ಚೈತನ್ಯ ಬತ್ತದಿರಲಿ...; ಮನೋಲ್ಲಾಸ ಅಂಕಣ

Manollasa
Published on
| ಭಾರತಿ ಎ. ಕೊಪ್ಪ

ಮೈದುಂಬಿ ಧುಮ್ಮಿಕ್ಕುತ್ತಿದ್ದ ಜಲಪಾತವೊಂದರ ಮುಂದೆ ಅನೇಕ ಪ್ರವಾಸಿಗರು ನೆರೆದಿದ್ದರು. ಜಲಪಾತದ ಸೌಂದರ್ಯ ಕಣ್ತುಂಬಿಕೊಳ್ಳುವುದರ ಜೊತೆಗೆ, ಅದರ ಸೊಬಗನ್ನು ವರ್ಣಿಸುತ್ತಿದ್ದರು. ಪ್ರತಿಯೊಬ್ಬರ ಬಾಯಲ್ಲೂ ಜಲಪಾತದ ವರ್ಣನೆ ಮಾತಿಗೆ ನಿಲುಕದ್ದಾಗಿತ್ತು. ಆದರೆ ಜಲಧಾರೆ ಮಾತ್ರ ತನ್ನ ಆಂತರ್ಯದ ಚೈತನ್ಯ ಎಂಬಂತೆ, ಇದಾವುದನ್ನೂ ಲೆಕ್ಕಿಸದೆ ಧುಮುಕುತ್ತಿತ್ತು. ಮಳೆಗಾಲದ ನಂತರ ಪ್ರವಾಸಿಗರ ಸಂಖ್ಯೆ ಸಹಜವಾಗಿ ಕಡಿಮೆಯಾಯಿತು; ಸೊರಗಿದ ಜಲಪಾತದೆಡೆ ಯಾರೂ ಸುಳಿಯುತ್ತಿರಲಿಲ್ಲ. ಆದರೂ ಜಲಪಾತ ಇದನ್ನು ಮನಸ್ಸಿಗೆ ಹಚ್ಚಿಕೊಳ್ಳದೆ ಕಡಿಮೆ ನೀರಿನಲ್ಲಿಯೇ ಕೆಳಗಿಳಿಯುತ್ತಾ ತನ್ನ ಕುರುಹನ್ನು ಉಳಿಸಿಕೊಂಡು, ಮುಂದಿನ ಮುಂಗಾರು ಮಳೆಗೆ ಕಾದು ನಿಂತಿತು. ಭರವಸೆಯ ದಿನಗಳಿಗಾಗಿ ಹಂಬಲಿಸತೊಡಗಿತು. ಕೆಲ ತಿಂಗಳ ನಂತರ ಮತ್ತೆ ಮುಂಗಾರು ಸುರಿಯಲಾರಂಭಿಸಿತು. ಜಲಪಾತ ಮೊದಲಿನ ಲಯ ಕಂಡುಕೊಳ್ಳಲಾರಂಭಿಸಿತು. ಮತ್ತದೇ ಹೊಸ ಚೈತನ್ಯ ಮತ್ತು ಜೀವಕಳೆಯನ್ನು ಮರಳಿ ತಳೆಯಿತು. ನವೋಲ್ಲಾಸದಿಂದ ಜನರನ್ನು ಆಕರ್ಷಿಸುತ್ತಾ, ಸರ್ವರ ಮೆಚ್ಚುಗೆಯ ಮಾತುಗಳಿಗೆ ಪಾತ್ರವಾಯಿತು.

ನಮ್ಮ ಜೀವನ ಕೂಡ ಹೀಗೇ. ಮುಂಗಾರಿನ ವರ್ಷಧಾರೆ ಚೆನ್ನಾಗಿದ್ದರೆ ಜಲಪಾತವು ಮೈದುಂಬುವಂತೆ, ನಮ್ಮ ಕೆಲಸ ಕಾರ್ಯಗಳಿಗೆ ಪೂರಕವಾದ ಸಹಕಾರ, ವಾತಾವರಣವಿದ್ದರೆ ಯಶಸ್ಸು ಬಹುಬೇಗ ಲಭಿಸುತ್ತದೆ. ನಮ್ಮ ಯಶಸ್ಸು ಉತ್ತುಂಗದಲ್ಲಿದ್ದಾಗ, ಸಾಧನೆಯು ಹೆಮ್ಮರದಂತೆ ಬೆಳೆದಾಗ ಸಮಾಜದಲ್ಲಿ ಅನೇಕರು ನಮ್ಮ ಸ್ನೇಹಿತರಾಗುತ್ತಾರೆ, ಬೆಂಬಲಿಗರಾಗುತ್ತಾರೆ. ನಮ್ಮ ಬಗೆಗೆ ಹೊಗಳಿಕೆ, ಗೌರವಭಾವ ತೋರುತ್ತಾರೆ. ನಾವು ಸವೆಸಿದ ಹಾದಿಯನ್ನು ಮರೆಯುವಷ್ಟು, ನಮ್ಮನ್ನು ಸಂತಸದ ಕಡಲಲ್ಲಿ ತೇಲಾಡುವಂತೆ ಮಾಡುತ್ತಾರೆ. ಆದರೇನಂತೆ? ನಾವು ನಮ್ಮತನವನ್ನು ಮರೆಯಬಾರದು. ಹೊಗಳಿಕೆಗೆ ಹಿಗ್ಗಬಾರದು. ಜೀವನದ ಯಶಸ್ಸಿನ ಓಟದಲ್ಲಿ ಆಕಸ್ಮಿಕವಾಗಿ ಸಣ್ಣಪುಟ್ಟ ಅಡೆತಡೆ ಬಂದರೂ, ಬಿರು ಬೇಸಿಗೆಯ ಜಲಪಾತದಂತೆ ನಾವು ಸೊರಗುವುದು, ಚೈತನ್ಯವನ್ನು ಕಳೆದುಕೊಳ್ಳುವುದು ಸಾಮಾನ್ಯವಾಗಿರುತ್ತದೆ. ನಮ್ಮ ಸೋಲಿನಲ್ಲಿ, ಜೀವನದ ಕಷ್ಟದ ದಿನಗಳಲ್ಲಿ ನಮ್ಮ ಜೊತೆ ಬರುವವರು ಬೆರಳೆಣಿಕೆಯಷ್ಟು ಜನ ಮಾತ್ರ. ಯಶಸ್ಸಿನ ಪಥದಲ್ಲಿ ನಮ್ಮನ್ನು ವಿಶೇಷವಾಗಿ ಗೌರವಿಸಿದವರೂ ಕೂಡ, ನಮ್ಮ ಕಷ್ಟಕಾಲದಲ್ಲಿ ಅಪರಿಚಿತರಂತೆ ವರ್ತಿಸುವುದುಂಟು. ಕಠಿಣ ಪರಿಸ್ಥಿತಿಯಲ್ಲಿ ನಮ್ಮಿಂದ ದೂರ ಸರಿಯುವುದುಂಟು. ಇಲ್ಲಿಯೇ ನಮ್ಮ ಜೀವನದ ನಿಜವಾದ ಅಂತಃಶಕ್ತಿ ಅಡಗಿರುವುದು.

ಸೊರಗಿದ ಜಲಪಾತವು ಮತ್ತೆ ಮುಂಗಾರಿಗೆ ಕಾದು, ಮರುಚೈತನ್ಯ ಪಡೆಯುವಂತೆಯೇ, ನಾವು ಸಹ ನಮ್ಮತನವನ್ನು ಕಾಪಿಟ್ಟುಕೊಂಡು, ಭರವಸೆಯ ದಿನಗಳಿಗಾಗಿ ಕಾಯಬೇಕು. ಸದಾ ಜ್ವಲಿಸುವ ಸೂರ್ಯನಿಗೂ ಕತ್ತಲುಬೆಳಕಿನಾಟವಿರುವಂತೆ, ಜೀವನದಲ್ಲಿ ಎದುರಾಗುವ ಕಷ್ಟ-ಸುಖದ ಕತ್ತಲು-ಬೆಳಕನ್ನು ಸಮನಾಗಿ ಸ್ವೀಕರಿಸಬೇಕು. ಹೊಸ ಅವಕಾಶ ಸಿಕ್ಕಾಗ ಅದನ್ನು ಬೆಳಕಾಗಿ ಪರಿವರ್ತಿಸಿಕೊಂಡು, ಮತ್ತೆ ಪುಟಿದೇಳಬೇಕು. ‘ಮನುಷ್ಯನಿಗೆ ಜೀವನದಲ್ಲಿ ಬಹಳಷ್ಟು ಸಂಕಷ್ಟಗಳು ಬೇಕಾಗುತ್ತವೆ. ಏಕೆಂದರೆ ಯಶಸ್ಸನ್ನು ಸಂಭ್ರಮಿಸಲು ಅವು ಅಗತ್ಯ’ ಎಂಬ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಅವರ ಪ್ರೇರಣೋಕ್ತಿಯಂತೆ, ಮುಂದಿನ ದಿನಗಳ ಯಶಸ್ಸನ್ನು ಸಂಭ್ರಮಿಸಲು ಕಷ್ಟದ ದಿನಗಳನ್ನು ಸಮಚಿತ್ತದಿಂದ ಸ್ವೀಕರಿಸುವುದೇ ಜೀವನದ ಗುಟ್ಟು.

(ಲೇಖಕರು ಶಿಕ್ಷಕರು ಮತ್ತು ಹವ್ಯಾಸಿ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net