿದೆ. ಹೀಗೆ ಮೂರು ದಶಕಗಳಲ್ಲಿ ಯಾವುದೇ ಕೆಟ್ಟ ಮಾತು, ನಡತೆ, ಅಕ್ರಮ, ಅವ್ಯವಹಾರ, ವಿವಾದಗಳಲ್ಲಿ ಸಿಲುಕದೆ ಸಭ್ಯತೆ, ಧೀಮಂತಿಕೆಯಿಂದ ಬದುಕುತ್ತಿರುವ ಶಾರುಖ್ ಕಳೆದ ಕೆಲವು ದಿನಗಳಿಂದ ತಲೆತಗ್ಗಿಸುವಂತಾಗಿದೆ. ಕಾರಣ, ಅವರ ಪುತ್ರ ಆರ್ಯನ್ ಖಾನ್ ಅಕ್ರಮ ಡ್ರಗ್ಸ್ ದಂಧೆಯಲ್ಲಿ ಭಾಗಿಯಾದ ಆರೋಪದ ಮೇಲೆ ಬಂಧನದಲ್ಲಿರುವುದು. ಸಾಮಾನ್ಯವಾಗಿ ರೇವ್ ಪಾರ್ಟಿಗಳಲ್ಲಿ ಬಂಧಿತರಾಗುವ ಶ್ರೀಮಂತರ ಮಕ್ಕಳು ಒಂದು, ಎರಡು ದಿನದಲ್ಲಿ ಜಾಮೀನಿನ ಮೇಲೆ ಹೊರಗೆ ಬಂದಿರುತ್ತಾರೆ. ನಂತರ ಆ ಪ್ರಕರಣಗಳು ಕೂಡ ಜನಮಾನಸದಿಂದ ಮರೆತುಹೋಗುತ್ತದೆ. ಆದರೆ, ಆರ್ಯನ್ ಬಂಧಿತನಾಗಿ ತಿಂಗಳಾಗುತ್ತ ಬಂದಿದ್ದರೂ ಜಾಮೀನು ಸಿಗದಿರುವುದನ್ನು ನೋಡಿದರೆ, ಪ್ರಕರಣ ಗಂಭೀರವೇ ಇರಬೇಕು ಅನ್ನಿಸುತ್ತಿದೆ.

ಹಾಗೆ ನೋಡಿದರೆ, ಆರ್ಯನ್ ಪ್ರಕರಣ ಎಲ್ಲ ಸಿರಿವಂತ ಕುಟುಂಬದ ಮಕ್ಕಳಿಗೆ ಹಾಗೂ ಪಾಲಕರಿಗೆ ಬಹುದೊಡ್ಡ ಪಾಠ. ಮಕ್ಕಳು ಅವರಿಚ್ಛೆಯಂತೆ ಬೆಳೆಯಲಿ ಎಂದು ಬಯಸುವ ಎಲ್ಲ ಪಾಲಕರು, ತಾವು ನೀಡುವ ಸ್ವಾತಂತ್ರ್ಯ ದುರುಪಯೋಗ ಆಗದಂತೆ ನಿಗಾ ವಹಿಸುವುದೂ ಮುಖ್ಯ. ಹಣ, ಪ್ರಖ್ಯಾತಿ, ಪ್ರಭಾವದ ವರ್ಚಸ್ಸು ಹೊಂದಿದ್ದರೆ ಏನೇ ಬಂದರೂ ಬಚಾವಾಗಬಹುದು ಎಂಬ ನಂಬಿಕೆ ಆರ್ಯನ್ ಪ್ರಕರಣದಲ್ಲಿ ಸುಳ್ಳಾಗಿದೆ. ಅದೇ ರೀತಿ ಮಕ್ಕಳು ಕೂಡ ತಮ್ಮ ಒಂದೊಂದು ಸಣ್ಣ-ಪುಟ್ಟ ತಪು್ಪಗಳು, ನಡವಳಿಕೆಗಳು, ಚಟುವಟಿಕೆಗಳು ತಮ್ಮ ಪಾಲಕರು ದೀರ್ಘ ಕಾಲದಿಂದ ಗಳಿಸಿ, ಬೆಳೆಸಿದ ಹೆಸರು- ವರ್ಚಸ್ಸಿನ ಮೇಲೆ ಪ್ರಭಾವ ಬೀರುತ್ತವೆ ಎಂಬುದನ್ನು ಅರಿತಿರಬೇಕು. ಪಬ್ಬು-ಬಾರ್​ಗಳಲ್ಲಿ, ರಸ್ತೆ-ಅಪಘಾತಗಳಲ್ಲಿ, ಸಾರ್ವಜನಿಕ ಸ್ಥಳದ ಶ್ರೀಮಂತಿಕೆಯ ಪ್ರದರ್ಶನಗಳಲ್ಲಿ ‘ನಾನು ಯಾರ ಮಗ ಗೊತ್ತಾ’ ಎಂದು ದರ್ಪ ಮೆರೆಯುವ ಮಕ್ಕಳು ಆ ಮೂಲಕ ತಮ್ಮ ಅಪ್ಪ-ಅಮ್ಮನ ಮರ್ಯಾದೆಯನ್ನು ತಾವೇ ಮಣ್ಣುಪಾಲು ಮಾಡುತ್ತಿದ್ದೇವೆ ಎಂಬುದನ್ನೂ ನೆನಪಿನಲ್ಲಿಟ್ಟುಕೊಂಡಿರಬೇಕು. ಶ್ರೀಮಂತ ಕುಟುಂಬದಲ್ಲಿ ಹುಟ್ಟಿದ್ದರಲ್ಲಿ, ಶ್ರೀಮಂತಿಕೆಯಲ್ಲೇ ಬೆಳೆದಿದ್ದರಲ್ಲಿ ಆ ಮಕ್ಕಳ ಹೆಚ್ಚುಗಾರಿಕೆ ಏನೂ ಇರುವುದಿಲ್ಲ. ಬದಲಿಗೆ ತಮ್ಮ ವಯಸ್ಸಿನ ಅಸಂಖ್ಯಾತ ಮಕ್ಕಳು ಕಷ್ಟದ ಜೀವನ ನಡೆಸುತ್ತಿರುವಾಗ ತಮ್ಮ ಐಷಾರಾಮಕ್ಕೆ, ತಮ್ಮ ಹಣೆಬರಹಕ್ಕೆ, ಅದೃಷ್ಟಕ್ಕೆ, ದೇವರಿಗೆ ಅಥವಾ ಹೆತ್ತವರಿಗೆ ಕೃತಜ್ಞರಾಗಿದ್ದರೆ, ಅಷ್ಟರ ಮಟ್ಟಿಗೆ ಇಂಥ ಪ್ರಕರಣಗಳು ಕಡಿಮೆಯಾಗುತ್ತವೆ. ಭಾರತದಂಥ ಪ್ರಜಾಪ್ರಭುತ್ವ ದೇಶದಲ್ಲಿ ಕಡುಬಡ ಕುಟುಂಬದಲ್ಲಿ ಹುಟ್ಟಿದವರೂ ಪ್ರಧಾನಿ, ರಾಷ್ಟ್ರಪತಿ ಆಗಬಹುದು, ದೊಡ್ಡ ಉದ್ಯಮಗಳನ್ನೇ ಕಟ್ಟಬಹುದು, ಅದೇ ರೀತಿ ಸುಖದ ಸುಪ್ಪತ್ತಿಗೆಯಲ್ಲಿ ಹುಟ್ಟಿ ಬೆಳೆದವರೂ ಬೀದಿಯಲ್ಲಿ ಸಾಯಬಹುದು. ಹಾಗಾಗಿ ಯಾವುದೂ ಶಾಶ್ವತವಲ್ಲ. ನಾವು ನಮ್ಮ ಬದುಕು, ನಾವು ಬದುಕುವ ರೀತಿ, ಸಮಾಜಕ್ಕೆ ಏನನ್ನು ಬಿಟ್ಟುಹೋಗುತ್ತೇವೆ, ಕೊಟ್ಟುಹೋಗುತ್ತೇವೆ ಎನ್ನುವುದಷ್ಟೇ ಶಾಶ್ವತ.

ಗುಜರಾತಿನ ಶ್ರೀಮಂತ ವಜ್ರವ್ಯಾಪಾರಿಯ ಕಥೆಯನ್ನು ಎಲ್ಲರೂ ಕೇಳಿರಬಹುದು. 6000 ಕೋಟಿ ಮೌಲ್ಯದ ವಜ್ರೋದ್ಯಮ ನಡೆಸುತ್ತಿರುವ ಧೊಲಾಖಿಯಾ ಕುಟುಂಬದಲ್ಲೊಂದು ರಿವಾಜಿದೆ. ಉದ್ಯಮಿ ಸಾವ್ಜಿ ಧೊಲಾಖಿಯ ತನ್ನ ಮೂವರು ಮಕ್ಕಳು ಅಮೆರಿಕದಲ್ಲಿ ವಿದ್ಯಾಭ್ಯಾಸ ಮಾಡಿ ಬಂದ ಬಳಿಕ, ಕೈಯಲ್ಲಿ ಬಿಡಿಗಾಸು ಇಟ್ಟುಕೊಳ್ಳದೆ, ಕುಟುಂಬದ ಹೆಸರು, ಪ್ರಭಾವ ಬಳಸದೆ, ಭಾಷೆ ಬರದ ಊರಿನಲ್ಲಿ ಒಂದು ತಿಂಗಳು ಕಳೆಯಬೇಕು. ಅಡ್ಡದಾರಿ ಹಿಡಿಯುವಂತಿಲ್ಲ, ವಾರಕ್ಕಿಂತ ಹೆಚ್ಚು ಒಂದೇ ಕಡೆ ಕೆಲಸ ಮಾಡುವಂತಿಲ್ಲ. ಕನಿಷ್ಠ 5000 ರೂ. ಸಂಪಾದಿಸಿ ಮರಳಬೇಕು ಎಂದು ಕಟ್ಟಪ್ಪಣೆ ವಿಧಿಸಿ ಮಕ್ಕಳನ್ನು ಕೊಚ್ಚಿಗೆ, ಹೈದರಾಬಾದಿಗೆ ಕಳುಹಿಸಿದ್ದರು. ಮಕ್ಕಳು ವಜ್ರೋದ್ಯಮದ ಉತ್ತರಾಧಿಕಾರ ವಹಿಸಿಕೊಳ್ಳುವ ಮೊದಲು ಲೋಕ ಅರಿಯಲಿ, ಪ್ರಾಮಾಣಿಕವಾಗಿ ಹಣಸಂಪಾದನೆಯ ಬೆಲೆ ಅರಿಯಲಿ ಎನ್ನುವುದು ಅವರ ಉದ್ದೇಶವಾಗಿತ್ತು. ಅವರ ಮೂವರು ಮಕ್ಕಳೂ ತಂದೆಯ ಇಚ್ಛೆ ಪೂರೈಸಿ ಇಂದು ಯಶಸ್ವಿ ಉದ್ಯಮಿಗಳೆನಿಸಿದ್ದಾರೆ.

ಬೆಂಕಿಕಡ್ಡಿಗೆ ಗೊತ್ತಿರುವ ಗುಣ ಒಂದೇ. ಕಡ್ಡಿ ಗೀರಿದರೆ ಉರಿಯುವುದು. ಅದನ್ನು ದೇವರ ಮನೆಯಲ್ಲಿ ಬಳಸಿದರೆ ದೀಪ ಹಚ್ಚಬಹುದು, ಸ್ಮಶಾನದಲ್ಲಿ ಬಳಸಿದರೆ ಕೊಳ್ಳಿಯಾಗುತ್ತದೆ. ಮಕ್ಕಳು ಕೆಟ್ಟ ಕೆಲಸ ಮಾಡಿದಾಗ ‘ಇಂಥವರ ಮಗ’ ಎನ್ನುತ್ತಾರೆ. ಅದೇ ಒಳ್ಳೆಯ ಕೆಲಸ ಮಾಡಿದಾಗ ಮಕ್ಕಳ ಹೆಸರಿನಿಂದ ‘ಅವನ ತಂದೆ-ತಾಯಿ’ ಎಂದು ಗುರುತಿಸುತ್ತಾರೆ. ಯಾರು ಏನಾಗಬೇಕು ಎನ್ನುವುದು ಅವರವರಿಗೆ ಬಿಟ್ಟಿದ್ದು. ಬದುಕು ಅವರಿಚ್ಛೆ. ಕೊನೆಗೆ ದೈವೇಚ್ಛೆ.

(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net