

ನಮ್ಮಲ್ಲಿ ಯಾವುದೇ ಉತ್ಪನ್ನಗಳು ಇರಲಿ, ಬಹುತೇಕ ಅವುಗಳ ಮೇಲೆ ಬಳಕೆಯ ಕೊನೆಯ ದಿನಾಂಕವನ್ನು ನಮೂದಿಸಿರುತ್ತಾರೆ. ಅದರಲ್ಲೂ, ಆಹಾರ ಪದಾರ್ಥಗಳು, ಔಷಧಗಳ ಮೇಲಿನ ಎಕ್ಸ್ಪೈರಿ ಡೇಟ್ನ್ನು ಗ್ರಾಹಕರು ತಪ್ಪದೇ ಗಮನಿಸಿತ್ತಾರೆ. ಆ ಮುಖೇನ ಎಚ್ಚರಿಕೆ ವಹಿಸುತ್ತಾರೆ. ಮತ್ತೊಂದೆಡೆ, ನಮ್ಮ ವ್ಯವಸ್ಥೆಯಲ್ಲಿ ನಗದು ಹಣದ ಹರಿವು ಹೆಚ್ಚಿದೆ. ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ವಹಿವಾಟಿಗೆ ಆದ್ಯತೆ ಸಿಗುತ್ತಿದ್ದರೂ, ನಗದು ವಹಿವಾಟು ಸಾಕಷ್ಟು ಪ್ರಮಾಣದಲ್ಲಿ ಇದೆ. ಹಲವು ಬಗೆಯ ದೈನಂದಿನ ವ್ಯವಹಾರಗಳಲ್ಲಿ ನಗದು ಕೊಡುವುದು, ತೆಗೆದುಕೊಳ್ಳುವುದು ಮಾಮೂಲಿ ಪ್ರಕ್ರಿಯೆ ಎಂಬಂತೆ ನಡೆಯುತ್ತದೆ. ಹೀಗೆ ಮುದ್ರಿತ ಮಾಡುವ, ಚಲಾವಣೆ ಮಾಡುವ ನೋಟುಗಳಿಗೂ ಒಂದು ಆಯಸ್ಸು ಎನ್ನುವುದು ಇರುತ್ತದೆ ಎಂಬುದನ್ನು ಗಮನಿಸಬೇಕು. ಅರ್ಥವ್ಯವಸ್ಥೆಯ ಸಶಕ್ತ ನಿರ್ವಹಣೆ ಮತ್ತು ಪಾರದರ್ಶಕತೆಯ ನಿಟ್ಟಿನಲ್ಲಿ ನೋಟುಗಳ ಮೇಲೂ ಕಡ್ಡಾಯವಾಗಿ ಎಕ್ಸ್ಪೈರಿ ಡೇಟ್ ನಮೂದಿಸಬೇಕು. ಅದರಿಂದ ನಿಗದಿತ ಅವಧಿಯ ನಂತರ ಅಂಥ ನೋಟುಗಳ ಬಳಕೆ ನಿಲ್ಲಿಸಲು ಸಾಧ್ಯವಾಗುತ್ತದೆ. ಈ ಬಗ್ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಕೇಂದ್ರ ಸರ್ಕಾರ ಚಿಂತನೆ ನಡೆಸಿ, ಸೂಕ್ತ ಕ್ರಮಕ್ಕೆ ಮುಂದಾಗಲಿ.
| ಪಿ.ಎನ್.ಶೇಷಾದ್ರಿ ಬೆಂಗಳೂರು