

ದೇಶದಾದ್ಯಂತ ಲಾಕ್ಡೌನ್ ಇರುವ ಸಂದರ್ಭದಲ್ಲಿ ನಾವೆಲ್ಲರೂ ಮನೆಯಲ್ಲೇ ಇದ್ದು, ಕರೊನಾ ಸೋಂಕಿನ ಬಗ್ಗೆ ಅನೇಕ ವಿಚಾರಗಳನ್ನು ಕೇಳುತ್ತಿರುತ್ತೇವೆ. ಈ ವೈರಸ್ ಎಲ್ಲಿಂದ, ಹೇಗೆ ಬಂತು ಎಂಬುದನ್ನು ತಿಳಿದುಕೊಳ್ಳಲು ಪ್ರಯತ್ನ ಮಾಡುತ್ತಿರುತ್ತೇವೆ. ಆದರೆ ಈ ಸೋಂಕಿಗೆ ಎಲ್ಲೋ ಒಂದು ಕಡೆ ‘ನಾವೂ ಕಾರಣರೇ’ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಹೌದು. ಇದಕ್ಕೆಲ್ಲ ನಾವೇ ಜವಾಬ್ದಾರರು. ಹೇಗೆ ಎಂದು ಹೇಳುತ್ತೇನೆ. ‘ನಾವು’ ಎಂದರೆ ನಮ್ಮನ್ನು ನಾವು ಪ್ರಕೃತಿಯಿಂದ ವಿಭಿನ್ನವಾಗಿ ಹಾಗೂ ಪ್ರತ್ಯೇಕವಾಗಿ ಪರಿಗಣಿಸುತ್ತಿದೀವ? ನಮ್ಮನು ನಾವು ಹೊರಗಿನ ಪ್ರಕೃತಿಯಿಂದ ಬೇರ್ಪಡಿಸಲು ಸಾಧ್ಯವೇ ಅಥವಾ ನಮ್ಮ ಆಂತರಿಕ ಪ್ರಕೃತಿಯನ್ನ ನಮ್ಮಿಂದ ಬೇರ್ಪಡಿಸಲು ಸಾಧ್ಯವೇ? ಇಲ್ಲ, ಇದು ಭೌತಿಕವಾಗಿಯೂ ಹಾಗೂ ಆಧ್ಯಾತ್ಮಿಕವಾಗಿಯೂ ಸಾಧ್ಯವಿಲ್ಲ.
ನಮ್ಮ ಮುಂದೆ ಇರುವುದು ಎರಡೇ ಸಾಧ್ಯತೆಗಳು. ಒಂದು, ನಾವೆಲ್ಲರೂ ಹೊರಗಿನ ಪ್ರಕೃತಿಯೊಂದಿಗೆ ಶಿಸ್ತಿನಿಂದ ಹಾಗೂ ಸಾಮರಸ್ಯದಿಂದ ಬಾಳುವುದು. ಇಲ್ಲವೆ, ದುಷ್ಪರಿಣಾಮಗಳನ್ನು ಎಲ್ಲರೂ ಅನುಭವಿಸುವುದು. ಹೊರಗಿನ ಪ್ರಕೃತಿಯೊಂದಿಗೆ ನಾವು ಹಾಗೂ ಎಲ್ಲ ಜೀವಕಣಗಳು ಸಂಪೂರ್ಣವಾಗಿ ಒಂದಾಗಿದ್ದೇವೆ, ಇವೆರಡನ್ನೂ ಬೇರ್ಪಡಿಸಲು ಸಾಧ್ಯವಿಲ್ಲ. ನಮ್ಮ ದಿನನಿತ್ಯದ ವಿದ್ಯಮಾನದಲ್ಲಿ ಕರ್ಮ, ಪ್ರಕೃತಿ ಮತ್ತು ಸ್ವಭಾವಗಳ ಬಗ್ಗೆ ಚರ್ಚೆಗಳು ಹಾಗೂ ಪ್ರವಚನಗಳು ನಡೆಯುತ್ತವೆ, ವಿವಿಧ ಭಾರತೀಯ ಸಂಪ್ರದಾಯಗಳು ಮತ್ತು ಚಿಂತನೆಗಳಿಂದ ನಾವೆಲ್ಲರೂ ಈ ಮೂರು ಪದಗಳ ಮೂಲಅರ್ಥ ಒಂದೇ ಎಂದು ನಂಬಿದ್ದೇವೆ, ಆದರೆ ಅವುಗಳ ರೂಪ ಮಾತ್ರ ಬೇರೆ.
ಸಾಮಾನ್ಯವಾಗಿ ಹೊರಗಿನ ಪ್ರಕೃತಿಯೆಂದರೆ ನಾವು ಭಾವಿಸುವುದು ಕಾಡು, ಬೆಟ್ಟಗುಡ್ಡಗಳು, ಜಲಮೂಲಗಳು, ಪ್ರಾಣಿಗಳು, ಕ್ರಿಮಿಕೀಟಗಳು, ಭೂಮಿ ಇತ್ಯಾದಿ, ಆದರೆ ನಮ್ಮನ್ನು ನಾವು ಮಾತ್ರ ಆ ಪ್ರಕೃತಿಯಲ್ಲಿ ಗುರುತಿಸಿಕೊಳ್ಳುವುದಿಲ್ಲ. ಕೆಲವು ಸಂದರ್ಭಗಳಲ್ಲಿ ಪ್ರಕೃತಿಯನ್ನು ನಮ್ಮ ಆಂತರಿಕ ಸ್ವಭಾವಕ್ಕೆ ಹೋಲಿಸುವಾಗಲೂ, ಅದನ್ನು ಬಾಹ್ಯ ಮಾನವನ ಅಭ್ಯಾಸಗಳಿಗೆ ಮಾತ್ರ ಹೋಲಿಸುವುದು ಸಾಮಾನ್ಯ ಎಂಬಂತಾಗಿದೆ. ಆದರೆ ವಾಸ್ತವದಲ್ಲಿ ಆಂತರಿಕ ಪ್ರಕೃತಿ ಎಲ್ಲ ಹೊರಗಿನ ಗುಣಲಕ್ಷಣಗಳು ಹಾಗೂ ಅಭ್ಯಾಸಗಳನ್ನು ಮೀರಿದ್ದು, ಇದರ ಅರಿವು ಎಲ್ಲಿಯವರೆಗೂ ಆಗುವುದಿಲ್ಲವೋ ಅಲ್ಲಿಯವರೆಗೂ ನಮ್ಮ ವಿಶಿಷ್ಟ ಗುಣಲಕ್ಷಣಗಳು ಬದಲಾಗುವುದಿಲ್ಲ.
ಪರಿಸರದ ಸನಿಹಕ್ಕೆ ಇರಲು ಯಾವುದು ಅಡ್ಡಿ ಮಾಡುತ್ತಿದೆ?
ಮಾನವರಾಗಿ, ನಾವು ಪರಿಸರವನ್ನು ಹಾನಿ ಮಾಡುವ, ಅದಕ್ಕೆ ಆಪತ್ತು ತರುವ ಕಾರ್ಯಗಳಲ್ಲಿ ತೊಡಗಿದ್ದೇವೆ. ನದಿಗಳು ಒಂದು ಭಾಗದಲ್ಲಿ ಒಣಗಿ ಹೋದರೆ, ಜಗತ್ತಿನ ಬೇರೆ ಭಾಗಗಳಿಗೂ ವ್ಯತಿರಿಕ್ತ ಪರಿಣಾಮಗಳನ್ನು ಉಂಟುಮಾಡುತ್ತದೆ. ಇದು ನಮಗೆ ಗೊತ್ತಿದ್ದರೂ, ಸ್ವಾರ್ಥ ದಾರಿ ತಪ್ಪಿಸುತ್ತಿದೆ. ನಾವು ಅಜ್ಞಾನಿಗಳಲ್ಲ, ಆದರೆ ಸ್ವಯಂಶಿಸ್ತನ್ನು ಮರೆತಿದ್ದೇವೆ. ಸಹಜಗುಣ/ಸ್ವಭಾವ ಮತ್ತು ಪರಿಸರದ ಜತೆ ಬಹಳ ಬೇರ್ಪಡಿಸಲಾಗದ ಸಂಬಂಧವಿದೆ. ಇದನ್ನು ತಿಳಿದುಕೊಂಡು ಜವಾಬ್ದಾರಿಯುತವಾಗಿ ವರ್ತಿಸಲು ಆರಂಭಿಸಬೇಕು. ಇದನ್ನು ಪಾಲಿಸಿದಾಗ ಇಂತಹ ದುರಂತಗಳನ್ನು ತಡೆಯಬಹುದು. ಈ ಲಾಕ್ಡೌನ್ ಅವಧಿಯನ್ನು ಅಮೂಲ್ಯವಾದ ಅವಕಾಶವಾಗಿ ಉಪಯೋಗಿಸಿ, ಧ್ಯಾನವನ್ನು ಅಭ್ಯಾಸ ಮಾಡಿ, ಆಂತರ್ಯದ ಮೇಲೆ ಕೇಂದ್ರೀಕರಿಸಬೇಕು. ನಿಮ್ಮ ನಿಲುವನ್ನು ಅವಲಂಬಿಸಿ, ನಿಮ್ಮ ಮನೋವೃತ್ತಿಯ ಪ್ರಕಾರ, ಪ್ರತಿಯೊಂದು ಸವಾಲನ್ನು ಅವಕಾಶವಾಗಿ ಪರಿವರ್ತಿಸಬಹುದು. ನಿಮ್ಮ ನಿಲುವನ್ನು ಬದಲಾವಣೆ ಮಾಡಿಕೊಂಡರೆ ಜಗತ್ತು ಬದಲಾಗುತ್ತದೆ. ಹಾಗೂ ಆಂತರ್ಯದ ಕಡೆ ನೋಡಲು ಪ್ರಾರಂಭಿಸಿದಾಗ, ನಿಮ್ಮ ನಿಲುವು, ಮನೋವೃತ್ತಿ ಬದಲಾವಣೆ ಆಗುತ್ತದೆ.
ಇದನ್ನು ದೈವಿಕ ಲಾಕ್ಡೌನ್ ಅವಧಿಯಾಗಿ ನೋಡಿ ಕರೊನಾ ಸೋಂಕು ಹರಡುವುದನ್ನು ನಿಲ್ಲಿಸಿ ಸರಪಳಿಯನ್ನು ಮುರಿಯಬೇಕು. ನಿಮ್ಮ ಪ್ರಕೃತಿಸ್ವಭಾವ ಮತ್ತು ಕರ್ಮದ ನಡುವೆ ಮುರಿದುಹೋದ ಸರಪಳಿಯನ್ನು ಸರಿಪಡಿಸಿ ಉತ್ತಮಗೊಳಿಸಬೇಕು. ಮತ್ತೆ ಪೂರ್ಣವಾಗಬೇಕು. ಸರ್ವಸ್ವವನ್ನು ಕಂಡುಹಿಡಿಯಬೇಕು.
| ಗುರೂಜಿ ನಂದಕಿಶೋರ್ ತಿವಾರಿ (ಲೇಖಕರು ಸಹಜ ಸ್ಮೃತಿ ಯೋಗದ ಸಂಸ್ಥಾಪಕರು)