

ಭಾರತದೇಶವು ಸಾವಿರಾರು ವರ್ಷಗಳ ಭವ್ಯ ಸಾಂಸ್ಕೃತಿಕ, ಧಾರ್ವಿುಕ ಹಾಗೂ ಆಧ್ಯಾತ್ಮಿಕ ಪರಂಪರೆಯ ನೆಲೆವೀಡು. ಈ ದೇಶಕ್ಕೆ ಸ್ವಾತಂತ್ರ್ಯ ಲಭಿಸಿ ಏಳು ದಶಕಗಳಾದರೂ ನಮ್ಮ ಸಂಸ್ಕೃತಿ ಮತ್ತು ಸನಾತನ ಧರ್ಮದ ಸ್ಥಿತಿ-ಗತಿಗಳು ಪ್ರಾಯೋಗಿಕವಾಗಿ, ಸಾಮಾಜಿಕವಾಗಿ ದುರ್ಬಲವಾಗುತ್ತಿರುವುದು ವಿಷಾದಕರ. ಅಲ್ಲದೆ ಜನಸಾಮಾನ್ಯರಲ್ಲಿ ಧರ್ಮಶ್ರದ್ಧೆ ಕ್ಷೀಣಿಸುತ್ತಿರುವುದನ್ನು ಕೂಡ ಸ್ಪಷ್ಟವಾಗಿ ಕಾಣಬಹುದು. ಇದೊಂದು ಚಿಂತಾಜನಕ ಪರಿಸ್ಥಿತಿ. ‘ಧರ್ಮವೇ ಭಾರತದ ಜೀವಾಳ. ಆಧ್ಯಾತ್ಮಿಕತೆಯೇ ಭಾರತೀಯ ಸಂಸ್ಕೃತಿಯ ಅನನ್ಯ ಹಾಗೂ ಅತ್ಯಮೂಲ್ಯ ಸಂಪತ್ತು. ನಿಮ್ಮ ಆಧ್ಯಾತ್ಮಿಕ ಸಂಪತ್ತನ್ನು ನಿರ್ಲಕ್ಷಿಸಿ, ಕಣ್ಣುಕೋರೈಸುವ ಪಾಶ್ಚಾತ್ಯ ಭೌತಿಕ ನಾಗರಿಕತೆಯ ಬೆನ್ನುಹತ್ತಿದಲ್ಲಿ, ಮೂರು ತಲೆಮಾರುಗಳಲ್ಲಿ ನಿಮ್ಮ ಜನಾಂಗ ನಿರ್ನಾಮವಾಗುತ್ತದೆ’ ಎಂದರು ಸ್ವಾಮಿ ವಿವೇಕಾನಂದರು. ಈ ಎಚ್ಚರಿಕೆಯ ಮಾತುಗಳಿಗೆ ಯುವಜನಾಂಗ ಹಿಂದೆಗಿಂತಲೂ ಇಂದು ಹೆಚ್ಚು ಸ್ಪಂದಿಸಿ ಮನಗಾಣಬೇಕಾದ ಅವಶ್ಯಕತೆ ಇದೆ.
ಸ್ವಾಮಿ ವಿವೇಕಾನಂದರು ಹೀಗೆ ಹೇಳುತ್ತಾರೆ: ‘ಧರ್ಮದ ರಹಸ್ಯವಿರುವುದು ಸಿದ್ಧಾಂತಗಳಲ್ಲಲ್ಲ; ಆಚರಣೆಯಲ್ಲಿ. ಧರ್ಮವೆಂದರೆ ಬರೀ ಮಾತಲ್ಲ, ಅದು ಧಾರ್ವಿುಕ ಉಪದೇಶದ ಅನುಷ್ಠಾನ. ಒಂದು ಮಣದಷ್ಟು ಉಪದೇಶಕ್ಕಿಂತ ಒಂದು ಗುಲಗಂಜಿಯಷ್ಟು ಆಚರಣೆ ಎಷ್ಟೋ ಮೇಲು. ಹಿಂದೂ ಧರ್ಮದಷ್ಟು ಉದಾತ್ತ ತತ್ತ್ವಗಳನ್ನು ಹೇಳುವ ಇನ್ನೊಂದು ಧರ್ಮವಿಲ್ಲ. ಆದರೆ ಪ್ರತ್ಯಕ್ಷ ಆಚರಣೆಯಲ್ಲಿ ಹಿಂದೂಗಳಷ್ಟು ಉದಾಸೀನ ಜನಾಂಗ ಇನ್ನೊಂದಿಲ್ಲ’.
ಅನುಷ್ಠಾನಪ್ರಧಾನವಾದ ಧರ್ಮ ಮಾತ್ರ ಒಂದು ಅಪೂರ್ವ ಜೀವಂತ ಶಕ್ತಿಯಾಗಿ ಉಳಿಯಬಲ್ಲದು. ವೈಯಕ್ತಿಕ ಹಾಗೂ ಸಾಮಾಜಿಕ ಬದುಕಿನಲ್ಲಿ ಸುಖ, ಶಾಂತಿ, ನೆಮ್ಮದಿಯನ್ನು ತರಬಲ್ಲದು, ಬಾಳನೌಕೆಗೆ ದಾರಿದೀಪವಾಗಬಲ್ಲದು. ಯಾವ ಧರ್ಮದ ಅನುಯಾಯಿಗಳು ನಿತ್ಯಜೀವನದಲ್ಲಿ ಅನುಷ್ಠಾನ ವಿಹೀನರಾಗುತ್ತಾರೊ, ಆ ಧರ್ಮ ಕ್ರಮೇಣ ಶಿಥಿಲವಾಗುತ್ತದೆ. ಪ್ರಸಿದ್ಧ ಜೀವವಿಜ್ಞಾನಿ ಲಾಮಾರ್ಕ್ ಹೇಳುವಂತೆ ‘ಬಳಕೆಯಲ್ಲಿ ಇಲ್ಲದ್ದು ತಾನಾಗಿ ನಶಿಸಿಹೋಗುತ್ತದೆ’. ಧರ್ಮದ ಅವನತಿಗೆ ಮುಖ್ಯಕಾರಣವೆಂದರೆ ಧರ್ಮದ ತಿರುಳಾದ ಸತ್ಯ ಮತ್ತು ಪ್ರಾಮಾಣಿಕತೆಗಳ ಕೊರತೆ. ಸಾವಿರಾರು ವರ್ಷಗಳ ಆಘಾತಗಳಿಂದ ಸನಾತನ ಧರ್ಮ ಉಳಿದುಕೊಂಡು ಬಂದಿರುವುದು ನೈತಿಕಬಲದಿಂದ. ಯಾವಾಗ ಧರ್ಮವನ್ನು ಕೇವಲ ಕಂದಾಚಾರಗಳಿಗೆ ಸೀಮಿತಗೊಳಿಸಿ ನೈತಿಕತೆಗೆ ಪ್ರಾಧಾನ್ಯ ನೀಡುವುದಿಲ್ಲವೊ ಆಗ ನಿಜವಾದ ಧರ್ಮ ಹಿಮ್ಮೆಟ್ಟುತ್ತದೆ.
ಇಂತಹ ಶೋಚನೀಯ ಪರಿಸ್ಥಿತಿಯನ್ನು ನಾವಿಂದು ಎದುರಿಸುತ್ತಿದ್ದೇವೆ. ಬದುಕನ್ನು ಶ್ರೀಮಂತಗೊಳಿಸುವ, ಅದಕ್ಕೊಂದು ಅರ್ಥ ನೀಡುವ ಮೌಲ್ಯಾಧಾರಿತ ಸನಾತನಧರ್ಮದ ಅನುಷ್ಠಾನದ ಕೊರತೆಯ ಬರಗಾಲವನ್ನು ಯುವಜನಾಂಗ ಇದೀಗ ಎದುರಿಸುತ್ತಿದೆ. ಇದಕ್ಕೆ ಕಾರಣವೇನು? ಧಾರ್ವಿುಕ ಶಿಕ್ಷಣದ ಕೊರತೆ ಅಥವಾ ತಿಳಿವಳಿಕೆಯ ಅಭಾವವೇ? ಉದಾತ್ತ ಆಧ್ಯಾತ್ಮಿಕ ಚಿಂತನೆಗಳ ಅಲಕ್ಷ್ಯವೇ? ಅಜ್ಞಾನವೇ? ಅಥವಾ ಆಚರಣೆಗೆ ತರಲು ಬೇಕಾದ ಯೋಗ್ಯ ತರಬೇತಿಯ ಕೊರತೆಯೇ? ಸ್ವಲ್ಪ ಸಾವಧಾನದಿಂದ ಯೋಚಿಸಬೇಕಾದ ವಿಷಯವಿದು.
ವಿದ್ಯಾವಂತ ಭಾರತೀಯರೆನಿಸಿಕೊಂಡವರಲ್ಲಿ್ಲ ನಮ್ಮ ಸಂಸ್ಕೃತಿಯ ಹಿರಿಮೆಯ ಜ್ಞಾನ ಮನೆಮಾಡಿದೆಯೇ? ಆಧ್ಯಾತ್ಮಿಕ ಅನುಷ್ಠಾನವನ್ನು ಕುರಿತ ಚಿಂತನೆ ನಮ್ಮಲ್ಲಿ ಬೇರೂರಿದೆಯೆ? ಈ ದಿಸೆಯಲ್ಲಿ ಹಿಂದುಳಿದ, ಗ್ರಾಮಾಂತರ ಅನಕ್ಷರಸ್ಥ ಬಡಕುಟುಂಬಗಳಷ್ಟೇ ಏಕೆ, ಪಟ್ಟಣದ ವಿದ್ಯಾವಂತ ಯುವಜನತೆ ಕೂಡ ಯಾವುದೇ ಆಧ್ಯಾತ್ಮಿಕ ಮಾರ್ಗದರ್ಶನ, ಆಧಾರ, ಅವಲಂಬನೆಯಿಲ್ಲದೆ, ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಲಾಗದ ಅತಂತ್ರ ಸ್ಥಿತಿಯಲ್ಲಿದ್ದಾರೆ ಎನ್ನುವುದು ತುಂಬ ವಿಷಾದಕರ.
ನಮ್ಮ ಅನುಪಮ ಸಂಸ್ಕೃತಿ ಕುರಿತಂತೆ ಅಪಾರ ಪ್ರಮಾಣದಲ್ಲಿ ವಿಫಲತೆಗಳೇ ತಾಂಡವವಾಡುತ್ತಿರುವುದನ್ನು ದೇಶದ ಎಲ್ಲೆಡೆ ಕಾಣುತ್ತಿದ್ದೇವೆ. ಈ ಸಾಂಸ್ಕೃತಿಕ ಸಂಪತ್ತನ್ನು ಜನಸಮುದಾಯ ಕಳೆದುಕೊಂಡು, ಅದನ್ನು ಮತ್ತೆ ಪಡೆಯಲಾಗದ ಒಂದು ಅಪಾಯದ ಅಂಚನ್ನು ತಲುಪಲಿದ್ದೇವೆ. ಆದ್ದರಿಂದ ಈಗಲಾದರೂ ಎಚ್ಚೆತ್ತುಕೊಳ್ಳುವುದು ಅನಿವಾರ್ಯ; ಅತ್ಯಗತ್ಯ.
ಯುವಜನತೆಯ ಹೊಣೆಗಾರಿಕೆ: ಧರ್ಮವಾದರೋ ಸೂರ್ಯನ ಕಿರಣದಂತೆ, ತಂಗಾಳಿಯ ತಂಪಿನಂತೆ. ಯಾವುದೇ ತಾರತಮ್ಯವಿಲ್ಲದೆ ಎಲ್ಲರಿಗೂ ಇದು ದಕ್ಕಬೇಕು. ದೇಶದ ಸಮಸ್ತ ಬಾಂಧವರಿಗೆ ಇದು ಉಪಲಬ್ಧವಾಗಬೇಕು. ಸರಿಯಾದ ಧಾರ್ವಿುಕ ಶಿಕ್ಷಣದ ಮೂಲಕ ಇದನ್ನು ಸಾಮಾನ್ಯರ ಸ್ತರಕ್ಕೊಯ್ದು, ಎಲ್ಲರಿಗೂ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಬೋಧಿಸಿ, ನಾಡಜನರನ್ನು ಅನುಷ್ಠಾನ ಪರರಾಗುವಂತೆ ಪ್ರೇರೇಪಿಸಬೇಕು. ಈ ಕಾರ್ಯಸೂಚಿ ಇಂದಿನ ಅತ್ಯಗತ್ಯಗಳಲ್ಲೊಂದೆನಿಸುತ್ತದೆ.
ಆಧುನಿಕ ಜೀವನದ ಅನೇಕ ಜ್ವಲಂತ ಸಮಸ್ಯೆ, ಸವಾಲುಗಳಿಗೆ ಸಮಾಧಾನ ನೀಡಬಲ್ಲ ಸಾಮರ್ಥ್ಯ ನಮ್ಮ ಪ್ರಾಚೀನ ವಿಶ್ವಮಾನ್ಯ ಉದಂಥಗಳಿಗಿದೆ. ಸಮಗ್ರ ಜೀವನದೃಷ್ಟಿ, ವಿಶಾಲ ಮನೋಭಾವ ಮತ್ತು ವೈಶಿಷ್ಟ್ಯಪೂರ್ಣ ಆಧ್ಯಾತ್ಮಿಕತೆಯ ಹಿನ್ನೆಲೆಯನ್ನು ಗೀತೆ, ಉಪನಿಷತ್, ರಾಮಾಯಣ, ಮಹಾಭಾರತ ಮೊದಲಾದ ಮಹಾಕೃತಿಗಳಲ್ಲಿ ಸ್ಪಷ್ಟವಾಗಿ ಕಾಣಬಹುದು. ಉಪನಿಷತ್ತು ಮತ್ತು ಭಗವದ್ಗೀತೆ- ಇವುಗಳು ವೈಚಾರಿಕ ಹಿನ್ನೆಲೆಯನ್ನು ಹೊಂದಿದ್ದು, ವಿಜ್ಞಾನ ಮತ್ತು ಆಧುನಿಕತೆಯನ್ನು ಮೇಳೈಸಿಕೊಳ್ಳಬಲ್ಲ ಪೂರ್ಣದೃಷ್ಟಿ್ಟ ಹೊಂದಿರುವ, ಪ್ರಗತಿಪರವಾದ ಈ ನಮ್ಮ ಸನಾತನ ಧರ್ಮ ವಿಶ್ವದಲ್ಲೇ ಅನುಪಮವಾಗಿದೆ.
ಅನುಕಂಪಾಧಾರಿತ ಅರ್ಥಪೂರ್ಣ ಧರ್ಮದ ಅನುಷ್ಠಾನ: ಭಗವಂತನು ನಮ್ಮ ಅಂತರ್ಯಾಮಿ; ಬಾಳಿನ ಆಧಾರ, ಸರ್ವಸ್ವವೂ ಅವನೇ ಆಗಿದ್ದಾನೆ. ಭಗವಂತನ ಮಹಾತ್ಮ್ಯೆಯನ್ನು ಶ್ರದ್ಧೆಯಿಂದ ತಿಳಿದು ಅವನ ಯಾವುದೇ ನಾಮ, ರೂಪ, ದೈವೀಗುಣದ ಆರಾಧನೆಯನ್ನು ಪ್ರತಿದಿನ ಮಾಡಬೇಕು. ಧ್ಯಾನ ಭಗವದಾರಾಧನೆಯ ಒಂದು ರೀತಿ. ಧ್ಯಾನದ ನಿಯಮಿತ ಅಭ್ಯಾಸದಿಂದ ಮನಸ್ಸು ಸಂಸ್ಕಾರಗೊಂಡು ಶುದ್ಧವಾಗುತ್ತದೆ. ಅಂತರಂಗ ದೈವತ್ವದತ್ತ ಹರಿಯುತ್ತದೆ. ಮನಸ್ಸಿನ ಒಳಗಣ್ಣನ್ನು ತೆರೆಯಲು ಧ್ಯಾನವೇ ಹೆದ್ದಾರಿ.
ರೂಪಧ್ಯಾನವೆಂದರೆ ಭಗವಂತನ ರೂಪವನ್ನು ಕಲ್ಪಿಸಿಕೊಂಡು ಅದನ್ನೇ ನಿರಂತರ ಸ್ಮರಿಸುವ ವಿಧಾನ. ಗುಣಧ್ಯಾನವೆಂದರೆ ಸ್ತೋತ್ರಗಳ ಮೂಲಕ ಭಗವಂತನ ಆರಾಧನೆ. ವಿಷ್ಣುಸಹಸ್ರನಾಮ, ಭಗವದ್ಗೀತೆ, ರಾಮರಕ್ಷಾಸ್ತೋತ್ರ ಮುಂತಾದ ಸ್ತೋತ್ರ ಸಾಹಿತ್ಯವನ್ನು ನಿತ್ಯವೂ ಪಾರಾಯಣ ಮಾಡಿ ಮನನ ಮಾಡಬೇಕು.
ನಾಮಜಪವೆಂದರೆ ಭಗವಂತನ ಯಾವುದೋ ಒಂದು ಹೆಸರನ್ನು ಪದೇಪದೆ ಉಚ್ಚರಿಸುತ್ತ, ಅವನ ಸ್ಮರಣೆಯನ್ನು ಮನಸ್ಸಿನಲ್ಲಿಯೇ ಮಾಡುವ ಪ್ರಕ್ರಿಯೆ. ಈ ಕೆಳಗೆ ಸೂಚಿಸಿರುವ ಧಾರ್ವಿುಕ ಅನುಷ್ಠಾನದ ಕ್ರಮವನ್ನು ಮನೆಯ ಸಂಪ್ರದಾಯದ ಜತೆ ಅಳವಡಿಸಿಕೊಂಡು ಅದನ್ನು ನಿಮ್ಮದೇ ಆದ ರೀತಿಯಲ್ಲಿ ಆಚರಿಸಬಹುದು. ಮುಖ್ಯವಾಗಿ ಬೇಕಾಗಿರುವುದೆಂದರೆ ಧರ್ಮಶ್ರದ್ಧೆ, ಆತ್ಮವಿಶ್ವಾಸ ಹಾಗೂ ಅನುಷ್ಠಾನದ ಅವಶ್ಯಕತೆಯ ಬಗ್ಗೆ ತಿಳಿವಳಿಕೆ. ಆ ವಿಧಾನ ಹೀಗಿದೆ:
1. ಎಲ್ಲರ ಒಳಿತಿಗಾಗಿ ಪ್ರಾರ್ಥನೆ.2. ದೇವ-ದೇವಿಯರ ಪ್ರಾರ್ಥನೆ.3. ತೇಜಸ್ಸು, ಓಜಸ್ಸು ಮತ್ತು ಆತ್ಮಶಕ್ತಿ ಕುರಿತ ಪ್ರಾರ್ಥನೆ.4. ಭಾವಪೂರಿತವಾದ ದೇವರ ನಾಮಗಳು.5. ಬುದ್ಧಿಯ ಜಾಗೃತಿಗಾಗಿ ಗಾಯತ್ರಿ ಉಪಾಸನೆ.6. ಇಷ್ಟ ದೇವತೆಯ ನಾಮಸ್ಮರಣೆ.
ಆದರೆ ಭಗವಂತನ ನಿಜವಾದ ಆರಾಧನೆಯೆಂದರೆ ಅವನ ಮಕ್ಕಳ ಸೇವೆ ಎಂದು ಸ್ವಾಮಿ ವಿವೇಕಾನಂದರು ಹೇಳುತ್ತಾರೆ. ಅವರು ಕಷ್ಟ, ದುಃಖದಿಂದ ಬಳಲುತ್ತಿರುವವರಿಗೆ ‘ಶಿವ ಭಾವದಲ್ಲಿ ಜೀವ ಸೇವೆ’ ಎಂಬ ನಿಃಸ್ವಾರ್ಥ ಭಾವದಿಂದ ಸೇವೆ ಮಾಡಬೇಕು ಎಂದು ಎಲ್ಲರಿಗೂ ಕರೆಕೊಟ್ಟಿದ್ದಾರೆ.
ಈ ನಿಟ್ಟಿನಲ್ಲಿ ಸ್ವಾಮಿ ವಿವೇಕಾನಂದರ ತೂರ್ಯವಾಣಿಗೆ ಒಮ್ಮೆ ಕಿವಿಗೊಡೋಣ: ‘ಪ್ರತಿಯೊಂದು ರಾಷ್ಟ್ರವೂ ನಿರ್ವಹಿಸಬೇಕಾದ ದೈವದತ್ತ ಕಾರ್ಯ ಒಂದಿದೆ. ನೀಡಬೇಕಾದ ಸಂದೇಶ ಒಂದುಂಟು; ಪೂರೈಸಬೇಕಾದ ಜೀವನಧ್ಯೇಯವೊಂದುಂಟು. ಹೀಗಾಗಿ ನಮ್ಮ ಜನಾಂಗಕ್ಕೊಂದು ನಿಗದಿಯಾಗಿರುವ ಆಧ್ಯಾತ್ಮಿಕ ಹೊಣೆಗಾರಿಕೆ ಇದೆಯೆಂಬುದನ್ನು ನಾವು ಮನಗಾಣಬೇಕು’.
‘ಭಗವಂತನ ಯೋಜನೆಯಂತೆ ಹಿಂದೂಗಳು ಅತ್ಯಂತ ಹೊಣೆಗಾರಿಕೆಯ ಸ್ಥಾನದಲ್ಲಿ ನಿಂತಿದ್ದೇವೆ. ಪಾಶ್ಚಾತ್ಯ ರಾಷ್ಟ್ರಗಳು ಅಧ್ಯಾತ್ಮದ ನೆರವಿಗಾಗಿ ನಮ್ಮ ಕಡೆಗೆ ಧಾವಿಸುತ್ತಿವೆ. ಹೀಗಾಗಿ ಮಾನವ ಬದುಕಿನ ಗೊತ್ತುಗುರಿಗಳನ್ನು ಪ್ರಪಂಚದ ಜನರಿಗೆ ತಿಳಿಸಿಕೊಡುವ ನೈತಿಕ ಹೊಣೆಗಾರಿಕೆ ಭಾರತದ ಮಕ್ಕಳಾದ ನಮ್ಮ ಹೆಗಲಿಗೇ ಬಂದಿದೆ. ಇಡೀ ಪ್ರಪಂಚವನ್ನು ಭಾರತದ ಆಧ್ಯಾತ್ಮಿಕತೆ ಜಯಿಸಬೇಕೆಂಬುದೇ ನನ್ನ ಏಕಮಾತ್ರ ಬಯಕೆ’.
ಈ ಸಂಕಲ್ಪ ನಮ್ಮದಾಗಲಿ: ಸ್ವಾಮಿ ವಿವೇಕಾನಂದರು ಭಾರತವು ಧರ್ಮ ಮತ್ತು ಆಧ್ಯಾತ್ಮಿಕತೆಗಳ ತವರೂರು ಎಂಬುದನ್ನು ಜಗತ್ತಿಗೆ ತೋರಿಸುವುದರ ಮೂಲಕ ಜನಮಾನಸದಲ್ಲಿ ಪ್ರಖರವಾದ ಆತ್ಮಗೌರವವನ್ನು ಜಾಗೃತಗೊಳಿಸಿದ್ದಾರೆ. ಅಷ್ಟೇ ಅಲ್ಲ, ಜನರ ಹೃದಯಗಳಿಗೆ ಸ್ಪೂರ್ತಿ, ಉತ್ಸಾಹಗಳನ್ನು ಎರೆದು ನಮ್ಮ ಸಾಂಸ್ಕೃತಿಕ ಸಂಪತ್ತನ್ನು ಕಾಪಾಡಿಕೊಳ್ಳಲು ಕಳಕಳಿಯ ಕರೆಯನ್ನಿತ್ತಿದ್ದಾರೆ. ಸ್ವಾಮಿ ವಿವೇಕಾನಂದರ ಜೀವನ ದರ್ಶನ ಹಾಗೂ ಜೀವನೋದ್ದೇಶಗಳಿಗೆ ನಾವು ನಿಷ್ಠರಾಗಿರಬೇಕಾದರೆ, ರಾಷ್ಟ್ರಪ್ರಜ್ಞೆಯನ್ನು ಮತ್ತೆ ತೇಜಸ್ವಿಗೊಳಿಸುವ ಸಂಕಲ್ಪವನ್ನು ಮಾಡಬೇಕು.
ಪರಮ ಪುರುಷಾರ್ಥ: ನಮ್ಮ ರಾಷ್ಟ್ರ ಮಾತ್ರ ಅಲ್ಲ, ಮಾನವಕೋಟಿಯನ್ನೇ ಉದ್ಧಾರಗೊಳಿಸುವಷ್ಟು ಚೈತನ್ಯವನ್ನುಳ್ಳ ಜೀವನಾದರ್ಶಗಳು ನಮ್ಮ ಆಧ್ಯಾತ್ಮಿಕ ಸಂಪತ್ತಿನಲ್ಲಿವೆ. ಇಂತಹ ಉದಾತ್ತತೆಯನ್ನು ಸಾಕಾರಗೊಳಿಸುವಲ್ಲಿ ನಮ್ಮ ಎಲ್ಲ ಶಕ್ತಿಸಾಹಸಗಳನ್ನೂ ಮುಡುಪಾಗಿಡುವುದಕ್ಕಿಂತ ಹೆಚ್ಚಿನ ಪುರುಷಾರ್ಥ ಮತ್ತಾವುದಿದೆ? ಜೀವನ ಸಾರ್ಥಕ್ಯ ಹಾಗೂ ಪರಿಪೂರ್ಣತೆಗಳನ್ನು ತಂದು ಕೊಡುವಂಥ ಈ ಬಗೆಯ ನಿಲುವಿಗಿಂತ ಮಿಗಿಲಾದ ಮಹತ್ಕಾರ್ಯ ಬೇರಾವುದಿದೆ? ನಾವು ಧನಗ್ರಾಹಿ ಓಟದ ಜೀವನದ ಒತ್ತಡದಲ್ಲಿ ಸಿಲುಕಿದ್ದೇವೆ. ಪಾಶ್ಚಿಮಾತ್ಯ ಕೊಳ್ಳುಬಾಕ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾಗಿದ್ದೇವೆ. ಮನೋವೈಕಲ್ಯಕ್ಕೆ ಸಿಲುಕಿ ಕ್ಷಣಿಕ ಮನರಂಜನೆಯನ್ನೇ ನಿಜವಾದ ಸಂತೋಷ ಎಂದು ಭ್ರಮಿಸಿದ್ದೇವೆ. ನಿಜಧರ್ಮದ ಒಳಮರ್ಮವನ್ನು ನಾವು ತಿಳಿದುಕೊಂಡಿಲ್ಲ. ಧರ್ಮವು ಚೇತೋಹಾರಿ ಎಂದು ತಿಳಿದುಕೊಂಡಿಲ್ಲ. ನಮ್ಮದು ಸಮಾಜಮುಖಿಯಲ್ಲದ ಸ್ವಾರ್ಥಪರ ಬದುಕು. ಇಂತಹ ಬದುಕಿನ ಜಾಡ್ಯವನ್ನು ಒಮ್ಮೆ ಕೊಡವಿಕೊಳ್ಳಬೇಕು. ಅದರ ಬಗ್ಗೆ ಕ್ಷಣಕಾಲ ಯೋಚಿಸಿ ನೋಡಬೇಕು.
ಸಾಮಾನ್ಯ ಉಪಾಸನೆ: ಪ್ರತಿಯೊಬ್ಬ ಭಾರತೀಯನೂ ಮನೆ-ಮನೆಯಲ್ಲಿ ವ್ಯಕ್ತಿಗತವಾಗಿ ಪ್ರತಿದಿನ ಸರಳ ರೀತಿಯಲ್ಲಿ ಭಗವಂತನನ್ನು ಉಪಾಸನೆ ಮಾಡುವಂತಾಗಬೇಕು. ಮನೆಯ ದೇವರ ಕೋಣೆಯಲ್ಲಿ ಅಥವಾ ದೇವರ ಭಾವಚಿತ್ರದ ಎದುರಿಗೆ ಅಥವಾ ಯಾವುದೇ ಯೋಗ್ಯ ಸ್ವಚ್ಛ ಸ್ಥಳದಲ್ಲಿ ಕುಳಿತು ಈ ಉಪಾಸನೆಯನ್ನು ಎಲ್ಲರೂ ಮಾಡಬಹುದು. ಸನಾತನ ಧರ್ಮದಲ್ಲಿ ವೈವಿಧ್ಯಮಯ ಸಂಪ್ರದಾಯಗಳು, ಮತಶ್ರದ್ಧೆಗಳು ಇವೆ, ನಿಜ. ಆದರೆ, ಸಾಮಾನ್ಯ ಉಪಾಸನಾ ಪ್ರಣಾಳಿಯನ್ನು ಮಾದರಿಯಾಗಿ ಇಟ್ಟುಕೊಂಡು ಭಿನ್ನ ಭಿನ್ನ ಸಾಂಪ್ರದಾಯಿಕ ಮನೋಧರ್ಮದ ಅನುಯಾಯಿಗಳು ಶ್ರದ್ಧೆಗೆ ಪೂರಕವಾಗಿ ಶ್ಲೋಕಗಳು, ಸ್ತೋತ್ರಗಳು ಮತ್ತು ಇಷ್ಟದೇವತಾ ಪ್ರಾರ್ಥನೆಗಳನ್ನು ಅಳವಡಿಸಿಕೊಂಡು, ತಮ್ಮದೇ ಆದ ಒಂದು ಉಪಾಸನಾ ಮಾರ್ಗದರ್ಶಿಕೆಯನ್ನು ತಯಾರುಮಾಡಿಕೊಳ್ಳಬಹುದು. ಇದರಿಂದ ನೆಮ್ಮದಿಯೂ, ಸಂಸ್ಕೃತಿ ಅನುಷ್ಠಾನದ ಸಾರ್ಥಕತೆಯೂ ಲಭಿಸುವುದರಲ್ಲಿ ಅನುಮಾನವಿಲ್ಲ. ನಮ್ಮ ಆಧ್ಯಾತ್ಮಿಕ ಸಂಪತ್ತಿನೆಡೆಗೆ ಮರಳಲು ಇದು ಸಕಾಲ.
(ಲೇಖಕರು ಮೈಸೂರು ಶ್ರೀರಾಮಕೃಷ್ಣ ಆಶ್ರಮದ ಅಧ್ಯಕ್ಷರು)