ವಿದ್ಯಾರ್ಥಿ ಜೀವನ ಜ್ಞಾನದಾಹದಿಂದ ಬೆಳಗಲಿ

Column F 1
Published on
ವಿದ್ಯಾರ್ಥಿದೆಸೆಯ ದೊಡ್ಡ ಆಸ್ತಿ ಎಂದರೆ ಜ್ಞಾನದಾಹ. ಈ ಜ್ಞಾನದಾಹ ಮೊದಲು ಅಂಕುರಿಸುವುದು ಬಾಲ್ಯದ ಕೌತುಕ ದೃಷ್ಟಿಯಿಂದ. ಈ ತೃಪ್ತಿಗೊಳಿಸಲಾಗದ ಕೌತುಕ ದೃಷ್ಟಿಯೇ ಬಾಳಿಗೆ ಹೆಚ್ಚಿನ ಮೌಲ್ಯ ಮತ್ತು ಬೆಳಕನ್ನು ಕೊಡುವಂತಹದ್ದು. ವಿದ್ಯಾರ್ಥಿಜೀವನದಲ್ಲಿ ಮೈಗೂಡಿಸಿಕೊಂಡ ವಿದ್ಯಾದಾಹ, ಜ್ಞಾನವನ್ನು ಪ್ರಾಮಾಣಿಕ ಪ್ರಯತ್ನದಿಂದ ಅರ್ಜಿಸುವಂತೆ ಮಾಡುವುದು. ಹೀಗೆ ಸ್ವಪ್ರಯತ್ನದಿಂದ ಧರಿಸಿದ ವಿದ್ಯೆ ಮುಂದೆ ಬಾಳಿನ ಬುತ್ತಿಯಾಗುವುದರಲ್ಲಿ ಸಂದೇಹವಿಲ್ಲ. ಈ ವಿದ್ಯಾದಾಹ ವಿದ್ಯಾರ್ಥಿದೆಸೆ ನಂತರವೂ ಜೀವನದ ಕೊನೆಯವರೆಗೂ ಒಬ್ಬ ವ್ಯಕ್ತಿಯನ್ನು ಬುದ್ಧಿಜೀವಿಯಾಗಿ ಕ್ರಿಯಾಶೀಲವಾಗಿರುವಂತೆ ಮಾಡುತ್ತದೆ.

ವಿದ್ಯೆ ಎಂದರೆ ಹೊಟ್ಟೆಗೆ ಹಿಟ್ಟು ದೊರಕಿಸಿಕೊಳ್ಳುವ ಉದ್ದೇಶದಿಂದ ಆರಿಸಿಕೊಂಡ ಪಠ್ಯವಿಷಯವನ್ನು ಓದುವುದು ಮಾತ್ರವಲ್ಲ. ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಅಥವಾ ಹೆಚ್ಚಿನ ಅಂಕಗಳನ್ನು ಪಡೆಯಲು ಅಷ್ಟು ಸಾಕಾಗಬಹುದು. ಜೀವನದಲ್ಲಿ ನಾವು ಕಾಣುವ ಪ್ರತಿಯೊಂದು ವಸ್ತುವಿಷಯಗಳು ಜ್ಞಾನದ ಒಂದು ಅಂಶ, ವಿಶ್ವಸತ್ಯದ ಸಹಸ್ರಮುಖಗಳಲ್ಲಿ ಒಂದು ಮುಖ. ಉದಾಹರಣೆಗೆ, ಭೌತಶಾಸ್ತ್ರವನ್ನು ಐಚ್ಛಿಕವಿಷಯವಾಗಿ ತೆಗೆದುಕೊಂಡು ಪರೀಕ್ಷೆಯಲ್ಲಿ ತೇರ್ಗಡೆಯಾದವರು ಐನ್​ಸ್ಟೀನ್ ಆಗದಿರಬಹುದು. ಆದರೆ ಅವರಂತಹ ಪ್ರತಿಭಾವಂತ ವಿಜ್ಞಾನಿಯಾಗಬೇಕೆಂಬ ಧ್ಯೇಯ, ಪ್ರಕೃತಿಯ ರಹಸ್ಯಗಳನ್ನು ಭೇದಿಸುವ ಕೆಚ್ಚು, ಆ ಜ್ಞಾನದಾಹ ಇರಬೇಕು. ಜ್ಞಾನಕ್ಕಾಗಿ ಜೀವ ತವಕಿಸುತ್ತಿದ್ದರೆ, ತಿಳಿಯಬೇಕೆಂಬ ಹಂಬಲ ತೀವ್ರವಾಗಿದ್ದರೆ ಬಾಳಿನಲ್ಲಿ ಹುರುಪು, ಹುಮ್ಮಸ್ಸು, ಬುದ್ಧಿಯ ಪ್ರಕಾಶ ಮಾಸುವುದೇ ಇಲ್ಲ. ಅಂತಹ ಜೀವನ ಉತ್ಸಾಹದ ಚಿಲುಮೆಯಾಗಿರುತ್ತದೆ; ಯಾವಾಗಲೂ ಹೊಸತನದ ಅನ್ವೇಷಣೆಯ ಕಾಂತಿಯನ್ನು ಹೊರಹೊಮ್ಮಿಸುತ್ತಿರುತ್ತದೆ.

ಶಿಕ್ಷಕ ಮತ್ತು ಜ್ಞಾನದಾಹ: ಜ್ಞಾನಕ್ಕಾಗಿ ಈ ಹಂಬಲವನ್ನು ಪ್ರಚೋದಿಸುವ ನಿಟ್ಟಿನಲ್ಲಿ ‘ಗುರು’ ಅಥವಾ ಉಪಾಧ್ಯಾಯರ ಪಾತ್ರ ಅವಶ್ಯಕವಾಗಿರುವುದು. ಅಧ್ಯಾಪಕನು ಜ್ಞಾನದಾಹವು ವಿದ್ಯಾರ್ಥಿಗಳಲ್ಲಿ ಅರಳುವಂತೆ ಅಥವಾ ಬೆಳಗುವಂತೆ ಪಾಠ ಹೇಳಬೇಕು. ಉಪಾಧ್ಯಾಯ ಕಲಿಸುವ ಕಲಿಕೆಗೆ ಮಿತಿ ಇದ್ದರೂ, ತರಗತಿಗಳಿಂದ ತರಗತಿಗಳಿಗೆ ವಿದ್ಯಾರ್ಥಿ ಜೀವನದ ಹಲವು ವರ್ಷಗಳ ಪಯಣವನ್ನು ಜ್ಞಾನಶಕ್ತಿಯಿಂದ ತುಂಬಿ ಸಫಲಗೊಳಿಸಬೇಕಾದಲ್ಲಿ ಶಿಕ್ಷಕರು ಜ್ಞಾನಪಿಪಾಸುಗಳಾಗಿದ್ದರೆ, ಜ್ಞಾನದಾಹ ವಿದ್ಯಾರ್ಥಿಗಳಲ್ಲಿ ಪ್ರಚೋದಿಸಲ್ಪಡುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಇಂತಹ ಉತ್ತಮ ಶಿಕ್ಷಕರ ಪ್ರಭಾವ ಅತಿಮುಖ್ಯ. ಈಗಿನ ಯುಗದಲ್ಲಿ ನಿಜವಾದ ಗುರುವೆಂದರೆ ಪುಸ್ತಕ ಮತ್ತು ಅಂತರ್ಜಾಲ; ನಿಜವಾದ ಶಿಷ್ಯವೃತ್ತಿ ಎಂದರೆ ಪುಸ್ತಕವಾಚನ. ಪುಸ್ತಕ ಎಂಬುದು ಜ್ಞಾನಭಂಡಾರದ ಕೀಲಿಕೈ. ಇದರ ಸದುಪಯೋಗವನ್ನು ಪಡೆಯಬೇಕಾದರೆ ಅನುಭವದಿಂದ ಪಕ್ವವಾಗಿರುವ ಉಪಾಧ್ಯಾಯರ ನೆರವು ಅಗತ್ಯ. ವಿದ್ಯಾರ್ಥಿ ದೆಸೆಯಲ್ಲಿ ಉಪಾಧ್ಯಾಯರ ಮಾರ್ಗದರ್ಶನದಿಂದ ಪ್ರಾರಂಭವಾದ ವಿದ್ಯಾರ್ಜನೆ ಸಾರ್ಥಕಗೊಂಡು ಪರಿಪೂರ್ಣವಾಗಬೇಕಾದರೆ, ಈ ಜ್ಞಾನದಾಹ ವಿದ್ಯಾರ್ಥಿದೆಸೆ ನಂತರವೂ ಜೀವನದುದ್ದಕ್ಕೂ ನಿರಂತರವಾಗಿ ಹೃನ್ಮನಗಳಲ್ಲಿ ಜೀವಂತವಾಗಿರಬೇಕು. ಈ ಜ್ಞಾನದಾಹ ವ್ಯಕ್ತಿತ್ವದಲ್ಲಿ ಹುದುಗಿದ್ದು, ಜೀವನದ ಎಲ್ಲ ಹಂತಗಳಲ್ಲೂ ಮತ್ತು ಆಯಾಮಗಳಲ್ಲೂ ಮುಂದುವರಿಯಬೇಕು.

ಪುಸ್ತಕವಾಚನ ಮತ್ತು ಜ್ಞಾನಸಂಪನ್ನತೆ: ವಿದ್ಯಾರ್ಥಿದೆಸೆಯಲ್ಲಿಯೇ ಪುಸ್ತಕಪ್ರಿಯರಾಗುವ, ಪುಸ್ತಕವಿಹಾರಿಯಾಗುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು. ಅಂತರ್ಜಾಲವನ್ನು ವಿವೇಕ, ಬುದ್ಧಿಯನ್ನು ಬಳಸಿ, ವಿವೇಚಿಸಿ ಉಪಯೋಗಿಸಲು ಕಲಿಯಬೇಕು. ನಮಗೆ ಬೇಕಾದ ವಿಷಯವನ್ನು ಮಾತ್ರ ನೋಡಲು ಇಂಟರ್​ನೆಟ್ ಬಳಸಬೇಕು. ಪುಸ್ತಕವೆಂಬುದು ಜ್ಞಾನಪೀಠ, ಜ್ಞಾನದ ಹೊನಲು. ವಿದ್ಯಾದೇವತೆಯಾದ ಸರಸ್ವತಿಯ ಆವಿರ್ಭಾವದ ಸ್ಥಾನ. ಅದು ಕಣ್ಣಿಗೆ ಕಾಣುವಂತೆ ಕಾಗದಗಳ ಒಂದು ಕಟ್ಟು ಅಥವಾ ಒಂದು ನಿರ್ಜೀವ ವಸ್ತುವಲ್ಲ. ಜ್ಞಾನದೇಗುಲವದು; ದಿವ್ಯಭಾವನೆಗಳಿಂದ ಕೂಡಿದ, ವಿಶ್ವದ ಸತ್ಯಸೌಂದರ್ಯದ ದರ್ಶನ ಮಾಡಿಸಬಲ್ಲ, ವಿಶಾಲ ಪ್ರಪಂಚದ ಜೀವನವನ್ನು ಪರಿಚಯ ಮಾಡಿಕೊಡುವ, ಕುಳಿತಲ್ಲಿಯೇ ದೇಶ-ವಿದೇಶಗಳ ಜನಜೀವನ ದೃಶ್ಯಗಳ ಚಿತ್ರವನ್ನು ಕಣ್ಣಿಗೆ ಕಟ್ಟುವ ಒಂದು ಪವಾಡಸದೃಶ ಶಕ್ತಿ ಪುಸ್ತಕದಲ್ಲಿದೆ. ಈ ಮಾನವ ದೇಹದ ಅಂತರಂಗದಲ್ಲಿನ ಹರ್ಷ, ಶೋಕ, ಕ್ರೌರ್ಯ, ಕಾರುಣ್ಯ, ದೌರ್ಬಲ್ಯ, ಸಾಮರ್ಥ್ಯ, ಸಂದೇಹ, ಸಮಾಧಾನ ಮೊದಲಾದ ಭಾವತರಂಗಗಳನ್ನು ಚಿತ್ರಿಸಿ ಆ ಮೂಲಕ ಮಾನವ ಸ್ವಭಾವದ ತಿಳಿವಳಿಕೆಯನ್ನು ಮಾಡಿಕೊಡುವ ಸಮರ್ಥ ಸಾಧನವನ್ನು ಪುಸ್ತಕ ಅಥವಾ ಗ್ರಂಥ ಎನ್ನಬಹುದು. ಪ್ರತಿಯೊಬ್ಬ ವಿದ್ಯಾರ್ಥಿ ಜ್ಞಾನವನ್ನು ಮತ್ತು ಪುಸ್ತಕವನ್ನು ಪ್ರೀತಿಸಬೇಕು ಮತ್ತು ಜೀವನಪಯಣದ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಳ್ಳಬೇಕು.

ಒಂದು ಉತ್ತಮ ಗ್ರಂಥದಲ್ಲಿ ಒಂದು ಮಹಾಚೇತನದ ಜೀವನ ಹೋರಾಟಗಳಿರುತ್ತವೆ, ಗಾಢವಾದ ಚಿಂತನೆಗಳಿರುತ್ತವೆ, ಅರ್ನ್ಯಘವಾದ ಆತನ ಜೀವನಾನುಭವ ದಾಖಲೆಗೊಂಡಿರುತ್ತದೆ. ಲೋಕೋಪಕಾರಕ್ಕಾಗಿ ಆತ ಬಿಟ್ಟುಹೋಗಿರುವ ಈ ಪುಸ್ತಕವೆಂಬ ಆಸ್ತಿಯನ್ನು ಸದ್ವಿನಿಯೋಗಪಡಿಸಿಕೊಳ್ಳುವುದು ನಮ್ಮ ಕರ್ತವ್ಯ. ನಿಜವಾದ ಜ್ಞಾನ ಸದ್ಗುಣಸಂಪನ್ನತೆಯನ್ನು ಪ್ರೇರೇಪಿಸಬೇಕು. ವಿದ್ಯಾದಾಹ ಎಂಬ ಮಾತಿಗೆ ನಮ್ಮವರು ಉದಾತ್ತವಾದ ಅರ್ಥವನ್ನು ಕಲ್ಪಿಸಿದ್ದಾರೆ. ಅದು ವ್ಯಾವಹಾರಿಕ ವಿದ್ಯೆಗಿಂತ ಭಿನ್ನವಾದುದು, ಪರಬ್ರಹ್ಮಸ್ವರೂಪವಾದ ಜ್ಞಾನ. ‘ನ ಹಿ ಜ್ಞಾನೇನ ಸದೃಶಂ ಪವಿತ್ರಂ ಇಹ ವಿದ್ಯತೇ’ ಎಂದು ಗೀತಾಚಾರ್ಯನಾದ ಶ್ರೀಕೃಷ್ಣನು ಜ್ಞಾನದ ಮಹಿಮೆಯನ್ನು ಕೊಂಡಾಡಿದ್ದಾನೆ. ‘ತಿಳಿಯಬೇಕು ಎಂಬ ಹಂಬಲವಿರುವವನು ನನಗೆ ಪ್ರಿಯನು’ ಎಂಬುದು ಭಗವಂತನ ವಾಣಿಯಾಗಿದೆ.

ಮೊದಲನೆಯದಾಗಿ ನಿಜವಾದ ಶಿಕ್ಷಣ, ಸದ್ವಿದ್ಯೆ ಎಂದರೆ ಜ್ಞಾನದಾಹ, ಹೆಚ್ಚಿನ ವಿಷಯಗಳನ್ನು ತಿಳಿಯಬೇಕೆಂಬ ಹಂಬಲವನ್ನು ಕೊಡುವಂಥದ್ದು. ಜೊತೆಗೆ ಪರೋಪಕಾರ, ದೇಶಸೇವೆ, ಸಮಾಜಸೇವೆಗಳಿಗಾಗಿ ದುಡಿಯುವಂತಹ ಮನೋಭಾವವನ್ನು ಪ್ರೇರೇಪಿಸುವಂತಹದ್ದು. ನೈತಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಸಾಮರ್ಥ್ಯ; ನಮ್ಮನ್ನು ನಾವು ಅರಿತುಕೊಳ್ಳುವಂತಹ ಸಾಮರ್ಥ್ಯ, ಅಧ್ಯಾತ್ಮಿಕ ಪ್ರಗತಿಯನ್ನು ಸಾಧಿಸುವ ಕೌಶಲ ಪ್ರತಿಯೊಬ್ಬ ವಿದ್ಯಾವಂತರಲ್ಲಿ ಇರಬೇಕಾದ ಲಕ್ಷಣಗಳು. ಜ್ಞಾನವೆಂಬುದು ಉತ್ತಮ ಕ್ರಿಯೆಯಾಗಿ ಪರಿಣಮಿಸಿ, ಒಬ್ಬನ ಚಾರಿತ್ರ್ಯವಾಗಿ ಪ್ರತಿಬಿಂಬಿಸಿ, ಅವನನ್ನು ಸದ್ಗುಣ ಸಂಪನ್ನನಾಗಿ ಮಾಡಬೇಕು. ಇಂತಹ ಪರಿವರ್ತನಕಾರಿ ಸಾಧನವನ್ನೇ ನಿಜವಾದ ಜ್ಞಾನವೆನ್ನಬಹುದು.

ಧರ್ಮ ಮತ್ತು ಆಧ್ಯಾತ್ಮಿಕ ಪ್ರಜ್ಞೆಯ ಜಾಗೃತಿ: ಈ ಸಂದರ್ಭದಲ್ಲಿ ಜ್ಞಾನದ ವ್ಯಾಪ್ತಿಯನ್ನು ಪರಿಪೂರ್ಣವಾಗಿ ಅರಿಯಲು ಧರ್ಮ, ಅಧ್ಯಾತ್ಮ ಮತ್ತು ವಿಜ್ಞಾನ- ಮೂರೂ ಆಯಾಮಗಳ ಬಗ್ಗೆ ತಿಳಿದುಕೊಳ್ಳುವುದು ಅವಶ್ಯಕ. ವ್ಯಕ್ತಿಯ ಶ್ರೇಯಸ್ಸು ಮತ್ತು ಸಮಾಜದ ಅಭಿವೃದ್ಧಿ ಎರಡನ್ನೂ ಸಮರ್ಪಕವಾಗಿ ಸಾಧಿಸಲು ಸಹಾಯಮಾಡುವ ಮೌಲ್ಯವೇ ಧರ್ಮ (ನೈತಿಕತೆ). ಉನ್ನತ ನೈತಿಕಮೌಲ್ಯಗಳನ್ನು ಆಧರಿಸಿ ನಾವು ಮಾಡುವ ಕಾರ್ಯಾಚರಣೆಯೇ ಧರ್ಮ. ಧರ್ಮ ಮತ್ತು ಅಧ್ಯಾತ್ಮದ ಬಗ್ಗೆ ತಿಳಿದುಕೊಳ್ಳಲು ಅನೇಕರು ಆಸಕ್ತಿ ಹೊಂದಿರುತ್ತಾರೆ. ಇದು ಶಾಲಾ-ಕಾಲೇಜುಗಳಲ್ಲಿ ನಾವು ತಿಳಿಯುವ ಸಾಮಾನ್ಯಜ್ಞಾನಕ್ಕಿಂತ ಭಿನ್ನವಾದುದು. ಅಧ್ಯಾತ್ಮವೆಂಬುದು ಅನಿವಾರ್ಯವಾಗಿ ಹುಟ್ಟುಸಾವಿಗೀಡಾಗುವ ಮಾನವನ ಮತ್ತು ಸತತವಾಗಿ ನಾವು ನಮ್ಮ ಹೊರಗೆ ಕಾಣುವ ಪರಿವರ್ತನಶೀಲವಾದ ವಿಶ್ವದ ಆಂತರ್ಯದಲ್ಲಿರುವ ಅಂತಿಮ ಶಾಶ್ವತ ಸತ್ಯದ ಶೋಧನೆ ಮತ್ತು ಅನುಭೂತಿಯಾಗಿದೆ.

ನಿಜವಾದ ಶಿಕ್ಷಣ ನೀಡುವ ಜ್ಞಾನ ವ್ಯಕ್ತಿಗೆ ತಾನು ಸಮಾಜದ ಅವಿಭಾಜ್ಯ ಅಂಗವೆಂದೂ ಹಾಗೂ ತನಗೂ ಮತ್ತು ಸಮಾಜಕ್ಕೂ ಅನ್ಯೋನ್ಯ ಸಂಬಂಧವಿದೆಯೆಂದೂ ಅರಿವು ಮಾಡಿಕೊಡಬೇಕು. ಶಿಕ್ಷಣವೆಂಬುದು ವ್ಯಕ್ತಿಯ ಪರಿವರ್ತನೆಯನ್ನೂ ಮತ್ತು ಸಾಮಾಜಿಕ ಪರಿವರ್ತನೆಯನ್ನೂ ಏಕಕಾಲಕ್ಕೆ ಪರಿಣಾಮಕಾರಿಯಾಗಿ ಸಾಧಿಸುವ ಒಂದು ವೇಗವರ್ಧಕ ಶಕ್ತಿ. ಜ್ಞಾನದಾಹವೆಂಬುದು ವೈಯಕ್ತಿಕ, ಸಾಮಾಜಿಕ, ಧಾರ್ವಿುಕ, ವೈಜ್ಞಾನಿಕ ಮತ್ತು ಆಧ್ಯಾತ್ಮಿಕ ವಾಸ್ತವಾಂಶಗಳನ್ನು ತಿಳಿಯಲು ನಮ್ಮನ್ನು ಪ್ರೇರೇಪಿಸುವ ಒಂದು ಶಕ್ತಿ. ಮನುಷ್ಯನಿಗೆ ಪ್ರಕೃತಿಸಹಜವಾಗಿ ಕೊಟ್ಟ ಬುದ್ಧಿಶಕ್ತಿ ಶಿಕ್ಷಣದ ಮೂಲಕ ಅಥವಾ ಸ್ವಯಂಸ್ಪೂರ್ತಿಗೊಂಡು ತನ್ನಿಂದ ತಾನೇ ಜಾಗ್ರತವಾದಾಗ ಜ್ಞಾನವನ್ನು ಪಡೆಯುವ ಹಂಬಲ ಅಭಿವ್ಯಕ್ತವಾಗುವುದು.

ಸ್ವಾಮಿ ವಿವೇಕಾನಂದರು ಹೇಳುತ್ತಾರೆ, ‘ಜ್ಞಾನಮಾತ್ರವೇ ನಮ್ಮನ್ನು ಪರಿಪೂರ್ಣಗೊಳಿಸುತ್ತದೆ’. ಆದ್ದರಿಂದ ಒಬ್ಬ ವ್ಯಕ್ತಿಯ ಜೀವನದಲ್ಲಿ ಜ್ಞಾನದಾಹ ಅಂಕುರಿಸಿದಾಗ ಅದು ಪರಿಣಾಮಕಾರಿಯಾಗಿ ಮನೋವಲಯದಲ್ಲಿ ಪಸರಿಸಿ, ಮನುಷ್ಯನ ಮನಸ್ಸಿನಲ್ಲಿ ಸಹಜವಾಗಿರುವ ಇಚ್ಛಾಶಕ್ತಿ, ಬುದ್ಧಿಶಕ್ತಿ, ಭಾವನಾಶಕ್ತಿ ಮತ್ತು ಸ್ಮೃತಿಶಕ್ತಿಗಳನ್ನು ಜಾಗೃತಗೊಳಿಸುತ್ತದೆ.

ಜ್ಞಾನಧಾರಣೆಯ ಪ್ರಕ್ರಿಯೆ: ಬಾಹ್ಯಪ್ರಪಂಚದಿಂದ ಮನೋವಲಯಕ್ಕೆ ಬಂದ ಮಾಹಿತಿ ಮೊದಲು ಹೇಗೆ ಸ್ಮೃತಿಯಾಗಿ ನಂತರ ಸುಪ್ತಮನಸ್ಸಿನಲ್ಲಿ ಸ್ಥಿರಸ್ಮೃತಿಯಾಗಿ ಮಾರ್ಪಾಡಾಗಿ, ನಂತರ ಜ್ಞಾನವಾಗಿ ತದನಂತರ ಅದು ಪ್ರಾಯೋಗಿಕ ಜೀವನದ ವಿವಿಧ ಕ್ಷೇತ್ರಗಳಲ್ಲಿ್ಲ ಬಳಸಬಹುದಾದ ಪ್ರಾಯೋಗಿಕ ಜ್ಞಾನವಾಗಿ (ಗಜಿಠಛಟಞ) ಪರಿವರ್ತನೆಗೊಳ್ಳುತ್ತದೆ. ಈ ಬಗೆಯ ಮಾನಸಿಕ ಜ್ಞಾನಧಾರಣೆ ಮತ್ತು ಪರಿವರ್ತನೆಯ ಸೂಕ್ಷ್ಮ ಪ್ರಕ್ರಿಯೆಗಳನ್ನು ಗಮನಿಸಿ, ಮನಸ್ಸನ್ನು ಆಳವಾಗಿ ವೀಕ್ಷಿಸಿ ತಿಳಿದುಕೊಂಡರೆ, ಈ ಮನೋವಿಜ್ಞಾನ ಜೀವನದಲ್ಲಿ ವಿಶೇಷ ಶಕ್ತಿಯಾಗಿ ನಮ್ಮ ಜೀವನವನ್ನು ಉಜ್ಜೀವನವನ್ನಾಗಿ ಮಾಡುವುದು.

ಜ್ಞಾನಕೇಂದ್ರಿತ ಶತಮಾನ: ಈ ಇಪ್ಪತ್ತೊಂದನೆಯ ಶತಮಾನ ‘ಜ್ಞಾನಕೇಂದ್ರಿತ ಶತಮಾನ’ ಎಂದು ಪರಿಗಣಿಸಲ್ಪಟ್ಟಿದೆ. ವಿಜ್ಞಾನ ಮತ್ತು ತಂತ್ರಜ್ಞಾನಗಳ ಪ್ರಗತಿಯಿಂದಾಗಿ ಗಣಕಯಂತ್ರ, ಅಂತರ್ಜಾಲ ವ್ಯವಸ್ಥೆ, ಕ್ಷಿಪಣಿ, ಉಪಗ್ರಹಗಳ ಮೂಲಕ ಅತಿವೇಗವಾಗಿ ಕ್ಷಣಾರ್ಧದಲ್ಲಿ ಸುದ್ದಿಯನ್ನು, ಘಟನೆಗಳನ್ನು, ಬರಹಗಳನ್ನು, ಚಿತ್ರಗಳನ್ನು, ಅಸ್ತ್ರಗಳನ್ನು ಭೂಮಿಯ ಒಂದು ವಲಯದಿಂದ ಅತೀ ದೂರದ ಇನ್ನೊಂದು ಪ್ರದೇಶಕ್ಕೆ ಕಳುಹಿಸುವ ಸಾಮರ್ಥ್ಯ ಪಡೆದುಕೊಂಡಿದ್ದೇವೆ. ಇದೊಂದು ಜ್ಞಾನಸ್ಪೋಟದ ಯುಗ. ವಿಚಾರ ವಿನಿಮಯ ಸುಲಭವಾಗಿ ಮತ್ತು ಅತಿ ವೇಗದಿಂದ ನಡೆಯುತ್ತಿದೆ. ಆದರೆ ಈ ಅಗಾಧವಾದ ಉಪಲಬ್ಧ ಜ್ಞಾನರಾಶಿಯನ್ನು ವಿವೇಚಿಸಿ, ಮಥಿಸಿ, ಮಂಡಿಸುವ ಅವಶ್ಯಕತೆ ಈಗ ಹೆಚ್ಚಾಗಿದೆ. ಆದರೆ ಇದೆಲ್ಲವೂ ವ್ಯಾವಹಾರಿಕ ಮತ್ತು ಬಾಹ್ಯಪ್ರಪಂಚದ ಬಗ್ಗೆ ಸಂಪಾದಿಸಿದ ಜ್ಞಾನ. ಪರಮಾರ್ಥ ಮತ್ತು ಬಹುಜನ ಹಿತದ ಬಗ್ಗೆ ಅಲ್ಲ. ವ್ಯಕ್ತಿ, ಕುಟುಂಬ ಮತ್ತು ಸಮಾಜ, ಸದೃಢವಾಗಿ ಶ್ರೇಯಸ್ಕರ ಮತ್ತು ಸಹಜೀವನದ ಶಾಂತಿಯ ಬಾಳು ಸಾಧ್ಯವಾಗಬೇಕಾದರೆ ಯಾವ ತರಹದ ಹೊಸ ಜ್ಞಾನವನ್ನು ನಾವು ಸಂಪಾದಿಸಬೇಕು? ಎಂದು ಪರ್ಯಾಲೋಚಿಸುವುದು ಅಗತ್ಯ.

ವ್ಯಕ್ತಿಯ ಹಿತ, ವ್ಯಕ್ತಿಯ ಬೆಳವಣಿಗೆ ಜೊತೆಜೊತೆಗೆ ಸಮಾಜದ ಹಿತವನ್ನೂ ಸಮನ್ವಯಗೊಳಿಸುವ ಕಲೆ, ತಿಳಿವಳಿಕೆಯನ್ನು ಮೈಗೂಡಿಸುವಂಥ ಜ್ಞಾನದ ಪ್ರಸಾರ ಈ ಇಪ್ಪತ್ತೊಂದನೆಯ ಶತಮಾನದಲ್ಲಿ ಅಗತ್ಯ. ಸಹಸ್ರಾರು ವರ್ಷಗಳಲ್ಲಿ ಮನುಷ್ಯ ಸಂಚಯಿಸಿದ ಜ್ಞಾನರಾಶಿಯಲ್ಲಿರುವ ಅವಶ್ಯಕ ಮತ್ತು ಅನವಶ್ಯಕ ವಿಚಾರಗಳನ್ನು ಬೇರ್ಪಡಿಸುವ ಪ್ರಯತ್ನ ನಡೆಯಬೇಕು. ಇದನ್ನು ಪ್ರಸ್ತುತ ಹಾಗೂ ಭವಿಷ್ಯದ ಅವಶ್ಯಕತೆಯ ದೃಷ್ಟಿಯಿಂದ ಅವಶ್ಯಕ ಜ್ಞಾನವನ್ನು ಮಾತ್ರ ಸಮನ್ವಯಗೊಳಿಸಿ ಜನಸಾಮಾನ್ಯರ ಅಭಿವೃದ್ಧಿ, ಶ್ರೇಯಸ್ಸಿಗೋಸ್ಕರ ಅದನ್ನು ಬಳಸಬೇಕಾಗಿದೆ. ಇದು ಸಾಧ್ಯವಾಗಬೇಕಾದರೆ ಶಿಕ್ಷಣದಲ್ಲಿ ಈ ಎಲ್ಲ ನೂತನ ಜ್ಞಾನರಾಶಿಯನ್ನು ಅಳವಡಿಸುವ ಒಂದು ಕ್ರಿಯಾಶೀಲ ಪ್ರಯೋಗ ನಡೆಸುವುದು ಸೂಕ್ತ. ಜ್ಞಾನವನ್ನು ಬಡತನ ಮತ್ತು ಸಮಾಜದಲ್ಲಿ ಕಂಡುಬರುವ ಅನೈತಿಕತೆ, ಕ್ಲೇಶ, ಹಿಂಸೆ, ಶೋಷಣೆಗಳ ನಿವಾರಣೆಗೋಸ್ಕರ ಉಪಯೋಗಿಸಬೇಕು. ಬರೀ ಕೆಲವು ಶ್ರೀಮಂತ ಜನರ ಮತ್ತು ದೇಶಗಳ ಸುಖಸೌಕರ್ಯವನ್ನು ಹೆಚ್ಚಿಸಲು ಮಾತ್ರ ಅಲ್ಲ. ನಿಜವಾದ ಜ್ಞಾನ ಎಲ್ಲರ ಹಿತವನ್ನು ಸಾಧಿಸುವಂತಹದ್ದಾಗಬೇಕು.

ಈಗ ನಮಗೆ ಬೇಕಾಗಿರುವುದು ಜ್ಞಾನದ ಜೊತೆ-ಜೊತೆಗೆ ಸದಾಚಾರ, ಸನ್ನಡತೆ, ಸದ್ಗುಣಗಳನ್ನು ವ್ಯಕ್ತಿತ್ವದಲ್ಲಿ ಬಿತ್ತುವ ಜ್ಞಾನ. ಬಾಹ್ಯಜ್ಞಾನ ಎಷ್ಟೇ ಪ್ರಶಸ್ತವಾದರೂ ಅದು ಮನುಷ್ಯನ ನಡತೆಯನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಬಲ್ಲದೇ? ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ನಿಜವಾದ ಜ್ಞಾನ ನಮ್ಮ ಆಲೋಚನೆಯನ್ನು, ಕರ್ಮಸಂಕಲ್ಪವನ್ನು ಮತ್ತು ಕರ್ಮಗಳನ್ನು ಉನ್ನತಮಟ್ಟಕ್ಕೆ ಪ್ರೇರೇಪಿಸಿ, ಜೀವನದಲ್ಲಿ ಶಾಂತಿ, ಪ್ರೀತಿ ಸಹಕಾರ, ನಿಸ್ವಾರ್ಥ, ವಿನಯ ಸಂಪನ್ನತೆಗಳನ್ನು ಉಂಟಾಗುವಂತೆ ಮಾಡದಿದ್ದಲ್ಲಿ ಅದು ಬರಿಯ ಶುಷ್ಕಜ್ಞಾನವಾಗಿ, ಮನೋವೃತ್ತಿಯನ್ನು ಹೆಚ್ಚಿಸಿ, ಮಾನಸಿಕ ಒತ್ತಡವನ್ನು ಉಲ್ಬಣಿಸಿ, ಸಮಾಜದಲ್ಲಿ ವ್ಯಕ್ತಿಗಳು ಸ್ವಾರ್ಥಪರರಾಗಿ, ಅಶಾಂತಿ, ಅಹಂಕಾರ, ಡಂಭ, ಮದಮತ್ಸರಗಳೇ ಹೆಚ್ಚುತ್ತವೆ.

ನಿಜವಾದ ವಿದ್ಯೆಯು ಜ್ಞಾನ ಮತ್ತು ವಿನಯವನ್ನು ಕೊಡುತ್ತದೆ. ಬಲ್ಲವರು ಹೇಳಿದಂತೆ ಸಂಸ್ಕೃತದ ಒಂದು ನಾಣ್ಣುಡಿಯನ್ನು ಇಲ್ಲಿ ನೆನಪಿಸಿಕೊಳ್ಳಬೇಕು: ‘ವಿದ್ಯಾ ದದಾತಿ ವಿನಯಂ’. ಒಟ್ಟಾರೆ ಜ್ಞಾನವು ಸಮಾಜದಲ್ಲಿ ಸದ್ಗುಣಸಂಪನ್ನತೆಯನ್ನು ಹೆಚ್ಚಿಸಬೇಕು. ಅಂತಹ ಸಮಾಜದಲ್ಲಿ ಮಾತ್ರ ಬಾಹ್ಯ ಭೌತಿಕ ಪ್ರಗತಿ ಜೊತೆಜೊತೆಗೆ ಶಾಂತಿ, ಸಂತೃಪ್ತಿ ಮತ್ತು ನಿಜವಾದ ಶ್ರೇಯಸ್ಸನ್ನು ಕಾಣಬಹುದು.

(ಲೇಖಕರು ಮೈಸೂರು ಶ್ರೀರಾಮಕೃಷ್ಣ ಆಶ್ರಮದ ಅಧ್ಯಕ್ಷರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net