ಹೃದಯದಲಿ ಸ್ವಾರ್ಥವಲ್ಲ ಪ್ರೇಮದ ನದಿ ಹರಿಯಲಿ!

ವಿಜಯವಾಣಿ (4)
Published on
(ಲೇಖಕರು ‘ವಿಜಯವಾಣಿ’ ಸಹಾಯಕ ಸುದ್ದಿ ಸಂಪಾದಕರು)

ಕಳೆದ ಕೆಲ ದಿನಗಳಿಂದ ಕೇಳಿಬರುತ್ತಿರುವ ಸುದ್ದಿಗಳು ಬರೀ ಹೌಹಾರಿಸುತ್ತಿಲ್ಲ. ನಮ್ಮ ಕೌಟುಂಬಿಕ ಮೌಲ್ಯಗಳು, ನೈತಿಕತೆ ಹೇಗೆ ಧರಾಶಾಹಿಯಾಗುತ್ತಿದೆ ಎಂಬುದನ್ನು ದರ್ಶಿಸುತ್ತಿವೆ. ಮಧುಚಂದ್ರಕ್ಕೆಂದು ತೆರಳಿದಾಗ ಪತಿಯನ್ನೇ ಪ್ರಿಯಕರನೊಂದಿಗೆ ಸೇರಿ ಹತ್ಯೆ ಮಾಡಿದ ಪತ್ನಿ, ಮಗನಿಗೆ ನಿಶ್ಚಿತಾರ್ಥವಾಗಿದ್ದ ಹುಡುಗಿಯೊಂದಿಗೆ ಓಡಿಹೋದ ತಂದೆ, ಕ್ಯಾನ್ಸರ್​ಪೀಡಿತ ವೃದ್ಧ ತಾಯಿಯನ್ನು ಮುಂಬೈಯ ಕಸದ ತೊಟ್ಟಿಗೆ ಎಸೆದು ಹೋದ ಮಕ್ಕಳು, ಮಕ್ಕಳು ವೃದ್ಧಾಶ್ರಮಕ್ಕೆ ಸೇರಿಸಿದರೆಂದು ನೊಂದು ಆತ್ಮಹತ್ಯೆ ಮಾಡಿಕೊಂಡ ವೃದ್ಧ ದಂಪತಿ, ಮದುವೆಯಾದ ಎರಡು ತಿಂಗಳಲ್ಲೇ ವರದಕ್ಷಿಣೆ ಕಿರುಕುಳ ಕೊಟ್ಟು ಹೆಂಡತಿಯನ್ನು ಸಾಯಿಸಿದ ಪತಿ, ಸ್ನೇಹಿತನಿಂದಲೇ ಗೆಳೆಯನ ಕೊಲೆ...

ಇಂಥ ಘಟನೆಗಳೆಲ್ಲ ಸಿನಿಮಾ, ವೆಬ್ ಸಿರೀಸ್​ನ ಕಥೆಗಳಲ್ಲಿ ನೋಡುತ್ತಿದ್ದಾಗಲೇ, ‘ಅಯ್ಯೋ ಇಂಥ ಘಟನೆಗಳು ಯಾವುದೇ ಕಾರಣಕ್ಕೂ ನೈಜ ಜೀವನದಲ್ಲಿ ನಡೆಯಬಾರದು’ ಎಂದು ಮೊರೆಯಿಡುವ ಭಾವನಾತ್ಮಕ ಮನಸುಗಳ ಸಂಖ್ಯೆ ದೊಡ್ಡದು. ಆದರೆ, ದುರದೃಷ್ಟವಶಾತ್ ನೈಜಜೀವನದಲ್ಲಿ ಇಂಥ ಘಟನೆಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಸಮಾಜದ ಬದಲಾಗುತ್ತಿರುವ ಮನೋವೃತ್ತಿ, ಹಿಂಸೆಯತ್ತ ವಾಲುತ್ತಿರುವ ಅಪಾಯಕಾರಿ ಬೆಳವಣಿಗೆಯನ್ನು ನೋಡುತ್ತಿದ್ದರೆ ನಮ್ಮತನ, ನಮ್ಮ ಮೌಲ್ಯ, ನಮ್ಮ ಜೀವನಪದ್ಧತಿ, ಸಂಸ್ಕೃತಿ, ಸದಾಚಾರವನ್ನು ಬದಿಗೊತ್ತಿದರ ಫಲವಿದು ಎಂಬುದು ಸ್ಪಷ್ಟವಾಗುತ್ತದೆ. ‘ಹೃದಯದಲಿ ಇದೇನಿದು ನದಿಯೊಂದು ಓಡಿದೆ, ಕಲಕಲನೇ ಕಲರವ ಕೇಳಿ ಹೊಸಬಯಕೆ ಹೂವು ಅರಳಿ...’ ಡಾ.ರಾಜಕುಮಾರ್ ಸಿರಿಕಂಠದಲ್ಲಿ ಮೊಳಗಿದ ಈ ಹಾಡನ್ನು ಕೇಳಿದಾಕ್ಷಣ ಎಂಥ ಕಲ್ಲುಎದೆಯಲ್ಲೂ ಒಂದಿಷ್ಟು ಮಧುರ ಅನುಭವ ಮೂಡದೆ ಇರದು.

ಹೃದಯದಲ್ಲಿ ನದಿಯೊಂದು ಓಡುವ, ಅದೂ ಪ್ರೇಮದ ನದಿಯೊಂದು ಸಾಗುವ ಕಲ್ಪನೆಯೇ ಚೇತೋಹಾರಿ. ಅಷ್ಟಕ್ಕೂ, ಮನುಷ್ಯನ ಹೃದಯ ಹೇಗಿರಬೇಕು ಎಂಬುದನ್ನು ಈ ಹಾಡಿನ ಸಾಲುಗಳು ಹೇಳುತ್ತವೆ. ಆದರೆ, ನಂದನವನವಾಗಿರಬೇಕಿದ್ದ ‘ಮನುಷ್ಯ’ನ ಹೃದಯದಲ್ಲಿ ಇಂದು ಏನೇನು ತುಂಬಿಕೊಂಡಿದೆ ನೋಡಿ! ‘ನಾನಷ್ಟೇ ಚೆನ್ನಾಗಿ ಇರಬೇಕು’ ಎಂಬ ಅತಿಯಾದ ಸ್ವಾರ್ಥ, ‘ಎಲ್ಲವೂ ನನ್ನ ಲಾಭಕ್ಕಾಗಿ ಆಗಬೇಕು’ ಎಂಬ ದುರಾಸೆ, ‘ಎಲ್ಲವೂ ನನ್ನ ಇಚ್ಛೆಯಂತೆ ನಡೆಯಬೇಕು’ ಎಂಬ ಹುಚ್ಚುಹಠ, ‘ನಾನೇ ಶ್ರೇಷ್ಠ’ ಎಂಬ ಅಹಂಕಾರ, ಬೇರೆಯವರ ಉತ್ಕರ್ಷವನ್ನು ಸಹಿಸದ ಅಸೂಯೆ, ನೈತಿಕತೆಯನ್ನು ಮೀರಿ ದುಡ್ಡು ಮಾಡಬೇಕೆಂಬ ಮೋಸದ ಭಾವನೆ... ಇಷ್ಟೆಲ್ಲ ಅಸೂರರು ಒಟ್ಟಿಗೇ ಹೃದಯದಲ್ಲಿ ವಾಸಿಸುತ್ತಿದ್ದರೆ ಕಾಟಾಚಾರಕ್ಕೆ ಆಯುಧಪೂಜೆ, ವಿಜಯದಶಮಿ ಆಚರಿಸಿ ಏನು ಫಲ? ಹೃದಯವೇ ಇಷ್ಟೊಂದು ಕಲ್ಮಶಗೊಂಡಿದೆಯೆಂದಾದರೆ ಅಲ್ಲಿ ಪ್ರೇಮ, ಮಮತೆ, ವಾತ್ಸಲ್ಯ, ಮಮಕಾರ, ಕರುಣೆ, ಸಹನೆ, ತಾಳ್ಮೆ, ಸಹಾನುಭೂತಿಯಂಥ ಸದ್ಗುಣಗಳು ವಾಸಿಸಲು ಹೇಗೆ ಸಾಧ್ಯ? ಈ ಮೌಲ್ಯಗಳೆಲ್ಲ ಅಕಾಲಿಕವಾಗಿ ಮರಣ ಹೊಂದುತ್ತಿವೆ. ಹೀಗಾಗಿಯೇ, ಬದುಕು ದಿನದಿಂದ ದಿನಕ್ಕೆ ರಣರಂಗವಾಗುತ್ತಿದೆ.

ಈ ಸಮಸ್ಯೆಗಳು ಹಿಂದೆಯೂ ಇತ್ತು. ಮುಂಚೆ ಯುದ್ಧ, ಕೊಲೆ, ಹಿಂಸೆಗಳು ಇರಲಿಲ್ಲವೇ ಎಂದು ಪ್ರಶ್ನಿಸುವವರೂ ಇದ್ದಾರೆ. ನಿಜ, ರಾವಣನೊಂದಿಗೆ ನಡೆದ ಯುದ್ಧದಿಂದಲೇ ರಾಮಾಯಣವಾಯಿತು, ಪಾಂಡವ-ಕೌರವರ ನಡುವಿನ ಯುದ್ಧ ದಿಂದಲೇ ಮಹಾಭಾರತವಾಯಿತು. ಪ್ರಾಚೀನ ಕಾಲದಲ್ಲಿಯೂ ಈ ಸಮಸ್ಯೆಗಳು ಇರಲಿಲ್ಲ ಅಂತೇನಿಲ್ಲ. ಆದರೆ, ಇತ್ತೀಚಿನ ವರ್ಷಗಳಲ್ಲಿ ಕಂಡುಬರುತ್ತಿರುವ ಅಪಸವ್ಯ ಹಾಗೂ ಮೌಲ್ಯಗಳ ಅಧಃಪತನದ ವೇಗ ಗಾಬರಿ ಹುಟ್ಟಿಸುವಂತಿದೆ. ಜೀವನದ ಅರ್ಥ, ಉದ್ದೇಶ, ಗುರಿ ಯಾವುದನ್ನೂ ಅರ್ಥ ಮಾಡಿಕೊಳ್ಳದೆ ‘ನನ್ನದು ಮಾತ್ರ ಬದುಕು; ನಾನು ಮಾತ್ರ ಚೆನ್ನಾಗಿ ಬದುಕಬೇಕು’ ಎಂಬ ಸ್ವಾರ್ಥದ ಆಟಾಟೋಪ ಒಳ್ಳೆಯ ಮೌಲ್ಯಗಳನ್ನು ಆಪೋಶನ ತೆಗೆದುಕೊಳ್ಳುತ್ತಿದೆ. ನಾವ್ಯಾರೂ ಭೂಮಿಯ ಮೇಲೆ ಸಾವಿರ ವರ್ಷ ಬದುಕಲು ಬಂದವರಲ್ಲ. ಇತ್ತೀಚಿನ ವರ್ಷಗಳಲ್ಲಂತೂ ಲಕ್ಷಕ್ಕೆ ಬೆರೆಳೆಣಿಕೆಯಷ್ಟು ಜನರು ಮಾತ್ರ 100 ವರ್ಷಗಳಷ್ಟು ಬದುಕುತ್ತಿದ್ದಾರೆ.

ಸರಾಸರಿ ಆಯಸ್ಸು 65-70 ಎಂದುಕೊಂಡರೂ, ಈ ಪುಟ್ಟ ಪಯಣದಲ್ಲಿ ಅದೆಷ್ಟು ಅಸಹನೆ, ಅತೃಪ್ತಿ ತುಂಬಿಕೊಂಡಿದೆ ಎಂದರೆ ಮನುಷ್ಯ ಸಂತೋಷವಾಗಿ ಬದುಕುವುದನ್ನೇ ಮರೆತಿದ್ದಾನೆ. ಅಂದರೆ ತನ್ನ ಅಸ್ತಿತ್ವದ ಉದ್ದೇಶವನ್ನೇ ಮರೆತಿದ್ದಾನೆ. ಮುಂಚೆಯೆಲ್ಲ ಬದುಕಿನಲ್ಲಿ ಬಡತನ ಇತ್ತು, ಆದರೆ ಅನುಭವಗಳು ಶ್ರೀಮಂತವಾಗಿದ್ದವು. ನೋವುಗಳು ಇದ್ದರೂ, ಭಾವನಾತ್ಮಕ ಬೆಂಬಲ ಮತ್ತೆ ಗೆಲುವಾಗಿಸಿ ಬಿಡುತ್ತಿತ್ತು. ಸಣ್ಣಪುಟ್ಟ ಮುನಿಸುಗಳು ಇದ್ದರೂ ಒಮ್ಮೆ ಕ್ಷಮೆ ಕೇಳುವ ಅಥವಾ ಕ್ಷಮಿಸುವ ಮೂಲಕ ಶಮನಗೊಳ್ಳುತ್ತಿತ್ತು. ಕಲಹಗಳು ಅರಳಿ ಕಟ್ಟೆಯ ಪಂಚಾಯಿತಿಯಲ್ಲೇ ಕೊನೆಗೊಳ್ಳುತ್ತಿದ್ದವು. ಹಳ್ಳಿ-ಹಳ್ಳಿಗಳಲ್ಲಿ ನಡೆಯುತ್ತಿದ್ದ ಸಾಯಂಕಾಲದ ಭಜನೆಗಳು ಮನಸುಗಳ ವಿಭಜನೆಯನ್ನು ತಡೆದು, ಬಾಂಧವ್ಯವನ್ನು ಬೆಸೆಯುತ್ತಿದ್ದವು. ಮದುವೆಗಳು ಪ್ರತಿಷ್ಠೆಯ ಪ್ರತೀಕವಾಗಿ ಇರದೆ ಎಲ್ಲರ ಸಹಭಾಗಿತ್ವದಿಂದ ಊರಹಬ್ಬಗಳಂತೆ ನಡೆಯುತ್ತಿದ್ದವು.

ತೇರು ಎಳೆಯುವ ಮುನ್ನ ಕುಟುಂಬದವರೆಲ್ಲ ಧರಿಸುತ್ತಿದ್ದ ಹೊಸಬಟ್ಟೆ, ಅರಮನೆಯ ಸಂಭ್ರಮವನ್ನೂ ಮೀರಿಸುವಂತಿತ್ತು. ಅವಿಭಕ್ತ ಕುಟುಂಬಗಳಲ್ಲಿ ಹಿರಿಯರ ಮಾತಿಗೆ ಬೆಲೆ ಇತ್ತು. ಅಜ್ಜ ಹೇಳಿದ ಎಂದರೆ ಅಪ್ಪ, ಮಗ, ಮೊಮ್ಮಗ... ಮೂರೂ ಪೀಳಿಗೆಗಳು ಆ ಮಾತನ್ನು ವೇದವಾಕ್ಯದಂತೆ ಪರಿಪಾಲಿಸುತ್ತಿದ್ದರು. ಹಿರಿಯರು ಮನೆಯಲ್ಲಿದ್ದರೆ ಅದೇ ಆಸ್ತಿ ಎಂದು ಭಾವಿಸಿ ಅವರಿಗೆ ಗೌರವ, ಆದರ ತೋರಲಾಗುತ್ತಿತ್ತು (ಈಗ ಆಸ್ತಿಗೋಸ್ಕರ ಹಿರಿಯರನ್ನೇ ಮನೆಯಿಂದ ಆಚೆ ಹಾಕಲಾಗುತ್ತಿದೆ!). ಅವರ ಅನುಭವಗಳನ್ನು ಅನ್ವಯಿಸಿಕೊಂಡು ಬದುಕು ಸುಗಮಗೊಳ್ಳುತ್ತಿತ್ತು. ಮನೆಯಲ್ಲಿ ಹಿರಿಯ ಜೀವ ಇದೆ ಎಂದರೆ ಅಲ್ಲೊಂದು ಅನುಭವಗಳ ದೊಡ್ಡ ಬುತ್ತಿಯೇ ಇದೆ ಎಂದರ್ಥ. ಆ ಅನುಭವದ ಬುತ್ತಿಯ ತುಂಬೆಲ್ಲ ಜೀವನದ ಪಾಠಗಳೇ. ‘ಬೇರೆಯವರಿಗೆ ಕೆಟ್ಟದ್ದು ಮಾಡುವುದರಿರಲಿ. ಕೆಟ್ಟದ್ದು ಯೋಚನೆಯೂ ಮಾಡಬಾರದಪ್ಪ’ ಎಂಬ ಹಿರಿಯರ ಒಂದು ಮಾತು ನೈತಿಕತೆಯ ವಿಶ್ವವಿದ್ಯಾಲಯವೇ ಆಗಿತ್ತು.

ಕಷ್ಟ ಬಂದಾಗ, ‘ಇರುಳು ಕಳೆದ ಮೇಲೆ ಬೆಳಕು ಬಂದೇ ಬರುತ್ತೇ’ ಎಂಬ ವಿಶ್ವಾಸದ ಮಾತು ಆ ಮನೆ ಸದಸ್ಯರ ಆತ್ಮಸ್ಥೈರ್ಯವನ್ನು ಹೆಚ್ಚಿಸುತ್ತಿತ್ತು. ಅವರ ಅಂತಃಕರಣದ ಲೋಕ ಎಷ್ಟು ವಿಶಾಲವೆಂದರೆ ಎಲ್ಲರಿಗೂ ಅಲ್ಲಿ ಪ್ರೀತಿ, ಕರುಣೆ ಸಿಗುತ್ತಿತ್ತು. ಅವರನ್ನು ‘ವಯಸ್ಸಾದವರು’, ‘ಹೊರೆ’ ಎಂಬ ಭಾವನೆಯಿಂದ ಕಾಣುತ್ತಿರಲಿಲ್ಲ. ಹಿರಿಯರೆಂದರೆ ಅನುಭವ, ಮೌಲ್ಯಗಳ ಖಜಾನೆ ಎಂಬ ಗೌರವದ ಭಾವನೆ ಇತ್ತು. ಸಂಬಂಧ ಮತ್ತು ಬಾಂಧವ್ಯಗಳಿಗೆ ಕೊಳ್ಳಿ ಇಟ್ಟು ಸ್ವೇಚ್ಛಾಚಾರದ ಬದುಕು ಆರಂಭವಾಗಿದ್ದೇ ಮನುಷ್ಯತ್ವದ ಅವಸಾನಕ್ಕೂ ಕಾರಣ. ಮನುಷ್ಯ ಹುಟ್ಟಿರುವುದೇ ಪ್ರೇಮದಿಂದ, ಸಂತೋಷದಿಂದ ಬದುಕಲು. ನಮ್ಮ ಅಧ್ಯಾತ್ಮವೂ ಇದನ್ನೇ ಹೇಳುತ್ತದೆ. ಇಲ್ಲಿ ಮನುಷ್ಯನ ಅಸ್ತಿತ್ವವೆಂದರೆ ಕಣ್ಣಿಗೆ ಕಾಣುವ ಶರೀರ ಮಾತ್ರವಲ್ಲ, ಕಾಣದ ಆತ್ಮವೂ ಇದೆ. ಆ ಆತ್ಮಸಂತೋಷವೇ ಕಳೆದು ಹೋದರೆ ಬದುಕಿಗೇನು ಅರ್ಥ? ದೊಡ್ಡ ಮೊತ್ತದ ಸಂಬಳ ಇರಬಹುದು.

ಸಿರಿವಂತರ ಪಟ್ಟಿಯಲ್ಲಿ ಸ್ಥಾನ ಪಡೆದಿರಬಹುದು, ಸಮಾಜದಲ್ಲಿ ಪ್ರತಿಷ್ಠೆಯ ಥಳುಕುಬಳಕು ಇರಬಹುದು... ಆದರೆ ನಮ್ಮ ಅಧ್ಯಾತ್ಮ ಗುರುಗಳು ‘ಯಾರೆಲ್ಲ ಸಂತೋಷದಿಂದ ಇರಲು ಬಯಸುತ್ತೀರಿ?’ ಎಂದು ಕೇಳಿದರೆ, ಈ ಎಲ್ಲ ‘ಯಶಸ್ವಿ’ ವ್ಯಕ್ತಿಗಳು ಮೊದಲು ಕೈ ಎತ್ತುತ್ತಾರೆ. ಅಂದರೆ, ಬೇಕುಗಳ ಹಿಂದೆ ಬಿದ್ದು ಸಂಪತ್ತು, ಪ್ರತಿಷ್ಠೆ, ವರ್ಚಸ್ಸು ಎಲ್ಲ ಗಳಿಸಿದ ಮೇಲೂ ಸಂತೋಷ ಇಲ್ಲ ಎಂದಾದರೆ, ಮನುಷ್ಯ ಯಾವುದಕ್ಕಾಗಿ ಇಷ್ಟೆಲ್ಲ ಹಪಹಪಿಸುತ್ತಿದ್ದಾನೆ ಎಂಬ ಪ್ರಶ್ನೆ ಮೂಡದಿರದು. ನಮ್ಮ ಆತ್ಮದ ಸ್ವಭಾವವೇ ಸಂತೋಷ, ಆನಂದ. ಆದರೆ, ದೈನಂದಿನ ಜೀವನದ ಜಂಜಾಟದಲ್ಲಿ ಈ ಆತ್ಮವನ್ನು ಮೌಲ್ಯಗಳ ಮೂಲಕ ಚಾರ್ಜಿಂಗ್ ಮಾಡುವುದನ್ನೇ ಮರೆಯುತ್ತಿದ್ದೇವೆ. ಆತ್ಮವೆಂಬ ಬ್ಯಾಟರಿಯನ್ನು ಸದ್ಗುಣಗಳಿಂದ ಚಾರ್ಜಿಂಗ್ ಮಾಡಿದರೆ ಸಂತೋಷ, ಶಾಂತಿ, ಸಮಾಧಾನದ ಅನುಭವ ದಕ್ಕದೇ ಇರದು. ಆದರೆ, ಮನಸ್ಸನ್ನೇ ಎಷ್ಟು ದುರ್ಬಲವಾಗಿಸಿಕೊಂಡಿದ್ದೇವೆ ಎಂದರೆ ಸಂತೋಷದ ಅನುಭವವೇ ಆಗುತ್ತಿಲ್ಲ.

ಆತ್ಮದ ಶಕ್ತಿ ಕ್ಷೀಣಿಸಿದರೆ ಖುಷಿಯೂ ಕಳೆದು ಹೋಗುತ್ತದೆ. ಹಾಗಾಗಿ, ಸಂತೋಷ ಎಂಬುದು ಹೊರಗಡೆ ಇಲ್ಲ, ಆ ಆನಂದ ಇರುವುದು ನಮ್ಮ ಅಂತರಂಗದಲ್ಲಿ ಎಂಬ ಅಪ್ಪಟ ಸತ್ಯಕ್ಕೆ ನಮ್ಮ ಭ್ರಮೆಗಳ ಪೊರೆಯನ್ನು ಭದ್ರವಾಗಿ ಹಾಕಿರುವುದರಿಂದ ನೆಮ್ಮದಿ ಮರೀಚಿಕೆಯಾಗುತ್ತಿದೆ, ಬೇಕುಗಳ ಪಟ್ಟಿ ಹೆಚ್ಚುತ್ತಿದೆ, ಬೇರೆಯವರ ಬಗ್ಗೆ ಅಸಹನೆ ಹೆಚ್ಚುತ್ತಿದೆ. ಸ್ವಾರ್ಥದಿಂದಲೇ ಬದುಕಿದವರ ಜೀವನವನ್ನು ಒಮ್ಮೆ ಅವಲೋಕಿಸಿ ನೋಡಿ, ಅವರ ಜೀವನ ಎಷ್ಟು ತುಚ್ಛ ಮತ್ತು ನಿರರ್ಥಕ ಎಂಬುದು ಎಂಥ ಸಾಮಾನ್ಯನ ಅರಿವಿಗೂ ಬರುತ್ತದೆ. ಮನುಷ್ಯನ ಮೂಲಗುಣಗಳು ಸಂತೋಷ, ಪ್ರೇಮ, ನೆಮ್ಮದಿ. ಇದರಿಂದ ವಿಮುಖರಾಗುತ್ತಿದ್ದಂತೆ ಎಚ್ಚೆತ್ತುಕೊಂಡು ಸರಿದಾರಿಗೆ ಮರಳಬೇಕು. ಜೀವನವೆಂಬ ಪಯಣದಲ್ಲಿ ಕೆಲವು ಬಾರಿ ಯೂಟರ್ನ್ ಪಡೆಯುವುದು ಅನಿವಾರ್ಯ. ಆದರೆ, ಈ ಯೂಟರ್ನ್ ನಮ್ಮನ್ನು ಸರಿಯಾದ ಗಮ್ಯಕ್ಕೆ ತಲುಪಿಸುವಂತಿರಬೇಕು. ಇಂಥ ಗಮ್ಯ ಯಾವುದು? ಈ ದೃಷ್ಟಾಂತ ಕಣ್ಣು ತೆರೆಸುತ್ತದೆ.

ಒಬ್ಬ ಯುವಕ. ಆತನಿಗೆ ಜೀವನದಲ್ಲಿ ಎಲ್ಲವೂ ಇತ್ತು. ಒಳ್ಳೆಯ ಕುಟುಂಬ, ಜೀವನ ಸಾಗಿಸುವಷ್ಟು ಆದಾಯ, ಉತ್ತಮ ಆರೋಗ್ಯ. ಬದುಕಿಗೆ ಇನ್ನೇನು ಬೇಕು? ಆದರೆ, ಅವನಿಗೆ ಸದಾ ಅಸಹನೆ, ಅಸಂತೋಷ. ಯಾರನ್ನೂ ಕಂಡರೂ ಅಸಮಾಧಾನ. ಹೊಂದಾಣಿಕೆ ಎಂಬುದೇ ಇರಲಿಲ್ಲ. ಸದಾ ದುಃಖದಲ್ಲೇ ಇರುತ್ತಿದ್ದ. ಹಿರಿಯರು ಬುದ್ಧಿಮಾತು ಹೇಳಿದರೂ ಪ್ರಯೋಜನವಾಗಲಿಲ್ಲ. ಈ ಸಂಸಾರದ ತಾಪತ್ರಯಗಳೆಲ್ಲ ಸಾಕು ಎಂದು ಒಂದುದಿನ ಮನೆಬಿಟ್ಟು ಸಂನ್ಯಾಸಿಯಾಗಲು ಹೊರಟ. ಕಾಡಿನಲ್ಲಿ ದಿವ್ಯತೇಜಸ್ವಿ ಸಾಧುಗಳು ಧ್ಯಾನಸ್ಥರಾಗಿದ್ದರು. ಅವರ ಧ್ಯಾನ ಮುಗಿಯುವವರೆಗೂ ಈ ಯುವಕ ಅವರೆದುರಿಗೇ ಕುಳಿತಿದ್ದ. ಸಂನ್ಯಾಸಿ ಕಣ್ಣು ತೆರೆಯುತ್ತಿದ್ದಂತೆ, ‘ಸ್ವಾಮೀಜಿ, ದಯವಿಟ್ಟು ನನ್ನನ್ನು ನಿಮ್ಮ ಶಿಷ್ಯನನ್ನಾಗಿ ಸ್ವೀಕರಿಸಿ, ನನಗೆ ಈ ಜೀವನದ ನೋವುಗಳು ಸಾಕಾಗಿದೆ, ನನಗೆ ಯಾರೂ ಬೇಡ. ನಾನು ಭಗವಂತನ ಭಕ್ತಿಯಲ್ಲಿ ಒಂದಾಗಬೇಕು, ಸಂನ್ಯಾಸಿಯಾಗಬೇಕು’ ಎಂದು ಒಂದೇ ಉಸಿರಿನಲ್ಲಿ ಹೇಳಿದ.

ಸಂನ್ಯಾಸಿ ಶಾಂತಚಿತ್ತದಿಂದ, ‘ಮನೆಯಲ್ಲಿ ಯಾರನ್ನಾದರೂ ಪ್ರೇಮದಿಂದ ಕಾಣುತ್ತೀಯ?’ ಎಂದು ಪ್ರಶ್ನಿಸಿದರು. ‘ನಾನು ನನ್ನ ಕುಟುಂಬದ ಯಾವುದೇ ಸದಸ್ಯರನ್ನು ಪ್ರೇಮದಿಂದ ಕಾಣುವುದಿರಲಿ, ಅವರನ್ನು ಇಷ್ಟ ಸಹ ಪಡುವುದಿಲ್ಲ’ ಎಂದುತ್ತರಿಸಿದ ಯುವಕ. ‘ನಿನ್ನ ತಂದೆ-ತಾಯಿ, ಅಕ್ಕ-ತಂಗಿ, ಅಣ್ಣ-ತಮ್ಮ, ಪತ್ನಿ-ಮಕ್ಕಳು ಹೀಗೆ ಯಾರೊಂದಿಗೂ ಬಾಂಧವ್ಯ ಇಲ್ಲವೇ?’ ಎಂದು ಕೇಳಿದಾಗ, ‘ಇಲ್ಲ, ಈ ಜಗತ್ತು ತುಂಬ ಸ್ವಾರ್ಥಿ. ನನ್ನ ಕುಟುಂಬದ ಯಾರೊಂದಿಗೂ ಸ್ನೇಹಬಾಂಧವ್ಯ ಹೊಂದಿಲ್ಲ. ಹಾಗಾಗಿಯೇ ಎಲ್ಲರನ್ನೂ ಬಿಟ್ಟುಬಂದಿದ್ದೇನೆ’ ಎಂದು ಅಸಹನೆಯಿಂದಲೇ ಉತ್ತರಿಸಿದ. ಆಗ ಸಂನ್ಯಾಸಿ, ‘ಹಾಗಾದರೆ, ನಿನ್ನನ್ನು ನನ್ನ ಶಿಷ್ಯನಾಗಿ ಸ್ವೀಕರಿಸಲು ಸಾಧ್ಯವಿಲ್ಲ, ನಿನ್ನ ಮನಸ್ಸನ್ನು ಶಾಂತಗೊಳಿಸಲು ಸಾಧ್ಯವಿಲ್ಲ. ನನ್ನನ್ನು ಕ್ಷಮಿಸು’ ಎಂದರು. ಯುವಕನಿಗೆ ಆಶ್ಚರ್ಯ. ಆಗ ಆ ಸಂನ್ಯಾಸಿ ಹೇಳಿದರು- ‘ನಿನ್ನಲ್ಲಿ ನಿನ್ನ ತಂದೆ-ತಾಯಿಗಳ ಬಗ್ಗೆ ಸ್ವಲ್ಪವಾದರೂ ಪ್ರೇಮ ಇದ್ದಿದ್ದರೆ ಆ ಪ್ರೇಮವನ್ನು ಉನ್ನತ ಸ್ಥಿತಿಗೆ ತಲುಪಿಸಿ, ಅದನ್ನು ಭಗವಂತನ ಭಕ್ತಿಯಲ್ಲಿ ಸಮರ್ಪಿಸುತ್ತಿದ್ದೆ.

ನಿನ್ನಲ್ಲಿ ಕುಟುಂಬದವರ ಬಗ್ಗೆ ಕೊಂಚವಾದರೂ ಸ್ನೇಹಭಾವವಿದ್ದರೆ, ಅದನ್ನು ಅಧ್ಯಾತ್ಮಸ್ನೇಹಿಯಾಗಿಸಬಹುದಿತ್ತು. ಆದರೆ, ನಿನ್ನ ಮನಸ್ಸು ತುಂಬ ಕಠೋರ. ಸಣ್ಣ ಬೀಜದಿಂದಲೇ ದೊಡ್ಡ ವೃಕ್ಷ ತಲೆ ಎತ್ತುತ್ತದೆ. ನಿನ್ನ ಮನಸ್ಸಿನಲ್ಲಿ ಪ್ರೇಮಭಾವವೇ ಇಲ್ಲ ಅಂದಮೇಲೆ ಭಗವಂತನನ್ನು ಹೇಗೆ ಪ್ರೀತಿಸುವೆ? ಕಲ್ಲಿನಿಂದ ನೀರಿನ ಝುರಿಯಲು ಸೃಷ್ಟಿಸಲು ಸಾಧ್ಯವಿಲ್ಲ’ ಎಂದು ಆ ಯುವಕನ ಕಣ್ಣು ತೆರೆಸಿದರು. ಹೀಗೆ ಮನುಷ್ಯನ ಪ್ರತೀ ಹಂತದಲ್ಲೂ ಪ್ರೇಮ ಮಹೋನ್ನತ. ಪ್ರೇಮ ಎಂದರೆ ಸ್ವಾರ್ಥವಿಲ್ಲದ್ದು, ಕಾಮವಿಲ್ಲದ್ದು. ಪ್ರೇಮ ಎಂದರೆ ಅದು ವಿಶಾಲಲೋಕ. ಅದು ನಮ್ಮ ಭಾವಲೋಕವನ್ನು ಆವರಿಸಿಕೊಂಡಾಗಲೇ ಬದುಕಿಗೊಂದು ಅರ್ಥ. ಸಂತಸ ಅರಳಲು ಸಾರ್ಥಕ ದಾರಿ. ಆದರೆ, ನಾವೆಲ್ಲ ಆ ಯುವಕನಂತೆ ಯಾರನ್ನೂ ಪ್ರೇಮಭಾವದಿಂದ, ಸ್ನೇಹಭಾವದಿಂದ ಕಾಣದೆ ‘ನಾನು ಮಾತ್ರ ಚೆನ್ನಾಗಿ ಬದುಕಬೇಕು’ ಎಂದು ಹಾತೊರೆದರೆ ನೆಮ್ಮದಿಯ ನಿಲ್ದಾಣ ಸಿಗಲು ಹೇಗೆ ಸಾಧ್ಯ?

ಮರ್ಯಾದಾ ಪುರುಷೋತ್ತಮ ಶ್ರೀರಾಮ ತನ್ನನ್ನು 14 ವರ್ಷಗಳ ವನವಾಸಕ್ಕೆ ಅಟ್ಟಿದ ತಾಯಿ ಕೈಕೇಯಿಯನ್ನು ತುಂಬು ಹೃದಯದಿಂದ ಗೌರವಿಸಿದ, ಮಂಥರೆಯನ್ನೂ ನಮಿಸಿದ, ಸೋದರ ಭರತನಿಗೆ ಬುದ್ಧಿ ಹೇಳಿದ. ತಂದೆಯ ಮಾತಿಗೆ ಶಿರಬಾಗಿದ. ಗರ್ವ ಮೆರೆದ ಸಮುದ್ರರಾಜನನ್ನೂ ಕ್ಷಮಿಸಿದ. ಎಲ್ಲರ ಒಳಿತಿಗಾಗಿ ಶ್ರಮಿಸಿದ. ರಾಮನ ಕಥೆ ಇರಲಿ, ಕೃಷ್ಣನ ಕಥೆ ಇರಲಿ ಅದೆಲ್ಲವೂ ಜೀವನಕ್ಕೆ ಉನ್ನತ ಆದರ್ಶವನ್ನು ಒದಗಿಸುವ ಮಹಾನ್ ದಿಕ್ಸೂಚಿಗಳು. ಭಾರತೀಯ ಸಂಸ್ಕೃತಿಯಲ್ಲಿ, ಭಾರತೀಯ ಜೀವನ ಪದ್ಧತಿಯಲ್ಲಿ ಎಲ್ಲ ಸದ್ಗುಣಗಳು ಇವೆ. ’ಜಗತ್ತಿನ ಎಲ್ಲ ಜನರೂ ಸುಖವಾಗಿ ಬಾಳಲಿ’ ಎಂಬ ಹೃದಯವೈಶಾಲ್ಯವಿದೆ. ಹಾಗಾಗಿಯೇ ವಿದೇಶಿಯರು ಕೂಡ ಇಲ್ಲಿನ ಅಧ್ಯಾತ್ಮಕ್ಕೆ, ಈ ನೆಲದ ಪ್ರೇಮಕ್ಕೆ ಮನಸೋತು ಭಾರತೀಯ ಸಂಸ್ಕೃತಿಯನ್ನು ತಮ್ಮದಾಗಿಸಿಕೊಳ್ಳುತ್ತಿದ್ದಾರೆ.

ನಾವು ಮಾತ್ರ ಪಥಭ್ರಷ್ಟರಾಗುತ್ತಿದ್ದೇವೆ ಎಂಬುದು ದುರಂತ. ಮನುಷ್ಯನಲ್ಲಿ ಮಾಧವನಾಗುವ ಶಕ್ತಿ ಇದೆ. ಆದರೆ, ಈಗಿನ ಹಂತದಲ್ಲಿ ಮನುಷ್ಯ ಮೊದಲು ಮನುಷ್ಯನಂತೆ ಬದುಕಿದರೆ ಸಾಕು ಜಗತ್ತಿನಲ್ಲಿ ನೆಮ್ಮದಿ ನೆಲೆಸುತ್ತದೆ. ಮನುಷ್ಯ ಎಂದರೆ ಪ್ರೇಮವೇ ತುಂಬಿದ ಶುದ್ಧಾತ್ಮ. ಆ ಆತ್ಮಸಂತೋಷದೆಡೆಗಿನ ಪಯಣ ನಮ್ಮದಾಗಲಿ, ವಿಕೃತಿಗಳೆಲ್ಲ ದಾರುಣವಾಗಿ ಪರಾಭವಗೊಳ್ಳಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net