

200 ಯೂನಿಟ್ವರೆಗೆ ಉಚಿತ ವಿದ್ಯುತ್ ಎಂದು ಚುನಾವಣೆ ಪೂರ್ವ ಘೊಷಿಸಿ, ಅಧಿಕಾರಕ್ಕೇರಿದ ನಂತರ ಅದನ್ನು ಒಂದು ವರ್ಷದ ಸರಾಸರಿ ಮೇಲೆ ಪ್ರತಿಶತ 10 ರಷ್ಟು ಹೆಚ್ಚಾಗಿ ಬಳಸಬಹುದೆಂದು ಷರತ್ತು ವಿಧಿಸಲಾಗಿದೆ. ಅಲ್ಲದೆ, ಇದಕ್ಕಿಂತ ಹೆಚ್ಚು ಬಳಸಿದರೆ ಸಂಪೂರ್ಣ ಬಿಲ್ಲನ್ನು ಭರಿಸಬೇಕೆಂದು ತಿಳಿಸಿದೆ.
ಎರಡನೇ ಗ್ಯಾರಂಟಿಯಾಗಿ ಅನ್ನಭಾಗ್ಯ ಯೋಜನೆಯನ್ನು ಜುಲೈ ತಿಂಗಳಿನಿಂದ ಆರಂಭಿಸುವುದಾಗಿ ರಾಜ್ಯ ಸರ್ಕಾರ ಹೇಳಿತ್ತು. ಆದರೆ, ಈಗ ಭಾರತೀಯ ಆಹಾರ ನಿಗಮ ಅಕ್ಕಿಯನ್ನು ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಮಾತ್ರ ಅಕ್ಕಿ ಸರಬರಾಜು ಮಾಡದೆ ಇದ್ದರೆ ಇದನ್ನು ರಾಜಕೀಯ ದೃಷ್ಟಿಕೋನದಿಂದ ನೋಡಬಹುದಿತ್ತು. ಆದರೆ, ನೈಸರ್ಗಿಕ ವಿಕೋಪದಂತಹ ಸಮಸ್ಯೆಗಳ ಕಾರಣಕ್ಕಾಗಿ ವಿನಾಯಿತಿ ನೀಡಿ ಈಶಾನ್ಯ ರಾಜ್ಯಗಳಿಗೆ ಮಾತ್ರ ನೀಡುವುದಾಗಿ ತಿಳಿಸಿದೆ.
ವಸ್ತು ಸ್ಥಿತಿ ಹೀಗಿದ್ದಾಗ ಇದನ್ನು ದೊಡ್ಡ ವಿಷಯ ಮಾಡಿ ಇದರಲ್ಲೂ ರಾಜಕೀಯ ಲಾಭ ಪಡೆಯುವ ಆಲೋಚನೆ ಸರಿ ಅಲ್ಲ. ಇದೇ ವರ್ಷದಲ್ಲಿ ನಾಲ್ಕೈದು ರಾಜ್ಯಗಳ ಚುನಾವಣೆ ಇರುವುದರಿಂದ ಉಚಿತ ಅಕ್ಕಿ ಘೊಷಣೆಗಳು ಬೇರೆ ರಾಜ್ಯಕ್ಕೂ ವಿಸ್ತರಿಸುವುದರಲ್ಲಿ ಅನುಮಾನವಿಲ್ಲ. ಹೀಗಾಗಿ, ಭಾರತೀಯ ಆಹಾರ ನಿಗಮದ ನಿರ್ಧಾರ ಸರಿಯಾದದ್ದು. ಕೇಂದ್ರ ಸರ್ಕಾರ 2024ರವರೆಗೂ 5 ಕೆಜಿ ಅಕ್ಕಿಯನ್ನು ಉಚಿತವಾಗಿ ರಾಜ್ಯಗಳಿಗೆ ನೀಡುತ್ತಿದೆ.
10 ಕೆಜಿ ಕೊಡಲು ಅಕ್ಕಿ ಲಭ್ಯವಾಗದಿದ್ದರೆ, ಪ್ರತಿ ಕೆಜಿಗೆ ತಗಲುವ 36.60 ರೂಪಾಯಿಯನ್ನು ಸರ್ಕಾರವು ನೇರವಾಗಿ ಫಲಾನುಭವಿಗಳ ಖಾತೆಗೆ ಜಮಾ ಮಾಡಬಹುದಾಗಿದೆ. ಇದರಿಂದ ಕಲಬೆರಕೆ ಸಹಿತ ಅನೇಕ ಸಮಸ್ಯೆಗಳು ದೂರಾಗುತ್ತವೆ. ಅಂಗಡಿಗಳಲ್ಲೂ ಬಹುತೇಕ ಇದೇ ಬೆಲೆಗೆ ಅಕ್ಕಿ ಸಿಗುವುದರಿಂದ ಜನರು ತಮಗೆ ಬೇಕಾದಷ್ಟು ಅಕ್ಕಿ ತೆಗೆದುಕೊಂಡು ಉಳಿದ ದುಡ್ಡನ್ನು ಬೇರೆ ಅವಶ್ಯಕತೆಗಳಿಗೆ ಬಳಸಿಕೊಳ್ಳಲು ಸಹಾಯವಾಗುತ್ತದೆ. ಸಣ್ಣ ಸಣ್ಣ ವಿಷಯದಲ್ಲಿ ರಾಜ್ಯ ಸರ್ಕಾರ ಕೇಂದ್ರದೊಂದಿಗೆ ತಿಕ್ಕಾಟಕ್ಕಿಳಿಯುವುದು ಸರಿಯಲ್ಲ. ಒಕ್ಕೂಟ ವ್ಯವಸ್ಥೆಯ ಭಾಗವಾಗಿರುವುದರಿಂದ ಅದಕ್ಕೆ ತಕ್ಕಂತೆ ವರ್ತಿಸುವುದು ಉತ್ತಮ.
| ಮಣಿಕಂಠ ಪಾ ಹಿರೇಮಠ ಹಂಪಿ