ಸಾಹಿತ್ಯ ಸಮ್ಮೇಳನ, ಶಾಲಾಪಠ್ಯದಲ್ಲಿ ಯಕ್ಷಗಾನಕ್ಕೆ ಮನ್ನಣೆ ಸಿಗಲಿ

F
Published on

ಕನ್ನಡ ನಾಡು, ಸಂಸ್ಕೃತಿ, ಸಾಹಿತ್ಯದ ಅವಿಭಾಜ್ಯ ಅಂಗ ಯಕ್ಷಗಾನ. ಇಂತಹ ಯಕ್ಷಗಾನ ಕಲೆಯ ಹಿರಿಮೆ ಸಾರುವ ಯಾವ ಅಂಶವೂ ಸಾಹಿತ್ಯ ವಲಯದಲ್ಲಿ ಚರ್ಚೆಗೆ ಬರುವುದಿಲ್ಲ. ಸಾವಿರಾರು ಕೃತಿಗಳನ್ನು ಹೊಂದಿರುವ ಯಕ್ಷಗಾನ ಪ್ರಸಂಗ ಸಾಹಿತ್ಯದ ಕುರಿತು ಸಾಹಿತ್ಯ ಸಮ್ಮೇಳನದ ಗೋಷ್ಠಿಯಲ್ಲಿ ಚರ್ಚೆಯಾಗಬೇಕು. ಅಲ್ಲದೆ, ಶಾಲೆ- ಕಾಲೇಜಿನ ಪಾಠದಲ್ಲೂ ಯಕ್ಷಗಾನವನ್ನು ಒಂದು ಅಧ್ಯಾಯವಾಗಿ ಸೇರ್ಪಡೆ ಮಾಡಬೇಕು. ಈ ಕುರಿತು ಶಿಕ್ಷಣ ಇಲಾಖೆ ಕಾರ್ಯಪ್ರವೃತ್ತವಾಗಬೇಕು. ಇದು, ‘ವಿಜಯವಾಣಿ’ ಹಾಗೂ ‘ದಿಗ್ವಿಜಯ’ ಸುದ್ದಿವಾಹಿನಿ ಆಯೋಜಿಸಿದ್ದ ಕ್ಲಬ್ ಹೌಸ್ ಸಂವಾದದಲ್ಲಿ ಕೇಳಿಬಂದ ಆಗ್ರಹ. ಕನ್ನಡ ಸಾಹಿತ್ಯ ಹಾಗೂ ಯಕ್ಷಗಾನ ಸಮಾನಾಂತರವಾಗಿ ನಡೆದುಬಂದಿದ್ದು, ರಾಜ್ಯದ ಮುಕ್ಕಾಲು ಭಾಗದಲ್ಲಿ ಇರುವ ಯಕ್ಷಗಾನಕ್ಕೆ ರಾಜ್ಯದ ಕಲೆಯಾಗುವ ಅರ್ಹತೆಯಿದೆ, ಈ ನಿಟ್ಟಿನಲ್ಲಿ ಸಾಹಿತ್ಯ ಮತ್ತು ಯಕ್ಷಗಾನದ ಸಮನ್ವಯ ಏರ್ಪಡಿಸುವ ನಿಟ್ಟಿನಲ್ಲಿ ನಡೆಸಿದ ಪ್ರಯತ್ನವಾಗಿ ಈ ಸಂವಾದ ಮೂಡಿಬಂದಿತು.

ಕನಸು ತುಂಬಿದ ಅದ್ಭುತ ಕಲಾಪ್ರಕಾರ

| ಡಾ.ಎಚ್.ಎಸ್.ವೆಂಕಟೇಶಮೂರ್ತಿ ಹಿರಿಯ ಕವಿ

ಕನ್ನಡದ ಶಿಷ್ಟ ಸಾಹಿತ್ಯ ಹಾಗೂ ಪ್ರಸಂಗ ಸಾಹಿತ್ಯದ ನಡುವೆ ಅವಿನಾಭಾವ ಸಂಬಂಧ ಇದೆ. ಯಕ್ಷಗಾನ ಇದು ಪ್ರಸಂಗ ಸಾಹಿತ್ಯ. ಕುಮಾರವ್ಯಾಸ, ಲಕ್ಷ್ಮೀಶ ಮುಂತಾದವರ ಕೃತಿಗಳನ್ನು ಉತ್ತಮವಾಗಿ ಬಳಸಿಕೊಂಡು ಅದ್ಭುತ ಪ್ರಸಂಗ ಸಾಹಿತ್ಯ ನಿರ್ವಣವಾಗಿದೆ. ಶಿಷ್ಟ ಸಾಹಿತ್ಯಕಾರರು ಪ್ರಸಂಗಕರ್ತರ ಮೇಲೆ ದೊಡ್ಡ ಪ್ರಭಾವ ಬೀರಿದ್ದಾರೆ. ಹಾಗೆಯೇ ಶ್ರೇಷ್ಠ ಕವಿಗಳು ಯಕ್ಷಗಾನ ಪ್ರಸಂಗಗಳನ್ನು ಬರೆದಿದ್ದಾರೆ. ಹಾಗಾಗಿ, ಅನೇಕ ಕನ್ನಡ ಕವಿಗಳ ಮೇಲೆ ಯಕ್ಷಗಾನದ ಪ್ರಭಾವ ಇದೆ. ಅಡಿಗರಂತಹ ಮಹಾನ್ ಕವಿಗಳು ‘ಚಂಡೆಮದ್ದಲೆ’ ಕೃತಿ ಬರೆದರು. ನನ್ನ ಬಾಲ್ಯದ ಕನಸು ತುಂಬಿದ ಅದ್ಭುತ ಕಲಾಪ್ರಕಾರ ಯಕ್ಷಗಾನ. ಅಂದಿನ ಯಕ್ಷಗಾನ ಪ್ರಸಂಗಗಳು ಈಗಲೂ ಕಣ್ಣಿಗೆ ಕಟ್ಟಿದ ಹಾಗಿವೆ. ವಚನಕಾರರಂತೆ ಯಕ್ಷ ಕೃತಿಗಳು ನನ್ನ ಮೇಲೆ ಗಾಢ ಪ್ರಭಾವ ಬೀರಿವೆ. ಐರಾವತ ಎನ್ನುವ ಯಕ್ಷಗಾನ ಆಖ್ಯಾನ ಎರಡು ಅಟ್ಟಣಿಗೆಯಲ್ಲಿ (ರಂಗಸ್ಥಳ- ಒಂದರ ಮೇಲೆ ಮತ್ತೊಂದು) ನಡೆದು ಮಾಯಾಲೋಕ ಸೃಷ್ಟಿಸುತ್ತದೆ. ಇದನ್ನು ನೋಡಿ ಬೆಳೆದ ನನಗೆ ‘ಕಂಚಿನ ತೇರು’ ಕೃತಿ ಬರೆಯಲು ಪ್ರೇರಣೆ ಸಿಕ್ಕಿತು. ಮುದ್ಣಣ, ಪು.ತಿ. ನರಸಿಂಹಾಚಾರ್ಯ ಅವರಂತಹ ಕವಿಗಳು ಯಕ್ಷಗಾನ ಪ್ರಸಂಗವನ್ನು ರಚಿಸಿದ್ದಾರೆ. ನನ್ನ ಇತ್ತೀಚಿನ ಕೃತಿ ‘ಬುದ್ಧ ಚರಣ’ದಲ್ಲೂ ಯಕ್ಷಗಾನ ಸಾಹಿತ್ಯಸ್ಪುರಣವಾಗಿದೆ ಎಂಬ ಮಾತನ್ನು ಕೇಳಿದ್ದೇನೆ. ಕಾವ್ಯ-ಕಗ್ಗವನ್ನು ರೂಪಿಸುವಲ್ಲಿ ಯಕ್ಷಗಾನ ಪೂರಕವಾಗಿದೆ. ಯಕ್ಷಗಾನವು ಪಠ್ಯದಲ್ಲಿ ಸೇರಬೇಕು. ಕನ್ನಡ ಸಮ್ಮೇಳನಗಳಲ್ಲಿ ಒಂದು ಗೋಷ್ಠಿ ಇರಬೇಕು.

ಭಾಷೆಯ ಸಂಪತ್ತು ಹೆಚ್ಚಿಸುವ ಮೌಖಿಕ ಕಲೆ

| ರಾಧಾಕೃಷ್ಣ ಕಲ್ಚಾರ್ ಖ್ಯಾತ ಯಕ್ಷಗಾನ ಅರ್ಥಧಾರಿ

ಮೌಖಿಕ ಸಾಹಿತ್ಯವಾದ ಯಕ್ಷಗಾನದ ಕೊಡುಗೆ ಕನ್ನಡ ಭಾಷೆಗೆ ಅಪಾರ. ಸಂಭಾಷಣೆಯನ್ನು ಕಂಠಪಾಠ ಒಪ್ಪಿಸಲು ಅಸಾಧ್ಯವಾಗುವ ಕಲೆ ಯಕ್ಷಗಾನ. ಸಮೂಹ, ವೈಯಕ್ತಿಕ ಭಾಷೆಯ ಸಂಪತ್ತು ಮತ್ತು ಸಂಪನ್ನತೆಯನ್ನು ಹೆಚ್ಚಿಸುವ ಅಂಶ ಇದರಲ್ಲಿದೆ. ಯಕ್ಷಗಾನ, ತಾಳಮದ್ದಲೆಯಲ್ಲಿ ಭಾಗವಹಿಸುವ ಕಲಾವಿದ ಮೊದಲ ವಾಕ್ಯವನ್ನು ಮಾತ್ರ ಆಡುವ ಸ್ವಾತಂತ್ರ್ಯ ಹೊಂದಿರುತ್ತಾನೆ. ನಂತರದಲ್ಲಿ ಪ್ರೇಕ್ಷಕರು, ಹಿಮ್ಮೇಳದವರು, ಎದುರು ಪಾತ್ರಧಾರಿಯ ಪ್ರತಿಕ್ರಿಯೆಯನ್ನು ನೋಡಿ ತನ್ನೊಳಗಿನ ಜ್ಞಾನವನ್ನು ಹೊರಹಾಕಬೇಕಾಗುತ್ತದೆ. ಅಂದರೆ ಪ್ರತಿಕ್ರಿಯೆಯಿಂದ ಮತ್ತು ಸಾಂರ್ದಭಿಕವಾಗಿ ಆಶುತ್ವ ಪ್ರದರ್ಶನ ಮಾಡುತ್ತಾನೆ. ದ್ವಿಪದಿಯಲ್ಲಿ ಇರುವ ಪದ್ಯವನ್ನು ಅರ್ಧ ತಾಸು, ಒಂದು ತಾಸು ಹೇಳಬೇಕಾಗುತ್ತದೆ. ಉದಾಹರಣೆಗೆ, ‘ನೋಡಿ ನಿರ್ಮಲ ಜಲ ಸಮೀಪದಿ ಮಾಡಿಕೊಂಡರು ಪರ್ಣಶಾಲೆಯ ರೂಢಿ ಪಾಲರು ಪಂಚವಟಿಯ ಕಾಡಿನೊಳಗೆ’ ಇಷ್ಟು ಕಾವ್ಯಸಾಹಿತ್ಯಕ್ಕೆ ಅಲ್ಲಿನ ಸಂದರ್ಭ, ಸಮಯಕ್ಕೆ ಅನುಗುಣವಾಗಿ ಆಶು ಸಾಹಿತ್ಯವನ್ನು ವಿಸ್ತರಿಸಬೇಕಾಗುತ್ತದೆ. ಧ್ವನಿವ್ಯತ್ಯಾಸದಿಂದ ಕತೆಯನ್ನು ಕಟ್ಟಿಕೊಡಬೇಕಾಗುವ ಈ ಕಲೆಯಲ್ಲಿ ಕಲಾವಿದ ಭಾಷೆಯ ಹೊಸ ಸಾಧ್ಯತೆಯನ್ನು ಶೋಧಿಸುತ್ತ ಹೋಗುತ್ತಾನೆ. ಪೌರಾಣಿಕ ಕತೆಯನ್ನು ಹೇಳುತ್ತ ಸಮಕಾಲೀನ ಸಾಮಾಜಿಕ ಸ್ಥಿತಿಯನ್ನು ವಿಶ್ಲೇಷಿಸುವ ಸಾಮರ್ಥ್ಯವನ್ನು ಯಕ್ಷಗಾನ ಹೊಂದಿದೆ. ಅಲ್ಲದೆ, ವ್ಯಕ್ತಿಯಲ್ಲಿ ಮಾತನಾಡುವ ಕಲೆ ಬೆಳೆಸಿ ಚಾತುರ್ಯ, ಉಚ್ಚಾರ ಶುದ್ಧತೆ ಕಲಿಸುತ್ತದೆ. ಇಷ್ಟೆಲ್ಲ ವಿಶೇಷತೆ ಇರುವ ಮೌಖಿಕ ಕಲೆ ಎಲ್ಲೂ ಬರವಣಿಗೆ ಮೂಲಕ ದಾಖಲಾಗಲಿಲ್ಲ ಎಂಬುದು ದೌರ್ಭಾಗ್ಯದ ಸಂಗತಿ. ದಾಖಲೀಕರಣ ಇಂದಿನ ಅಗತ್ಯ.

ಸಂಶೋಧನೆಗಾಗಿಯಾದರೂ ದಾಖಲಾಗಲಿ...

| ಡಾ. ಜಿ.ಎಲ್. ಹೆಗಡೆ ಯಕ್ಷಗಾನ ಪ್ರಸಂಗಕರ್ತ, ಸಂಶೋಧಕ

ಯಕ್ಷಗಾನದ ದಾಖಲೀಕಣದ ಪ್ರಶ್ನೆ ಬಂದಾಗ ಇದನ್ನು ಯಾವ ರೀತಿ ಮಾಡಬೇಕು ಎಂಬ ಸವಾಲು ಎದುರಾಗುತ್ತದೆ. ಇಲ್ಲಿ ಆಟ, ಇನ್ನೊಂದು ಕೂಟ ಎಂಬ ಎರಡು ವಿಭಾಗ ಇವೆ. ಅನೇಕರು ಆಟವನ್ನು ವಿಡಿಯೋ, ಆಡಿಯೋ ಇತ್ಯಾದಿಗಳ ಮೂಲಕ ದಾಖಲೆ ಮಾಡುತ್ತಿದ್ದಾರೆ. ಆದರೆ, ಇಷ್ಟಾದರೆ ಸಾಕೆ? ಯುಗ ಪ್ರವರ್ತಕರಾದ ಶೇಣಿ ಗೋಪಾಲಕೃಷ್ಣ ಭಟ್ಟರ ಮಾತು ಕೇಳಿದರೆ ಯಕ್ಷಗಾನದಲ್ಲಿ ಏನೋ ಸತ್ವ ಇದೆ ಅನಿಸಿ ಆ ಸತ್ವದ ಸಂಶೋಧನೆಗೆ ತೊಡಗಿದಾಗ ಇದನ್ನು ದಾಖಲಿಸಿದರೆ ಕನ್ನಡಕ್ಕೆ ದೊಡ್ಡ ಕಾವ್ಯ ಕೊಟ್ಟಂತೆ ಆಗುತ್ತದೆ ಎಂದು ನನಗೆ ಅನಿಸಿತು. ವಿಭಿನ್ನ ಶೈಲಿಯ ಅರ್ಥಧಾರಿಗಳು ಯಕ್ಷಗಾನದಲ್ಲಿದ್ದಾರೆ. ಎಲ್ಲವನ್ನೂ ಸಂಶೋಧನೆ ಸಲುವಾಗಿಯಾದರೂ ದಾಖಲಿಸಬೇಕು. ಮುಂದಿನ ದಿನಗಳಲ್ಲಿ ಇದರ ಬಗ್ಗೆ ಗಮನ ಹರಿಸಬೇಕು. ಈಗಂತೂ ಸಾಕಷ್ಟು ತಾಂತ್ರಿಕ ಅನುಕೂಲಗಳಿವೆ. ಯಕ್ಷಗಾನದವರೇ ಮುತುವರ್ಜಿ ವಹಿಸಿ ಕಾಪಿಡುವ ಕೆಲಸ ಮಾಡಬೇಕು.

ಕನ್ನಡ ಅಸ್ಮಿತೆ ಉಳಿಸುವಲ್ಲಿ ಮಹತ್ವದ್ದು

| ಕೆರೆಮನೆ ಶಿವಾನಂದ ಹೆಗಡೆ ಯಕ್ಷಗಾನ ಕಲಾವಿದ, ಇಡಗುಂಜಿ ಯಕ್ಷಗಾನ ಮೇಳದ ಮುಖ್ಯಸ್ಥ

ಕನ್ನಡದ ಅಸ್ಮಿತೆ ಉಳಿಸುವಲ್ಲಿ ಯಕ್ಷಗಾನದ ಪಾತ್ರ ಪ್ರಮುಖ. ನಾಡು-ನುಡಿಗೆ ಇದರ ಕೊಡುಗೆ ಅಪಾರ. ಯಕ್ಷಗಾನದಲ್ಲಿ ಬಳಸುವ ಪ್ರಮುಖ ಬಣ್ಣ ಕನ್ನಡ ಬಾವುಟದಲ್ಲಿರುವ ಕೆಂಪು ಮತ್ತು ಹಳದಿ. ಹೀಗಿರುವಾಗ ಯಕ್ಷಗಾನ ಎನ್ನುವುದು ಅಪ್ಪಟ ಕನ್ನಡ ಕಲೆ ಎಂದೇ ಹೇಳಬೇಕಾಗುತ್ತದೆ. ಯಕ್ಷಗಾನದಲ್ಲಿ ಪ್ರಧಾನವಾಗಿ ಆಟ (ಬಡಗು, ಬಡಾಬಡಗು, ತೆಂಕು), ತಾಳಮದ್ದಲೆ, ಗೊಂಬೆಯಾಟ ಬರುತ್ತದೆ. ಎಲ್ಲ ಅಂಶಗಳನ್ನು ಒಳಗೊಂಡ ಸಮಗ್ರ ರಂಗಭೂಮಿ ಇದು. ಇಲ್ಲಿ ಬಳಸುವ ವೇಷಭೂಷಣದ ಹೋಲಿಕೆಗೆ ಬೇರೊಂದು ಪ್ರ್ರಾರ ಸಿಗುವುದಿಲ್ಲ. ಯಕ್ಷಗಾನ ಕನ್ನಡಕ್ಕೆ ಸೀಮಿತವಾಗಿಲ್ಲ. ಆಂಧ್ರಪ್ರದೇಶ, ತಮಿಳುನಾಡು, ಗೋವಾ, ಮಹಾರಾಷ್ಟ್ರದಲ್ಲೂ ಇದೆ. ಜಾಗತಿಕವಾಗಿಯೂ ನೆಲೆ ಸ್ಥಾಪಿಸಿಕೊಂಡಿದೆ. ಕಥೆ ಹೇಳುವುದು ಒಂದು ಮಗ್ಗುಲಾದರೆ, ಕಥೆ ವಿಶ್ಲೇಷಿಸುವುದು ಇದರ ಇನ್ನೊಂದು ಭಾಗ. ಇಲ್ಲಿರುವಷ್ಟು ಆಶುತನ ಬೇರೆ ಕಲೆಗಳಲ್ಲಿ ಇಲ್ಲ. ಶುದ್ಧವಾದ ಕನ್ನಡ ಇಲ್ಲಿದೆ. ವಿಶಿಷ್ಟವಾಗಿ ಕಾವ್ಯ ಕಟ್ಟುವ ಸಹಜ ಅನುಭವ ಇಲ್ಲಿ ಸಿಗುತ್ತದೆ. ಇಂತಹ ರಂಗಭೂಮಿಯ ಶಕ್ತಿಯನ್ನು ಎಷ್ಟು ವಿಸ್ತರಿಸಬಹುದು ಎಂಬ ಬಗ್ಗೆ ಚಿಂತನೆ ಆಗಬೇಕು. ಎಲ್ಲರೂ ಇದನ್ನು ಸ್ವೀಕರಿಸುವಂತಹ ವಾತಾವರಣ ನಿರ್ವಿುಸಬೇಕು.

ಜನಾಶ್ರಯದಲ್ಲಿ ಬಾಳುತ್ತಿರುವ ಸಮರಸದ ಕಲೆ

| ಡಾ. ನರಹಳ್ಳಿ ಬಾಲಸುಹ್ಮಣ್ಯ ಖ್ಯಾತ ವಿಮರ್ಶಕ

ಜಾಗತಿಕ ನೆಲೆಯಲ್ಲಿ ಭಿನ್ನತೆ ಬಳಸಿಕೊಂಡ ದೇಸೀ ಪರಂಪರೆಯ ಸತ್ವಯುತ ಕಲೆ ಯಕ್ಷಗಾನ. ಎಲ್ಲ ಕಲಾ ಪ್ರ್ರಾರಗಳು ದ್ವೀಪಗಳಾಗುತ್ತಿರುವ ಹಂತದಲ್ಲಿ ಸಂಗೀತ, ನೃತ್ಯ, ವೇಷಭೂಷಣ ಎಲ್ಲವನ್ನೂ ಬಳಸಿಕೊಂಡು ಯಕ್ಷಗಾನ ಪ್ರಾಮುಖ್ಯ ಹೆಚ್ಚಿಸಿಕೊಂಡಿದೆ. ಕಲೆ ಹಾಗೂ ಪ್ರಭುತ್ವಕ್ಕೆ ನಿಕಟ ಸಂಬಂಧ ಇದೆ. ಹಿಂದೆ ರಾಜರು ಕಲೆಯನ್ನು ಪೋಷಿಸಿಕೊಂಡು ಬಂದರೆ, ಈಗ ಸರ್ಕಾರದ ಕೃಪಾಪೋಷಣೆಯಿಂದ ಕಲೆ ಬೆಳೆಯುವ ಸ್ಥಿತಿ ಇದೆ. ಆದರೆ, ಯಕ್ಷಗಾನ ಜನಾಶ್ರಯದಲ್ಲೇ ಬೆಳೆಯುತ್ತಿರುವ ಕಲಾಪ್ರಕಾರವಾಗಿದೆ. ಜನರೇ ಇದನ್ನು ಪೋಷಿಸುತ್ತಿದ್ದಾರೆ. ಕರಾವಳಿ, ಮಲೆನಾಡಿನ ಅನೇಕರು ವ್ಯಕ್ತಿತ್ವದ ಒಂದು ಭಾಗ ಮಾಡಿಕೊಂಡಿದ್ದಾರೆ. ಕನ್ನಡದ ಅಸ್ಮಿತೆ, ಕನ್ನಡ ಛಂದಸ್ಸೇ ಯಕ್ಷಗಾನದ ಛಂದಸ್ಸು, ಇದು ಭಾಷಾ ಪಾವಿತ್ರ್ಯತೆ, ಕನ್ನಡ ಸಂಸ್ಕೃತಿಯನ್ನು ಜತನದಿಂದ ಕಾಪಾಡಿಕೊಂಡು ಬಂದಿದೆ. ಯಕ್ಷಗಾನ ಸೃಜನಶೀಲವಾದದ್ದು. ಸಮಕಾಲೀನ ಜಗತ್ತನ್ನು ವಿಶ್ಲೇಷಿಸುವ ಕಾರ್ಯವನ್ನು ಇದು ಮಾಡುತ್ತದೆ. ಕರ್ನಾಟಕದ ಕಲೆಯಾಗಿದ್ದ ಯಕ್ಷಗಾನ ಸೀಮಿತ ವಲಯಕ್ಕೆ ಸಂಕುಚಿತವಾಗುತ್ತಿದೆಯೇ ಎಂಬ ಪ್ರಶ್ನೆ ಮೂಡುತ್ತದೆ. ಪ್ರಾದೇಶಿಕ ಭಿನ್ನತೆ ಬಿಟ್ಟು ಕನ್ನಡದ ಕಲೆಯಾಗಿ ಯೋಚಿಸಿ ಸಾಹಿತ್ಯದ ಮುಖ್ಯಧಾರೆಯಲ್ಲಿ ಇದರ ಬಗ್ಗೆ ರ್ಚಚಿಸಬೇಕು.

ಯಕ್ಷಗಾನ ವಿಮರ್ಶಕ ಆನಂದರಾಮ ಉಪಾಧ್ಯಾಯ ಕಾರ್ಯಕ್ರಮ ನಡೆಸಿಕೊಟ್ಟರು. ಭಾಗವತ ಅನಂತ ದಂತಳಿಗೆ ಅವರು ‘ತ್ರಿಜಗ ವಂದಿಪ ಗಣಪ...’ ಹಾಡಿನ ಮೂಲಕ ಕಾರ್ಯಕ್ರಮ ಆರಂಭಿಸಿ, ಎಚ್​ಎಸ್​ವಿ ಅವರ ‘ಲೋಕದ ಕಣ್ಣಿಗೆ ರಾಧೆಯೂ ಕೂಡ..’ ಎಂಬ ಭಾವಗೀತೆಯನ್ನು ಯಕ್ಷಗಾನ ಶೈಲಿಯಲ್ಲಿ ಹಾಡುವ ಮೂಲಕ ಮುಕ್ತಾಯಗೊಳಿಸಿದರು. ಯಕ್ಷವಾಹಿನಿಯ ರವಿ ಮಡೋಡಿ ಸಹಕಾರ ನೀಡಿದರು.

ಸಂವಾದದಲ್ಲಿ ಕೇಳಿಬಂದಿದ್ದು

  • ತುಮಕೂರಿನ ದೊಡ್ಡಾಟದ ಭಾಗವತರಾದ ಶಿವಣ್ಣ, ಸ್ವಂತಿಕೆಯಿಂದ ಕೂಡಿದ ಕಲಾ ಪ್ರಕಾರ ಇದಾಗಿದೆ. ಕರಾವಳಿಯವರ ರೀತಿಯಲ್ಲಿ ಕನ್ನಡದ ಇತರ ಕಲೆಗಳನ್ನು ಉಳಿಸುವ ಉಪಾಯ ತಿಳಿಸಿ ಎಂದರು.
  • ಇದಕ್ಕೆ ಉತ್ತರಿಸಿದ ನರಹಳ್ಳಿ ಬಾಲಸುಬ್ರಮಣ್ಯ ಅವರು, ಯಾವುದೇ ಕಲೆಯಾಗಲಿ ಅದರಲ್ಲಿ ತೊಡಗಿಸಿಕೊಳ್ಳುವುದು ಮುಖ್ಯ. ಯಾವುದೇ ಇರಲಿ ಜನರ ಕಲೆಯಾಗಬೇಕು. ತೆಂಕುತಿಟ್ಟು, ಮೂಡಲಪಾಯ, ಪಡುವಲಪಾಯ ಮುಂತಾದ ಕಲೆಗಳ ಮಧ್ಯೆ ಪರಸ್ಪರ ಸಂವಾದ ಸಾಧ್ಯವಾಗುವ ವಾತಾವರಣ ಸೃಷ್ಟಿಯಾಗಬೇಕು. ‘ವಿಜಯವಾಣಿ’ಯಿಂದ ಎಲ್ಲರನ್ನೂ ಒಟ್ಟುಗೂಡಿಸುವ ಪ್ರಯತ್ನ ನಡೆದಿರುವುದು ಸಂತಸದ ಸಂಗತಿ ಎಂದರು.
  • ಕನ್ನಡ ತಾಯಿಗೆ ಮಗುವಿನಂತಿರುವ ಯಕ್ಷಗಾನವನ್ನು ಹೊತ್ತು ತಿರುಗಿದಂತೆ ಕನ್ನಡಕ್ಕಾಗಿ ಎಲ್ಲರೂ ಒಟ್ಟಾಗುತ್ತಿಲ್ಲವಲ್ಲ ಎಂದು ನೋವು ತೋಡಿಕೊಂಡ ನಟರಾಜ ಉಪಾಧ್ಯಾಯ ಅವರಿಗೆ ವೆಂಕಟೇಶಮೂರ್ತಿ ಅವರು ‘ಯಕ್ಷಗಾನವನ್ನು ಕನ್ನಡ ರಕ್ಷಣೆಗೂ ಬಳಸಿಕೊಳ್ಳಬಹುದು. ಒಂದು ಕಲೆ ಉಳಿದರೆ ಭಾಷೆ ಕೂಡ ಉಳಿದಂತೆಯೇ’ ಎಂದರು.
  • ಯಕ್ಷಗಾನವನ್ನು ಬೇರೆ ಭಾಷೆಗೆ ವಿಸ್ತರಿಸುವ ಬಗ್ಗೆ ಡಾ. ಮೋಹನ್ ಪ್ರಸ್ತಾಪಿಸಿದರು. ಕನ್ನಡದಲ್ಲಿಯೇ ಹೇಗೆ ವಿಸ್ತರಿಸುವುದು ಎಂಬ ಪ್ರಶ್ನೆಯಲ್ಲಿದ್ದೇವೆ. ಹಾಗಾಗಿ ಮೊದಲು ಕನ್ನಡದ ಬಗ್ಗೆ ಚಿಂತನೆ ನಡೆಸಿ ನಂತರ ಬೇರೆ ಭಾಷೆ ಬಗ್ಗೆ ಯೋಚಿಸಿದರೆ ಒಳಿತು ಎಂದರು ಕಲ್ಚಾರ್.
  • ಪಠ್ಯಪುಸ್ತಕದಲ್ಲಿ ಸೇರ್ಪಡೆ ಬಗ್ಗೆ ಯಕ್ಷಗಾನ ಕವಿ, ನಿವೃತ್ತ ಉಪನ್ಯಾಸಕ ಶ್ರೀಧರ ಡಿ.ಎಸ್. ಪ್ರಸ್ತಾಪಿಸಿ, ಸಾಹಿತ್ಯ ಸಮ್ಮೇಳನದಲ್ಲೂ ಇದರ ಚರ್ಚೆ ಕಂಡು ಬರುವುದಿಲ್ಲ ಎಂದರು. ವಚನ, ದಾಸ ಸಾಹಿತ್ಯದ ಚರ್ಚೆಯಾಗುತ್ತದೆ. ಇದೇ ರೀತಿ ಯಕ್ಷಗಾನ ಸಾಹಿತ್ಯ ಒಳಗೊಂಡು ರ್ಚಚಿಸಿದರೆ ಅನುಕೂಲ. ಯಕ್ಷಗಾನ ಪ್ರತ್ಯೇಕ ಅನ್ನುವ ರೀತಿ ನೋಡಬಾರದು ಎಂದು ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಅಭಿಪ್ರಾಯಪಟ್ಟರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net