

ಲಕ್ಷಾಂತರ ಜನರ ಸಂಘಟನಾತ್ಮಕ ಹೋರಾಟ, ತ್ಯಾಗ-ಬಲಿದಾನಗಳಿಂದ ಗಳಿಸಿದ ಸ್ವಾತಂತ್ರ್ಯಕ್ಕೆ ಈ ವರ್ಷ ಅಮೃತೋತ್ಸವದ ಸಂಭ್ರಮ. ನವಭಾರತದ ಶಕೆ ಪ್ರಾರಂಭವಾಗಿ 75 ಸಂವತ್ಸರಗಳು ಸಂದಿವೆ. ಅಮೃತಮಹೋತ್ಸವದ ಹೊಸ್ತಿಲಲ್ಲಿ ನಿಂತು ಆ ನೆನಪುಗಳನ್ನು ಮನನ ಮಾಡಿದರೆ ದೇಶಕ್ಕೆ ಸ್ವಾತಂತ್ರ್ಯ ದೊರೆಯಲು ಸರ್ವಸ್ವವನ್ನೇ ಅರ್ಪಿಸಿದ ಅನೇಕ ಮಹಾನ್ ವ್ಯಕ್ತಿಗಳ ನೆನಪು ಸ್ಮೃತಿಪಟಲದಲ್ಲಿ ಹಾದು ಹೋಗುತ್ತದೆೆ. ಅದೊಂದು ಮರೆಯಲಾಗದ ಹಾಗೂ ಮರೆಯಬಾರದ ಇತಿಹಾಸ. ಹಿರಿಯರ ಐತಿಹಾಸಿಕ ವಿಜಯದ ಕೊಡುಗೆಯೇ ನಮ್ಮ ವರ್ತಮಾನದ ಸಂಭ್ರಮ.
ಏ ಮೇರೇ ವತನ್ ಕೆ ಲೋಗೋ
ತುಮ್ ಖುಬ್ ಲಗಾಲೋ ನಾರಾ
ಯೇ ಶುಭ ದಿನ್ ಹೈ ಹಮ್ ಸಬ್ ಕಾ
ಲಹರಾ ಲೋ ತಿರಂಗಾ ಪ್ಯಾರಾ...
ಏ ಮೇರೆ ವತನ್ ಕೆ ಲೋಗೋ
ಜರಾ ಆಂಖ್ ಮೆ ಭರ್ ಲೋ ಪಾನಿ
ಜೋ ಶಹೀದ್ ಹುವೇ ಹೇ ಉನ್ಕೀ
ಜರಾ ಯಾದ್ ಕರೋ ಕುರಬಾನಿ...
(ಓ ನನ್ನ ದೇಶವಾಸಿಗಳೇ, ನೀವು ಜೋರಾಗಿ ಹೇಳಿರಿ ಜೈಕಾರ. ಇದು ಶುಭದಿನವಾಗಿದೆ ನಮ್ಮೆಲ್ಲರಿಗೆ. ಪ್ರೀತಿಯ ತ್ರಿವರ್ಣ ಧ್ವಜವನ್ನು ಹಾರಿಸಿರಿ... ಓ ನನ್ನ ದೇಶವಾಸಿಗಳೇ ನಿಮ್ಮ ಕಣ್ಣಂಚಲಿ ನಾಲ್ಕು ಹನಿ ನೀರು ತುಂಬಲಿ. ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಆ ವೀರರ ಬಲಿದಾನವನ್ನು ಸ್ಮರಿಸೋಣ)
ಈ ಹಾಡಿನ ಸಾಲುಗಳು ನನಗೆ ಪ್ರಿಯವಾದುದು. ಭಾರತ ಮತ್ತು ಚೀನಾ ಯುದ್ಧ ಮುಗಿದ ಬಳಿಕ ಲತಾ ಮಂಗೇಶ್ಕರ್ ಇದನ್ನು ಹಾಡಿದ್ದರು. ಕವಿ ಪ್ರದೀಪ್ ರಚಿಸಿದ ಈ ಹಾಡನ್ನು ಪ್ರತಿ ಬಾರಿ ಆಲಿಸಿದಾಗಲೂ ಪ್ರಧಾನಿ ಜವಾಹರ್ಲಾಲ್ ನೆಹರು ಅವರ ಕಣ್ಣಾಲಿಗಳು ತೇವಗೊಳ್ಳುತ್ತಿದ್ದವಂತೆ. ಆ ಹಾಡು ಜನಸಾಮಾನ್ಯರಲ್ಲೂ ದೇಶಪ್ರೇಮ ಉಕ್ಕಿಸಿತು. ದೇಶಕ್ಕಾಗಿ ಬಲಿದಾನ ನೀಡಿದ ಸೈನಿಕರಿಗೆ ಗೌರವ ಸಲ್ಲಿಸಲು ಈ ಹಾಡನ್ನು ರಚಿಸಲಾಗಿತ್ತು. ಆದರೆ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಸೈನಿಕರ ಜೊತೆಗೆ ಸ್ವಾತಂತ್ರ್ಯಸಂಗ್ರಾಮದಲ್ಲಿ ಪ್ರಾಣಾರ್ಪಣೆ ಮಾಡಿದ, ಹೋರಾಡಿದ ನಮ್ಮ ಹಿರಿಯರಿಗೆ ಸಮರ್ಪಿಸಲು ನಾನು ಬಯಸುತ್ತಿದ್ದೇನೆ.
ಆ ಕಾಲದಲ್ಲಿ ನಮ್ಮ ಹಿರಿಯರು ಮಾಡಿದ ತ್ಯಾಗ ಎಷ್ಟಿತ್ತು, ಅವರ ಬದುಕಿನ ಸುಖ-ದುಃಖ, ಬವಣೆ ಇತ್ಯಾದಿಗಳೆಲ್ಲ ಹೇಗಿತ್ತು ಎನ್ನುವುದನ್ನು ತಿಳಿದುಕೊಳ್ಳದಿದ್ದರೆ ಇಂದಿನ ಸುಖಕ್ಕೆ ಬೆಲೆ ಇಲ್ಲ.
ನಮ್ಮ ದೇಶ ಸಾವಿರಾರು ವರ್ಷಗಳನ್ನು ಕಠಿಣ ಪರಿಸ್ಥಿತಿಯಲ್ಲಿ ಕಳೆದಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ಯಾವುದೇ ರೀತಿಯ ಪ್ರಗತಿಯನ್ನು ಕಾಣುವ ಸಂದರ್ಭ ಇರಲಿಲ್ಲ. ಮತ್ತು ಅನೇಕ ಹಳ್ಳಿಗಳಲ್ಲಿ ಉಡಲು ಬಟ್ಟೆ, ಉಣ್ಣಲು ಅನ್ನ ಮತ್ತು ಶಿಕ್ಷಣ ಈ ಮೂರರ ಕೊರತೆಯಿತ್ತು. ಹಾಗಾಗಿ ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಚಿಂತನೆಗೆ ಅವಕಾಶ ಇರಲಿಲ್ಲ. ಹೆಚ್ಚಿನ ಕುಟುಂಬಗಳಲ್ಲಿ ಕುಲಕಸುಬನ್ನು ಮಾಡುತ್ತಿದ್ದರು. ಕೃಷಿಕರಿಗೆ, ಕೃಷಿಯ ವಸ್ತುಗಳಿಗೆ ಬೆಲೆ ಇರಲಿಲ್ಲ. ಮತ್ತು ಯಾವುದೇ ವಸ್ತುವನ್ನು ತಯಾರಿಸುವಂಥ ಗುಡಿ ಕೈಗಾರಿಕೆಗಳಿಗೂ ಅವಕಾಶ ಇರಲಿಲ್ಲ. ಒಂದು ಮುಡಿ (42 ಕಿಲೋ) ಅಕ್ಕಿಗೆ ಒಂದು-ಎರಡು ರೂ. ಇತ್ತು ಎಂಬ ಮಾತುಗಳನ್ನು ನಾವು ಕೇಳಿದ್ದೇವೆ. ಒಂದು ರೂಪಾಯಿಯನ್ನು ನೂರು ಪೈಸೆಗಳಾಗಿ ವಿಂಗಡಿಸಿದರೆ, ಒಬ್ಬರಿಗೆ ತಿಂಗಳಿಗೆ 15 ರೂ. ಸಂಬಳವಾದರೆ ಎಷ್ಟು ಆ ಹದಿನೈದು ರೂ. ವಿಭಜಿಸಿದರೂ ಅವರ ಜೀವನಮಟ್ಟ ಹೇಗಿತ್ತು ಎನ್ನುವುದನ್ನು ಊಹಿಸಬಹುದು. ಅಷ್ಟು ಕಷ್ಟದ ದಿನಗಳನ್ನು ಹಿರಿಯ ತಲೆಮಾರಿನವರು ಕಳೆದಿದ್ದಾರೆ.
ಬ್ರಿಟಿಷರು ವಿಶ್ವದಾದ್ಯಂತ ಅನೇಕ ವಸಾಹತುಗಳನ್ನು ಮಾಡಿದರು. ಆದರೆ ಆಡಳಿತಾತ್ಮಕ ವ್ಯವಹಾರ, ಸಂಪತ್ತಿನ ವಿಚಾರಕ್ಕೆ ಬಂದರೆ ಭಾರತದಲ್ಲಿ ದೊರೆತಷ್ಟು ಹಿಡಿತ, ಅವರಿಗೆ ಬೇರೆಲ್ಲಿಯೂ ಸಿಗಲಿಲ್ಲ. ಇದಕ್ಕೆ ಕಾರಣ ಏನೆಂದರೆ ಭಾರತ ಎನ್ನುವಂತಹದ್ದು ಒಂದು ದೇಶ ಎನ್ನುವ ಕಲ್ಪನೆ ಇಲ್ಲಿನ ಜನರಲ್ಲಿರಲಿಲ್ಲ. ಏನಿದ್ದರೂ ರಾಜ್ಯದ ಕಲ್ಪನೆ ಮಾತ್ರ ಇಲ್ಲಿತ್ತು. ಆಯಾ ರಾಜ್ಯದ ರಾಜರ ಆಡಳಿತಕ್ಕೆ ಒಳಪಟ್ಟ ಪ್ರದೇಶದವರು ನಾವು ಎನ್ನುವ ಭಾವನೆ ಅಧಿಕವಾಗಿತ್ತು. ಪಾಶ್ಚಿಮಾತ್ಯದಿಂದ ಬಂದ ಅರಬರು, ಮೊಘಲರು ದೇಶದ ಅನೇಕ ಕಡೆಗಳಲ್ಲಿದ್ದ ರಾಜರ ಮೇಲೆಲ್ಲ ಯುದ್ಧ ಸಾರಿ, ಸಂಪತ್ತನ್ನು ಲೂಟಿ ಮಾಡಿದಾಗಲೂ ಆಯಾ ರಾಜ್ಯದ ರಾಜರುಗಳು ಹೋರಾಟ ಮಾಡಿದರೇ ಹೊರತು ಸಂಘಟಿತರಾಗಿ ಹೋರಾಟ ನಡೆದಿರಲಿಲ್ಲ. ಹಾಗಾಗಿ ಭಾರತ ದೇಶವನ್ನು ಬ್ರಿಟಿಷರು ಚೆನ್ನಾಗಿ ಲೂಟಿ ಮಾಡಿದರು. 1930ರ ದಶಕದಲ್ಲಿ ಬ್ರಿಟಿಷರ ವಿರುದ್ಧ ಸಿಡಿದೆದ್ದ ಅನೇಕ ಪ್ರತಿಭಟನಾಕಾರರನ್ನು ಬ್ರಿಟಿಷರು ಗಲ್ಲಿಗೇರಿಸಿದರು. ಚಂದ್ರಶೇಖರ ಆಜಾದ್ರಂಥವರು ಹುತಾತ್ಮರಾದರು. ಗಾಂಧೀಜಿ ನೇತೃತ್ವದಲ್ಲಿ ಮತ್ತು ಸರ್ದಾರ್ ವಲ್ಲಭಭಾಯ್ ಪಟೇಲ್, ಬಾಲಗಂಗಾಧರ ತಿಲಕ್ ಮುಂತಾದವರ ಮುಂದಾಳತ್ವದಲ್ಲಿ ದೇಶದಾದ್ಯಂತ ಸ್ವಾತಂತ್ರ್ಯ ಹೋರಾಟ ಉಗ್ರರೂಪ ತಳೆಯಿತು. ಗಣೇಶೋತ್ಸವ ಆಚರಣೆ ಮೂಲಕ ಜನರನ್ನು ಒಗ್ಗೂಡಿಸಿ, ನಾವೆಲ್ಲರೂ ಒಂದು ಎನ್ನುವ ಜಾಗೃತಿ ಮೂಡಿಸಿ, ದೇಶಪ್ರೇಮದ ಭಾವನೆಯನ್ನು ಬಿತ್ತಿದರು ತಿಲಕರು. ಪ್ರಾರಂಭದಲ್ಲಿ ಕೆಲವು ರಾಜರು ನಾವೇ ಸ್ವತಂತ್ರರು ಎನ್ನುವ ಭಾವನೆ ತಳೆದರೂ ಕೊನೆಗೆ ಅವರೂ ಈ ರಾಷ್ಟ್ರಪ್ರವಾಹಕ್ಕೆ ಸೇರಿದರು.
ಸ್ವಾತಂತ್ರ್ಯ ಸಂಗ್ರಾಮಕ್ಕೆ ಜನರನ್ನು ಒಗ್ಗೂಡಿಸಿ ಭಾರತದ ಶಕ್ತಿಯನ್ನು ಅನಾವರಣ ಮಾಡಿದವರು ಮಹಾತ್ಮ ಗಾಂಧೀಜಿ. ಒಡೆದಾಳುವ ನೀತಿಯಲ್ಲಿ ಆಳ್ವಿಕೆ ನಡೆಸಿದ ಆಂಗ್ಲರ ವಿರುದ್ಧ ಒಗ್ಗಟ್ಟಿನ ಮಂತ್ರವನ್ನು ಅನುರಣಿಸುವಂತೆ ಮಾಡಿದರು. ಭಗತ್ ಸಿಂಗ್, ಸುಭಾಷ್ಚಂದ್ರ ಬೋಸ್ರಂತಹವರು ಕ್ರಾಂತಿಕಾರಿ ನಡೆ ಮೂಲಕ ಬ್ರಿಟಿಷರ ಅಹಂಕಾರ, ಸೊಕ್ಕನ್ನು ಅಡಗಿಸಲು ಯತ್ನಿಸಿದರು. ಅಲ್ಲದೆ ಸ್ವಾತಂತ್ರ್ಯ ಪಡೆಯಲೇ ಬೇಕು ಎಂಬ ಕಿಚ್ಚಿಗೆ ಮತ್ತಷ್ಟು ಬಲ ತುಂಬಿದರು. ಸಂಪರ್ಕ ಹಾಗೂ ಸಂವಹನಗಳೆಲ್ಲ ಕಷ್ಟಕರವಾಗಿದ್ದ ಸಂದರ್ಭದಲ್ಲಿ ನೇತಾಜಿ ಐಎನ್ಎ ಕಟ್ಟಿದರು. ಹಾಗೂ ಹಲವು ಕಡೆಗಳಲ್ಲಿ ಬ್ರಿಟಿಷರ ವಿರುದ್ಧ ಸಶಸ್ತ್ರ ಹೋರಾಟವನ್ನೂ ಮಾಡಿದರು.
ಗಾಂಧೀಜಿಯವರ ಅಸಹಕಾರ ಚಳವಳಿಗೆ ಜನಬೆಂಬಲ ವ್ಯಕ್ತವಾಯಿತು. ಬಹುಶಃ ಮಹಿಳೆಯರು ಪುರುಷರಿಗೆ ಸಮಾನವಾಗಿ ಹೋರಾಟದಲ್ಲಿ ಭಾಗಿಯಾದ ಪ್ರಥಮ ಸಂದರ್ಭವೆಂದು ಸ್ವಾತಂತ್ರ್ಯ ಹೋರಾಟವನ್ನು ಪರಿಗಣಿಸಬಹುದು. ಸ್ವಾತಂತ್ರ್ಯ ಹೋರಾಟಕ್ಕೆ ನೆರವಾಗಲು ಕೌಮುದಿ ಎಂಬ ಪುಟ್ಟ ಹುಡುಗಿ ತನ್ನಲ್ಲಿದ್ದ ಚಿನ್ನದ ಆಭರಣವನ್ನು ಬಿಚ್ಚಿ ಗಾಂಧೀಜಿ ಕೈಗಿತ್ತಳಂತೆ. ಅದು ಪುಟ್ಟ ಹುಡುಗಿಯ ದೊಡ್ಡ ಸೇವೆಯಲ್ಲವೇ?
ಸ್ವಾತಂತ್ರ್ಯ ಪ್ರಾಪ್ತಿಯ ಬಳಿಕ ಸಾಕಷ್ಟು ಮಹನೀಯರು ಹಗಲು-ರಾತ್ರಿ ಎನ್ನದೆ ಶ್ರಮಿಸಿದ ಫಲವೇ ಇಂದಿನ ಸಶಕ್ತ ಭಾರತ. ಈ ಪ್ರಗತಿ ಸಾಧಿಸಲು ಕಾರಣಕರ್ತರಾದವರನ್ನು, ಬಲಿದಾನ ಮಾಡಿದ ನಮ್ಮ ಪೂರ್ವಜರನ್ನು ನಾವು ಎಂದಿಗೂ ಮರೆಯಬಾರದು. ಸ್ವತಂತ್ರ ಭಾರತದ ಕನಸು ಕಂಡು, ಬ್ರಿಟಿಷರನ್ನು ಈ ದೇಶದಿಂದ ಓಡಿಸಬೇಕು, ನಮ್ಮ ದೇಶದ ಆಡಳಿತವನ್ನು ಪ್ರಜೆಗಳೇ ವಹಿಸಿಕೊಳ್ಳಬೇಕು ಮುಂದೆ ಪ್ರಜಾಪ್ರಭುತ್ವ ಇರಬೇಕು, ಪ್ರಜಾಪ್ರಭುತ್ವದಿಂದ ಜನರ ಆಶೋತ್ತರಗಳು ಈಡೇರಬೇಕು ಎನ್ನುವುದನ್ನು ಪ್ರತಿಪಾದಿಸಿದವರು ಸ್ವತಂತ್ರ ಭಾರತದ ಮೊದಲನೇ ತಲೆಮಾರಿನವರು. ಜನರ ನಿರೀಕ್ಷೆಗಳೇನು? ಜನರ ಬದುಕಿಗೆ ಬೇಕಾದಂಥ ವ್ಯವಹಾರಗಳನ್ನು ಅವರೇ ನಿರ್ವಹಿಸುವುದು ಹೇಗೆ? ಎನ್ನುವುದನ್ನು ಅನೇಕ ಮಹನೀಯರು ಹೇಳಿಕೊಟ್ಟರು, ದಾರಿ ತೋರಿದರು. ತಮ್ಮ ಜ್ಞಾನವನ್ನು ಮುಂದಿನ ಪೀಳಿಗೆಗಾಗಿ ಧಾರೆ ಎರೆದರು.
ಭಾರತವು ಪ್ರಗತಿ ಪಥದಲ್ಲಿ ಅನೇಕ ಏಳು-ಬೀಳುಗಳನ್ನು ಕಂಡಿದ್ದು, ಪ್ರಸ್ತುತ ಜಾಗತಿಕ ಮಟ್ಟದಲ್ಲಿ ತನ್ನದೇ ವರ್ಚಸ್ಸು ಹೊಂದಿದೆ. ವೈರಿರಾಷ್ಟ್ರಗಳನ್ನು ಎದುರಿಸುವುದರ ಜೊತೆಗೆ ಭಯೋತ್ಪಾದನೆ, ಉಗ್ರಗಾಮಿ ಕೃತ್ಯಗಳನ್ನು ತಡೆಯಲು ಸಶಕ್ತವಾದ ಸೇನಾಬಲವನ್ನು ಹೊಂದಿದೆ. ಕಾರ್ಗಿಲ್ ಯುದ್ಧವನ್ನು ಜಯಿಸಿ ನಮ್ಮ ಸೇನಾಬಲದ ತಾಕತ್ತೇನು ಎಂದು ವೈರಿ ರಾಷ್ಟ್ರಗಳಿಗೆೆ ಮನದಟ್ಟು ಮಾಡಿಸಿದೆ. ಅನೇಕ ಆಂತರಿಕ ಕಲಹ, ಸಮಸ್ಯೆಗಳನ್ನು ಬಗೆಹರಿಸಿಕೊಂಡು ವಿವಿಧತೆಯಲ್ಲಿ ಏಕತೆಯನ್ನು ಸಾರುತ್ತ ಜನರಿಂದ, ಜನರಿಗಾಗಿ, ಜನರಿಗೋಸ್ಕರ ಉತ್ತಮ ಪ್ರಜಾಪ್ರಭುತ್ವ ನಾಡೆಂಬ ಹೆಗ್ಗಳಿಕೆ ಪಾತ್ರವಾಗಿದೆ. 21ನೇ ಶತಮಾನದ ವೇಳೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಬೇಕು ಎಂಬುದು ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಕನಸಾಗಿತ್ತು. ಅದನ್ನು ನನಸಾಗಿಸುವ ನಿಟ್ಟಿನಲ್ಲಿ ಭಾರತ ವಿಜ್ಞಾನ-ತಂತ್ರಜ್ಞಾನ, ಕೃಷಿ, ವ್ಯಾಪಾರ ಇತ್ಯಾದಿ ಎಲ್ಲ ಕ್ಷೇತ್ರಗಳಲ್ಲಿ ಮಹತ್ತರ ಸಾಧನೆ ಮಾಡುತ್ತಿದ್ದು, ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದೆ.
‘ಸ್ವಾತಂತ್ರ್ಯ ನಮ್ಮ ಹಕ್ಕು, ಇದಕ್ಕಾಗಿ ಬಲಿದಾನವನ್ನೂ ಮಾಡಲು ಸಿದ್ಧ’ ಎಂದು ದೇಶವಾಸಿಗಳು ಈ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದರು. ಅಂಥ ತ್ಯಾಗ, ಬಲಿದಾನಗಳನ್ನು ಮಾಡಿದ ಹಿರಿಯರೆಲ್ಲರನ್ನು ನಾವೆಲ್ಲ ಸ್ಮರಿಸಬೇಕಾಗಿದೆ. ಅವರ ತ್ಯಾಗಕ್ಕೆ ಮಹತ್ವವನ್ನು ನೀಡಿ ಅವರಿಗೆ ಧನ್ಯವಾದವನ್ನು ಅರ್ಪಿಸಬೇಕು. ಈ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹಲವರು ಪೆಟ್ಟು ತಿಂದರು, ಜೈಲು ಸೇರಿದರು, ಗುಂಡೇಟಿಗೆ ಬಲಿಯಾದರು. ಅನೇಕ ಸ್ತ್ರೀಯರು ವಿಧವೆಯರಾದರು. ಇನ್ನಷ್ಟು ಮಂದಿ ಭೂಗತವಾಗಿ ಹೋರಾಟಗಳನ್ನು ನಡೆಸಿದರು.
ಅವರು ಪಟ್ಟ ಕಷ್ಟ, ಮಾಡಿದ ತ್ಯಾಗ, ಸಾಹಸದಿಂದಾಗಿ ಇಂದಿನ ತಲೆಮಾರಿನವರೆ ಲ್ಲರೂ ನೆಮ್ಮದಿಯ, ಸುಖದ ಜೀವನ ನಡೆಸುವಂತಾಗಿದೆ. ದೇಶದಲ್ಲಿ ಕೃಷಿ, ಉದ್ಯೋಗ, ವ್ಯಾಪಾರ-ವ್ಯವಹಾರ ಇತ್ಯಾದಿಗಳಿಗೆಲ್ಲ ಸಾಕಷ್ಟು ಅವಕಾಶವಿದೆ. ಈ ಎಲ್ಲ ಅಂಶಗಳನ್ನು ಸ್ಮರಿಸಿ, ನಾವು ಹಿಂದಿನ ತಲೆಮಾರುಗಳಿಗೆ ಗೌರವ ನೀಡಬೇಕು. 75ನೇ ಸ್ವಾತಂತ್ರೊ್ಯೕತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಆಗಸ್ಟ್ 15ರ ದಿನ ಪ್ರತಿ ಮನೆಯಲ್ಲೂ ದೀಪವನ್ನು ಬೆಳಗಿ, ಅವರಿಗೆ ಧನ್ಯವಾದ ಅರ್ಪಿಸೋಣ, ಕೃತಜ್ಞತೆ, ಭಕ್ತಿಭಾವವನ್ನು ಸಮರ್ಪಿಸೋಣ. ‘ಬಹಳ ಕಷ್ಟಪಟ್ಟು ದೇಶಕ್ಕೆ ಸ್ವಾತಂತ್ರ್ಯವನ್ನು ದೊರಕಿಸಿಕೊಟ್ಟಿದ್ದೀರಿ. ಇದನ್ನು ಮುಂದಿನ ತಲೆಮಾರಿನವರಿಗೆ ಒಳ್ಳೆಯ ರೀತಿಯಲ್ಲಿ ಕೊಡುತ್ತೇವೆ. ದೇಶದ ಗೌರವವನ್ನು ಹೆಚ್ಚಿಸುತ್ತೇವೆ’ ಎಂಬ ಪ್ರತಿಜ್ಞೆ ಕೈಗೊಳ್ಳೋಣ.
(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು)