ಸಾಮಾಜಿಕ ಸ್ವಾಸ್ಥ್ಯಕ್ಕೆ ಧಕ್ಕೆ ತರುವ ಕಾರ್ಯ ನಿಲ್ಲಲಿ

Earth Safe
Published on

ಹಲವು ಕ್ಷೇತ್ರಗಳ ಅಭಿವೃದ್ಧಿಗೆ ಕೊಡುಗೆ ನೀಡಿರುವ ಒಕ್ಕಲಿಗ ಸಮುದಾಯ ಇಂದು ಎತ್ತರಕ್ಕೆ ಬೆಳೆದಿದೆ. ಆದಿಚುಂಚನಗಿರಿ ಮಠ ಒಂದೇ 500 ವಿದ್ಯಾಸಂಸ್ಥೆಗಳನ್ನು ನಡೆಸುತ್ತಿದೆ. ಶಿಕ್ಷಣ, ಆರೋಗ್ಯ, ಸಾಮಾಜಿಕ ಕ್ಷೇತ್ರದಲ್ಲಿ ಅಪ್ರತಿಮ ಸೇವೆಗೈದಿರುವ ಆದಿಚುಂಚನಗಿರಿ ಮಠ ನಾಡಿನ ಸಮಗ್ರ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿದೆ.

Tejashwi Surya
ಕಾಂಗ್ರೆಸ್​ನವರು 2013ರಲ್ಲಿ ಅಧಿಕಾರಕ್ಕೆ ಬಂದಾಗ ಲಿಂಗಾಯತರನ್ನು ಒಡೆಯಲು ಪ್ರಯತ್ನ ಮಾಡಿದರು. ಈ ಬಾರಿ ಅಧಿಕಾರಕ್ಕೆ (2023) ಬಂದ ನಂತರ ಹಿಂದೂ ಸಮಾಜದ ಮತ್ತೊಂದು ಪ್ರಮುಖ ಸಮುದಾಯ ಒಕ್ಕಲಿಗರನ್ನು ಅವಮಾನಿಸುವ ಕಾರ್ಯ ಶುರುವಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ಜಾತಿ-ಜಾತಿಗಳ, ಧರ್ಮ-ಧರ್ಮಗಳ ಮಧ್ಯೆ ಕಂದಕ ತರಲು ಯತ್ನಿಸುತ್ತದೆ.

ಸಾವಿರಾರು ವರ್ಷಗಳಿಂದ ಶ್ರಮಸಂಸ್ಕೃತಿಯಲ್ಲಿ ನಂಬಿಕೆ ಇಟ್ಟುಕೊಂಡು, ಜಗಕೆ ಅನ್ನ ನೀಡುವ ಒಕ್ಕಲಿಗರು ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಗಂಗ ಸಾಮ್ರಾಜ್ಯವನ್ನೇ ಕಟ್ಟಿ, ಸುಮಾರು 700 ವರ್ಷಗಳ ಕಾಲ ಅಧಿಕಾರ ನಡೆಸಿದರು ಮತ್ತು ಉತ್ತರದ ಬಿಹಾರ, ಗುಜರಾತ್, ಒಡಿಶಾವರೆಗೂ ಸಾಮ್ರಾಜ್ಯ ವಿಸ್ತರಿಸಿದ್ದು ಕನ್ನಡಿಗರು ಹೆಮ್ಮೆ ಪಡುವ ಸಂಗತಿ. ಜ್ಞಾನ, ವಿಜ್ಞಾನ, ಸಂಸ್ಕೃತಿ, ಸಾಹಿತ್ಯ, ಶಿಕ್ಷಣ, ಕಲೆ, ಅಕ್ಷರ ದಾಸೋಹ, ಸಿನಿಮಾ, ರಾಜಕೀಯ ಇನ್ನೂ ಅನೇಕ ಕ್ಷೇತ್ರಗಳಿಗೆ ಒಕ್ಕಲಿಗ ಸಮುದಾಯ ನೀಡಿರುವ ಕೊಡುಗೆ ಅಪಾರ.

ವಿಶ್ವ ಮಾನವತ್ವವನ್ನು ಮುಂದಿಟ್ಟ, ತಾವು ಹುಟ್ಟಿದ ಜಾತಿ-ಜನಾಂಗವನ್ನೂ ಮೀರಿ ಬೆಳೆದ ಮಹಾನ್ ಚೇತನ ಕುವೆಂಪು. ಅವರು ಒಂದು ಸಂದರ್ಭದಲ್ಲಿ ಹೇಳಿರುವ ಮಾತನ್ನು ತಿರುಚಿ, ಇನ್ಯಾವುದೋ ಸಂದರ್ಭಕ್ಕೆ ಬಳಸುವುದು ಅವರಿಗೆ ಮಾಡುವ ಅಪಮಾನ. ಕುವೆಂಪು ವಿರುದ್ಧ ಒಕ್ಕಲಿಗರಲ್ಲಿ ತಪು್ಪ ಅಭಿಪ್ರಾಯ ಮೂಡಿಸುವ ಇಂತಹ ಪ್ರಯತ್ನ ಷಡ್ಯಂತ್ರದ ಭಾಗವಲ್ಲದೆ ಮತ್ತೇನೂ ಅಲ್ಲ.

ಒಕ್ಕಲಿಗರು ಮೂಲತಃ ಕೃಷಿಕರು. ವರಕವಿ ದ.ರಾ. ಬೇಂದ್ರೆಯವರು ಒಕ್ಕಲಿಗ ಸಮುದಾಯವನ್ನು ‘ಭೂಮಿ ತಾಯಿಯ ಚೊಚ್ಚಲ ಮಕ್ಕಳು’ ಅಂತ ಕರೆದಿದ್ದಾರೆ. ಈ ಸಮುದಾಯ ಎಂಥೆಂಥ ದೊಡ್ಡ ವ್ಯಕ್ತಿಗಳನ್ನು ಸೃಷ್ಟಿ ಮಾಡಿದೆ ಎಂದರೆ, ಒಬ್ಬ ರಾಷ್ಟ್ರಕವಿಯನ್ನು, ಒಬ್ಬ ನಾಡಪ್ರಭುವನ್ನು, ಒಬ್ಬ ಮಹಾನ ಸಂತನನ್ನು ಹಾಗೂ ದೇಶಕ್ಕೆ ಒಬ್ಬ ಪ್ರಧಾನಿಯನ್ನು ನೀಡಿರುವ ಗೌರವ ಈ ಸಮುದಾಯಕ್ಕಿದೆ. ಅವರಿಗೆ ಭೂಮಿಯೇ, ಎಲ್ಲರನ್ನೂ ಒಳಗೊಂಡು ಬಾಳುವ ಬುದ್ಧಿಯನ್ನು ಕಲಿಸಿದೆ. ಆದ್ದರಿಂದಲೇ ಒಕ್ಕಲಿಗರು ಎಲ್ಲ ಸಮುದಾಯಗಳ ಜೊತೆಗೆ ಸಾಮರಸ್ಯದಿಂದ ಬದುಕುತ್ತ ಬಂದಿದ್ದಾರೆ. ತಾನು ಬೆಳೆದ ಬೆಳೆಯನ್ನು ಎಲ್ಲ ಜಾತಿಸಮುದಾಯಗಳಿಗೂ ಹಂಚಿ ಉಂಡದ್ದು ಒಕ್ಕಲಿಗರ ಉನ್ನತ ಸಂಸ್ಕಾರ. ಒಕ್ಕಲಿಗರು ಶೌರ್ಯರು, ಪರಾಕ್ರಮಿಗಳು, ಜನಾನುರಾಗಿ ಆಡಳಿತಗಾರರು, ಸತ್ಯ, ಧರ್ಮ, ನ್ಯಾಯನೀತಿಗಳ ಪ್ರತಿಪಾದಕರಾಗಿ ಇತಿಹಾಸದಲ್ಲಿ ನಿಂತವರು.

ಸಂಸ್ಕೃತಿಯ ನಿಜವಾದ ರಕ್ಷಕರು: ಶ್ರೀರಂಗಪಟ್ಟಣದ ದೇವಸ್ಥಾನವನ್ನು ಕೆಡವಿ ಮಸೀದಿ ನಿರ್ವಿುಸಿದ್ದ ಟಿಪ್ಪುವನ್ನು ಓಡಿಸಿ, ಮತ್ತೆ ಅದೇ ಗದ್ದುಗೆಯಲ್ಲಿ ಮೈಸೂರು ಆಳರಸರನ್ನು ಪ್ರತಿಷ್ಠಾಪನೆ ಮಾಡಿದ್ದು ಇದೇ ಒಕ್ಕಲಿಗರು. ತಾನು ಪ್ರಗತಿಪರ ಎಂದು ತೋರಿಸಿಕೊಳ್ಳುವುದಕ್ಕೆ ಕಾಂಗ್ರೆಸ್ ಒಂದು ಇಡೀ ಸಮುದಾಯ ಹಾಗೂ ಅದನ್ನು ಪಾಲಿಸುವ ಕೋಟ್ಯಂತರ ಜನರನ್ನು ಪದೇಪದೆ ಅವಮಾನಿಸವಂಥದ್ದು ಎಷ್ಟು ಸರಿ? ಸಾವಿರಾರು ವರ್ಷಗಳಿಂದ ಪಾಲಿಸಿಕೊಂಡು ಬಂದಿರುವ ಸಂಪ್ರದಾಯ, ಪರಂಪರೆಗಳು ಇವರ ಪ್ರಚಾರದ ಚಪಲಕ್ಕೆ ಗುರಿ ಆಗಬೇಕಾ? ಗೋಪೂಜೆ, ಭೂಮಿಪೂಜೆ, ಗುರು-ಹಿರಿಯರು, ಮಾತಾಪಿತೃಗಳ ಪೂಜೆ ಮಾಡುವುದನ್ನು ಸಂಸ್ಕಾರವಾಗಿ ಪಡೆದಿರುವ ಒಕ್ಕಲಿಗರು ಸಂಸ್ಕೃತಿಯ ನಿಜವಾದ ರಕ್ಷಕರು.

ಆಧ್ಯಾತ್ಮಿಕ ಲೋಕದಲ್ಲಿ ಪ್ರಮುಖ ಪರಂಪರೆಯಾಗಿರುವ ನಾಥ ಸಂಪ್ರದಾಯದ ಮುಖ್ಯ ತೀರ್ಥಕ್ಷೇತ್ರ ನಮ್ಮ ಆದಿಚುಂಚನಗಿರಿ. ಪತಂಜಲಿ ಹಾಗೂ ಆದಿಶಂಕರರು ಯೋಗದ ಮೇಲೆ ಹಲವು ಭಾಷ್ಯ, ನಿಯಮಗಳನ್ನು ರಚಿಸಿದರೂ ಯೋಗ ಜನಜೀವನ ಮಟ್ಟದಲ್ಲಿ ವ್ಯಾಪಕವಾಗಿ ಬೆಳೆಯಲು ನಾಥಪಂಥದ ಕೊಡುಗೆ ಅಪಾರ.

ಪ್ರಾಚೀನ ಕಾಲದಿಂದಲೂ ಸಿದ್ಧರು, ಸಂತರು, ಸಾಧುಗಳು, ಋಷಿಗಳು, ಯೋಗಿಗಳು ಮತ್ತು ತಪಸ್ವಿಗಳು ಆದಿಚುಂಚನಗಿರಿ ಮಠದ ಪರಿಸರದಲ್ಲಿ ಅನುಷ್ಠಾನ ಮಾಡಿ ಜೀವನದ ಪರಮಗುರಿಯನ್ನು ಸಾರಿದ್ದಾರೆ. ಇಂತಹ ಐತಿಹಾಸಿಕ, ಆಧ್ಯಾತ್ಮಿಕ ಪರಂಪರೆಯನ್ನು ಇಂದಿಗೂ ಉಳಿಸಿ, ಕಾಯ್ದುಕೊಂಡು ಬಂದಿದ್ದಾರೆ. ಇಂಥ ಸಮುದಾಯವನ್ನು ಅವಹೇಳನ ಮಾಡಿದ ಭಗವಾನ್​ರಂಥ ವ್ಯಕ್ತಿಗೆ ರಾಜ್ಯ ಸರ್ಕಾರ ರಾಜಮರ್ಯಾದೆ ನೀಡುತ್ತಿರುವುದು ನಿಜಕ್ಕೂ ವಿಪರ್ಯಾಸ.

ಅಂಕಿ -ಅಂಶಗಳ ಪ್ರಕಾರ 100 ವರ್ಷಗಳ ಹಿಂದೆ ಕೇವಲ ಶೇಕಡ 2ರಷ್ಟಿದ್ದ ಒಕ್ಕಲಿಗ ಸಮುದಾಯದ ಸಾಕ್ಷರತಾ ಪ್ರಮಾಣ ಇಂದು ಶೇ.80ಕ್ಕೂ ಅಧಿಕವಾಗಿದೆ. ವರ್ತಮಾನ ಅಷ್ಟೇ ಅಲ್ಲ, ಇತಿಹಾಸವೂ ಉಜ್ವಲವಾಗಿದೆ. ಸುಮಾರು 600ರಿಂದ 750 ವರ್ಷಗಳ ಸುದೀರ್ಘ ಅವಧಿಗೆ ಆಳಿದ್ದ ಗಂಗವಂಶಸ್ಥರಾದ ಶ್ರೀ ಪುರುಷ, ದುರ್ವಿನೀತ, ಶಿವಮಾರ, ಚಾವುಂಡರಾಯರು ಆಗಿನ ಕಾಲದಲ್ಲೇ ವಿದ್ವಾಂಸರಾಗಿದ್ದರು ಎಂಬುದು ಗಮನಾರ್ಹ. ಸಂಸ್ಕೃತ ಪಂಡಿತನಾಗಿದ್ದ ದುರ್ವಿನೀತ ರಾಜ ದತ್ತಕ ಸೂತ್ರ, ಗಜಶಾಸ್ತ್ರ, ಚಂದ್ರಪ್ರಭ ಪುರಾಣ ಕೃತಿಗೆ ಭಾಷ್ಯ ಬರೆದಿದ್ದು ಗಂಗರ ಕಾಲದಲ್ಲಿಯೇ. ಇತಿಹಾಸದ ಪ್ರಕಾರ ಇವರು ಅಚ್ಚಗನ್ನಡ ರಾಜವಂಶೀಯರು ಎಂಬುದು ನಾವೆಲ್ಲರೂ ಹೆಮ್ಮೆಪಡುವ ವಿಚಾರ.

ಗಂಗರ ಕೊಡುಗೆ: ನಮ್ಮ ಶ್ರವಣಬೆಳಗೊಳದ ಅದ್ಭುತ ಏಕಶಿಲಾ ಮೂರ್ತಿ ಕೆತ್ತನೆಗೊಂಡಿದ್ದು ಗಂಗರ ಕಾಲದಲ್ಲಿಯೇ, ಹಾಗೇ ದೂರದ ಒಡಿಶಾದ ಪುರಿ ಜಗನ್ನಾಥ ಮಂದಿರ, ಕೋನಾರ್ಕ್​ನ ದೇವಾಲಯ ನಿರ್ವಣಕ್ಕೆ ಮುನ್ನುಡಿ ಬರೆದಿದ್ದು ಗಂಗರು ಎಂಬುದನ್ನು ಒಡಿಶಾದ ಜನ ಕೂಡ ಸ್ಮರಿಸಿ, ಕೊಂಡಾಡುತ್ತಾರೆ. ಸಂಗೀತ, ನೃತ್ಯ, ಆಯುರ್ವೆದ, ಶಿಲ್ಪಕಲೆ, ಗಜಶಾಸ್ತ್ರ ವಿದ್ಯೆಯಲ್ಲಿ ಅವರ ಪರಿಣಿತಿ ಮಾದರಿಯಾಗಿತ್ತು. ಕರ್ನಾಟಕವನ್ನು ದೀರ್ಘಕಾಲ ಆಳಿದ ರಾಜಮನೆತನ ಗಂಗರದು.

ಹೀಗೆ ಹಲವು ಕ್ಷೇತ್ರಗಳ ಅಭಿವೃದ್ಧಿಗೆ ಶ್ರಮಿಸಿರುವ ಒಕ್ಕಲಿಗ ಸಮುದಾಯ ಇಂದು ಎತ್ತರಕ್ಕೆ ಬೆಳೆದಿದೆ. ಆದಿಚುಂಚನಗಿರಿ ಮಠ ಒಂದೇ ಇಂದು 500 ವಿದ್ಯಾಸಂಸ್ಥೆಗಳನ್ನು ನಡೆಸುತ್ತಿದೆ. ಶಿಕ್ಷಣ, ಆರೋಗ್ಯ, ಸಾಮಾಜಿಕ ಕ್ಷೇತ್ರದಲ್ಲಿ ಅಪ್ರತಿಮ ಸೇವೆಗೈದಿರುವ ಆದಿಚುಂಚನಗಿರಿ ಮಠವು ನಾಡಿನ ಸಮಗ್ರ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿದೆ. ಶ್ರೀ ಬಾಲಗಂಗಾಧರ ನಾಥ ಸ್ವಾಮೀಜಿ, ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳ ಸೇವಾಕೈಂಕರ್ಯ ನಾಡಿನ ಎಷ್ಟೋ ಜನರಿಗೆ ಅನ್ನ, ಆಶ್ರಯ, ಅಕ್ಷರವನ್ನು ಒದಗಿಸಿ ಬಾಳುಕೊಟ್ಟಿದೆ. ಭಾರತದಲ್ಲಿ ಸಂವಿಧಾನ ಬರುವುದಕ್ಕಿಂತ ಹಲವು ವರ್ಷಗಳ ಮೊದಲೇ ಈ ಸಮುದಾಯದ ಕೆ.ಎಚ್.ರಾಮಯ್ಯ ಮೀಸಲಾತಿ ಜಾರಿಗೆ ತರುವ ಪ್ರಯತ್ನ ಮಾಡಿದ್ದರು.

ದಾರ್ಶನಿಕ ಮನೋಭಾವ: ಬೆಂಗಳೂರು ನಿರ್ವತೃ ನಾಡಪ್ರಭು ಕೆಂಪೇಗೌಡರು ಕೋಟೆ, ಪೇಟೆ, ಗುಡಿ, ಕೆರೆ, ಉದ್ಯಾನ, ಪಂಚ ಅಂಗಗಳ ಆಧಾರದ ಮೇಲೆ ಭವ್ಯ ಬೆಂಗಳೂರು ನಿರ್ವಿುಸಿದ್ದಾರೆ. ಕೆರೆಗಳಿದ್ದರೆ ನೀರಾವರಿ ಸಮೃದ್ಧಿ, ಕೋಟೆ ಇದ್ದರೆ ರಾಜ್ಯ ಪ್ರಬಲ, ಪೇಟೆ ಇದ್ದರೆ ವಾಣಿಜ್ಯ ಚಟುವಟಿಕೆ, ಗುಡಿಗಳಿದ್ದರೆ ಧಾರ್ವಿುಕ ವಾತಾವರಣ, ಉದ್ಯಾನ ಇದ್ದರೆ ವಾತಾವರಣ ಸ್ವಚ್ಛ ಇರುತ್ತದೆ. ಈ ತರಹದ ದಾರ್ಶನಿಕ ಮನೋಭಾವ ಇಟ್ಟುಕೊಂಡು ಬೆಂಗಳೂರು ನಿರ್ವಿುಸಿದ್ದು ಕೆಂಪೇಗೌಡರು.

ಪ್ರಧಾನಿಯಾಗಿ ದೇಶಕ್ಕೆ ಸೇವೆಗೈದ ಏಕೈಕ ಕನ್ನಡಿಗ ದೇವೇಗೌಡರು. ಇಡೀ ದೇಶದಲ್ಲೇ ತನ್ನ ವಿಶಿಷ್ಟ ವಾಸ್ತುಶಿಲ್ಪದಿಂದ ಹೆಸರಾಗಿರುವ ವಿಧಾನಸೌಧ ನಿರ್ವತೃ ಕೆಂಗಲ್ ಹನುಮಂತಯ್ಯನವರು ನಮ್ಮವರು, ಮೌಲ್ಯಯುತ ರಾಜಕಾರಣಕ್ಕೆ ಹೆಸರಾಗಿ, ತಮ್ಮ ಹೋರಾಟಗಳಿಂದಲೇ ದೇಶಾದ್ಯಂತ ಖ್ಯಾತಿ ಗಳಿಸಿದ್ದ ಶಾಂತವೇರಿ ಗೋಪಾಲಗೌಡರನ್ನು ಕರ್ನಾಟಕ ಇಂದಿಗೂ ನೆನಪಿಸಿಕೊಳ್ಳುತ್ತೆ. ಮಾಹಿತಿ- ತಂತ್ರಜ್ಞಾನದಲ್ಲಿ ಬೆಂಗಳೂರನ್ನು ವಿಶ್ವದರ್ಜೆಗೆ ಏರಿಸಿದ ಸುಸಂಸ್ಕೃತ ರಾಜಕಾರಣಿ ಎಸ್.ಎಂ.ಕೃಷ್ಣರವರ ಕೊಡುಗೆಗೆ ಬೆಂಗಳೂರಿನ ಜನತೆ ಕೃತಜ್ಞರಾಗಿದ್ದಾರೆ. ಇಂತಹ ಅನೇಕ ಮಹನೀಯರ ಕೊಡುಗೆ ಅನನ್ಯ.

ರಾಜ್ಯ ಸರ್ಕಾರ ಉತ್ತರಿಸಲಿ: ಎಲ್ಲರ ಗೌರವ, ಆದರಕ್ಕೆ ಪಾತ್ರವಾಗಿರುವ ಒಕ್ಕಲಿಗ ಸಮುದಾಯವನ್ನು ಸಾರ್ವಜನಿಕವಾಗಿ ನಿಂದಿಸಿದ ಭಗವಾನ್ ಅವರ ಹಿಂದೆ ಕಾಣದ ‘ಕೈ’ ಇದೆ ಎಂಬುದು ಜನರಿಗೆ ಗೊತ್ತಿದೆ. ಇಂತಹ ಧೀಮಂತ ಸಮುದಾಯಕ್ಕೆ ಭಗವಾನ್​ರಂಥವರನ್ನು ಜೀರ್ಣಿಸಿಕೊಳ್ಳುವುದು ಗೊತ್ತಿದೆ. ರಾಜ್ಯದ ಎಲ್ಲ ಪ್ರಜ್ಞಾವಂತರು ಭಗವಾನ್ ಹೇಳಿಕೆಯನ್ನು ವಿರೋಧಿಸಿದ್ದಾರೆ. ಇಷ್ಟೆಲ್ಲ ಅವಾಂತರ ನಡೆದರೂ ಭಗವಾನ್​ರನ್ನು ರಕ್ಷಣೆ ಮಾಡುತ್ತಿರುವ, ಅವರಿಗೆ ಬೆಂಬಲ ಕೊಡುತ್ತಿರುವ ರಾಜ್ಯ ಸರ್ಕಾರದ ಉದ್ದೇಶವಾದರೂ ಏನು?

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಲೆಲ್ಲ ಈ ರೀತಿಯ ಹೇಳಿಕೆಗಳು, ಜಾತಿ-ಜಾತಿಗಳ ನಡುವೆ ವೈಷಮ್ಯ, ಹಿಂದೂವಿರೋಧಿ ನೀತಿಗಳು, ಅಲ್ಪಸಂಖ್ಯಾತರ ಅತಿಯಾದ ತುಷ್ಟೀಕರಣ, ವಿಧ್ವಂಸಕ ಕೃತ್ಯಗಳಿಗೆ ಕುಮ್ಮಕ್ಕು ಯಾಕೆ ಸಿಗುತ್ತದೆ? ಎಂದು ಸಮಸ್ತ ಕನ್ನಡಿಗರು ಕೇಳುತ್ತಿರುವ ಪ್ರಶ್ನೆ. ಹಿಂದೂ ಸಮಾಜದ ಐಕ್ಯತೆಯನ್ನು ದುರ್ಬಲಗೊಳಿಸುವ, ಜಾತಿ-ಜಾತಿಗಳ ನಡುವೆ ವೈಷಮ್ಯ ಹೆಚ್ಚಿಸುವ, ನಿರಂತರ ಕಂದಕ ಸೃಷ್ಟಿಸುವ ಕಾರ್ಯದ ಬಗ್ಗೆ ರಾಜ್ಯದ ಜನತೆಯಲ್ಲಿ ತೀವ್ರ ಬೇಸರವಿದೆ. ಕಾಂಗ್ರೆಸ್ ಸರ್ಕಾರ ಇಂತಹ ಶಕ್ತಿಗಳಿಗೆ ಕುಮ್ಮಕ್ಕು ನೀಡುವುದನ್ನು ನಿಲ್ಲಿಸಬೇಕಿದೆ ಎಂಬುದು ಕನ್ನಡಿಗರ ಏಕಧ್ವನಿಯ ಆಗ್ರಹ.

(ಲೇಖಕರು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದರು ಮತ್ತು ಬಿಜೆಪಿ ಯುವಮೋರ್ಚಾ ರಾಷ್ಟ್ರೀಯ ಅಧ್ಯಕ್ಷರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net