ದೃಢತೆಯ ಹೆಜ್ಜೆ ನಮ್ಮದಾಗಲಿ: ಮನೋಲ್ಲಾಸ

Manollasa
Published on
| ಭಾರತಿ ಎ. ಕೊಪ್ಪ

ಕೈಗಾರಿಕೆಗಳಲ್ಲಿ ಮುಂಚೂಣಿಯಲ್ಲಿರುವ ದೇಶವಾದ ಅಮೆರಿಕದ ಕಾರ್ಖಾನೆಗಳಿಗೆ ಭೇಟಿಕೊಟ್ಟು ನಮ್ಮ ದೇಶಕ್ಕೆ ಪ್ರಯೋಜವಾಗುವಂತಹ ವಿಷಯಗಳನ್ನು ತಿಳಿದು ಬರಲು ಅದೊಮ್ಮೆ ಕೆಲವರು ಅಮೆರಿಕಕ್ಕೆ ಹೋದರು. ಈ ತಂಡದ ನಾಯಕರಿಗೆ ಆಗ 91 ವರ್ಷ ವಯಸ್ಸು! ಅನೇಕ ಕಾರ್ಖಾನೆಗಳ ವೀಕ್ಷಣೆ ಯೋಜಿತ ರೀತಿಯಲ್ಲಿಯೇ ನಡೆಯಿತು. ಒಂದು ಕಾರ್ಖಾನೆಗೆ ಹೋದಾಗ ಅಲ್ಲಿನ ಅಧಿಕಾರಿಗಳು ಎಲ್ಲರನ್ನೂ ಕಾರ್ಖಾನೆಯ ಬೇರೆ ಬೇರೆ ಭಾಗಗಳಿಗೆ ಕರೆದುಕೊಂಡು ಹೋಗಿ, ವಿಷಯವನ್ನು ರ್ಚಚಿಸುತ್ತಾ ವಿವರಿಸುತ್ತಿದ್ದರು. ಒಂದು ಕಡೆ ಮಾತ್ರ ಅಲ್ಲಿ ನಡೆಯುತ್ತಿದ್ದ ಕೆಲಸವನ್ನು ನೋಡಬೇಕಾದರೆ ಮೇಲಕ್ಕೆ ಹತ್ತಿ ಹೋಗಬೇಕಿತ್ತು. ಸುಮಾರು 75 ಅಡಿಗಳಷ್ಟು ಎತ್ತರವನ್ನು ನಾಲ್ಕು ಅಂತಸ್ತುಗಳನ್ನು ಏರಬೇಕಿತ್ತು. ಸುಲಭವಾದ ಮೆಟ್ಟಿಲುಗಳೂ ಇರಲಿಲ್ಲ. ಉಕ್ಕಿನ ಏಣಿಯಿತ್ತು. ಆಗ 91 ವರ್ಷದ ಭಾರತ ತಂಡದ ನಾಯಕರು, ಅಧಿಕಾರಿಗಳು ಹೇಳಿದುದನ್ನೆಲ್ಲಾ ಕೇಳಿದರು. ಜೊತೆಗೆ ಮೇಲೆ ಹೋಗಿ ನೋಡೋಣ ಎಂದು ಸರಸರನೆ ಏಣಿ ಏರತೊಡಗಿದರು. ಅವರು ಮೇಲೆ ಹತ್ತಿದರೆಂದು ಕೆಲವರು ಹತ್ತಿದರು. ಬಹಳ ಮಂದಿ ಕೆಳಗೇ ಉಳಿದರು. ಮೇಲೇರಿದವರು ಎಲ್ಲವನ್ನೂ ನೋಡಿಕೊಂಡು ಸರಸರನೆ ಇಳಿದು ಬಂದರು. ಎಲ್ಲರನ್ನೂ ನಿಬ್ಬೆರಗಾಗಿಸಿದರು. ಆ ದೃಢತೆಯ ಉತ್ಸಾಹಿ ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ! ಕೆಲಸದಲ್ಲಿ ಸ್ವಲ್ಪವೂ ಲೋಪ ಮಾಡದೆ ಮುಗಿಸಬೇಕೆಂಬ ದೃಢ ನಿಶ್ಚಯ ಅವರದಾಗಿತ್ತು.

ಎಂವಿಯವರ ಜೀವನೋತ್ಸಾಹ, ಕರ್ತವ್ಯಪ್ರಜ್ಞೆ ಪ್ರತಿಯೊಬ್ಬರಿಗೂ ಮಾದರಿ. ದೇಹಕ್ಕೆ ಮಾತ್ರ ವಯಸ್ಸಾಗುತ್ತದೆ, ಮನಸ್ಸಿಗಲ್ಲ ಎಂದು ಬಲ್ಲವರು ಹೇಳುವಂತೆ, ಪ್ರಕೃತಿ ಸಹಜವಾಗಿ ನಮ್ಮ ದೇಹಕ್ಕೆ ವಯಸ್ಸಾದರೂ ನಮ್ಮ ದಕ್ಷತೆಗೆ, ಚಿಂತನಾ ಲಹರಿಗೆ ಉತ್ಸಾಹ ಕುಂದಬಾರದು. ಕೆಲಸದಲ್ಲಿ ತೊಡಗುವಾಗ ಕೆಲವೊಮ್ಮೆ ಇದು ನನ್ನಿಂದಾಗದು, ನನಗೆ ಅಸಾಧ್ಯ, ಇದರಿಂದ ತಪ್ಪಿಸಿಕೊಳ್ಳುವುದೇ ಸೂಕ್ತ ಎಂಬ ಯೋಚನೆ ನಮಗೆ ಬರುವುದುಂಟು. ಆದರೆ ಕೆಲಸದಲ್ಲಿ ಶ್ರದ್ಧೆ, ಆಸಕ್ತಿ ಇರುವವರು ತಪ್ಪಿಸಿಕೊಳ್ಳುವ ದಾರಿ ಹುಡುಕುವ ಬದಲಾಗಿ ತಮ್ಮಲ್ಲಿರುವ ಇಚ್ಛಾಶಕ್ತಿ ಮತ್ತು ಸಾಮರ್ಥ್ಯವನ್ನು ಬಳಸಿ ಆ ಕೆಲಸವನ್ನು ಸರ್ವಮಾನ್ಯವಾಗುವಂತೆ ಮಾಡುವ ದಾರಿಯನ್ನು ತಾವೇ ಕಂಡುಕೊಳ್ಳಬಲ್ಲರು.

ಮಾಡುವ ಪ್ರತಿ ಕೆಲಸದಲ್ಲೂ ನಿಖರತೆ, ಯಶಸ್ಸು ಕಾಣಬೇಕೆಂದರೆ ಮಾನಸಿಕವಾಗಿ ನಾವು ಸದಾ ಹೊಸ ಚಿಂತನೆಯಲ್ಲಿರಬೇಕು. ದೈಹಿಕವಾಗಿ ವಯಸ್ಸು ಏರಿದರೂ, ಮನದ ಯೋಚನೆಗಳು, ಕ್ರಿಯಾಶೀಲತೆಗಳು ಜಿಡ್ಡುಗಟ್ಟಬಾರದು, ತುಕ್ಕು ಹಿಡಿಯಬಾರದು.

ದ್ರಾಕ್ಷಿರಸವೇನಲ್ಲ ಜೀವನದ ತಿರುಳಾರ್ಗಂ

ಇಕ್ಷುದಂಡದವೊಲದು ಕಷ್ಟಭೋಜನವೆ|

ದಕ್ಷತೆಯನಿಡಿಯುವಂಗೊಂದೆರಡು ಗುಟುಕು ರಸ

ಮಾಕ್ಷಿಕರು ಮಿಕ್ಕೆಲ್ಲ ಮಂಕುತಿಮ್ಮ ||

‘ಯಾರಿಗೂ ಜೀವನದ ತಿರುಳು ದ್ರಾಕ್ಷಿಯಂತೆ ಸುಲಭವಲ್ಲ. ಕಬ್ಬಿನ ಜಲ್ಲೆಯಂತೆ ಅದು ಕಷ್ಟಕರವಾದ ಭೋಜನವೇ. ದಕ್ಷತೆಯಿಂದ ಅದನ್ನು ಹಿಡಿಯುವವನಿಗೆ ಒಂದೆರಡು

ಗುಟುಕು ರಸ ಸಿಗುತ್ತದೆ. ಉಳಿದವರೆಲ್ಲಾ ನೊಣಗಳಷ್ಟೇ’ ಎಂಬ ಡಿ.ವಿ.ಗುಂಡಪ್ಪನವರ ಕಗ್ಗವೊಂದರ ತಾತ್ಪರ್ಯದಂತೆ, ಕಷ್ಟಕರವಾದ ಜೀವನದಲ್ಲಿ ಕಬ್ಬಿನ ಜಲ್ಲೆಯಂತೆ ಸಿಹಿ ಯಶದ ರಸವನ್ನು ಪಡೆಯಲು ದೃಢತೆ ಮತ್ತು ಉತ್ಸಾಹದಿಂದ ಮುನ್ನಡೆಯಬೇಕು.

(ಲೇಖಕರು ಶಿಕ್ಷಕರು ಮತ್ತು ಹವ್ಯಾಸಿ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net