

ಚಂಪಾರಣ್ಯದಲ್ಲಿ ಒಂದು ವಿಚಿತ್ರವಾದ ಪಕ್ಷಿಯಿತ್ತು. ಅದಕ್ಕೆ ಎರಡು ಮುಖ- ಬಾಯಿ. ದೇಹ ಮಾತ್ರ ಒಂದೇ. ಎರಡು ಕಣ್ಣುಗಳು ಅಕ್ಕಪಕ್ಕದಲ್ಲಿಯೇ ಇದ್ದವು. ಆದ್ದರಿಂದ ಹಾರಲು ಸಮಸ್ಯೆಯಿರಲಿಲ್ಲ. ಆ ಹಕ್ಕಿಯ ತಾಯಿ ಹೇಳಿತ್ತು; ‘ನೀವು ಕೂಡಿ ಬಾಳಿದರೆ ಬದುಕು. ಒಡಕು ಮೂಡಿದರೆ ಸಾವು’ ಎಂದು ಎಚ್ಚರಿಸಿತ್ತು. ಸಯಾಮಿ-ಅವಳಿ ಮನುಷ್ಯರ ಥರ ಸಾಗಬೇಕಾಗಿತ್ತು ಅದರ ಜೀವನವ್ಯಾಪಾರ. ಒಂದು ವಿಶಾಲ ಮರ. ಅದರ ಮೇಲೆ ಅದರ ಗೂಡು. ಅಲ್ಲಿ ಅದರ ವಾಸ. ಹೀಗಿರುವಾಗ ಹುಟ್ಟುತ್ತ ಹುಟ್ಟುತ್ತ ಅಣ್ಣ ತಮ್ಮಾದಿ; ಬೆಳೆಯುತ್ತ ಬೆಳೆಯುತ್ತ ದಾಯಾದಿ ಎಂಬಂತೆ ಒಂದು ಘಟನೆ ನಡೆದು ಹೋಯಿತು. ಒಂದುದಿನ ಬಲದ ಬಾಯಿಗೆ ಸ್ವಾದಿಷ್ಟವಾದ ಹಣ್ಣೊಂದು ಸಿಕ್ಕಿತು. ಅದು ಸಂತೋಷದಿಂದ ಅದನ್ನು ತಿನ್ನತೊಡಗಿತು.
ತನಗೂ ಕೊಡು ಎಂದು ಎಡದ ಮುಖ ಕೇಳಿಕೊಂಡಿತು. ತಿನ್ನುವ ಆಸೆಯಿಂದಾಗಿ ಅದರ ಬಾಯಲ್ಲಿ ನೀರೂರಿ ಬಂದಿತ್ತು. ಆದರೆ ಬಲದ ಮುಖ ಕೇಳದವರಂತೆ ತಿನ್ನುತ್ತಲೇ ಇತ್ತು. ಎಡದ ಬಾಯಿಗೆ ಇನಿತೂ ಕೊಡಲಿಲ್ಲ. ಇಡೀ ಹಣ್ಣನ್ನೂ ತಾನೇ ತಿಂದು ಮುಗಿಸಿತು. ಅಲ್ಲಿಂದಲೇ ಆರಂಭವಾಯಿತು ಹಗೆತನ. ಕೆಲವು ದಿನಗಳು ಕಳೆದ ಮೇಲೆ ಎಡದ ಮುಖಕ್ಕೆ ಒಂದು ಕೆಂಪಾದ ಸುಂದರವಾದ ಹಣ್ಣು ಕಂಡಿತು. ಕೂಡಲೇ ಅದನ್ನು ತಿನ್ನಲು ಅದು ಅತ್ತ ಸರಿಯಿತು. ಇನ್ನೇನು ಬಾಯಿ ಹಾಕಬೇಕು ಅನ್ನುವಾಗ ಮೇಲಿಂದ ಹಾರುತ್ತ ಬಂದ ಕಾಗೆಯೊಂದು ಎಚ್ಚರಿಸಿತು; ‘ಅದು ವಿಷದ ಹಣ್ಣು ತಿನ್ನಬೇಡ’. ಬಲದ ಮುಖವೂ ಬೇಡಿಕೊಂಡಿತು; ‘ದಯವಿಟ್ಟು ತಿನ್ನಬೇಡ. ಸತ್ತುಹೋಗುತ್ತೇವೆ. ನಮ್ಮಿಬ್ಬರ ದೇಹವೂ ಒಂದೇ’ ಎಂದು.
ಈಗ ಎಡಬಾಯಿಗೆ ಬಲದಮುಖದ ಮೇಲೆ ಪ್ರತೀಕಾರ ತೀರಿಸಿಕೊಳ್ಳುವ ಈರ್ಷ್ಯೆ ಜಾಗೃತವಾಯಿತು. ಬಲಬಾಯಿಗೆ ಬುದ್ಧಿ ಕಲಿಸಿಯೇ ಸಿದ್ಧ ಎಂದು ಅದು ಕೆಂಪಾದ ಆ ಸುಂದರ ಹಣ್ಣನ್ನು ತಿಂದೇಬಿಟ್ಟಿತು. ಸರಿ, ಬಲದ ಬಾಯಿ ತಿನ್ನಲಿ, ಎಡದಬಾಯಿ ತಿನ್ನಲಿ, ಸೇರುವುದು ಒಂದೇ ಹೊಟ್ಟೆಯನ್ನೇ ಅಲ್ಲವೆ? ವಿಷದ ಹಣ್ಣು ತಿಂದ ಕೂಡಲೆ ಆ ಹಕ್ಕಿ ಸತ್ತುಬಿತ್ತು.
ಈಗ ಬಲಮುಖವೂ ಜೀವಂತವಾಗಿಲ್ಲ; ಎಡಮುಖವೂ ಜೀವಂತವಾಗಿಲ್ಲ. ಬಲಮುಖದ ಸ್ವಾರ್ಥ ಮತ್ತು ಎಡಮುಖದ ಈರ್ಷ್ಯೆ ಹಕ್ಕಿಯನ್ನೇ ಬಲಿತೆಗೆದುಕೊಂಡಿತ್ತು. ಹಕ್ಕಿ ತಾಯಿ ಹೇಳಿದ್ದನ್ನು ಪಾಲಿಸಲಿಲ್ಲ; ಕಾಗೆ ಹೇಳಿದ್ದನ್ನೂ ಕೇಳಲಿಲ್ಲ. ಈ ಕಥೆ ಎಲ್ಲ ಕಾಲಕ್ಕೂ ಎಲ್ಲ ಕಡೆಗೂ ಅನ್ವಯಿಸುತ್ತದೆ. ‘ಹಣ್ಣು ಹಂಚಿ ತಿನ್ನು’ ಎಂಬ ಗಾದೆಯಿದೆ. ವೇದಕ್ಕೆ ಸಮಾನ ಗಾದೆ. ಬಾಧೆ ತರುವುದು ತಗಾದೆ. ಊರಿನಲ್ಲಿ ಒಬ್ಬರು ಸುಖವಾಗಿದ್ದರೆ ಅಲ್ಲಿ ಸುಖವೂ ಇಲ್ಲ, ಶಾಂತಿಯೂ ಇಲ್ಲ. ದೇಶದಲ್ಲಿ ಕ್ಲೇಶವಿದ್ದರೆ ದೇಶವಾಸಿಗಳು ಕುಶಲವಾಗಿರುವುದೆಂತು? ಅದಕ್ಕೇ ‘ಸಹನಾವವತು | ಸಹನೌ ಭುನಕ್ತು | ಸಹವೀರ್ಯಂ ಕರವಾವಹೈ | ತೇಜಸ್ವನಿನಾವಧೀತಮಸ್ತು | ಮಾ ವಿದ್ವಿಷಾವಹೈ |’ ಎಂದು ನಮ್ಮ ಸಂಸ್ಕೃತಿ ಕರೆಗೊಡುತ್ತದೆ. ಮನುಜರಿಗೆ ಹಿತವಲ್ಲ ಸ್ವಾರ್ಥವೂ ಈರ್ಷ್ಯೆಯೂ| ಮನುಕುಲವಿನಾಶಕ್ಕೆ ಕಾರಣವದಕ್ಕು || ಅನುಭವದ ಹಿತನುಡಿಯ ನಾಲಿಸಿದರೊಳಿತಿಹುದು | ಜನಜನದಿ ಒಲವಿರಲಿ-ಬೇಡಹಗೆ- ಸೊಕ್ಕು. ||
ಈ ಚೌಪದಿಯು ಹೇಳುವಂತೆ ಪ್ರತೀಕಾರ ಭಾವನೆ, ದ್ವೇಷ-ಮತ್ಸರಗಳು ತನ್ನನ್ನು ಮಾತ್ರವಲ್ಲದೆ ಎಲ್ಲರನ್ನೂ ಬಲಿತೆಗೆದುಕೊಳ್ಳುತ್ತದೆ. ಆದ್ದರಿಂದ ಸ್ವಾರ್ಥ, ಈರ್ಷ್ಯೆಗೆ ಬಲಿಯಾಗದದಿರುವುದು ಒಳ್ಳೆಯದು.
(ಲೇಖಕರು ಸಾಹಿತಿ)
(ಪ್ರತಿಕ್ರಿಯಿಸಿ: manollasavv@gmail.com)