

ಮಳೆಗಾಲದಲ್ಲಿ ಪ್ರವಾಸ ಹೋಗುವುದು ಹೆಚ್ಚಾಗಿದೆ. ಯುವ ಜನತೆಯಲ್ಲಿ ಸಾಹಸ ಮನೋಭಾವವೂ ಹೇರಳವಾಗಿದೆ. ಪ್ರಕೃತಿ ವೀಕ್ಷಣೆ ತಪ್ಪಲ್ಲ. ಆದರೆ ನಿಷೇಧಿತ ಪ್ರದೇಶಗಳಿಗೆ ತೆರಳುವುದು, ಪ್ರಾಣವನ್ನೂ ಲೆಕ್ಕಿಸದೆ ರಭಸವಾಗಿ ಹರಿಯುವ ನದಿಯಲ್ಲಿ ಈಜುವ ಸಾಹಸ ಮಾಡುವುದು ಹೀಗೆ ಜೀವಕ್ಕೆ ಅಪಾಯ ತಂದೊಡ್ಡುವ ಸನ್ನಿವೇಶಗಳಿಗೆ ಸಿಲುಕುವುದು ಸ್ವಯಂಕೃತ ಅಪರಾಧ.
ಇತ್ತೀಚೆಗೆ ಚಾರ್ವಡಿ ಘಾಟ್ ರಸ್ತೆ ಬದಿಯಲ್ಲಿದ್ದ ಕಾಡಾನೆಯ ಜೊತೆ ವ್ಯಕ್ತಿಯೊಬ್ಬರು ಸೆಲ್ಪಿ ತೆಗೆದುಕೊಳ್ಳುವ ಸುದ್ದಿ ಭಾರಿ ಚರ್ಚೆಗೆ ಗ್ರಾಸವಾಯಿತು. ಇಂತಹ ಸಾಹಸಗಳಿಂದ ಆಪತ್ತನ್ನು ಮೈ ಮೇಲೆ ಎಳೆದುಕೊಂಡು, ಹುಚ್ಚಾಟಕ್ಕೆ ಕೈ ಹಾಕುವುದು ಎಷ್ಟು ಸರಿ ಎಂಬ ಪ್ರಶ್ನೆ ಮೂಡುತ್ತದೆ. ಅಪಾಯದ ಬಗ್ಗೆ ಅರಿವಿರುವ ವಿದ್ಯಾವಂತರೇ ಭಂಡ ಧೈರ್ಯ ಪ್ರದರ್ಶಿಸಿ ತೊಂದರೆಗಳನ್ನು ಆಹ್ವಾನಿಸುವುದು ದುರದೃಷ್ಟಕರ ವಿಚಾರ. ಒಂದು ವೇಳೆ ಆನೆ ತುಳಿದು, ಗಂಭೀರ ಗಾಯ, ಜೀವಹಾನಿ ಮುಂತಾದ ದುರ್ಘಟನೆ ಸಂಭವಿಸಿದರೆ ಅದರ ಹೊಣೆ ಯಾರಿಗೆ? ಕುಟುಂಬದ ಗತಿ ಏನು? ಕಾಡಾನೆಯೊಂದಿಗೆ ಸೆಲ್ಪಿ ತೆಗೆದುಕೊಳ್ಳುವ ಆಸೆ ಬೇಕೇ? ಹೀಗೆ ನಾವೆಲ್ಲ ಚಿಂತಿಸಬೇಕಾದ ವಿಚಾರವಾಗಿದೆ. ಇದೊಂದು ಉದಾಹರಣೆಯಷ್ಟೇ. ಜಲಪಾತ ವೀಕ್ಷಣೆ, ಬೆಟ್ಟ ಹತ್ತುವುದು, ಕಾಡುಗಳಲ್ಲಿ ಚಾರಣ ಹೀಗೆ ಅನೇಕ ಪ್ರಕರಣಗಳು ನಡೆಯುತ್ತಲೇ ಇವೆ. ಅದರಲ್ಲೂ ಮಳೆಗಾಲದಲ್ಲಿ ಎಷ್ಟು ಜಾಗರೂಕರಾಗಿದ್ದರೂ ಕಡಿಮೆಯೇ ಎಂಬ ಸ್ಥಿತಿ. ಮುಂಗಾರು ಮಳೆ ಚುರುಕುಗೊಳ್ಳುತ್ತದೆ. ನದಿ ತೊರೆಗಳು ತುಂಬಿ ಹರಿಯಲು ಪ್ರಾರಂಭಿಸಿವೆ. ಜಲಪಾತಗಳು ಮೈದುಂಬಿ ಹರಿಯುತ್ತವೆ. ಮಳೆಯಿಂದಾಗಿ ಹಚ್ಚ ಹಸಿರಿನಿಂದ ಕೂಡಿ ರಮಣೀಯವಾಗಿ ಕಾಣುವ ಈ ಪ್ರಕೃತಿಯೂ ಒಮ್ಮೊಮ್ಮೆ ರೌದ್ರ ರೂಪವನ್ನೂ ತಾಳುತ್ತದೆ ಎನ್ನುವುದು ಅಷ್ಟೇ ಸತ್ಯ.
ಕೆಲ ದಶಕಗಳ ಹಿಂದಿನ ಸನ್ನಿವೇಶ. ಮಳೆಗಾಲ ಬಂದಾಗ ಮಕ್ಕಳು ಮಳೆಯಲ್ಲಿ ನೆನೆಯುವುದು, ನೀರಾಟವಾಡುವುದು, ದೋಣಿ ತಯಾರಿಸಿ ನೀರಲ್ಲಿ ತೇಲಿ ಬಿಡುವ ಆಟ ಆಡುತ್ತಿದ್ದರು. ಹೆತ್ತವರು ಮಕ್ಕಳನ್ನು ಮಳೆಗಾಲದ ಸಂದರ್ಭ ತೊರೆ, ಹಳ್ಳದ ಕಡೆ ಹೋಗದಿರುವಂತೆ ಗದರುತ್ತಿದ್ದರು ಮತ್ತು ಎಚ್ಚರಿಕೆ ವಹಿಸುತ್ತಿದ್ದರು. ಪ್ರವಾಸವೆಲ್ಲ ನಿಷಿದ್ಧವಾಗಿತ್ತು. ಆದರೆ ಈಗ ಸಾಕಷ್ಟು ಬದಲಾಗಿದೆ. ಮಳೆಗಾಲದಲ್ಲಿ ಪ್ರವಾಸ ಹೋಗುವುದು ಹೆಚ್ಚಾಗಿದೆ. ಪ್ರಕೃತಿ, ಗಿರಿ ಪ್ರದೇಶ, ಮೈದುಂಬಿ ಹರಿಯುವ ಜಲಪಾತಗಳ ವೀಕ್ಷಣೆ, ಕಡಲ ಬಳಿ ವಿಹಾರಗಳಿಗೆ ಹಾತೊರೆಯುತ್ತಾರೆ. ಯುವ ಜನತೆಯಲ್ಲಿ ಸಾಹಸ ಮನೋಭಾವವೂ ಹೇರಳವಾಗಿದೆ. ಪ್ರಕೃತಿ ವೀಕ್ಷಣೆ ತಪ್ಪಲ್ಲ. ಆದರೆ ನಿಷೇಧಿತ ಪ್ರದೇಶಗಳಿಗೆ ತೆರಳುವುದು, ಚಾರಣದಲ್ಲಿ ಸಾಹಸ ಪ್ರದರ್ಶಿಸುವುದು, ಪ್ರಾಣವನ್ನೂ ಲೆಕ್ಕಿಸದೆ ರಭಸವಾಗಿ ಹರಿಯುವ ನದಿಯಲ್ಲಿ ಈಜುವ ಸಾಹಸ ಮಾಡುವುದು ಹೀಗೆ ಜೀವಕ್ಕೆ ಅಪಾಯ ತಂದೊಡ್ಡುವ ಸನ್ನಿವೇಶಗಳಿಗೆ ಸಿಲುಕುವುದು ಸ್ವಯಂಕೃತ ಅಪರಾಧ ಎನ್ನಬಹುದು. ಅಪಾಯಕ್ಕೆ ಆಹ್ವಾನ ನೀಡುವ ಹುಚ್ಚಾಟಗಳಿಂದ ಆದಷ್ಟು ದೂರ ಉಳಿಯಬೇಕು.
ವಿಪರೀತ ಮಳೆಯಿಂದಾಗಿ ಕೆಲವು ಕಡೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗುತ್ತದೆ. ತಗ್ಗು ಪ್ರದೇಶಗಳು ಮುಳುಗಡೆಯಾಗುವುದು, ಕಡಲ್ಕೊರೆತ, ಸಿಡಿಲು ಬಡಿತ, ಭೂ ಕುಸಿತ ಹೀಗೆ ಅನೇಕ ರೀತಿಯಲ್ಲಿ ಜನಜೀವನಕ್ಕೆ ಕುತ್ತು ಉಂಟಾಗುತ್ತದೆ. ಇಂತಹ ಪ್ರಾಕೃತಿಕ ವಿಕೋಪಗಳಿಂದ ಆಗುವ ಅಪಾಯ, ಹಾನಿಗಳು ಒಂದೆಡೆಯಾದರೆ, ನಾವೇ ಆಪತ್ತನ್ನು ಆಹ್ವಾನಿಸುವುದು ಮತ್ತೊಂದು ಸಂಗತಿ.
ಕಳೆದ ವರ್ಷವೂ ಮಳೆಗಾಲದಲ್ಲಿ ಅನೇಕರು ಹುಚ್ಚು ಸಾಹಸ ಮಾಡಲು ಹೋಗಿ ಪ್ರಾಣ ಕಳೆದುಕೊಂಡ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾಗಿತ್ತು. ‘ಜಲಪಾತಗಳ ತೀರ ಸನಿಹ ಹೋಗಬೇಡಿ’, ‘ನೀರಿನಲ್ಲಿ ಈಜಬೇಡಿ’, ‘ಇಳಿಜಾರು ಪ್ರದೇಶದಲ್ಲಿ ಎಚ್ಚರದಿಂದಿರಿ’, ‘ಕಣಿವೆಗಳ ಬಳಿ ಇಳಿಯಬೇಡಿ’, ‘ದೂರದಿಂದಲೇ ವೀಕ್ಷಿಸಿ’ ಎಂಬ ಎಚ್ಚರಿಕೆಯ ಫಲಕಗಳಿದ್ದರೂ ಅದನ್ನು ನೋಡಿಯೂ ನೋಡದಂತೆ ಯಾವುದೇ ಮುನ್ನೆಚ್ಚರಿಕೆ ವಹಿಸದೆ ಮೋಜಿಗಾಗಿ, ಸೆಲ್ಪಿಗಾಗಿ ಜೀವವನ್ನೇ ಕಳೆದುಕೊಳ್ಳುವ ಯುವ ಜನತೆಗೆ ಜೀವದ ಮೌಲ್ಯದ ಬಗ್ಗೆ ಅರಿವು ಮೂಡಿಸುವುದು ಅನಿವಾರ್ಯವೂ, ಅಗತ್ಯವೂ ಆಗಿದೆ.
ಕಾಲೇಜಿಗೆ, ದೇವಸ್ಥಾನಕ್ಕೋ, ಇನ್ನೆಲ್ಲಿಗೋ ಹೋಗುತ್ತೇನೆ ಎಂದು ಮನೆಯಲ್ಲಿ ಸುಳ್ಳು ಹೇಳಿ ಸ್ನೇಹಿತರ ಜೊತೆ ಸೇರಿ ನದಿಯಲ್ಲಿ ಈಜುವುದಕ್ಕೆ, ಜಲಪಾತಗಳಲ್ಲಿ ಸ್ನಾನ ಮಾಡುವುದಕ್ಕೆ ತೆರಳಿ ಸಾವನ್ನಪ್ಪಿದ ಅನೇಕ ನಿದರ್ಶನಗಳು ನಮ್ಮ ಕಣ್ಣ ಮುಂದಿವೆ. ಇನ್ನೂ ಬಾಳಿ ಬದುಕಬೇಕಾದ ಮಕ್ಕಳು, ಯುವಜನತೆ ಇಂತಹ ದುರಂತಗಳಿಗೆ ಬಲಿಯಾಗುವುದು ನಿಜಕ್ಕೂ ದುರದೃಷ್ಟಕರ. ಅಪರೂಪದ ಫೋಟೋ ಕ್ಲಿಕ್ಕಿಸಬೇಕು, ಯಾರೂ ಮಾಡದ ಸಾಹಸ ಮಾಡಬೇಕು ಎಂಬ ಸಂಗತಿಗಳೇ ಅಪಾಯಕಾರಿ ಸ್ಥಳಗಳಲ್ಲಿ ಸಾಹಸ ಮಾಡಲು ಪ್ರೇರಣೆ ನೀಡುತ್ತವೆ. ಈ ಬಗ್ಗೆ, ಸಾಹಸ ಮಾಡಿ ಸಾವನ್ನು ಆಹ್ವಾನಿಸಬೇಡಿ ಎಂದು ಸರ್ಕಾರ ಹಾಗೂ ಸರ್ಕಾರೇತರ ಸಂಘಸಂಸ್ಥೆಗಳು ಪ್ರತಿ ವರ್ಷವೂ ಮಾಧ್ಯಮಗಳಲ್ಲಿ ಜಾಗೃತಿ ಮೂಡಿಸಿದರೂ, ಎಚ್ಚರಿಕೆ ಫಲಕಗಳನ್ನು ಕಡೆಗಣಿಸುವುದು ಹಾಗೂ ಗೊತ್ತಿದ್ದೂ ತಪ್ಪು ಮಾಡುವುದು ಖೇದಕರ.
ಇನ್ನು ಮಳೆಗಾಲದಲ್ಲಿ ವಾಹನ ಚಾಲನೆಯ ಬಗ್ಗೆ ಹೆಚ್ಚು ಎಚ್ಚರಿಕೆ ವಹಿಸಬೇಕು. ಮಳೆಯಿಂದ ರಸ್ತೆಗಳು ಜಾರುವುದು, ಹೊಂಡ-ಗುಂಡಿಗಳು ನೀರಿನಿಂದ ತುಂಬುವುದರಿಂದ ಸ್ಕಿಡ್ ಆಗುವುದು, ನಿಯಂತ್ರಣ ತಪ್ಪುವುದು ಹೆಚ್ಚು. ಜೊತೆಗೆ ರಸ್ತೆ ಮತ್ತು ರಸ್ತೆಯಲ್ಲಿ ಬರುವ ವಾಹನಗಳು ಸರಿಯಾಗಿ ಕಾಣದೇ ಇರುವುದು ಹೀಗೆ ಅನೇಕ ಕಾರಣಗಳಿಂದ ಅಪಘಾತಗಳು ಸಂಭವಿಸುತ್ತವೆ. ಯುವ ಜನತೆ ವೇಗವಾಗಿ ಬೈಕ್ ಚಾಲನೆ ಮಾಡುವುದು ಮಾತ್ರವಲ್ಲದೆ ವ್ಹೀಲಿಂಗ್, ಸ್ಟಂಟ್ನಂತಹ ಅಪಾಯಕಾರಿ ಸಾಹಸಕ್ಕೆ ತೊಡಗಿಸಿಕೊಳ್ಳುವುದೂ ಅಪಾಯಕ್ಕೆ ಆಹ್ವಾನ ನೀಡಿದಂತಾಗುತ್ತದೆ.
ಮಳೆಗಾಲದಲ್ಲಿ ರಸ್ತೆ ಅಪಘಾತಗಳ ಬಗ್ಗೆ ಅರಿತು ನಿಧಾನವಾಗಿ ವಾಹನ ಚಾಲನೆ ಮಾಡುವುದರ ಜೊತೆಗೆ ವಾಹನ ಚಾಲನೆ ಹಾಗೂ ರಸ್ತೆ ನಿಯಮಗಳನ್ನು ಪಾಲಿಸುವುದು ಜವಾಬ್ದಾರಿಯುತ ಚಾಲಕನ ಕರ್ತವ್ಯವಾಗಿದೆ. ಒಂದು ವಾಹನದಿಂದ ಮತ್ತೊಂದು ವಾಹನದ ನಡುವೆ ಅಂತರ ಕಾಪಾಡುವುದು, ವಾಹನಗಳು ಸುಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳುವುದು, ಸುರಕ್ಷತಾ ಕ್ರಮಗಳನ್ನು ಪಾಲಿಸುವುದು ಅಗತ್ಯ. ಕಚೇರಿ, ನಿಗದಿತ ಸ್ಥಳಗಳಿಗೆ ಮನೆಯಿಂದ ತುಸು ಮುಂಚಿತವಾಗಿಯೇ ಹೊರಡುವುದು, ಹೆಲ್ಮೆಟ್ ಮತ್ತಿತರ ಸುರಕ್ಷಾ ಕ್ರಮಗಳನ್ನು ಅನುಸರಿಸಿಯೇ ತಾಳ್ಮೆಯಿಂದ ನಿಧಾನವಾಗಿ ವಾಹನ ಚಲಾಯಿಸುವುದನ್ನು ರೂಢಿಸಿಕೊಳ್ಳಬೇಕು. ಇದು ಮಳೆಗಾಲಕ್ಕೆ ಮಾತ್ರವಲ್ಲ, ಎಲ್ಲ ಕಾಲಕ್ಕೂ ಅನ್ವಯವಾಗುವಂಥದ್ದು. ಅವಸರದ ಕಾರಣದಿಂದ, ಮದ್ಯಪಾನ ಮಾಡಿ, ಬೇಜವಾಬ್ದಾರಿಯಿಂದ ವಾಹನ ಚಲಾಯಿಸುವುದು ಸದಾ ನೆತ್ತಿಯ ಮೇಲೆ ಅಪಾಯದ ತೂಗುಗತ್ತಿ ಇದ್ದಂತೆ.
ಕೆಲವು ನಗರ ಪ್ರದೇಶಗಳಲ್ಲಿ ರಸ್ತೆಯಲ್ಲೇ ಮಳೆ ನೀರು ಚರಂಡಿಯ ರೀತಿ ಹರಿಯುವುದರಿಂದ ಮ್ಯಾನ್ಹೋಲ್, ಮತ್ತಿತರ ಗುಂಡಿಗಳ ಬಗ್ಗೆಯೂ ಎಚ್ಚರವಹಿಸಬೇಕು. ಗ್ರಾಮೀಣ ಪ್ರದೇಶಗಳಲ್ಲಿ ತುಂಬಿ ಹರಿಯುವ ನದಿಯನ್ನು ದಾಟುವಾಗ, ತೂಗು ಸೇತುವೆ, ಕಾಲು ಸಂಕಗಳನ್ನು ದಾಟುವಾಗ ಹೆಚ್ಚು ಎಚ್ಚರವಾಗಿರಬೇಕು. ಶಾಲಾ ಮಕ್ಕಳ ಬಗ್ಗೆ ವಿಶೇಷವಾದ ಕಾಳಜಿ ವಹಿಸಬೇಕಾಗುತ್ತದೆ. ಈ ಹಿಂದೆ ತುಂಬಿ ಹರಿಯುತ್ತಿದ್ದ ನದಿಯಲ್ಲಿ ಒಮ್ಮೆಲೇ ಪ್ರವಾಹ ಬಂದ ಕಾರಣ ಬಸ್ಸೊಂದು ಕೊಚ್ಚಿ ಹೋಗಿ ಅನೇಕರು ಮೃತರಾದ ಸುದ್ದಿ ಬೇಸರವನ್ನುಂಟು ಮಾಡಿತು. ಪ್ರತಿಯೊಂದು ಜೀವಹಾನಿಯೂ ಮನಸ್ಸಿಗೆ ದುಃಖವನ್ನುಂಟು ಮಾಡುತ್ತವೆ.
ಇನ್ನು ಮಳೆಗಾಲ ಬಂತೆಂದರೆ ಅಲ್ಲಲ್ಲಿ ಪ್ರಾಕೃತಿಕ ವಿಕೋಪ, ಗುಡ್ಡ ಕುಸಿತ, ಮನೆ ಕುಸಿತ ಮುಂತಾದ ಅವಘಡಗಳು ಘಟಿಸುವುದು ಹೆಚ್ಚು. ಈ ಬಗ್ಗೆಯೂ ನಾವೆಲ್ಲ ಸಾಕಷ್ಟು ಎಚ್ಚರ ವಹಿಸಬೇಕು. ಕಳೆದ ಕೆಲವು ವರ್ಷಗಳಿಂದ ಈಚೆಗೆ ಮಳೆಗಾಲದಲ್ಲಿ ಅತಿ ಹೆಚ್ಚು ಗುಡ್ಡ ಕುಸಿತ ಸಂಭವಿಸಿರುವುದನ್ನು ನಾವೆಲ್ಲ ತಿಳಿದಿದ್ದೇವೆ. ಇದರ ಜೊತೆಗೆ ವಿದ್ಯುತ್ ತಂತಿ ತುಂಡಾಗಿ ಬೀಳುವುದು, ಶಾರ್ಟ್ ಸರ್ಕ್ಯೂಟ್ ಅವಘಡ, ಮರ ಬಿದ್ದು ಮನೆ, ವಾಹನಗಳಿಗೆ ಹಾನಿ ಮುಂತಾದ ಸಮಸ್ಯೆಗಳಿಂದ ಆಸ್ತಿ-ಪಾಸ್ತಿ ಮಾತ್ರವಲ್ಲದೆ ಜೀವಹಾನಿಯೂ ಸಂಭವಿಸಿರುವುದನ್ನು ಕಂಡಿದ್ದೇವೆ. ಇಂತಹ ದುರ್ಘಟನೆಗಳು ಸಂಭವಿಸದೇ ಇರಲಿ, ಯಾವೊಂದು ತೊಂದರೆಗಳು ಆಗದೇ ಇರಲಿ ಎಂದು ನಾವೆಲ್ಲ ಪ್ರಾರ್ಥಿಸೋಣ.
ಈ ಮಳೆಗಾಲದಲ್ಲಿ ಗಾಳಿ ಮಳೆಯನ್ನು ಲೆಕ್ಕಿಸದೆ ತುಂಡಾಗಿ ಬಿದ್ದ ಕಂಬ, ವಿದ್ಯುತ್ ತಂತಿಗಳನ್ನು ಸರಿಪಡಿಸಿ ಜನರಿಗೆ ವಿದ್ಯುತ್ ಸಂಪರ್ಕ ಒದಗಿಸಲು ಶ್ರಮಿಸುವವರು ಪವರ್ ಮ್ಯಾನ್ಗಳಾದ ಲೈನ್ವ್ಯಾನ್ಗಳು. ಅವರ ಈ ಸೇವಾಕಾರ್ಯವನ್ನು ನಾವೆಲ್ಲ ಗೌರವಿಸಿ ಅಭಿನಂದಿಸಲೇಬೇಕು. ಅವರಂತೆಯೇ ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಅಗ್ನಿಶಾಮಕ ದಳ ಹೀಗೆ ವಿವಿಧ ಇಲಾಖೆಗಳವರೂ ಜನರಿಗೆ ಯಾವೊಂದು ರೀತಿಯ ತೊಂದರೆಯಾಗದಂತೆ ಕಾರ್ಯನಿರ್ವಹಿಸುತ್ತಾರೆ. ಅವರಿಗೆಲ್ಲ ಕೃತಜ್ಞತೆಯನ್ನು ತಿಳಿಸಲೇಬೇಕು.
ಮಳೆ ಎಷ್ಟು ಖುಷಿ ಕೊಡುತ್ತದೋ ಅಷ್ಟೇ ನೋವು ಮಳೆಯಿಂದಾಗಿ ಆಗುವ ಹಾನಿ, ಅವಘಡ ಸಂಭವಿಸಿದಾಗ ಆಗುತ್ತದೆ. ಹಾಗಾಗಿ ಅವಘಡ, ಪಾಕೃತಿಕ ವಿಕೋಪ ಹೀಗೆ ಯಾವುದೇ ರೀತಿಯಲ್ಲಿ ಜನರಿಗೆ ಸಮಸ್ಯೆಗಳು ಉಂಟಾದಾಗ ನೆರವಿಗೆ ಧಾವಿಸಿ ಅಪಾಯವನ್ನು ತಡೆಗಟ್ಟುವ ಹಾಗೂ ಸಂತ್ರಸ್ತರಿಗೆ ಸಹಾಯ ನೀಡಿ, ಧೈರ್ಯ ತುಂಬುವ ನಿಟ್ಟಿನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಹಾಗೂ ಜನಜಾಗೃತಿಯ ಅಡಿಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ಶೌರ್ಯ ವಿಪತ್ತು ನಿರ್ವಹಣಾ ಸಮಿತಿಯನ್ನು 2017ರಲ್ಲಿ ಆರಂಭಿಸಿದ್ದೇವೆ. ಈ ಶೌರ್ಯ ತಂಡದಲ್ಲಿ ಸಹಾಯ ಹಾಗೂ ಸಮಾಜಸೇವೆ ಮಾಡಲು ಆಸಕ್ತಿ ಇರುವ ಪುರುಷರು ಹಾಗೂ ಮಹಿಳೆಯರು ಒಂದು ತಂಡವಾಗಿ ಕಾರ್ಯನಿರ್ವಹಿಸುತ್ತ ವಿಪತ್ತು ಪರಿಹಾರ, ವಿಪತ್ತು ಮುನ್ನೆಚ್ಚರಿಕೆ, ಸಮಾಜಸೇವೆ, ವೈಯಕ್ತಿಕ ತುರ್ತು ಸೇವೆಗಳನ್ನು ನೀಡುತ್ತಾರೆ.
ಈ ಸ್ವಯಂಸೇವಕರಿಗೆ ಕೇಂದ್ರ ಸರ್ಕಾರದ ಎನ್.ಡಿ.ಆರ್.ಡಿ.ಎಫ್., ರಾಜ್ಯ ಸರ್ಕಾರದ ಎಸ್.ಡಿ.ಆರ್.ಎಫ್, ಅಗ್ನಿಶಾಮಕ ದಳ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಗೃಹರಕ್ಷಕ ದಳದಿಂದ ಸೂಕ್ತ ತರಬೇತಿಯನ್ನು ಒದಗಿಸಿದ್ದು, ವಿಪತ್ತು ಕಾರ್ಯಾಚರಣೆಯನ್ನು ನಿರ್ವಹಿಸಲು ಬೇಕಾಗುವ ಲೈಫ್ಜಾಕೆಟ್, ಲ್ಯಾಡರ್, ಸ್ಟ್ರೆಚರ್, ಸೇಫ್ಟಿ ಹೆಲ್ಮೆಟ್, ಪ್ರಥಮ ಚಿಕಿತ್ಸಾ ಪೆಟ್ಟಿಗೆ ಇತ್ಯಾದಿ ಎಲ್ಲ ಅಗತ್ಯ ಪರಿಕರಗಳನ್ನು ಹೊಂದಿದ್ದಾರೆ. ಅಪಘಾತ, ಅಗ್ನಿ ಅವಘಡದ ಸಂದರ್ಭದಲ್ಲಿ ಹಾಗೂ ಮಳೆಗಾಲದ ಸಮಯದಲ್ಲಿ ಜನರ ರಕ್ಷಣೆ, ರಸ್ತೆಗೆ ಬಿದ್ದ ಮರಗಳ ತೆರವು, ಕಿಂಡಿ ಅಣ್ಣೆಕಟ್ಟು ಸ್ವಚ್ಛತೆ, ನೀರಲ್ಲಿ ಕೊಚ್ಚಿ ಹೋದವರ ಹುಡುಕಾಟ, ಮನೆ ದುರಸ್ತಿ ಕಾರ್ಯ, ಜಾನುವಾರುಗಳ ರಕ್ಷಣೆ, ರಸ್ತೆ ರಿಪೇರಿ, ಶ್ರಮದಾನ ಹೀಗೆ ಅನೇಕ ರೀತಿಯಲ್ಲಿ ಶೌರ್ಯ ತಂಡಗಳು ಸಹಾಯಹಸ್ತವನ್ನು ಚಾಚಿ ಸಂಕಷ್ಟ ಸಮಯದಲ್ಲಿ ನೆರವಾಗುತ್ತವೆ. ಕಳೆದ ಮಳೆಗಾಲದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪರಿಹಾರ ಕಾರ್ಯಗಳನ್ನು ಕೈಗೊಂಡಿದ್ದು ಅನೇಕ ಜನರ ಪ್ರಾಣವನ್ನು ರಕ್ಷಿಸಿದ್ದಾರೆ. ಇವರ ಈ ಕಾರ್ಯವು ಸಾಕಷ್ಟು ಜನಮೆಚ್ಚುಗೆಗೆ ಪಾತ್ರವಾಗಿದೆ. ಶ್ರೀಕ್ಷೇತ್ರದ ಶೌರ್ಯ ವಿಪತ್ತು ನಿರ್ವಹಣಾ ತಂಡಗಳು ಕರ್ನಾಟಕ ರಾಜ್ಯದ 90 ತಾಲೂಕುಗಳಲ್ಲಿ ಸಕ್ರಿಯವಾಗಿದ್ದು, ಸುಮಾರು 1500ಕ್ಕೂ ಹೆಚ್ಚು ಸ್ವಯಂಸೇವಕರು ಕಾರ್ಯನಿರ್ವಹಿಸುತ್ತಿದ್ದಾರೆ. ಇದುವರೆಗೂ ಪ್ರಾಕೃತಿಕ ಹಾಗೂ ಇನ್ನಿತರ ಅವಘಡಗಳ ಸಮಯದಲ್ಲಿ ಸರ್ಕಾರದ ಇಲಾಖೆಗಳ ಜೊತೆ ಸೇರಿ 1,01,000ಕ್ಕೂ ಹೆಚ್ಚು ವಿಪತ್ತು ಸೇವೆಗಳನ್ನು ನೀಡಿದೆ.
ಈ ಬಾರಿಯ ಮಳೆಗಾಲದಲ್ಲೂ ನಮ್ಮ ಕ್ಷೇತ್ರದ ಶೌರ್ಯ ತಂಡಗಳು ಯಾವುದೇ ರೀತಿಯ ವಿಪತ್ತುಗಳನ್ನು ನಿರ್ವಹಿಸಲು, ಜನರಿಗೆ ಸೂಕ್ತ ಸಹಾಯ, ನೆರವು ಒದಗಿಸಲು ಸನ್ನದ್ಧವಾಗಿವೆ. ಜೊತೆಗೆ ನಾವು ಪ್ರತಿಯೊಬ್ಬರೂ ನಿರ್ಲಕ್ಷ್ಯ ತೋರದೆ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಎಚ್ಚರದಿಂದ ಇರೋಣ. ಯಾವುದೇ ರೀತಿಯ ವಿಪತ್ತುಗಳು ಬಾರದಿರಲಿ. ಅನಾಹುತ, ಪ್ರಾಕೃತಿಕ ವಿಕೋಪ ಸಂಭವಿಸದಿರಲಿ. ಎಲ್ಲರೂ ನೆಮ್ಮದಿಯಿಂದ ಇದ್ದು, ಮಳೆಗಾಲವು ಎಲ್ಲರಲ್ಲಿ ಹರ್ಷ, ಸಮೃದ್ಧಿಯನ್ನು ತರಲಿ ಎಂಬುದೇ ಆಶಯ.
(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ವಧಿಕಾರಿಗಳು)