ಪ್ರಾಮಾಣಿಕ ಮನುಷ್ಯರಾಗೋಣ

1
Published on
ನಾವು ದೈವತ್ವವನ್ನು ಏರಲು ಸಾಧ್ಯವಾಗದಿರಬಹುದು. ಆದರೆ ಮೃಗತ್ವದ ಮಟ್ಟಕ್ಕೆ ಇಳಿಯದಿರುವುದೂ ಮುಖ್ಯವಾಗುತ್ತದೆ. ಮಾನವೀಯತೆಯನ್ನು ಮೆರೆಯುತ್ತ, ಪ್ರಾಮಾಣಿಕವಾಗಿ ಬದುಕುತ್ತಾ ಒಳ್ಳೆಯ ಮನುಷ್ಯರಾಗಿ ಬಾಳಿದರೆ ಅಷ್ಟೇ ಸಾಕು!

ನಾವೆಲ್ಲರೂ ನಮ್ಮ ಜೀವಿತ ಕಾಲದಲ್ಲಿ ಮೃಗತ್ವ- ಮನುಷ್ಯತ್ವ- ದೈವತ್ವಗಳೆಂಬ ಮೂರು ಗುಣ ಸ್ವಭಾವಗಳನ್ನು ಪ್ರಕಟಿಸುವ ಸಾಧ್ಯತೆಗಳಿವೆ. ಮಾನವರಾದವರು, ಮಾನವೀಯ ಗುಣ ಸ್ವಭಾವಗಳನ್ನು ಹೊಂದಿರಬೆಕಾದುದು ಸಹಜ ಸ್ವಾಭಾವಿಕವೂ, ಅಪೇಕ್ಷಣೀಯವೂ ಹೌದು. ಆದರೂ, ಕೆಲ ಸಂದರ್ಭಗಳಲ್ಲಿ ಮನುಷ್ಯ ಮೃಗಗಳಂತೆ ವರ್ತಿಸುತ್ತಾನೆ. ಅಂತೆಯೇ ಕೆಲವೊಮ್ಮೆ ದೇವರಂತೆ ಕಾಣುತ್ತಾನೆ.

ಮೃಗತ್ವ: ಮೂಲತಃ ನಾವೆಲ್ಲರೂ ಪ್ರಾಣಿ ಜಗತ್ತಿಗೆ ಸೇರಿದವರು. ಅಂದಮೇಲೆ, ಪ್ರಾಣಿ ಸಹಜವಾದ ಹಸಿವು, ನಿದ್ದೆ, ಭಯ, ಕಾಮತೃಷೆ ನಮ್ಮಲ್ಲೂ ಇದೆ. ಈ ಗುಣಸ್ವಭಾವಗಳಿಂದ ನಾವೇನೂ ಹೊರತಲ್ಲ: ಇವನ್ನು ಬಿಟ್ಟಿರಲು ಸಾಮಾನ್ಯರಿಂದ ಸಾಧ್ಯವೂ ಇಲ್ಲ. ಕಾರಣ ಇವುಗಳೆಲ್ಲವೂ ಜೈವಿಕ ಅವಶ್ಯಕತೆಗಳು. ಭಗವಂತ ನಮಗೆಲ್ಲರಿಗೂ ಹೊಟ್ಟೆಯನ್ನು ಕೊಟ್ಟ: ಜೊತೆಗೆ ಅದರೊಳಗೆ ಹಸಿವೆಯನ್ನು ಇಟ್ಟ. ಹಸಿವೆಯೇ ಇಲ್ಲವಾದರೆ, ಮನುಷ್ಯ ಏನನ್ನೂ ತಿನ್ನಲಾರ. ತಿನ್ನದೇ ಹೋದರೆ ಬದುಕಿ ಉಳಿಯಲಾರ. ಬದುಕಿ ಉಳಿಯಬೇಕಾದ ಈ ಮೂಲ ಅವಶ್ಯಕತೆಗೆ ಕುತ್ತು ಬಂದಾಗ, ಕೊರತೆ ಆದಾಗ, ಮನುಷ್ಯನೂ ಮನುಷ್ಯತ್ವವನ್ನು ಮರೆತು, ಪ್ರಾಣಿಗಳಂತೆ ವರ್ತಿಸಬಲ್ಲ. ಏನನ್ನೂ ಬೇಕಾದರೂ ಮಾಡಬಲ್ಲ. ಅಂದರೆ ಇನ್ನೊಬ್ಬರದನ್ನು ಕಿತ್ತು ತಿನ್ನಬಲ್ಲ, ಕದಿಯಬಲ್ಲ, ಕೊಲೆಯನ್ನೂ ಮಾಡಬಲ್ಲ.

ಒಂದು ಹಡಗಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆ ಆಹಾರದ ತೀವ್ರ ಕೊರತೆ ಉಂಟಾಯಿತು. ಹಸಿವೆಯಿಂದ ಸಾಯುವ ಪರಿಸ್ಥಿತಿಯೇ ಬಂದಿತು. ಆಗ ಒಬ್ಬರನ್ನೊಬ್ಬರು ಕೊಂದು ತಿನ್ನಲಿಲ್ಲವೇ? ಅಂತೆಯೇ ಅತಿಯಾದ ಕಾಮ ಪ್ರಚೋದನೆಯಾದಾಗ, ತಂದೆಯೇ, ತನ್ನ ಮಗಳನ್ನೇ ಸಂಭೋಗಿಸಲಿಲ್ಲವೇ, ಪರಪುರುಷರು ಪರಸ್ತ್ರೀಯರನ್ನು ಬಯಸಲಿಲ್ಲವೇ! ಅಂತೆಯೇ ಜೀವ ಭಯ ಬಂದಾಗಲೂ ತಮ್ಮ ರಕ್ಷಣೆಗಾಗಿ, ಪ್ರಾಣಿಗಳಂತೆ ಮನುಷ್ಯರೂ ಏನನ್ನೂ ಮಾಡಲು ಸಿದ್ದರಾಗುತ್ತಾರಲ್ಲವೇ ! ಇವೆಲ್ಲಾ ಮೃಗೀ ಸ್ಚಭಾವಗಳು. ಅಂತೆಯೇ ದುರಾಸೆ, ಸ್ವಾರ್ಥ, ಕೃತಘ್ನತೆ, ಹಿಂಸೆ-ಎಲ್ಲವೂ ಮೃಗತ್ವಗಳೇ. ಒಂದು ಮಾತಿನಲ್ಲಿ ಹೇಳುವುದಾದರೆ ನನ್ನದು ನನ್ನದೇ. ನಿನ್ನದೂ ನನ್ನದೇ ಎನ್ನುವುದು ಮೃಗತ್ವ.

ಮನುಷ್ಯತ್ವ: ತನ್ನ ಶಿಕ್ಷಣ, ಜ್ಞಾನ, ಸಂಸ್ಕಾರ ಹಾಗೂ ಬುದ್ದಿಮತ್ತೆಯಿಂದ, ಮನುಷ್ಯ, ಮೃಗತ್ವದಿಂದ ಮನುಷ್ಯತ್ವವನ್ನು ಏರಿ ಮಾನವನಾಗಿ ಬಾಳಬಲ್ಲ. ಆದುದರಿಂದಲೇ ತನಗೆ ಹಸಿವೆಯಾಗಿದೆ ಎಂದ ಮಾತ್ರಕ್ಕೆ ಉಪವಾಸವಿದ್ದರೂ ಸರಿ, ಆದರೆ ಇನ್ನೊಬ್ಬರ ತಟ್ಟೆಗೆ ಅವನು ಕೈ ಹಾಕಲಾರ. ಬಾಯಾರಿಕೆ ಆಗಿದೆ ಎಂದ ಮಾತ್ರಕ್ಕೆ ಚರಂಡಿಯ ನೀರನ್ನು ಕುಡಿಯಲಾರ. ಇನ್ನೊಬ್ಬರದನ್ನು ಆಶಿಸಲಾರ. ಪರಸ್ತ್ರೀಯರನ್ನು ಬಯಸಲಾರ. ದುಡಿದು ತಿನ್ನುವುದು, ಹಂಚಿ ತಿನ್ನುವುದು, ಜಾತಿ, ಮತ, ಭೇದ ಭಾವವಿಲ್ಲದೆ, ಎಲ್ಲರನ್ನೂ ಪ್ರೀತಿಸುವುದು, ಗೌರವಿಸುವುದು, ಮನುಷ್ಯತ್ವ. ಅಂತೆಯೇ, ದಯೆ, ಕೃತಜ್ಞತಾಭಾವ, ಇನ್ನೊಬ್ಬರ ಕುರಿತಾದ ಕರುಣೆ, ಕಾಳಜಿ, ಕನಿಕರ, ಸಂಕಷ್ಟದಲ್ಲಿರುವವರಿಗೆ ಸೇವೆ-ಸಹಾಯ, ಸಾಮಾಜಿಕ ಕಳಕಳಿ ಸಾಮರಸ್ಯ, ಸೌಹಾರ್ದ, ಪ್ರೀತಿ, ಪ್ರೇಮ, ಸ್ನೇಹ, ವಿಶ್ವಾಸ, ನಂಬಿಕೆ-ಎಲ್ಲವೂ, ಮುನುಷ್ಯತ್ವದ ನಾನಾ ರೂಪಗಳು. ನನ್ನದು ನನ್ನದೇ - ನಿನ್ನದು ನಿನ್ನದೇ ಈ ಭಾವ ಕೂಡ ಮನುಷ್ಯತ್ವ.

ದೈವತ್ವ: ಮನುಷ್ಯ ಮನಸ್ಸು ಮಾಡಿದರೆ, ಮನುಷ್ಯತ್ವವನ್ನು ಮೀರಿ ದೈವತ್ವವನ್ನು ಏರಬಲ್ಲ. ಉದಾಹರಣೆಗೆ ಸೇವೆ ಮಾನವೀಯ ಗುಣ ಸ್ವಭಾವವಾದರೆ, ನಿಸ್ವಾರ್ಥ ಸೇವೆ ದೈವೀ ಗುಣ. ಭಗವಂತ ನಮಗೆ ಏನೆಲ್ಲ ಕೊಟ್ಟ, ಎಷ್ಟೆಲ್ಲ ಕೊಟ್ಟ. ಆದರೆ, ಎಲ್ಲೂ, ಯಾರಲ್ಲೂ ತಾನು ಕೊಟ್ಟಿದ್ದು ಎಂದು ಹೇಳಿಕೊಂಡು ಬಂದಿಲ್ಲ. ಇದು ದೈವೀ ಗುಣ. ಕಷ್ಟದಲ್ಲಿರುವವರರ ಕಣ್ಣೀರನ್ನು ಒರೆಸುವುದು ಮನುಷ್ಯತ್ವವಾದರೆ, ಕಣ್ಣೀರೇ ಬಾರದಂತೆ ನೋಡಿಕೊಳ್ಳುವುದು ದೈವೀ ಗುಣ. ನಮಗೆ ಕೆಡುಕನ್ನು ಉಂಟುಮಾಡಿದವರಿಗೂ ಒಳಿತನ್ನೇ ಬಯಸುವುದು ದೈವತ್ವ. ತನ್ನನ್ನು ಶಿಲುಬೆಗೆ ಏರಿಸಿದ ಕಟುಕರಿಗೆ ಕೂಡ ‘ಹೇ ದೇವ ಇವರನ್ನು ಕ್ಷಮಿಸಿ ಬಿಡು’ ಎಂಬ ಏಸು ಕ್ರಿಸ್ತನ ಮಾತುಗಳು ದೈವತ್ವದ ಸಂಕೇತ. ಒಟ್ಟಿನಲ್ಲಿ ನಿನ್ನದು ನಿನ್ನದೇ, ನನ್ನದೂ ನಿನ್ನದೇ. ನಿನಗಿದ್ದರೆ ಎನಗಿದ್ದಂತೆ ಎಂಬ ಭಾವನೆ ದೈವತ್ವ.

ಮೃಗ ಸ್ವಭಾವಕ್ಕಿಂತಲೂ ಕೀಳಾಗಿ, ಕಠೋರವಾಗಿ ವರ್ತಿಸುವ ವರ್ತನೆಯೇ ರಾಕ್ಷಸೀ ಪ್ರವೃತ್ತಿ. ಇದನ್ನು ಪೈಶಾಚಿಕ ಗುಣ ಎನ್ನುತ್ತಾರೆ. ಇಂತಹ ಸ್ವಭಾವವನ್ನು ಪ್ರಕಟಿಸುವ, ಮನುಷ್ಯ ರೂಪದ, ಮೃಗ ಸ್ವಭಾವದ ಮನುಜರೂ ಇದ್ದಾರೆ. ಅಂತೆಯೇ ಮಂತ್ರಾಲಯ ಪ್ರಭು ಶ್ರೀಗುರು ರಾಘವೇಂದ್ರ ಸ್ವಾಮೀಜಿಗಳಂತಹ, ದೈವತ್ವವನ್ನು ಮೀರಿದ ದೇವ ಸಮಾನರೂ ಇದ್ದಾರೆ.

ಒಟ್ಟಿನಲ್ಲಿ ನಾವು ದೈವತ್ವವನ್ನು ಏರಲು ಸಾಧ್ಯವಾಗದಿರಬಹುದು. ಆದರೆ ಮೃಗತ್ವದ ಮಟ್ಟಕ್ಕೆ ಇಳಿಯದಿರುವುದೂ ಮುಖ್ಯವಾಗುತ್ತದೆ. ಮಾನವೀಯತೆಯನ್ನು ಮೆರೆಯುತ್ತಾ, ಪ್ರಾಮಾಣಿಕವಾಗಿ ಬದುಕುತ್ತಾ ಒಳ್ಳೆಯ ಮನುಷ್ಯರಾಗಿ ಬಾಳಿದರೆ ಅಷ್ಟೇ ಸಾಕು!

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net